ನಿಮ್ಮ ಹೆಂಡತಿಯರ ಸೀರೆಗಳನ್ನು ಸುಟ್ಟುಬಿಡಿ: ಶೇಖ್‌ ಹಸೀನಾ
x

ನಿಮ್ಮ ಹೆಂಡತಿಯರ ಸೀರೆಗಳನ್ನು ಸುಟ್ಟುಬಿಡಿ: ಶೇಖ್‌ ಹಸೀನಾ

ಭಾರತದ ಉತ್ಪನ್ನಗಳ ಬಹಿಷ್ಕಾರ ಕರೆಗೆ ಬಾಂಗ್ಲಾ ಪ್ರಧಾನಿ ಪ್ರತಿಕ್ರಿಯೆ


ʻಭಾರತೀಯ ಉತ್ಪನ್ನಗಳನ್ನು ಬಹಿಷ್ಕರಿಸಿʼ ಅಭಿಯಾನವನ್ನು ಬೆಂಬಲಿಸುತ್ತಿರುವ ವಿರೋಧ ಪಕ್ಷದ ನಾಯಕರು, ತಮ್ಮ ಪತ್ನಿಯರು ಎಷ್ಟು ಭಾರತೀಯ ಸೀರೆಗಳನ್ನು ಹೊಂದಿದ್ದಾರೆ ಎಂಬುದನ್ನು ಘೋಷಿಸಬೇಕು ಎಂದು ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಒತ್ತಾಯಿಸಿ ದ್ದಾರೆ.

ಆಡಳಿತಾರೂಢ ಅವಾಮಿ ಲೀಗ್‌ನ ಸಭೆಯಲ್ಲಿ ಮಾತನಾಡಿ, ಭಾರತೀಯ ಉತ್ಪನ್ನಗಳನ್ನು ಬಹಿಷ್ಕರಿಸಲು ಹೇಳುತ್ತಿರುವ ಬಾಂಗ್ಲಾದೇಶ ನ್ಯಾಶನಲಿಸ್ಟ್ ಪಾರ್ಟಿ (ಬಿಎನ್‌ಪಿ) ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು. ʻನನ್ನ ಪ್ರಶ್ನೆ ಏನೆಂದರೆ, ಅವರ ಪತ್ನಿಯರು ಎಷ್ಟು ಭಾರತೀಯ ಸೀರೆಗಳನ್ನು ಹೊಂದಿದ್ದಾರೆ? ಮತ್ತು ಅವರು ತಮ್ಮ ಹೆಂಡತಿಯರಿಂದ ಸೀರೆಗಳನ್ನು ತೆಗೆದುಕೊಂಡು ಬೆಂಕಿ ಹಚ್ಚುತ್ತಿಲ್ಲ ಏಕೆ?ʼ ಎಂದು ಹಸೀನಾ ಹೇಳಿದರು.

ಬಿಎನ್‌ಪಿ ಅಧಿಕಾರದಲ್ಲಿದ್ದಾಗ ಮಂತ್ರಿಗಳು ಮತ್ತು ಅವರ ಪತ್ನಿಯರು ಭಾರತ ಪ್ರವಾಸದ ಸಮಯದಲ್ಲಿ ಸೀರೆಗಳನ್ನು ಖರೀದಿಸಿ,ಆನಂತರ ಬಾಂಗ್ಲಾದಲ್ಲಿ ಮಾರಾಟ ಮಾಡುತ್ತಿದ್ದರು ಎಂದು ನೆನಪಿಸಿಕೊಂಡರು. ಅಷ್ಟಕ್ಕೆ ನಿಲ್ಲಿಸದೆ, ಬಾಂಗ್ಲಾದೇಶದ ಅಡುಗೆಮನೆಗಳಲ್ಲಿ ಭಾರತೀಯ ಮಸಾಲೆಗಳ ಪಾತ್ರವನ್ನು ಚರ್ಚಿಸಿದರು.ʻಗರಂ ಮಸಾಲಾ, ಬೆಳ್ಳುಳ್ಳಿ, ಈರುಳ್ಳಿ, ಶುಂಠಿ - ಭಾರತದಿಂದ ಬರುವ ಯಾವುದೇ ಮಸಾಲೆ ಪದಾರ್ಥ ಬಿಎನ್‌ಪಿ ನಾಯಕರ ಮನೆಗಳಲ್ಲಿ ಕಾಣಬಾರದುʼ ಎಂದು ಹೇಳಿದರು.

'ಇಂಡಿಯಾ ಔಟ್' ಅಭಿಯಾನ: ಶೇಖ್ ಹಸೀನಾ ಸತತ ನಾಲ್ಕನೇ ಅವಧಿಗೆ ಆಯ್ಕೆಯಾದ ನಂತರ ಬಾಂಗ್ಲಾದೇಶದಲ್ಲಿ ʻಇಂಡಿಯಾ ಔಟ್ʼ ಅಭಿಯಾನವನ್ನು ಕೆಲವು ಕಾರ್ಯ ಕರ್ತರು ಪ್ರಾರಂಭಿಸಿದರು. ಯಥಾಸ್ಥಿತಿಯನ್ನು ಬಯಸಿದ್ದರಿಂದ, ಹಸೀನಾ ಅವರ ಮರುಚುನಾವಣೆಯನ್ನು ಭಾರತ ಬೆಂಬಲಿಸಿತು ಎಂದು ಅವರು ಹೇಳುತ್ತಾರೆ. ಬಿಎನ್‌ಪಿ ಮತ್ತು ಇತರ ವಿರೋಧ ಪಕ್ಷಗಳು ಚುನಾವಣೆಯನ್ನು ಬಹಿಷ್ಕರಿಸಿದವು. ಬೇರೆ ದೇಶಗಳಲ್ಲಿ ನೆಲೆಸಿರುವ ಬಾಂಗ್ಲಾ ದೇಶಿಗರು ಈ ಅಭಿಯಾನದ ಹಿಂದೆ ಇದ್ದಾರೆ ಎಂದು ನಂಬಲಾಗಿದೆ.

ಬಿಎನ್ಪಿ ಜಂಟಿ ಕಾರ್ಯದರ್ಶಿ ಜನರಲ್ ರುಹುಲ್ ಕಬೀರ್ ರಿಜ್ವಿ ರಸ್ತೆ ಮೇಲೆ ಕಾಶ್ಮೀರಿ ಶಾಲು ಎಸೆಯುವವರೆಗೆ ಪಕ್ಷ ಈ ಅಭಿಯಾನದಲ್ಲಿ ಪಾಲ್ಗೊಂಡಿರಲಿಲ್ಲ. ಶೇಖ್ ಹಸೀನಾ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಬಿಎನ್‌ಪಿ ನಾಯಕರೊಬ್ಬರು, ಅವಾಮಿ ಲೀಗ್ ಮತ್ತು ಶೇಖ್ ಹಸೀನಾ ಭಾರತದ ಅತಿದೊಡ್ಡ ಉತ್ಪನ್ನಗಳಾಗಿವೆ. ಆ ಪಕ್ಷ ಮತ್ತು ಅದರ ನಾಯಕಿಯನ್ನು ಬಹಿಷ್ಕರಿಸಬೇಕು ಎಂದು ಹೇಳಿದ್ದಾರೆ.


Read More
Next Story