ಐತಿಹಾಸಿಕ ಕಡಲೆಕಾಯಿಪರಿಷೆ ಬಗ್ಗೆ ನಿಮಗೆಷ್ಟುಗೊತ್ತು?
x

ಐತಿಹಾಸಿಕ ಕಡಲೆಕಾಯಿಪರಿಷೆ ಬಗ್ಗೆ ನಿಮಗೆಷ್ಟುಗೊತ್ತು?

ಬೆಂಗಳೂರಿನ ಬಸವನಗುಡಿಯಲ್ಲಿ ನಡೆಯುವ ಕಡಲೆಕಾಯಿಪರಿಷೆ ಬಗ್ಗೆ ನಿಮಗೆ ತಿಳಿದಿದೆಯೇ? ಈ ಪ್ರದೇಶದಲ್ಲಿ ವಾರ್ಷಿಕ ನೆಲಗಡಲೆ ಜಾತ್ರೆ ನಡೆತ್ತದೆ. ಇದು ಬೆಂಗಳೂರಿನಲ್ಲೇ ಬಹಳ ಫೇಮಸ್. ಹಾಗಾದರೆ ಯಾಕೆ ಈ ಜಾತ್ರೆ ಅಷ್ಟೊಂದು ಪ್ರಸಿದ್ದಿ? ಇದರ ಇತಿಹಾಸವೇನು?


ಬೆಂಗಳೂರಿನ ಬಸವನಗುಡಿಯಲ್ಲಿ ವಾರ್ಷಿಕ ಕಡಲೆ ಕಾಯಿಪರಿಷೆ ನಡೆಯುತ್ತದೆ. ಈ ಜಾತ್ರೆ ಬುಲ್ ಟೆಂಪಲ್ ರಸ್ತೆಯ ಎರಡೂ ಬದಿಗಳಲ್ಲಿ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಪ್ರತಿವರ್ಷ ಎರಡು ದಿನಗಳ ಕಾಲ ನಡೆಯುತ್ತದೆ. ಸಾವಿರಾರು ಭಕ್ತರು ಬಂದು ತಮ್ಮ ಹರಕೆಯನ್ನು ಈಡೇರಿಸುತ್ತಾರೆ. ಪ್ರತೀ ವರ್ಷ ಕಾರ್ತಿಕ ಮಾಸದ ಸೋಮವಾರವು ಭಗವಾನ್ ಶಿವನ ನೆಚ್ಚಿನ ದಿನವಾಗಿದ್ದು, ನಂದಿಯು ಶಿವನ ವಾಹನವಾಗಿರುವುದರಿಂದ ನಂದಿಗೆ ಈ ದಿನಗಳು ಪ್ರಿಯವಾಗಿದೆ. ಆದ್ದರಿಂದ ಕಾರ್ತಿಕ ಮಾಸದಲ್ಲಿ ಕಡೆಲೆಕಾಯಿ ಪರಿಷೆ ನಡೆಯುತ್ತದೆ.

ಸುಮಾರು 500 ವರ್ಷಗಳ ಇತಿಹಾಸವಿರುವ ಈ ಜಾತ್ರೆ ಮೂರು ದಿನ ನಡೆಯುತ್ತದೆ .ಬೆಳಿಗ್ಗೆ ಸುಮಾರು 10 ಗಂಟೆಗೆ ಆರಂಭವಾದರೆ ರಾತ್ರಿ 11 ರವರೆಗೆ ಜರುಗುತ್ತದೆ.ಬಸವನಗುಡಿಯ ದೊಡ್ಡ ಗಣೇಶ ಹಾಗೂ ದೊಡ್ಡ ಬಸವಣ್ಣನಿಗೆ ಕಡಲೆಕಾಯಿಯಿಂದ ಅಭಿಷೇಕ ಮತ್ತು ಬೆಣ್ಣೆ ಹಾಗೂ ಕಡಲೆಕಾಯಿ ಬೀಜದ ಅಲಂಕಾರ ಮಾಡಲಾಗುವುದು. ಬಸವಣ್ಣನಿಗೆ ಕಡಲೆಕಾಯಿ ತುಲಾಭಾರ ಮಾಡುವ ಮೂಲಕ ಪರಿಷೆಗೆ ಚಾಲನೆ ದೊರೆಯುತ್ತದೆ .ಪರಿಷೆಗೆ ಬರುವ ಭಕ್ತರಿಗೆ ಕಡಲೆ ಕಾಯಿಯನ್ನು ಪ್ರಸಾದವಾಗಿ ಕೂಡ ನೀಡಲಾಗುತ್ತದೆ.

ಈ ಕಡಲೆ ಕಾಯಿಪರಿಷೆಯ ಇತಿಹಾಸ

ಅಂದಹಾಗೆ ಬೆಂಗಳೂರು ಮಹಾನಗರವಾಗುವ ಮೊದಲು ಬಸವನಗುಡಿ ಮೊದಲು ಸುಂಕೇನಹಳ್ಳಿಯಾಗಿತ್ತು. ಸುಂಕೇನಹಳ್ಳಿಯ ಮಣ್ಣು ಫಲವತ್ತಾಗಿತ್ತು. ಆ ದಿನಗಳಲ್ಲಿ ಸ್ಥಳೀಯ ಹಾಗೂ ಸುತ್ತಮುತ್ತಲ ಪ್ರದೇಶದ ರೈತರ ಪ್ರಮುಖ ಬೆಳೆಯೇ ಕಡಲೆಕಾಯಿ. ಸುಂಕೇನಹಳ್ಳಿಯ ( ಬಸವನಗುಡಿ) ಹಳ್ಳಿಗಳಲ್ಲಿ ಪ್ರತಿ ವರ್ಷ ನೆಲಗಡಲೆ ಬೆಳೆಯುತ್ತಿದ್ದರು. ಆದರೆ ಇದು ರೈತರಿಗೆ ಸರಿಯಾಗಿ ಕಟಾವಿಗೆ ಸಿಗುತ್ತಿರಲಿಲ್ಲ. ಯಾಕಂದ್ರೆ ಬಸವವೊಂದು ರೈತರು ಬೆಳೆದ ನೆಲಗಡಲೆಗಳನೆಲ್ಲ ತಿಂದು ನಾಶಪಡಿಸುತ್ತಿತ್ತು. ಆಗ ರೈತರು ತಮ್ಮ ಬೆಳೆಯನ್ನು ರಕ್ಷಿಸಿಕೊಳ್ಳಲು ತಮ್ಮ ಮೊದಲ ಬೆಳೆಯನ್ನು ಬಸವನಿಗೆ ಅರ್ಪಿಸುವ ಹರಕೆ ಹೊತ್ತುಕೊಂಡು, ಬಸವನನ್ನ ಪ್ರಾರ್ಥಿಸಲು ಆರಂಭಿಸಿದರು.

ಕಾಲಕ್ರಮೇಣ ಬಸವನಗುಡಿ ಪ್ರದೇಶದಲ್ಲಿ ನಂದಿಯ ವಿಗ್ರಹವೊಂದು ದೊರಕಿತು. ಇದನ್ನು 16 ನೇ ಶತಮಾನದಲ್ಲಿ ಈ ಸ್ಥಳದಲ್ಲಿ ಕೆಂಪೇಗೌಡರು ನಂದಿಯ ಸುತ್ತಲೂ ದೇವಾಲಯವನ್ನು ನಿರ್ಮಿಸಿದರು. ಇದನ್ನು ಬಸವನ ಗುಡಿ ಅಥವಾ ಬಿಗ್ ಬುಲ್ ಟೆಂಪಲ್ ಎಂದು ಕರೆಯಲಾಗುತ್ತದೆ. ಕಡಲೆ ಕಾಯಿ ಪರಿಷೆ ಈ ದೇವಾಲಯದ ಸುತ್ತ ಕೇಂದ್ರೀಕೃತವಾಗಿದೆ ಮತ್ತು ಬಸವ ರೈತರು ಅರ್ಪಿಸಿದ ನೆಲಗಡಲೆಯನ್ನು ಸ್ವೀಕರಿಸಿ ಆಶೀರ್ವದಿಸುತ್ತಾನೆ ಎಂಬ ನಂಬಿಕೆಯಿದೆ.

ದೊಡ್ಡ ಬಸವನ ಇತಿಹಾಸ

ಗುಡ್ಡದ ತುದಿಯಲ್ಲಿ ದೊಡ್ಡ ಬಸವನ ಬೃಹತ್ ಏಕಶಿಲಾ ನಂದಿ ವಿಗ್ರಹವಿದೆ. ಈ ದೇವಾಲಯವನ್ನು ಕೆಂಪೇಗೌಡರು 1537ರಲ್ಲಿ ಕಟ್ಟಿಸಿದರು. ಸುಂದರವಾದ ಈ ದೇವಾಲಯವು ಸುಂದರವಾದ ಧ್ವಜಸ್ತಂಭ,. ಈ ಕಲ್ಲು ಕಂಬದಲ್ಲಿ ತಂತಿ ವಾದ್ಯ ನುಡಿಸುತ್ತಿರುವ ಸ್ತ್ರೀ ಉಬ್ಬು ಶಿಲ್ಪಗಳಿಂದ ಕೂಡಿದೆ. ದೇವಾಲಯಕ್ಕೆ ಭವ್ಯವಾದ ಗೋಪುರವಿದ್ದು, ಒಳ ಪ್ರಾಕಾರದಲ್ಲಿ ವಿಶಾಲವಾದ ಗುಡಿ. ಪ್ರದಕ್ಷಿಣ ಪಥವಿದೆ. ಬಾಗಿಲಲ್ಲಿ ದ್ವಾರಪಾಲಕರ ಶಿಲ್ಪಗಳಿವೆ. ಮೊದಲಿಗೆ ಈ ನದಿ ಭೂಮಿಯೊಳಗೇ ಉದ್ಭವವಾಗಿ ಗುಡಿಯ ಹಿಂಬದಿಯಲ್ಲಿ ಬಸವನ ಕೆರೆಯಾಗಿತ್ತು. ಆ ಕೆರೆಯಲ್ಲಿ ಸುತ್ತಮುತ್ತಲಿನವರು ಗಣಪತಿಯನ್ನು ವಿಸರ್ಜಿಸುತ್ತಿದ್ದರು. ಇದೀಗ ಕೆರೆಯಿದ್ದ ಜಾಗದಲ್ಲಿ ದೊಡ್ಡ ಕಟ್ಟಡವೊಂದರ ನಿರ್ಮಾಣವಾಗಿದೆ.

ಈ ವರ್ಷ ಯಾವ ದಿನದಂದು ಕಡಲೆಕಾಯಿ ಪರಿಷೆ

ಈ ಕಡಲೆಕಾಯಿ ಪರಿಷೆ ಸಾಮಾನ್ಯವಾಗಿ ಪ್ರತಿ ವರ್ಷ ಕಾರ್ತಿಕ ಮಾಸದ ಕೊನೆಯ ಸೋಮವಾರದಂದು ಬಸವನಗುಡಿ ಕಡಲೆಕಾಯಿ ಪರಿಷೆ ನಡೆಯುತ್ತದೆ. ಇದು ಸಾಮಾನ್ಯವಾಗಿ ನವೆಂಬರ್ ಕೊನೆಯ ಅಥವಾ ಡಿಸೆಂಬರ್ ಮೊದಲ ವಾರದಲ್ಲಿ ಬರುತ್ತದೆ.

ಇನ್ನು ಕಡಲೆಕಾಯಿ ಪರಿಷೆ ಸಮಯದಲ್ಲಿ ಗ್ರಾಹಕರು ನೆಲಗಡಲೆಗಳನ್ನು ರೈತರಿಂದ ನೇರವಾಗಿ ಮಾರುಕಟ್ಟೆ ದರಕ್ಕಿಂತ ಅಗ್ಗವಾಗಿ ಖರೀದಿಸುತ್ತಾರೆ. ಕಡಲೆಕಾಯಿ ಪರಿಷೆಯ ಸಂದರ್ಭದಲ್ಲಿ ಬಸವನ ಗುಡಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಮತ್ತು ಪ್ರಾರ್ಥನೆ ನಡೆಯುತ್ತದೆ. ಅಲಂಕೃತ ಬೀದಿಗಳಲ್ಲಿ ಸಾಕಷ್ಟು ಶಾಪಿಂಗ್ ಆಯ್ಕೆಗಳು, ಆಹಾರ ಮಳಿಗೆಗಳು, ಆಟಗಳು ಮತ್ತು ಮಕ್ಕಳಿಗೆ ಆಟಿಕೆಗಳು ಕೂಡ ಇರುತ್ತವೆ.

ಬಸವನಗುಡಿ ಮತ್ತು ಸುತ್ತಮುತ್ತಲಿನ ಜನರು ಕಡಲೆಕಾಯಿ ಪರಿಷೆಯನ್ನು ಕಾತರದಿಂದ ಎದುರು ನೋಡುತ್ತಾರೆ. ಈ ಜಾತ್ರೆಗೆ ಕೇವಲ ಬೆಂಗಳೂರಿನ ಸುತ್ತಮುತ್ತಲ ಪ್ರದೇಶದ ಜನರು ಮಾತ್ರವಲ್ಲ, ಶ್ರೀನಿವಾಸಪುರ ,ಮಾಲೂರು ,ಕೋಲಾರ ,ಮಂಡ್ಯ, ಮೈಸೂರು, ಚಾಮರಾಜನಗರ, ಮಾಗಡಿ ,ರಾಮನಗರ ,ಚಿಕ್ಕಬಳ್ಳಾಪುರ ,ದೊಡ್ಡಬಳ್ಳಾಪುರ ,ತುಮಕೂರು, ಚಿಂತಾಮಣಿ ,ಹೊಸಕೋಟೆ ಮಾತ್ರವಲ್ಲದೆ ನೆರೆಯ ರಾಜ್ಯಗಳಾದ ತಮಿಳುನಾಡು ಆಂಧ್ರಪ್ರದೇಶಗಳಿಂದ ಸಹ ರೈತರು ಹಾಗೂ ವ್ಯಾಪಾರಿಗಳು ಇಲ್ಲಿ ಬಂದು ಕಡಲೆಕಾಯಿ ವ್ಯಾಪಾರ ಮಾಡುತ್ತಾರೆ.

ನಾನಾ ತಳಿಯ ಕಡಲೆಕಾಯಿಗಳು

ಇಲ್ಲಿ ನಾನಾ ತಳಿಯ ಹಾಗೂ ನಾನಾ ಗಾತ್ರದ ಕಡಲೆಕಾಯಿಗಳನ್ನು ಕಾಣಬಹುದು. ಹಸಿ ,ಉರಿದ ,ಬೇಯಿಸಿದ ,ಅರೆ ಬೆಂದ ಕಡಲೆ ಕಾಯಿಗಳು ಇಲ್ಲಿ ಮಾರಾಟವಾಗುತ್ತವೆ. ಸುಮಾರು ಒಂದು ಸೇರು ಕಡಲೆಕಾಯಿಗಳು 40 ರಿಂದ 70 ರೂಗಳ ವರೆಗೆ ಮಾರಾಟವಾಗುತ್ತದೆ . ಇಲ್ಲಿ ಕಡಲೆ ಕಾಯಿ ಪ್ರಮುಖ ಆಕರ್ಷಣೆಯಾದರೂ, ಬಗೆ ಬಗೆಯ ಆಹಾರಗಳನ್ನು ಕಾಣಬಹುದು . ಬೆಂಗಳೂರಿನ ಚಳಿಗೆ ಬಿಸಿಬಿಸಿ ಜೋಳ ,ಬೇಯಿಸಿದ ಕಡಲೆ ಕಾಯಿ, ಬೇಲ್ ಪುರಿ, ಪಾನಿ ಪುರಿ ,ಕಡ್ಲೆಪುರಿ ಆಹಾರಪ್ರಿಯರನ್ನು ತಮ್ಮತ್ತ ಸೆಳೆಯುತ್ತದೆ.

ಬೆಂಗಳೂರಿನಲ್ಲಿ ಹುಟ್ಟಿ ಬೆಳೆದಿರುವವರಿಗೆ ಮತ್ತು ಹಳ್ಳಿಯ ಜಾತ್ರೆಗಳನ್ನು ಕಣ್ತುಂಬಿಕೊಳ್ಳಬೇಕೆನ್ನುವವರಿಗೆ ಬೆಂಗಳೂರಿನಲ್ಲಿಯೇ ಹಳ್ಳಿ ಸೊಗಡಿನ ಅನುಭವ ಇಲ್ಲಿ ಸಿಗುತ್ತದೆ.

Read More
Next Story