
ಏರ್ ಇಂಡಿಯಾಗೆ ಹೊಸ ಸಿಇಒ? ಕ್ಯಾಂಪ್‌ಬೆಲ್ ವಿಲ್ಸನ್ ಬದಲಿಸಲು ಮುಂದಾದ ಟಾಟಾ ಗ್ರೂಪ್!
ಏರ್ ಇಂಡಿಯಾ ಸಿಇಒ ಕ್ಯಾಂಪ್‌ಬೆಲ್ ವಿಲ್ಸನ್ ಅವರನ್ನು ಬದಲಿಸಲು ಟಾಟಾ ಸನ್ಸ್ ನಿರ್ಧರಿಸಿದೆ ಎನ್ನಲಾಗಿದೆ. 10,000 ಕೋಟಿಗೂ ಅಧಿಕ ನಷ್ಟ ಮತ್ತು ನಿಧಾನಗತಿಯ ಸುಧಾರಣೆಯಿಂದಾಗಿ ಟಾಟಾ ಗ್ರೂಪ್ ಹೊಸ ನಾಯಕತ್ವದ ಹುಡುಕಾಟದಲ್ಲಿದೆ.
ಟಾಟಾ ಗ್ರೂಪ್ ಒಡೆತನದ ಏರ್ ಇಂಡಿಯಾ ಸಂಸ್ಥೆಯಲ್ಲಿ ಶೀಘ್ರದಲ್ಲೇ ದೊಡ್ಡ ಮಟ್ಟದ ನಾಯಕತ್ವ ಬದಲಾವಣೆಯಾಗುವ ಸಾಧ್ಯತೆ ಇದೆ. ಪ್ರಸ್ತುತ ಸಿಇಒ ಕ್ಯಾಂಪ್‌ಬೆಲ್ ವಿಲ್ಸನ್ ಅವರ ಬದಲಿಗೆ ಹೊಸಬರನ್ನು ನೇಮಿಸಲು ಟಾಟಾ ಸನ್ಸ್ ಹುಡುಕಾಟ ಆರಂಭಿಸಿದೆ ಎಂದು ವರದಿಯಾಗಿದೆ. ಟಾಟಾ ಸಮೂಹದ ಅಧ್ಯಕ್ಷ ಎನ್. ಚಂದ್ರಶೇಖರನ್ ಅವರು ಈಗಾಗಲೇ ಅಮೆರಿಕ ಮತ್ತು ಬ್ರಿಟನ್ ಮೂಲದ ಎರಡು ದೊಡ್ಡ ಏರ್‌ಲೈನ್ಸ್‌ಗಳ ಮುಖ್ಯಸ್ಥರೊಂದಿಗೆ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಏರ್ ಇಂಡಿಯಾ ಮಾತ್ರವಲ್ಲದೆ, 'ಏರ್ ಇಂಡಿಯಾ ಎಕ್ಸ್‌ಪ್ರೆಸ್' ನಾಯಕತ್ವವನ್ನೂ ಬದಲಿಸಲು ಟಾಟಾ ಗ್ರೂಪ್ ಚಿಂತನೆ ನಡೆಸಿದೆ.
ಚಂದ್ರಶೇಖರನ್ ಅಸಮಾಧಾನಕ್ಕೆ ಕಾರಣವೇನು?
ಟಾಟಾ ಸಮೂಹದ ಅಧ್ಯಕ್ಷ ಎನ್. ಚಂದ್ರಶೇಖರನ್ ಅವರು ಏರ್ ಇಂಡಿಯಾದ ಪ್ರಸ್ತುತ ಬೆಳವಣಿಗೆಯ ವೇಗದ ಬಗ್ಗೆ ಅತೃಪ್ತಿ ಹೊಂದಿದ್ದಾರೆ ಎನ್ನಲಾಗಿದೆ. 2022ರಲ್ಲಿ ಸರ್ಕಾರದಿಂದ ಏರ್ ಇಂಡಿಯಾವನ್ನು ಖರೀದಿಸಿದ ನಂತರ, ಸಂಸ್ಥೆಯನ್ನು ಲಾಭದಾಯಕವನ್ನಾಗಿ ಮಾಡಲು ಮತ್ತು ವಿಶ್ವದರ್ಜೆಯ ಸೇವೆ ನೀಡಲು 5 ವರ್ಷಗಳ 'Vihaan.AI' ಯೋಜನೆಯನ್ನು ರೂಪಿಸಲಾಗಿತ್ತು. ಆದರೆ, ಈ ಯೋಜನೆಯ ಅನುಷ್ಠಾನ ತುಂಬಾ ನಿಧಾನಗತಿಯಲ್ಲಿದೆ ಎಂಬುದು ಟಾಟಾ ಗ್ರೂಪ್‌ನ ಆಕ್ಷೇಪ.
ವಿಲ್ಸನ್ ಹಾದಿಗೆ ಮುಳ್ಳಾದ ಪ್ರಮುಖ ಅಂಶಗಳು:
1. ಭಾರೀ ಆರ್ಥಿಕ ನಷ್ಟ: 2025ರ ಹಣಕಾಸು ವರ್ಷದಲ್ಲಿ ಏರ್ ಇಂಡಿಯಾ ಮತ್ತು ಏರ್ ಇಂಡಿಯಾ ಎಕ್ಸ್‌ಪ್ರೆಸ್ ಒಟ್ಟಾಗಿ 10,859 ಕೋಟಿ ರೂ.ಗಳ ಭಾರಿ ನಷ್ಟ ಅನುಭವಿಸಿವೆ. ಟಾಟಾ ಗ್ರೂಪ್‌ನ ಇತರೆ ಎಲ್ಲಾ ಕಂಪನಿಗಳಿಗಿಂತ ಇದು ಅತಿ ಹೆಚ್ಚು ನಷ್ಟವಾಗಿದೆ. ಸಂಸ್ಥೆಯನ್ನು ಲಾಭಕ್ಕೆ ತರಲು ವಿಲ್ಸನ್ ವಿಫಲರಾಗಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
2. ಅಹಮದಾಬಾದ್ ವಿಮಾನ ದುರಂತ: ಕಳೆದ ವರ್ಷ ಅಹಮದಾಬಾದ್‌ನಲ್ಲಿ ನಡೆದ ಭೀಕರ ವಿಮಾನ ಅಪಘಾತದಲ್ಲಿ 260 ಜನರು ಸಾವನ್ನಪ್ಪಿದ್ದರು. ಈ ಘಟನೆಯ ನಂತರ ವಿಲ್ಸನ್ ಅವರ ನಾಯಕತ್ವದ ಮೇಲೆ ಒತ್ತಡ ಹೆಚ್ಚಾಯಿತು. ಅದರಲ್ಲೂ ಕೇಂದ್ರ ಸರ್ಕಾರದ ಉನ್ನತ ಅಧಿಕಾರಿಗಳು ವಿಲ್ಸನ್ ಬದಲು ನೇರವಾಗಿ ಚಂದ್ರಶೇಖರನ್ ಅವರ ಜೊತೆ ಮಾತನಾಡಲು ಆಸಕ್ತಿ ತೋರಿದ್ದು ವಿಲ್ಸನ್ ಅವರ ಪ್ರಭಾವ ಕುಗ್ಗಲು ಕಾರಣವಾಯಿತು.
3. ಪೂರೈಕೆ ಸರಣಿಯ ಸಮಸ್ಯೆಗಳು: ವಿಲ್ಸನ್ ಅವರು ಏರ್ ಇಂಡಿಯಾದ ಹಳೆಯ ವಿಮಾನಗಳನ್ನು ದುರಸ್ತಿ ಮಾಡಲು ಮತ್ತು ಹೊಸ ವಿಮಾನಗಳನ್ನು ಖರೀದಿಸಲು ಪ್ರಯತ್ನಿಸಿದರೂ, ಜಾಗತಿಕವಾಗಿ ಬಿಡಿಭಾಗಗಳ ಕೊರತೆ ಅವರಿಗೆ ವಿಘ್ನ ತಂದಿತು. "28 ಹೊಸ ವಿಮಾನಗಳು ಬರಬೇಕಿತ್ತು, ಆದರೆ ಒಂದೂ ಬರಲಿಲ್ಲ" ಎಂದು ಸ್ವತಃ ವಿಲ್ಸನ್ ಅವರೇ ಅಸಹಾಯಕತೆ ವ್ಯಕ್ತಪಡಿಸಿದ್ದರು. ಇದರಿಂದಾಗಿ ಅಂತರಾಷ್ಟ್ರೀಯ ವಿಮಾನಗಳ ಸಂಚಾರದಲ್ಲಿ ವಿಳಂಬ ಮತ್ತು ಗ್ರಾಹಕರ ದೂರುಗಳು ಹೆಚ್ಚಾದವು.
ಹೊಸ ನಾಯಕತ್ವದ ಹುಡುಕಾಟ
ವರದಿಗಳ ಪ್ರಕಾರ, ಎನ್. ಚಂದ್ರಶೇಖರನ್ ಅವರು ಈಗಾಗಲೇ ಅಮೆರಿಕ ಮತ್ತು ಬ್ರಿಟನ್ ಮೂಲದ ದೊಡ್ಡ ವಿಮಾನಯಾನ ಸಂಸ್ಥೆಗಳ ಸಿಇಒಗಳೊಂದಿಗೆ ಸಂಪರ್ಕದಲ್ಲಿದ್ದಾರೆ. ಏರ್ ಇಂಡಿಯಾವನ್ನು ಜಾಗತಿಕ ಮಟ್ಟದಲ್ಲಿ ಸ್ಪರ್ಧಾತ್ಮಕವನ್ನಾಗಿ ಮಾಡಲು ಅಂತರಾಷ್ಟ್ರೀಯ ಅನುಭವ ಹೊಂದಿರುವ ಭಾರತೀಯ ಮೂಲದ ಅಥವಾ ವಿದೇಶಿ ಪರಿಣಿತರನ್ನೇ ನೇಮಿಸಲು ಟಾಟಾ ಪ್ಲಾನ್ ಮಾಡಿದೆ.
ವಿಸ್ತಾರಾದ ವಿಲೀನ ಮತ್ತು ಸವಾಲುಗಳು
ವಿಲ್ಸನ್ ಅವರ ಅಧಿಕಾರಾವಧಿಯಲ್ಲಿ ವಿಸ್ತಾರಾ (Vistara) ಸಂಸ್ಥೆಯನ್ನು ಏರ್ ಇಂಡಿಯಾದೊಂದಿಗೆ ಯಶಸ್ವಿಯಾಗಿ ವಿಲೀನಗೊಳಿಸಲಾಯಿತು. ಮೆಟ್ರೋ ನಗರಗಳಲ್ಲಿ ಇಂಡಿಗೋ (IndiGo) ಸಂಸ್ಥೆಗೆ ಪೈಪೋಟಿ ನೀಡುವಲ್ಲಿ ಏರ್ ಇಂಡಿಯಾ ಸ್ವಲ್ಪ ಯಶಸ್ಸು ಕಂಡಿದ್ದರೂ, ಕಾರ್ಯಾಚರಣೆಯ ವೇಗ ಮತ್ತು ಲಾಭದ ವಿಚಾರದಲ್ಲಿ ಈಗಿನ ನಾಯಕತ್ವ ಹಿನ್ನಡೆ ಅನುಭವಿಸಿದೆ.

