
ಸುಂಕ ಸಮರ ಮತ್ತೆ ಶುರು? ಈಗ ಭಾರತದ ಅಕ್ಕಿಯೇ ಟ್ರಂಪ್ ಟಾರ್ಗೆಟ್!
ಡೊನಾಲ್ಡ್ ಟ್ರಂಪ್ ಮಾತ್ರ ಮತ್ತೆ ಸುಂಕದ ನೀತಿಯನ್ನೇ ಅನುಸರಿಸಲು ಮುಂದಾಗಿದ್ದಾರೆ. ಈ ಭಾರತದಿಂದ ಆಮದಾಗುತ್ತಿರುವ ಅಕ್ಕಿಯ ಮೇಲೆ ಅಧಿಕ ಸುಂಕ ವಿಧಿಸುವ ಚಿಂತನೆಯನ್ನು ಟ್ರಂಪ್ ನಡೆಸುತ್ತಿದ್ದಾರೆ.
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸುಂಕ ಸಮರ ಬ್ರೇಕ್ ಬೀಳುವ ಲಕ್ಷಣ ಕಾಣುತ್ತಿಲ್ಲ. ಭಾರತದ ಜೊತೆಗಿನ ವ್ಯಾಪಾರ ಸಂಬಂಧವನ್ನು ಸರಿಪಡಿಸುವ ಅಗತ್ಯ ಅಮೆರಿಕಕ್ಕಿದೆ ಎಂದು ಹಲವು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದರೂ, ಅಮೆರಿಕದ ಹಲವು ಸಂಸ್ಥೆಗಳು ಅದನ್ನೇ ಪುನರುಚ್ಛರಿಸಿದರೂ ಟ್ರಂಪ್ ಮಾತ್ರ ಮತ್ತೆ ಸುಂಕದ ನೀತಿಯನ್ನೇ ಅನುಸರಿಸಲು ಮುಂದಾಗಿದ್ದಾರೆ. ಈ ಬಾರಿ ಟ್ರಂಪ್ ವಕ್ರದೃಷ್ಟಿ ಬಿದ್ದಿರುವುದು ಭಾರತದಿಂದ ಆಮದಾಗುತ್ತಿರುವ ಅಕ್ಕಿಮೇಲೆ. ಹೌದು ಟ್ರಂಪ್ ಭಾರತದ ಅಕ್ಕಿಯ ಮೇಲೆ ಹೆಚ್ಚುವರಿ ಸುಂಕ ವಿಧಿಸುವ ಬಗ್ಗೆ ಯೋಚಿಸುತ್ತಿದ್ದಾರೆ ಎಂಬ ವಿಚಾರ ಹೊರಬಿದ್ದಿದೆ.
ಸೋಮವಾರ (ಡಿಸೆಂಬರ್ 8) ಶ್ವೇತಭವನದಲ್ಲಿ ನಡೆದ ವಿಶೇಷ ಸಭೆಯಲ್ಲಿ, ಟ್ರಂಪ್ ಅಮೆರಿಕದ ರೈತರಿಗೆ 12 ಬಿಲಿಯನ್ ಡಾಲರ್‌ಗಳ ಕೃಷಿ ಬೆಂಬಲ ಬೆಲೆಯನ್ನು ಘೋಷಿಸಿದರು. ಇದೇ ವೇಳೆ ಮಾತನಾಡಿದ ಅವರು, ಇನ್ನು ಮುಂದೆ ಭಾರತದ ತನ್ನ ಅಕ್ಕಿಯನ್ನು ಅಮೆರಿಕದಲ್ಲಿ ಸುರಿಯುವಂತಿಲ್ಲ. ಭಾರತದ ಅಕ್ಕಿ ಮತ್ತು ಕೆನಡಾದ ರಸಗೊಬ್ಬರಗಳ ಮೇಲೆ ಹೊಸ ಸುಂಕಗಳನ್ನು ಪರಿಚಯಿಸುವ ಬಗ್ಗೆ ನಾನು ಗಂಭೀರವಾಗಿ ಚಿಂತಿಸುತ್ತಿದ್ದೇನೆ ಎಂದು ಅವರು ಹೇಳಿದ್ದಾರೆ.
ಟ್ರಂಪ್‌ಗೆ ಕೆನಡಿ ಹೇಳಿದ್ದೇನು?
ವಿದೇಶಗಳಿಂದ ಆಮದಾಗುತ್ತಿರುವ ಕೆಲವೊಂದು ಸರಕುಗಳು ದೇಶೀಯ ಉತ್ಪಾದಕರ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿವೆ ಎಂದು ಟ್ರಂಪ್ ಒತ್ತಿ ಹೇಳಿದ್ದಾರೆ. ಕೆನಡಿ ರೈಸ್ ಮಿಲ್ಸ್ ಮತ್ತು 4 ಸಿಸ್ಟರ್ಸ್ ರೈಸ್‌ನ ಸ್ಥಾಪಕ ಮತ್ತು ಸಿಇಒ ಮೆರಿಲ್ ಕೆನಡಿ ಅವರು ಅಕ್ಕಿಯ ಬೆಲೆ ಕುಸಿತದ ಬಗ್ಗೆ ತಮಗೆ ಮಾಹಿತಿ ನೀಡಿದ್ದಾರೆ ಎಂದು ಹೇಳಿದ್ದಾರೆ.
ಲೂಸಿಯಾನದಲ್ಲಿ ತಮ್ಮ ಕುಟುಂಬದ ಕೃಷಿ ವ್ಯವಹಾರವಾದ ಕೆನಡಿ ರೈಸ್ ಮಿಲ್ ಅನ್ನು ನಡೆಸುತ್ತಿರುವ ಮೆರಿಲ್ ಕೆನಡಿ, ದೇಶದ ದಕ್ಷಿಣ ಭಾಗದಲ್ಲಿ ಅಕ್ಕಿ ಉತ್ಪಾದಕರು ನಿಜವಾಗಿಯೂ ಕಷ್ಟಪಡುತ್ತಿದ್ದಾರೆ ಮತ್ತು ಇತರ ರಾಷ್ಟ್ರಗಳು ಅಮೆರಿಕಕ್ಕೆ ಅಕ್ಕಿಯನ್ನು ತಂದು ಸುರಿಯುತ್ತಿವೆ ಎಂದು ಟ್ರಂಪ್‌ಗೆ ತಿಳಿಸಿದ್ದರು. ಇದರ ಬೆನ್ನಲ್ಲೇ ಭಾರತ, ಥೈಲ್ಯಾಂಡ್ ಮತ್ತು ಚೀನಾ ಸೇರಿದಂತೆ ಅಮೆರಿಕಕ್ಕೆ ಅಕ್ಕಿ ರಫ್ತು ಮಾಡುತ್ತಿರುವ ದೇಶಗಳ ಪಟ್ಟಿಯನ್ನು ಟ್ರಂಪ್ ಪಡೆದಿದ್ದಾರೆ ಎನ್ನಲಾಗಿದೆ. ಈ ಎಲ್ಲಾ ಬೆಳವಣಿಗೆ ನಂತರ ಅಕ್ಕಿ ಆಮದಿನ ಮೇಲೆ ಸುಂಕದ ವಿಧಿಸುವ ಬಗ್ಗೆ ಟ್ರಂಪ್ ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.
ಟ್ರಂಪ್ ಸೋಮವಾರ ಶ್ವೇತಭವನದಲ್ಲಿ ಕೃಷಿ ಮತ್ತು ಕೃಷಿ ಕ್ಷೇತ್ರದ ಪ್ರತಿನಿಧಿಗಳು ಹಾಗೂ ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ಮತ್ತು ಕೃಷಿ ಕಾರ್ಯದರ್ಶಿ ಬ್ರೂಕ್ ರೋಲಿನ್ಸ್ ಸೇರಿದಂತೆ ಅವರ ಸಂಪುಟದ ಪ್ರಮುಖ ಸದಸ್ಯರೊಂದಿಗೆ ದುಂಡುಮೇಜಿನ ಸಭೆ ನಡೆಸಿದರು.
ಅಕ್ಕಿಯ ಮೇಲೆ ಹೆಚ್ಚಿನ ಸುಂಕ ಏಕೆ?
ಯಾವ ದೇಶಗಳು ಅಮೆರಿಕಕ್ಕೆ ಅಕ್ಕಿಯನ್ನು ಸುರಿಯುತ್ತಿವೆ ಎಂದು ಟ್ರಂಪ್ ಕೇಳಿದಾಗ, ಅವರ ಪಕ್ಕದಲ್ಲಿ ಕುಳಿತಿದ್ದ ಕೆನಡಿ, ಭಾರತ ಮತ್ತು ಥೈಲ್ಯಾಂಡ್ ಎಂದು ಹೇಳಿದ್ದಾರೆ. ಅಲ್ಲದೇ ಒಂದು ಕಾಲದಲ್ಲಿ ಅಮೆರಿಕದ ಅಕ್ಕಿಗೆ ಅತಿ ದೊಡ್ಡ ಮಾರುಕಟ್ಟೆಯಾಗಿದ್ದ ಪೋರ್ಟೋ ರಿಕೋಗೆ ಚೀನಾದಿಂದ ಅಕ್ಕಿ ರಫ್ತಾಗುತ್ತಿದೆ. ಹಲವು ವರ್ಷಗಳಿಂದ ಪೋರ್ಟೋ ರಿಕೋಗೆ ಅಕ್ಕಿ ರಫ್ತು ಸಂಪೂರ್ಣವಾಗಿ ತಳಹದಿ ಹಿಡಿದಿದೆ. ಇದನ್ನು ಸರಿಪಡಿಸಬೇಕಾಗಿದೆ. ಟ್ರಂಪ್ ವಿಧಿಸುತ್ತಿರುವ ಸುಂಕ ಕಾರ್ಯ ನಿರ್ವಹಿಸುತ್ತಿದೆ. ಅದನ್ನು ದ್ವಿಗುಣಗೊಳಿಸಬೇಕಾಗಿದೆ ಎಂದು ಕೆನಡಿ ಅಭಿಪ್ರಾಯ ಪಟ್ಟರು. ಅದಕ್ಕೆ ಪ್ರತಿಕ್ರಿಯಿಸಿದ ಟ್ರಂಪ್ ನೀವು ಹೆಚ್ಚಿನದನ್ನು ನಿರೀಕ್ಷಿಸುತ್ತಿದ್ದೀರಿ ಎಂಬುದು ನಮಗೆ ಅರ್ಥವಾಗಿದೆ. ಅದರ ಬಗ್ಗೆ ನಾವು ಚಿಂತನೆ ನಡೆಸುತ್ತೇವೆ ಎಂದು ಹೇಳುವ ಮೂಲಕ ಮತ್ತಷ್ಟು ಸುಂಕ ವಿಧಿಸುವ ಸೂಚನೆ ನೀಡಿದರು.
ಸುಂಕಗಳೊಂದಿಗೆ ಇತ್ಯರ್ಥಪಡಿಸುವುದು ಸುಲಭ
ಅಮೆರಿಕನ್ ರೈತರು ಯುಎಸ್ ಮತ್ತು ಪ್ರಪಂಚದಾದ್ಯಂತದ ರಾಷ್ಟ್ರಗಳಿಗೆ ಆಹಾರವನ್ನು ನೀಡಬಹುದು. ಆದರೆ ನಮಗೆ ನ್ಯಾಯಯುತ ವ್ಯಾಪಾರ ಬೇಕು, ಮುಕ್ತ ವ್ಯಾಪಾರವಲ್ಲ" ಎಂದು ಹೇಳಿದರು. ಈ ಸಮಸ್ಯೆಯನ್ನು ಸುಂಕ ವಿಧಿಸುವ ಮೂಲಕ ಪರಿಹರಿಸುವುದು ಸುಲಭ ಎಂದು ಟ್ರಂಪ್ ತಿಳಿಸಿದ್ದಾರೆ.
ಸುಂಕದಿಂದ ನಾವು ಟ್ರಿಲಿಯನ್‌ಗಟ್ಟಲೇ ಡಾಲರ್ ಹಣವನ್ನು ಸಂಪಾದಿಸುತ್ತಿದ್ದೇವೆ. ಯಾರೂ ಊಹಿಸದ ರೀತಿಯಲ್ಲಿ ನಾವು ಲಾಭ ಪಡೆದುಕೊಳ್ಳುತ್ತಿದ್ದು, ನಮ್ಮ ಸುಂಕ ನೀತಿ ಅಮೆರಿಕದ ಆರ್ಥಿಕತೆಯನ್ನು ಮತ್ತಷ್ಟು ಬಲಾಢ್ಯಗೊಳಿಸಿದೆ ಎಂದು ಡೊನಾಲ್ಡ್ ಟ್ರಂಪ್ ಪುನರುಚ್ಛರಿಸಿದ್ದಾರೆ. ಅಮೆರಿಕದ ಚಿಲ್ಲರೆ ಅಕ್ಕಿ ಮಾರುಕಟ್ಟೆಯಲ್ಲಿ ಭಾರತೀಯ ಸಂಸ್ಥೆಗಳು ಎರಡು ದೊಡ್ಡ ಬ್ರ್ಯಾಂಡ್‌ಗಳನ್ನುಹೊಂದಿರುವ ಬಗ್ಗೆ ಕೇಳಲಾದ ಪ್ರಶ್ನೆಗೆ, "ನಾವು ಅದನ್ನು ನೋಡಿಕೊಳ್ಳುತ್ತೇವೆ" ಎಂದು ಡೊನಾಲ್ಡ್ ಟ್ರಂಪ್ ಉತ್ತರಿಸಿದ್ದಾರೆ.
ಕೆನಡಾದ ರಸಗೊಬ್ಬರಗಳ ಮೇಲೆಯೂ ಸುಂಕದ ಬರೆ
ಕೆನಡಾದಿಂದ ಆಮದು ಮಾಡಿಕೊಳ್ಳುವ ರಸಗೊಬ್ಬರಗಳ ಮೇಲೆ ಸುಂಕಗಳನ್ನು ವಿಧಿಸುವುದನ್ನು ಪರಿಗಣಿಸಬಹುದು ಎಂದು ಟ್ರಂಪ್ ಸೂಚಿಸಿದರು, ಅಂತಹ ಕ್ರಮಗಳು ದೇಶೀಯ ಉತ್ಪಾದನೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದು ಹೇಳಿದರು.
ಹಿನ್ನೆಲೆ
ಕೆನಡಾ ಮತ್ತು ಭಾರತ ಎರಡರೊಂದಿಗಿನ ಅಮೆರಿಕದ ವ್ಯಾಪಾರ ಚರ್ಚೆಗಳಿಗೆ ಅಡೆತಡೆಗಳು ಎದುರಾಗುತ್ತಲೇ ಇವೆ. ಸ್ಥಿರ ವಾಣಿಜ್ಯ ಸಂಬಂಧಗಳನ್ನು ಪುನಃಸ್ಥಾಪಿಸುವ ಪ್ರಯತ್ನಗಳಿಗೆ ಒಂದಿಲ್ಲೊಂದು ಅಡ್ಡಿ ಆಗುತ್ತಲೇ ಇವೆ. ನಿರ್ಬಂಧಿತ ವ್ಯಾಪಾರ ಪದ್ಧತಿಗಳು ಮತ್ತು ರಷ್ಯಾದಿಂದ ಭಾರತದ ಇಂಧನ ಖರೀದಿ ನೀತಿ ಇವೆಲ್ಲವೂ ಅಮೆರಿಕವನ್ನು ಕೆರಳಿಸಿದೆ. ಟ್ರಂಪ್ ಈ ವರ್ಷ ಭಾರತೀಯ ಸರಕುಗಳ ಮೇಲೆ ಈಗಾಗಲೇ ಶೇಕಡಾ 50 ರಷ್ಟು ಸುಂಕಗಳನ್ನು ವಿಧಿಸಿದ್ದಾರೆ. ಹೆಚ್ಚುವರಿ ಸುಂಕದ ಬಗ್ಗೆ ಮಾತುಕತೆಗಾಗಿ ಈ ವಾರ ಯುಎಸ್ ನಿಯೋಗ ಭಾರತಕ್ಕೆ ಪ್ರಯಾಣಿಸಲಿದೆ.
ಉತ್ತರ ಅಮೆರಿಕಾದ ಮುಕ್ತ ವ್ಯಾಪಾರ ಒಪ್ಪಂದದ ವ್ಯಾಪ್ತಿಯ ಹೊರಗಿನ ವಸ್ತುಗಳ ಮೇಲೆ ಸುಂಕಗಳನ್ನು ಹೆಚ್ಚಿಸುವ ಬೆದರಿಕೆಗಳು ಸೇರಿದಂತೆ ಟ್ರಂಪ್ ಈ ಹಿಂದೆ ಕೆನಡಾದ ವ್ಯಾಪಾರದ ಬಗ್ಗೆ ಆಕ್ಷೇಪಣೆಗಳನ್ನು ಎತ್ತಿದ್ದಾರೆ, ಜೊತೆಗೆ ಒಪ್ಪಂದವನ್ನು ಮರುಪರಿಶೀಲಿಸುವ ಸಲಹೆಗಳನ್ನು ನೀಡಿದ್ದಾರೆ.

