
ಸಾಂದರ್ಭಿಕ ಚಿತ್ರ
ಬೇಡಿಕೆ ಈಡೇರಿಕೆಗೆ ಸರ್ಕಾರಿ ವೈದ್ಯರ ಪಟ್ಟು; ಮಾ.11 ರಿಂದ ರಾಜ್ಯಾದ್ಯಂತ ಪ್ರತಿಭಟನೆ ಎಚ್ಚರಿಕೆ
ಇಲಾಖೆಯ ಎಲ್ಲಾ ವೃಂದದ ಯಾವುದೇ ಅಧಿಕಾರಿ, ನೌಕರರಿಗೆ ಕಳೆದ 5 ವರ್ಷಗಳಿಂದ ಮುಂಬಡ್ತಿ ನೀಡಿರುವುದಿಲ್ಲ. ಕೂಡಲೇ ಮುಂಬಡ್ತಿ ನೀಡಬೇಕು ಎಂದು ಸರ್ಕಾರಿ ವೈದ್ಯರ ಸಂಘ ಆಗ್ರಹಿಸಿದೆ.
ವಿವಿಧ ಬೇಡಿಕೆಗಳ ಈಡೇರಿಕೆಗೆ ಪದೇ ಪದೇ ಒತ್ತಾಯಿಸಿದರೂ ಸ್ಪಂದಿಸದ ರಾಜ್ಯ ಸರ್ಕಾರದ ವಿರುದ್ಧ ಸರ್ಕಾರಿ ಆಸ್ಪತ್ರೆ ವೈದ್ಯರು ಹೋರಾಟ ತೀವ್ರಗೊಳಿಸಲು ನಿರ್ಧರಿಸಿದ್ದಾರೆ. ಬೇಡಿಕೆ ಈಡೇರಿಸದಿದ್ದರೆ ರಾಜ್ಯವ್ಯಾಪಿ ಪ್ರತಿಭಟನೆಗೆ ಕರೆ ನೀಡಲು ಸರ್ಕಾರಿ ವೈದ್ಯಾಧಿಕಾರಿಗಳ ಸಂಘ, ಕರ್ನಾಟಕ ರಾಜ್ಯ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖಾ ನೌಕರರ ಸಂಘ ಸರ್ಕಾರಕ್ಕೆ ಎಚ್ಚರಿಕೆ ನೀಡಿವೆ.
ಆಸ್ಪತ್ರೆಗೆ ನಿಗದಿತ ಸಮಯಕ್ಕೆ ಔಷಧಿಗಳ ಸರಬರಾಜು ಆಗುತ್ತಿಲ್ಲ. ಔಷಧಿಗಳ ಕೊರತೆಯ ಬಗ್ಗೆ ಹಲವು ಬಾರಿ ಹೇಳಿದರೂ ಸ್ಪಂದಿಸಿಲ್ಲ. ಖಾಸಗಿ ಮೆಡಿಕಲ್ ಶಾಪ್‌ಗಳಿಗೆ ಚೀಟಿ ಬರೆದುಕೊಡಬಾರದು ಎಂದು ಅಧಿಕಾರಿಗಳು ಹೇಳುತ್ತಾರೆ, ನಮ್ಮಲ್ಲಿ ಔಷಧ ಲಭ್ಯವಿಲ್ಲದ ಕಾರಣ ಅನಿವಾರ್ಯವಾಗಿ ಚೀಟಿ ಬರೆಕೊಡಬೇಕಾದ ಪರಿಸ್ಥಿತಿ ಬಂದಿದೆ. ಬೇಸಿಗೆ ಆರಂಭವಾಗಲಿದ್ದು, ವಾಂತಿ, ಬೇಧಿ ಪ್ರಕರಣಗಳು ಹೆಚ್ಚಲಿವೆ. ಅದಕ್ಕೆ ಅಗತ್ಯವಾದ ಬೇಕಾದ ಔಷಧಗಳ ದಾಸ್ತಾನು ಇಲ್ಲ, ಸರಿಯಾದ ಔಷಧ ನೀಡದಿದ್ದರೆ ರೋಗಿಗಳು ವೈದ್ಯರ ಮೇಲೆ ಹಲ್ಲೆ ಮಾಡುವ ಸಾಧ್ಯತೆಗಳು ಇವೆ. ಈಗಾಗಲೇ ಹಲವು ಕಡೆ ವೈದ್ಯರ ಮೇಲೆ ಹಲ್ಲೆ ಮಾಡಿರುವ ಉದಾಹರಣೆಗಳಿವೆ ಎಂದು ಸಂಘ ಆರೋಪಿಸಿದೆ.
ವೈದ್ಯಕೀಯ ಶಿಕ್ಷಣ ಇಲಾಖಾ ನೌಕರರ ಕೇಂದ್ರ ಸಂಘದ ರಾಜ್ಯಾಧ್ಯಕ್ಷ ಡಾ. ರವೀಂದ್ರನಾಥ್ ಎಂ.ಮೇಟಿ ಮಾತನಾಡಿ, "ಬೇಡಿಕೆಗಳನ್ನು ಈಡೇರಿಸುವಂತೆ ರಾಜ್ಯ ಸರ್ಕಾರಕ್ಕೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಆದ್ದರಿಂದ ಮೊದಲ ಹಂತದಲ್ಲಿ ಮಾ. 11 ರಿಂದ 15 ರವರೆಗೆ ರಾಜ್ಯದ ಎಲ್ಲಾ ಜಿಲ್ಲಾ ಆಸ್ಪತ್ರೆ, ತಾಲ್ಲೂಕು ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಎಲ್ಲಾ ವೃಂದದ ವೈದ್ಯರು, ಅಧಿಕಾರಿ, ನೌಕರರು ಕಪ್ಪು ಪಟ್ಟಿ ಧರಿಸಿ ಹೊರರೋಗಿಗಳ ಚಿಕಿತ್ಸೆಯನ್ನು ಸ್ಥಗಿತಗೊಳಿಸಿ, ತುರ್ತು ಸೇವೆಗಳನ್ನು ಮಾತ್ರ ನಿರ್ವಹಿಸುವ ಮೂಲಕ ಮುಷ್ಕರದಲ್ಲಿ ಪಾಲ್ಗೊಳ್ಳಲಿದ್ದೇವೆ" ಎಂದು ಮಾಹಿತಿ ನೀಡಿದರು.
ಎರಡನೇ ಹಂತದಲ್ಲಿ ಮಾ. 16 ರಿಂದ ಬೇಡಿಕೆ ಈಡೇರುವವರೆವಿಗೂ ರಾಜ್ಯದ ಆರೋಗ್ಯ ಇಲಾಖೆಯ ಎಲ್ಲಾ ವೈದ್ಯರು, ಅಧಿಕಾರಿ ಹಾಗೂ ನೌಕರರು ಕರ್ತವ್ಯಕ್ಕೆ ಅನಿರ್ಧಿಷ್ಟಾವಧಿವರೆಗೆ ಗೈರು ಹಾಜರಾಗುವ ಮೂಲಕ ಮುಷ್ಕರವನ್ನು ಕೈಗೊಳ್ಳುವುದು ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ವೈದ್ಯರು ಹಾಗೂ ನೌಕರರ ಸಂಘದ ಸಭೆಯಲ್ಲಿ ರಾಜ್ಯಾಧ್ಯಕ್ಷ ಡಾ. ರವೀಂದ್ರನಾಥ್ ಎಂ.ಮೇಟಿ ಮಾತನಾಡಿದರು.
ವೈದ್ಯರು, ನೌಕರರ ಬೇಡಿಕೆಗಳೇನು ?
* ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಗಳಿಗೆ ಕಾಲಕಾಲಕ್ಕೆ ಸಮರ್ಪಕವಾಗಿ ಇಲಾಖೆಯಿಂದ ಔಷಧಿಗಳನ್ನು ಸರಬರಾಜು ಮಾಡುವುದು.
* ವೃಂದ ಮತ್ತು ನೇಮಕಾತಿ ನಿಯಮಗಳನ್ನು ಪ್ರತಿ 3 ವರ್ಷಕ್ಕೊಮ್ಮೆ ತಿದ್ದುಪಡಿ ಮಾಡಲು ಸರ್ಕಾರಿ ಆದೇಶವಿದ್ದಾಗಲೂ ಉಲ್ಲಂಘಿಸಿ, 1973 ರಿಂದ ಇಲ್ಲಿಯವರೆಗೆ ಆರೋಗ್ಯ ಇಲಾಖೆಯ ವೃಂದ ಮತ್ತು ನೇಮಕಾತಿ ನಿಯಮಗಳನ್ನು ತಿದ್ದುಪಡಿ ಮಾಡಿರುವುದಿಲ್ಲ. ಈ ಬಗ್ಗೆ ಶೀಘ್ರ ತಿದ್ದುಪಡಿ ಮಾಡುವುದು.
* ಇಲಾಖೆಯ ಎಲ್ಲಾ ವೃಂದಗಳ ಜೇಷ್ಠತಾ ಪಟ್ಟಿಯನ್ನು ಕಾಲ ಕಾಲಕ್ಕೆ ಪ್ರಕಟಿಸುವುದು.
* ಇಲಾಖೆಯ ಎಲ್ಲಾ ವೃಂದದ ಯಾವುದೇ ಅಧಿಕಾರಿ, ನೌಕರರಿಗೆ ಕಳೆದ 5 ವರ್ಷಗಳಿಂದ ಮುಂಬಡ್ತಿಗಳನ್ನು ನೀಡಿರುವುದಿಲ್ಲ. ಕೂಡಲೇ ಮುಂಬಡ್ತಿಗಳನ್ನು ನೀಡುವುದು.
* ನಿಯಮಗಳಲ್ಲಿನ ಅವಕಾಶದಂತೆ ಸೇವಾನಿರತ ವೈದ್ಯರು, ಅಧಿಕಾರಿ, ನೌಕರರ ಉನ್ನತ ವ್ಯಾಸಂಗ ಸ್ನಾತಕೋತ್ತರ ವ್ಯಾಸಂಗಕ್ಕೆ ಅವಕಾಶ ನೀಡುವುದು.
* ಇಲಾಖೆಯ ವರ್ಗಾವಣೆ ಕಾಯಿದೆಯಲ್ಲಿನ ನ್ಯೂನತೆಗಳನ್ನು ಸರಿಪಡಿಸದೇ ಅವೈಜ್ಞಾನಿಕವಾಗಿ ಕೌನ್ಸಿಲಿಂಗ್ ವರ್ಗಾವಣೆ ಮಾಡುತ್ತಿರುವುದನ್ನು ಸರಿಪಡಿಸುವುದು.
* ವೈದ್ಯಕೀಯ ಶಿಕ್ಷಣ ಇಲಾಖೆಯ ಸ್ವಾಯತ್ತ ಸಂಸ್ಥೆಗಳಲ್ಲಿ ಹಾಗೂ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ, ಮಹಾನಗರ ಪಾಲಿಕೆ ಹಾಗೂ ನಗರ ಪಾಲಿಕೆಗಳಲ್ಲಿ ಮಂಜೂರಾಗಿರುವ ಆರೋಗ್ಯ ಇಲಾಖೆಯ ಎನ್ ಕೇಡರ್ ಹುದ್ದೆಗಳಿಗೆ ನೇಮಕಾತಿ, ಮುಂಬಡ್ತಿ ಮತ್ತು ವರ್ಗಾವಣೆಗಳಿಗೆ ಆರೋಗ್ಯ ಇಲಾಖೆಯ ವೈದ್ಯರು, ಅಧಿಕಾರಿ ಹಾಗೂ ನೌಕರರನ್ನೇ ನಿಯೋಜಿಸುವುದು.
* ಸಾರ್ವಜನಿಕರಿಗೆ ಉತ್ತಮ ಸೇವೆ ನೀಡುವ ದೃಷ್ಟಿಯಿಂದ ಇಲಾಖೆಯಲ್ಲಿ ಖಾಲಿ ಇರುವ ವೈದ್ಯರು, ಅರೆ ವೈದ್ಯಕೀಯ ಹಾಗೂ ಇತರೆ ವೃಂದದ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡುವುದು.
* ಗುತ್ತಿಗೆ ವೈದ್ಯರು, ನೌಕರರು ಹಾಗೂ ಎನ್‌ಹೆಚ್‌ಎಂ ಗುತ್ತಿಗೆ ನೌಕರರಿಗೆ ಸೇವಾ ಭದ್ರತೆ ಹಾಗೂ ಕಾಲ ಕಾಲಕ್ಕೆ ಸೂಕ್ತ ವೇತನ ಹೆಚ್ಚಳ ಮಾಡುವುದು.
* ಇಲಾಖೆಯಲ್ಲಿ ಕೇಂದ್ರ ಪುರಸ್ಕೃತ ಯೋಜನೆ ಅಡಿ ಕಾರ್ಯನಿರತ ಸುಮಾರು 6 ಸಾವಿರ ನೌಕರರಿಗೆ ಹಲವಾರು ವರ್ಷಗಳಿಂದ 4 ತಿಂಗಳಿಗೊಮ್ಮೆ ವೇತನ ಭತ್ಯೆಗಳನ್ನು ನೀಡುತ್ತಿದ್ದು, ಪ್ರತಿ ತಿಂಗಳ ಮೊದಲ ವಾರದಲ್ಲಿ ವೇತನ ಭತ್ಯೆಗಳನ್ನು ನೀಡುವುದು.
* ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯರು, ತಜ್ಞವೈದ್ಯರು ಇತರೆ ಸಿಬ್ಬಂದಿಯವರಿಗೆ ಸಿಜಿಹೆಚ್‌ಎಸ್ ಹಾಗೂ ಎಐಸಿಟಿಇ (ವೈದ್ಯಕೀಯ ಶಿಕ್ಷಣ ಇಲಾಖೆಯ ಮಾದರಿಯಲ್ಲಿ) ವೇತನ ನೀಡುವುದು.
ಮೇಲಿನ ಎಲ್ಲಾ ಬೇಡಿಕೆಗಳನ್ನು ಶೀಘ್ರವೇ ಈಡೇರಿಸಬೇಕು ಎಂದು ಸರ್ಕಾರಿ ವೈದ್ಯಾಧಿಕಾರಿಗಳ ಸಂಘ ಹಾಗೂ ಕರ್ನಾಟಕ ರಾಜ್ಯ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖಾ ನೌಕರರ ಸಂಘ ಆಗ್ರಹಿಸಿದೆ.

