
ಕಬ್ಬಿನ ಬವಣೆ:Part-6| ತೂಕದಲ್ಲಿನ ಮೋಸಕ್ಕೆ ಸಕ್ಕರೆ ಕಾರ್ಖಾನೆಗಳಿಂದ ತಂತ್ರಜ್ಞಾನ ಬಳಕೆ; ಬಡ್ಡಿ ವ್ಯವಹಾರದಿಂದಾಗಿ ರೈತರಿಗೆ ಬಾಕಿ ಪಾವತಿ ವಿಳಂಬ
ತೂಕವನ್ನು ಕಡಿಮೆ ತೋರಿಸುವ ಮೂಲಕ ರೈತರಿಗೆ ಸಾವಿರಾರು ರೂ. ನಷ್ಟ ಮಾಡುತ್ತಿರುವ ಹಲವು ಪ್ರಕರಣಗಳು ವರದಿಯಾಗಿವೆ. ಕಾರ್ಖಾನೆ ಮಾಲೀಕರು ಅಕ್ರಮವಾಗಿ ಲಾಭ ಗಳಿಸಿದರೆ, ಬೆವರು ಸುರಿಸಿ ದುಡಿದ ರೈತ ಬೀದಿಗೆ ಬೀಳುವಂತಾಗಿದೆ.
ರಾಜ್ಯದ ಕಬ್ಬು ಬೆಳೆಗಾರರ ಬೇಡಿಕೆಗೆ ಸ್ಪಂದಿಸಿರುವ ರಾಜ್ಯ ಕಾಂಗ್ರೆಸ್ ಸರ್ಕಾರ ರೈತರಿಗೆ ಟನ್‌ಗೆ 3300 ಕೊಡಲು ತೀರ್ಮಾನಿಸಿದೆ. ಸರ್ಕಾರ ಸಕಾರಾತ್ಮಕ ಸ್ಪಂದಿಸಿದರೂ ಸಕ್ಕರೆ ಕಾರ್ಖಾನೆಗಳು ತೂಕದಲ್ಲಿ ನಡೆಸುತ್ತಿರುವ ವ್ಯವಸ್ಥಿತ ಮೋಸದಿಂದಾಗಿ ರೈತರು ಸಂಕಷ್ಟ ಎದುರಿಸುವಂತಾಗಿದೆ.
ಪ್ರತಿ ಟನ್ ಕಬ್ಬಿಗೆ ನೂರಾರು ಕೆ.ಜಿ.ಗಳಷ್ಟು ತೂಕ ಕಡಿಮೆ ತೋರಿಸುವ ಮೂಲಕ ಕೆಲ ಕಾರ್ಖಾನೆಗಳು ರೈತರಿಗೆ ಕೋಟ್ಯಂತರ ರೂ. ವಂಚನೆ ಮಾಡುತ್ತಿವೆ ಎಂಬ ದೂರುಗಳು ಅವ್ಯಾಹತವಾಗಿವೆ.
ರೈತರು ತಮ್ಮ ಜಮೀನುಗಳಿಂದ ಕಬ್ಬು ತುಂಬಿದ ಟ್ರ್ಯಾಕ್ಟರ್ ಅಥವಾ ಲಾರಿಗಳನ್ನು ಕಾರ್ಖಾನೆಗೆ ತಂದಾಗ, ಅಲ್ಲಿನ ತೂಕದ ಯಂತ್ರಗಳಲ್ಲಿ ಕಡಿಮೆ ತೂಕ ದಾಖಲಿಸಲಾಗುತ್ತದೆ. ಈ ಮೋಸದ ಜಾಲದಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಕೂಡ ಬಳಸಿಕೊಳ್ಳಲಾಗುತ್ತಿದೆ. ರಿಮೋಟ್ ಕಂಟ್ರೋಲ್ ಬಳಸಿ ತೂಕದ ಯಂತ್ರವನ್ನು ನಿಯಂತ್ರಿಸಿ, ಪ್ರತಿ ಟ್ರ್ಯಾಕ್ಟರ್‌ಗೆ 100-150 ಕೆ.ಜಿ. ತೂಕವನ್ನು ಕಡಿಮೆ ತೋರಿಸುವ ಮೂಲಕ ರೈತರಿಗೆ ಸಾವಿರಾರು ರೂಪಾಯಿ ನಷ್ಟ ಉಂಟು ಮಾಡುತ್ತಿರುವ ಹಲವು ಪ್ರಕರಣಗಳು ವರದಿಯಾಗಿವೆ. ಈ ರೀತಿಯ ವಂಚನೆಯಿಂದಾಗಿ ಕಾರ್ಖಾನೆ ಮಾಲೀಕರು ಅಕ್ರಮವಾಗಿ ಲಾಭ ಗಳಿಸುತ್ತಿದ್ದರೆ, ಬೆವರು ಸುರಿಸಿ ದುಡಿದ ರೈತ ಬೀದಿಗೆ ಬೀಳುವಂತಾಗಿದೆ.
ತೂಕದಲ್ಲಿನ ವಂಚನೆಯ ವಿರುದ್ಧ ರಾಜ್ಯದ ಹಲವೆಡೆ ರೈತರು ನಿರಂತರವಾಗಿ ಪ್ರತಿಭಟನೆ ನಡೆಸುತ್ತಾರೆ. ಬೆಳಗಾವಿ, ಬಾಗಲಕೋಟೆ, ಮಂಡ್ಯ ಸೇರಿದಂತೆ ಪ್ರಮುಖ ಕಬ್ಬು ಬೆಳೆಯುವ ಜಿಲ್ಲೆಗಳಲ್ಲಿ ರೈತರು ಬೀದಿಗಿಳಿದು ಹೋರಾಟ ನಡೆಸಿ ಸರ್ಕಾರ ತಕ್ಷಣ ಮಧ್ಯಪ್ರವೇಶಿಸಿ ನ್ಯಾಯ ಒದಗಿಸಬೇಕು ಎಂಬುದು ರೈತರ ಆಗ್ರಹವಾಗಿದೆ.
ಕಬ್ಬಿನ ಇಳುವರಿ ಆಧರಿಸಿ ನ್ಯಾಯಸಮ್ಮತ ಮತ್ತು ಲಾಭದಾಯಕ ಬೆಲೆಯನ್ನು (ಎಫ್‌ಆರ್‌ಪಿ) ಕೇಂದ್ರ ಸರ್ಕಾರ ಘೋಷಣೆ ಮಾಡುತ್ತದೆ. ಅದರಂತೆ ಆಯಾ ಸಕ್ಕರೆ ಕಾರ್ಖಾನೆಗಳು ತಮ್ಮ ಕಾರ್ಖಾನೆಯ ಸಕ್ಕರೆ ಇಳುವರಿ ಆಧರಿಸಿ ರೈತರಿಗೆ ಅವರು ಪೂರೈಸಿದ ಕಬ್ಬಿಗೆ ದರ ಪಾವತಿಸಬೇಕು. ಆದರೆ, ಕೆಲ ಸಕ್ಕರೆ ಕಾರ್ಖಾನೆಗಳು ಸಕ್ಕರೆ ಇಳುವರಿಯನ್ನು ಕಡಿಮೆ ತೋರಿಸುವ ಮೂಲಕ ಕಬ್ಬಿನ ದರವನ್ನು ಕಡಿಮೆ ಪಾವತಿಸುತ್ತಿವೆ ಎಂಬುದು ರೈತರ ಆರೋಪವಾಗಿದೆ.
ಸಕ್ಕರೆ ಇಳುವರಿಯನ್ನು ವಾಸ್ತವಕ್ಕಿಂತ ಕಡಿಮೆ ತೋರಿಸಿ ರೈತರಿಗೆ ಬಿಲ್‌ನಲ್ಲಿವಂಚನೆ ಮಾಡುತ್ತಿರುವುದು ಕೆಲ ವರ್ಷಗಳಿಂದ ರಾಜ್ಯದಲ್ಲಿ ನಡೆಯುತ್ತಿದೆ. ಕೆಲ ಸಕ್ಕರೆ ಕಾರ್ಖಾನೆಗಳು ಶೇ.1ರಿಂದ 2ರಷ್ಟು ಕಡಿಮೆ ಇಳುವರಿ ತೋರಿಸುತ್ತಿವೆ. ಇಂತಹ ಮೋಸ ತಡೆಯಲು ಉತ್ತರ ಪ್ರದೇಶದ ಮಾದರಿಯಲ್ಲಿ ಸಕ್ಕರೆ ಕಾರ್ಖಾನೆಗಳ ಎಲ್ಲ ಲೆಕ್ಕಗಳನ್ನು ಡಿಜಿಟಲೈಸ್ ಮಾಡಬೇಕು ಎಂದು ಕಬ್ಬು ಬೆಳೆಗಾರರ ಒತ್ತಾಯವಾಗಿದೆ.
ಭರವಸೆ ನೀಡಿದರೂ ಅನುಷ್ಟಾನಗೊಳಿಸದ ಸರ್ಕಾರ
ತೂಕದಲ್ಲಿ ಮಾಡುವ ಮೋಸವನ್ನು ತಡೆಯುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ರಾಜ್ಯದಲ್ಲಿನ 74 ಸಕ್ಕರೆ ಕಾರ್ಖಾನೆಗಳಿಗೆ ಸರ್ಕಾರದಿಂದಲೇ ತೂಕದ ಯಂತ್ರ ಅಳವಡಿಸುವ ಭರವಸೆ ನೀಡಿತ್ತು. ಆದರೆ ಈವರೆಗೂ ಇಂತಹ ಯಾವುದೇ ಕ್ರಮ ಕೈಗೊಂಡಿಲ್ಲ. ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ತೂಕದ ಯಂತ್ರ ಅಳವಡಿಸುವ ಬಗ್ಗೆ ಆಶ್ವಾಸನೆ ನೀಡುತ್ತದೆ. ಆದರೆ ಯಾವುದೇ ಸರ್ಕಾರಗಳು ಮಾತ್ರ ಕ್ರಮ ಕೈಗೊಂಡಿಲ್ಲ. ರೈತರ ಪರವಾಗಿ ಪ್ರತಿಪಕ್ಷದಲ್ಲಿರುವಾಗ ದನಿ ಎತ್ತುವ ರಾಜಕೀಯ ಪಕ್ಷಗಳು ಆಡಳಿತಕ್ಕೆ ಬರುತ್ತಿದ್ದಂತೆ ಮರೆತುಬಿಡುತ್ತವೆ. ಹೀಗಾಗಿ ರೈತರ ಸಮಸ್ಯೆಗಳು ಮಾತ್ರ ಬಗೆಹರಿಯದೆ ಹಾಗೆಯೇ ಮುಂದುವರಿಯುತ್ತಿವೆ.
ಸಕ್ಕರೆ ಸಚಿವ ಶಿವಾನಂದ ಪಾಟೀಲ್ ಅವರು ಈ ಹಿಂದೆ ಸಕ್ಕರೆ ಕಾರ್ಖಾನೆಗಳಲ್ಲಿ ರೈತರು ನೀಡುವ ಕಬ್ಬಿನ ತೂಕದಲ್ಲಿ ಮೋಸವಾಗುತ್ತಿದೆ ಎಂಬ ದೂರುಗಳಿವೆ. ಹೀಗಾಗಿ ರಾಜ್ಯದಲ್ಲಿನ ಎಲ್ಲ 74 ಸಕ್ಕರೆ ಕಾರ್ಖಾನೆಗಳಿಗೆ ಸರ್ಕಾರದಿಂದಲೇ ತೂಕದ ಯಂತ್ರ ಅಳವಡಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ. ಸಕ್ಕರೆ ಕಾರ್ಖಾನೆಗಳ ಕುರಿತಂತೆ ಸಾಕಷ್ಟು ದೂರುಗಳು ಬರುತ್ತಿವೆ. ಸಕ್ಕರೆ ಕಾರ್ಖಾನೆಗಳಲ್ಲಿ ರೈತರು ನೀಡುವ ಕಬ್ಬಿನ ತೂಕದಲ್ಲಿ ಸಾಕಷ್ಟುವ್ಯತ್ಯಾಸ ಬರುತ್ತಿದೆ ಎಂಬ ದೂರುಗಳಿವೆ. ಅದನ್ನು ನಿವಾರಿಸಲು ಎಲ್ಲ ಕಾರ್ಖಾನೆಗಳಿಗೆ ಸಕ್ಕರೆ ಇಲಾಖೆ ವತಿಯಿಂದಲೇ ತೂಕದ ಯಂತ್ರಗಳ ಅಳವಡಿಕೆಗೆ ಚಿಂತನೆ ನಡೆಸಲಾಗಿದೆ. ಶೀಘ್ರದಲ್ಲಿ ಈ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿ, ಹಣಕಾಸಿನ ಲಭ್ಯತೆಯನ್ನಾಧರಿಸಿ ತೂಕದ ಯಂತ್ರಗಳನ್ನು ಅಳವಡಿಸಲಾಗುವುದು ಎಂದು ಅಶ್ವಾಸನೆ ನೀಡಿದ್ದರು. ಆದರೆ ಈವರೆಗೂ ಅನುಷ್ಠಾನಕ್ಕೆ ಮಾತ್ರ ಬಂದಿಲ್ಲ. ಈ ಬಗ್ಗೆ ರೈತರು ಆಕ್ರೋಶ ವ್ಯಕ್ತಪಡಿಸಿದ್ದು, ತಕ್ಷಣವೇ ಈ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಕೆಲವು ಕಾರ್ಖಾನೆಗಳ ಮಾಲೀಕರು ಮಾಡುವ ಮೋಸದ ಕುರಿತು 'ದ ಫೆಡರಲ್ ಕರ್ನಾಟಕ' ಜತೆ ಮಾತನಾಡಿದ ರೈತ ಮುಖಂಡ ಮಹಾಂತೇಶ್, ಕಬ್ಬುಗಳ ತೂಕದ ಮೋಸ ವಿಚಾರದಲ್ಲಿ ರೈತರಿಗೆ ನ್ಯಾಯ ಸಿಗುವ ಸಾಧ್ಯತೆ ಕಡಿಮೆ ಇದೆ. ಕಬ್ಬಿನ ತೂಕದಲ್ಲಾಗುವ ಮೋಸ ತಡೆಯುವುದು ಕಬ್ಬು ಬೆಳೆಗಾರರ ಹಲವು ವರ್ಷಗಳ ಬೇಡಿಕೆಯಾಗಿದೆ. ಸರ್ಕಾರವು ಕಾರ್ಖಾನೆ ಬಳಿ ತೂಕದ ಯಂತ್ರ ಇಡುವ ಅಶ್ವಾಸನೆ ನೀಡುತ್ತಲೇ ಇದೆ. ಇದು ಕಾಂಗ್ರೆಸ್ ಸರ್ಕಾರ ಮಾತ್ರವಲ್ಲ, ಬಿಜೆಪಿ ಮತ್ತು ಜೆಡಿಎಸ್ ಅಧಿಕಾರವಧಿಯಲ್ಲಿಯೂ ಭರವಸೆ ನೀಡಲಾಗಿತ್ತು. ಆದರೆ ಯಾವುದೇ ಸರ್ಕಾರಗಳು ಮಾತ್ರ ಭರವಸೆಯನ್ನು ಈಡೇರಿಸಿಲ್ಲ. ರೈತರು ಕಬ್ಬು ಕಟಾವು ಮಾಡಿದ ಬಳಿಕ ಮಾಡುವ ತೂಕಕ್ಕೂ, ಕಾರ್ಖಾನೆಗಳಿಗೆ ಬಂದಾಗ ತೋರಿಸುವ ತೂಕಕ್ಕೂ ವ್ಯತ್ಯಾಸ ಕಂಡುಬರುತ್ತದೆ. ಇದರಿಂದ ರೈತರಿಗೆ ಕ್ವಿಂಟಾಲ್‌ಗೆ ಸಾವಿರಾರು ರೂ. ಮೋಸವಾಗುತ್ತಿದೆ. ಈ ಬಗ್ಗೆ ಸರ್ಕಾರಗಳು ಈಗಾಲಾದರೂ ಎಚ್ಚೆತ್ತು, ಸಕ್ಕರೆ ಕಾರ್ಖಾನೆಗಳು ಮಾಡುವ ವಂಚನೆಯನ್ನು ತಡೆಯಬೇಕು. ರೈತರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಕಬ್ಬು ಬೆಳೆಗಾರರ ಸೊಸೈಟಿಗಳಲ್ಲಿ ಬಡ್ಡಿ ಅವ್ಯವಹಾರ
ಕಬ್ಬು ಬೆಳೆಗಾರರು ಬೆಲೆ ಕುಸಿತ, ತೂಕದಲ್ಲಿ ಮೋಸ ಮತ್ತು ಬಾಕಿ ಪಾವತಿ ವಿಳಂಬದಂತಹ ಸಮಸ್ಯೆಗಳಿಂದ ತತ್ತರಿಸುತ್ತಿರುವಾಗ, ಸಕ್ಕರೆ ಕಾರ್ಖಾನೆಗಳು ಮತ್ತು ಅವುಗಳೊಂದಿಗೆ ನಂಟು ಹೊಂದಿರುವ ಸೊಸೈಟಿಗಳು ನಡೆಸುತ್ತಿರುವ ಬಡ್ಡಿ ದಂಧೆಯು ರೈತರನ್ನು ಮತ್ತಷ್ಟು ಶೋಷಣೆಗೆ ಗುರಿ ಮಾಡುತ್ತಿವೆ. ಕಬ್ಬು ಪೂರೈಸಿದ ಹಣವನ್ನು ನಿಗದಿತ ಸಮಯದಲ್ಲಿ ಪಾವತಿಸದೆ, ಅದಕ್ಕೆ ನೀಡಬೇಕಾದ ಬಡ್ಡಿಯಲ್ಲೂ ವಂಚನೆ ಎಸಗಲಾಗುತ್ತಿದ್ದು, ಇದು ರೈತರ ಆರ್ಥಿಕ ಸಂಕಷ್ಟವನ್ನು ದ್ವಿಗುಣಗೊಳಿಸಿದೆ.
ಕಬ್ಬು ನಿಯಂತ್ರಣ (ತಿದ್ದುಪಡಿ) ಕಾಯ್ದೆಯ ಪ್ರಕಾರ, ರೈತರಿಂದ ಕಬ್ಬು ಪಡೆದ 14 ದಿನಗಳೊಳಗೆ ಸಕ್ಕರೆ ಕಾರ್ಖಾನೆಗಳು ಹಣ ಪಾವತಿಸಬೇಕು. ಒಂದು ವೇಳೆ ಈ ಅವಧಿಯಲ್ಲಿ ಹಣ ಪಾವತಿಸಲು ವಿಫಲವಾದರೆ, ವಾರ್ಷಿಕ ಶೇ.15ರಷ್ಟು ಬಡ್ಡಿ ಸಹಿತ ಹಣವನ್ನು ಪಾವತಿಸಬೇಕು ಎಂಬ ಸ್ಪಷ್ಟ ನಿಯಮವಿದೆ. ಆದರೆ, ರಾಜ್ಯದ ಬಹುತೇಕ ಸಕ್ಕರೆ ಕಾರ್ಖಾನೆಗಳು ಈ ನಿಯಮವನ್ನು ಗಾಳಿಗೆ ತೂರಿವೆ. ತಿಂಗಳುಗಟ್ಟಲೆ, ಕೆಲವೊಮ್ಮೆ ವರ್ಷಗಟ್ಟಲೆ ರೈತರ ಹಣವನ್ನು ಬಾಕಿ ಉಳಿಸಿಕೊಳ್ಳುವ ಕಾರ್ಖಾನೆಗಳು, ನಂತರ ಹಣ ಪಾವತಿಸುವಾಗ ಬಡ್ಡಿಯನ್ನು ಪಾವತಿಸುವುದೇ ಇಲ್ಲ. ಕೆಲವು ಕಾರ್ಖಾನೆಗಳು ಒತ್ತಡಕ್ಕೆ ಮಣಿದು ಬಡ್ಡಿ ನೀಡಿದರೂ, ಅದು ನಿಯಮಾನುಸಾರ ಶೇ.15ರಷ್ಟು ಇರುವುದಿಲ್ಲ. ಬದಲಾಗಿ, ತಮ್ಮಿಷ್ಟದಂತೆ ಕಡಿಮೆ ಬಡ್ಡಿದರವನ್ನು ಲೆಕ್ಕ ಹಾಕಿ ರೈತರಿಗೆ ವಂಚಿಸಲಾಗುತ್ತಿದೆ. ಈ ಮೂಲಕ ಕಾರ್ಖಾನೆಗಳು ಕೋಟ್ಯಂತರ ರೂಪಾಯಿಗಳನ್ನು ಅಕ್ರಮವಾಗಿ ಉಳಿಸಿಕೊಳ್ಳುತ್ತಿವೆ ಎಂದು ಹೇಳಲಾಗಿದೆ.
ರೈತರಿಗೆ ನಿಗದಿತ ಅವಧಿಯಲ್ಲಿ ನೀಡಬೇಕಾದ ಹಣ ನೀಡದ ಕಾರ್ಖಾನೆಗಳ ಸೊಸೈಟಿಗಳು ಬ್ಯಾಂಕ್‌ನಲ್ಲಿಯೇ ಹಾಗೆಯೇ ಇಟ್ಟು ಬಡ್ಡಿಯನ್ನು ಪಡೆದುಕೊಳ್ಳುತ್ತೇವೆ. ಕೆಲ ತಿಂಗಳುಗಳ ಅಥವಾ ವರ್ಷದವರೆಗಿನ ಬಡ್ಡಿಯನ್ನು ಪಡೆಯಲು ರೈತರಿಗೆ ಕಾರ್ಖಾನೆಗಳು ಹಣ ಪಾವತಿಸುವುದಿಲ್ಲ. ಈ ಬಗ್ಗೆ ಸರ್ಕಾರದಿಂದ ಕಟ್ಟುನಿಟ್ಟಿನ ಸೂಚನೆ ಹೋಗಬೇಕು. ಆದರೆ, ಸರ್ಕಾರದಲ್ಲಿನ ಪ್ರಭಾವಿ ನಾಯಕರೇ ಸಕ್ಕರೆ ಮಾಲೀಕರಾಗಿರುವ ಕಾರಣ ರೈತರಿಗೆ ಸರಿಯಾದ ನ್ಯಾಯ ಸಿಗದಂತಾಗಿದೆ. ಈ ನಡುವೆ, ರೈತರ ಮತ್ತು ಕಾರ್ಖಾನೆಗಳು ಅವಲಂಬಿತವಾಗಿಯೂ ಸಹ ಆಗಿವೆ. ರೈತರು ಬೆಳೆದ ಕಬ್ಬು ಕಾರ್ಖಾನೆಗಳಿಗೆ ಅನಿವಾರ್ಯ ಮತ್ತು ರೈತರಿಗೆ ಬೆಳೆದ ಕಬ್ಬು ಮಾರಾಟ ಮಾಡಲು ಕಾರ್ಖಾನೆಗಳು ಅನಿವಾರ್ಯ. ಹೀಗಾಗಿ ಏನೇ ಪ್ರತಿಭಟನೆಗಳು ನಡೆದರೂ ಹಗ್ಗ-ಜಗ್ಗಾಟದ ನಡುವೆ ವ್ಯವಹಾರ ನಡೆಸಬೇಕಾಗುತ್ತದೆ ಎಂದು ಹೇಳಲಾಗಿದೆ.
ಸಾಲದ ಮೇಲೂ ಶೋಷಣೆ
ಸರ್ಕಾರ ಕಾರ್ಖಾನೆಗಳು ರೈತರಿಗೆ ಸಾಲ ನೀಡಿ ಅಲ್ಲಿಯೂ ಶೋಷಣೆ ಮಾಡಲಾಗುತ್ತದೆ ಎಂಬ ಆರೋಪಗಳು ಕೇಳಿಬಂದಿವೆ.
ಸಕ್ಕರೆ ಕಾರ್ಖಾನೆಗಳು ಮತ್ತು ಅವುಗಳ ಸಹವರ್ತಿ ಸೊಸೈಟಿಗಳು ರೈತರಿಗೆ ಕಬ್ಬು ಬೆಳೆಯಲು ಮುಂಗಡವಾಗಿ ಸಾಲ ನೀಡುತ್ತವೆ. ಈ ಸಾಲದ ಮೇಲೆ ಶೇ.18 ರಿಂದ ಶೇ.24ರಷ್ಟು ವಿಪರೀತ ಬಡ್ಡಿಯನ್ನು ವಿಧಿಸಲಾಗುತ್ತದೆ. ರೈತರು ಕಬ್ಬು ಪೂರೈಸಿದಾಗ, ಅವರಿಗೆ ಬರಬೇಕಾದ ಹಣದಲ್ಲಿ ಈ ಸಾಲ ಮತ್ತು ಅದರ ಮೇಲಿನ ಅಗಾಧ ಬಡ್ಡಿಯನ್ನು ಕಡಿತಗೊಳಿಸಲಾಗುತ್ತದೆ. ರೈತರಿಗೆ ಕೊಡಬೇಕಾದ ಹಣಕ್ಕೆ ಕಾನೂನುಬದ್ಧ ಬಡ್ಡಿಯನ್ನು ನೀಡದ ಕಾರ್ಖಾನೆಗಳು, ತಾವು ಕೊಟ್ಟ ಸಾಲಕ್ಕೆ ಮಾತ್ರ ದುಬಾರಿ ಬಡ್ಡಿ ವಸೂಲಿ ಮಾಡುತ್ತವೆ. ಇದು ರೈತರನ್ನು ಸುಲಿಗೆ ಮಾಡುವ ವ್ಯವಸ್ಥಿತ ಜಾಲವಾಗಿ ಮಾರ್ಪಟ್ಟಿದೆ ಎಂದು ತಿಳಿದುಬಂದಿದೆ.
ದ ಫೆಡರಲ್ ಕರ್ನಾಟಕದ ಜತೆ ಮಾತನಾಡಿದ ರೈತ ಶ್ರೀಶೈಲ, ನಾವು ಬೆಳೆದ ಕಬ್ಬಿನ ಹಣವನ್ನು ಸಕಾಲದಲ್ಲಿ ನೀಡುವುದಿಲ್ಲ. ತಿಂಗಳುಗಟ್ಟಲೆ ಸತಾಯಿಸಲಾಗುತ್ತದೆ. ಕಾರ್ಖಾನೆಗಳ ಸೊಸೈಟಿಯಿಂದ ಬೀಜ, ಗೊಬ್ಬರಕ್ಕೆ ಸಾಲ ತಂದರೆ, ಅದಕ್ಕೆ ಚಕ್ರಬಡ್ಡಿ ಹಾಕಿ ವಸೂಲಿ ಮಾಡಲಾಗುತ್ತದೆ. ನಮ್ಮ ದುಡಿಮೆಯನ್ನು ಹೀಗೆ ಲೂಟಿ ಮಾಡಿದರೆ ನಾವು ಬದುಕುವುದು ಹೇಗೆ? ಎಂದು ಅಳಲು ತೋಡಿಕೊಂಡರು.
ಸರ್ಕಾರವು ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಿದೆ. ಬಾಕಿ ಪಾವತಿಸದ ಮತ್ತು ಬಡ್ಡಿ ವಂಚನೆ ಮಾಡುವ ಕಾರ್ಖಾನೆಗಳ ಪರವಾನಗಿಯನ್ನು ರದ್ದುಗೊಳಿಸುವಂತಹ ಕಠಿಣ ಕ್ರಮಗಳಿಗೆ ಮುಂದಾಗಬೇಕು. ಪ್ರತಿ ಕಾರ್ಖಾನೆಯಲ್ಲೂ ಪಾರದರ್ಶಕ ಲೆಕ್ಕಪತ್ರ ವ್ಯವಸ್ಥೆಯನ್ನು ಜಾರಿಗೆ ತಂದು, ರೈತರಿಗೆ ಆಗುತ್ತಿರುವ ಅನ್ಯಾಯವನ್ನು ತಡೆಯಲು ತಕ್ಷಣವೇ ಮುಂದಾಗಬೇಕಿದೆ. ಇಲ್ಲದಿದ್ದರೆ, ಕಬ್ಬು ಬೆಳೆದು ಸಿಹಿನೀಡುವ ರೈತನ ಬದುಕು ಮತ್ತಷ್ಟು ಕಹಿಯಾಗುವುದರಲ್ಲಿ ಸಂಶಯವಿಲ್ಲ.

