
Artemis II NASA| ಚಂದ್ರನ ಮತ್ತೊಂದು ಪಾರ್ಶ್ವದ ದೃಶ್ಯ ಸೆರೆ! ನಾಸಾ ಗಗನಯಾತ್ರಿಗಳ ಹೊಸ ದಾಖಲೆ
ನಾಸಾದ ಆರ್ಟೆಮಿಸ್-II ಗಗನಯಾತ್ರಿಗಳು ಚಂದ್ರನ ಅಂಗಳದಲ್ಲಿ ಅಪೊಲೊ-13 ನಿರ್ಮಿಸಿದ್ದ 54 ವರ್ಷಗಳ ಹಳೆಯ ದೂರದ ದಾಖಲೆಯನ್ನು ಮುರಿದಿದ್ದಾರೆ.
ಚಂದ್ರನ ಮತ್ತೊಂದು ಪಾರ್ಶ್ವದ (Far Side) ಅದ್ಭುತ ದೃಶ್ಯಗಳನ್ನು ಕಣ್ತುಂಬಿಕೊಂಡ ಆರ್ಟೆಮಿಸ್-II ಗಗನಯಾತ್ರಿಗಳು ಸೋಮವಾರ ರಾತ್ರಿ ತಮ್ಮ ನೌಕೆಯನ್ನು ಭೂಮಿಯತ್ತ ತಿರುಗಿಸಿದ್ದಾರೆ. ಈ ಪ್ರಕ್ರಿಯೆಯಲ್ಲಿ ಅವರು ಮಾನವಕುಲದ ಇತಿಹಾಸದಲ್ಲೇ ಅತಿ ಹೆಚ್ಚು ದೂರ ಪ್ರಯಾಣಿಸಿದ ಹೊಸ ದಾಖಲೆಯನ್ನು ಬರೆದಿದ್ದಾರೆ.
ಅಪೊಲೊ-13 ದಾಖಲೆ ಉಡೀಸ್
1970ರ ಏಪ್ರಿಲ್‌ನಲ್ಲಿ ಅಪೊಲೊ-13 ನೌಕೆಯು ಭೂಮಿಯಿಂದ 2,48,655 ಮೈಲಿ (4,00,171 ಕಿ.ಮೀ) ದೂರ ಕ್ರಮಿಸಿ ದಾಖಲೆ ನಿರ್ಮಿಸಿತ್ತು. ಈಗ ಆರ್ಟೆಮಿಸ್-II ಈ ದೂರವನ್ನು ದಾಟಿ ಮುನ್ನಡೆಯುವ ಮೂಲಕ ಹೊಸ ಮೈಲಿಗಲ್ಲು ಸ್ಥಾಪಿಸಿದೆ. "ಬರಿಗಣ್ಣಿನಿಂದ ಚಂದ್ರನನ್ನು ಈ ರೀತಿ ನೋಡುವುದು ನಂಬಲಸಾಧ್ಯವಾಗಿದೆ" ಎಂದು ಕೆನಡಾದ ಗಗನಯಾತ್ರಿ ಜೆರೆಮಿ ಹ್ಯಾನ್ಸೆನ್ ಸಂಭ್ರಮ ಹಂಚಿಕೊಂಡಿದ್ದಾರೆ.
ಭಾವುಕ ಕ್ಷಣ: ಚಂದ್ರನ ಕುಳಿಗಳಿಗೆ ನಾಮಕರಣ
ದಾಖಲೆ ಮುರಿದ ಕೆಲವೇ ಕ್ಷಣಗಳಲ್ಲಿ ಗಗನಯಾತ್ರಿಗಳು ಚಂದ್ರನ ಮೇಲ್ಮೈನಲ್ಲಿ ಗುರುತಿಸಲಾದ ಎರಡು ಹೊಸ ಕುಳಿಗಳಿಗೆ (Craters) ಹೆಸರಿಡಲು ಅನುಮತಿ ಕೇಳಿದರು; ತಮ್ಮ ನೌಕೆಯ ಹೆಸರಾದ 'ಇಂಟೆಗ್ರಿಟಿ' ಹಾಗೂ 2020ರಲ್ಲಿ ಕ್ಯಾನ್ಸರ್‌ನಿಂದ ನಿಧನರಾದ ಕಮಾಂಡರ್ ರೀಡ್ ವೈಸ್‌ಮನ್ ಅವರ ಪತ್ನಿಯ ನೆನಪಿಗಾಗಿ 'ಕ್ಯಾರೊಲ್' (Carroll) ಎಂದು ಹೆಸರಿಸಲು ಪ್ರಸ್ತಾಪಿಸಿದ ಈ ಸಂದರ್ಭದಲ್ಲಿ, ಗಗನಯಾತ್ರಿಗಳು ಅತ್ಯಂತ ಭಾವುಕರಾಗಿ ಪರಸ್ಪರ ಆಲಂಗಿಸಿಕೊಂಡರು.
ಒರಿಯನ್ ನೌಕೆಯ ಅದ್ಭುತ ಸಾಮರ್ಥ್ಯ
ಗಗನಯಾತ್ರಿಗಳು ಪ್ರಯಾಣಿಸುತ್ತಿರುವ ಈ ನೌಕೆಯ ಹೆಸರು 'ಒರಿಯನ್'. ಈ ನೌಕೆಯು ಚಂದ್ರನ ಸುತ್ತ ಹಾರಾಟ ನಡೆಸುವಾಗ ಕೇವಲ ಶಕ್ತಿಯನ್ನು ಉಳಿಸುವುದು ಮಾತ್ರವಲ್ಲದೆ, ಬಾಹ್ಯಾಕಾಶದ ಅಪಾಯಕಾರಿ ವಿಕಿರಣಗಳಿಂದ ಗಗನಯಾತ್ರಿಗಳನ್ನು ರಕ್ಷಿಸುವ ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿದೆ. ಇದು ಸುಮಾರು 21 ದಿನಗಳ ಕಾಲ ನಾಲ್ವರು ಗಗನಯಾತ್ರಿಗಳಿಗೆ ಬೇಕಾದ ಆಮ್ಲಜನಕ ಮತ್ತು ಜೀವನೋಪಾಯವನ್ನು ಒದಗಿಸುವ ಸಾಮರ್ಥ್ಯ ಹೊಂದಿದೆ.
ಚಂದ್ರನ 'ಫಾರ್ ಸೈಡ್' (Far Side) ವಿಶೇಷತೆ
ಚಂದ್ರನ ಈ ಭಾಗವನ್ನು ಭೂಮಿಯಿಂದ ಎಂದಿಗೂ ನೋಡಲು ಸಾಧ್ಯವಿಲ್ಲ (ಚಂದ್ರನು ಭೂಮಿಗೆ ಯಾವಾಗಲೂ ತನ್ನ ಒಂದು ಪಾರ್ಶ್ವವನ್ನು ಮಾತ್ರ ತೋರಿಸುತ್ತಾನೆ). 1970ರ ದಶಕದ ನಂತರ ಇದೇ ಮೊದಲ ಬಾರಿಗೆ ಮಾನವರು ಈ ಪ್ರದೇಶವನ್ನು ಇಷ್ಟು ಹತ್ತಿರದಿಂದ ಕಂಡಿದ್ದಾರೆ. ಗಗನಯಾತ್ರಿಗಳು ಇಲ್ಲಿನ ಕುಳಿಗಳು ಮತ್ತು ಪರ್ವತಗಳ ರಾಸಾಯನಿಕ ಸಂಯೋಜನೆಯ ಬಗ್ಗೆ ಭೂಮಿಯ ಮೇಲಿರುವ ವಿಜ್ಞಾನಿಗಳಿಗೆ ಲೈವ್ ವಿವರಣೆಯನ್ನು ನೀಡಿದ್ದಾರೆ.
ಚಂದ್ರನ ಮೇಲೆ 'ಹಿಮ'ದಂತಹ ದೃಶ್ಯ
ಚಂದ್ರನ ಪರ್ವತಗಳ ಶಿಖರಗಳು ಸೂರ್ಯನ ಬೆಳಕಿಗೆ ಎಷ್ಟು ಪ್ರಕಾಶಮಾನವಾಗಿ ಹೊಳೆಯುತ್ತಿದ್ದವು ಎಂದರೆ ಅವು ಹಿಮದಿಂದ ಆವೃತವಾದಂತೆ ಕಾಣುತ್ತಿದ್ದವು ಎಂದು ಪೈಲಟ್ ವಿಕ್ಟರ್ ಗ್ಲೋವರ್ ಬಣ್ಣಿಸಿದ್ದಾರೆ. ಗಗನಯಾತ್ರಿಗಳು ಚಂದ್ರ ಮತ್ತು ಭೂಮಿ ಎರಡೂ ಒಂದೇ ಫ್ರೇಮ್‌ನಲ್ಲಿರುವ ಅದ್ಭುತ ಚಿತ್ರಗಳನ್ನು ಹೈ-ಪವರ್ ನಿಕಾನ್ ಕ್ಯಾಮೆರಾಗಳು ಹಾಗೂ ಐಫೋನ್‌ಗಳ ಮೂಲಕ ಸೆರೆಹಿಡಿದಿದ್ದಾರೆ.
ಮುಂದಿನ ಗುರಿ ಏನು?
ನಾಲ್ವರು ಗಗನಯಾತ್ರಿಗಳನ್ನು (ಮೂವರು ಅಮೆರಿಕನ್ನರು ಮತ್ತು ಒಬ್ಬ ಕೆನಡಿಯನ್) ಒಳಗೊಂಡ ಈ ಮಿಷನ್ ಯಶಸ್ವಿಯಾದರೆ, ಮುಂದಿನ ಎರಡು ವರ್ಷಗಳಲ್ಲಿ ಚಂದ್ರನ ದಕ್ಷಿಣ ಧ್ರುವದ ಮೇಲೆ ಮಾನವನನ್ನು ಇಳಿಸುವ ನಾಸಾದ ಕನಸು ನನಸಾಗಲಿದೆ.

