ಪತ್ನಿಯನ್ನು ಕೊಂದು ಡೆಡ್‌ಬಾಡಿ ಫೋಟೋ ಪ್ರೇಯಸಿಗೆ ಕಳಿಸಿದ ಗಂಡ- ಅಮೆರಿಕದಲ್ಲಿ ಭಾರತೀಯ ಅರೆಸ್ಟ್‌
x

ಪತ್ನಿಯನ್ನು ಕೊಂದು ಡೆಡ್‌ಬಾಡಿ ಫೋಟೋ ಪ್ರೇಯಸಿಗೆ ಕಳಿಸಿದ ಗಂಡ- ಅಮೆರಿಕದಲ್ಲಿ ಭಾರತೀಯ ಅರೆಸ್ಟ್‌

ಅಮೆರಿಕದಲ್ಲಿ ಭಾರತೀಯ ಮೂಲದ ಸಾಫ್ಟ್‌ವೇರ್ ಎಂಜಿನಿಯರ್ ವಿರುದ್ಧ ಪತ್ನಿಯನ್ನು ಕೊಲೆಗೈದ ಆರೋಪ ಕೇಳಿಬಂದಿದೆ. 9 ತಿಂಗಳ ತನಿಖೆಯ ಬಳಿಕ ಡಿಜಿಟಲ್ ಸಾಕ್ಷ್ಯಗಳಿಂದ ಸತ್ಯ ಬಯಲಾಯ್ತು.


Click the Play button to hear this message in audio format

ಅಮೆರಿಕದಲ್ಲಿ ಕೆಲಸ ಮಾಡುತ್ತಿದ್ದ ಭಾರತೀಯ ಮೂಲದ ಸಾಫ್ಟ್‌ವೇರ್ ಎಂಜಿನಿಯರ್‌ ಒಬ್ಬ ತನ್ನ ಪತ್ನಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿ, ಅದನ್ನು ಆತ್ಮಹತ್ಯೆ ಅಥವಾ ಅಪಘಾತದಂತೆ ಬಿಂಬಿಸಲು ಯತ್ನಿಸಿದ್ದಾನೆ ಎಂಬ ಗಂಭೀರ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದಾನೆ. ಸುಮಾರು ಒಂಬತ್ತು ತಿಂಗಳ ತನಿಖೆಯ ಬಳಿಕ ಪೊಲೀಸರು ಈ ಪ್ರಕರಣದಲ್ಲಿ ಮಹತ್ವದ ಸಾಕ್ಷ್ಯಗಳನ್ನು ಸಂಗ್ರಹಿಸಿ ಆರೋಪಿಯನ್ನು ಬಂಧಿಸಿದ್ದಾರೆ.

ಬಂಧಿತನನ್ನು ತೆಲಂಗಾಣ ಮೂಲದ ಅವಿನಾಶ್ ನಾರ್ನೆ (30) ಎಂದು ಗುರುತಿಸಲಾಗಿದೆ. ಮೃತ ಮಹಿಳೆ ರಾಜಿತಾ ಸಬ್ಬಿನೇನಿ (27). ಕಳೆದ ವರ್ಷ ಅಕ್ಟೋಬರ್‌ನಲ್ಲಿ ಅಮೆರಿಕದ ವಾಷಿಂಗ್ಟನ್ ರಾಜ್ಯದ ಬೆಲ್ವ್ಯೂ ನಗರದಲ್ಲಿರುವ ದಂಪತಿಯ ಅಪಾರ್ಟ್‌ಮೆಂಟ್‌ನಲ್ಲಿ ರಾಜಿತಾ ಶವವಾಗಿ ಪತ್ತೆಯಾಗಿದ್ದರು.

ಬಾತ್‌ರೂಮ್‌ನಲ್ಲಿ ಪತ್ನಿಯ ಶವ ಪತ್ತೆ

ಘಟನೆ ನಡೆದ ದಿನ ಪತ್ನಿ ಬಾತ್‌ರೂಮ್ ಒಳಗೆ ಲಾಕ್ ಮಾಡಿಕೊಂಡಿದ್ದು, ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ ಎಂದು ಅವಿನಾಶ್ ಪೊಲೀಸರಿಗೆ ಕರೆ ಮಾಡಿದ್ದ. ಸ್ಥಳಕ್ಕೆ ಬಂದ ಪೊಲೀಸರು ಬಾಗಿಲು ಒಡೆದು ಒಳಗೆ ಪ್ರವೇಶಿಸಿದಾಗ ರಾಜಿತಾ ಮೃತ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಮರಣೋತ್ತರ ಪರೀಕ್ಷೆಯಲ್ಲಿ ರಾಜಿತಾ ಉಸಿರುಗಟ್ಟಿಸಿ ಕೊಲೆ ಮಾಡಲಾಗಿದೆ ಎಂಬುದು ದೃಢಪಟ್ಟಿದ್ದು, ಪ್ರಕರಣವನ್ನು ಕೊಲೆ ಎಂದು ದಾಖಲಿಸಲಾಯಿತು.

ಪೊಲೀಸರ ವಿಚಾರಣೆಯಲ್ಲಿ ಅವಿನಾಶ್, ಘಟನೆ ನಡೆದ ದಿನ ತಾನು ಕೆಲವು ಕೆಲಸಗಳಿಗಾಗಿ ಸುಮಾರು 40 ನಿಮಿಷ ಮನೆ ಬಿಟ್ಟು ಹೊರಗೆ ಹೋಗಿದ್ದೆ. ಹಿಂದಿರುಗಿದಾಗ ಪತ್ನಿ ಬಾತ್‌ರೂಮ್‌ನಲ್ಲಿ ಬಾಗಿಲು ಹಾಕಿಕೊಂಡಿದ್ದು, ಪ್ರತಿಕ್ರಿಯೆ ಬಾರದ ಕಾರಣ ಪೊಲೀಸರಿಗೆ ಮಾಹಿತಿ ನೀಡಿದೆ ಎಂದು ಹೇಳಿದ್ದ.

ಆದರೆ ಅಪಾರ್ಟ್‌ಮೆಂಟ್‌ನ ಸ್ಮಾರ್ಟ್ ಲಾಕ್ ಹಾಗೂ ಸೆಕ್ಯುರಿಟಿ ಡೋರ್ ಡೇಟಾ ಪರಿಶೀಲಿಸಿದ ಪೊಲೀಸರು, ಅವಿನಾಶ್ ಹೊರಗಿದ್ದ ಸಮಯದಲ್ಲಿ ಬೇರೆ ಯಾರೂ ಮನೆಗೆ ಪ್ರವೇಶಿಸಿಲ್ಲ ಎಂಬುದನ್ನು ಪತ್ತೆಹಚ್ಚಿದರು. ಹೀಗಾಗಿ ಹೊರಗಿನ ವ್ಯಕ್ತಿಯೊಬ್ಬ ಕೊಲೆ ಮಾಡಿರುವ ಸಾಧ್ಯತೆಯನ್ನು ಪೊಲೀಸರು ಸಂಪೂರ್ಣ ತಳ್ಳಿಹಾಕಿದರು.

ಭಾರತದಲ್ಲಿದ್ದ ಮಹಿಳೆಯೊಂದಿಗೆ ಅಫೇರ್‌

ತನಿಖೆ ವೇಳೆ ಪೊಲೀಸರಿಗೆ ಮತ್ತೊಂದು ಮಹತ್ವದ ಮಾಹಿತಿ ಲಭಿಸಿತು. ಮದುವೆಗೆ ಮೊದಲೇ ಭಾರತದಲ್ಲಿದ್ದ ಮಹಿಳೆಯೊಬ್ಬಳೊಂದಿಗೆ ಅವಿನಾಶ್ ಪ್ರೇಮ ಸಂಬಂಧ ಹೊಂದಿದ್ದ. ಮದುವೆಯಾದ ನಂತರವೂ ಆ ಸಂಬಂಧ ಮುಂದುವರಿದಿತ್ತು ಎಂದು ತನಿಖೆಯಲ್ಲಿ ಬಹಿರಂಗವಾಗಿದೆ.

ಆ ಮಹಿಳೆ ಅವಿನಾಶ್-ರಾಜಿತಾ ಮದುವೆಗೂ ಹಾಜರಾಗಿದ್ದಳು ಎನ್ನಲಾಗಿದೆ. ಘಟನೆಯ ದಿನವೂ ಅವಿನಾಶ್ ಆಕೆಗೆ ಕನಿಷ್ಠ ನಾಲ್ಕು ಬಾರಿ ಕರೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದಕ್ಕಿಂತಲೂ ಆಘಾತಕಾರಿ ಸಂಗತಿಯೆಂದರೆ, ರಾಜಿತಾ ಮೃತಪಟ್ಟ ಮರುದಿನವೇ ಅವಿನಾಶ್ ಆಕೆಯ ಮೃತದೇಹದ ಫೋಟೋವನ್ನು ತನ್ನ ಪ್ರಿಯತಮೆಗೆ ಕಳುಹಿಸಿದ್ದಾನೆ ಎಂದು ತನಿಖೆಯಲ್ಲಿ ಬಹಿರಂಗವಾಗಿದೆ. ವಿಚಾರಣೆ ವೇಳೆ ಈ ವಿಷಯವನ್ನು ಅವಿನಾಶ್ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಒಂಬತ್ತು ತಿಂಗಳ ತನಿಖೆಯ ಬಳಿಕ ಬಂಧನ

ರಾಜಿತಾ ಸಾವಿನ ಬಳಿಕ ಸುಮಾರು ಎಂಟು ತಿಂಗಳ ಕಾಲ ಪೊಲೀಸರು ಡಿಜಿಟಲ್ ಸಾಕ್ಷ್ಯಗಳು, ಫೋನ್‌ ಕರೆ ದಾಖಲೆಗಳು ಹಾಗೂ ಇತರೆ ಮಾಹಿತಿಗಳನ್ನು ಪರಿಶೀಲಿಸಿ ತನಿಖೆ ನಡೆಸಿದರು. ಅಂತಿಮವಾಗಿ ಮತ್ತೊಮ್ಮೆ ವಿಚಾರಣೆಗೆ ಒಳಪಡಿಸಿದ ಬಳಿಕ ಅವಿನಾಶ್ ನಾರ್ನೆಯನ್ನು ಪ್ರಥಮ ದರ್ಜೆ ಕೊಲೆ ಆರೋಪದಡಿ ಬಂಧಿಸಲಾಗಿದೆ.

Read More
Next Story