
ಅಮೆರಿಕದಿಂದ 35 ಭಾರತೀಯರ ಗಡಿಪಾರು; ವಿಮಾನದಲ್ಲೇ ಕೈಕೋಳ ತೊಡಿಸಿ ಅಮಾನವೀಯ ವರ್ತನೆ
ಅಕ್ರಮವಾಗಿ ಅಮೆರಿಕ ಪ್ರವೇಶಿಸಲು 'ಡಂಕಿ ಮಾರ್ಗ' ಬಳಸಿದ್ದ ಇವರು, ಏಜೆಂಟರಿಗೆ ಲಕ್ಷಾಂತರ ರೂಪಾಯಿ ಹಣ ತೆತ್ತು ಇದೀಗ ಗಡಿಪಾರಾಗಿರುವುದರಿಂದ ತೀವ್ರ ನಿರಾಸೆ ವ್ಯಕ್ತಪಡಿಸಿದ್ದಾರೆ.
ಅಮೆರಿಕದಲ್ಲಿ ಅಕ್ರಮವಾಗಿ ನೆಲೆಸಿದ್ದ 35 ಭಾರತೀಯರನ್ನು ಅಲ್ಲಿನ ಸರ್ಕಾರ ಗಡಿಪಾರು ಮಾಡಿದ್ದು, ಹೆಚ್ಚಿನವರ ಕೈಗಳಿಗೆ ಕೋಳ ತೊಡಿಸಿ ಅಮಾನವೀಯವಾಗಿ ನಡೆಸಿಕೊಂಡಿರುವ ಘಟನೆ ವರದಿಯಾಗಿದೆ. ಗಡಿಪಾರುಗೊಂಡವರೆಲ್ಲರೂ ಹರಿಯಾಣ ಮೂಲದವರಾಗಿದ್ದು, ಶನಿವಾರ ರಾತ್ರಿ ದೆಹಲಿ ವಿಮಾನ ನಿಲ್ದಾಣಕ್ಕೆ ಬಂದು ಇಳಿದಿದ್ದಾರೆ.
ಅಕ್ರಮವಾಗಿ ಅಮೆರಿಕ ಪ್ರವೇಶಿಸಲು 'ಡಂಕಿ ಮಾರ್ಗ' ಬಳಸಿದ್ದ ಇವರು, ಏಜೆಂಟರಿಗೆ ಲಕ್ಷಾಂತರ ರೂಪಾಯಿ ಹಣ ತೆತ್ತು ಇದೀಗ ಗಡಿಪಾರಾಗಿರುವುದರಿಂದ ತೀವ್ರ ನಿರಾಸೆ ವ್ಯಕ್ತಪಡಿಸಿದ್ದಾರೆ.
ವಿಮಾನದಲ್ಲೇ ಕೈಕೋಳ
ಗಡಿಪಾರುಗೊಂಡವರಲ್ಲಿ ಕೈಥಾಲ್ ಜಿಲ್ಲೆಯ ನರೇಶ್ ಕುಮಾರ್ ಎಂಬುವವರು ಮಾತನಾಡಿ, "ನಮ್ಮಲ್ಲಿ ಹೆಚ್ಚಿನವರಿಗೆ ವಿಮಾನದೊಳಗೆಯೇ ಕೈಕೋಳ ಹಾಕಲಾಗಿತ್ತು," ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ. ಗಡಿಪಾರಾದವರಲ್ಲಿ 16 ಮಂದಿ ಕರ್ನಾಲ್, 14 ಮಂದಿ ಕೈಥಾಲ್ ಹಾಗೂ ಐವರು ಕುರುಕ್ಷೇತ್ರ ಜಿಲ್ಲೆಯ ನಿವಾಸಿಗಳಾಗಿದ್ದಾರೆ. ದೆಹಲಿಗೆ ಬಂದಿಳಿದ ನಂತರ, ಸಂಬಂಧಪಟ್ಟ ಅಧಿಕಾರಿಗಳು ಅವರನ್ನು ತಮ್ಮ ತಮ್ಮ ಜಿಲ್ಲೆಗಳಿಗೆ ಕಳುಹಿಸಿ, ಕುಟುಂಬ ಸದಸ್ಯರಿಗೆ ಹಸ್ತಾಂತರಿಸಿದ್ದಾರೆ.
ಕರ್ನಾಲ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗಂಗಾ ರಾಮ್ ಪುನಿಯಾ ಅವರು, 16 ಮಂದಿ ತಮ್ಮ ಜಿಲ್ಲೆಯ ವಿವಿಧ ಗ್ರಾಮಗಳಿಗೆ ಸೇರಿದವರೆಂದು ಖಚಿತಪಡಿಸಿದ್ದಾರೆ.
ಲಕ್ಷಾಂತರ ರೂಪಾಯಿ ನಷ್ಟ
ಉತ್ತಮ ಭವಿಷ್ಯವನ್ನು ಅರಸಿ ಅಮೆರಿಕಕ್ಕೆ ತೆರಳಲು ತಮ್ಮಲ್ಲಿದ್ದ ಭೂಮಿ, ಆಸ್ತಿ ಮಾರಿ, ಸಂಬಂಧಿಕರಿಂದ ಸಾಲ ಪಡೆದು ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದಾಗಿ ಗಡಿಪಾರುಗೊಂಡ ಯುವಕರು ನೋವು ತೋಡಿಕೊಂಡಿದ್ದಾರೆ. 25-40 ವರ್ಷ ವಯಸ್ಸಿನವರೇ ಹೆಚ್ಚಾಗಿದ್ದು, ಇದೀಗ ಎಲ್ಲವನ್ನೂ ಕಳೆದುಕೊಂಡು ಕಂಗಾಲಾಗಿದ್ದಾರೆ.
"ಒಬ್ಬ ಏಜೆಂಟ್ ನನಗೆ 42 ಲಕ್ಷ ರೂಪಾಯಿಗೆ ಅಮೆರಿಕಕ್ಕೆ ಕಳುಹಿಸುವುದಾಗಿ ಭರವಸೆ ನೀಡಿದ್ದ. ಆದರೆ, ನಾನು ಒಟ್ಟಾರೆ 57 ಲಕ್ಷ ರೂಪಾಯಿ ಪಾವತಿಸಬೇಕಾಯಿತು. ಇದಕ್ಕಾಗಿ ಒಂದು ಎಕರೆ ಜಮೀನು ಮಾರಿದೆ, ಬಡ್ಡಿಗೂ ಸಾಲ ಮಾಡಿದೆ," ಎಂದು ನರೇಶ್ ಕುಮಾರ್ ವಿವರಿಸಿದ್ದಾರೆ. 'ಡಂಕಿ ಮಾರ್ಗ'ದ ಮೂಲಕ ಅಮೆರಿಕ ತಲುಪಲು ಎರಡು ತಿಂಗಳು ಬೇಕಾಯಿತು ಮತ್ತು ಅಲ್ಲಿ 14 ತಿಂಗಳು ಜೈಲುವಾಸ ಅನುಭವಿಸಿರುವುದಾಗಿಯೂ ಅವರು ಹೇಳಿದ್ದಾರೆ. ಇಂತಹ ದಾರಿಯನ್ನು ಯಾರೂ ಹಿಡಿಯಬಾರದು ಎಂದು ಅವರು ಸಲಹೆ ನೀಡಿದ್ದಾರೆ.
ಈ ಕುರಿತು ಮಾತನಾಡಿರುವ ಕೈಥಾಲ್ ಡಿಎಸ್‌ಪಿ ಲಲಿತ್ ಕುಮಾರ್, ಸದ್ಯಕ್ಕೆ ಯಾವುದೇ ಏಜೆಂಟ್ ವಿರುದ್ಧ ಔಪಚಾರಿಕ ದೂರು ದಾಖಲಾಗಿಲ್ಲ ಎಂದು ತಿಳಿಸಿದ್ದಾರೆ.
ಟ್ರಂಪ್ ಆಡಳಿತದ ಕಠಿಣ ಕ್ರಮ
ಈ ವರ್ಷದ ಜನವರಿಯಲ್ಲಿ ಡೊನಾಲ್ಡ್ ಟ್ರಂಪ್ ಅವರು ಅಮೆರಿಕದ ಅಧ್ಯಕ್ಷರಾಗಿ ಮರು ಆಯ್ಕೆಯಾಗಿ ಅಧಿಕಾರ ವಹಿಸಿಕೊಂಡ ನಂತರ, ಅಕ್ರಮ ವಲಸಿಗರ ವಿರುದ್ಧದ ಕಾರ್ಯಾಚರಣೆ ತೀವ್ರಗೊಂಡಿದೆ. ಈ ಹಿಂದೆ ಕೂಡ ಪಂಜಾಬ್, ಹರಿಯಾಣ ಮತ್ತು ಗುಜರಾತ್ ಮೂಲದ ಹಲವು ಯುವಕರನ್ನು ಇದೇ ರೀತಿ ಕೈಕೋಳ ತೊಡಿಸಿ ಗಡಿಪಾರು ಮಾಡಲಾಗಿತ್ತು. ಭಾರತ ಸರ್ಕಾರವು ಈ ಅಮಾನವೀಯ ನಡವಳಿಕೆ ಬಗ್ಗೆ ಹಲವು ಬಾರಿ ಅಮೆರಿಕದ ಗಮನ ಸೆಳೆದಿದ್ದರೂ, ಇಂತಹ ಘಟನೆಗಳು ಮರುಕಳಿಸುತ್ತಲೇ ಇವೆ.

