2025 Booker Prize shortlist for India-born Kiran Desai novel
x

 ಕಾದಂಬರಿಗಾರ್ತಿ ಕಿರಣ್ ದೇಸಾಯಿ

Booker Award -2025 |ಪ್ರಶಸ್ತಿಯ ಅಂತಿಮ ಸುತ್ತಿಗೆ ಭಾರತೀಯ ಸಂಜಾತೆ ಕಿರಣ್ ದೇಸಾಯಿ ಕಾದಂಬರಿ

2024ರಲ್ಲಿ ಕನ್ನಡದ ಲೇಖಕಿ ಬಾನು ಮುಷ್ತಾಕ್ ಅವರು ತಮ್ಮ ಕೃತಿಯಾದ ʼಹಾರ್ಟ್‌ ಲ್ಯಾಂಪ್‌ʼ ಕೃತಿಗೆ ಬೂಕರ್‌ ಪ್ರಶಸ್ತಿ ಪಡೆದಿದ್ದರು. ಇದೀಗ ಭಾರತದ ಮತ್ತೊಬ್ಬ ಕಾದಂಬರಿಕಾರರಾದ ಕಿರಣ್ ದೇಸಾಯಿ ಅವರು ಅಂತಿಮ ಸುತ್ತಿನಲ್ಲಿ ಸ್ಥಾನ ಪಡೆದಿದ್ದಾರೆ.


Click the Play button to hear this message in audio format

ಎರಡು ದಶಕಗಳ ಹಿಂದೆ ಬೂಕರ್ ಪ್ರಶಸ್ತಿ ಗಳಿಸಿದ್ದ ಭಾರತ ಮೂಲದ ಲೇಖಕಿ ಕಿರಣ್ ದೇಸಾಯಿ ಅವರು ಇದೀಗ 2025 ನೇ ಸಾಲಿನ ಬೂಕರ್ ಪ್ರಶಸ್ತಿಯ ಅಂತಿಮ ಆರು ಮಂದಿಯ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ತಮ್ಮ ಮೂರನೇ ಕಾದಂಬರಿ ʼದಿ ಲೋನ್ಲಿನೆಸ್ ಆಫ್ ಸೋನಿಯಾ ಅಂಡ್ ಸನ್ನಿʼ ಬೂಕರ್ ಪ್ರಶಸ್ತಿ ಪಟ್ಟಿಯಲ್ಲಿ ಸ್ಥಾನ ಪಡೆದಿದೆ.

ಅಂತಿಮ ಸುತ್ತಿನ ಪಟ್ಟಿಯಲ್ಲಿ ಸೂಸನ್ ಚೋಯ್ (ಫ್ಲ್ಯಾಶ್‌ ಲೈಟ್‌), ಕೇಟೀ ಕಿತಮುರ (ಆಡಿಷನ್), ಬೆನ್ ಮರ‍್ಕೊವಿಟ್ಸ್ (ದಿ ರೆಸ್ಟ್ ಆಫ್ ಅವರ್ ಲೈವ್ಸ್), ಆಂಡ್ರೂ ಮಿಲ್ಲರ್ (ದಿ ಲ್ಯಾಂಡ್ ಇನ್ ವಿಂಟರ್) ಮತ್ತು ಡೇವಿಡ್ ಸ್ಜಾಲೆ (ಫ್ಲೆಶ್) ಸ್ಥಾನ ಪಡೆದಿದ್ದಾರೆ.

2024ರಲ್ಲಿ ಕನ್ನಡದ ಲೇಖಕಿ ಬಾನು ಮುಷ್ತಾಕ್ ಅವರು ತಮ್ಮ ಕೃತಿಯಾದ ʼಹಾರ್ಟ್‌ ಲ್ಯಾಂಪ್‌ʼ ಗೆ ಬೂಕರ್‌ ಪ್ರಶಸ್ತಿ ಪಡೆದಿದ್ದರು. ಇದೀಗ ಭಾರತದ ಕಾದಂಬರಿಗಾರ್ತಿ ಕಿರಣ್ ದೇಸಾಯಿ ಅವರು ಅಂತಿಮ ಸುತ್ತಿನಲ್ಲಿ ಸ್ಥಾನ ಪಡೆದಿರುವುದು ಹೆಮ್ಮೆಯ ವಿಚಾರವಾಗಿದೆ. 2006 ರಲ್ಲಿ ಕಿರಣ್‌ ದೇಸಾಯಿ ಅವರು ತಮ್ಮ ‘ದಿ ಇನ್ಹೆರಿಟೆನ್ಸ್ ಆಫ್ ಲಾಸ್’ ಕಾದಂಬರಿಗೆ ಬೂಕರ್‌ ಪ್ರಶಸ್ತಿ ಪಡೆದಿದ್ದರು. ಈ ಕೃತಿಯು ರಾಷ್ಟ್ರೀಯ ಪುಸ್ತಕ ವಿಮರ್ಶಕರ ವಲಯದಿಂದ ಮೆಚ್ಚುಗೆಗೆ ಪಾತ್ರವಾಗಿತ್ತು. ʼದಿ ಎಕನಾಮಿಕ್ ಟೈಮ್ಸ್ʼ ಪತ್ರಿಕೆಯು ಕಿರಣ್‌ ದೇಸಾಯಿ ಅವರನ್ನು ಭಾರತದ 20ಜಾಗತಿಕ ಪ್ರಭಾವಶಾಲಿ ಮಹಿಳೆಯರಲ್ಲಿ ಒಬ್ಬರು ಎಂದು ಪಟ್ಟಿ ಮಾಡಿತ್ತು.

ಯಾರು ಕಿರಣ್‌ ದೇಸಾಯಿ?

ನವದೆಹಲಿಯಲ್ಲಿ ಅನಿತಾ ದೇಸಾಯಿ ಅವರ ಸುಪುತ್ರಿಯಾಗಿ ಜನಿಸಿದ ಕಿರಣ್‌ ದೇಸಾಯಿ ಅವರು ಬಾಲ್ಯದ ದಿನಗಳನ್ನು ಪಂಜಾಬ್‌ ಹಾಗೂ ಮುಂಬೈನಲ್ಲಿ ಕಳೆದಿದ್ದರು. ಪ್ರಾಥಮಿಕ ಶಿಕ್ಷಣವನ್ನು ಕ್ಯಾಥಡ್ರಲ್‌ ಹಾಗೂ ಜಾನ್‌ ಕ್ಯಾನಾನ್‌ ಶಾಲೆಯಲ್ಲಿ ಪೂರ್ಣಗೊಳಿಸಿದ್ದರು.

14ನೇ ವಯಸ್ಸಿನಲ್ಲಿ ತನ್ನ ತಾಯಿಯೊಂದಿಗೆ ಇಂಗ್ಲೆಂಡ್‌ಗೆ ಪ್ರಯಾಣಿಸಿದ ಅವರು ಒಂದು ವರ್ಷ ಅಲ್ಲೇ ಕಳೆದಿದ್ದರು. ಬಳಿಕ ಅಮೆರಿಕದ ನ್ಯೂಯಾರ್ಕ್‌ನಲ್ಲಿರುವ ಬೆನ್ನಿಂಗ್ಟನ್‌ ಕಾಲೇಜು ಹಾಗೂ ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಕ್ರಿಯಾಶೀಲ ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದರು. ಪ್ರಸ್ತುತ ನ್ಯೂಯಾರ್ಕ್‌ ನಗರದಲ್ಲೇ ವಾಸವಾಗಿದ್ದಾರೆ.

ಕಿರಣ್‌ ದೇಸಾಯಿ ಅವರು 1998 ರಲ್ಲಿ ತಮ್ಮ ಮೊದಲ ಕಾದಂಬರಿ ʼಪೇರಲ ತೋಟದಲ್ಲಿ ಹಲ್ಲಾಬಲೂʼ (Hullabaloo in the ಗ್ಯಾವ Orchard) ಬರೆದಿದ್ದರು. ತಮ್ಮ ಕೃತಿಗೆ ಖ್ಯಾತ ಲೇಖಕ ಸಲ್ಮಾನ್ ರಶ್ದಿ ಅವರಂತಹ ಸಾಹಿತಿಗಳಿಂದ ಪ್ರಶಂಸೆ ಪಡೆದಿದ್ದರು.

ಎರಡು ಖಂಡಗಳ ವಿಭಿನ್ನ ಕಥಾನಕ

ಮೂರನೇ ಕಾದಂಬರಿ ʼದಿ ಲೋನ್ಲಿನೆಸ್ ಆಫ್ ಸೋನಿಯಾ ಅಂಡ್ ಸನ್ನಿʼ ಎರಡು ಖಂಡಗಳಾದ ಭಾರತ ಹಾಗೂ ಅಮೆರಿಕದ ಸಂಪ್ರದಾಯ ಹಾಗೂ ಆಧುನಿಕತೆಯ ಒಂದು ಮಹಾಕಾವ್ಯ ಎಂದು ಬಣ್ಣಿಸಲಾಗಿದೆ. ಪ್ರೀತಿ-ಪ್ರೇಮ, ಕೌಟುಂಬಿಕ ಹಿನ್ನೆಲೆಯ ರೋಚಕ ಕತೆ ಒಳಗೊಂಡಿದೆ.

"ಮೊದಲ ಬಾರಿಗೆ ರಾತ್ರಿಯ ರೈಲಿನಲ್ಲಿ ಪ್ರಯಾಣ ಮಾಡುವ ಸೋನಿಯಾ ಮತ್ತು ಸನ್ನಿ ಒಬ್ಬರನ್ನೊಬ್ಬರು ಆಕರ್ಷಣೆಗೆ ಒಳಗಾಗುತ್ತಾರೆ, ಆದರೆ ಅವರ ಅಜ್ಜ-ಅಜ್ಜಿಯರು ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಾರೆ. ಈ ಅಪ್ರಬುದ್ಧ ಮಧ್ಯಸ್ಥಿಕೆಯು ಸೋನಿಯಾ ಮತ್ತು ಸನ್ನಿಯನ್ನು ದೂರ ಮಾಡುತ್ತದೆ. ತನ್ನ ಅಧ್ಯಯನವನ್ನು ಪೂರೈಸಿದ ಮಹತ್ವಾಕಾಂಕ್ಷೆಯ ಕಾದಂಬರಿಗಾರ್ತಿ ಸೋನಿಯಾ ಭಾರತದಲ್ಲಿರುವ ತನ್ನ ಕುಟುಂಬವನ್ನು ಮರಳಿ ಸೇರಿಕೊಳ್ಳುತ್ತಾಳೆ. ಆಕೆ ಒಮ್ಮೆ ಅನ್ಯೋನ್ಯತೆ ಮತ್ತು ಸ್ಪೂರ್ತಿಗಾಗಿ ಮೊರೆಹೋಗಿದ್ದ ಕಲಾವಿದನೊಬ್ಬ ತನ್ನ ಮೇಲೆ ಮಾಟ ಮಾಡಿದ್ದಾನೆಂಬ ಭೀತಿಗೆ ಒಳಗಾಗುತ್ತಾಳೆ".

ಇದೇ ಸಂದರ್ಭದಲ್ಲಿ ನ್ಯೂಯರ್ಕ್‌ ನಗರದಲ್ಲಿ ನೆಲೆಸಿರುವ, ಸನ್ನಿ ತನ್ನ ದುರಹಂಕಾರಿ ತಾಯಿ ಮತ್ತು ಜಗಳಗಂಟಿ ಕುಟುಂಬದ ಹಿಂಸೆಯಿಂದ ಬೇಸತ್ತು ಪಲಾಯನ ಮಾಡುವ ಪ್ರಯತ್ನ ನಡೆಸುತ್ತಿರುತ್ತಾನೆ. ತಮ್ಮ ಭವಿಷ್ಯದ ಬಗ್ಗೆ ಅನಿಶ್ಚಿತರಾಗಿರುವ ಸೋನಿಯಾ ಮತ್ತು ಸನ್ನಿ, ನಮ್ಮ ಆಧುನಿಕ ಪ್ರಪಂಚದ ಅನೇಕ ವಿಮುಖತೆಗಳನ್ನು ಎದುರಿಸುತ್ತಿರುವಾಗಲೇ, ನೆಮ್ಮದಿ, ಸಂತೋಷಕ್ಕಾಗಿ ಜೊತೆಯಲ್ಲಿಯೇ ಹುಡುಕಾಟ ನಡೆಸುತ್ತಿರುವ ಅಪರೂಪದ ವಸ್ತು ವಿಷಯವನ್ನು ಈ ಕಾದಂಬರಿ ಹೊಂದಿದೆ.

‘ದಿ ಲೋನ್ಲಿನೆಸ್ ಆಫ್ ಸೋನಿಯಾ ಅಂಡ್ ಸನ್ನಿ’ ಎಂಬ ಕೃತಿಯ ಮೂಲಕ ಇಬ್ಬರು ತಮ್ಮ ಜೀವನವನ್ನು ರೂಪಿಸುವ ದೇಶ, ಜನಾಂಗ, ಇತಿಹಾಸ, ಮತ್ತು ಒಂದು ತಲೆಮಾರನ್ನು ಇನ್ನೊಂದು ತಲೆಮಾರಿಗೆ ಬೆಸೆಯುವ ಸಂಕಷ್ಟ ಬಂಧಗಳಂತಹ ಅನೇಕ ಶಕ್ತಿಗಳನ್ನು ಹೇಗೆ ನಿಭಾಯಿಸುತ್ತಾರೆ ಎಂಬುದನ್ನು ಬಣ್ಣಿಸುವ ವಿಶಾಲ ಕಥೆಯಾಗಿದೆ. ಒಂದು ಕಡೆ ಇದು ಪ್ರೇಮಕಥೆಯೂ ಹೌದು ಇನ್ನೊಂದು ಕಡೆ ಕೌಟುಂಬಿಕ ಕಥಾನಕವೂ ಹೌದು.

Read More
Next Story