ಕೆನಡಾದಲ್ಲಿ ಮೂವರು ಭಾರತೀಯ ವಿದ್ಯಾರ್ಥಿಗಳ ಹತ್ಯೆ; ಕಳವಳ ವ್ಯಕ್ತಪಡಿಸಿದ ಭಾರತ
x
ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್

ಕೆನಡಾದಲ್ಲಿ ಮೂವರು ಭಾರತೀಯ ವಿದ್ಯಾರ್ಥಿಗಳ ಹತ್ಯೆ; ಕಳವಳ ವ್ಯಕ್ತಪಡಿಸಿದ ಭಾರತ

ಕೆನಡಾದಲ್ಲಿರುವ ಭಾರತೀಯ ಪ್ರಜೆಗಳ ಸುರಕ್ಷತೆ, ಭದ್ರತೆ ಮತ್ತು ಕಲ್ಯಾಣ ನಮಗೆ ಅತ್ಯಂತ ಮಹತ್ವದ್ದು ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಹೇಳಿದ್ದಾರೆ.


ಕಳೆದ ವಾರ ಕೆನಡಾದಲ್ಲಿ ಮೂವರು ಭಾರತೀಯ ವಿದ್ಯಾರ್ಥಿಗಳನ್ನು ಹತ್ಯೆ ಮಾಡಲಾಗಿರುವ ಬಗ್ಗೆ ಭಾರತ ತನ್ನ ಕಳವಳ ವ್ಯಕ್ತಪಡಿಸಿದೆ. ಕೆನಡಾದಲ್ಲಿರುವ ಭಾರತೀಯ ಹೈಕಮಿಷನ್ ಭಾರತೀಯರ ಸುರಕ್ಷತೆಯ ವಿಷಯವನ್ನು ಕೆನಡಾದ ಅಧಿಕಾರಿಗಳೊಂದಿಗೆ ಚರ್ಚಿಸುತ್ತಿದೆ ಎಂದು ವಿದೇಶಾಂಗ ಸಚಿವಾಲಯ (ಎಂಇಎ) ಶುಕ್ರವಾರ ತಿಳಿಸಿದೆ.

ಕೆನಡಾದಲ್ಲಿರುವ ಭಾರತೀಯ ಪ್ರಜೆಗಳ ಸುರಕ್ಷತೆ, ಭದ್ರತೆ ಮತ್ತು ಕಲ್ಯಾಣ ನಮಗೆ ಅತ್ಯಂತ ಮಹತ್ವದ್ದು ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ಹೇಳಿದ್ದಾರೆ.

"ಕಳೆದ ಒಂದು ವಾರದಲ್ಲಿ ನಾವು ದುರದೃಷ್ಟಕರ ಘಟನೆಗಳನ್ನು ನೋಡಿದ್ದೇವೆ. ಮೂವರು ಭಾರತೀಯ ವಿದ್ಯಾರ್ಥಿಗಳನ್ನು ಹತ್ಯೆ ಮಾಡಲಾಗಿದೆ. ಕೆನಡಾದಲ್ಲಿ ನಮ್ಮ ಪ್ರಜೆಗಳಿಗೆ ಆಗಿರುವ ಸಮಸ್ಯೆ ಬಗ್ಗೆ ಕಳವಳಗಳಿವೆ ಎಂದು " ಎಂದು ಜೈಸ್ವಾಲ್ ಹೇಳಿದ್ದಾರೆ.

"ದುಃಖಿತ ಕುಟುಂಬಗಳಿಗೆ ನಮ್ಮ ಸಂತಾಪವನ್ನು ವ್ಯಕ್ತಪಡಿಸುತ್ತೇವೆ. ಟೊರೊಂಟೊ ಮತ್ತು ವ್ಯಾಂಕೋವರ್​ನಲ್ಲಿರುವ ನಮ್ಮ ಹೈಕಮಿಷನ್ ಮತ್ತು ಕಾನ್ಸುಲೇಟ್​ಗಳು ಈ ವಿಷಯದಲ್ಲಿ ಸಾಧ್ಯವಿರುವ ಎಲ್ಲ ನೆರವು ನೀಡುತ್ತಿವೆ" ಎಂದು ಅವರು ಹೇಳಿದರು.

ಘಟನೆಗಳ ಸಮಗ್ರ ತನಿಖೆಗಾಗಿ ಆ ದೇಶದಲ್ಲಿನ ಭಾರತೀಯ ರಾಯಭಾರ ಕಚೇರಿಗಳು ಸ್ಥಳೀಯ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿವೆ ಎಂದು ಜೈಸ್ವಾಲ್ ವಿವರಿಸಿದ್ದಾರೆ .

"ದ್ವೇಷದ ಅಪರಾಧಗಳು ಮತ್ತು ಕ್ರಿಮಿನಲ್ ಹಿಂಸಾಚಾರದ ಪರಿಣಾಮವಾಗಿ ಕೆನಡಾದಲ್ಲಿ ಹದಗೆಡುತ್ತಿರುವ ಭದ್ರತಾ ವಾತಾವರಣವನ್ನು ಗಮನದಲ್ಲಿಟ್ಟುಕೊಂಡು ನಮ್ಮ ಪ್ರಜೆಗಳು ಮತ್ತು ಭಾರತೀಯ ವಿದ್ಯಾರ್ಥಿಗಳಿಗೆ ತೀವ್ರ ಎಚ್ಚರಿಕೆ ವಹಿಸಲು ಸಲಹೆ ನೀಡಿದ್ದೇವೆ" ಎಂದು ಜೈಸ್ವಾಲ್ ನುಡಿದಿದ್ದಾರೆ.

ಕೆನಡಾದಲ್ಲಿದ್ದಾರೆ ಭಾರತದ 4 ಲಕ್ಷ ವಿದ್ಯಾರ್ಥಿಗಳು

ಮಾಹಿತಿಯ ಪ್ರಕಾರ, 4,00,000 ಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳು ಕೆನಡಾದಲ್ಲಿ ಅಧ್ಯಯನ ಮಾಡುತ್ತಿದ್ದಾರೆ. ಕೆನಡಾದಲ್ಲಿ ಭಾರತೀಯ ಹೈಕಮಿಷನ್ ವೀಸಾ ನೀಡದ ನಿದರ್ಶನಗಳ ವರದಿಗಳ ಬಗ್ಗೆ ಕೇಳಿದಾಗ, ಜೈಸ್ವಾಲ್ ಅವುಗಳನ್ನು "ತಪ್ಪು ಮಾಹಿತಿ" ಎಂದು ಹೇಳಿದರು.

"ನಾವು ಈ ಮಾಧ್ಯಮ ವರದಿಯನ್ನು ನೋಡಿದ್ದೇವೆ. ಭಾರತವನ್ನು ಕೆಟ್ಟದಾಗಿ ಬಿಂಬಿಸಲು ಕೆನಡಾದ ಮಾಧ್ಯಮಗಳ ತಪ್ಪು ಮಾಹಿತಿ ಹರಡುತ್ತಿರುವುದಕ್ಕೆ ಇದು ಸ್ಪಷ್ಟ ಉದಾಹರಣೆ " ಎಂದು ಅವರು ಹೇಳಿದರು.

"ಭಾರತೀಯ ವೀಸಾಗಳನ್ನು ನೀಡುವುದು ನಮ್ಮ ಸಾರ್ವಭೌಮ ಕರ್ತವ್ಯ . ನಮ್ಮ ಪ್ರಾದೇಶಿಕ ಸಮಗ್ರತೆ ದುರ್ಬಲಗೊಳಿಸುವವರಿಗೆ ವೀಸಾಗಳನ್ನು ನಿರಾಕರಿಸುವ ಕಾನೂನುಬದ್ಧ ಹಕ್ಕನ್ನು ನಾವು ಹೊಂದಿದ್ದೇವೆ" ಎಂದು ಅವರು ಹೇಳಿದರು.

"ಈ ವಿಷಯದ ಬಗ್ಗೆ ಕೆನಡಾದ ಮಾಧ್ಯಮಗಳಲ್ಲಿ ನಾವು ನೋಡುವ ವ್ಯಾಖ್ಯಾನವು ಭಾರತದ ಸಾರ್ವಭೌಮ ವ್ಯವಹಾರಗಳಲ್ಲಿ ವಿದೇಶಿ ಹಸ್ತಕ್ಷೇಪವಾಗಿದೆ" ಎಂದು ಜೈಸ್ವಾಲ್ ಹೇಳಿದ್ದಾರೆ.

Read More
Next Story