
ಹಾವು ಕಡಿತಕ್ಕೆ ತಕ್ಷಣವೇ ಉಚಿತ ಚಿಕಿತ್ಸೆ, ಹಣ ಕೇಳುವಂತಿಲ್ಲ: ಸರ್ಕಾರದ ಆದೇಶ
2030ರ ವೇಳೆಗೆ ರೇಬೀಸ್ ಸಾವುಗಳ ಸಂಖ್ಯೆಯನ್ನು ಶೂನ್ಯಕ್ಕೆ ಇಳಿಸಲು ಗುರಿ ಹೊಂದಲಾಗಿದ್ದು, ರಾಜ್ಯ ಕ್ರಿಯಾ ಯೋಜನೆಯು ರೇಬೀಸ್ ತಡೆಗಟ್ಟುವಿಕೆಯನ್ನು ಬಲಪಡಿಸುವ ಉದ್ದೇಶ ಹೊಂದಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.
ಹಾವು ಕಡಿತಕ್ಕೆ ಉಚಿತ ಚಿಕಿತ್ಸೆ ನೀಡುವುದರ ಜೊತೆಗೆ, ಖಾಸಗಿ ಆಸ್ಪತ್ರೆಗಳು ಸಹ ಮುಂಗಡ ಹಣಕ್ಕೆ ಒತ್ತಾಯಿಸದೇ ಹಾವು ಕಡಿತಕ್ಕೆ ಒಳಗಾದವರಿಗೆ ತಕ್ಷಣ ಜೀವ ಉಳಿಸುವ ಚಿಕಿತ್ಸೆ ಒದಗಿಸುವಂತೆ ಆದೇಶ ನೀಡಲಾಗಿದೆ ಎಂದು ಅರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.
ಶುಕ್ರವಾರ (ಫೆ.27) ವಿಧಾನಸೌಧದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ವಿಷಪೂರಿತ ಹಾವುಗಳ ಕಡಿತದಿಂದ ಆಗುವ ಸಾವುಗಳನ್ನು ಕಡಿಮೆಗೊಳಿಸಲು ಕ್ರಿಯಾ ಯೋಜನೆ ರೂಪಿಸಲಾಗಿದೆ. ಕೇಂದ್ರ ಸರ್ಕಾರದ ಮಾರ್ಗಸೂಚಿಯನ್ವಯ ಈ ಯೋಜನೆ ರೂಪಿಸಿದ್ದು, ರಾಜ್ಯ ಸರ್ಕಾರ 2024 ರಲ್ಲಿಯೇ ಹಾವು ಕಡಿತದ ಎಲ್ಲಾ ಪ್ರಕರಣಗಳನ್ನು ಘೋಷಿತ ಕಾಯಿಲೆಯ ಪಟ್ಟಿಗೆ ಸೇರಿಸಿದೆ ಎಂದು ಮಾಹಿತಿ ನೀಡಿದರು.
ಎನ್‌ಜಿಒ, ನಾಗರಿಕ ಸೇವಾ ಸಂಸ್ಥೆಗಳು, ಇತರೆ ಇಲಾಖೆಗಳ ಸಹಯೋಗದಲ್ಲಿ ಮಾರ್ಗಸೂಚಿ ರಚಿಸಲಾಗಿದೆ. ಇದರಲ್ಲಿ ನಿಯಂತ್ರಣ, ಔಷಧದ ಲಭ್ಯತೆ, ತರಬೇತಿ, ಜಾಗೃತಿ ಮೂಡಿಸುವ ಕುರಿತು ಕ್ರಮ ಕೈಗೊಳ್ಳಲಾಗಿದ್ದು, ಹಾವು ಕಡಿತದಿಂದ ಉಂಟಾಗುವ ಅಂಗವಿಕಲತೆಯನ್ನು ಹೋಗಲಾಡಿಸುವುದು ಸಹ ಮುಖ್ಯ ಉದ್ದೇಶವಾಗಿದೆ ಎಂದರು.
ಸಚಿವ ದಿನೇಶ್ ಗುಂಡೂರಾವ್ ಭಿತ್ತಿಪತ್ರಗಳನ್ನು ಬಿಡುಗಡೆ ಮಾಡಿದರು.
ರೇಬೀಸ್ ಔಷಧ ದಾಸ್ತಾನು ಕಡ್ಡಾಯ
2030ರ ವೇಳೆಗೆ ರೇಬೀಸ್ ಸಾವುಗಳ ಸಂಖ್ಯೆಯನ್ನು ಶೂನ್ಯಕ್ಕೆ ಇಳಿಸಲು ಗುರಿ ಹೊಂದಲಾಗಿದ್ದು, ರಾಜ್ಯ ಕ್ರಿಯಾ ಯೋಜನೆಯು ರೇಬೀಸ್ ತಡೆಗಟ್ಟುವಿಕೆಯನ್ನು ಬಲಪಡಿಸುವ ಉದ್ದೇಶ ಹೊಂದಿದೆ. ರಾಜ್ಯದ ಎಲ್ಲ ಪ್ರಾಥಮಿಕ, ಸಮುದಾಯ ಆರೋಗ್ಯ ಕೇಂದ್ರಗಳು, ತಾಲ್ಲೂಕು ಮತ್ತು ಜಿಲ್ಲಾಸ್ಪತ್ರೆಗಳಲ್ಲಿ ಆಂಟಿ ರೇಬೀಸ್ ಲಸಿಕೆ, ರೇಬೀಸ್ ಇಮ್ಯುನೋಗ್ಲೋಬುಲಿನ್ ಒದಗಿಸಲಾಗುತ್ತದೆ. ಇವುಗಳ ದಾಸ್ತಾನು ಹೊಂದಿರುವುದನ್ನು ಕಡ್ಡಾಯಗೊಳಿಸಲಾಗಿದೆ ಎಂದು ಹೇಳಿದರು.
ಜಂಟಿ ಸಮಿತಿ ರಚನೆ
ಖಾಸಗಿ ಆಸ್ಪತ್ರೆಗಳಲ್ಲಿಯೂ ಔಷಧಿ ಸದಾ ಲಭ್ಯವಿರಬೇಕು ಮತ್ತು ಮುಂಗಡ ಪಾವತಿಗೆ ಒತ್ತಾಯಿಸದೆ ಚಿಕಿತ್ಸೆ ನೀಡುವುದು ಕಡ್ಡಾಯಗೊಳಿಸಲಾಗಿದೆ. ಮೇಲ್ವಿಚಾರಣೆಗಾಗಿ ರಾಜ್ಯ ಮತ್ತು ಜಿಲ್ಲಾಮಟ್ಟದ ಜಂಟಿ ಸಮಿತಿಗಳನ್ನು ರಚಿಸಲಾಗಿದೆ. ಸರ್ಕಾರದ ವಿವಿಧ ಇಲಾಖೆಗಳ ಸಹಕಾರದೊಂದಿಗೆ ಕಾರ್ಯರೂಪಕ್ಕೆ ತರಲಾಗುತ್ತಿದ್ದು, ಎನ್‌ಜಿಒಗಳೂ ಸಹಕಾರ ನೀಡಲಿದೆ. ಒಟ್ಟಿನಲ್ಲಿ ಸರ್ಕಾರ ಮತ್ತು ಆರೋಗ್ಯ ಇಲಾಖೆ ಜನರ ಆರೋಗ್ಯ ಸಮಸ್ಯೆಗಳನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸುತ್ತಿದೆ. ಸಕಾಲದಲ್ಲಿ ಚಿಕಿತ್ಸೆ ಸಿಗದೆ ಸಾವು ಉಂಟಾಗಬಾರದು ಎನ್ನುವ ಉದ್ದೇಶದಿಂದ ಈ ಎಲ್ಲ ಕಾರ್ಯಕ್ರಮಗಳನ್ನು ರೂಪಿಸಿದೆ ಎಂದರು.

