27-year-old Telangana student shot dead by robbers in US, father recalls last call
x

ಹತ್ಯೆಯಾದ ಯುವಕ ಪ್ರವೀಣ್ ಗಂಪಾ

ಅಮೆರಿಕದಲ್ಲಿ 27 ವರ್ಷದ ತೆಲಂಗಾಣ ವಿದ್ಯಾರ್ಥಿಯನ್ನು ಗುಂಡಿಕ್ಕಿ ಕೊಂದ ದರೋಡೆಕೋರರು

ಅಮೆರಿಕದ ಅಂಗಡಿಯೊಂದರಲ್ಲಿ ಅರೆಕಾಲಿಕ ಕೆಲಸ ಮಾಡುತ್ತಿದ್ದ ತೆಲಂಗಾಣ ಮೂಲದ 27 ವರ್ಷದ ಯುವಕನನ್ನು ದರೋಡೆಕೋರರು ಗುಂಡು ಹಾರಿಸಿ ಕೊಂದಿದ್ದಾರೆ ಎಂದು ಆತನ ಸ್ನೇಹಿತರು ಮಾಹಿತಿ ನೀಡಿದ್ದಾರೆ.


ಅಮೆರಿಕದ ಮಿಲ್ವಾಕೀಯಲ್ಲಿ ತೆಲಂಗಾಣ ಮೂಲದ ವಿದ್ಯಾರ್ಥಿಯೊಬ್ಬನನ್ನು ದರೋಡೆಕೋರರ ಗ್ಯಾಂಗ್​ ಗುಂಡಿಕ್ಕಿ ಕೊಂದಿದೆ. ಅಧ್ಯಯನದ ಜತೆಗೆ ಆತ ಅಂಗಡಿಯೊಂದರಲ್ಲಿ ಪಾರ್ಟ್​ಟೈಮ್ ಜಾಬ್​ ಮಾಡುತ್ತಿದ್ದ. ಈ ಸ್ಥಳಕ್ಕೆ ಬುಧವಾರ ಮುಂಜಾನೆ ದರೋಡೆಕೋರರು ನುಗ್ಗಿ ಗುಂಡಿನ ದಾಳಿ ನಡೆಸಿದಾಗ 27 ವರ್ಷದ ವಿದ್ಯಾರ್ಥಿ ಮೃತಪಟ್ಟಿದ್ದಾನೆ ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ. ಗಂಪಾ ಪ್ರವೀಣ್ ಹತ್ಯೆಯಾದ ವಿದ್ಯಾರ್ಥಿ. ಆತ ಉನ್ನತ ಶಿಕ್ಷಣಕ್ಕಾಗಿ ಅಮೆರಿಕಕ್ಕೆ ತೆರಳಿದ್ದು ಮಾಸ್ಟರ್ ಆಫ್ ಸೈನ್ಸ್ (ಎಂಎಸ್) ವ್ಯಾಸಂಗ ಮಾಡುತ್ತಿದ್ದ.

ಪ್ರವೀಣ್ ತೆಲಂಗಾಣದ ರಂಗಾ ರೆಡ್ಡಿ ಜಿಲ್ಲೆಯ ಕೇಶಂಪೇಟ್ ನಿವಾಸಿ. ''ಬೆಳಗ್ಗೆ 5 ಗಂಟೆಗೆ ತನ್ನ ಮಗನಿಂದ ವಾಟ್ಸಾಪ್ ಕರೆ ಬಂದಿತ್ತು. ಆದರೆ, ಅದಕ್ಕೆ ಉತ್ತರಿಸಲು ಸಾಧ್ಯವಾಗಿರಲಿಲ್ಲ,'' ಎಂದು ಆತನ ತಂದೆ ರಾಘವುಲು ಘಟನೆ ಕುರಿತು ವಿವರಿಸಿದ್ದಾರೆ.

" ಬೆಳಿಗ್ಗೆ, ನಾನು ಮಿಸ್ಡ್ ಕಾಲ್ ನೋಡಿದೆ. ತಕ್ಷಣ ಅವನಿಗೆ ಧ್ವನಿ ಸಂದೇಶ (ವಾಯ್ಸ್​ ಮೆಸೇಜ್​​) ಕಳುಹಿಸಿದೆ. ಆದರೆ, ಒಂದು ಗಂಟೆ ಕಳೆದರೂ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ನಂತರ ನಾನು ಅವನ ಸಂಖ್ಯೆಗೆ ಕರೆ ಮಾಡಿದೆ, ಆದರೆ ಬೇರೊಬ್ಬರು ಉತ್ತರಿಸಿದರು. ಅನುಮಾನ ಬಂದು ಏನಾದರೂ ಸಂಭವಿಸಿದೆಯೇ ಎಂದು ಫೋನ್ ಕಟ್​ ಮಾಡಿದೆ" ಎಂದು ಅವರು ವಿವರಿಸಿದ್ದಾರೆ.

''ಅನುಮಾನದ ಮೇಲೆ ನಾನು ಅವನ ಸ್ನೇಹಿತರನ್ನು ಸಂಪರ್ಕಿಸಿದಾಗ ಅವರು ಮಾಹಿತಿ ನೀಡಿದರು. ಪ್ರವೀಣ್​ ಕೆಲಸಕ್ಕೆ ಅಂಗಡಿಗೆ ಹೋಗಿದ್ದಾಗ ದರೋಡೆಕೋರರು ಬಂದು ಗುಂಡು ಹಾರಿಸಿದ್ದರು. ಗುಂಡು ತಗುಲಿ ಮೃತಪಟ್ಟಿದ್ದಾನೆ " ಎಂದು ರಾಘವುಲು ಹೇಳಿದ್ದಾರೆ.

ಚಿಕಾಗೋದಲ್ಲಿರುವ ಭಾರತೀಯ ರಾಯಭಾರ ಕಚೇರಿ ಪ್ರವೀಣ್ ಅವರ ಕುಟುಂಬವನ್ನು ಸಂಪರ್ಕಿಸಿದ್ದು, ಎಲ್ಲ ನೆರವು ನೀಡುವ ಭರವಸೆ ಕೊಟ್ಟಿದೆ.

"ವಿಸ್ಕಾನ್ಸಿನ್-ಮಿಲ್ವಾಕೀ ವಿಶ್ವವಿದ್ಯಾಲಯದ ಸ್ನಾತಕೋತ್ತರ ವಿದ್ಯಾರ್ಥಿ ಪ್ರವೀಣ್ ಕುಮಾರ್ ಗಂಪಾ ಅವರ ಅಕಾಲಿಕ ನಿಧನದಿಂದ ನಾವು ದುಃಖಿತರಾಗಿದ್ದೇವೆ. ದೂತಾವಾಸವು ಪ್ರವೀಣ್ ಅವರ ಕುಟುಂಬ ಮತ್ತು ವಿಶ್ವವಿದ್ಯಾಲಯದೊಂದಿಗೆ ಸಂಪರ್ಕದಲ್ಲಿದೆ" ಎಂದು ರಾಯಭಾರ ಕಚೇರಿ ಟ್ವೀಟ್ ಮಾಡಿದೆ.

Read More
Next Story