ಬಾಂಗ್ಲಾದೇಶ ಘರ್ಷಣೆ: 1,000 ಕ್ಕೂ ಅಧಿಕ ಭಾರತೀಯರು ದೇಶಕ್ಕೆ ವಾಪಸ್
ಬಾಂಗ್ಲಾದೇಶದಿಂದ 778 ಭಾರತೀಯ ವಿದ್ಯಾರ್ಥಿಗಳು ಭೂ ಮಾರ್ಗವಾಗಿ ಮತ್ತು ಸುಮಾರು 200 ಜನರು ವಿಮಾನದಲ್ಲಿ ಮರಳಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿದೆ.
ಭಾರತ, ನೇಪಾಳ ಮತ್ತು ಭೂತಾನಿನ 1,000 ಕ್ಕೂ ಹೆಚ್ಚು ನಾಗರಿಕರು ಹಿಂಸಾಚಾರ ಪೀಡಿತ ಬಾಂಗ್ಲಾದೇಶದಿಂದ ಮೇಘಾಲಯಕ್ಕೆ ಆಗಮಿಸಿದ್ದಾರೆ. ರಾಜ್ಯದಲ್ಲಿ ಆಶ್ರಯ ಪಡೆದ ಜನರ ಸಂಖ್ಯೆ 1,300 ನ್ನು ದಾಟಿದೆ.
ವಿದೇಶಾಂಗ ವ್ಯವಹಾರಗಳ ಸಚಿವಾಲಯ ತನ್ನ ಎಕ್ಸ್ ಹ್ಯಾಂಡಲ್‌ನಲ್ಲಿ 778 ಭಾರತೀಯ ವಿದ್ಯಾರ್ಥಿಗಳು ವಿವಿಧ ಭೂ ಮಾರ್ಗಗಳ ಮೂಲಕ ಮತ್ತು ಸುಮಾರು 200 ಜನರು ವಿಮಾನದಲ್ಲಿ ತಾಯ್ನಾಡಿಗೆ ಮರಳಿದ್ದಾರೆ ಎಂದು ಶನಿವಾರ (ಜುಲೈ 20) ಹೇಳಿದೆ.
ನೇಪಾಳಿ ವಿದ್ಯಾರ್ಥಿಗಳ ರಕ್ಷಣೆ: ಶುಕ್ರವಾರ ರಾತ್ರಿ 8 ಗಂಟೆವರೆಗೆ, 125 ವಿದ್ಯಾರ್ಥಿಗಳು ಸೇರಿದಂತೆ 245 ಭಾರತೀಯರು ದೇಶಕ್ಕೆ ಮರಳಿ ದ್ದಾರೆ. ಭಾರತೀಯ ಹೈಕಮಿಷನ್, 13 ನೇಪಾಳಿ ವಿದ್ಯಾರ್ಥಿಗಳಿಗೆ ಮರಳಲು ಅನುಕೂಲ ಮಾಡಿಕೊಟ್ಟಿದೆ.
363 ಮಂದಿ ಡಾಕಿ ಇಂಟಿಗ್ರೇಟೆಡ್ ಚೆಕ್ ಪೋಸ್ಟ್ ಮೂಲಕ ಮೇಘಾಲಯವನ್ನು ತಲುಪಿದ್ದಾರೆ ಎಂದು ಗೃಹ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಶನಿವಾರ (ಜುಲೈ 20) ಹೇಳಿದ್ದಾರೆ. ಇವರಲ್ಲಿ 204 ಭಾರತೀಯರು, 158 ನೇಪಾಳ ಮತ್ತು ಒಬ್ಬರು ಭೂತಾನ್ ಮೂಲದವರು.
ಗಡಿಗಳು ಮುಕ್ತ: ಮೇಘಾಲಯದ 80 ಮಂದಿ, ಹೆಚ್ಚಿನವರು ವಿದ್ಯಾರ್ಥಿಗಳು, ಗಡಿ ದಾಟಿದ್ದಾರೆ. ಇವರಲ್ಲಿ 13 ಮಂದಿ ಶುಕ್ರವಾರ ತಮ್ಮ ತವರು ರಾಜ್ಯವನ್ನು ಪ್ರವೇಶಿಸಿದರು. ಬಾಂಗ್ಲಾದಲ್ಲಿ ನಡೆಯುತ್ತಿರುವ ಹಿಂಸಾಚಾರದಿಂದ ನಾಗರಿಕರಿಗೆ ಸಹಾಯ ಮಾಡಲು ಮೇಘಾಲಯ ಸರ್ಕಾರ ಸಹಾಯ ವಾಣಿ: 1800-345-3644 ಯನ್ನು ಸಕ್ರಿಯಗೊಳಿಸಿದೆ.
ನಾಗರಿಕರು ಆಗಮಿಸಲು ಭಾರತ-ಬಾಂಗ್ಲಾದೇಶ ಗಡಿಗಳಾದ ಪಶ್ಚಿಮ ಬಂಗಾಳದ ಬೆನಾಪೋಲ್-ಪೆಟ್ರಾಪೋಲ್ ಮತ್ತು ಗೆಡೆ-ದರ್ಶನ ಮತ್ತು ತ್ರಿಪುರಾದ ಅಖೌರಾ-ಅಗರ್ತಲಾಗಳು ಮುಕ್ತವಾಗಿರುತ್ತವೆ ಎಂದು ಮೂಲಗಳು ತಿಳಿಸಿವೆ.
ಬಿಎಸ್‌ಎಫ್ ಮತ್ತು ಬ್ಯೂರೋ ಆಫ್ ಇಮಿಗ್ರೇಷನ್‌ನ ಸಮನ್ವಯದಿಂದ ಭಾರತೀಯ ಹೈಕಮಿಷನ್, ಬಾಂಗ್ಲಾದೇಶದಿಂದ ಆಗಮಿಸುವ ಭಾರತೀಯ ವಿದ್ಯಾರ್ಥಿಗಳಿಗೆ ಮರಳಲು ಅನುಕೂಲ ಮಾಡಿಕೊಡುತ್ತಿದೆ ಎಂದು ಹೇಳಿದರು.
ವೈದ್ಯಕೀಯ ವಿದ್ಯಾರ್ಥಿಗಳು: ಭಾರತಕ್ಕೆ ಆಗಮಿಸಿದ ಅನೇಕ ವಿದ್ಯಾರ್ಥಿಗಳು ವೈದ್ಯ ಪದವಿ ವ್ಯಾಸಂಗ ಮಾಡುತ್ತಿದ್ದರು ಮತ್ತು ಅವರಲ್ಲಿ ಹೆಚ್ಚಿನವರು ಉತ್ತರ ಪ್ರದೇಶ, ಹರಿಯಾಣ, ಮೇಘಾಲಯ ಮತ್ತು ಜಮ್ಮು ಮತ್ತು ಕಾಶ್ಮೀರದಿಂದ ಬಂದವರು. ಬಾಂಗ್ಲಾದಲ್ಲಿ ಪರಿಸ್ಥಿತಿ ಹದಗೆಡುತ್ತಿದೆ ಮತ್ತು ಅನೇಕ ನಿರ್ಬಂಧಗಳನ್ನು ಜಾರಿಗೊಳಿಸಲಾಗಿದೆ ಎಂದು ಎರಡನೇ ವರ್ಷದ ವೈದ್ಯಕೀಯ ವಿದ್ಯಾರ್ಥಿಯೊಬ್ಬರು ತಿಳಿಸಿದರು. ವಿಮಾನ ಟಿಕೆಟ್‌ಗಳನ್ನು ಪಡೆಯಲು ಸಾಧ್ಯವಾಗಲಿಲ್ಲ. ರಸ್ತೆ ಮೂಲಕ ಅಗರ್ತಲಾಗೆ ಹೋಗಬೇಕಾಯಿತು ಎಂದು ಇನ್ನೊಬ್ಬ ವಿದ್ಯಾರ್ಥಿ ಹೇಳಿದರು.
ಇಂಟರ್ ನೆಟ್ ಸ್ಥಗಿತ: ಸರ್ಕಾರ ಗುರುವಾರದಂದು ಇಂಟರ್ನೆಟ್ ಸ್ಥಗಿತಗೊಳಿಸಿದೆ ಮತ್ತು ದೂರವಾಣಿ ಮಾರ್ಗಗಳು ಕೂಡ ಕಾರ್ಯನಿರ್ವ ಹಿಸುತ್ತಿಲ್ಲ. ಹೀಗಾಗಿ, ವಿದ್ಯಾರ್ಥಿಗಳು ದೇಶ ತೊರೆಯುತ್ತಿದ್ದಾರೆ. ಭಾರತೀಯ ರಾಯಭಾರಿ ಕಚೇರಿಯು ಸಾರಿಗೆ ವ್ಯವಸ್ಥೆ ಮಾಡಲು ಮುಂದಾಗಿದೆ ಎಂದು ವಿದ್ಯಾರ್ಥಿಯೊಬ್ಬರು ಹೇಳಿದ್ದಾರೆ. ಹಲವಾರು ಭಾರತೀಯ ವಿದ್ಯಾರ್ಥಿಗಳು ಭದ್ರತಾ ಬೆಂಗಾವಲಿನೊಂದಿಗೆ ರಸ್ತೆ ಮೂಲಕ ಮನೆ ತಲುಪಿದರು.
ಶೇಖ್ ಹಸೀನಾ ನೇತೃತ್ವದ ಸರ್ಕಾರವು ಉದ್ಯೋಗ ಮೀಸಲು ವ್ಯವಸ್ಥೆಯನ್ನು ರದ್ದುಗೊಳಿಸಬೇಕೆಂದು ವಿದ್ಯಾರ್ಥಿಗಳು ಒತ್ತಾಯಿಸಿ, ಪ್ರತಿಭಟನೆ ಮಾಡುತ್ತಿದ್ದಾರೆ. ಕೆಲವು ವಾರಗಳ ಹಿಂದೆ ಆರಂಭವಾದ ಘರ್ಷಣೆಯಲ್ಲಿ 40-45 ಜನರು ಸಾವನ್ನಪ್ಪಿದ್ದಾರೆ. ಸೋಮವಾರದ ಬಳಿಕ ಪರಿಸ್ಥಿತಿ ಹದಗೆಟ್ಟಿದೆ. ಬಸ್- ರೈಲು ಸೇವೆಗಳನ್ನು ನಿಲ್ಲಿಸಲಾಗಿದೆ ಮತ್ತು ದೇಶಾದ್ಯಂತ ಶಾಲೆಗಳು ಮತ್ತು ವಿಶ್ವವಿದ್ಯಾನಿಲಯಗಳನ್ನು ಮುಚ್ಚಲಾಗಿದೆ.
ಭಾರತೀಯರು ಸುರಕ್ಷಿತ: ಎಂಇಎ- ಬಾಂಗ್ಲಾದೇಶದಲ್ಲಿರುವ 8,500 ವಿದ್ಯಾರ್ಥಿಗಳು ಸೇರಿದಂತೆ 15,000 ಭಾರತೀಯರು ಸುರಕ್ಷಿತವಾಗಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದ್ದಾರೆ. ದೇಶಕ್ಕೆ ಮರಳಲು ಬಯಸುವ ವಿದ್ಯಾರ್ಥಿಗಳಿಗೆ ಸೂಕ್ತ ಭದ್ರತೆ ಒದಗಿಸಲು ಢಾಕಾದಲ್ಲಿರುವ ಭಾರತೀಯ ಹೈಕಮಿಷನ್ ಸ್ಥಳೀಯ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.
ಭಾರತೀಯ ಹೈಕಮಿಷನ್ 24x7 ಕಾರ್ಯನಿರ್ವಹಿಸುತ್ತಿರುವ ಸಹಾಯವಾಣಿಗಳನ್ನು ಸಕ್ರಿಯಗೊಳಿಸಿದೆ. ಬಾಂಗ್ಲಾದಲ್ಲಿರುವ ಭಾರತೀಯರಿಗೆ ಸಾಧ್ಯವಿರುವ ಎಲ್ಲ ನೆರವು ನೀಡಲು ನಾವು ಬದ್ಧರಾಗಿದ್ದೇವೆ,ʼ ಎಂದು ಜೈಸ್ವಾಲ್ ಹೇಳಿದರು.
ಬಾಂಗ್ಲಾದಲ್ಲಿ ನಡೆಯುತ್ತಿರುವ ಹಿಂಸಾತ್ಮಕ ಪ್ರತಿಭಟನೆಗಳನ್ನು ಢಾಕಾದ ʻಆಂತರಿಕʼ ವಿಷಯ ಎಂದು ಮಂತ್ರಾಲಯ ಹೇಳಿದೆ. ʻಅಲ್ಲಿರುವ 15,000 ಭಾರತೀಯರ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ಧೇವೆ. ವಿದೇಶ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರು ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದಾರೆʼ ಎಂದು ಜೈಸ್ವಾಲ್ ಹೇಳಿದರು.