
ಬಾಂಗ್ಲಾದೇಶ: 'ಇಸ್ಲಾಂ ನಿಂದನೆ' ಆರೋಪದಡಿ ಆಧ್ಯಾತ್ಮಿಕ ಗುರುವಿನ ಹತ್ಯೆ; ಹಿಂದೂಗಳ ಮನೆ, ಅಂಗಡಿಗಳ ಮೇಲೆ ದಾಳಿ
ಬಾಂಗ್ಲಾದೇಶ ಹಿಂದೂ ಬೌದ್ಧ ಕ್ರಿಶ್ಚಿಯನ್ ಐಕ್ಯತಾ ಮಂಡಳಿಯ ಅಂಕಿ-ಅಂಶಗಳ ಪ್ರಕಾರ, ಈ ವರ್ಷ ಜನವರಿ 1 ರಿಂದ ಮಾರ್ಚ್ 31 ರವರೆಗೆ ಒಟ್ಟು 133 ಕೋಮು ಗಲಭೆ ಪ್ರಕರಣಗಳು ವರದಿಯಾಗಿವೆ.
ಬಾಂಗ್ಲಾದೇಶದಲ್ಲಿ ಕೋಮುಗಲಭೆ ಪ್ರಕರಣಗಳು ಮರುಕಳಿಸಿದ್ದು, ಪ್ರತ್ಯೇಕ ಘಟನೆಗಳಲ್ಲಿ ಇಸ್ಲಾಂ ನಿಂದನೆ ಆರೋಪದಡಿ ಮುಸ್ಲಿಂ ಆಧ್ಯಾತ್ಮಿಕ ಗುರುವೊಬ್ಬರನ್ನು ಹತ್ಯೆ ಮಾಡಲಾಗಿದೆ. ಮತ್ತೊಂದೆಡೆ ಯುವಕನೊಬ್ಬನ ಕೊಲೆಗೆ ಸಂಬಂಧಿಸಿದಂತೆ ರಂಗಪುರದಲ್ಲಿ ಹಿಂದೂಗಳ ಮನೆ ಹಾಗೂ ಅಂಗಡಿ ಮುಂಗಟ್ಟುಗಳನ್ನು ಧ್ವಂಸಗೊಳಿಸಲಾಗಿದೆ.
ರಂಗಪುರದ ದಾಸಪಾರಾ ಮಾರುಕಟ್ಟೆ ಪ್ರದೇಶದಲ್ಲಿ ಶನಿವಾರ ನಸುಕಿನಲ್ಲಿ ರಕೀಬ್ ಹಸನ್ ಎಂಬ ಮುಸ್ಲಿಂ ಯುವಕನ ಕೊಲೆಯಾಗಿದೆ. ಈ ಘಟನೆಯನ್ನು ಮುಂದಿಟ್ಟುಕೊಂಡು ದುಷ್ಕರ್ಮಿಗಳ ಗುಂಪೊಂದು ಹಿಂದೂಗಳ ಮನೆ ಹಾಗೂ ಅಂಗಡಿಗಳ ಮೇಲೆ ಏಕಾಏಕಿ ದಾಳಿ ನಡೆಸಿ, ಅಪಾರ ಹಾನಿ ಉಂಟುಮಾಡಿದೆ. ವಾಸ್ತವದಲ್ಲಿ ಡ್ರಗ್ಸ್ ದಂಧೆಕೋರ ಮೊಹಮ್ಮದ್ ಮೊಮಿನ್ ಎಂಬಾತ ಹಳೆಯ ದ್ವೇಷದ ಹಿನ್ನೆಲೆಯಲ್ಲಿ ರಕೀಬ್‌ನನ್ನು ಕೊಲೆ ಮಾಡಿದ್ದಾನೆ ಎಂದು 'ಪ್ರಥಮ್ ಅಲೊ' ಪತ್ರಿಕೆ ವರದಿ ಮಾಡಿದೆ. ಕೊಲೆಯ ಬಳಿಕ ಮೊಮಿನ್ ಮತ್ತು ಆತನ ಕುಟುಂಬ ತಲೆಮರೆಸಿಕೊಂಡಿದೆ.
ಗಮನ ಬೇರೆಡೆ ಸೆಳೆಯಲು ಯತ್ನ
ಈ ಕೊಲೆಗೂ ಹಿಂದೂ ಸಮುದಾಯಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಮೃತ ರಕೀಬ್ ತಾಯಿ ನೂರ್ ಜಹಾನ್ ಬೇಗಂ ಸ್ಪಷ್ಟಪಡಿಸಿದ್ದಾರೆ. ಹತ್ಯೆಯ ತನಿಖೆಯ ದಿಕ್ಕು ತಪ್ಪಿಸಲು ಹಾಗೂ ಪೊಲೀಸರ ಗಮನವನ್ನು ಬೇರೆಡೆ ಸೆಳೆಯಲು 'ಮೂರನೇ ವ್ಯಕ್ತಿಗಳ' ಗುಂಪು ಹಿಂದೂಗಳ ಮೇಲೆ ಈ ದಾಳಿ ನಡೆಸಿದೆ ಎಂದು ರಂಗಪುರ ಪೊಲೀಸ್ ಆಯುಕ್ತ ಮೊಹಮ್ಮದ್ ಮಜೀದ್ ಅಲಿ ತಿಳಿಸಿದ್ದಾರೆ. ಅಸಲಿ ಹಂತಕರಿಗಾಗಿ ಶೋಧ ನಡೆಯುತ್ತಿದ್ದು, ಹಿಂದೂಗಳ ಆಸ್ತಿಪಾಸ್ತಿ ಧ್ವಂಸ ಮಾಡಿದವರನ್ನು ಈಗಾಗಲೇ ಗುರುತಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಕುಷ್ಟಿಯಾದಲ್ಲಿ ಆಧ್ಯಾತ್ಮಿಕ ಗುರುವಿನ ಹತ್ಯೆ
ಇನ್ನೊಂದು ಆಘಾತಕಾರಿ ಘಟನೆಯಲ್ಲಿ, ಢಾಕಾದಿಂದ 200 ಕಿ.ಮೀ ದೂರದಲ್ಲಿರುವ ಕುಷ್ಟಿಯಾದಲ್ಲಿ ಶಾಲಾ ಶಿಕ್ಷಕ ಹಾಗೂ ಆಧ್ಯಾತ್ಮಿಕ ನಾಯಕ ಶಮೀಮ್ ರೆಜಾ ಜಹಾಂಗೀರ್ ಅವರನ್ನು ದುಷ್ಕರ್ಮಿಗಳು ಕಡಿದು ಹತ್ಯೆ ಮಾಡಿದ್ದಾರೆ. ಇಸ್ಲಾಂ ಧರ್ಮವನ್ನು ನಿಂದಿಸಿದ್ದಾರೆ ಎಂಬ ಆರೋಪದ ಮೇಲೆ ಈ ಹತ್ಯೆ ನಡೆದಿದ್ದು, ದುಷ್ಕರ್ಮಿಗಳ ಗುಂಪು ಅವರ ಆಶ್ರಮಕ್ಕೆ (ದರ್ಬಾರ್) ಬೆಂಕಿ ಹಚ್ಚಿದೆ. ಈ ದಾಳಿಯಲ್ಲಿ ಜಹಾಂಗೀರ್ ಅವರ ಏಳು ಮಂದಿ ಬೆಂಬಲಿಗರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಹೆಚ್ಚುತ್ತಿರುವ ಕೋಮು ಗಲಭೆ
ಕುಷ್ಟಿಯಾದಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಕ್ಷಿಪ್ರ ಕಾರ್ಯಾಚರಣೆ ಪಡೆ (RAB) ಮತ್ತು ಶಸ್ತ್ರಸಜ್ಜಿತ ಪೊಲೀಸರನ್ನು ನಿಯೋಜಿಸಲಾಗಿದೆ. ಮೃತ ಜಹಾಂಗೀರ್ ಅವರನ್ನು ವಿವಾದಾತ್ಮಕ ಚಟುವಟಿಕೆಗಳ ಆರೋಪದಡಿ 2021ರ ಮೇ ತಿಂಗಳಲ್ಲೂ ಬಂಧಿಸಲಾಗಿತ್ತು. ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯಗಳು ಹೆಚ್ಚುತ್ತಲೇ ಇವೆ. ಬಾಂಗ್ಲಾದೇಶ ಹಿಂದೂ ಬೌದ್ಧ ಕ್ರಿಶ್ಚಿಯನ್ ಐಕ್ಯತಾ ಮಂಡಳಿಯ ಅಂಕಿ-ಅಂಶಗಳ ಪ್ರಕಾರ, ಈ ವರ್ಷ ಜನವರಿ 1 ರಿಂದ ಮಾರ್ಚ್ 31 ರವರೆಗೆ ಒಟ್ಟು 133 ಕೋಮು ಗಲಭೆ ಪ್ರಕರಣಗಳು ವರದಿಯಾಗಿವೆ.

