Earthquake : ಟಿಬೆಟ್, ಚೀನಾದಲ್ಲಿ ಪ್ರಬಲ ಭೂಕಂಪ ; 36 ಸಾವು
Earthquake: ದೆಹಲಿ-ಎನ್ಸಿಆರ್ ಮತ್ತು ಬಿಹಾರದ ರಾಜಧಾನಿ ಪಾಟ್ನಾ ಸೇರಿದಂತೆ ಉತ್ತರ ಭಾರತದ ವಿವಿಧ ಭಾಗಗಳಲ್ಲಿ ಪ್ರಬಲ ಭೂಕಂಪನದ ಅನುಭವವಾಗಿದೆ.
ಟಿಬೆಟ್ ಮತ್ತು ಚೀನಾದಲ್ಲಿ ಮಂಗಳವಾರ ಬೆಳಗ್ಗೆ 7.1 ಮ್ಯಾಗ್ನಿಟ್ಯೂಡ್ ತೀವ್ರತೆಯ ಪ್ರಬಲ ಭೂಕಂಪಗಳು ಸಂಭವಿಸಿವೆ. ಒಂದು ಗಂಟೆ ಅವಧಿಯಲ್ಲಿ ಆರು ಬಾರಿ ಭೂಮಿ ಕಂಪಿಸಿದ್ದು ಒಟ್ಟು 36 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ. ಭೂಕಂಪದ ಅನುಭವ ಭಾರತ, ನೇಪಾಳ ಮತ್ತು ಭೂತಾನ್ ಅನೇಕ ಪ್ರದೇಶಗಳಲ್ಲಿಯೂ ಉಂಟಾಗಿದೆ.
ದೆಹಲಿ-ಎನ್ಸಿಆರ್ ಮತ್ತು ಬಿಹಾರದ ರಾಜಧಾನಿ ಪಾಟ್ನಾ ಸೇರಿದಂತೆ ಉತ್ತರ ಭಾರತದ ವಿವಿಧ ಭಾಗಗಳಲ್ಲಿ ಪ್ರಬಲ ಭೂಕಂಪನದ ಅನುಭವವಾಗಿದೆ. ಪಶ್ಚಿಮ ಬಂಗಾಳ ಮತ್ತು ಅಸ್ಸಾಂ ಸೇರಿದಂತೆ ಈಶಾನ್ಯ ರಾಜ್ಯಗಳಲ್ಲಿಯೂ ಭೂಮಿ ಅಲುಗಾಡಿದೆ.
"ನಿದ್ದೆ ಮಾಡುತ್ತಿದ್ದೆ. ಹಾಸಿಗೆ ನಡುಗುತ್ತಿತ್ತು, ಮತ್ತು ನನ್ನ ಮಗು ಹಾಸಿಗೆಯಿಂದ ಓಲಾಡುತ್ತಿದ್ದ ಹಾಗೆ ಕಾಣಿಸಿತು. ಕಿಟಕಿಯಿಂದ ಹೊರಗೆ ನೋಡುವಾಗ ಅಲುಗಾಟ ಜೋರಾಗಿತ್ತು. ಆಗ ಭೂಕಂಪ ಎಂದು ನನಗೆ ಗೊತ್ತಾಯಿತು. ನಾನು ಅವಸರದಿಂದ ನನ್ನ ಮಗುವನ್ನು ಎತ್ತಿಕೊಂಡು ಮನೆಯಿಂದ ಹೊರಕ್ಕೆ ಬಂದು ಮೈದಾನ ಸೇರಿಕೊಂಡೆ ಎಂಬುದಾಗಿ ಕಠ್ಮಂಡು ನಿವಾಸಿ ಮೀರಾ ಅಧಿಕಾರಿ ಎಂಬುವರು ತಮ್ಮ ಅನುಭವ ಹೇಳಿಕೊಂಡಿದ್ದಾರೆ.
ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರದ ಪ್ರಕಾರ, ಬೆಳಿಗ್ಗೆ 6:35 ಕ್ಕೆ ನೇಪಾಳ-ಟಿಬೆಟ್ ಗಡಿಯ ಬಳಿಯ ಕ್ಸಿಜಾಂಗ್‌ನಲ್ಲಿ ಮೊದಲ ಭೂಕಂಪ ಸಂಭವಿಸಿದೆ.ರಿಕ್ಟರ್ ಮಾಪಕದಲ್ಲಿ 7.1 ತೀವ್ರ ಹಾನಿ ಉಂಟು ಮಾಡುವ ಸಾಧ್ಯತೆಗಳಿವೆ.
ಅದೇ ರೀತಿ ಕ್ಸಿಜಾಂಗ್ ಪ್ರದೇಶದಿಂದ ದೂರದಲ್ಲಿ 4.7 ಮತ್ತು 4.9 ತೀವ್ರತೆಯ ಎರಡು ಭೂಕಂಪನಗಳು ವರದಿಯಾಗಿವೆ. ಟಿಬೆಟ್‌ನ ಎರಡನೇ ಅತಿದೊಡ್ಡ ನಗರವಾದ ಶಿಗಾಟ್ಸೆ ನಗರದಲ್ಲಿ 6.8 ತೀವ್ರತೆಯ ಭೂಕಂಪನ ಆಗಿದೆ ಎಂದು ಚೀನಾದ ಅಧಿಕಾರಿಗಳು ಹೇಳಿದ್ದಾರೆ. ಈ ನಗರದಲ್ಲಿ ಈವರೆಗೆ ಯಾವುದೇ ಹಾನಿಯಾಗಿಲ್ಲ.
ಚೀನಾದ ಸರ್ಕಾರಿ ಟಿವಿ ಪ್ರಕಾರ, ಕಳೆದ ಐದು ವರ್ಷಗಳಲ್ಲಿ ಶಿಗಾಟ್ಸೆ ನಗರದ 200 ಕಿ.ಮೀ ವ್ಯಾಪ್ತಿಯಲ್ಲಿ 3 ಅಥವಾ ಅದಕ್ಕಿಂತ ಹೆಚ್ಚಿನ ತೀವ್ರತೆಯ 29 ಭೂಕಂಪಗಳು ಸಂಭವಿಸಿವೆ.