
ಎಂಆರ್‌ಐ ಯಂತ್ರಗಳನ್ನು ಖರೀದಿಸುವಂತೆ ಸರ್ಕಾರ ಹೊರಡಿಸಿರುವ ಆದೇಶ
ರಾಜ್ಯದ 6 ಜಿಲ್ಲಾ ಆಸ್ಪತ್ರೆಗಳಿಗೆ 81 ಕೋಟಿ ವೆಚ್ಚದ ಎಂಆರ್‌ಐ ಸ್ಕ್ಯಾನಿಂಗ್ ಯಂತ್ರಗಳ ಮಂಜೂರು
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಈ ಕುರಿತು ಆದೇಶ ಹೊರಡಿಸಿದ್ದು, ರಾಷ್ಟ್ರೀಯ ಉಚಿತ ರೋಗ ಪತ್ತೆ ಸೇವೆಗಳ ಕಾರ್ಯಕ್ರಮದ ಅಡಿಯಲ್ಲಿ ಈ ಯಂತ್ರಗಳನ್ನು ಖರೀದಿಸಲಾಗುವುದು ಎಂದು ತಿಳಿಸಿದೆ
ರಾಜ್ಯದ ಸಾರ್ವಜನಿಕ ಆರೋಗ್ಯ ಸೇವೆಗಳನ್ನು ಬಲಪಡಿಸುವ ನಿಟ್ಟಿನಲ್ಲಿ, ರಾಜ್ಯ ಸರ್ಕಾರವು ರಾಷ್ಟ್ರೀಯ ಆರೋಗ್ಯ ಅಭಿಯಾನದ ಅಡಿಯಲ್ಲಿ 81 ಕೋಟಿ ರೂ. ವೆಚ್ಚದಲ್ಲಿ 6 ಎಂಆರ್‌ಐ (ಮ್ಯಾಗ್ನೆಟಿಕ್ ರೆಸೋನೆನ್ಸ್ ಇಮೇಜಿಂಗ್) ಸ್ಕ್ಯಾನ್ ಯಂತ್ರಗಳನ್ನು ಜಿಲ್ಲಾ ಆಸ್ಪತ್ರೆಗಳಿಗೆ ಖರೀದಿಸಲು ಅನುಮೋದನೆ ನೀಡಿದೆ. ಇದರಿಂದ ರೋಗಿಗಳ ರೋಗ ನಿರ್ಣಯ ಸೇವೆಗಳು ಇನ್ನಷ್ಟು ಸುಲಭವಾಗಲಿವೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಈ ಕುರಿತು ಆದೇಶ ಹೊರಡಿಸಿದ್ದು, ರಾಷ್ಟ್ರೀಯ ಉಚಿತ ರೋಗ ಪತ್ತೆ ಸೇವೆಗಳ ಕಾರ್ಯಕ್ರಮದ ಅಡಿಯಲ್ಲಿ ಈ ಯಂತ್ರಗಳನ್ನು ಖರೀದಿಸಲಾಗುವುದು. ಪ್ರಸ್ತುತ, ರಾಜ್ಯದ ಕೆಲವು ಜಿಲ್ಲಾ ಆಸ್ಪತ್ರೆಗಳಲ್ಲಿ ಸಾರ್ವಜನಿಕ ಸಹಭಾಗಿತ್ವದಲ್ಲಿ ಎಂಆರ್‌ಐ ಸ್ಕ್ಯಾನಿಂಗ್ ಸೇವೆಗಳು ಲಭ್ಯವಿದ್ದು, ಈ ಹೊಸ ಯಂತ್ರಗಳ ಸೇರ್ಪಡೆಯಿಂದಾಗಿ ಆಸ್ಪತ್ರೆಗಳಲ್ಲೇ ಸೇವೆಗಳು ಲಭ್ಯವಾಗಲಿವೆ.
ಯಾವ್ಯಾವ ಜಿಲ್ಲೆಗಳಿಗೆ ಮಂಜೂರು ?
ಆರೋಗ್ಯ ಇಲಾಖೆ ಸೂಚನೆಯಂತೆ ದಾವಣಗೆರೆ, ಮೈಸೂರು, ಧಾರವಾಡ, ಬಾಗಲಕೋಟೆ, ಬೆಂಗಳೂರು ನಗರ ಜಿಲ್ಲಾ ಆಸ್ಪತ್ರೆಯ ಜಯನಗರ ಜನರಲ್ ಅಥವಾ ಕೆ.ಸಿ. ಜನರಲ್ ಆಸ್ಪತ್ರೆ ಹಾಗೂ ಬೆಂಗಳೂರು ದಕ್ಷಿಣ ಜಿಲ್ಲಾಸ್ಪತ್ರೆಗಳಿಗೆ ಮಂಜೂರು ಮಾಡಲಾಗಿದೆ. ಒಂದು ಯಂತ್ರದ ಅಂದಾಜು ವೆಚ್ಚ 13.50 ಕೋಟಿ ರೂ. ಗಳಾಗಿದ್ದು, ಕರ್ನಾಟಕ ಸಾರ್ವಜನಿಕ ಸಂಗ್ರಹಣೆ ಕಾಯ್ದೆ (ಕೆಟಿಪಿಪಿ) ನಿಯಮಗಳ ಪ್ರಕಾರ ಕೆಎಸ್‌ಎಂಸಿಎಲ್ ಮೂಲಕ ಖರೀದಿಸಲು ತಿಳಿಸಿದೆ.
ಷರತ್ತುಗಳೇನು ?
ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದ್ದು, ರಾಜ್ಯ ಸರ್ಕಾರದಿಂದ ಯಾವುದೇ ಹೆಚ್ಚುವರಿ ಅನುದಾನ ಕೋರಬಾರದು. ಪ್ರಸ್ತಾಪಿತ ಯಂತ್ರಗಳ ಗುಣಮಟ್ಟದ ಕುರಿತು ಖಚಿತಪಡಿಸಿಕೊಳ್ಳಬೇಕು. ಅನುದಾನವನ್ನು ಕಾಲಮಿತಿಯೊಳಗೆ ಬಳಸಿಕೊಳ್ಳಬೇಕು. ಯಾವುದೇ ಹುದ್ದೆಗಳ ಸೃಜಿಸದೆ ಲಭ್ಯವಿರುವ ಮಾನವ ಸಂಪನ್ಮೂಲವನ್ನು ಬಳಸಿಕೊಳ್ಳಬೇಕು. ECRP-1 ಮತ್ತು ECRP-2 ರ ಅಡಿಯಲ್ಲಿ ಉಳಿತಾಯವಾದ ಅನುದಾನವನ್ನು ಇದಕ್ಕಾಗಿ ಬಳಸಿ. ಯಾವುದೇ ಹೆಚ್ಚುವರಿ ಅನುದಾನವನ್ನು ಕೋರಬಾರದೆಂದು ಸರ್ಕಾರವು ಷರತ್ತು ವಿಧಿಸಿದೆ.
ಈ ಆದೇಶವನ್ನು ಆರ್ಥಿಕ ಇಲಾಖೆಯ ಸಹಮತಿ ಮತ್ತು ಸಚಿವ ಸಂಪುಟದ ಅನುಮೋದನೆಯ ಮೇರೆಗೆ ಹೊರಡಿಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧೀನ ಕಾರ್ಯದರ್ಶಿ ಪ್ರದೀಪ್ ಕುಮಾರ್ ಬಿ.ಎಸ್. ತಿಳಿಸಿದ್ದಾರೆ.

