
ಆರೋಗ್ಯ ಸೇವೆ ಅಸ್ತವ್ಯಸ್ತ? ವೈದ್ಯರ ಮುಷ್ಕರಕ್ಕೆ ಸಾವಿರಾರು ಎನ್‌ಎಚ್‌ಎಂ ನೌಕರರ ಸಾಥ್
ಎಲ್ಲಾ ಗುತ್ತಿಗೆ ಮತ್ತು ಹೊರಗುತ್ತಿಗೆ ಸಿಬ್ಬಂದಿಗಳನ್ನು ಖಾಯಂ ಮಾಡುವ ಬಗ್ಗೆ ಕೂಡಲೆ ತೀರ್ಮಾನಿಸಿ ಪ್ರಕ್ರಿಯೆ ಆರಂಭಿಸಬೇಕು ಎಂದು ಎನ್‌ಎಚ್‌ಎಂ ನೌಕರರು ಆಗ್ರಹಿಸಿದ್ದಾರೆ.
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರಿ ವೈದ್ಯರು ಹಾಗೂ ನೌಕರರು ಮಾರ್ಚ್ ಮಾ.11ರಿಂದ ಒಪಿಡಿ ಬಂದ್ ಮಾಡಿ ಪ್ರತಿಭಟನೆ ನಡೆಸಲಾಗುವುದು ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿರುವ ಬೆನ್ನಲ್ಲೇ ಎನ್‌ಎಚ್‌ಎಮ್ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದಾಗಿ ಪ್ರಕಟಿಸಿದ್ದಾರೆ. ಆ ಮೂಲಕ ರಾಜ್ಯದ ಆರೋಗ್ಯ ಸೇವೆಯಲ್ಲಿ ಭಾರೀ ವ್ಯತ್ಯಯವಾಗಲಿದೆ.
ಈ ಕುರಿತು ಬುಧವಾರ (ಫೆ.25) ಕರ್ನಾಟಕ ರಾಜ್ಯ ಆರೋಗ್ಯ ಇಲಾಖೆ ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರ ಸಂಘ ಸರ್ಕಾರಕ್ಕೆ ಪತ್ರ ಬರೆದಿದ್ದು, ಮಾ.11ರಿಂದ 15ರವರೆಗೆ ಸರ್ಕಾರಿ ವೈದ್ಯರು ಕಪ್ಪಪಟ್ಟಿ ಧರಿಸಿ ಹೊರರೋಗಿ ಸೇವೆ ನೀಡದೇ ಕೇವಲ ತುರ್ತು ಸೇವೆ ನೀಡಲು ನಿರ್ಧರಿಸಿದ್ದಾರೆ. ಬೇಡಿಕೆ ಈಡೇರದಿದ್ದರೆ ಮಾ.16ರಿದಮ ಅನಿರ್ದಿಷ್ಟಾವಧಿ ಮುಷ್ಕರ ಮಾಡಲು ತೀರ್ಮಾನಿಸಿದ್ದು, ಎನ್‌ಎಚ್‌ಎಂ ನೌಕರರೂ ಪ್ರತಿಭಟನೆಯಲ್ಲಿ ಭಾಗವಹಿಸುವುದಾಗಿ ತಿಳಿಸಿದ್ದಾರೆ.
ಎನ್‌ಎಚ್‌ಎಂ ನೌಕರರ ಬೇಡಿಕೆಗಳೇನು ?
ಚುನಾವಣೆಯ ಪೂರ್ವದಲ್ಲಿ ಕಾಂಗ್ರೆಸ್ ಪಕ್ಷ ಪ್ರಣಾಳಿಕೆಯಲ್ಲಿ ಪ್ರಕಟಿಸಿದಂತೆ ಎಲ್ಲಾ ಗುತ್ತಿಗೆ ಮತ್ತು ಹೊರಗುತ್ತಿಗೆ ಸಿಬ್ಬಂದಿಗಳನ್ನು ಖಾಯಂ ಮಾಡುವ ಬಗ್ಗೆ ಕೂಡಲೆ ತೀರ್ಮಾನಿಸಿ ಪ್ರಕ್ರಿಯೆ ಆರಂಭಿಸಬೇಕು. ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿರುವ ಯಾವುದೇ ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರನ್ನು ಮರು ನೇಮಕಾತಿ ಸಹಿತ ಯಾವುದೇ ಅನ್ಯ ಕಾರಣಗಳಿಂದ ಕೆಲಸದಿಂದ ವಜಾ ಮಾಡುವ ಪ್ರಸ್ತಾವನೆಗಳನ್ನು ಕೈಬಿಡಬೇಕು ಹಾಗೂ ಈಗಾಗಲೇ ವಜಾಗೊಳಿಸಿರುವ ಸಿಬ್ಬಂದಿಗಳನ್ನು ಪುನಃ ಕರ್ತವ್ಯಕ್ಕೆ ಸೇರಿಸಿಕೊಳ್ಳುವ ಆದೇಶ ಹೊರಡಿಸಬೇಕು ಎಂದಿದ್ದಾರೆ.
ಬಾಕಿ ಪಾವತಿಗೆ ಆಗ್ರಹ
ಮುಂದುವರಿದು, ಈಗಾಗಲೇ ನಿವೃತ್ತ ಐಎಎಸ್ ಅಧಿಕಾರಿ ಪಿ.ಎನ್. ಶ್ರೀನಿವಾಸಾಚಾರಿ ವರದಿಯಂತೆ ನೀಡಿರುವ ಶೇ. 15 ವೇತನ ಹೆಚ್ಚಳವನ್ನು ಎಲ್ಲಾ ಗುತ್ತಿಗೆ ಮತ್ತು ಹೊರಗುತ್ತಿಗೆ ಸಿಬ್ಬಂದಿಗಳಿಗೆ ಅನ್ವಯ ಆಗುವಂತೆ ಬಾಕಿ ವೇತನ ಪಾವತಿಸುವುದು. ಸಮಾನ ಕೆಲಸಕ್ಕೆ ಸಮಾನ ವೇತನ ಮಂಜೂರಾತಿ ಮಾಡುವುದು. ಮೂರು ತಿಂಗಳಿಗೆ ಒಮ್ಮೆ ವೇತನ ಪಾವತಿ ಆಗುತ್ತಿದ್ದು ಇದರಿಂದ ಜೀವನ ನಡೆಸುವುದು ಕಷ್ಟಕರವಾಗಿದ್ದು ಇನ್ನೂ ಮುಂದೆ ಪ್ರತಿತಿಂಗಳು ವೇತನ ಪಾವತಿ ಆಗುವಂತೆ ಮಾಡುವುದು. 1972ರ ಕಾಯ್ದೆಯ ಪ್ರಕಾರ ಗ್ರಾಚ್ಯುಟಿ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದಾರೆ.
ಸಿಎಂ, ಸಚಿವರು ಸಭೆ ಕರೆಯಲಿ
"ನಾವು ಅತ್ಯಂತ ಕಡಿಮೆ ವೇತನ ಪಡೆಯುವ ನೌಕರರಾಗಿದ್ದು ಯಾವುದೇ ಸೌಲಭ್ಯಗಳಿಲ್ಲದೇ ನಮ್ಮ ನೌಕರರು ಆಕ್ರೋಶಗೊಂಡಿದ್ದಾರೆ. ನಮ್ಮನ್ನು ಬೃಹತ್ ಹೋರಾಟ ಮಾಡುವಂತೆ ವ್ಯವಸ್ಥೆಯೇ ಸಂದರ್ಭ ಸೃಷ್ಟಿಸುತ್ತಿದ್ದು,, ಸಂಘದ ಸರ್ವ ಸದಸ್ಯರು ಹೋರಾಟ ಮಾಡುವುದರ ಬಗ್ಗೆ ನಿರ್ಣಯ ಕೈಗೊಂಡಿದ್ದಾರೆ. ಈಗಾಗಲೇ ಸಾಕಷ್ಟು ಮನವಿ ಮಾಡಿದ್ದು ಇದನ್ನೇ ಹೋರಾಟದ ನೋಟೀಸ್ ಎಂದು ಪರಿಗಣಿಸಬೇಕು ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಧ್ಯಸ್ತಿಕೆವಹಿಸಿ ಸಭೆ ಕರೆದು ಬಗೆಹರಿಸದಿದ್ದಲ್ಲಿ ಕೈಗಾರಿಕಾ ವಿವಾದ ಕಾಯ್ದೆ 1947 ರ ಪ್ರಕಾರ ಪ್ರತಿಭಟನೆ ಮಾಡಲಾಗುವುದು," ಎಂದು ತಿಳಿಸಿದ್ದಾರೆ.

