ಬಾಂಗ್ಲಾದಲ್ಲಿ ದಂಗೆ: ಪ್ರಧಾನಿ ಶೇಖ್ ಹಸೀನಾ ಪರಾರಿ
100 ಕ್ಕೂ ಹೆಚ್ಚು ಜನರನ್ನು ಕೊಂದ ಪ್ರತಿಭಟನೆಗಳು ಮತ್ತು ಹಿಂಸಾಚಾರದ ನಡುವೆ, ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಮತ್ತು ಅವರ ಸಹೋದರಿ ದೇಶವನ್ನು ತೊರೆದು ಭಾರತದಲ್ಲಿ ಆಶ್ರಯ ಪಡೆದಿದ್ದಾರೆ ಎಂದು ರಾಯಿಟರ್ಸ್ ವರದಿ ಮಾಡಿದೆ.
ರಾಜಕೀಯ ಬಿಕ್ಕಟ್ಟಿನ ನಡುವೆ ಸೇನಾ ಮುಖ್ಯಸ್ಥರು ವಿವಿಧ ರಾಜಕೀಯ ಪಕ್ಷಗಳೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ ಎಂದು ವರದಿಗಳು ಹೇಳುತ್ತವೆ.
ಈ ನಡುವೆ, ಶೇಖ್ ಹಸೀನಾ ಅವರು ಬಾಂಗ್ಲಾದೇಶದ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಮತ್ತು ಮಧ್ಯಂತರ ಸರ್ಕಾರವು ಅಧಿಕಾರ ವಹಿಸಿಕೊಳ್ಳುತ್ತಿದೆ ಎಂದು ಬಾಂಗ್ಲಾದೇಶದ ಸೇನಾ ಮುಖ್ಯಸ್ಥ ಜನರಲ್ ವಕಾರ್-ಉಸ್-ಜಮಾನ್ ಸೋಮವಾರ ಢಾಕಾದಲ್ಲಿ ಘೋಷಿಸಿದ್ದಾರೆ.
"ನಾನು (ದೇಶದ) ಎಲ್ಲಾ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತಿದ್ದೇನೆ. ದಯವಿಟ್ಟು ಸಹಕರಿಸಿ" ಎಂದು ಅವರು ದೂರದರ್ಶನದ ಭಾಷಣದಲ್ಲಿ ವಿವರಿಸಿದರಲ್ಲದೆ, ಹಸೀನಾ ಅವರು ದೇಶವನ್ನು ತೊರೆದಿದ್ದಾರೆ ಎಂಬ ಮಾಹಿತಿ ನೀಡಿದರು. ಆಕೆ ಭಾರತದ ನಗರವೊಂದಕ್ಕೆ ತೆರಳಿದ್ದಾಳೆ ಎಂದು ದೃಢೀಕರಿಸದ ವರದಿಗಳಿವೆ. ಇತರ ವರದಿಗಳ ಪ್ರಕಾರ ಹಸೀನಾ ಅವರು ನಂತರ ಭಾರತವನ್ನು ಬಿಟ್ಟು ಲಂಡನ್‌ಗೆ ಹೋಗಬಹುದು ಎಂದು ಹೇಳಿದರು.
ಪ್ರತಿಭಟನೆಗಳು
ರಾಜಕೀಯ ನಾಯಕರನ್ನು ಭೇಟಿ ಮಾಡಿ ಕಾನೂನು ಮತ್ತು ಸುವ್ಯವಸ್ಥೆಯ ಜವಾಬ್ದಾರಿಯನ್ನು ಸೇನೆ ವಹಿಸಿಕೊಳ್ಳಲಿದೆ ಎಂದು ಹೇಳಿರುವುದಾಗಿ ಸೇನಾ ಮುಖ್ಯಸ್ಥರು ತಿಳಿಸಿದ್ದಾರೆ. ದೇಶಾದ್ಯಂತ ಪ್ರತಿಭಟನೆಗಳು ನಡೆಯುತ್ತಿದ್ದಂತೆ, ಯಾವುದೇ ಗುಂಡು ಹಾರಿಸದಂತೆ ಸೇನೆ ಮತ್ತು ಪೊಲೀಸರಿಗೆ ತಾನು ಕೇಳಿಕೊಂಡಿದ್ದೇನೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಕಳೆದ ಎರಡು ದಿನಗಳಿಂದ ಹಸೀನಾ ಸರ್ಕಾರದ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಯಲ್ಲಿ 100 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. 1971 ರ ವಿಮೋಚನಾ ಯುದ್ಧದಲ್ಲಿ ಹೋರಾಡಿದ ಯೋಧರ ಕುಟುಂಬಗಳಿಗೆ ಶೇಕಡಾ 30 ರಷ್ಟು ಉದ್ಯೋಗಗಳನ್ನು ಮೀಸಲಿಡುವ ವಿವಾದಾತ್ಮಕ ಕೋಟಾ ವ್ಯವಸ್ಥೆಯ ಬಗ್ಗೆ ದೇಶವು ಉಗ್ರ ಪ್ರದರ್ಶನಗಳನ್ನು ಕಾಣುತ್ತಿದೆ.