ಭಾರತದ ಜಲ ಬಿಕ್ಕಟ್ಟು Part-2:ನೀರಿನ ಲಭ್ಯತೆಯಿಂದ ಅಸಮಾನತೆ ಸೃಷ್ಟಿ!

ಈಗಾಗಲೇ ಭಾರತದ ಕೆಲವು ಭಾಗಗಳಲ್ಲಿ ನೀರು ಬರಿದಾಗತೊಡಗಿದೆ. ನಾನಾ ಪ್ರದೇಶಗಳಲ್ಲಿ ಬರಗಾಲ ಮತ್ತು ಪ್ರವಾಹಗಳು ಏಕಕಾಲದಲ್ಲಿ ಸಂಭವಿಸುವ ವಿರೋಧಾಭಾಸವು ಕೇವಲ ಭವಿಷ್ಯದ ಮುನ್ಸೂಚನೆಯಲ್ಲ, ಅದು ಕಠೋರ ವಾಸ್ತವ.


ಭಾರತದ ಜಲ ಬಿಕ್ಕಟ್ಟು Part-2:ನೀರಿನ ಲಭ್ಯತೆಯಿಂದ ಅಸಮಾನತೆ ಸೃಷ್ಟಿ!
x

2 ದಿನಗಳ ಕಾಲ ನೀರಿನ ಸರಬರಾಜು ವ್ಯತ್ಯಯವಾಗಲಿದೆ. 

Click the Play button to hear this message in audio format

ಸಮಾಜದಲ್ಲಿ ನೀರಿನ ಲಭ್ಯತೆಯೇ ಅಸಮಾನತೆಯ ಗುರುತಾಗಿ ಬದಲಾಗಿ ಹೋಗಿದೆ. ಶ್ರೀಮಂತ ವರ್ಗದವರು ಖಾಸಗಿ ಬೋರ್‌ವೆಲ್‌ಗಳನ್ನು ಮತ್ತು ಸಬ್ಸಿಡಿ ದರದ ಪೈಪ್ಲೈನ್ ಸಂಪರ್ಕಗಳನ್ನು ಹೊಂದಿದ್ದರೆ, ಬಡ ವರ್ಗದ ಜನರು ವಾಸಿಸುವ ಪ್ರದೇಶಗಳು ಅಸ್ತವ್ಯಸ್ತ ಹಾಗೂ ಅಸುರಕ್ಷಿತ ನೀರಿನ ಪೂರೈಕೆಯ ಮೇಲೆ ಅವಲಂಬಿತವಾಗಬೇಕಿದೆ. ಈ ಅಸಮಾನ ವಿತರಣೆಯು ಕೇವಲ ತಾಂತ್ರಿಕ ವೈಫಲ್ಯವಲ್ಲ; ಬದಲಾಗಿ, ನೀರನ್ನು ಹೇಗೆ ಮೌಲ್ಯೀಕರಿಸಲಾಗುತ್ತದೆ ಮತ್ತು ಹಂಚಿಕೆ ಮಾಡಲಾಗುತ್ತದೆ ಎಂಬುದರಲ್ಲಿ ಇರುವ ಆಳವಾದ ಸಾಮಾಜಿಕ-ರಾಜಕೀಯ ಬಿರುಕುಗಳನ್ನು ಇದು ಪ್ರತಿಬಿಂಬಿಸುತ್ತದೆ.

'ಶೇಡ್ಸ್ ಆಫ್ ಬ್ಲೂ' ಕೃತಿಯು ಪರಿಸರದ ಇತಿಹಾಸದಷ್ಟೇ ಮಾನವ ಕಥೆಗಳಿಗೂ ಪ್ರಾಮುಖ್ಯತೆ ನೀಡಿದ್ದರೂ, ಅದರ ಪ್ರಬಂಧಗಳು ಒಂದು ಮುಖ್ಯ ಅಂಶವನ್ನು ಒತ್ತಿಹೇಳುತ್ತವೆ: ನಗರಗಳ ನೀರಿನ ಅಭಾವವನ್ನು ಸಾಮಾಜಿಕ ಲಭ್ಯತೆ ಮತ್ತು ಆಡಳಿತಾತ್ಮಕ ವೈಫಲ್ಯಗಳಿಂದ ಬೇರ್ಪಡಿಸಲು ಸಾಧ್ಯವಿಲ್ಲ. ಆದ್ದರಿಂದ, ನಗರಗಳಲ್ಲಿನ ಬಿಕ್ಕಟ್ಟು ಕೇವಲ ನೀರಿನ ಪ್ರಮಾಣ ಕಡಿಮೆಯಾಗಿರುವುದರಿಂದ ಮಾತ್ರ ಅಲ್ಲ; ಬದಲಾಗಿ, ನೀರಿನ ಸಾಮಾಜಿಕ ಮತ್ತು ಪರಿಸರ ಸಂಬಂಧಗಳನ್ನು ಛಿದ್ರಗೊಳಿಸಿರುವ ವ್ಯವಸ್ಥೆಗಳ ಬಗ್ಗೆಯೂ ಬೊಟ್ಟುಮಾಡುತ್ತದೆ.

ಈಗಾಗಲೇ ಭಾರತದ ಕೆಲವು ಭಾಗಗಳಲ್ಲಿ ನೀರು ಬರಿದಾಗತೊಡಗಿದೆ. ನಾನಾ ಪ್ರದೇಶಗಳಲ್ಲಿ ಬರಗಾಲ ಮತ್ತು ಪ್ರವಾಹಗಳು ಏಕಕಾಲದಲ್ಲಿ ಸಂಭವಿಸುವ ವಿರೋಧಾಭಾಸವು ಕೇವಲ ಭವಿಷ್ಯದ ಮುನ್ಸೂಚನೆಯಲ್ಲ, ಅದು ಇಂದಿನ ಕಠೋರ ವಾಸ್ತವವಾಗಿದೆ. ಅಂದರೆ, ಕೇವಲ ಮೂಲಸೌಕರ್ಯಗಳ ಮೇಲೆ ಅವಲಂಬಿತವಾಗಿರುವ ದೊಡ್ಡ ಅಣೆಕಟ್ಟುಗಳು, ಕಾಲುವೆ ವ್ಯವಸ್ಥೆಗಳು, ಉದ್ದನೆಯ ಕೊಳವೆಮಾರ್ಗದಂತಹ ತಂತ್ರಗಳು — ನೀರಿನ ಮಾದರಿಗಳು ಅಸ್ಥಿರವಾಗಿರುವ ಮತ್ತು ವಿಪರೀತ ಹವಾಮಾನ ವೈಪರೀತ್ಯಗಳು ಸಾಮಾನ್ಯವಾಗುತ್ತಿರುವ ಇಂದಿನ ಜಗತ್ತಿಗೆ ಸಂಪೂರ್ಣವಾಗಿ ಅಸಮರ್ಪಕವಾಗಿವೆ ಎನ್ನುವ ಮೃದುಲಾ ರಮೇಶ್ ಅವರು ಹವಾಮಾನ ಬದಲಾವಣೆಯು ನೀರಿನ ಮೇಲೆ ಬೀರುವ ಪರಿಣಾಮವು ಕೇವಲ ಒಂದು ಸಿದ್ಧಾಂತವಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಬೇಕು ಎಂದು ಒತ್ತಿಹೇಳುತ್ತಾರೆ;

ಏರುಪೇರಾದ ಅಂತರ್ಜಲ ಮರುಪೂರಣ ಚಕ್ರ

ಇದಲ್ಲದೆ, ಹವಾಮಾನ ಬದಲಾವಣೆಯು ಮಾನವ ವ್ಯವಸ್ಥೆಗಳ ಮೇಲೂ ಪರಿಣಾಮ ಬೀರುತ್ತಿದೆ: ಹಿಮಾಲಯದ ಹಿಮನದಿಗಳು ಕರಗುತ್ತಿರುವುದರಿಂದ ನದಿಗಳ ಹರಿವಿನ ಮೇಲೂ ಪರಿಣಾಮ ಬೀರುತ್ತಿದೆ, ಹೆಚ್ಚುತ್ತಿರುವ ತಾಪಮಾನವು ಆವಿಯಾಗುವ ಪ್ರಕ್ರಿಯೆ ಮತ್ತು ನೀರಿನ ಬೇಡಿಕೆಯನ್ನು ಹೆಚ್ಚಿಸುತ್ತಿದೆ ಮತ್ತು ಬದಲಾಗುತ್ತಿರುವ ಮಳೆಯ ಮಾದರಿಯು ಬೆಳೆಗಳ ಬಿತ್ತನೆ ಹಂಗಾಮು ಹಾಗೂ ಅಂತರ್ಜಲ ಮರುಪೂರಣದ ಚಕ್ರವನ್ನು ಏರುಪೇರು ಮಾಡುತ್ತಿದೆ. ಈ ಪರಿಸರ ಸಂಬಂಧಿತ ಒತ್ತಡಗಳು ನೀರಿನ ಬಿಕ್ಕಟ್ಟನ್ನು ತೀವ್ರಗೊಳಿಸುತ್ತಿವೆ ಮತ್ತು ಸಾಮಾಜಿಕ-ಆರ್ಥಿಕ ದೌರ್ಬಲ್ಯವನ್ನು ಮತ್ತಷ್ಟು ಹೆಚ್ಚಿಸುವಂತೆ ಮಾಡಿದೆ. ಅದರಲ್ಲೀ ವಿಶೇಷವಾಗಿ ರೈತರು ಮತ್ತು ಅಂಚಿನಲ್ಲಿರುವ ಸಮುದಾಯಗಳು ಇದಕ್ಕೆ ಒಳಗಾಗುತ್ತಿದ್ದಾರ. ಹವಾಮಾನ ಬದಲಾವಣೆಯು ಇಂದು ಕೇವಲ ಭಾರತದ ಐತಿಹಾಸಿಕ ಜಲವಿಜ್ಞಾನವನ್ನು ಮರುರೂಪಿಸುತ್ತಿಲ್ಲ, ಬದಲಾಗಿ ಅದು ಆಡಳಿತದ ಮುಂದಿರುವ ಸವಾಲುಗಳನ್ನು ಮತ್ತಷ್ಟು ಜಟಿಲಗೊಳಿಸುತ್ತಿದೆ.

ಆಡಳಿತ, ಅಸಮಾನತೆ ಮತ್ತು ನೀರಿನ ರಾಜಕೀಯ

ಜಲ ಬಿಕ್ಕಟ್ಟನ್ನು ಮೂಲಭೂತವಾಗಿ ಒಂದು ರಾಜಕೀಯ ಬಿಕ್ಕಟ್ಟು ಎನ್ನುವುದೇ ಸೂಕ್ತ. ವಸಾಹತುಶಾಹಿ ಮತ್ತು ಉದಾರೀಕರಣದ ನಂತರದ ಆಡಳಿತದ ಮಾದರಿಗಳು ಜಲ ನಿರ್ವಹಣೆಯನ್ನು ಒಂದು ಕೇಂದ್ರೀಕೃತ ವ್ಯವಸ್ಥೆಯೊಳಗೆ ತರಲು ಪ್ರಯತ್ನಿಸಿವೆ, ಇದು ಹೆಚ್ಚಾಗಿ ಸ್ಥಳೀಯ ಜನರ ಧ್ವನಿ ಮತ್ತು ಸಮುದಾಯದ ಉಸ್ತುವಾರಿಯನ್ನು ಮೂಲೆಗುಂಪು ಮಾಡಿದೆ. ಸಮಕಾಲೀನ ಸುಧಾರಣೆಗಳು ದಕ್ಷತೆಯನ್ನು ಹುಡುಕುತ್ತಿದ್ದರೂ, ಆಧುನೀಕರಣದ ಹೆಸರಿನಲ್ಲಿ ಕೆಲವೊಮ್ಮೆ ಸರ್ಕಾರದ ನಿಯಂತ್ರಣವನ್ನೇ ಬಲಪಡಿಸಿವೆ. ಇದು ನೀರಿನ ಲಭ್ಯತೆ ಮತ್ತು ನಿರ್ವಹಣೆಯಲ್ಲಿರುವ ಅಸಮಾನತೆಗಳನ್ನು ಎತ್ತಿ ತೋರಿಸುತ್ತದೆ.

ಭಾರತದ ಸಂವಿಧಾನ ಮತ್ತು ಕಾನೂನು ಚೌಕಟ್ಟುಗಳು ನೀರಿನ ಜವಾಬ್ದಾರಿಗಳನ್ನು ನೀರಾವರಿ, ನಗರ ಪೂರೈಕೆ, ಕೃಷಿ ಮತ್ತು ಅಂತಾರಾಜ್ಯ ನದಿಗಳೆಂಬ ವಿವಿಧ ಹಂತಗಳಲ್ಲಿ ಹಂಚಿಕೆ ಮಾಡಿವೆ.

ಆದರೆ ಇವುಗಳ ನಡುವೆ ಸಮನ್ವಯವೇ ಇಲ್ಲದಂತಾಗಿದೆ. ನೀರಿನ ಕುರಿತಾದ ಚರ್ಚೆಗಳು ಹೆಚ್ಚಾಗಿ ಇಂಜಿನಿಯರಿಂಗ್ ಪರಿಹಾರಗಳಿಂದಲೇ ತುಂಬಿರುತ್ತವೆಯೇ ಹೊರತು, ನೀರನ್ನು ಒಂದು ಸಾರ್ವಜನಿಕ ಆಸ್ತಿ ಮತ್ತು ಮಾನವ ಹಕ್ಕು ಎಂದು ಗುರುತಿಸುವ, ಎಲ್ಲರನ್ನೂ ಒಳಗೊಳ್ಳುವ ಆಡಳಿತವನ್ನು ಹೊಂದಿಲ್ಲ.

ನಗರ/ಗ್ರಾಮೀಣ, ಜಾತಿ, ಲಿಂಗ ಅಥವಾ ವರ್ಗದ ಅಸಮಾನತೆಗಳು ನೀರಿನ ಅನುಭವ ಮತ್ತು ಹಂಚಿಕೆಯ ಸಂಘರ್ಷವನ್ನು ಹೇಗೆ ರೂಪಿಸುತ್ತವೆ ಎಂಬುದನ್ನು 'ವಾಟರ್ಶೆಡ್' ಮತ್ತು 'ಶೇಡ್ಸ್ ಆಫ್ ಬ್ಲೂ' ಕೃತಿಗಳು ಸಶಕ್ತವಾಗಿ ಬಿಂಬಿಸುವ ಕೆಲಸ ಮಾಡುತ್ತವೆ. ಹಿಂದೆ ಸಾಮಾಜಿಕ ಒಪ್ಪಂದಗಳ ಆಧಾರವಾಗಿದ್ದ ಸಾಮೂಹಿಕ ಜಲಮೂಲಗಳು ಇಂದು ಅವನತಿ ಹೊಂದಿವೆ. ಅವುಗಳ ಜಾಗದಲ್ಲಿ ಈಗ 'ಸರಕು ತರ್ಕ' ಜಾಗ ಪಡೆದಿದ್ದು, ನೀರಿನ ವಿತರಣೆಯು ಆರ್ಥಿಕ ಮತ್ತು ರಾಜಕೀಯ ಪ್ರಭಾವಕ್ಕೆ ತಕ್ಕಂತೆ ನಡೆಯುತ್ತಿದೆ.

ಈ ಲೇಖಕರು ಸೂಚಿಸುವಂತೆ, ನಿಜವಾದ ಸುಧಾರಣೆಗೆ ರಾಜಕೀಯ ಆದ್ಯತೆಗಳ ಸಮತೋಲನ ಅಗತ್ಯವಿದೆ. ಇದರರ್ಥ ಸಮುದಾಯ ಸಂಸ್ಥೆಗಳನ್ನು ಸಬಲೀಕರಣಗೊಳಿಸುವುದು, ಪರಿಸರದ ವಾಸ್ತವಗಳನ್ನು ನೀತಿಗಳಲ್ಲಿ ಅಳವಡಿಸುವುದು, ನೀರಿನ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಬೆಳೆ ಪದ್ಧತಿಗಳನ್ನು ವೈವಿಧ್ಯಗೊಳಿಸುವುದು ಮತ್ತು ನೀರಿನ ಲಭ್ಯತೆಯನ್ನು ಕೇವಲ ಒಂದು ಐಷಾರಾಮಿ ಸೌಲಭ್ಯವೆಂದು ನೋಡದೆ ಮೂಲಭೂತ ಹಕ್ಕೆಂದು ಪರಿಗಣಿಸುವುದೇ ತಕ್ಕ ಸೂತ್ರವಾಗಿದೆ.

ನೀರಿನ ಬಿಕ್ಕಟ್ಟು ಮತ್ತು ಇಚ್ಛಾಶಕ್ತಿಯ ಕೊರತೆ

ಭಾರತದ ಜಲ ಬಿಕ್ಕಟ್ಟು ಕೇವಲ ಒಂದು ಪ್ರತ್ಯೇಕ ಪರಿಸರ ಸಮಸ್ಯೆಯಲ್ಲ; ಇದು ನಮ್ಮ ಇತಿಹಾಸ, ಆಡಳಿತ, ಸಂಸ್ಕೃತಿ ಮತ್ತು ಹವಾಮಾನದಲ್ಲಿನ ಲೋಪದೋಷಗಳನ್ನು ಪ್ರತಿಬಿಂಬಿಸುವ ಕನ್ನಡಿಯಾಗಿದೆ. ಸಾಂಪ್ರದಾಯಿಕ ಹೊಂದಾಣಿಕೆಯ ವ್ಯವಸ್ಥೆಗಳ ನಾಶ, ಅಲ್ಪಾವಧಿಯ ಆರ್ಥಿಕ ಲಾಭಗಳಿಗೆ ನೀಡಿದ ಆದ್ಯತೆ, ನಗರೀಕರಣದ ಒತ್ತಡ ಮತ್ತು ಹವಾಮಾನ ವೈಪರೀತ್ಯದ ನಿರಂತರ ಆಕ್ರಮಣ— ಇವೆಲ್ಲವೂ ಒಂದು ಸಮಷ್ಟಿ ರೂಪದಲ್ಲಿ ಇಂದು ಉಪಖಂಡದಾದ್ಯಂತ ಜನರ ಜೀವನ ಮತ್ತು ಜೀವನೋಪಾಯಕ್ಕೆ ಭೀಕರ ಸಂಕಷ್ಟವನ್ನು ತಂದೊಡ್ಡಿವೆ.

2016ರ ಮಿಹಿರ್ ಶಾ ಸಮಿತಿ ವರದಿ (ಭಾರತದ ಜಲ ಸುಧಾರಣೆಗಳಿಗಾಗಿ 21ನೇ ಶತಮಾನದ ಸಾಂಸ್ಥಿಕ ರಚನೆ), ಭಾರತದ ಜಲ ಬಿಕ್ಕಟ್ಟು ಕೇವಲ ನೀರಿನ ಅಭಾವದ ಸಮಸ್ಯೆಯಲ್ಲ, ಬದಲಾಗಿ ಅದು ಮೂಲಭೂತವಾಗಿ ಆಡಳಿತಾತ್ಮಕ ವೈಫಲ್ಯ ಎಂದು ವಾದಿಸಿತ್ತು.

ಚದುರಿಹೋಗಿರುವ ಮತ್ತು ಇಂಜಿನಿಯರಿಂಗ್ ಪ್ರಧಾನವಾಗಿರುವ ವ್ಯವಸ್ಥೆಯನ್ನು ಕಿತ್ತೊಗೆಯಲು ಈ ಸಮಿತಿಯು ಶಿಫಾರಸು ಮಾಡಿತ್ತು. ಇದಕ್ಕಾಗಿ ಕೇಂದ್ರೀಯ ಜಲ ಆಯೋಗ (CWC) ಮತ್ತು ಕೇಂದ್ರೀಯ ಅಂತರ್ಜಲ ಮಂಡಳಿಯನ್ನು (CGWB) ವಿಲೀನಗೊಳಿಸಿ ಸಮಗ್ರವಾಗಿ ರಾಷ್ಟ್ರೀಯ ಜಲ ಆಯೋಗ (NWC) ವನ್ನು ರಚಿಸಬೇಕು ಎಂದು ಸೂಚಿಸಿತ್ತು. ಅಲ್ಲದೆ, ನೀತಿಯನ್ನು ಕೇವಲ ಅಣೆಕಟ್ಟು ನಿರ್ಮಾಣದಿಂದ — ಬೇಡಿಕೆ ನಿರ್ವಹಣೆ, ಜಲಾನಯನ ಮಟ್ಟದ ಯೋಜನೆ ಮತ್ತು ಅಂತರ್ಜಲ ನಿಯಂತ್ರಣದ ಕಡೆಗೆ ಬದಲಾಯಿಸಬೇಕು ಹಾಗೂ ಪರಿಸರ ವಿಜ್ಞಾನ, ಅರ್ಥಶಾಸ್ತ್ರ ಮತ್ತು ಸಮಾಜ ವಿಜ್ಞಾನಗಳಂತಹ ಬಹುಶಿಸ್ತೀಯ ಪರಿಣತಿಯೊಂದಿಗೆ ಸಂಸ್ಥೆಗಳನ್ನು ಮರುನಿರ್ಮಾಣ ಮಾಡಬೇಕು ಎಂದು ಶಿಫಾರಸು ಮಾಡಿತ್ತು.

ಈ ವರದಿಯು ನೀರನ್ನು ಒಂದು ಹಂಚಿಕೆಗೆ ಒಳಪಟ್ಟ ಸೀಮಿತ ಸಂಪನ್ಮೂಲವೆಂದು ಕರೆದಿದೆ. ಇದಕ್ಕೆ ಪಾರದರ್ಶಕ ಹಂಚಿಕೆ, ನಿಖರವಾದ ದತ್ತಾಂಶ ಸ್ಥಳೀಯರ ಸಹಭಾಗಿತ್ವ ಮತ್ತು ಒಕ್ಕೂಟ ವ್ಯವಸ್ಥೆಯ ಸಮನ್ವಯದ ಅಗತ್ಯವಿದೆ ಎಂದು ತಿಳಿಸಿತ್ತು. ಒಂದು ವೇಳೆ ನಾವು ಎಂದಿನಂತೆ ಉದಾಸೀನವಾಗಿ ಮುಂದುವರಿದರೆ, ಕೃಷಿ ಸಂಕಷ್ಟ, ನಗರಗಳಲ್ಲಿನ ನೀರಿನ ಕೊರತೆ ಮತ್ತು ಹವಾಮಾನ ವೈಪರೀತ್ಯದ ಅಪಾಯಗಳು ಇನ್ನಷ್ಟು ತೀವ್ರಗೊಳ್ಳುತ್ತವೆ ಎಂದು ಈ ವರದಿಯು ಎಚ್ಚರಿಸಿತ್ತು.

ಸಾಂಸ್ಥಿಕ ಸುಧಾರಣೆಗಳ ಸವಾಲು

ಈ ವರದಿಯು ನೀರನ್ನು ಒಂದು ಹಂಚಿಕೆಯಾದ, ಸೀಮಿತ ಸಂಪನ್ಮೂಲವೆಂದು ಕರೆದಿದೆ. ಇದಕ್ಕೆ ಪಾರದರ್ಶಕ ಹಂಚಿಕೆ, ನಿಖರವಾದ ದತ್ತಾಂಶ, ಸ್ಥಳೀಯರ ಸಹಭಾಗಿತ್ವ ಮತ್ತು ಒಕ್ಕೂಟ ವ್ಯವಸ್ಥೆಯ ಸಮನ್ವಯದ ಅಗತ್ಯವಿದೆ ಎಂದು ತಿಳಿಸಿತ್ತು. ಒಂದು ವೇಳೆ ನಾವು ಎಂದಿನಂತೆ ಉದಾಸೀನ ಪ್ರವೃತ್ತಿಯನ್ನು ತೋರಿಸಿದರೆ ಕೃಷಿ ಸಂಕಷ್ಟ, ನಗರಗಳಲ್ಲಿನ ನೀರಿನ ಕೊರತೆ ಮತ್ತು ಹವಾಮಾನ ವೈಪರೀತ್ಯದ ಅಪಾಯಗಳು ಇನ್ನಷ್ಟು ತೀವ್ರಗೊಳ್ಳುತ್ತವೆ ಎಂದು ಈ ವರದಿಯು ಎಚ್ಚರಿಕೆ ನೀಡಿತ್ತು.

2016 ರಿಂದೀಚೆಗೆ ಸರ್ಕಾರದ ಪ್ರತಿಕ್ರಿಯೆಯು ಭಾಗಶಃ ಮಾತ್ರವಾಗಿದೆ. ಸಮನ್ವಯತೆಯನ್ನು ಸುಧಾರಿಸಲು 2019 ರಲ್ಲಿ ಜಲಶಕ್ತಿ ಸಚಿವಾಲಯದ ರಚನೆ, ಜಲ ಜೀವನ್ ಮಿಷನ್ನಂತಹ ಬೃಹತ್ ಯೋಜನೆಗಳು, ಜಲಶಕ್ತಿ ಅಭಿಯಾನ/ಕ್ಯಾಚ್ ದಿ ರೈನ್ ಮತ್ತು ನೀರಾವರಿ ದಕ್ಷತೆಯ ಯೋಜನೆಗಳು ನೀರಿನ ಲಭ್ಯತೆ, ಸಂರಕ್ಷಣೆ ಮತ್ತು ಮೂಲದ ಸುಸ್ಥಿರತೆಯನ್ನು ಗಮನದಲ್ಲಿಟ್ಟುಕೊಂಡಿವೆ. ಆದಾಗ್ಯೂ, ಶಾ ಸಮಿತಿಯು ಪ್ರಸ್ತಾಪ ಮಾಡಿದ್ದ ಪ್ರಮುಖ ಸಾಂಸ್ಥಿಕ ಸುಧಾರಣೆಗಳಾದ — ರಾಷ್ಟ್ರೀಯ ಜಲ ಆಯೋಗದ ರಚನೆ, ಕೇಂದ್ರೀಯ ಜಲ ಆಯೋಗ/ಕೇಂದ್ರೀಯ ಅಂತರ್ಜಲ ಮಂಡಳಿಯ ಸಂಪೂರ್ಣ ಪುನರ್ ರಚನೆ, ಜಲಾನಯನ ಮಟ್ಟದ ಕಾನೂನು ನಿಯಂತ್ರಣ ಮತ್ತು ಬಹುಶಿಸ್ತೀಯ ತಜ್ಞರ ನೇಮಕಾತಿ — ಇನ್ನೂ ಅನುಷ್ಠಾನಗೊಂಡಿಲ್ಲ.

ಕೇಂದ್ರ ಸರ್ಕಾರವು ಇಂದಿಗೂ ಕೇವಲ ಪರಿಶೀಲನಾ ಸಮಿತಿಗಳು ಮತ್ತು ಮಧ್ಯಂತರ ಸಮನ್ವಯದ ಮೇಲೆಯೇ ಅವಲಂಬಿತವಾಗಿದೆ. ಇದು ಅಧಿಕಾರಿಶಾಹಿಯ ಪ್ರತಿರೋಧ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮತೆಗಳು ಮತ್ತು ರಾಜಕೀಯ ಎಚ್ಚರಿಕೆಯನ್ನು ಎತ್ತಿ ತೋರಿಸುತ್ತದೆ. ಇದರ ಫಲವಾಗಿ ಪ್ರಗತಿಯು ಹಂತ ಹಂತವಾಗಿ ಕಂಡುಬರುತ್ತಿದೆಯೇ ಹೊರತು, 2016 ರ ವರದಿಯಲ್ಲಿ ಕಲ್ಪಿಸಿದಂತೆ ಭಾರತದ ಜಲ ಆಡಳಿತ ರಚನೆಯಲ್ಲಿ ಯಾವುದೇ ಕ್ರಾಂತಿಕಾರಿ ಬದಲಾವಣೆ ಆಗಿಲ್ಲ.

ಮಹಾನ್ ದುರಂತವನ್ನು ತಪ್ಪಿಸಲು, ಭಾರತವು ಸಾವಿರಾರು ವರ್ಷಗಳ ಜಲ ಜ್ಞಾನವನ್ನು ಗೌರವಿಸುವ, ಆಡಳಿತವನ್ನು ಸುಸ್ಥಿರತೆಯೊಂದಿಗೆ ಮರುಹೊಂದಿಸುವ ಮತ್ತು ಹವಾಮಾನ ಬದಲಾವಣೆಯನ್ನು ದಿಟ್ಟವಾಗಿ ಎದುರಿಸುವ ಸಮಗ್ರ 'ಜಲ ನೀತಿ'ಯನ್ನು ಅಳವಡಿಸಿಕೊಳ್ಳಬೇಕು. ಆಗ ಮಾತ್ರ ರಾಷ್ಟ್ರವು ತನ್ನ ಮುಂದೆ ಸುಳಿಯುತ್ತಿರುವ ಜಲ ಬಿಕ್ಕಟ್ಟನ್ನು ಒಂದು ದುರಂತವಾಗದಂತೆ ತಡೆದು, ಅದನ್ನು ಪರಿಸರ ಸಮತೋಲನ ಮತ್ತು ಸಾಮಾಜಿಕ ನ್ಯಾಯದ ಅವಕಾಶವನ್ನಾಗಿ ಪರಿವರ್ತಿಸಲು ಸಾಧ್ಯವಾಗುತ್ತದೆ.

ಮೊದಲ ಭಾಗ "ಭಾರತದ ಜಲ ಬಿಕ್ಕಟ್ಟು Part-1: ನಿರ್ಲಕ್ಷ್ಯ, ನಿರ್ಲಜ್ಜತನದ ಫಲ- ಕಾಲ ಮಿಂಚಿಹೋಗುತ್ತಿದೆ!" ಮಂಗಳವಾರ ಪ್ರಕಟವಾಗಿದೆ.

Next Story