ಮಂಗಳೂರು ವಿಮಾನ ದುರಂತ ಮಾದರಿಯಲ್ಲೇ ದಕ್ಷಿಣ ಕೊರಿಯಾದಲ್ಲಿ ಅವಘಡ: 179 ಮಂದಿ ಸಾವು
ವಿಡಿಯೊಗಳು ಮಂಗಳೂರು ವಿಮಾನ ನಿಲ್ದಾಣದಲ್ಲಿ 2010ರಲ್ಲಿ ನಡೆದ ವಿಮಾನ ದುರಂತ ಘಟನೆ ಸ್ಮರಿಸುವಂತಿದೆ. ಅಲ್ಲಿ ವಿಮಾನ ನಿಯಂತ್ರಣಕ್ಕೆ ಸಿಗದೇ ತಡೆಗೋಡೆಗೆ ಡಿಕ್ಕಿ ಹೊಡೆದು ಬಳಿಕ ಕಮರಿಗೆ ಉರುಳಿ ಬಿದ್ದಿತ್ತು.
181 ಪ್ರಯಾಣಿಕರನ್ನು ಹೊತ್ತ ವಿಮಾನವು ದಕ್ಷಿಣ ಕೊರಿಯಾದ ಮುವಾನ್ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದರೂ ರನ್‌ವೇನಲ್ಲಿ ನಿಯಂತ್ರಣ ಮಾಡಲು ಸಾಧ್ಯವಾಗದೇ ಹೊರಗಿನ ತಡೆಗೋಡೆಗೆ ಅಪ್ಪಳಿಸಿ ಛಿದ್ರಗೊಂಡಿದೆ. ಎಂಜಿನ್ ಕೆಲಸ ಮಾಡದ ಕಾರಣ ಚಕ್ರಗಳು ಕೆಳಕ್ಕೆ ಬರದೇ ಹೋದ ಹಿನ್ನೆಲೆಯಲ್ಲಿ ಬೆಲ್ಲಿ ಲ್ಯಾಂಡಿಂಗ್ ಮಾಡಲಾಗಿತ್ತು. ಹೀಗಾಗಿ ವಿಮಾನದ ನಿಯಂತ್ರಣ ಅಸಾಧ್ಯವಾಗಿತ್ತು
ಯೋನ್ಹಾಪ್ ಸುದ್ದಿ ಸಂಸ್ಥೆಯ ಪ್ರಕಾರ, ಜೆಜು ಏರ್ ವಿಮಾನ 2216 ಥೈಲ್ಯಾಂಡ್‌ನಿಂದ ಹಿಂದಿರುಗುತ್ತಿದ್ದಾಗ ದಕ್ಷಿಣ ಜಿಯೋಲಾ ಪ್ರಾಂತ್ಯದಲ್ಲಿ ಅಪಘಾತ ಸಂಭವಿಸಿದೆ. ಬೋಯಿಂಗ್ 737-8ಎಎಸ್ ವಿಮಾನ ಬಹುತೇಕ ನಾಶವಾಗಿದೆ.
ವಿಮಾನದಲ್ಲಿದ್ದ 181 ಜನರಲ್ಲಿ 175 ಪ್ರಯಾಣಿಕರು ಮತ್ತು ಆರು ಮಂದಿ ವಿಮಾನ ಸಿಬ್ಬಂದಿ ಇದ್ದರು. ಅಘಘಡ ಬೆಳಿಗ್ಗೆ 9 ಗಂಟೆ ಸುಮಾರಿಗೆ (ಭಾರತೀಯ ಕಾಲಮಾನ) ನಡೆದಿದ್ದು ತುರ್ತು ಸೇವೆಗಳು ಕಾರ್ಯಾಚರಣೆಯನ್ನು ಪ್ರಾರಂಭಿಸಿವೆ. ಅಪಘಾತದ ಸ್ಥಳಲ್ಲಿ ಕಪ್ಪು ಹೊಗೆ ಏರುತ್ತಿರುವುದನ್ನು ದೃಶ್ಯಗಳು ಕಂಡಿವೆ. ಪ್ರತಿಕೂಲ ಹವಾಮಾನ ಪರಿಸ್ಥಿತಿ ಹಾಗೂ ಹಕ್ಕಿ ಡಿಕ್ಕಿಯಿಂದಾಗಿ ಲ್ಯಾಂಡಿಂಗ್ ಗೇರ್ ಸರಿಯಾಗಿ ಕೆಲಸ ಮಾಡಲಿಲ್ಲ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ.
ರಕ್ಷಣಾ ಕಾರ್ಯಕ್ಕೆ ಅಧ್ಯಕ್ಷರ ಕರೆ
ಹಂಗಾಮಿ ಅಧ್ಯಕ್ಷ ಚೋಯ್ ಸಾಂಗ್-ಮೋಕ್ ಪ್ರಯಾಣಿಕರನ್ನು ಉಳಿಸಲು ಎಲ್ಲಾ ಸಂಪನ್ಮೂಲಗಳನ್ನು ಸಜ್ಜುಗೊಳಿಸಲು ಕರೆ ನೀಡಿದ್ದಾರೆ. "ಎಲ್ಲಾ ಸಂಬಂಧಿತ ಏಜೆನ್ಸಿಗಳು ಸಿಬ್ಬಂದಿ ಉಳಿಸಲು ಲಭ್ಯವಿರುವ ಎಲ್ಲಾ ಸಂಪನ್ಮೂಲಗಳನ್ನು ಸಜ್ಜುಗೊಳಿಸಬೇಕು" ಎಂದು ಅವರು ಅಧಿಕಾರಿಗಳಿಗೆ ಹೇಳಿಕೆಯಲ್ಲಿ ಸೂಚನೆ ನೀಡಿದ್ದಾರೆ.
ಒಂದೇ ವಾರದಲ್ಲಿ ಎರಡನೇ ವಿಮಾನ ಅಪಘಾತ
ಜಕಿಸ್ತಾನದಲ್ಲಿ ಬುಧವಾರ ಅಜೆರ್ಬೈಜಾನ್ ಏರ್ಲೈನ್ಸ್ ಪ್ರಯಾಣಿಕರ ವಿಮಾನ ಅಪಘಾತಕ್ಕೀಡಾಗಿ 38 ಜನರು ಸಾವನ್ನಪ್ಪಿದ ಕೆಲವೇ ದಿನಗಳ ನಂತರ ಭಾನುವಾರ ಅಪಘಾತ ಸಂಭವಿಸಿದೆ.
ಅಜೆರ್ಬೈಜಾನ್ ಏರ್‌ಲೈನ್ಸ್ ವಿಮಾನ ಜೆ 2-8243 ದಕ್ಷಿಣ ರಷ್ಯಾದಿಂದ ಏಕಾಏಕಿ ತಿರುಗಿಸಿದ ನಂತರ ಕಜಕಿಸ್ತಾನದ ಅಕ್ಟೌ ನಗರದ ಬಳಿ ಅಪಘಾತಕ್ಕೀಡಾಗಿ ನಾಶವಾಗಿತ್ತು. ರಷ್ಯಾದ ಮಿಲಿಟರಿ ಪಡೆಯ ದಾಳಿಯಿಂದಾಗಿ ಈ ಘಟನೆ ಸಂಭವಿಸಿದೆ.
ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ಅಜೆರ್ಬೈಜಾನ್ ಅಧ್ಯಕ್ಷ ಇಲ್ಹಾಮ್ ಅಲಿಯೆವ್ ಅವರ ಕ್ಷಮೆಯಾಚಿಸಿದ್ದಾರೆ. "ತನ್ನ ವೇಳಾಪಟ್ಟಿಯ ಪ್ರಕಾರ ಪ್ರಯಾಣಿಸುತ್ತಿದ್ದ ಅಜೆರ್ಬೈಜಾನಿ ಪ್ರಯಾಣಿಕರ ವಿಮಾನವು ಗ್ರೋಜ್ನಿ ವಿಮಾನ ನಿಲ್ದಾಣದಲ್ಲಿ ಇಳಿಯಲು ಪದೇ ಪದೇ ಪ್ರಯತ್ನಿಸಿತ್ತು. ಆ ಸಮಯದಲ್ಲಿ, ಗ್ರೋಜ್ನಿ, ಮೊಜ್ಡೋಕ್ ಮತ್ತು ವ್ಲಾಡಿಕಾವ್ಕಾಜ್ ಉಕ್ರೇನಿಯನ್ ಮಾನವರಹಿತ ಡ್ರೋನ್‌ಗಳ ದಾಳಿಗೆ ಒಳಗಾಗುತ್ತಿತ್ತು. ಹೀಗಾಗಿ ರಷ್ಯಾದ ವಾಯು ರಕ್ಷಣಾ ವ್ಯವಸ್ಥೆಗಳು ಈ ದಾಳಿಗಳನ್ನು ಹಿಮ್ಮೆಟ್ಟಿಸುವಾಗ ಪ್ರಯಾಣಿಕ ವಿಮಾನದ ಮೇಲೆಯೂ ದಾಳಿ ಮಾಡಿದ್ದವು.