Demand for salary hike: Massive protest by ASHA workers in Bengaluru from Feb. 27
x
ಪ್ರತಿಭಟನಾ ನಿರತ ಆಶಾ ಕಾರ್ಯಕರ್ತೆಯರು ( ಸಂಗ್ರಹ ಚಿತ್ರ) 

ವೇತನ ಹೆಚ್ಚಳಕ್ಕೆ ಆಗ್ರಹ: ಫೆ.27 ರಿಂದ ಬೆಂಗಳೂರಿನಲ್ಲಿ ಆಶಾ ಕಾರ್ಯಕರ್ತೆಯರ ಬೃಹತ್ ಪ್ರತಿಭಟನೆ

ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿ ಈಗಿರುವ 5 ಸಾವಿರ ಗೌರವಧನವನ್ನು 8 ಸಾವಿರಕ್ಕೆ ಏರಿಕೆ ಮಾಡುವುದಾಗಿ ಭರವಸೆ ನೀಡಲಾಗಿತ್ತು. ಸಚಿವರು, ಆಧಿಕಾರಿಗಳು ಹಲವಾರು ಸಭೆಗಳು ನಡೆದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಆಶಾ ಸಂಘಟನೆ ತಿಳಿಸಿದೆ.


Click the Play button to hear this message in audio format

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಫೆಬ್ರವರಿ 27ರಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ (ಫ್ರೀಡಂ ಪಾರ್ಕ್) ಅಹೋರಾತ್ರಿ ಬೃಹತ್ ಪ್ರತಿಭಟನೆ ನಡೆಸುತ್ತೇವೆ ಎಂದು ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ರಾಜ್ಯ ಸಮಿತಿ ರಾಜ್ಯ ಸರ್ಕಾರಕ್ಕೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದೆ.

ಮಂಗಳವಾರ (ಫೆಬ್ರವರಿ 24) ಸರ್ಕಾರಕ್ಕೆ ಪತ್ರ ಬರೆದಿರುವ ಸಂಘದ ರಾಜ್ಯ ಕಾರ್ಯದರ್ಶಿ ಡಿ. ನಾಗಲಕ್ಷ್ಮಿ, ಸರ್ಕಾರದ ವಿಳಂಬ ಧೋರಣೆಯ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಳೆದ 2025ರ ಜನವರಿಯಲ್ಲಿ ಆಶಾ ಕಾರ್ಯಕರ್ತೆಯರು ಸತತ ಮೂರು ದಿನಗಳ ಕಾಲ ಬೃಹತ್ ಪ್ರತಿಭಟನೆ ನಡೆಸಿದ್ದರು. ಆ ಸಂದರ್ಭದಲ್ಲಿ ಸ್ಥಳಕ್ಕಾಗಮಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಆಶಾ ಕಾರ್ಯಕರ್ತೆಯರಿಗೆ ಕನಿಷ್ಠ 10 ಸಾವಿರ ರೂ. ವೇತನ ನೀಡುವುದಾಗಿ ಹಾಗೂ ಅಂಗನವಾಡಿ ಮತ್ತು ಬಿಸಿಯೂಟ ಕಾರ್ಯಕರ್ತೆಯರಿಗೆ 1 ಸಾವಿರ ರೂ. ಹೆಚ್ಚಳ ಮಾಡುವುದಾಗಿ ಭರವಸೆ ನೀಡಿದ್ದರು. ಆದರೆ, ಈ ಭರವಸೆ ನೀಡಿ 14 ತಿಂಗಳು ಕಳೆದರೂ ಇಲ್ಲಿಯವರೆಗೂ ಅದು ಕಾರ್ಯಗತವಾಗಿಲ್ಲ. ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿಯೂ ಪ್ರಸ್ತುತ ಇರುವ 5 ಸಾವಿರ ರೂ. ಗೌರವಧನವನ್ನು 8 ಸಾವಿರಕ್ಕೆ ಏರಿಕೆ ಮಾಡುವುದಾಗಿ ಭರವಸೆ ನೀಡಲಾಗಿತ್ತು.

ಸಚಿವರು ಮತ್ತು ಅಧಿಕಾರಿಗಳೊಂದಿಗೆ ಹಲವಾರು ಸುತ್ತಿನ ಸಭೆಗಳು ನಡೆದರೂ ಯಾವುದೇ ಸಕಾರಾತ್ಮಕ ಫಲಿತಾಂಶ ದೊರೆಯದ ಕಾರಣ ಹಾಗೂ ಇಲಾಖೆಯೇ ಏಕಪಕ್ಷೀಯ ಆದೇಶಗಳನ್ನು ಮಾಡುತ್ತಿರುವುದರಿಂದ ಮತ್ತೊಮ್ಮೆ ಬೀದಿಗಿಳಿದು ಹೋರಾಟ ನಡೆಸುವುದು ಅನಿವಾರ್ಯವಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಕೇಂದ್ರದ ಮಾರ್ಗಸೂಚಿ ಉಲ್ಲಂಘನೆ

ರಾಜ್ಯದಲ್ಲಿ ಆಶಾ ಕಾರ್ಯಕರ್ತೆಯರನ್ನು ನ್ಯಾಯಬದ್ಧವಾಗಿ ನೇಮಕಗೊಳಿಸುವ ಹೆಸರಿನಲ್ಲಿ ಹಾಲಿ ಇರುವ ಆಶಾ ಕಾರ್ಯಕರ್ತೆಯರನ್ನು ಕೈಬಿಡಲು ಹೊರಡಿಸಿರುವ ಆದೇಶವು ಸಂಪೂರ್ಣವಾಗಿ ಕೇಂದ್ರ ಸರ್ಕಾರದ ಮಾರ್ಗಸೂಚಿಯ ಉಲ್ಲಂಘನೆಯಾಗಿದೆ ಎಂದು ಪತ್ರದಲ್ಲಿ ಆರೋಪಿಸಲಾಗಿದೆ. ಇಡೀ ದೇಶದ ಬೇರೆ ಯಾವುದೇ ರಾಜ್ಯದಲ್ಲಿ ಇಂತಹ ವ್ಯವಸ್ಥೆ ಇಲ್ಲದಿದ್ದರೂ, ನಮ್ಮ ರಾಜ್ಯದ ಆರೋಗ್ಯ ಇಲಾಖೆ ನಡೆಸುತ್ತಿರುವ ಈ ಹುನ್ನಾರ ಆಶಾ ಕಾರ್ಯಕರ್ತರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಇದರ ಜೊತೆಗೆ, ಕಳೆದ ವರ್ಷ ಆಶಾ ಸುಗಮಕಾರರನ್ನು (ಫೆಸಿಲಿಟೇಟರ್) ಕೈಬಿಟ್ಟಿರುವುದು ಕೂಡ ಕೇಂದ್ರದ ಮಾರ್ಗಸೂಚಿಗೆ ವಿರುದ್ಧವಾದ ನಡೆಯಾಗಿದೆ. ಆಶಾ ಮೇಲ್ವಿಚಾರಕರಾಗಿ ಸತತ ಹತ್ತು ವರ್ಷಗಳ ಕಾಲ ಕಾರ್ಯನಿರ್ವಹಿಸಿದ ಸುಗಮಕಾರರನ್ನು ಮತ್ತೆ ಮರುನೇಮಕ ಮಾಡಿಕೊಳ್ಳುವ ಭರವಸೆ ನೀಡಿ ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಳ್ಳದಿರುವುದು ಇಲಾಖೆಯ ನಿರ್ಲಕ್ಷ್ಯವನ್ನು ಎತ್ತಿತೋರಿಸುತ್ತದೆ ಎಂದು ಆರೋಪಿಸಿದ್ದಾರೆ.

ಆನ್‌ಲೈನ್‌ನಲ್ಲಿ ದಾಖಲಾತಿಗಳು ಸರಿಯಾಗಿ ಆಗದಿರುವುದರಿಂದ ಕಾರ್ಯಕರ್ತೆಯರಿಗೆ ತಾವು ದುಡಿದಷ್ಟು ಪ್ರೋತ್ಸಾಹಧನ ಲಭ್ಯವಾಗದೆ ಆರ್ಥಿಕ ನಷ್ಟ ಅನುಭವಿಸುವಂತಾಗಿದೆ. ಇಲಾಖೆ ಮಟ್ಟದಲ್ಲೇ ಬಗೆಹರಿಸಬಹುದಾದ ಇಂತಹ ಸಮಸ್ಯೆಗಳನ್ನು ಬಗೆಹರಿಸದ ಕಾರಣ ಕಾರ್ಯಕರ್ತೆಯರು ಮತ್ತೆ ಮತ್ತೆ ಬೀದಿಗಿಳಿಯುವಂತಾಗಿದೆ ಎಂದು ಸಂಘ ಬೇಸರ ವ್ಯಕ್ತಪಡಿಸಿದೆ.

ಬಜೆಟ್ ಪೂರ್ವ ಪ್ರಮುಖ ಹಕ್ಕೊತ್ತಾಯಗಳು

ಮುಂಬರುವ 2026ರ ಮಾರ್ಚ್ ಬಜೆಟ್‌ನಲ್ಲಿ ಆಶಾ ಕಾರ್ಯಕರ್ತೆಯರ ಬಹುಕಾಲದ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಸಂಘ ಒತ್ತಾಯಿಸಿದೆ. ಪ್ರಮುಖವಾಗಿ, ಕೇಂದ್ರ ಸರ್ಕಾರದ ಪ್ರೋತ್ಸಾಹಧನ ಹಾಗೂ ರಾಜ್ಯ ಸರ್ಕಾರದ ಗೌರವಧನವನ್ನು ಒಟ್ಟಿಗೆ ಸೇರಿಸಿ ಮಾಸಿಕ 15 ಸಾವಿರ ರೂ. ನಿಶ್ಚಿತ ವೇತನ ನೀಡಬೇಕು ಮತ್ತು ಆಡಳಿತ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿರುವಂತೆ ಗೌರವಧನವನ್ನು 5 ಸಾವಿರದಿಂದ 8 ಸಾವಿರ ರೂ.ಗಳಿಗೆ ಹೆಚ್ಚಿಸಬೇಕು ಎಂದು ಆಗ್ರಹಿಸಿದ್ದಾರೆ.

ನಿವೃತ್ತಿಯಾಗುವ ಆಶಾ ಕಾರ್ಯಕರ್ತೆಯರಿಗೆ ಪಶ್ಚಿಮ ಬಂಗಾಳ ರಾಜ್ಯದ ಮಾದರಿಯಲ್ಲಿ ಇಡಿಗಂಟು ಒದಗಿಸಬೇಕು. ಆಶಾ ಕಾರ್ಯಕರ್ತೆಯರಿಗೆ ತೀವ್ರತರವಾದ ರೋಗಿಗಳಿಗೆ ಚಿಕಿತ್ಸೆ ಕೊಡಿಸಲು ಅನುಕೂಲವಾಗುವಂತೆ ಕಾರ್ಪಸ್ ಫಂಡ್ ರಚಿಸಿ, ಚಿಕಿತ್ಸಾ ವೆಚ್ಚ ಮರುಪಾವತಿಗೆ ಸೂಕ್ತ ವ್ಯವಸ್ಥೆ ಮಾಡಬೇಕು. ಜೊತೆಗೆ, ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವ ಆಶಾ ಕಾರ್ಯಕರ್ತೆಯರ ಚೇತರಿಕೆಯ ಅವಧಿಯಲ್ಲಿ ಮೂರು ತಿಂಗಳ ಕಾಲ ಮಾಸಿಕ ನಿಶ್ಚಿತ ಗೌರವಧನವನ್ನು ಪಾವತಿಸುವಂತೆ ಸಂಘವು ಬಜೆಟ್ ಪೂರ್ವ ಬೇಡಿಕೆಯನ್ನಿಟ್ಟಿದೆ.

ಆಡಳಿತಾತ್ಮಕ ಬೇಡಿಕೆಗಳು

ಆಡಳಿತಾತ್ಮಕ ಮಟ್ಟದಲ್ಲಿ ಇಲಾಖೆಯು ತಕ್ಷಣವೇ ಕೇಂದ್ರದ ಮಾರ್ಗಸೂಚಿಯನ್ನು ಉಲ್ಲಂಘಿಸಿ ಆಶಾ ಕಾರ್ಯಕರ್ತೆಯರನ್ನು ಕೈಬಿಡುವ ಪ್ರಕ್ರಿಯೆಯನ್ನು ನಿಲ್ಲಿಸಬೇಕು ಮತ್ತು ಆಶಾ ಸುಗಮಕಾರರನ್ನು ಸೂಕ್ತ ವೇತನದೊಂದಿಗೆ ಮುಂದುವರಿಸಬೇಕು ಎಂದು ಸಂಘ ಆಗ್ರಹಿಸಿದೆ.

ಆಶಾ ಸುಗಮಕಾರರಿಗೆ 2024-25ನೇ ಸಾಲಿನಲ್ಲಿ 6 ಸಾವಿರ ರೂ.ಗಳಿಂದ 7.5 ಸಾವಿರ ರೂ.ಗಳಿಗೆ ಹೆಚ್ಚಳ ಮಾಡಲಾಗಿದ್ದ ಗೌರವಧನದ ಒಂದು ವರ್ಷದ ಬಾಕಿ ಮೊತ್ತವನ್ನು (ಮಾಸಿಕ 1,500 ರೂ.ನಂತೆ) ತಕ್ಷಣವೇ ಎಲ್ಲರಿಗೂ ಪಾವತಿಸಬೇಕು. ರಾಜ್ಯದಾದ್ಯಂತ ಕಾರ್ಯಕರ್ತೆಯರು ಕೆಲಸ ಮಾಡಿದಷ್ಟೇ ಕೇಂದ್ರದ ಪ್ರೋತ್ಸಾಹಧನ ಬರುತ್ತಿಲ್ಲದಿರುವ ತಾಂತ್ರಿಕ ಸಮಸ್ಯೆಯನ್ನು ಬಗೆಹರಿಸಿ, ಕೂಡಲೇ ಬಾಕಿ ಇರುವ ಪ್ರೋತ್ಸಾಹಧನವನ್ನು ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಲಾಗಿದೆ. ಇದರ ಜೊತೆಗೆ, ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಸರ್ವೆ ಕಾರ್ಯ ನಿರ್ವಹಿಸಿದ್ದಕ್ಕಾಗಿ ನಿಗದಿಯಾಗಿದ್ದ 1 ಸಾವಿರ ರೂ. ಸೇರಿದಂತೆ ಹಲವಾರು ವರ್ಷಗಳಿಂದ ಬಾಕಿ ಇರುವ ಎಲ್ಲ ಹಣವನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಲಾಗಿದೆ. ಈ ಮೇಲಿನ ಎಲ್ಲ ನ್ಯಾಯಯುತ ಬೇಡಿಕೆಗಳನ್ನು ಸರ್ಕಾರ ಈಡೇರಿಸದೇ ಇದ್ದಲ್ಲಿ, ಫೆಬ್ರವರಿ 27ರಂದು ಹಮ್ಮಿಕೊಳ್ಳಲಾಗಿರುವ ಬೃಹತ್ ಪ್ರತಿಭಟನೆಯು ಮುಂದಿನ ದಿನಗಳಲ್ಲಿ ಅನಿವಾರ್ಯವಾಗಿ ಅನಿರ್ದಿಷ್ಟಾವಧಿ ಮುಷ್ಕರವಾಗಿ ಬದಲಾಗಲಿದೆ ಎಂದು ಸಂಘವು ಸರ್ಕಾರಕ್ಕೆ ಕಠಿಣ ಎಚ್ಚರಿಕೆ ರವಾನಿಸಿದೆ.

Read More
Next Story