Symbolic protest on May 20 against online drug sales
x

ಎಐ ಆಧಾರಿತ ಚಿತ್ರ

ಆನ್‌ಲೈನ್ ಔಷಧ ಮಾರಾಟದ ವಿರುದ್ಧ ಮೇ 20ಕ್ಕೆ ಸಾಂಕೇತಿಕ ಪ್ರತಿಭಟನೆ

ವೈದ್ಯರ ಅಧಿಕೃತ ಚೀಟಿ ಇಲ್ಲದೆಯೂ ಆನ್‌ಲೈನ್‌ನಲ್ಲಿ ಕೆಲವು ಮಾದಕ ದ್ರವ್ಯದ ಅಂಶವಿರುವ ಅಥವಾ ಕಟ್ಟುನಿಟ್ಟಿನ ನಿಯಮವಿರುವ ಔಷಧಿಗಳು ಸುಲಭವಾಗಿ ಸಿಗುತ್ತಿರುವುದು ಯುವ ಪೀಳಿಗೆಯ ದಾರಿ ತಪ್ಪಿಸುತ್ತಿದೆ ಎಂದು ಆರೋಪಿಸಿದೆ.


Click the Play button to hear this message in audio format

ದೇಶಾದ್ಯಂತ ಇ-ಫಾರ್ಮಸಿ ಹಾಗೂ ಕ್ವಿಕ್ ಕಾಮರ್ಸ್ ಆ್ಯಪ್‌ಗಳ ಅನಧಿಕೃತ ಔಷಧ ಮಾರಾಟ ಮತ್ತು ಅಸಹಜ ರಿಯಾಯಿತಿಗಳ ವಿರುದ್ಧ ಮೇ 20 ರಂದು ಮೆಡಿಕಲ್‌ ಶಾಪ್‌ಗಳು ರಾಷ್ಟ್ರವ್ಯಾಪಿ ಪ್ರತಿಭಟನೆಗೆ ಕರೆ ನೀಡಲಾಗಿದೆ. ಆದರೆ, ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಕರ್ನಾಟಕದಲ್ಲಿ ಔಷಧ ಅಂಗಡಿಗಳನ್ನು ಮುಚ್ಚದೆ, ಕಪ್ಪುಪಟ್ಟಿ ಧರಿಸುವ ಮೂಲಕ ನೈತಿಕ ಬೆಂಬಲ ನೀಡಲು ನಿರ್ಧರಿಸಲಾಗಿದೆ ಎಂದು 'ಕರ್ನಾಟಕ ಫಾರ್ಮಾ ರಿಟೈಲರ್ಸ್ ಆ್ಯಂಡ್ ಡಿಸ್ಟ್ರಿಬ್ಯೂಟರ್ಸ್ ಆರ್ಗನೈಸೇಷನ್' ತಿಳಿಸಿದೆ.

ಕಪ್ಪುಪಟ್ಟಿ ಕಟ್ಟಿ ಮೆಡಿಕಲ್ ಶಾಪ್ಸ್

ರಾಷ್ಟ್ರ ಮಟ್ಟದ ಕರೆಗೆ ಬೆಂಬಲ ನೀಡುತ್ತಿದ್ದರೂ ರಾಜ್ಯದ ರೋಗಿಗಳಿಗೆ ಹಾಗೂ ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಎಚ್ಚರಿಕೆ ವಹಿಸಲಾಗಿದೆ. "ನಾವು ಔಷಧದಂತಹ ಜೀವರಕ್ಷಕ ವಲಯದಲ್ಲಿದ್ದೇವೆ. ಹೀಗಾಗಿ ಅಂಗಡಿಗಳನ್ನು ಮುಚ್ಚಿ ಸಾರ್ವಜನಿಕರನ್ನು ಸಂಕಷ್ಟಕ್ಕೆ ದೂಡುವುದಿಲ್ಲ. ಮೇ 20ರಂದು ರಾಜ್ಯಾದ್ಯಂತ ಎಲ್ಲಾ ಫಾರ್ಮಸಿಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ. ಆದರೆ, ಆನ್‌ಲೈನ್ ದಂಧೆಯ ವಿರುದ್ಧ ನಮ್ಮ ಪ್ರತಿಭಟನೆಯನ್ನು ದಾಖಲಿಸಲು ಎಲ್ಲಾ ಔಷಧ ವ್ಯಾಪಾರಿಗಳು ಮತ್ತು ಸಿಬ್ಬಂದಿ ಕಪ್ಪುಪಟ್ಟಿ ಧರಿಸಿ ಸೇವೆ ಸಲ್ಲಿಸಲಿದ್ದಾರೆ" ಎಂದು ಸಂಘದ ಸಿ. ಜಯರಾಮ್ ಹೇಳಿದ್ದಾರೆ.

ಮೆಡಿಕಲ್‌ ಶಾಪ್‌ಗಳಿಗೆ ಆತಂಕವೇನು?

ನಿಯಮಾವಳಿಗಳ ಪ್ರಕಾರ ಅರ್ಹ ಫಾರ್ಮಾಸಿಸ್ಟ್‌ಗಳ ಸಮ್ಮುಖದಲ್ಲೇ ವೈದ್ಯರ ಪ್ರಿಸ್ಕ್ರಿಪ್ಷನ್ ನೋಡಿ ಔಷಧ ನೀಡಬೇಕು. ಆದರೆ ಆನ್‌ಲೈನ್ ಆ್ಯಪ್‌ಗಳಲ್ಲಿ 10 ರಿಂದ 15 ನಿಮಿಷಗಳಲ್ಲಿ ಔಷಧ ಡೆಲಿವರಿ ಮಾಡುವ ಭರದಲ್ಲಿ ಈ ನಿಯಮಗಳು ಗಾಳಿಗೆ ತೂರಲ್ಪಡುತ್ತಿವೆ. ಇದು ನಕಲಿ ಅಥವಾ ಅವಧಿ ಮುಗಿದ ಔಷಧಿಗಳ ಪೂರೈಕೆಗೆ ದಾರಿ ಮಾಡಿಕೊಡಬಹುದು ಎಂದು ಎಚ್ಚರಿಸಿದ್ಧಾರೆ.

ಅಸಹಜ ರಿಯಾಯಿತಿಗಳ ಮಾಯಾಜಾಲ

ದೊಡ್ಡ ಕಾರ್ಪೊರೇಟ್ ಕಂಪನಿಗಳು ಇ-ಫಾರ್ಮಸಿಗಳ ಮೂಲಕ ಶೇ. 20 ರಿಂದ ಶೇ. 30 ವರೆಗೆ ಅಸಹಜ ಹಾಗೂ ಅತಿಯಾದ ರಿಯಾಯಿತಿ ನೀಡುತ್ತಿವೆ. ಇದು ಗ್ರಾಹಕರನ್ನು ಆಕರ್ಷಿಸುತ್ತಿದ್ದರೂ, ವರ್ಷಾನುಗಟ್ಟಲೆ ನಂಬಿಕಸ್ಥ ಸೇವೆ ನೀಡುತ್ತಾ ಬಂದಿರುವ ಸಣ್ಣ ಮತ್ತು ಮಧ್ಯಮ ಗಾತ್ರದ ಸಾಂಪ್ರದಾಯಿಕ ಮೆಡಿಕಲ್ ಶಾಪ್‌ಗಳ ಉದ್ಯೋಗಕ್ಕೆ ಕಂಟಕ ತಂದಿದೆ. ವೈದ್ಯರ ಅಧಿಕೃತ ಚೀಟಿ ಇಲ್ಲದೆಯೂ ಆನ್‌ಲೈನ್‌ನಲ್ಲಿ ಕೆಲವು ಮಾದಕ ದ್ರವ್ಯದ ಅಂಶವಿರುವ ಅಥವಾ ಕಟ್ಟುನಿಟ್ಟಿನ ನಿಯಮವಿರುವ ಔಷಧಿಗಳು ಸುಲಭವಾಗಿ ಸಿಗುತ್ತಿರುವುದು ಯುವ ಪೀಳಿಗೆಯ ದಾರಿ ತಪ್ಪಿಸುತ್ತಿದೆ ಮತ್ತು ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಮೇಲೆ ತೀವ್ರ ದುಷ್ಪರಿಣಾಮ ಬೀರುತ್ತಿದೆ ಎಂದು ಆರೋಪಿಸಿದ್ದಾರೆ.

ಸಂಘಟನೆಯ ಪ್ರಮುಖ ಬೇಡಿಕೆ ಏನು ?

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಕ್ಷಣವೇ ಮಧ್ಯಪ್ರವೇಶಿಸಿ ಕ್ವಿಕ್ ಕಾಮರ್ಸ್ ಆ್ಯಪ್‌ಗಳ ಔಷಧ ಡೆಲಿವರಿ ದಂಧೆಗೆ ಕಡಿವಾಣ ಹಾಕಬೇಕು. ಔಷಧ ನಿಯಂತ್ರಣ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿ ಸಾಂಪ್ರದಾಯಿಕ ಫಾರ್ಮಸಿ ಕ್ಷೇತ್ರವನ್ನು ಹಾಗೂ ಸಾರ್ವಜನಿಕರ ಜೀವವನ್ನು ರಕ್ಷಿಸಬೇಕು" ಎಂದು ಫಾರ್ಮಾ ಸಂಘಟನೆಗಳು ಒತ್ತಾಯಿಸಿವೆ. ಮೇ 20ರ ಈ ಸಾಂಕೇತಿಕ ಪ್ರತಿಭಟನೆಯ ನಂತರವೂ ಸರ್ಕಾರಗಳು ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟವನ್ನು ತೀವ್ರಗೊಳಿಸುವುದಾಗಿ ಆರ್ಗನೈಸೇಷನ್ ಎಚ್ಚರಿಸಿದೆ.

Read More
Next Story