
ಬಾಂಗ್ಲಾದೇಶ: ಹಸೀನಾ ವಿರುದ್ಧ ಮತ್ತೊಂದು ಕೊಲೆ ಪ್ರಕರಣ ದಾಖಲು
ಢಾಕಾ: ದೇಶದಲ್ಲಿ ಮೀಸಲು ಪ್ರತಿಭಟನೆ ಸಂದರ್ಭದಲ್ಲಿ ಮೀನು ವ್ಯಾಪಾರಿಯೊಬ್ಬರ ಸಾವು ಪ್ರಕರಣದಲ್ಲಿ ಬಾಂಗ್ಲಾದೇಶದ ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಮತ್ತು ಅವರ ಸಂಪುಟದ ಮಾಜಿ ಸಚಿವರು ಸೇರಿದಂತೆ 62 ಮಂದಿ ವಿರುದ್ಧ ಹೊಸ ಕೊಲೆ ಪ್ರಕರಣ ದಾಖಲಿಸಲಾಗಿದೆ.
ಭಾನುವಾರ ತಡವಾಗಿ ಪ್ರಕರಣ ದಾಖಲಾಗಿದೆ. ಜುಲೈ 21 ರಂದು ಸ್ಥಳೀಯ ಮೀನು ಮಾರುಕಟ್ಟೆಯಿಂದ ಮನೆಗೆ ಮರಳುತ್ತಿದ್ದಾಗ ಗುಂಡಿಕ್ಕಿ ಕೊಲ್ಲಲ್ಪಟ್ಟ ಎಂ.ಡಿ. ಮಿಲೋನ್ ಅವರ ಪತ್ನಿ ಶಹನಾಜ್ ಬೇಗಂ ಅವರು ಪ್ರಕರಣ ದಾಖಲಿಸಿದ್ದಾರೆ ಎಂದು ವರದಿಯಾಗಿದೆ.
ಶೇಖ್ ಹಸೀನಾ, ಮಾಜಿ ರಸ್ತೆ ಸಾರಿಗೆ ಮತ್ತು ಸೇತುವೆಗಳ ಸಚಿವ ಒಬೈದುಲ್ ಖಾದರ್, ಮಾಜಿ ಶಾಸಕ ಶಮೀಮ್ ಒಸ್ಮಾನ್ ಮತ್ತು ಮಾಜಿ ಗೃಹ ಸಚಿವ ಅಸಾದುಝಮಾನ್ ಖಾನ್ ಸೇರಿದಂತೆ 62 ಜನರನ್ನು ಆರೋಪಿಗಳೆಂದು ಹೆಸರಿಸಲಾಗಿದೆ.
ದೂರಿನ ಪ್ರಕಾರ, ಹಸೀನಾ ನೇತೃತ್ವದ ಅವಾಮಿ ಲೀಗ್ ಮತ್ತು ಅದರ ಅಂಗಸಂಸ್ಥೆಗಳ ಮುಖಂಡರು ಮತ್ತು ಕಾರ್ಯಕರ್ತರು ಬಂದೂಕು- ದೊಣ್ಣೆ ಹಿಡಿದು ಢಾಕಾ-ಚಿತ್ತಗಾಂಗ್ ಹೆದ್ದಾರಿಯಲ್ಲಿ ಸಂಚಾರಕ್ಕೆ ಅಡ್ಡಿಯೊಡ್ಡಿದರು. ಹಸೀನಾ, ಖಾದರ್ ಮತ್ತು ಅಸಾದುಝಮಾನ್ ಅವರು ಗುಂಡಿನ ದಾಳಿಗೆ ಆದೇಶಿಸಿದರು. ಆಗ ಸ್ಥಳೀಯ ಮೀನು ಮಾರುಕಟ್ಟೆಯಿಂದ ಮನೆಗೆ ಮರಳುತ್ತಿದ್ದ ಮಿಲೋನ್ ಎದೆಗೆ ಗುಂಡು ತಗುಲಿ ರಸ್ತೆಯಲ್ಲಿ ಕುಸಿದು ಬಿದ್ದರು. ಅವರನ್ನು ಸಮೀಪದ ಪ್ರೊಆಕ್ಟಿವ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಅವರು ಸಾವನ್ನಪ್ಪಿದರು ಎಂದು ವರದಿ ತಿಳಿಸಿದೆ.
ಹಸೀನಾ ಅವರ ವಿರುದ್ಧ ದಾಖಲಾದ ಪ್ರಕರಣಗಳ ಸಂಖ್ಯೆ ಡಜನ್ ದಾಟಿದೆ.