Brazil Plane Crash | ಬ್ರೆಜಿಲ್ ವಿಮಾನ ಪತನ: ಎಲ್ಲಾ 62 ಪ್ರಯಾಣಿಕರ ಸಾವು
ಪರಾನಾ ರಾಜ್ಯದ ಕ್ಯಾಸ್ಕಾವೆಲ್‌ನಿಂದ ಸಾವೊಪಾಲೊದ ಮುಖ್ಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೊರಟಿದ್ದ ವಿಮಾನವು ವಿನ್‌ಹೆಡೊ ಪಟ್ಟಣದಲ್ಲಿ ಪತನಗೊಂಡಿತು ಎಂದು ಏರ್‌ಲೈನ್ ವೋಪಾಸ್ ಹೇಳಿದೆ.
ಬ್ರೆಜಿಲ್‌ನ ಸಾವೊ ಪಾಲೊ ಬಳಿ 62 ಜನ ಪ್ರಯಾಣಿಕರಿದ್ದ ಟರ್ಬೊಪ್ರಾಪ್ ವಿಮಾನ ಅಪಘಾತಕ್ಕೀಡಾಗಿದ್ದು, ವಿಮಾನದಲ್ಲಿದ್ದ ಎಲ್ಲ ಪ್ರಯಾಣಿಕರೂ ಮೃತಪಟ್ಟಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ಹೇಳಿದ್ದಾರೆ.
ಎಟಿಆರ್ ನಿರ್ಮಿತ ವಿಮಾನವು ನಿಯಂತ್ರಣ ತಪ್ಪಿ, ಮನೆಗಳ ಸಮೀಪವಿರುವ ಮರಗಳ ತೋಪಿನಲ್ಲಿ ಪತನಗೊಂಡು, ಭಾರಿ ಪ್ರಮಾಣದಲ್ಲಿ ಕಪ್ಪು ಹೊಗೆ ಉಗುಳುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದೆ.
ವಿಮಾನದಲ್ಲಿದ್ದ ಯಾರೂ ಬದುಕುಳಿದಿಲ್ಲ. ಅಪಘಾತದಲ್ಲಿ ವಿಮಾನ ಬಿದ್ದ ಸ್ಥಳದಲ್ಲಿದ್ದ ಒಂದು ಮನೆಗೆ ಮಾತ್ರ ಹಾನಿಯಾಗಿದೆ ಮತ್ತು ಆ ಮನೆಯ ನಿವಾಸಿಗಳು ಗಾಯಗೊಂಡಿಲ್ಲ ಎಂದು ವಿನ್‌ಹೆಡೊ ಬಳಿಯ ವ್ಯಾಲಿನ್‌ಹೋಸ್ ನಗರದ ಅಧಿಕಾರಿಗಳು ಹೇಳಿದರು.
ಅಪಘಾತದ ಸ್ವಲ್ಪ ಸಮಯದ ನಂತರ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಅಧ್ಯಕ್ಷ ಲೂಯಿಜ್ ಇನಾಸಿಯೊ ಲುಲಾ ಡಾ ಸಿಲ್ವಾ,ʻನಾನು ಕೆಟ್ಟ ಸುದ್ದಿಯನ್ನು ಹೇಳುತ್ತಿದ್ದೇನೆ,ʼ ಎಂದು ಹೇಳಿ, ಅಪಘಾತದಲ್ಲಿ ಮಡಿದವರಿಗೆ ಒಂದು ನಿಮಿಷ ಮೌನಾಚರಣೆ ಮಾಡುವಂತೆ ಕೋರಿದರು.
ಪರಾನಾ ರಾಜ್ಯದ ಕ್ಯಾಸ್ಕಾವೆಲ್‌ನಿಂದ ಸಾವೊಪಾಲೊದ ಮುಖ್ಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೊರಟಿದ್ದ ವಿಮಾನವು ಸಾವೊ ಪಾಲೊದಿಂದ ವಾಯವ್ಯಕ್ಕೆ 80 ಕಿಮೀ ದೂರದಲ್ಲಿರುವ ವಿನ್‌ಹೆಡೊ ಪಟ್ಟಣದಲ್ಲಿ ಪತನ ಗೊಂಡಿದೆ ಎಂದು ಏರ್‌ಲೈನ್ ವೋಪಾಸ್ ಹೇಳಿದೆ.
ಅಪಘಾತಕ್ಕೆ ಕಾರಣ ಕುರಿತು ಹೆಚ್ಚಿನ ಮಾಹಿತಿ ನೀಡಲು ಸಾಧ್ಯವಿಲ್ಲ. ಅಪಘಾತವಾದ ಕೆಲವೇ ನಿಮಿಷಗಳ ನಂತರ ಸಾವೊ ಪಾಲೊದ ಅಗ್ನಿಶಾಮಕ ದಳ ಅಪಘಾತದ ಸ್ಥಳಕ್ಕೆ ಧಾವಿಸಿತು ಎಂದು ಎಂದು ವಿಮಾನಯಾನ ಸಂಸ್ಥೆ ಹೇಳಿದೆ.
ರಾಯಿಟರ್ಸ್ ಪ್ರಕಾರ, ವಿಮಾನದ ಮಾದರಿ ಎಟಿಆರ್ 72-500 ಟರ್ಬೊಪ್ರಾಪ್ ಮತ್ತು ಎಟಿಆರ್ ಏರ್‌ಬಸ್ ಮತ್ತು ಇಟಾಲಿಯನ್ ಏರೋಸ್ಪೇಸ್ ಗ್ರೂಪ್ ಲಿಯೊನಾರ್ಡೊ ಜಂಟಿ ಒಡೆತನದಲ್ಲಿದೆ.