
ಕೇಂದ್ರದ ನಡೆಯಿಂದ ಬೇಸತ್ತು ಭಾರತ ತೊರೆಯುತ್ತಿದ್ದೇನೆ: ಫ್ರೆಂಚ್ ಪತ್ರಕರ್ತೆ ಆರೋಪ
ಭಾರತದಲ್ಲಿ ಎರಡು ದಶಕಗಳಿಗೂ ಅಧಿಕ ಕಾಲ ಪತ್ರಕರ್ತೆಯಾಗಿ ಸೇವೆ ಸಲ್ಲಿಸಿರುವ ಫ್ರಾನ್ಸ್ ಮೂಲದ ವೆನೆಸ್ಸಾ ಡೊನಾಕ್ ದೇಶ ತೊರೆದಿದ್ದಾರೆ.
ನವದೆಹಲಿ: ಭಾರತದಲ್ಲಿ 23 ವರ್ಷಗಳ ಕಾಲ ಪತ್ರಕರ್ತೆಯಾಗಿ ಸೇವೆ ಸಲ್ಲಿಸಿದ್ದ ಫ್ರಾನ್ಸ್ ನ ವೆನೆಸ್ಸಾ ಡೊನಾಕ್ ಅವರು ಸ್ವದೇಶಕ್ಕೆ ತೆರಳಿದ್ದು, ಕೇಂದ್ರ ಸರ್ಕಾರದ ವರ್ತನೆಯಿಂದ ಬೇಸತ್ತಿರುವುದಾಗಿ ಹೇಳಿದ್ದಾರೆ.
ನಿಯಮ ಉಲ್ಲಂಘನೆ ಆರೋಪದಲ್ಲಿ ವೆನೆಸ್ಸಾ ಅವರಿಗೆ ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿಯು ಕಳೆದ ತಿಂಗಳು ನೋಟಿಸ್ ಜಾರಿಗೊಳಿಸಿತ್ತು. ನಿಮ್ಮ ಸಾಗರೋತ್ತರ ಭಾರತೀಯ ನಾಗರಿಕ (ಒಸಿಐ) ಕಾರ್ಡ್ ಅನ್ನು ರದ್ದುಪಡಿಸದಿರಲು ಕಾರಣವನ್ನು ಕೇಳಿತ್ತು. ಇದರ, ಸಂಬಂಧ ಕಾನೂನು ಪ್ರಕ್ರಿಯೆಯ ಫಲಿತಾಂಶಕ್ಕೆ ಕಾಯಲು ಸಾಧ್ಯವಿಲ್ಲ ಎಂದು ಹೇಳಿರುವ ವೆನೆಸ್ಸಾ, ತಮ್ಮ ಮನೆಯನ್ನು ತೊರೆದು ಹೋಗುತ್ತಿರುವುದಾಗಿ ಹೇಳಿದ್ದಾರೆ.
'25 ವರ್ಷಗಳ ಹಿಂದೆ ನಾನು ವಿದ್ಯಾರ್ಥಿಯಾಗಿ ಭಾರತಕ್ಕೆ ಬಂದಿದ್ದೆ, 23 ವರ್ಷಗಳ ಕಾಲ ಪತ್ರಕರ್ತೆಯಾಗಿ ಕೆಲಸ ಮಾಡಿದೆ. ಇಲ್ಲಿಯೇ ಮದುವೆಯಾಗಿ ನೆಲೆಸಿದ್ದೆ, ಭಾರತವನ್ನು ನಾನು ನನ್ನ ಮನೆ ಎಂದು ಕರೆಯುತ್ತಿದ್ದೆ. ಆದರೆ ಇದೀಗ ನಾನು ಭಾರತವನ್ನು ತೊರೆಯುತ್ತಿದ್ದೇನೆʼ ಎಂದು ವೆನೆಸ್ಸಾ ಹೇಳಿದ್ದಾರೆ.
ಪೌರತ್ವ ಕಾಯಿದೆ 1955 ಮತ್ತು ಅದರ ಅಡಿಯಲ್ಲಿ ಹೊರಡಿಸಲಾದ ನಿಯಮಗಳ ಅಡಿಯಲ್ಲಿ ಅಗತ್ಯವಿರುವಂತೆ ಯಾವುದೇ ವಿಶೇಷ ಅನುಮತಿಯಿಲ್ಲದೆ ಪತ್ರಿಕೋದ್ಯಮ ಚಟುವಟಿಕೆಗಳನ್ನು ಕೈಗೊಂಡಿರುವ ಆರೋಪವನ್ನು ಸರ್ಕಾರವು ಮಾಡಿತ್ತು.
'ಭಾರತವನ್ನು ತೊರೆಯುವುದು ತನ್ನ ಆಯ್ಕೆಯಲ್ಲ. ತನ್ನ ಲೇಖನಗಳು 'ದುರುದ್ದೇಶಪೂರಿತ' ಮತ್ತು 'ಭಾರತದ ಸಾರ್ವಭೌಮತೆ ಮತ್ತು ಸಮಗ್ರತೆಯ ಹಿತಾಸಕ್ತಿಗಳಿಗೆ' ಹಾನಿಯುಂಟುಮಾಡುತ್ತವೆ ಎಂದು ಸರ್ಕಾರ ಮಾಡಿರುವ ಆರೋಪದಿಂದಾಗಿ ತಾನು ದೇಶ ತೊರೆಯುತ್ತಿರುವುದಾಗಿ ಅವರು ಹೇಳಿದ್ದಾರೆ.
ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿದ್ದ ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಮತ್ತು ಪ್ರಧಾನಿ ನರೇಂದ್ರ ಮೋದಿ ನಡುವಿನ ನಿಯೋಗ ಮಟ್ಟದ ಮಾತುಕತೆಯಲ್ಲಿ ವೆನೆಸ್ಸಾ ಅವರಿಗೆ ನೀಡಲಾದ ನೋಟಿಸ್ ಬಗ್ಗೆ ಪ್ರಸ್ತಾಪಿಸಲಾಗಿತ್ತು.