
Pak soldiers killed: ಪುಲ್ವಾಮಾ ಮಾದರಿಯಲ್ಲೇ ಪಾಕಿಸ್ತಾನದಲ್ಲಿ ಬಲೂಚ್ ಬಂಡುಕೋರರ ದಾಳಿ ; 90 ಸೈನಿಕರು ಬಲಿ?
ಬಸ್‌ಗೆ ಐಇಡಿ ತುಂಬಿದ ವಾಹನ ಡಿಕ್ಕಿ ಹೊಡೆದಿದ್ದು, ಪುಲ್ವಾಮಾದಲ್ಲಿ ಭಾರತೀಯ ಸೇನಾ ವಾಹನದ ಮೇಲಿನ ದಾಳಿಯನ್ನು ಸ್ಮರಿಸುವಂತಿದೆ. ಅದೇ ರೀತಿ ಇನ್ನೊಂದು ರಾಕೆಟ್ ಚಾಲಿತ ಗ್ರೆನೇಡ್‌ಗಳಿಂದ (ಆರ್‌ಪಿಜಿ) ದಾಳಿ ನಡೆದಿದೆ.
ಬಲೂಚಿಸ್ತಾನದ ಬಂಡುಕೋರರು ಪಾಕಿಸ್ತಾನ ಸೇನೆಯನ್ನು ಗುರಿಯಾಗಿಸಿ ಮತ್ತೊಂದು ಭೀಕರ ದಾಳಿ ಮಾಡಿದ್ದು ನಡೆಸಿದ್ದು, 90 ಸೈನಿಕರು ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ. ಭಾನುವಾರ ಕ್ವೆಟ್ಟಾದಿಂದ ಟಫ್ತಾನ್‌ಗೆ ಪ್ರಯಾಣಿಸುತ್ತಿದ್ದ ಭದ್ರತಾ ಪಡೆಗಳ ಬೆಂಗಾವಲು ಪಡೆಯ ಮೇಲೆ ಆತ್ಮಾಹುತಿ ಹಾಗೂ ಗ್ರೆನೇಡ್ ದಾಳಿ ನಡೆದಿದೆ ಎಂಬುದಾಗಿ ವರದಿಯಾಗಿದೆ. ಆದರೆ ಪಾಕಿಸ್ತಾನವು ಸದ್ಯ ಏಳು ಮಂದಿ ಮೃತಪಟ್ಟಿದ್ದು, 21ಸೈನಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದಷ್ಟೇ ಹೇಳಿದೆ. ಅಲ್ಲದೆ ಸಾವಿನ ಸಂಖ್ಯೆ ಹೆಚ್ಚಾಗಬಹುದು ಎಂಬುದಾಗಿಯೂ ಹೇಳಿಕೆ ಕೊಟ್ಟಿದೆ.
ಪಾಕಿಸ್ತಾನಿ ಅಧಿಕಾರಿಯೊಬ್ಬರು ನೀಡಿದ ಹೇಳಿಕೆ ಪ್ರಕಾರ, ಕ್ವೆಟ್ಟಾದಿಂದ ಟಫ್ತಾನ್‌ಗೆ ಪ್ರಯಾಣಿಸುತ್ತಿದ್ದ ಭದ್ರತಾ ಪಡೆಗಳ ಬೆಂಗಾವಲು ಪಡೆಯ ಮೇಲೆ ದಾಳಿ ನಡೆದಿದೆ. ಏಳು ಬಸ್‌ಗಳಲ್ಲಿ ಸೈನಿಕರು ಮತ್ತು ಎರಡು ಬೆಂಗಾವಲು ವಾಹನಗಳು ಸಂಚರಿಸುತ್ತಿದ್ದ ವೇಳೆ ದಾಳಿ ನಡೆದಿದೆ.
ಬಸ್‌ಗೆ ಸುಧಾರಿತ ಸ್ಫೋಟಕ ಸಾಧನ ತುಂಬಿದ ವಾಹನದ ಮೂಲಕ ಡಿಕ್ಕಿ ಹೊಡೆಸಲಾಗಿದೆ. ಇದು ಪುಲ್ವಾಮಾದಲ್ಲಿ ಸೇನಾ ವಾಹನದ ಮೇಲೆ ಉಗ್ರರು ನಡೆಸಿದ ದಾಳಿಯಂತಿದೆ. ಇನ್ನೊಂದು ರಾಕೆಟ್ ಚಾಲಿತ ಗ್ರೆನೇಡ್‌ಗಳಿಂದ (ಆರ್‌ಪಿಜಿ) ದಾಳಿ ನಡೆದಿದೆ.
ಗಾಯಾಳುಗಳನ್ನು ಕರೆದೊಯ್ಯಲು ಸೇನಾ ವಿಮಾನಯಾನ ಹೆಲಿಕಾಪ್ಟರ್‌ಗಳನ್ನು ನಿಯೋಜಿಸಲಾಗಿದೆ ಮತ್ತು ಪ್ರದೇಶದಲ್ಲಿ ನಿಗಾ ವಹಿಸಲು ಡ್ರೋನ್‌ಗಳನ್ನು ಹಾರಿಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗಬಹುದು ಎಂಬುದಾಗಿಯೂ ಅವರು ಅಂದಾಜಿಸಿದ್ದಾರೆ.
ಬಲೂಚಿಸ್ತಾನ್ ಲಿಬರೇಷನ್ ಆರ್ಮಿಯ ಹೇಳಿಕೆಯೇನು?
ಬಿಎಲ್ಎ, (ಬಲೂಚಿಸ್ತಾನ್ ಲಿಬರೇಷನ್ ಆರ್ಮಿ) ಒಟ್ಟು 90 ಸೈನಿಕರನ್ನು ಕೊಂದಿದ್ದೇವೆ ಎಂದು ಹೇಳಿಕೆ ನೀಡಿದೆ. ನಮ್ಮ ಮಜೀದ್ ಬ್ರಿಗೇಡ್, ಸೈನ್ಯದ ಬೆಂಗಾವಲು ವಾಹನದ ಮೇಲೆ ದಾಳಿ ನಡೆಸಿದೆ. ಅದರಲ್ಲಿ ಒಂದು ಬಸ್ ಸಂಪೂರ್ಣ ನಾಶವಾಗಿದೆ. ದಾಳಿಯ ನಂತರ, ಫತೇಹ್ ಸ್ಕ್ವಾಡ್ . ಮತ್ತೊಂದು ಬಸ್ ಅನ್ನು ಸುತ್ತುವರಿದು, ಅದರಲ್ಲಿದ್ದ ಎಲ್ಲಾ ಸೈನಿಕರನ್ನು ಕೊಂದಿದೆ. ಹೀಗಾಗಿ 90 ಶತ್ರು ಸೈನಿಕರನ್ನು ಸಾಯಿಸಿದ್ದೇವೆ ಎಂದು ಹೇಳಿಕೆ ಕೊಟ್ಟಿದೆ. ಈ ದಾಳಿಯ ಬಗ್ಗೆ ಮತ್ತಷ್ಟು ವಿವರಗಳನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು ಎಂದೂ ತಿಳಿಸಿದೆ.
ಬಲೂಚಿಸ್ತಾನದ ಮುಖ್ಯಮಂತ್ರಿ ಸರ್ಫರಾಝ್ ಬುಗ್ಟಿ ಈ ದಾಳಿಯನ್ನು ಖಂಡಿಸಿದ್ದು, ಸೈನಿಕರ ಸಾವಿಗೆ ಸಂತಾಪ ವ್ಯಕ್ತಪಡಿಸಿದ್ದಾರೆ. ಈ ಘಟನೆಗೆ ಕೆಲವೇ ದಿನಗಳ ಮೊದಲು, ಬಿಎಲ್ಎ ಬಂಡುಕೋರರು ಸುಮಾರು 440 ಪ್ರಯಾಣಿಕರಿದ್ದ ರೈಲನ್ನು ಅಪಹರಿಸಿದ್ದರು.