ಅಧಿಕಾರದಲ್ಲಿದ್ದಾಗಲೇ ಹಸೆಮಣೆ ಏರಿದ ಆಸ್ಟ್ರೇಲಿಯಾ ಪ್ರಧಾನಿ; ಶುಭ ಕೋರಿದ ಪ್ರಧಾನಿ ಮೋದಿ
x

ಅಧಿಕಾರದಲ್ಲಿದ್ದಾಗಲೇ ಹಸೆಮಣೆ ಏರಿದ ಆಸ್ಟ್ರೇಲಿಯಾ ಪ್ರಧಾನಿ; ಶುಭ ಕೋರಿದ ಪ್ರಧಾನಿ ಮೋದಿ

ಆಸ್ಟ್ರೇಲಿಯಾದ ಫೆಡರಲ್ ಸರ್ಕಾರದ 124 ವರ್ಷಗಳ ಸುದೀರ್ಘ ಇತಿಹಾಸದಲ್ಲಿ, ಪ್ರಧಾನಿಯೊಬ್ಬರು ಅಧಿಕಾರದಲ್ಲಿರುವಾಗಲೇ ವಿವಾಹವಾಗುತ್ತಿರುವುದು ಇದೇ ಮೊದಲು


Click the Play button to hear this message in audio format

ಆಸ್ಟ್ರೇಲಿಯಾದ ಪ್ರಧಾನ ಮಂತ್ರಿ ಆಂಥೋನಿ ಅಲ್ಬನೀಸ್ ಅವರು ತಮ್ಮ ದೀರ್ಘಕಾಲದ ಗೆಳತಿ ಜೋಡಿ ಹೇಡನ್ ಅವರೊಂದಿಗೆ ಶನಿವಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಆಸ್ಟ್ರೇಲಿಯಾದ ಇತಿಹಾಸದಲ್ಲೇ ಅಧಿಕಾರದಲ್ಲಿರುವಾಗಲೇ ಮದುವೆಯಾದ ಮೊದಲ ಪ್ರಧಾನಿ ಎಂಬ ಹೆಗ್ಗಳಿಕೆಗೆ ಅಲ್ಬನೀಸ್ ಪಾತ್ರರಾಗಿದ್ದಾರೆ. ಈ ನವಜೋಡಿಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಶುಭ ಕೋರಿದ್ದಾರೆ.

ತಮ್ಮ ಆಪ್ತ ಮಿತ್ರನ ಮದುವೆಗೆ ಸಾಮಾಜಿಕ ಜಾಲತಾಣ 'ಎಕ್ಸ್' ಮೂಲಕ ಶುಭ ಕೋರಿರುವ ಪ್ರಧಾನಿ ಮೋದಿ, "ನನ್ನ ಆತ್ಮೀಯ ಸ್ನೇಹಿತರಾದ ಪ್ರಧಾನಿ ಆಂಥೋನಿ ಅಲ್ಬನೀಸ್ ಮತ್ತು ಜೋಡಿ ಹೇಡನ್ ಅವರ ವಿವಾಹಕ್ಕೆ ಅಭಿನಂದನೆಗಳು. ನಿಮ್ಮ ದಾಂಪತ್ಯ ಜೀವನ ಸುಖಮಯವಾಗಿರಲಿ ಎಂದು ಹಾರೈಸುತ್ತೇನೆ," ಎಂದು ಬರೆದುಕೊಂಡಿದ್ದಾರೆ.

124 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲು

ಆಸ್ಟ್ರೇಲಿಯಾದ ಫೆಡರಲ್ ಸರ್ಕಾರದ 124 ವರ್ಷಗಳ ಸುದೀರ್ಘ ಇತಿಹಾಸದಲ್ಲಿ, ಪ್ರಧಾನಿಯೊಬ್ಬರು ಅಧಿಕಾರದಲ್ಲಿರುವಾಗಲೇ ವಿವಾಹವಾಗುತ್ತಿರುವುದು ಇದೇ ಮೊದಲು. ಶನಿವಾರ ಮಧ್ಯಾಹ್ನ ಪ್ರಧಾನಿಯವರ ಅಧಿಕೃತ ನಿವಾಸವಾದ 'ದಿ ಲಾಡ್ಜ್‌'ನಲ್ಲಿ ನಡೆದ ಅತ್ಯಂತ ಸರಳ ಹಾಗೂ ಖಾಸಗಿ ಸಮಾರಂಭದಲ್ಲಿ ಈ ಜೋಡಿ ಹಸೆಮಣೆ ಏರಿತು.

ಉಂಗುರ ತಂದುಕೊಟ್ಟ ಪ್ರೀತಿಯ ಶ್ವಾನ!

ಈ ಮದುವೆ ಸಮಾರಂಭವು ಅತ್ಯಂತ ಖಾಸಗಿಯಾಗಿ ನಡೆದಿದ್ದು, ಕೇವಲ 60 ಮಂದಿ ಆಪ್ತರು ಮತ್ತು ಕುಟುಂಬಸ್ಥರು ಮಾತ್ರ ಭಾಗಿಯಾಗಿದ್ದರು. ಇದರಲ್ಲಿ ಆಸ್ಕರ್ ವಿಜೇತ ಹಾಲಿವುಡ್ ನಟ ರಸೆಲ್ ಕ್ರೋ ಹಾಗೂ ಸಂಪುಟದ ಕೆಲವು ಸಚಿವರು ಉಪಸ್ಥಿತರಿದ್ದರು. ದಂಪತಿಗಳು ತಾವೇ ರಚಿಸಿದ ಪ್ರತಿಜ್ಞಾವಿಧಿಗಳನ್ನು ಸ್ವೀಕರಿಸಿದರು. ವಿಶೇಷವೆಂದರೆ, ಅಲ್ಬನೀಸ್ ಅವರ ಪ್ರೀತಿಯ ನಾಯಿ 'ಟೋಟೋ' ಉಂಗುರವನ್ನು ತಂದುಕೊಡುವ (Ring Bearer) ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದು ಸಮಾರಂಭದ ಹೈಲೈಟ್ ಆಗಿತ್ತು.

ರಾಜಕೀಯ ಕಾರಣಕ್ಕೆ ಮದುವೆ ಮುಂದೂಡಿಕೆ

62 ವರ್ಷದ ಅಲ್ಬನೀಸ್ ಮತ್ತು 46 ವರ್ಷದ ಜೋಡಿ ಹೇಡನ್ ಕಳೆದ ವರ್ಷದ 'ವ್ಯಾಲೆಂಟೈನ್ಸ್ ಡೇ' ದಿನದಂದೇ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಆದರೆ, ದೇಶದಲ್ಲಿನ ಜೀವನ ವೆಚ್ಚದ ಏರಿಕೆಯಬಿಕ್ಕಟ್ಟಿನ ಸಮಯದಲ್ಲಿ ಅದ್ದೂರಿ ಮದುವೆ ಮಾಡಿಕೊಂಡರೆ ಚುನಾವಣೆಯಲ್ಲಿ ಪಕ್ಷಕ್ಕೆ ಹಿನ್ನಡೆಯಾಗಬಹುದು ಎಂಬ ಕಾರಣಕ್ಕೆ ಮದುವೆಯನ್ನು ಮುಂದೂಡಲಾಗಿತ್ತು. 2020ರಲ್ಲಿ ಮೆಲ್ಬೋರ್ನ್‌ನಲ್ಲಿ ನಡೆದ ಔತಣಕೂಟವೊಂದರಲ್ಲಿ ಈ ಜೋಡಿ ಮೊದಲ ಬಾರಿಗೆ ಭೇಟಿಯಾಗಿದ್ದರು.

Read More
Next Story