26/11 Mumbai Attack: 26/11 ದಾಳಿಯ ಮಾಸ್ಟರ್‌ಮೈಂಡ್ ತಹಾವೂರ್ ರಾಣಾನನ್ನು ಹೊತ್ತ ವಿಮಾನ ಭಾರತದತ್ತ ಪಯಣ
x

26/11 Mumbai Attack: 26/11 ದಾಳಿಯ ಮಾಸ್ಟರ್‌ಮೈಂಡ್ ತಹಾವೂರ್ ರಾಣಾನನ್ನು ಹೊತ್ತ ವಿಮಾನ ಭಾರತದತ್ತ ಪಯಣ

ಕಳೆದ ಫೆಬ್ರವರಿಯಲ್ಲಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪ್ರಧಾನಿ ನರೇಂದ್ರ ಮೋದಿ ಭೇಟಿಯಾದ ವೇಳೆ ನಡೆದಿದ್ದ ಜಂಟಿ ಪತ್ರಿಕಾಗೋಷ್ಠಿಯಲ್ಲಿ, ತಹಾವೂರ್ ರಾಣಾನನ್ನು ಭಾರತಕ್ಕೆ ಹಸ್ತಾಂತರಿಸುವುದಾಗಿಘೋಷಿಸಲಾಗಿತ್ತು.


2008ರಲ್ಲಿ ನಡೆದ ಮುಂಬೈ ಭಯೋತ್ಪಾದಕ ದಾಳಿಯ ರೂವಾರಿ ಉಗ್ರ ತಹಾವೂರ್ ರಾಣಾನನ್ನು ಅಮೆರಿಕ ಸರ್ಕಾರವು ಭಾರತಕ್ಕೆ ಗಡೀಪಾರು ಮಾಡಿದೆ. ಈತನನ್ನು ಹೊತ್ತ ವಿಶೇಷ ವಿಮಾನವು ಅಮೆರಿಕದಿಂದ ಹೊರಟಿದ್ದು, ಬುಧವಾರ ರಾತ್ರಿ ನವದೆಹಲಿಗೆ ಬಂದಿಳಿಯಲಿದೆ. ಅಮೆರಿಕದಲ್ಲಿ ಆತನಿಗಿದ್ದ ಎಲ್ಲ ಕಾನೂನು ಆಯ್ಕೆಗಳೂ ಮುಗಿದ ಹಿನ್ನೆಲೆಯಲ್ಲಿ ಅಲ್ಲಿನ ಸರ್ಕಾರ ರಾಣಾನನ್ನು ಗಡೀಪಾರು ಮಾಡಿದೆ.

ಭಾರತಕ್ಕೆ ಗಡೀಪಾರು ಮಾಡುವುದನ್ನು ತಡೆಯುವಂತೆ ರಾಣಾ ಸಲ್ಲಿಸಿದ್ದ ಅರ್ಜಿಯನ್ನು ಅಮೆರಿಕದ ಸುಪ್ರೀಂ ಕೋರ್ಟ್ ತಿರಸ್ಕರಿಸಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. "ಮುಖ್ಯ ನ್ಯಾಯಮೂರ್ತಿಯನ್ನು ಉದ್ದೇಶಿಸಿ, ತಡೆಯಾಜ್ಞೆ ಕೋರಿ ನ್ಯಾಯಾಲಯಕ್ಕೆ ಕಳುಹಿಸಲಾದ ಅರ್ಜಿಯನ್ನು ತಿರಸ್ಕರಿಸಲಾಗಿದೆ" ಎಂದು ಸುಪ್ರೀಂ ಕೋರ್ಟ್ ಸೋಮವಾರ ಆದೇಶದಲ್ಲಿ ತಿಳಿಸಿತ್ತು.

ಮಾರ್ಚ್ ನಲ್ಲೂ ಯುಎಸ್ ಸುಪ್ರೀಂ ಕೋರ್ಟ್ ಇದೇ ಮಾದರಿಯ ಅರ್ಜಿಯನ್ನು ನಿರಾಕರಿಸಿತ್ತು. ತಾನು ಕಿಬ್ಬೊಟ್ಟೆಯ ಅಯೋರ್ಟಿಕ್ ಅನೂರಿಸಂನಿಂದ ಬಳಲುತ್ತಿದ್ದು, ಅದು ಹೆಚ್ಚಾಗುವ ಅಪಾಯವಿದೆ, ಇದಲ್ಲದೇ ಪಾರ್ಕಿನ್ಸನ್ ಕಾಯಿಲೆ ಮತ್ತು ಮೂತ್ರಕೋಶದ ಕ್ಯಾನ್ಸರ್ ಗೆ ಸಂಬಂಧಿಸಿದ ಸಮಸ್ಯೆಯಿಂದಲೂ ಬಳಲುತ್ತಿದ್ದೇನೆ. ಹೀಗಾಗಿ ಭಾರತಕ್ಕೆ ತನ್ನನ್ನು ಗಡೀಪಾರು ಮಾಡಬಾರದು ಎಂದು ರಾಣಾ ಈ ಹಿಂದೆ ಅಮೆರಿಕದ ಕೋರ್ಟ್ ಗೆ ಮನವಿ ಮಾಡಿದ್ದ. ಅಲ್ಲದೇ, ಭಾರತದಲ್ಲಿ ವಿಚಾರಣೆಗೆ ಒಳಗಾಗುವಷ್ಟು ಕಾಲ ನಾನು ಬದುಕುವುದಿಲ್ಲ. ನಾನೊಬ್ಬ ಪಾಕಿಸ್ತಾನಿ. ಹಾಗಾಗಿ ರಾಷ್ಟ್ರೀಯ, ಧಾರ್ಮಿಕ ಮತ್ತು ಸಾಂಸ್ಕೃತಿಕ ದ್ವೇಷದಿಂದ ಭಾರತದಲ್ಲಿ ನನ್ನನ್ನು ಗುರಿಯಾಗಿಸಿ ಹಿಂಸಿಸುವ ಸಾಧ್ಯತೆಯಿದೆ ಎಂದೂ ಆತ ಅರ್ಜಿಯಲ್ಲಿ ಮನವಿ ಮಾಡಿದ್ದ.

ಪ್ರಧಾನಿ ಭೇಟಿ ವೇಳೆ ಮಾತುಕತೆ

ಕಳೆದ ಫೆಬ್ರವರಿಯಲ್ಲಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪ್ರಧಾನಿ ನರೇಂದ್ರ ಮೋದಿ ಭೇಟಿಯಾದ ವೇಳೆ ನಡೆದಿದ್ದ ಜಂಟಿ ಪತ್ರಿಕಾಗೋಷ್ಠಿಯಲ್ಲಿ, ತಹಾವೂರ್ ರಾಣಾನನ್ನು ಭಾರತಕ್ಕೆ ಹಸ್ತಾಂತರಿಸುವುದಾಗಿಯೂ, ಆತನಿಗೆ ತಕ್ಕ ಶಿಕ್ಷೆಯಾಗುವಂತೆ ನೋಡಿಕೊಳ್ಳುವುದಾಗಿಯೂ ಘೋಷಿಸಲಾಗಿತ್ತು.

2008ರ ನವೆಂಬರ್ 26ರಂದು ಮುಂಬೈನಲ್ಲಿ ನಡೆದ ದಾಳಿಯ ಪ್ರಮುಖ ಸಂಚುಕೋರರಲ್ಲಿ ಒಬ್ಬನಾದ ಪಾಕಿಸ್ತಾನಿ-ಅಮೆರಿಕನ್ ಭಯೋತ್ಪಾದಕ ಡೇವಿಡ್ ಕೋಲ್ಮನ್ ಹೆಡ್ಲಿಯ ಸಹಚರನೇ ಈ ತಹಾವುರ್ ರಾಣಾ. ಈತ ಪಾಕಿಸ್ತಾನಿ ಮೂಲದ ಉದ್ಯಮಿ ಹಾಗೂ ವೈದ್ಯ. ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೈಬಾ (ಎಲ್ಇಟಿ) ಮತ್ತು ಪಾಕ್ ಐಎಸ್ಐ ಜತೆ ಈತ ನಂಟು ಹೊಂದಿದ್ದ.

ಅಮೆರಿಕದ ನ್ಯಾಯಾಲಯವು ರಾಣಾನನ್ನು ದಾಳಿಗೆ ಭೌತಿಕ ಬೆಂಬಲ ನೀಡಿದ ಆರೋಪದಿಂದ ಖುಲಾಸೆಗೊಳಿಸಿತ್ತು. ಆದರೆ ಆತನ ಮೇಲಿದ್ದ ಇತರೆ ಎರಡು ಆರೋಪಗಳು ಸಾಬೀತಾದ ಕಾರಣ 10 ವರ್ಷಗಳ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು. ಕೋವಿಡ್ ಸಾಂಕ್ರಾಮಿಕ ರೋಗದ ನಂತರ ರಾಣಾ ಆರೋಗ್ಯವು ಕ್ಷೀಣಿಸಲು ಪ್ರಾರಂಭಿಸಿದ ಹಿನ್ನೆಲೆಯಲ್ಲಿ ಆತನನ್ನು ಜೈಲಿನಿಂದ ಬಿಡುಗಡೆ ಮಾಡಲಾಗಿತ್ತು. ನಂತರದಲ್ಲಿ ಆತನನ್ನು ಭಾರತಕ್ಕೆ ಗಡೀಪಾರು ಮಾಡಲೆಂದು ಮತ್ತೆ ಬಂಧಿಸಲಾಗಿತ್ತು.

26/11 ಮುಂಬೈ ದಾಳಿ

2008ರ ನವೆಂಬರ್ 26ರಂದು ಪಾಕಿಸ್ತಾನದಿಂದ ಸಮುದ್ರ ಮಾರ್ಗದ ಮೂಲಕ ಭಾರತದ ವಾಣಿಜ್ಯ ನಗರಿ ಮುಂಬೈ 10 ಮಂದಿ ಲಷ್ಕರ್ ಭಯೋತ್ಪಾದಕರು ಪ್ರವೇಶ ಪಡೆದಿದ್ದರು. 60 ಗಂಟೆಗಳಿಗೂ ಹೆಚ್ಚು ಕಾಲ ತಾಜ್, ಒಬೆರಾಯ್, ಸಿಎಸ್ಟಿ ಸೇರಿದಂತೆ ಮುಂಬೈನ ವಿವಿಧ ಭಾಗಗಳಿಗೆ ಮುತ್ತಿಗೆ ಹಾಕಿ, ಬಾಂಬ್ ಸ್ಫೋಟ ನಡೆಸಿ, ಗುಂಡಿನ ಮಳೆಗರೆದಿದ್ದರು. ಇಡೀ ದೇಶವನ್ನೇ ನಡುಗಿಸಿದ್ದ ಈ ದಾಳಿಯಲ್ಲಿ ಪಾಕ್ ಉಗ್ರರು ಬರೋಬ್ಬರಿ 166 ಮಂದಿ ಅಮಾಯಕರನ್ನು ಹತ್ಯೆಗೈದಿದ್ದರು. 300ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಮುಂಬೈನ ಛತ್ರಪತಿ ಶಿವಾಜಿ ಟರ್ಮಿನಸ್ ರೈಲು ನಿಲ್ದಾಣ, ಕಾಮಾ ಆಸ್ಪತ್ರೆ, ನಾರಿಮನ್ ಹೌಸ್ ವ್ಯಾಪಾರ ಮತ್ತು ವಸತಿ ಸಂಕೀರ್ಣ, ಲಿಯೋಪೋಲ್ಡ್ ಕೆಫೆ, ತಾಜ್ ಹೋಟೆಲ್ ಮತ್ತು ಒಬೆರಾಯ್ ಟ್ರೈಡೆಂಟ್ ಹೋಟೆಲ್‌ಗಳಲ್ಲಿ ಈ ದಾಳಿ ನಡೆಸಲಾಗಿತ್ತು. ಈ ದಾಳಿಯಲ್ಲಿ ಮಾಸ್ಟರ್ ಮೈಂಡ್ ಗಳಲ್ಲಿ ತಹಾವುರ್ ರಾಣಾ ಕೂಡ ಒಬ್ಬ ಎಂದು ಭಾರತ ಆರೋಪಿಸಿತ್ತು.

Read More
Next Story