
ಆಸೀಸ್ ವೇಗಿ ಮಿಚೆಲ್ ಸ್ಟಾರ್ಕ್
ಟಿ20 ಕ್ರಿಕೆಟ್‌ಗೆ ವಿದಾಯ ಹೇಳಿದ ಆಸೀಸ್ ವೇಗಿ ಮಿಚೆಲ್ ಸ್ಟಾರ್ಕ್; ಟೆಸ್ಟ್, ಏಕದಿನ ವಿಶ್ವಕಪ್‌ಗೆ ಆದ್ಯತೆ
ಭಾರತ ಮತ್ತು ಶ್ರೀಲಂಕಾದಲ್ಲಿ ನಡೆಯಲಿರುವ ಮುಂದಿನ ಟಿ20 ವಿಶ್ವಕಪ್‌ಗೆ ಕೇವಲ ಆರು ತಿಂಗಳು ಬಾಕಿಯಿರುವಾಗಲೇ ಸ್ಟಾರ್ಕ್ ಈ ಅನಿರೀಕ್ಷಿತ ನಿರ್ಧಾರವನ್ನು ಪ್ರಕಟಿಸಿದ್ದಾರೆ.
ಆಸ್ಟ್ರೇಲಿಯಾದ ಮಾರಕ ವೇಗದ ಬೌಲರ್, 35 ವರ್ಷದ ಮಿಚೆಲ್ ಸ್ಟಾರ್ಕ್ ಅವರು ಟಿ20 ಅಂತರಾಷ್ಟ್ರೀಯ ಕ್ರಿಕೆಟ್‌ಗೆ ತಮ್ಮ ನಿವೃತ್ತಿಯನ್ನು ಅಧಿಕೃತವಾಗಿ ಘೋಷಿಸಿದ್ದಾರೆ. ಮುಂಬರುವ ಟೆಸ್ಟ್ ಸರಣಿಗಳು ಮತ್ತು ಏಕದಿನ ವಿಶ್ವಕಪ್ ಮೇಲೆ ಸಂಪೂರ್ಣ ಗಮನಹರಿಸುವ ಸಲುವಾಗಿ ಈ ನಿರ್ಧಾರ ಕೈಗೊಂಡಿರುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ.
ಭಾರತ ಮತ್ತು ಶ್ರೀಲಂಕಾದಲ್ಲಿ ನಡೆಯಲಿರುವ ಮುಂದಿನ ಟಿ20 ವಿಶ್ವಕಪ್‌ಗೆ ಕೇವಲ ಆರು ತಿಂಗಳು ಬಾಕಿಯಿರುವಾಗಲೇ ಸ್ಟಾರ್ಕ್ ಈ ಅನಿರೀಕ್ಷಿತ ನಿರ್ಧಾರವನ್ನು ಪ್ರಕಟಿಸಿದ್ದಾರೆ.
ಶ್ರೇಷ್ಠ ಟಿ20 ವೃತ್ತಿಜೀವನ
2012ರಲ್ಲಿ ಪಾಕಿಸ್ತಾನ ವಿರುದ್ಧ ಟಿ20 ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಮಿಚೆಲ್ ಸ್ಟಾರ್ಕ್, ಆಸ್ಟ್ರೇಲಿಯಾ ಪರ ಟಿ20 ಮಾದರಿಯಲ್ಲಿ ಎರಡನೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಆಡಮ್ ಜಂಪಾ ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.
ತಮ್ಮ 65 ಟಿ20 ಪಂದ್ಯಗಳ ವೃತ್ತಿಜೀವನದಲ್ಲಿ ಸ್ಟಾರ್ಕ್, 7.74ರ ಎಕಾನಮಿ ದರದಲ್ಲಿ 79 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಆಸ್ಟ್ರೇಲಿಯಾ ಭಾಗವಹಿಸಿದ್ದ ಆರು ಟಿ20 ವಿಶ್ವಕಪ್‌ಗಳ ಪೈಕಿ ಐದರಲ್ಲಿ ಅವರು ತಂಡದ ಪ್ರಮುಖ ಸದಸ್ಯರಾಗಿದ್ದರು. ಕೇವಲ 2016ರ ಆವೃತ್ತಿಯನ್ನು ಗಾಯದ ಕಾರಣದಿಂದಾಗಿ ಕಳೆದುಕೊಂಡಿದ್ದರು. 2021ರಲ್ಲಿ ದುಬೈನಲ್ಲಿ ಆಸ್ಟ್ರೇಲಿಯಾ ಚೊಚ್ಚಲ ಟಿ20 ವಿಶ್ವಕಪ್ ಗೆಲ್ಲುವಲ್ಲಿ ಸ್ಟಾರ್ಕ್ ಪ್ರಮುಖ ಪಾತ್ರ ವಹಿಸಿದ್ದರು.
ನಿವೃತ್ತಿಯ ಬಗ್ಗೆ ಸ್ಟಾರ್ಕ್ ಹೇಳಿದ್ದೇನು?
"ಟೆಸ್ಟ್ ಕ್ರಿಕೆಟ್ ಯಾವಾಗಲೂ ನನ್ನ ಮೊದಲ ಆದ್ಯತೆಯಾಗಿದೆ" ಎಂದು ಹೇಳಿದ ಸ್ಟಾರ್ಕ್, "ಆಸ್ಟ್ರೇಲಿಯಾ ಪರ ಆಡಿದ ಪ್ರತಿ ಟಿ20 ಪಂದ್ಯವನ್ನು ನಾನು ಆನಂದಿಸಿದ್ದೇನೆ. ವಿಶೇಷವಾಗಿ 2021ರ ವಿಶ್ವಕಪ್ ಗೆಲುವು ಅವಿಸ್ಮರಣೀಯ. ಮುಂಬರುವ ಭಾರತ ವಿರುದ್ಧದ ಟೆಸ್ಟ್ ಸರಣಿ, ಆಶಸ್ ಮತ್ತು 2027ರ ಏಕದಿನ ವಿಶ್ವಕಪ್‌ಗಾಗಿ ನನ್ನ ದೇಹವನ್ನು ತಾಜಾ ಮತ್ತು ಫಿಟ್ ಆಗಿರಿಸಿಕೊಳ್ಳಲು ಈ ನಿರ್ಧಾರ ಅತ್ಯುತ್ತಮ ಮಾರ್ಗವಾಗಿದೆ," ಎಂದು ತಿಳಿಸಿದ್ದಾರೆ.
ಆಯ್ಕೆ ಸಮಿತಿ ಅಧ್ಯಕ್ಷರ ಶ್ಲಾಘನೆ
ಆಯ್ಕೆ ಸಮಿತಿ ಅಧ್ಯಕ್ಷ ಜಾರ್ಜ್ ಬೈಲಿ, ಸ್ಟಾರ್ಕ್ ಅವರ ಸೇವೆಯನ್ನು ಶ್ಲಾಘಿಸಿದ್ದಾರೆ. "ಮಿಚೆಲ್ ತಮ್ಮ ಟಿ20 ವೃತ್ತಿಜೀವನದ ಬಗ್ಗೆ ಹೆಮ್ಮೆ ಪಡಬೇಕು. 2021ರ ವಿಶ್ವಕಪ್ ವಿಜೇತ ತಂಡದ ಅವಿಭಾಜ್ಯ ಅಂಗವಾಗಿದ್ದ ಅವರು, ತಮ್ಮ ವಿಕೆಟ್ ಟೇಕಿಂಗ್ ಸಾಮರ್ಥ್ಯದಿಂದ ಪಂದ್ಯದ ಗತಿಯನ್ನೇ ಬದಲಿಸುತ್ತಿದ್ದರು. ಅವರು ಟೆಸ್ಟ್ ಮತ್ತು ಏಕದಿನ ಕ್ರಿಕೆಟ್‌ನಲ್ಲಿ ಮುಂದುವರಿಯುತ್ತಿರುವುದು ಸಂತಸದ ವಿಷಯ," ಎಂದರು.