
ಅಮೆಜಾನ್ ಪ್ರೈಮ್ ವಿಡಿಯೋಗೆ ಬಿಗ್ ಶಾಕ್: ಆಸ್ಟ್ರೇಲಿಯಾದಲ್ಲಿ ಕಾನೂನು ಸಂಕಷ್ಟ, ಭಾರಿ ದಂಡದ ಭೀತಿ
ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಗ್ರಾಹಕರಿಗೆ ತಿಳಿಸದೆ ಜಾಹೀರಾತು (Ads) ಪರಿಚಯಿಸಿ, ಆಡ್ಸ್ ಇಲ್ಲದೆ ನೋಡಲು ಹೆಚ್ಚುವರಿ ಹಣ ವಸೂಲಿ ಮಾಡುತ್ತಿದ್ದ ಅಮೆಜಾನ್ ಕಂಪನಿ ವಿರುದ್ಧ ಆಸ್ಟ್ರೇಲಿಯಾದಲ್ಲಿ ಕಾನೂನು ಸಮರ ಆರಂಭವಾಗಿದೆ.
ಪ್ರಮುಖ ಒಟಿಟಿ ದೈತ್ಯ ಅಮೆಜಾನ್ ಪ್ರೈಮ್ ವಿಡಿಯೋ ಆಸ್ಟ್ರೇಲಿಯಾದಲ್ಲಿ ಭಾರಿ ಕಾನೂನು ಸಂಕಷ್ಟಕ್ಕೆ ಸಿಲುಕಿದೆ. ಪ್ರೈಮ್ ವಿಡಿಯೋದಲ್ಲಿ ಅನ್ಯಾಯದ ಮಾರ್ಗಗಳ ಮೂಲಕ ಜಾಹೀರಾತುಗಳನ್ನು ಪರಿಚಯಿಸಿ, ನಂತರ ಜಾಹೀರಾತು ರಹಿತವಾಗಿ ವಿಡಿಯೋ ನೋಡಲು ಗ್ರಾಹಕರಿಂದ ಹೆಚ್ಚುವರಿ ಹಣ ವಸೂಲಿ ಮಾಡಲಾಗುತ್ತಿದೆ ಎಂದು ಆಸ್ಟ್ರೇಲಿಯಾದ ಗ್ರಾಹಕ ಹಕ್ಕುಗಳ ರಕ್ಷಣಾ ಸಂಸ್ಥೆ ಅಮೆಜಾನ್ ವಿರುದ್ಧ ಕೋರ್ಟ್ ಮೆಟ್ಟಿಲೇರಿದೆ.
ಆಸ್ಟ್ರೇಲಿಯನ್ ಕಾಂಪಿಟೇಷನ್ ಅಂಡ್ ಕನ್ಸ್ಯೂಮರ್ ಕಮಿಷನ್ (ACCC) ಫೆಡರಲ್ ಕೋರ್ಟ್‌ನಲ್ಲಿ ಅಮೆಜಾನ್ ಆಸ್ಟ್ರೇಲಿಯಾ ವಿರುದ್ಧ ಕಾನೂನು ಪ್ರಕ್ರಿಯೆಗಳನ್ನು ಆರಂಭಿಸಿದೆ. ಗ್ರಾಹಕರಿಗೆ ಯಾವುದೇ ಪರಿಹಾರ ನೀಡದೆ, ತನ್ನ ಒಪ್ಪಂದದ ನಿಯಮಗಳನ್ನು ತನಗೆ ಬೇಕಾದಂತೆ ಬದಲಾಯಿಸಿಕೊಂಡು ಅಮೆಜಾನ್ ವಂಚಿಸಿದೆ ಎಂದು ನಿಯಂತ್ರಕ ಸಂಸ್ಥೆ ಆರೋಪಿಸಿದೆ. ನವೆಂಬರ್ 2023 ಮತ್ತು ಆಗಸ್ಟ್ 2025 ರ ನಡುವೆ 10 ಲಕ್ಷಕ್ಕೂ ಹೆಚ್ಚು ವಾರ್ಷಿಕ ಪ್ರೈಮ್ ಚಂದಾದಾರರು ಇದರಿಂದ ತೊಂದರೆಗೊಳಗಾಗಿದ್ದಾರೆ ಎಂದು ತಿಳಿದುಬಂದಿದೆ.
ಮುಂಗಡ ಹಣ ಪಾವತಿಸಿದರೂ ಜಾಹೀರಾತು ಕಿರಿಕಿರಿ!
ಈ ಇಡೀ ವಿವಾದ ಕೇಂದ್ರಿಕೃತವಾಗಿರುವುದು 2024 ರಲ್ಲಿ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಜಾಹೀರಾತುಗಳನ್ನು ಪರಿಚಯಿಸಿದ ನಿರ್ಧಾರದ ಮೇಲೆ. ಈಗಾಗಲೇ ಒಂದು ವರ್ಷದ ಮುಂಗಡ ಪ್ರೈಮ್ ಸದಸ್ಯತ್ವ ಶುಲ್ಕವನ್ನು ಪಾವತಿಸಿದ್ದ ಗ್ರಾಹಕರಿಗೆ ಅಮೆಜಾನ್ ಹಠಾತ್ತಾಗಿ ಜಾಹೀರಾತು ಇರುವ ವಿಡಿಯೋಗಳನ್ನು ಪ್ರದರ್ಶಿಸಲು ಆರಂಭಿಸಿತು. ಇದನ್ನು ವಿರೋಧಿಸಿ, ಮೊದಲಿನಂತೆ ಜಾಹೀರಾತು ಇಲ್ಲದೆ ಸಿನಿಮಾ-ವೆಬ್ ಸೀರೀಸ್ ನೋಡಲು ಬಯಸುವ ಗ್ರಾಹಕರು ಹೆಚ್ಚುವರಿ ಹಣ ಪಾವತಿಸಬೇಕು ಎಂದು ಅಮೆಜಾನ್ ಷರತ್ತು ವಿಧಿಸಿತ್ತು.
"ಆಸ್ಟ್ರೇಲಿಯಾದ ವಾರ್ಷಿಕ ಪ್ರೈಮ್ ಚಂದಾದಾರರೊಂದಿಗಿನ ಒಪ್ಪಂದದಲ್ಲಿ ಅಮೆಜಾನ್ ಕಂಪನಿಯು ಹಲವು ಅನ್ಯಾಯದ ನಿಯಮಗಳನ್ನು ಸೇರಿಸಿತ್ತು. ತದನಂತರ ಇದೇ ನಿಯಮಗಳನ್ನು ಬಳಸಿಕೊಂಡು ಪ್ರೈಮ್ ವಿಡಿಯೋದಲ್ಲಿ ಜಾಹೀರಾತುಗಳನ್ನು ತರಲು ಗ್ರಾಹಕರನ್ನು ಒತ್ತಾಯಿಸಿದೆ" ಎಂದು ಎಸಿಸಿಸಿ (ACCC) ಅಧ್ಯಕ್ಷೆ ಗಿನಾ ಕ್ಯಾಸ್-ಗಾಟ್ಲೀಬ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಗ್ರಾಹಕರ ಜೇಬಿಗೆ ಕತ್ತರಿ ಹಾಕಿದ ಅಮೆಜಾನ್!
ವರದಿಗಳ ಪ್ರಕಾರ, ಆಸ್ಟ್ರೇಲಿಯಾದ ಗ್ರಾಹಕರು ಈಗಾಗಲೇ ವಾರ್ಷಿಕ ಪ್ರೈಮ್ ಸದಸ್ಯತ್ವಕ್ಕಾಗಿ ಮುಂಗಡವಾಗಿ 79 ಆಸ್ಟ್ರೇಲಿಯನ್ ಡಾಲರ್ ಪಾವತಿಸುವಂತೆ ಅಮೆಜಾನ್ ಸೂಚಿಸಿತು. ಜಾಹೀರಾತುಗಳನ್ನು ಪರಿಚಯಿಸಿದ ಆ ಸಮಯದಲ್ಲಿ ಆಸ್ಟ್ರೇಲಿಯಾದ 8,50,000 ಕ್ಕೂ ಹೆಚ್ಚು ಗ್ರಾಹಕರು ಈಗಾಗಲೇ ಒಂದು ವರ್ಷದ ಹಣವನ್ನು ಮುಂಗಡವಾಗಿ ಪಾವತಿಸಿದ್ದರು ಎಂಬುದು ಇಲ್ಲಿ ಗಮನಾರ್ಹ.
ಹೆಚ್ಚುವರಿ ಮಾಸಿಕ ಶುಲ್ಕವನ್ನು ಪಾವತಿಸಲು ಒಪ್ಪದ ಹೊರತು, ಮುಂಗಡ ಹಣ ಪಾವತಿಸಿದ ಗ್ರಾಹಕರಿಗೆ ಕಳಪೆ ಮಟ್ಟದ (ಜಾಹೀರಾತು ಇರುವ) ಸೇವೆಯನ್ನು ನೀಡಲಾಗಿದೆ ಎಂದು ಎಸಿಸಿಸಿ ವಾದಿಸಿದೆ. ಈ ಮೂಲಕ ಗ್ರಾಹಕರ ದೂರುಗಳ ಹಿನ್ನೆಲೆಯಲ್ಲಿ ತನಿಖೆ ಆರಂಭಿಸಿರುವ ಆಸ್ಟ್ರೇಲಿಯಾ ಸರ್ಕಾರಿ ಸಂಸ್ಥೆಯು, ಅಮೆಜಾನ್ ವಿರುದ್ಧ ಕೋರ್ಟ್ ಘೋಷಣೆಗಳು, ಭಾರಿ ಆರ್ಥಿಕ ದಂಡಗಳು ಹಾಗೂ ಗ್ರಾಹಕರಿಗೆ ಪರಿಹಾರ ಕೊಡಿಸುವಂತೆ ನ್ಯಾಯಾಲಯವನ್ನು ಕೋರಿದೆ.
ಅಮೆಜಾನ್ ಪ್ರತಿಕ್ರಿಯೆ ಏನಿದೆ?
ಈ ಕಾನೂನು ಸಮರದ ಕುರಿತು ಪ್ರತಿಕ್ರಿಯಿಸಿರುವ ಅಮೆಜಾನ್ ಆಸ್ಟ್ರೇಲಿಯಾದ ವಕ್ತಾರರು, "ನಾವು ಎಸಿಸಿಸಿ ದಾಖಲಿಸಿರುವ ಪ್ರಕರಣವನ್ನು ವಿವರವಾಗಿ ಪರಿಶೀಲಿಸುತ್ತಿದ್ದೇವೆ" ಎಂದು ಹೇಳಿದ್ದಾರೆ ಹಾಗೂ ತನಿಖೆಯುದ್ದಕ್ಕೂ ನಿಯಂತ್ರಕ ಸಂಸ್ಥೆಗೆ ಸಹಕರಿಸಿರುವುದಾಗಿ ತಿಳಿಸಿದ್ದಾರೆ.
ಜಾಗತಿಕವಾಗಿ ಅಮೆಜಾನ್ ಪ್ರೈಮ್ ವಿಡಿಯೋ ಕಳೆದ ಒಂದು ದಶಕದಿಂದ ಜಾಹೀರಾತು ರಹಿತ ಸೇವೆಯಾಗಿಯೇ ಗುರುತಿಸಿಕೊಂಡಿತ್ತು. ಆಸ್ಟ್ರೇಲಿಯಾದಲ್ಲಿ 2018 ರಲ್ಲಿ ಪ್ರೈಮ್ ಸೇವೆ ಆರಂಭವಾಗಿತ್ತು. ಆದರೆ ಅಮೆಜಾನ್ ಕಂಪನಿಯು 2024 ರ ಆರಂಭದಿಂದ ಜಾಗತಿಕವಾಗಿ ಹಲವು ದೇಶಗಳಲ್ಲಿ ಪ್ರೈಮ್ ವಿಡಿಯೋದಲ್ಲಿ ಜಾಹೀರಾತುಗಳನ್ನು ನೀಡಲು ಪ್ರಾರಂಭಿಸಿದ್ದು, ಇದೀಗ ಕಾನೂನು ಸಂಕಷ್ಟಕ್ಕೆ ನಾಂದಿ ಹಾಡಿದೆ.

