Bizarre Robberies|ಕಿಟ್‌ಕ್ಯಾಟ್ ಚಾಕೊಲೇಟ್‌ನಿಂದ ಹಿಡಿದು ಬಿಹಾರದ ಕೆರೆಯವರೆಗೆ ವಿಶ್ವದ ವಿಲಕ್ಷಣ ಕಳ್ಳತನಗಳ ಬಗ್ಗೆ ನಿಮಗೆ ಗೊತ್ತೇ?
x
ಇಟಲಿಯಲ್ಲಿ 12 ಟನ್ ಕಿಟ್‌ಕ್ಯಾಟ್ ಕಳ್ಳತನ(ಸಂಗ್ರಹ ಚಿತ್ರ)

Bizarre Robberies|ಕಿಟ್‌ಕ್ಯಾಟ್ ಚಾಕೊಲೇಟ್‌ನಿಂದ ಹಿಡಿದು ಬಿಹಾರದ ಕೆರೆಯವರೆಗೆ ವಿಶ್ವದ ವಿಲಕ್ಷಣ ಕಳ್ಳತನಗಳ ಬಗ್ಗೆ ನಿಮಗೆ ಗೊತ್ತೇ?

ಇಟಲಿಯಲ್ಲಿ 12 ಟನ್ ಕಿಟ್‌ಕ್ಯಾಟ್ ಹೈಜಾಕ್‌ನಿಂದ ಹಿಡಿದು ಬಿಹಾರದಲ್ಲಿ ಇಡೀ ಕೆರೆಯನ್ನೇ ಕದ್ದ ಭೂ ಮಾಫಿಯಾದವರೆಗೆ, ಓದಿ ಬೆಚ್ಚಿಬೀಳಿಸುವ ದರೋಡೆ ಪ್ರಕರಣಗಳ ಸಂಪೂರ್ಣ ಮಾಹಿತಿ ಇಲ್ಲಿದೆ.


Click the Play button to hear this message in audio format

ಸಾಮಾನ್ಯವಾಗಿ ಕಳ್ಳರು ಹಣ, ಚಿನ್ನ ಅಥವಾ ಬೆಲೆಬಾಳುವ ವಸ್ತುಗಳನ್ನು ಕಳ್ಳತನ ಮಾಡುವುದನ್ನು ನಾವು ಕೇಳಿದ್ದೇವೆ. ಆದರೆ ಇತ್ತೀಚಿನ ದಿನಗಳಲ್ಲಿ ಕಳ್ಳರು ಚಾಕೊಲೇಟ್, ಕೀಟಗಳು ಮತ್ತು ಕೊನೆಗೆ ಕೆರೆಯನ್ನೇ ಕಳ್ಳತನ ಮಾಡುತ್ತಿರುವ ವಿಲಕ್ಷಣ ಘಟನೆಗಳು ವರದಿಯಾಗುತ್ತಿವೆ.

ಇಟಲಿಯಲ್ಲಿ 12 ಟನ್ ಕಿಟ್‌ಕ್ಯಾಟ್ ಚಾಕೊಲೇಟ್ ನಾಪತ್ತೆ!

ಇತ್ತೀಚೆಗೆ ಇಟಲಿಯಲ್ಲಿ ಅತ್ಯಂತ ವಿಲಕ್ಷಣ ದರೋಡೆಯೊಂದು ನಡೆದಿದೆ. ಈಸ್ಟರ್ ಹಬ್ಬಕ್ಕೆ ಕೆಲವೇ ದಿನಗಳ ಮೊದಲು, ಕಳ್ಳರು ಬರೋಬ್ಬರಿ 12 ಟನ್ ಕಿಟ್‌ಕ್ಯಾಟ್ (KitKat) ಚಾಕೊಲೇಟ್ ತುಂಬಿದ್ದ ಟ್ರಕ್ ಅನ್ನು ಹೈಜಾಕ್ ಮಾಡಿದ್ದಾರೆ. ನೆಸ್ಲೆ (Nestlé) ಕಂಪನಿಗೆ ಸೇರಿದ ಈ ಚಾಕೊಲೇಟ್‌ಗಳು ಇಟಲಿಯಿಂದ ಪೋಲೆಂಡ್‌ಗೆ ಸಾಗಣೆಯಾಗುತ್ತಿದ್ದವು.

ವಿಶೇಷವೆಂದರೆ, ಈ ಟ್ರಕ್‌ನಲ್ಲಿ ಕಿಟ್‌ಕ್ಯಾಟ್‌ನ ಹೊಸ 'ಫಾರ್ಮುಲಾ ಒನ್' (F1) ಥೀಮ್‌ನ ಚಾಕೊಲೇಟ್‌ಗಳಿದ್ದವು. ರೇಸಿಂಗ್ ಕಾರ್ ಆಕಾರದಲ್ಲಿದ್ದ ಸುಮಾರು 4.14 ಲಕ್ಷ ಚಾಕೊಲೇಟ್ ಯುನಿಟ್‌ಗಳು ಈಗ ಕಳ್ಳರ ಪಾಲಾಗಿವೆ. ಈ ಬಗ್ಗೆ ವ್ಯಂಗ್ಯವಾಗಿ ಪ್ರತಿಕ್ರಿಯಿಸಿರುವ ನೆಸ್ಲೆ ಕಂಪನಿ, "ನಮ್ಮ ಬ್ರ್ಯಾಂಡ್‌ನ ಸ್ಲೋಗನ್ ಆದ 'ಟೇಕ್ ಎ ಬ್ರೇಕ್' (Take a Break) ಎಂಬುದನ್ನು ಕಳ್ಳರು ತುಂಬಾ ಗಂಭೀರವಾಗಿ ತೆಗೆದುಕೊಂಡಂತಿದೆ" ಎಂದು ಹೇಳಿದೆ. ಇಂತಹ ಕೆಲವು ಕುತೂಹಲಕಾರಿ ಮತ್ತು ವಿಲಕ್ಷಣ ಕಳ್ಳತನದ ಪ್ರಕರಣಗಳು ಇಲ್ಲಿವೆ:

ನ್ಯೂಟೆಲ್ಲಾ ಮತ್ತು ಕಿಂಡರ್ ಜಾಯ್ ಕಳ್ಳತನ

ಚಾಕೊಲೇಟ್ ಪ್ರೇಮಿ ಕಳ್ಳರು ಕೇವಲ ಕಿಟ್‌ಕ್ಯಾಟ್‌ಗೆ ಸೀಮಿತವಾಗಿಲ್ಲ. 2017ರಲ್ಲಿ ಜರ್ಮನಿಯಲ್ಲಿ 20 ಟನ್ ತೂಕದ ನ್ಯೂಟೆಲ್ಲಾ (Nutella) ಮತ್ತು ಕಿಂಡರ್ ಉತ್ಪನ್ನಗಳಿದ್ದ ಟ್ರಕ್ ಅನ್ನು ಕದಿಯಲಾಗಿತ್ತು. ಇದರ ಮೌಲ್ಯ ಸುಮಾರು 80,000 ಯುಎಸ್ ಡಾಲರ್ ಆಗಿತ್ತು.

ಇತಿಹಾಸ ಪ್ರಸಿದ್ಧ 'ಬೇಕರ್ ಸ್ಟ್ರೀಟ್' ದರೋಡೆ

1971ರಲ್ಲಿ ಲಂಡನ್‌ನ ಬೇಕರ್ ಸ್ಟ್ರೀಟ್‌ನಲ್ಲಿ ನಡೆದ ಬ್ಯಾಂಕ್ ದರೋಡೆ ಇಂದಿಗೂ ರಹಸ್ಯವಾಗಿ ಉಳಿದಿದೆ. ಕಳ್ಳರು ಪಕ್ಕದ ಅಂಗಡಿಯಿಂದ ಬ್ಯಾಂಕ್ ಲಾಕರ್ ರೂಮ್‌ವರೆಗೆ ಸುರಂಗ ಕೊರೆದು ಲಕ್ಷಾಂತರ ಮೌಲ್ಯದ ವಸ್ತುಗಳನ್ನು ದೋಚಿದ್ದರು. ಬ್ರಿಟಿಷ್ ರಾಜಕುಮಾರಿ ಮಾರ್ಗರೇಟ್ ಅವರ ಕೆಲವು ವಿವಾದಾತ್ಮಕ ಫೋಟೋಗಳನ್ನು ಮರಳಿ ಪಡೆಯಲು ಬ್ರಿಟಿಷ್ ಗುಪ್ತಚರ ಸಂಸ್ಥೆಯೇ ಈ ಕಳ್ಳರನ್ನು ನೇಮಿಸಿತ್ತು ಎಂಬ ವದಂತಿ ಇಂದಿಗೂ ಚಾಲ್ತಿಯಲ್ಲಿದೆ.

7,000 ಕೀಟಗಳ ಅಪಹರಣ!

2018ರಲ್ಲಿ ಫಿಲಡೆಲ್ಫಿಯಾದ ಇನ್ಸೆಕ್ಟೇರಿಯಂ ಮತ್ತು ಬಟರ್‌ಫ್ಲೈ ಪೆವಿಲಿಯನ್‌ನಿಂದ ಕಳ್ಳರು ಸುಮಾರು 7,000 ಜೀವಂತ ಕೀಟಗಳನ್ನು ಕದ್ದಿದ್ದರು. ಇದರಲ್ಲಿ ಜೇಡಗಳು (Tarantulas), ಜಿರಳೆಗಳು ಮತ್ತು ಹಲ್ಲಿಗಳು ಸೇರಿದ್ದವು. ಇವುಗಳನ್ನು ಅಕ್ರಮ ಪ್ರಾಣಿ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಕದಿಯಲಾಗಿದೆ ಎಂದು ಪೊಲೀಸರು ಶಂಕಿಸಿದ್ದರು.

ಬಿನ್ನಿ ಬೇಬೀಸ್ (Beanie Babies) ಕ್ರೇಜ್

90ರ ದಶಕದಲ್ಲಿ 'ಬಿನ್ನಿ ಬೇಬೀಸ್' ಎಂಬ ಬಣ್ಣಬಣ್ಣದ ಆಟಿಕೆಗಳಿಗೆ ಭಾರಿ ಬೇಡಿಕೆಯಿತ್ತು. ಇವುಗಳನ್ನು ಮಾರಾಟ ಮಾಡಿ ಸಾಲ ತೀರಿಸಬಹುದು ಎಂದು ನಂಬಿದ್ದ ಜನರು ಇವುಗಳ ಕಳ್ಳತನಕ್ಕೆ ಇಳಿಯುತ್ತಿದ್ದರು. ಅಮೆರಿಕದ ಇಲಿನಾಯ್ಸ್‌ನಲ್ಲಿ 77 ವರ್ಷದ ವ್ಯಕ್ತಿಯೊಬ್ಬರ ಬಳಿ ಸುಮಾರು 3,00,000 ಡಾಲರ್ ಮೌಲ್ಯದ 1,200ಕ್ಕೂ ಹೆಚ್ಚು ಕದ್ದ ಆಟಿಕೆಗಳು ಪತ್ತೆಯಾಗಿದ್ದವು.

ಪ್ಯಾಂಟ್ ಜೇಬಿನಲ್ಲಿ ಆಮೆಗಳ ಸ್ಮಗ್ಲಿಂಗ್

ಚೀನಾದ ವಿಮಾನ ನಿಲ್ದಾಣವೊಂದರಲ್ಲಿ ವ್ಯಕ್ತಿಯೊಬ್ಬ ತನ್ನ ಪ್ಯಾಂಟ್ ಒಳಗೆ ವಿಶೇಷವಾಗಿ ವಿನ್ಯಾಸಗೊಳಿಸಿದ ಜೇಬಿನಲ್ಲಿ ಡಜನ್ಗಟ್ಟಲೆ ಆಮೆಗಳನ್ನು ಇಟ್ಟುಕೊಂಡು ಸಾಗಿಸುವಾಗ ಸಿಕ್ಕಿಬಿದ್ದಿದ್ದ. ಅಕ್ರಮ ಸಾಕುಪ್ರಾಣಿ ಮಾರುಕಟ್ಟೆಯಲ್ಲಿ ಇವುಗಳಿಗೆ ಭಾರಿ ಬೆಲೆ ಇರುವುದರಿಂದ ಇಂತಹ ಸಾಹಸಕ್ಕೆ ಕೈಹಾಕಿದ್ದ.

ಬಿಹಾರದಲ್ಲಿ ರಾತ್ರೋರಾತ್ರಿ ಮಾಯವಾದ ಕೆರೆ!

ನಂಬಲು ಅಸಾಧ್ಯವಾದರೂ ಇದು ನಿಜ. ಬಿಹಾರದ ದರ್ಬಂಗಾ ಜಿಲ್ಲೆಯಲ್ಲಿ ಭೂ ಮಾಫಿಯಾದವರು ಇಡೀ ಕೆರೆಯನ್ನೇ ಕಳ್ಳತನ ಮಾಡಿದ್ದರು! ರಾತ್ರೋರಾತ್ರಿ ಕೆರೆಯನ್ನು ಮಣ್ಣಿನಿಂದ ಮುಚ್ಚಿ, ಅದರ ಮೇಲೆ ಸಣ್ಣ ಗುಡಿಸಲನ್ನು ನಿರ್ಮಿಸಿ ಕೆರೆಯೇ ಇಲ್ಲದಂತೆ ಮಾಡಿದ್ದರು. ಜಮೀನಿನ ಬೆಲೆ ಏರಿಕೆಯಾಗಿದ್ದರಿಂದ ಈ ವಿಲಕ್ಷಣ ಕಳ್ಳತನ ನಡೆದಿತ್ತು.

Read More
Next Story