ಗಡಿಬಿಡಿ, ತಳಮಳಗಳಿಲ್ಲದ ಒಂದು ಶತಮಾನ: ಬೆಂಗಳೂರಿನ ಬಳೆಪೇಟೆಯಲ್ಲಿರುವ ಉಡುಪಿ ಶ್ರೀಕೃಷ್ಣ ಭವನ ಮತ್ತು ಬಸವನಗುಡಿಯಲ್ಲಿರುವ ಮಹಾ ಲಕ್ಷ್ಮೀ ಟಿಫನ್ ರೂಮ್ ಹೋಟೆಲ್ ಗಳು ಯುದ್ದ, ಆರ್ಥಿಕ ಹಿಂಜರಿತ ಹಾಗೂ ಸಾಂಕ್ರಾಮಿಕ ರೋಗಗಳ ನಡುವೆಯೂ ತನ್ನ ಅಸ್ತಿತ್ವ ಕಾಯ್ದುಕೊಂಡಿವೆ.

ಬೆಂಗಳೂರಿನ ಎರಡು ಹೋಟೆಲ್ ಗಳು ಶತಮಾನ ಪೂರೈಸುತ್ತಿವೆ. ಈಗಲೂ ಭರ್ಜರಿ ವ್ಯಾಪಾರ ಮಾಡುತ್ತಿವೆ. ಅವುಗಳ ಮೆನು ಬದಲಾಗಿದೆಯೇ? ರುಚಿ ಹೇಗಿದೆ? ಈಗಿನ ಮಕ್ಕಳಿಗೂ ಇಷ್ಟವಾಗುತ್ತಿದೆಯೇ? ಒಮ್ಮೆ ಹೊಕ್ಕು ಟೇಸ್ಟ್ ನೋಡಿ ಬರೋಣ ಬನ್ನಿ...


Click the Play button to hear this message in audio format

ನಗರಗಳು ಪೊರೆ ಕಳಚಿಕೊಳ್ಳುತ್ತಿವೆ, ಸದಾ ಹೊಸತನಕ್ಕೆ ತಡಿಯುತ್ತಿವೆ, ಗಗನಚುಂಬಿ ಕಟ್ಟಡಗಳು ಪೈಪೋಟಿಗೆ ಇಳಿಯುತ್ತಿವೆ, ಹೊಸ ಅಭಿರುಚಿಗಳು ಹುಟ್ಟಿಕೊಳ್ಳುತ್ತಿವೆ ಮತ್ತು ರಂಗಿ-ಬಿ-ರಂಗಿ ಟ್ರೆಂಡ್-ಗಳು ಮಿಂಚಿ ಮಾಯವಾಗುತ್ತಿವೆ. ಆದರೆ ಈ ಬೆಂಗಳೂರಿನ ಎರಡು ವಿರುದ್ಧ ಮೂಲೆಗಳಲ್ಲಿ ಇರುವ ಜನರ ನೆಚ್ಚಿನ ಎರಡು ಪಾಕಶಾಲೆಗಳು ಈಗಲೂ ನಗರದ ಹೆಗ್ಗುರುತಾಗಿ ನಿಂತಿವೆ. ಅವುಗಳೇ- ಉಡುಪಿ ಶ್ರೀಕೃಷ್ಣ ಭವನ (USKB) ಮತ್ತು ಮಹಾ ಲಕ್ಷ್ಮೀ ಟಿಫನ್ ರೂಮ್ (MLTR).

ಮುಂದಿನ ವರ್ಷ, ಅಂದರೆ 2026 ಬಂತೆಂದರೆ ಈ ಎರಡೂ ಶಾಖಾಹಾರಿ ಹೊಟೆಲ್ ಗಳಿಗೆ ಭರ್ತಿ ನೂರು ವರ್ಷ ತುಂಬಲಿದೆ. ಕೇವಲ ಆಹಾರ ಮಾತ್ರವಲ್ಲ, ಇಲ್ಲಿನ ಅನುರೂಪದ ನೆನಪುಗಳು ಅನನ್ಯ. ಅವು ತಲೆಮಾರುಗಳನ್ನು ಒಟ್ಟಿಗೆ ಬೆಸೆಯಲಿವೆ.

ಯಾವುದೇ ಒಂದು ರೆಸ್ಟೋರೆಂಟ್ ಶತಮಾನ ಪೂರೈಸುತ್ತದೆ ಎಂದರೆ ಅದು ಸುಮ್ಮನೇ ತಮಾಷೆಯ ಮಾತಲ್ಲ. ಇಷ್ಟೂ ವರ್ಷಗಳ ಕಾಲ ಅದು ತನ್ನ ರುಚಿಯನ್ನೂ ಉಳಿಸಿಕೊಂಡು ಬಂದಿರುವುದು ಅಪರೂಪದಲ್ಲಿ ಅಪರೂಪ. ಈ ಎರಡೂ ಹೋಟೆಲ್ ಗಳನ್ನು ಈಗಲೂ ಮುನ್ನಡೆಸುತ್ತಿರುವವರು ಕರಾವಳಿ ಕರ್ನಾಟಕದ ‘ಪಾಕಪ್ರವೀಣರ’ ಜಿಲ್ಲೆ ಎಂದೇ ಖ್ಯಾತವಾದ ದಕ್ಷಿಣ ಕನ್ನಡ ಜಿಲ್ಲೆಯಿಂದ ಬಂದ ಕುಟುಂಬಗಳು. ಉಡುಪಿ ಶ್ರೀಕೃಷ್ಣ ಭವನವು ಗಿಜಿಗುಡುವ ಬಳೆಪೇಟೆಯಲ್ಲಿ ನಿತ್ಯವೂ ಜನರನ್ನು ಸೆಳೆಯುತ್ತಿದ್ದರೆ ಮಹಾ ಲಕ್ಷ್ಮೀ ಟಿಫನ್ ರೂಮ್ ಬಸವನಗುಡಿಯ ವಸತಿ ಪ್ರದೇಶಗಳ ನಡುವೆ ತಣ್ಣಗೆ ಕಾರ್ಯನಿರ್ವಹಿಸುತ್ತಿದೆ.

ಬೆಂಗಳೂರಿನಲ್ಲಿರುವ ಕೇವಲ ಮೂರು ರೆಸ್ಟೋರೆಂಟ್‌ಗಳು (ಕನಿಷ್ಠ ದಾಖಲೆಯಲ್ಲಿ ಇರುವಂತೆ) ಮಾತ್ರ ಶತಮಾನ ಪೂರೈಸಿವೆ. ಇವುಗಳಲ್ಲಿ ತನ್ನ ಸಾಂಪ್ರದಾಯಿಕತೆಯನ್ನು ಉಳಿಸಿಕೊಂಡಿರುವ ಮಾವಳ್ಳಿ ಟಿಫನ್ ರೂಂ (ಎಂಟಿಆರ್) 2024ರಲ್ಲಿ ನೂರರ ಗಡಿ ದಾಟಿವೆ. ಅಂದಹಾಗೆ, ಮೂರೂ ರೆಸ್ಟೋರೆಂಟ್‌ಗಳ ಮಾಲೀಕರು (ಕುಟುಂಬಗಳು) ಸಂಬಂಧಿಕರು. ಈ ಕುಟುಂಬಗಳು ಉಡುಪಿ ಜಿಲ್ಲೆಯ ಕೋಟ ಎಂಬ ಊರಿನಿಂದ ಬೆಂಗಳೂರಿಗೆ ಬಂದವರು.

ಕರಾವಳಿಯಿಂದ ಜಾಗತಿಕ ಪಾಕಶಾಲೆಗೆ ಲಗ್ಗೆ

ಮಧ್ವಾಚಾರ್ಯ ಪಾಕಾಶಾಲಾ ಶೈಲಿಯು ಈ ಕರಾವಳಿ ಪ್ರದೇಶದ ಕೊಡುಗೆ. ಇದು ಬೆಂಗಳೂರು, ಚೆನ್ನೈ (ವುಡ್-ಲ್ಯಾಂಡ್ಸ್, ದಾಸ್ ಪ್ರಕಾಶ್ ಇತ್ಯಾದಿ), ಮುಂಬೈ ಹಾಗೂ ಸ್ವಾತಂತ್ರ್ಯ ಪೂರ್ವದ ಕರಾಚಿ ಮತ್ತು ಲಾಹೋರ್ ವರೆಗೂ ಪ್ರಯಾಣ ಬೆಳೆಸಿದ್ದು ವಿಶೇಷ. ಕೋಟ ಮತ್ತು ಶಿವಳ್ಳಿ ಬ್ರಾಹ್ಮಣರ ಪಾಕಶಾಲಾ ಪದ್ಧತಿ ಮತ್ತು ಅವರ ಉದ್ಯಮಶೀಲತೆ ಜಗತ್ತಿಗೇ ಮಾದರಿಯಾಯಿತು. ಬೆಂಗಳೂರು ಕಡೆಗೆ ಪ್ರಯಾಣ ಬೆಳೆಸುವುದು ಅವರಿಗೇನೂ ಕಷ್ಟವಾಗಿರಲಿಲ್ಲ.

ಬೆಂಗಳೂರು ಹೋಟೆಲ್ ಸಂಘದ ಅಧ್ಯಕ್ಷರೂ ಆಗಿರುವ ಸುಬ್ರಹ್ಮಣ್ಯ ಹೊಳ್ಳ ಅವರು ಉಡುಪಿ ಶ್ರೀಕೃಷ್ಣ ಭವನದಲ್ಲಿ.

1902ರಲ್ಲಿ ರಾಮ ಹೊಳ್ಳ ಅವರು ಬಳೆಪೇಟೆ ವೃತ್ತದಲ್ಲಿ ಒಂದು ಸಾಧಾರಣ ಉಡುಪಿ ಹೋಟೆಲ್ ಸ್ಥಾಪನೆ ಮಾಡುತ್ತಾರೆ. ಅದಾದ ಬಳಿಕ 1920ರಲ್ಲಿ ಅವರ ಸೋದರಳಿಯ ಎಚ್.ವಿ.ಜನಾರ್ಧನಯ್ಯ ಅವರು ಬಳೆಪೇಟೆ ಮುಖ್ಯ ರಸ್ತೆಯಲ್ಲಿಯೇ ಒಂದು ನಿವೇಶನ ಖರೀದಿ ಮಾಡಿದರು. 1926ರಲ್ಲಿ ಈಗಿರುವ ತಾಣಕ್ಕೆ ರೆಸ್ಟೊರೆಂಟ್ ಶಿಫ್ಟ್ ಆಯಿತು.

1932ರಲ್ಲಿ ಜನಾರ್ಧನಯ್ಯ ಅವರ ಮರಣಾನಂತರ ಅವರ ಅಳಿಯ ಕೆ,ಯಜ್ಞನಾರಾಯಣ ಸೋಮಯಾಜಿ ಅವರು 1956ರ ತನಕವೂ ಹೋಟೆಲ್ ಜವಾಬ್ದಾರಿ ಹೊತ್ತುಕೊಂಡು ಮುನ್ನಡೆಸಿದರು. ಆ ಬಳಿಕ ಅಡುಗೆ ಸೌಟು ಹಸ್ತಾಂತರವಾಗಿದ್ದು ಜನಾರ್ಧನಯ್ಯ ಅವರ ಮಕ್ಕಳಾದ ಎಚ್.ಜೆ.ಆನಂದರಾಮ್ ಮತ್ತು ಎಚ್.ಜೆ. ಶ್ರೀನಿವಾಸ ಹೊಳ್ಳ ಅವರಿಗೆ. ಕುಟುಂಬದ ವಿಭಜನೆಯ ಬಳಿಕ ಹೆಚ್.ಜೆ. ಶ್ರೀನಿವಾಸ ಹೊಳ್ಳ ಮತ್ತು ಅವರ ಮಗ ಹೆಚ್.ಎಸ್. ಸುಬ್ರಹ್ಮಣ್ಯ ಹೊಳ್ಳ ಅವರು ಉಡುಪಿ ಹೋಟೆಲ್ ಹೊಣೆ ಹೊತ್ತರು.

ಇಂದು ಈ ಹೊಟೆಲ್ ನಡೆಸುತ್ತಿರುವವರು ಸುಬ್ರಹ್ಮಣ್ಯ ಹೊಳ್ಳ. ಅವರು ಬೆಂಗಳೂರು ಹೋಟೆಲ್ ಸಂಘದ ಅಧ್ಯಕ್ಷರೂ ಹೌದು. ಕಳೆದ ನೂರು ವರ್ಷಗಳಿಂದ ಒಂದೇ ಸ್ಥಳದಲ್ಲಿ ಕಾರ್ಯನಿರ್ವಹಿಸುತ್ತಿರುವ ಬೆಂಗಳೂರಿನ ಏಕೈಕ ರೆಸ್ಟೋರೆಂಟ್ ಎಂಬ ಕೀರ್ತಿಗೂ ಅದು ಭಾಜನವಾಗಿದೆ. “ಕಳೆದ ನೂರು ವರ್ಷಗಳಿಂದ ಒಂದೇ ಸ್ಥಳ, ಒಂದೇ ಹೆಸರು, ಒಂದೇ ಆಡಳಿತ,” ಎಂದು ಮಧ್ಯಪ್ರವೇಶಿಸಿ ಮಾತನಾಡುತ್ತಾರೆ ಹೊಳ್ಳ ಅವರು. (ಮುಂದೆ ಅವರ ಸಂದರ್ಶನವಿದೆ).

ಈಗ ನಾವು ಮಹಾಲಕ್ಷ್ಮಿ ಟಿಫನ್ ರೂಂ (MLTR) ಹಿನ್ನೆಲೆಯನ್ನು ನೋಡೋಣ.

ಬಸವನಗುಡಿಯ ಬ್ರಾಹ್ಮಣರ ಮನೆಗಳ ನಡುವೆ

ಬಹುತೇಕ ಬ್ರಾಹ್ಮಣರ ಮನೆಗಳೇ ಇದ್ದ ಬಸವನಗುಡಿಯಲ್ಲಿ ಮಹಾ ಲಕ್ಷ್ಮಿ ಟಿಫನ್ ರೂಂ ಸ್ಥಾಪನೆ ಮಾಡಿದ್ದು 1926ರಲ್ಲಿ. ಅದರ ಸ್ಥಾಪಕರು ರಾಮಕೃಷ್ಣ ಕಾರಂತ್. ಅದನ್ನೀಗ ಅವರ ಮಗ ವಾಸುದೇವ್ ಕಾರಂತ್ ಮತ್ತು ಮೊಮ್ಮಗ ಗಿರೀಶ್ ಕಾರಂತ್ ಅವರು ನಡೆಸುತ್ತಿದ್ದಾರೆ.

ಇಂದಿಗೂ ಎಂಭತ್ತರ ಹರಯದಲ್ಲೂ ವಾಸುದೇವ್ ಕಾರಂತ್ ಅವರು ಹೋಟೆಲ್ ಕ್ಯಾಶ್ ಕೌಂಟರ್ ನಲ್ಲಿ ಕುಳಿತು ಒಂದು ಸರಳ-ಸುಂದರ ನಗುವಿನೊಂದಿಗೆ ಎಲ್ಲರನ್ನೂ ಸ್ವಾಗತಿಸುತ್ತಿರುವುದನ್ನು ಕಾಣಬಹುದು. ಇದೇ ಹೊತ್ತಿನಲ್ಲಿ ಗಿರೀಶ್ ಅಡುಗೆಮನೆ-ಕೌಂಟರ್ ಗಳ ನಡುವೆ ಓಡಾಡಿಕೊಂಡು ನಿರ್ವಹಣೆ ನಡೆಸುತ್ತಾರೆ.

“ಒಂದು ರೆಸ್ಟೋರೆಂಟ್ ನಡೆಸುವುದೆಂದರೆ ಸುಲಭದ ಕೆಲಸವಲ್ಲ. ಹಾಗಾಗಿ ಕುಟುಂಬದ ಸದಸ್ಯರಲ್ಲಿ ಒಬ್ಬರು ದಿನದ 24 ಗಂಟೆಯೂ ಇಲ್ಲಿ ಇರುತ್ತಾರೆ. ಗ್ರಾಹಕರಿಗೆ ಸೇವೆ ನೀಡುವುದು ಎಷ್ಟು ಮುಖ್ಯವೋ ಅಡುಗೆಮನೆ ನಿರ್ವಹಣೆ ಕೂಡ ಅಷ್ಟೇ ಮುಖ್ಯ” ಎಂದು ಗಿರೀಶ್ ಹೇಳುತ್ತಾರೆ. (ಮುಂದೆ ಗಿರೀಶ್ ಅವರ ಸಂದರ್ಶನವಿದೆ).

ಈ ಎರಡೂ ರೆಸ್ಟೋರಂಟ್-ಗಳು ಒಂದು ಸಾಮಾನ್ಯ ಹೋಟೆಲ್ ರೀತಿಯಲ್ಲಿ ಆರಂಭವಾದವು. ಮರದ ಮೇಜು-ಕುರ್ಚಿಗಳು, ಕೈಬರಹದಲ್ಲಿಯೇ ಇರುವ ಮೆನುಗಳು ಮತ್ತು ಇಡ್ಲಿ, ದೋಸೆ, ವಡೆ ಮತ್ತು ಕಾಫಿಯಂತಹ ಪ್ರಧಾನ ಆಹಾರಗಳ ಸಣ್ಣ ಪಟ್ಟಿಯೊಂದಿಗೆ ವಿದ್ಯಾರ್ಥಿಗಳು, ವ್ಯಾಪಾರಿಗಳು ಮತ್ತು ಕುಟುಂಬಗಳಿಗೆ ಸೇವೆ ಸಲ್ಲಿಸುವ ಕಾರ್ಯವನ್ನು ಆರಂಭಿಸಿದವು.

ಕಳೆದ ಒಂದು ಶತಮಾನದ ಅವಧಿಯಲ್ಲಿ ಬೆಂಗಳೂರೆಂಬ ನಗರವು ಭಾರತದ ಅತ್ಯುತ್ತಮ ನಗರಗಳಲ್ಲಿ ಒಂದೆನ್ನುವ ರೀತಿಯಲ್ಲಿ ಆಮೂಲಾಗ್ರ ಬದಲಾವಣೆಯನ್ನು ಕಂಡಿದೆ. ಅದು ಆಹಾರದ ವಿಚಾರದಲ್ಲಿಯೂ ಹಿಂದೆ ಬಿದ್ದಿಲ್ಲ. 1926ರಲ್ಲಿ ಬೆಂಗಳೂರಿನಲ್ಲಿದ್ದುದು ನಾಲ್ಕು ಲಕ್ಷ ಜನಸಂಖ್ಯೆ. ಈಗ ನಗರದ ಜನಸಂಖ್ಯೆ ಒಂದೂವರೆ ಕೋಟಿ. ಗಮನಾರ್ಹ ಸಂಗತಿ ಎಂದರೆ ಈ ಎರಡು ಹೋಟೆಲ್ ಗಳು ಈ ಮಹತ್ವದ ನೂರು ವರ್ಷಗಳಲ್ಲಿ ತಮ್ಮ ಮೂಲ ಅಲಂಕಾರ, ಮೆನು ಮತ್ತು ಕಾರ್ಯನೀತಿಯಲ್ಲಿ ಹೆಚ್ಚಿನ ಬದಲಾವಣೆಗಳನ್ನೇನ್ನೂ ಮಾಡಿಲ್ಲ. ಬೆಲೆಯೂ ಕಾಲಕ್ಕೆ ತಕ್ಕಂತೆ ಸಮಂಜಸವಾಗಿದೆ. ಅತ್ಯಧಿಕ ಬೆಲೆಯ ಐಟಂ ಕೂಡ ನೂರು ರೂಪಾಯಿ ಮೀರಿಲ್ಲ.

‘ದ ಫೆಡರಲ್’ ಈ ಎರಡೂ ಹೋಟೆಲ್-ಗಳ ಮಾಲೀಕರ ಜೊತೆ ಮಾತುಕತೆ ನಡೆಸಿದೆ. ವಾರಗಳ ನಡುವಿನ ಸಂದರ್ಶನದಲ್ಲಿ ಇಬ್ಬರಿಗೂ ಏಕರೀತಿಯ ಪ್ರಶ್ನೆಗಳನ್ನು ಹಾಕಲಾಗಿದೆ. ಈ ಸಂದರ್ಶನದ ಆಯ್ದ ಭಾಗ ಇಲ್ಲಿದೆ:

• ಯಾವುದೇ ಒಂದು ರೆಸ್ಟೋರೆಂಟ್ ಪಾಲಿಗೆ ಒಂದು ಶತಮಾನ ಎನ್ನುವುದು ನಿಜಕ್ಕೂ ಸುದೀರ್ಘ ಅವಧಿ. ಈಗಿನ ಹೋಟೆಲ್ ಮಾಲೀಕರಾಗಿ ಈ ಮೈಲಿಗಲ್ಲನ್ನು ಹೇಗೆ ಅರ್ಥೈಸುವಿರಿ?

ಸುಬ್ರಹ್ಮಣ್ಯ ಹೊಳ್ಳ (USKB): ನನ್ನ ಪೂರ್ವಜರಿಗೆ ಹೋಲಿಸಿದರೆ ನನ್ನ ಕೊಡುಗೆ ಚಿಕ್ಕದಾದರೂ ಕೂಡ ಇದೊಂದು ಸಾಧನೆಯೇ ಸರಿ. ಈ ಪರಂಪರೆಯು ತಲೆಮಾರುಗಳಿಂದ ಬಂದಿರುವ ಆಶೀರ್ವಾದದ ಫಲ. ನಾನು ಕಳೆದ ನಲವತ್ತು ವರ್ಷಗಳಿಂದ ಈ ಕೈಂಕರ್ಯದಲ್ಲಿ ತೊಡಗಿಸಿಕೊಂಡಿದ್ದೇನೆ, ನಮ್ಮ ಪೂರ್ವಜರು ಅರವತ್ತು ವರ್ಷಗಳ ಕಾಲ ಇದನ್ನು ಮುನ್ನಡೆಸಿದವರು. ಈಗ ನನಗಿರುವುದು ಕೇವಲ ಕೃತಜ್ಞತೆಯ ಭಾವ.

ಗಿರೀಶ್ ಕಾರಂತ್ (MTLR): ಪ್ರಾಮಾಣಿಕವಾಗಿ ಹೇಳಬೇಕೆಂದರೆ ನಿಜಕ್ಕೂ ಇದೊಂದು ದೊಡ್ಡ ಮೈಲಿಗಲ್ಲು. ನೂರು ವರುಷಗಳನ್ನು ಪೂರೈಸುತ್ತೇವೆ ಎಂದು ನಾವು ಕನಸು-ಮನಸಿನಲ್ಲೂ ಎಣಿಸಿರಲಿಲ್ಲ. ನಮಗೇ ನಂಬಲಾಗುತ್ತಿಲ್ಲ. ನಾವು ವರುಷಗಳನ್ನು ಲೆಕ್ಕ ಹಾಕಲೇ ಇಲ್ಲ. ಈಗ ಅದು ಮೈಲಿಗಲ್ಲಾಗಿ ಪರಿಣಮಿಸಿದೆ. ನಾವು ಪ್ರತಿಯೊಂದು ದಿನವನ್ನೂ ಅದು ಬಂದ ಹಾಗೆ ಸ್ವೀಕರಿಸಿದೆವು. ಈ ಸಾಮಾಜಿಕ ಮಾಧ್ಯಮಗಳು ಅದರ ಸಂಭ್ರಮವನ್ನು ಹೆಚ್ಚಿಸಿದೆ. ಆದರೂ ನಮಗೆ ಅದು ಬೇಕಿರಲಿಲ್ಲ.

• ಇದರ ಆರಂಭದ ನಿರ್ದಿಷ್ಟ ದಿನಾಂಕವೇನಾದರೂ ನೆನಪಿದೆಯೇ? ಆಚರಣೆ ಮಾಡುವ ಉದ್ದೇಶವೇನಾದರೂ ಇದೆಯೇ?

ಹೊಳ್ಳ: ಯಾವುದೇ ದಿನಾಂಕ ನೆನಪಿಲ್ಲ. ನಾವು ಈ ಸ್ಮರಣಾರ್ಥ ಒಂದು ಕೃತಿಯನ್ನು ಬಿಡುಗಡೆ ಮಾಡುವ ಯೋಜನೆ ಹಾಕಿಕೊಂಡಿದ್ದೇವೆ.

ಕಾರಂತ್: ಯಾವುದೇ ಆಚರಣೆ ಇಲ್ಲ. ಇದು ನಮ್ಮ ಪಾಲಿಗೆ ಇನ್ನೊಂದು ದಿನ ಅಷ್ಟೇ. ಹೋಟೆಲ್ ಆರಂಭದ ದಿನ ಯಾವತ್ತೆಂದು ನಿರ್ದಿಷ್ಟವಾಗಿ ತಿಳಿದಿಲ್ಲ. ಕೆಲವರು ಯುಗಾದಿ ದಿನ, ಇನ್ನು ಕೆಲವರು ಮಕರ ಸಂಕ್ರಾಂತಿ ಮತ್ತು ಇನ್ನೂ ಕೆಲವರು ನವರಾತ್ರಿ ದಿನ ಅನ್ನುತ್ತಾರೆ. ನನ್ನ ತಂದೆಯವರಿಗೂ ಈ ಬಗ್ಗೆ ನಿರ್ದಿಷ್ಟ ದಿನಾಂಕದ ನೆನಪಿಲ್ಲ.

• ಕಳೆದ ಇಷ್ಟೂ ವರ್ಷಗಳ ಅವಧಿಯಲ್ಲಿ ಹೋಟೆಲ್ ತಿಂಡಿಗಳಲ್ಲಿ ಬದಲಾವಣೆಗಳೇನಾದರೂ ಆಗಿವೆಯೇ?

ಹೊಳ್ಳ: ಬಹುತೇಕ ಯಾವುದೇ ಬದಲಾವಣೆ ಆಗಿಲ್ಲ. ಊಟ (ಅನ್ನ)ವನ್ನು ನಾವು ಆರಂಭ ಮಾಡಿದ್ದು 1995-96ರಲ್ಲಿ. 2000ರಲ್ಲಿ ಶುರುವಾಗಿದ್ದು ಥಾಲಿ (ತಟ್ಟೆ ಊಟ). ಸಾಂಪ್ರದಾಯಿಕವಾಗಿ ಹೇಳಬೇಕೆಂದರೆ ನಾವು ಎಂದಿಗೂ ಅನ್ನವನ್ನು ಮಾರಾಟ ಮಾಡಲಿಲ್ಲ. ಅದನ್ನು ಪ್ರಧಾನ ಆಹಾರ ಎಂದು ಭಾವಿಸಲಾಗಿತ್ತು. ಹಸಿದವರಿಗೆ ಉಚಿತವಾಗಿ ನೀಡುತ್ತಿದ್ದೆವು. ಕಾಲ ಬದಲಾಯಿತು. ಬೇಡಿಕೆಯೂ ಹೆಚ್ಚಿತು. ಆದ್ದರಿಂದ ನಾವು ನಮ್ಮದೇ ಶೈಲಿಯ ಥಾಲಿಯನ್ನು ಪರಿಚಯ ಮಾಡಿದೆವು. ನಮ್ಮ ಗಾಂಧಿ ಬಜಾರ್ ಶಾಖೆಯಲ್ಲಿ ಈಗ ವಿಶೇಷ ಥಾಲಿ ನೀಡಲಾಗುತ್ತದೆ. ಅದು ಬಹಳ ಜನಪ್ರಿಯವಾಗಿದೆ.

ಕಾರಂತ್: ಯಾವುದೇ ಬದಲಾವಣೆ ಮಾಡಲಾಗಿಲ್ಲ.

• ನೀರು ಮತ್ತು ಕಚ್ಚಾ ಸಾಮಗ್ರಿಗಳಲ್ಲಿ ಆಗಿರುವ ಬದಲಾವಣೆಗಳ ಹಿನ್ನೆಲೆಯಲ್ಲಿ ಕಾಲಕ್ರಮೇಣ ರುಚಿಯಲ್ಲಿ ಬದಲಾವಣೆ ಆಗಿದೆಯೇ?

ಹೊಳ್ಳ: ತಿಂಡಿಯ ರುಚಿಯ ಮೇಲೆ ಸಾಮಾನ್ಯವಾಗಿ ಅನೇಕ ವಿಚಾರಗಳು ಪ್ರಭಾವ ಬೀರುತ್ತವೆ. ಅದರಲ್ಲಿ ಯಾರು ಅಡುಗೆ ಮಾಡುತ್ತಾರೆ ಎನ್ನುವುದು ಕೂಡ ಮುಖ್ಯವಾಗುತ್ತದೆ. ಕಳೆದ ಇಷ್ಟೂ ವರ್ಷಗಳಲ್ಲಿ ನಾವು ಶೇ.80ರಷ್ಟು ಸ್ವಾದವನ್ನು ಕಾಯ್ದುಕೊಂಡು ಬಂದಿದ್ದೇವೆ. ರುಚಿ ಆಯಾ ದಿನದ ನಿಮ್ಮ ಮೂಡ್-ನ್ನು ಅವಲಂಬಿಸಿದೆ. ಕೆಲವೊಮ್ಮೆ ನೀವು ಇಂತಹುದೇ ರುಚಿಯನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಹೊಟೆಲ್ ಒಳಗೆ ಬಂದಿರಬಹುದು. ಆದರೆ ಅದು ಆಗದೇ ಇರಬಹುದು. ನನ್ನ ಪ್ರಕಾರ ರುಚಿಗೆ ಯಾವುದೇ ಸ್ಮರಣೆ ಇರುವುದಿಲ್ಲ.

ಕಾರಂತ್: ನಿಶ್ಚಿತವಾಗಿ ಅದು ಬದಲಾಗಿದೆ. ಆದರೂ ನಾವು ಎಲ್ಲವನ್ನೂ ಗಮನಿಸುತ್ತೇವೆ ಮತ್ತು ಸರಿಪಡಿಸುವ ಕೆಲಸ ಮಾಡುತ್ತೇವೆ. ಅದು ಕಚ್ಛಾ ಸಾಮಗ್ರಿಗಳಿರಬಹುದು ಅಥವಾ ಹಿಟ್ಟಿನ ಗುಣಮಟ್ಟವಿರಬಹುದು. ಎಲ್ಲದರ ಮೇಲೂ ನಿಗಾ ಇಡುತ್ತೇವೆ. ಏನಾದರೂ ಸಮಸ್ಯೆ ಇತ್ತು ಅನ್ನುವುದಾದರೆ, ವಿಶೇಷವಾಗಿ ದೋಸೆ ಹಿಟ್ಟಿನ ವಿಚಾರದಲ್ಲಿ ಸಮಸ್ಯೆ ಕಂಡುಬಂದರೆ ಅದನ್ನು ತವಾ ಮೇಲೆ ಹರಡಿದ ತಕ್ಷಣವೇ ಗೊತ್ತಾಗುತ್ತದೆ. ಆ ಕೂಡಲೇ ಅದನ್ನು ಸರಿಪಡಿಸುತ್ತೇವೆ.

• ನೀವು ಮಾರಾಟ ಮಾಡುವ ವಿಶಿಷ್ಟವಾದ ತಿಂಡಿ, ಪದಾರ್ಥ ಯಾವುದು? ಅಥವಾ ನೀವು ಹೆಮ್ಮೆಯಿಂದ ಹೇಳಬಹುದಾದ ಒಂದು ತಿಂಡಿ?

ಹೊಳ್ಳ: ನಾವು ಮಾಡುವ ಸಾಂಬಾರ್. ಇಷ್ಟು ರುಚಿಕಟ್ಟಾದ ಸಾಂಬಾರ್ ಇಡೀ ಬೆಂಗಳೂರಿನಲ್ಲಿಯೇ ಸಿಗುವುದಿಲ್ಲ. ಇದನ್ನು ನಾನು ಅತ್ಯಂತ ಹೆಮ್ಮೆಯಿಂದ ಹೇಳುತ್ತೇನೆ. ಇದಕ್ಕೆ ಮುಖ್ಯ ಕಾರಣ ನಾವೇ ತಯಾರಿಸುವ ವಿಶಿಷ್ಟವಾದ ಮಸಾಲೆ. ಜೊತೆಗೆ ನಮ್ಮ ಹೋಟೆಲಿನ ದೋಸೆ-ಸಾಗು ಜನರ ಬಹುದೊಡ್ಡ ಆಕರ್ಷಣೆ.

ಕಾರಂತ್: ನಾವು ಮಾಡುವ ಖಾಲಿ ದೋಸೆ. ಇದನ್ನು ನಾವು ಅತ್ಯಂತ ಮುತುವರ್ಜಿಯಿಂದ ಮಾಡುತ್ತೇವೆ.

• ಹಳೆಯ ಗ್ರಾಹಕರು ಮತ್ತೆ ಮತ್ತೆ ಬರುತ್ತಾರಾ? ಅವರನ್ನು ಎಷ್ಟು ನಿಯಮಿತವಾಗಿ ನೋಡುತ್ತಿರುತ್ತೀರಿ?

ಹೊಳ್ಳ: ನಮ್ಮ ಹೆಚ್ಚಿನ ಗ್ರಾಹಕರು ಹಳೆಯ ಕಾಲದವರು. ಶೇ.70ಕ್ಕಿಂತ ಹೆಚ್ಚಿನ ಗ್ರಾಹಕರು 40 ವರ್ಷಕ್ಕಿಂತ ಮೇಲ್ಪಟ್ಟವರು. ಉಳಿದವರು ಈಗಿನ ಯುವ ತಲೆಮಾರಿನವರು. ನಮ್ಮ ಬಳೆಪೇಟೆ ಶಾಖೆಯಲ್ಲಿ ಹೆಚ್ಚಿನ ಗ್ರಾಹಕರು ಪರಿಚಿತ ಮುಖಗಳು. ನಿಮಗೆ ಇನ್ನೂ ಒಂದು ವಿಶೇಷ ಗೊತ್ತಿದೆಯೇ? ನಮ್ಮಲ್ಲಿಗೆ ಮೂರನೇ ತಲೆಮಾರಿನ ಗ್ರಾಹಕರೂ ಬರುತ್ತಿರುತ್ತಾರೆ.

ಕಾರಂತ್: ಹೆಚ್ಚಿನ ಗ್ರಾಹಕರು ಆಗಾಗ ಬರುತ್ತಿರುತ್ತಾರೆ. ವಾರಾಂತ್ಯದಲ್ಲಿ ಹೊಸ ಹೊಸ ಗ್ರಾಹಕರು ಬರುತ್ತಾರೆ. ಆದರೆ ನಾವು ಹೆಚ್ಚು ಹೆಚ್ಚು ಹಿರಿಯ ಗ್ರಾಹಕರನ್ನು ನೋಡುತ್ತಿರುತ್ತೇವೆ.

• ಗ್ರಾಹಕರ ನಡವಳಿಕೆಯಲ್ಲಿ ಯಾವ ರೀತಿಯ ಬದಲಾವಣೆಗಳನ್ನು ಗಮನಿಸಿದ್ದೀರಿ?

ಹೊಳ್ಳ: ಗ್ರಾಹಕರಿಗೆ ಇಂದು ಅಸಂಖ್ಯವಾದ ಆಯ್ಕೆಗಳಿವೆ. ಅವರು ಬೇಗ ಅದನ್ನು ಬದಲಿಸಿಬಿಡುತ್ತಾರೆ. ಮೊದಲಿನ ನಿಷ್ಠೆ ಈಗ ಇಲ್ಲ.

ಕಾರಂತ್: ಬದಲಾವಣೆ ತುಂಬಾ ಸ್ಪಷ್ಟವಾಗಿದೆ. ಹಿಂದೆಲ್ಲ ಜನ ಮಾತನಾಡಲು, ಪತ್ರಿಕೆಗಳನ್ನು ಓದಲು ಮತ್ತು ತೀರಾ ನಿಧಾನಕ್ಕೆ ಕಾಫಿ ಕುಡಿಯಲು ಬರುತ್ತಿದ್ದರು. ಮುಖ್ಯವಾಗಿ ರಾಜಕೀಯ ಮತ್ತು ಕ್ರಿಕೆಟ್ ಸಂಭಾಷಣೆಗಳಲ್ಲಿ ಹೆಚ್ಚಾಗಿ ತೊಡಗಿಕೊಳ್ಳುತ್ತಿದ್ದರು. ಆಗೆಲ್ಲ ಉತ್ಸಾಹಭರಿತ ವಾತಾವರಣ ಸೃಷ್ಟಿಯಾಗುತ್ತಿತ್ತು. ನಾವು ಕ್ರಿಕೆಟ್ ಅಂಗಡಿಯನ್ನು ಸಹ ನಡೆಸುತ್ತಿದ್ದ ಕಾರಣ, ಹೊಸ ಕ್ರಿಕೆಟಿಗರು ಇಲ್ಲಿ ಸೇರುತ್ತಿದ್ದರು.

ಇಂದು, ಪ್ರತಿಯೊಬ್ಬರಿಗೂ ಅವಸರ. ಮತ್ತು ತಮ್ಮ ಫೋನ್ಗಳಲ್ಲಿ ಸ್ಕ್ರಾಲ್ ಮಾಡುವುದರಲ್ಲಿ ನಿರತರಾಗಿರುತ್ತಾರೆ. ಆಹಾರವನ್ನು ಆನಂದಿಸುವ ಆ ಯುಗ ಬಹುತೇಕ ಕಣ್ಮರೆಯಾಗಿದೆ.

• ಇಂದು ಒಂದು ರೆಸ್ಟೋರೆಂಟ್ ನಡೆಸುವುದರಲ್ಲಿ ಇರುವ ಅತ್ಯಂತ ಕಠಿಣ ಸವಾಲು ಯಾವುದು?

ಹೊಳ್ಳ: ಕೆಲಸದವರು. ಅದರಲ್ಲೂ ಕೆಲಸವನ್ನು ತೊರೆದು ಹೋಗುವವರ ಸಂಖ್ಯೆ ಸಾರ್ವಕಾಲಿಕ ಗರಿಷ್ಠ ಮಟ್ಟ ಮುಟ್ಟಿದೆ. ಕೆಲಸಗಾರರು ತೀರಾ ಸುಲಭವಾಗಿ ಉದ್ಯೋಗ ಬದಲಿಸಿ ಹೊರಟುಬಿಡುತ್ತಾರೆ. ಹಾಗೆ ಮಾಡಿದಾಗ ಬದಲಿ ಸಿಬ್ಬಂದಿಯನ್ನು ಹುಡುಕುವುದೂ ಕಷ್ಟ. ಅದರಲ್ಲೂ ನಮ್ಮ ಪಾಕ ಪದ್ಧತಿಯ ಪರಿಚಯವೇ ಇಲ್ಲದ ಪ್ರದೇಶಗಳಿಂದ ಬಂದಿರುತ್ತಾರೆ. ಅವರಿಗೆ ತರಬೇತಿ ಕೊಡುವುದು, ತಿಂಡಿಗಳ ರುಚಿಯಲ್ಲಿ ಸ್ಥಿರತೆಯನ್ನು ಕಾಯ್ದುಕೊಳ್ಳುವುದು ದೊಡ್ಡ ಸವಾಲು. ದಕ್ಷಿಣ ಕನ್ನಡದ ಪ್ರತಿಭೆಗಳು ಬರುವುದು ಬಹುತೇಕ ನಿಂತೇ ಹೋಗಿದೆ.

ಕಾರಂತ್: ನನ್ನ ಮಟ್ಟಿಗೆ ಗುಣಮಟ್ಟದ ಕಚ್ಛಾ ಸಾಮಗ್ರಿಗಳನ್ನು ಸಂಗ್ರಹಿಸುವುದು ಸವಾಲಾಗಿ ಹೋಗಿದೆ. ಈಗ ಉದಾಹರಣೆಗೆ ನೋಡಿ, ಹಸಿ ಮೆಣಸಿನಕಾಯಿ. ಇತ್ತೀಚೆಗೆ ಚಿಕ್ಕಬಳ್ಳಾಪುರದಿಂದ ಸರಬರಾಜು ಮಾಡಿರುವ ಮೆಣಸಿನಕಾಯಿ ಬಗ್ಗೆ ನಮಗೆ ತೃಪ್ತಿಯೇ ಇಲ್ಲ. ಅದರ ಖಾರದ ಮಟ್ಟದಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಇದರಿಂದ ನಾವು ಮಾಡುವ ಚಟ್ನಿಯ ಗುಣಮಟ್ಟ ಬದಲಾಗುತ್ತದೆ. ಉದ್ದನೆಯ ಮೆಣಸಿನಕಾಯಿಯ ಖಾರ ಕಡಿಮೆ. ಕಳೆದ ಐವತ್ತು ವರ್ಷಗಳಿಂದ ಕೆಲಸ ಮಾಡುತ್ತಿರುವ ರೈತರನ್ನು ನಾವು ಅವಲಂಬಿಸಿಕೊಂಡಿದ್ದೇವೆ. ಕಾರ್ಮಿಕರ ಸಮಸ್ಯೆಯೂ ದೊಡ್ಡದಿದೆ. ಕೆಲವರಿಗೆ ಮಾತ್ರ ಆಹಾರದಲ್ಲಿರುವ ಸೂಕ್ಷ್ಮತೆ ಅರ್ಥವಾಗುತ್ತದೆ. ನಿಮ್ಮ ತಟ್ಟೆಯಲ್ಲಿ ತೀರ ಸರಳವಾಗಿ ಕಾಣುವ ಆಹಾರಕ್ಕೆ ಅಡುಗೆ ಮನೆಯಲ್ಲಿ ಬಹಳ ಬೇಡಿಕೆಯಿರುತ್ತದೆ.

ಮಹಾ ಲಕ್ಷ್ಮೀ ಟಿಫನ್ ರೂಮ್-ನಲ್ಲಿ ವಾಸುದೇವ್ ಮತ್ತು ಗಿರೀಶ್ ಕಾರಂತ್.

• ಕಾರ್ಮಿಕರ ಕೊರತೆಯ ಬಗ್ಗೆ ಮಾತನಾಡುತ್ತಿದ್ದೀರಿ, ನೀವು ಎಂದಾದರೂ ಅಡುಗೆಮನೆಯನ್ನು ಆಧುನೀಕರಿಸಲು ಮತ್ತು ಆಹಾರದಲ್ಲಿ ಹೊಸತನ ತರಲು ಪ್ರಯತ್ನ ಮಾಡಿದ್ದೀರಾ? ಉದಾಹರಣೆಗೆ, ನಗರದ ಅತ್ಯಂತ ಹಳೆಯ ರೆಸ್ಟೋರೆಂಟ್ಗಳಲ್ಲಿ ಒಂದಾದ ಕೋನಾರ್ಕ್, ಯಂತ್ರದಿಂದ ತಯಾರಿಸಿದ ಚಹಾ ಮತ್ತು ಕಾಫಿಯನ್ನು ನೀಡುತ್ತಿದೆ. (ವಾಸ್ತವವಾಗಿ, ಇದು ಬೆಂಗಳೂರಿನಲ್ಲಿ ಚಹಾಕ್ಕೆ ಉತ್ತಮ ಸ್ಥಳಗಳಲ್ಲಿ ಒಂದಾಗಿದೆ).

ಹೊಳ್ಳ: ಹೊಸತನವನ್ನು ಅಳವಡಿಸಿಕೊಳ್ಳುವುದು ಅನಿವಾರ್ಯ. ನಾವೇನಾದರೂ ಹೊಸ ರೆಸ್ಟೋರೆಂಟ್ ಆರಂಭಿಸಿದರೆ ಹೊಸ ಮೆನು ನೀಡಬೇಕಾಗುತ್ತದೆ. ಚಹಾ, ಕಾಫಿ, ಅಥವಾ ವಡೆಯನ್ನು ಕೈಯಿಂದಲೇ ತಯಾರಿಸಬೇಕು, ಯಂತ್ರಗಳ ಬಳಕೆ ಸರಿಯಿಲ್ಲ. ವಿಶೇಷವಾಗಿ, ದಕ್ಷಿಣ ಭಾರತದ ಪ್ರತಿಯೊಂದು ಅಡುಗೆಯ ಹಿಂದೆ ಸಂಪೂರ್ಣ ಹಂತ-ಹಂತದ ಪ್ರಕ್ರಿಯೆ ಇದೆ. ಅಲ್ಲಿ ಹೃದಯ ಮತ್ತು ಕೈಗಳ ಸಂಯೋಜನೆ ಜಾದೂ ಮಾಡುತ್ತದೆ. ಅದೇ ಪದಾರ್ಥಗಳು ಮತ್ತು ಮಸಾಲೆಗಳಿರಬಹುದು. ಹಾಗಂತ ಇಬ್ಬರು ಒಂದೇ ರೀತಿಯ ಅಡುಗೆ ಮಾಡಲು ಸಾಧ್ಯವಿಲ್ಲ. ತಂತ್ರಜ್ಞಾನದಿಂದ ಕೆಲಸ ಸರಳವಾಗಬಹುದು, ಆದರೆ ರುಚಿಯನ್ನು ಹೆಚ್ಚಿಸಲು ಸಾಧ್ಯವಿಲ್ಲ. ಅದು ಪ್ರತಿ ವ್ಯಕ್ತಿಯ ಅಡುಗೆಯಲ್ಲಿರುವ ಕೌಶಲ್ಯಕ್ಕೆ ಸಂಬಂಧಿಸಿದ್ದಾಗಿದೆ. ಆಹಾರವನ್ನು ಯಂತ್ರಗಳಿಂದ ದೂರವಿಡೋಣ. ಚಹಾವನ್ನು ಕೂಡ.

ಕಾರಂತ್: ಅಂತಿಮವಾಗಿ ನಾವು ತಂತ್ರಜ್ಞಾನ ಮತ್ತು ಹೊಸತನವನ್ನು ಅಳವಡಿಸಿಕೊಳ್ಳುವುದು ಅನಿವಾರ್ಯ ಆಗಬಹುದು. ಆದರೆ ಅಂತಹ ಪ್ರಯತ್ನವನ್ನು ನಾವಿನ್ನೂ ಮಾಡಿಲ್ಲ. ರುಚಿ ಮತ್ತು ಸ್ಥಿರತೆಯನ್ನು ಕಾಯ್ದುಕೊಳ್ಳುವ ವಿಚಾರದಲ್ಲಿ ಸಮಸ್ಯೆಗಳಿರಬಹುದು. ಆ ವಿಚಾರದಲ್ಲಿ ನಾವು ರಾಜಿ ಮಾಡಿಕೊಳ್ಳುವುದಿಲ್ಲ. ನಾವು ಇಷ್ಟು ಸುದೀರ್ಘ ಕಾಲ ಯಶಸ್ವಿಯಾಗಿರುವುದಕ್ಕೆ ಒಂದ ಕಾರಣವಿದೆ. ತಂತ್ರಜ್ಞಾನವನ್ನು ಯಾವತ್ತಾದರೂ ಅಳವಡಿಸಿಕೊಳ್ಳಬಹುದು. ಆದರೆ ಭಾವನೆಗಳು ಹಾಗಲ್ಲ.

ಉಡುಪಿ ಶ್ರೀಕೃಷ್ಣ ಭವನ ಈಗಲೂ ಹಳೆಯ ಮತ್ತು ಹಿರಿಯ ಗ್ರಾಹಕರನ್ನು ಸೆಳೆಯುತ್ತಿದೆ.

• ವಿಸ್ತರಣೆ ಮಾಡುವ ಯೋಜನೆ ಏನಾದರೂ ಇದೆಯೇ?

ಹೊಳ್ಳ: ವಿಸ್ತರಣೆ ಮಾಡುವ ಯೋಚನೆ ಇದೆ. ಆದರೆ ಕಾರ್ಮಿಕರ ಕೊರತೆಯಿಂದಾಗಿ ಸುಮ್ಮನಿದ್ದೇವೆ. ಹಾಗೇನಾದರೂ ಮಾಡಿದರೆ ಅದು ನವದೆಹಲಿಯಲ್ಲಿ.

ಕಾರಂತ್: ವಿಸ್ತರಣೆ ಯೋಚನೆ ಇಲ್ಲ.

• ಹೊಸ ಯುಗದ ಕೆಫೆಗಳಾದ ರಾಮೇಶ್ವರಂ ಕೆಫೆಯು ದೇಶಾದ್ಯಂತ ಚರ್ಚೆಯ ವಿಷಯವಾಗಿವೆ. ಆಹಾರದ ಜೊತೆಗೆ, ಮಾರ್ಕೆಟಿಂಗ್ ಮತ್ತು ಸಾಮಾಜಿಕ ಮಾಧ್ಯಮದ ಪ್ರಚಾರದಂತಹ ಅಂಶಗಳು ಮುಖ್ಯವಾಗುತ್ತಿವೆ. ಈ ಟ್ರೆಂಡ್ ಅನ್ನು ನೀವು ಹೇಗೆ ನೋಡುತ್ತೀರಿ?

ಹೊಳ್ಳ: ಅವರು ಸ್ಪಷ್ಟವಾಗಿ ತಮ್ಮ ವ್ಯಾಪಾರದ ಸಾಮರ್ಥ್ಯವನ್ನು ಪ್ರದರ್ಶಿಸಿದ್ದಾರೆ. ಇಡೀ ಹೋಟೆಲ್ ಉದ್ಯಮಕ್ಕೆ ಅವರು ದೊಡ್ಡ ಪಾಠ. ಸರಿಸುಮಾರು ಪ್ರತಿ ಹದಿನೈದು ವರ್ಷಗಳಿಗೊಮ್ಮೆ ನಮ್ಮ ಊಟದ ಪ್ರವೃತ್ತಿ ಬದಲಾಗುತ್ತವೆ. 1970ರ ದಶಕದಲ್ಲಿ ಕಾಮತ್ ಗ್ರೂಪ್ ಈ ಉದ್ಯಮದಲ್ಲಿ ಹೊಸ ವಾತಾವರಣವನ್ನು ಪರಿಚಯಿಸಿದಾಗ ಉಳಿದವರು ಕೂಡ ಅದನ್ನು ಅನುಸರಿಸಿದರು. ಅದು ಮುಂದೆ ಸೆಲ್ಫ್-ಸರ್ವಿಸ್ ರೆಸ್ಟೋರೆಂಟ್ ಗಳಿಗೆ ದಾರಿಮಾಡಿಕೊಟ್ಟಿತು. ಆ ಬಳಿಕ ದರ್ಶಿನಿಗಳು ಬಂದವು. ಈಗ ಕ್ವಿಕ್ ಸರ್ವಿಸ್ ರೆಸ್ಟೋರೆಂಟ್ ಗಳು (QSR) ಹುಟ್ಟಿಕೊಂಡಿವೆ. ಅಂದರೆ ಒಂದೇ ಪರಿಕಲ್ಪನೆ ನಾನಾ ಅವತಾರ ತಾಳಿ ಬಂದಿವೆ ಅಷ್ಟೇ. ಈ ಟ್ರೆಂಡ್ ಇನ್ನೂ 15 ವರ್ಷ ಉಳಿಯಬಹುದು.

ಕಾರಂತ್: ಅತಿಯಾದ ಪ್ರಚಾರ ಅಥವಾ ಅತಿಯಾದ ಜನಸಂದಣಿ ಪರ ನಾನಿಲ್ಲ. ನಮ್ಮ ಹೋಟೆಲ್ ಮುಂದೆ ಸರತಿ ಸಾಲು ನಿಲ್ಲುವುದು, ನೂಕು-ನುಗ್ಗಲು ಅಥವಾ ಗೌಜು-ಗದ್ದಲ ಇರಬಾರದು ಎಂದು ನಾವು ಯಾವತ್ತೂ ಬಯಸುತ್ತೇವೆ.

ನಮ್ಮ ಗ್ರಾಹಕರೇನಿದ್ದರೂ ಆರಾಮವಾಗಿ ಹೋಟೆಲ್ ಒಳಗೆ ಬಂದು ಆಹಾರವನ್ನು ಆಸ್ವಾದಿಸಿ ಖುಷಿ ಖುಷಿಯಿಂದ ತೆರಳಬೇಕು. ಇಷ್ಟು ಸೀಮಿತ ಸಿಬ್ಬಂದಿಯೊಂದಿಗೆ ನಾವೇನು ಮಾಡುತ್ತಿದ್ದೇವೆಯೋ ಅದರ ಬಗ್ಗೆ ನಮಗೆ ತೃಪ್ತಿಯಿದೆ.

• ಫುಡ್ ಡೆಲಿವರಿ ಆ್ಯಪ್ ಜೊತೆ ಒಪ್ಪಂದ ಮಾಡಿಕೊಂಡಿದ್ದೀರಾ?

ಹೊಳ್ಳ: ಹೌದು. ಆದರೆ ಇದರ ಬಗ್ಗೆ ನಾವು ಆದಷ್ಟು ಬೇಗ ಮರುಚಿಂತನೆ ಮಾಡಬಹುದು. ಅಷ್ಟಕ್ಕೂ ಇದು ಸಮಾನ ಅವಕಾಶದ ಕ್ಷೇತ್ರವಲ್ಲ. ಮಾರುಕಟ್ಟೆಯ ಡಿಮಾಂಡು ಏನೇ ಇದ್ದರೂ ಒಂದು ಆಹಾರ, ತಿಂಡಿಯನ್ನು ತಾಜಾ ತಾಜಾ, ನೇರಾ ನೇರ ಆಸ್ವಾದಿಸಬೇಕು. ಅದು ನಿಜವಾದ ಖುಷಿ. ಇದನ್ನು ನಾವು ಓಟಿಟಿ ಮತ್ತು ಸಿನೆಮಾ ಅನುಭವಕ್ಕೆ ಹೋಲಿಸಬಹುದಾಗಿದೆ. ನಾವು ಹೆಚ್ಚು ಹೆಚ್ಚು ಭ್ರಮೆಗಳಲ್ಲಿ ಬದುಕುತ್ತಿದ್ದೇವೆ. ದಿನದಿಂದ ದಿನಕ್ಕೆ ಮಾನವ ಸಂವಹನಗಳು ಕುಗ್ಗುತ್ತಿವೆ. ಅದರ ಪರಿಣಾಮ ಏನು ಎಂಬುದನ್ನು ನಾವು ಕಣ್ಣಾರೆ ನೋಡುತ್ತಿದ್ದೇವೆ. ಯಾವುದೇ ದಿನವಿರಲಿ, ಎಷ್ಟೇ ಗಡಿಬಿಡಿ-ಗೊಂದಲವಿದ್ದರೂ ನಾನು ಅಂತಿಮವಾಗಿ ಆಯ್ಕೆ ಮಾಡಿಕೊಳ್ಳುವುದು ಹೋಟೆಲ್-ಗಳನ್ನು. ಆ ಅನುಭವವನ್ನು ಮೀರಿಸುವುದಕ್ಕೆ ಸಾಧ್ಯವಿಲ್ಲ.

ಕಾರಂತ್: ಇಲ್ಲ, ಇಲ್ಲ. ಅದೊಂದು ದೊಡ್ಡ ತಲೆನೋವು

• ನಿಮ್ಮ ಮುಂದಿನ ತಲೆಮಾರು ಈ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುವರೇ?

ಹೊಳ್ಳ: ಅದನ್ನು ಈಗಲೇ ಹೇಳಲು ಸಾಧ್ಯವಿಲ್ಲ. ನನ್ನ ಇಬ್ಬರೂ ಮಕ್ಕಳು ಅಮೆರಿಕದಲ್ಲಿ ಇದ್ದಾರೆ. ನೋಡೋಣ ಮುಂದೆ ಏನೆಲ್ಲ ಬದಲಾವಣೆಯಾಗುತ್ತದೆ ಎಂದು.

ಕಾರಂತ: ಆ ಬಗ್ಗೆ ನನಗೆ ಅನುಮಾನವಿದೆ. ನನ್ನ ಮಗ ಇನ್ನೂ ಅಂತಹ ಆಸಕ್ತಿ ತೋರಿಸಿಲ್ಲ.

Next Story