ಪ್ರೇತ ವಿವಾಹ | ಜಾಹೀರಾತು ಮೂಲಕ ವೈರಲ್‌ ಆಗಿದ್ದ ಹೆಣ್ಣಿನ ಕುಲೆ ಮದುವೆ ಫಿಕ್ಸ್‌!
x

ಪ್ರೇತ ವಿವಾಹ | ಜಾಹೀರಾತು ಮೂಲಕ ವೈರಲ್‌ ಆಗಿದ್ದ ಹೆಣ್ಣಿನ ಕುಲೆ ಮದುವೆ ಫಿಕ್ಸ್‌!

"ಇಂತಹ ಪ್ರಸಂಗಗಳು ಮೂಢನಂಬಿಕೆಗಳ ಪರಮಾವಧಿ. ಭೂತ, ಪ್ರೇತ, ಪಿಶಾಚಿ ಎಂಬ ಕಲ್ಪನೆಗಳೆಲ್ಲಾ ಪೊಳ್ಳು ನಂಬಿಕೆಗಳು. ಕುಲೆಗಳ ಮದುವೆ ಎನ್ನುವುದು ಕೇವಲ ಮಾನಸಿಕ ತೃಪ್ತಿಗಾಗಿ ಮಾಡುವಂತಹ ಕ್ರಿಯೆ ಬಿಟ್ಟರೆ; ಅದಕ್ಕೆ ವೈಜ್ಞಾನಿಕ ನೆಲೆಗಟ್ಟಿಲ್ಲ," ಎಂದು ಸಾಹಿತಿ ಪ್ರೊ. ನಾ ದಾಮೋದರ ಶೆಟ್ಟಿ ಹೇಳಿದ್ದಾರೆ


ಅಂತೂ ಆ ಹೆಣ್ಣು- ಗಂಡಿನ ಮದುವೆ ಫಿಕ್ಸ್‌ ಆಗಿದೆ! 30 ವರ್ಷದ ಯುವತಿಯೊಂದಿಗೆ 40ರ ಹರೆಯದ ಗಂಡಿನ ಮದುವೆ ಮಾತುಕತೆಯನ್ನು ಗುರು ಹಿರಿಯರು ಮತ್ತು ಕುಟುಂಬಸ್ಥರು ನಿಶ್ಚಯಿಸಿದ್ದಾರೆ! ಹೆಣ್ಣು ʼಬಂಗೇರ ಬಳಿʼ ಯಾಗಿದ್ದು, ಗಂಡು ʼಬಂಜನ್‌ ಬಳಿʼ ಹಾಗೂ ಒಂದೇ ಜಾತಿಯವರಾಗಿರುವ ಕಾರಣ ಈ ಮದುವೆಗೆ ಯಾವ ವಿಘ್ನವೂ ಇಲ್ಲ.

ಇಂತಹುದೊಂದು ಅಪರೂಪದ ಮದುವೆ ಆಟಿ (ಆಷಾಡ) ತಿಂಗಳಲ್ಲಿ ಅಂದರೆ ಜುಲೈ ಮತ್ತು ಆಗಸ್ಟ್‌ ತಿಂಗಳ ಎರಡು ಸಂಕ್ರಾಂತಿಗಳ ನಡುವೆ ಬರುವ ಅಮಾವಾಸ್ಯೆಯಂದು ನಡೆಸಲು ಪುತ್ತೂರಿನ ವಧುವಿನ ಕುಟುಂಬ ನಿರ್ಧರಿಸಿದೆ.

ನೀವು ಊಹಿಸಿದಂತೆ ಇದು ಗಂಡು-ಹೆಣ್ಣಿನ ಅಸಲೀ ಮದುವೆಯಲ್ಲ; ಬದಲಾಗಿ ಕರಾವಳಿಯ ತುಳು ಸಂಪ್ರದಾಯದ ಕುಲೆ ಮದುವೆ. ಎರಡು ವಾರದ ಹಿಂದೆ ಈ ಮದುವೆಗೆ ವರ ಬೇಕಿದೆ ಎಂದು ಜಾಹೀರಾತು ನೀಡಿದ್ದ ವಧುವಿನ ಕುಟುಂಬಕ್ಕೆ ಕೊನೆಗೂ ವರ ಸಿಕ್ಕಿದ್ದು, ತಡ ಮಾಡದೇ ಮದುವೆ ಮಾತುಕತೆಯನ್ನೂ ನಡೆಸಿರುವ ಕುಟುಂಬ, ಇದೀಗ ಮುಹೂರ್ತವನ್ನೂ ಫಿಕ್ಸ್‌ ಮಾಡಿದೆ.

ತುಳು ಭಾಷಿಕ ಪ್ರದೇಶದಲ್ಲಿ ಕುಲೆ ಎಂಬ ಪದದ ಅರ್ಥ ಸತ್ತವರ ಆತ್ಮ ಅಥವಾ ಪ್ರೇತ ಎಂಬುದಾಗಿದೆ. ತುಳು ಜನಪದರ ನಂಬಿಕೆ ಪ್ರಕಾರ ಸತ್ತವರಿಗೆ ಪ್ರತಿ ವರ್ಷ ಆಷಾಢದ ಅಮಾವಾಸ್ಯೆ ದಿನ ಎಡೆ ಬಡಿಸಿ ಗೌರವಿಸುವ ಸಂಪ್ರದಾಯವಿದೆ. ಮದುವೆಯಾಗದೇ ಸಾವು ಕಂಡಿದ್ದರೆ ಅವರ ಪ್ರೇತಗಳ ಬಾಧೆ ತಪ್ಪಿಸಲು ಅಂತಹ ಗಂಡು ಅಥವಾ ಹೆಣ್ಣು ಪ್ರೇತಗಳನ್ನು ಮದುವೆ ಮಾಡಿಸುವ ನಂಬಿಕೆಯೂ ಇದೆ. ತುಳು ಜನರು ಬಹುತೇಕ ಅಳಿಯ ಕಟ್ಟಿನ ಮಾತೃ ಪ್ರಧಾನ ಸಂಸ್ಕೃತಿಗೆ ಸೇರಿದ್ದರಿಂದ ಅವರವರ ತಾಯಿ ಕುಟುಂಬದ ಮೂಲ ಮನೆಗಳಲ್ಲಿ ನಡೆಯುವ ದೈವಾರಾಧನೆ ಸಂದರ್ಭದಲ್ಲಿ; ಮದುವೆಯಾಗದೆ ಸತ್ತವರಿಗೆ ಸದ್ಗತಿ ಸಿಗಲು ಮದುವೆ ಮಾಡಿಸುವ ಬಗ್ಗೆ ದೈವ ಆಣತಿ ನೀಡುವ ಸಂಪ್ರದಾಯವೂ ಹಲವೆಡೆ ಇನ್ನೂ ಕಾಣಸಿಗುತ್ತದೆ.

ಇದನ್ನು ಮೂಢನಂಬಿಕೆ ಎಂದು ಹಲವರು ಪರಿಭಾವಿಸಿದರೂ , ಶಿಕ್ಷಿತ ವರ್ಗವೂ ಅವರವರ ಮನೆಗಳಲ್ಲಿ ಇಂತಹ ಕಟ್ಟುಪಾಡುಗಳನ್ನು ಇನ್ನೂ ಇಟ್ಟುಕೊಂಡಿರುವುದನ್ನು ಕಾಣಬಹುದು. ಆದರೆ, ಇತ್ತೀಚೆಗೆ ಎಲ್ಲ ಮನೆತನಗಳಲ್ಲಿ ಹೆಚ್ಚಿನವರು ಊರು ಬಿಟ್ಟು ಕೆಲಸಕ್ಕೆಂದು ಪರವೂರಿಗೆ ಹೋಗಿರುವ ಸಂದರ್ಭಗಳಲ್ಲಿ ಮತ್ತು ಕುಟುಂಬಗಳ ಸಂಪರ್ಕವೇ ಕಡಿದುಹೋಗಿರುವ ಕಾರಣಕ್ಕೆ ಅನೇಕ ಕಡೆ ಕುಲೆಗಳ ಮದುವೆಗೆ ಹೆಣ್ಣು ಅಥವಾ ಗಂಡು ಸಿಗುವುದಿಲ್ಲವಂತೆ!

ಇಲ್ಲಿ ಆಗಿರುವುದು ಅದೇ! ಪುತ್ತೂರಿನ ಮಧು ಕುಲಾಲ್‌ ಅವರು ದೂರದ ದುಬೈನಲ್ಲಿ ಉದ್ಯೋಗಿ. ಅವರ ಕುಟುಂಬಕ್ಕೆ 30 ವರ್ಷಗಳ ಹಿಂದೆ ತೀರಿಕೊಂಡ ಹೆಣ್ಣು ಮಗುವಿನ (ಈಗ ಇದ್ದಿದ್ದರೆ 30ರ ಪ್ರಾಯದ ಯುವತಿ) ಸಮಸ್ಯೆ ಇದೆ ಎಂದು ಗೊತ್ತಾಯಿತಂತೆ. "ನನ್ನ ದೊಡ್ಡಮ್ಮನ ಮಗಳು ಜನಿಸಿ ನಾಲ್ಕು ದಿನಗಳಲ್ಲೇ ಪರಲೋಕ ಸೇರಿದ್ದಳು! ಹಾಗಾಗಿ ಆ ಮಗುವಿನ ಕುಲೆಗೆ ಈಗ 30 ವರ್ಷ. ನನ್ನ ತಂಗಿಯ ಸ್ಥಾನದಲ್ಲಿರುವ ಆಕೆಗೆ ಮದುವೆ ಮಾಡಲು ಕಳೆದ ನಾಲ್ಕು ವರ್ಷಗಳಿಂದ ಗಂಡು ಕುಲೆ ಹುಡುಕುತ್ತಿದ್ದೆವು. ನಾನು ರಜೆಯಲ್ಲಿ ಊರಿಗೆ ಬಂದಿರುವ ಕಾರಣ ಈ ಸಲ ಸ್ಥಳೀಯ ಪತ್ರಿಕೆಯಲ್ಲಿ ಜಾಹೀರಾತು ಹಾಕಿಸಿದೆ. ಎರಡೇ ದಿನಗಳಲ್ಲಿ ಸುಮಾರು ದೂರವಾಣಿ ಕರೆಗಳು ಬಂದವು. ನಮ್ಮದೇ ಸಮುದಾಯಕ್ಕೆ ಸೇರಿದ ಗಂಡು ಕುಲೆಯ ಬಗ್ಗೆ ಮಾಹಿತಿ ದೊರೆತ ಮೇಲೆ ಅವರ ಮನೆಯವರ ಜತೆ ಮದುವೆ ನಿಶ್ಚಯ ಮಾಡಿಕೊಂಡಿದ್ದೇವೆ. ಬರುವ ಆಟಿ ತಿಂಗಳಲ್ಲಿ ಮದುವೆ ನಿಗದಿಯಾಗಿದೆ," ಎಂದು ಮಧು ʼದ ಫೆಡರಲ್‌ ಕರ್ನಾಟಕʼಕ್ಕೆ ತಿಳಿಸಿದ್ದಾರೆ.

"ಅನೇಕ ಕರೆಗಳು ಬಂದಿದ್ದವು. ಆದರೆ ಕರೆ ಮಾಡಿದ ಬಹುತೇಕರು ನಮ್ಮ ಸಮುದಾಯಕ್ಕೆ ಸೇರಿದವರಾಗಿರಲಿಲ್ಲ. ಪೂಜಾರಿ, ಸಪಲಿಗ ಸೇರಿದಂತೆ ಬೇರೆ ಜಾತಿಯವರೂ ಕುಲೆಗಳ ಮದುವೆ ಪ್ರಸ್ತಾಪ ತಂದಿದ್ದರು. ಆದರೆ ಸುಮಾರು 50 ಕರೆಗಳು ನಮ್ಮದೇ ಜಾತಿವರದಾಗಿತ್ತು. ಕೊನೆಗೆ ನಮ್ಮ ಜಾತಿಯ ವಿಧಿ ವಿಧಾನಗಳಿಗೆ ಪೂರಕವಾಗಿರುವ ʼಬಳಿʼ ಹೊಂದಿಕೊಂಡ ಕಾರಣ ಆ ಕುಲೆ ಜತೆ ಸಂಬಂಧ ಬೆಳೆಸಿದೆವು," ಎಂದು ಅವರು ಹೇಳುತ್ತಾರೆ. "ನನ್ನ ತಂಗಿಯ ಸ್ಥಾನದಲ್ಲಿದ್ದ ಹೆಣ್ಣು ಜನಿಸಿದ ನಾಲ್ಕೇ ದಿನಗಳಲ್ಲಿ ಇಹಲೋಕ ತ್ಯಜಿಸಿ ಈಗ 30 ವರ್ಷವಾಗಿದ್ದು, ಆ ಗಂಡು ಹುಟ್ಟಿದ ಒಂದು ವಾರದಲ್ಲೇ ತೀರಿಕೊಂಡು ಈಗ 40 ವರ್ಷಗಳಾಗಿವೆ!," ಎಂದೂ ಅವರು ಹೇಳಿದ್ದಾರೆ.

"ಮೂಢ ನಂಬಿಕೆಯೆಂದು ಹಲವರು ಹೇಳುತ್ತಾರೆ. ಆದರೆ ಇದು ನಮ್ಮ ತುಳು ಸಂಪ್ರದಾಯ. ಇದರಿಂದ ಯಾರಿಗೇನೂ ತೊಂದರೆಯಾಗುವುದಿಲ್ಲವಲ್ಲ!," ಎಂದೂ ಅವರು ತಮ್ಮ ನಡೆಯನ್ನು ಸಮರ್ಥಿಸಿಕೊಂಡರು.

ಜತೆಗೆ "ಬಂದ ಸುಮಾರು 300 ಕ್ಕಿಂತಲೂ ಹೆಚ್ಚು ಕರೆಗಳಲ್ಲಿ ಜನ ತಮ್ಮತಮ್ಮ ಕಳೆದುಕೊಂಡ ಬಂಧುಗಳ ಮದುವೆಗೆ ಪ್ರಯತ್ನಿಸುತ್ತಿರುವುದು ಗೊತ್ತಾಯಿತು. ಹಾಗಾಗಿ ಜಾಹೀರಾತಿನಲ್ಲಿ ಪ್ರಕಟಿಸಿರುವ ದೂರವಾಣಿ ಸಂಖ್ಯೆಗೆ ಕರೆ ಮಾಡಿದವರಿಗೆ ಅಂತಹುದೇ ಕರೆ ಮಾಡಿದ ಇತರರನ್ನು ಸಂಪರ್ಕಿಸುವಂತೆ ಮಾಡುತ್ತಿದ್ದೇನೆ. ಇದರಿಂದ ಒಂದೆರಡು ಕುಟುಂಬಗಳ ಕುಲೆ ಮದುವೆಗೆ ಸಹಾಯವಾಗಿದೆ," ಎಂದೂ ಮಧು ಹೇಳುತ್ತಾರೆ.

ಜಾಹೀರಾತು

ದಶಕಗಳ ಹಿಂದೆ ನಿಧನಳಾದ ಆ ಮಗುವಿಗೆ ವರ ಹುಡುಕುವ ಅನಿರೀಕ್ಷಿತ ಜಾಹೀರಾತು ಸಾಕಷ್ಟು ಗಮನ ಸೆಳೆದಿತ್ತು. "30 ವರ್ಷಗಳ ಹಿಂದೆ ಸತ್ತ ನಮ್ಮ ಜಾತಿಯ ಹುಡುಗಿಗೆ 30 ವರ್ಷಗಳ ಹಿಂದೆ ಸತ್ತ ಹುಡುಗನ ಜತೆ ಪ್ರೇತ ವಿವಾಹ ಮಾಡಲು ಸಿದ್ಧರಿದ್ದರೆ, ದಯವಿಟ್ಟು ನಮ್ಮನ್ನು ಸಂಪರ್ಕಿಸಿ," ಎಂಬ ಆ ಜಾಹೀರಾತು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಯಾಗುವಂತೆ ಮಾಡಿತ್ತು. ಮೂಢನಂಬಿಕೆ ಮತ್ತು ಸಂಪ್ರದಾಯಗಳ ಬಗ್ಗೆ ಸಾಕಷ್ಟು ವಾದಗಳೂ ನಡೆದಿದ್ದವು.

ಮೂಢನಂಬಿಕೆ ಪರಮಾವಧಿ!

ತುಳು ಜಾನಪದ ವಿದ್ವಾಂಸ ಹಾಗೂ ಕನ್ನಡ ಸಾಹಿತಿ ನಾ. ದಾಮೋದರ ಶೆಟ್ಟಿ ಅವರು ʼದ ಫೆಡರಲರ್‌ ಕರ್ನಾಟಕʼಕ್ಕೆ ಮಾತನಾಡಿ,"ಇಂತಹ ಪ್ರಸಂಗಗಳು ಮೂಢನಂಬಿಕೆಗಳ ಪರಮಾವಧಿ. ಭೂತ, ಪ್ರೇತ, ಪಿಶಾಚಿ ಎಂಬ ಕಲ್ಪನೆಗಳೆಲ್ಲಾ ಪೊಳ್ಳು ನಂಬಿಕೆಗಳು. ಇಂತಹ ಭ್ರಮೆಗಳನ್ನು ಬೆಂಬಲಿಸುವುದೂ ತಪ್ಪು. ಅದರಲ್ಲೂ ಸತ್ತವರ ಆತ್ಮಗಳಿಗೂ ಜಾತಿ, ಗೋತ್ರ ಇದೆ ಎನ್ನುವ ವಾದ ತೀರಾ ಬಾಲಿಶತನದಿಂದ ಕೂಡಿದೆ," ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ. "ಕುಲೆಗಳ ಮದುವೆ ಎನ್ನುವುದು ಕೇವಲ ಮಾನಸಿಕ ತೃಪ್ತಿಗಾಗಿ ಮಾಡುವಂತಹ ಕ್ರಿಯೆ ಬಿಟ್ಟರೆ; ಅದಕ್ಕೆ ವೈಜ್ಞಾನಿಕ ನೆಲೆಗಟ್ಟಿಲ್ಲ," ಎಂದವರು ಹೇಳಿದರು.

ಮನುಷ್ಯನಿಗೇ ಜಾತಿಯಿಲ್ಲ ಎಂಬ ನಂಬಿಕೆ ನಮ್ಮದು. ಇನ್ನು ಸತ್ತುಹೋದವರ ಆತ್ಮಗಳಿಗೆ ಅಥವಾ ಕುಲೆಗಳಿಗೆ ಜಾತಿ ಇದೆ ಎನ್ನುವುದು ಪೊಳ್ಳು. ಕುಲೆ, ಪ್ರೇತ, ಪಿಶಾಚಿ ಎನ್ನುವುದೆಲ್ಲ ಭ್ರಮೆಯಷ್ಟೇ. ಅವೆಲ್ಲವೂ ಸತ್ಯವಲ್ಲ. ಕೇವಲ ಮಾನಸಿಕ ನೆಮ್ಮದಿಗೆ ಮನುಷ್ಯ ಕಂಡುಕೊಂಡ ಒಂದು ವಿಧಾನ ಅಷ್ಟೇ ಎಂದವರು ಸ್ಪಷ್ಟವಾಗಿ ಹೇಳಿದರು. "ಕೆಲವಡೆ ಮಳೆಯಾಗಲು ಕಪ್ಪೆಗಳ ಮದುವೆ ಮಾಡುತ್ತಾರೆ. ಇನ್ನು ಕೆಲವಡೆ ಅಶ್ವತ್ಥ ಮರಕ್ಕೇ ಮದುವೆ ಮಾಡುತ್ತಾರೆ. ಈ ರೀತಿಯ ಭ್ರಮಾಧೀನ ನಂಬಿಕೆಯೇ ಕುಲೆಗಳ ಮದುವೆ," ಎಂದವರು ವ್ಯಾಖ್ಯಾನಿಸಿದರು.

ಈ ದೇವಸ್ಥಾನದಲ್ಲಿ ಪ್ರೇತ ವಿವಾಹ!

ಕರಾವಳಿ ಕರ್ನಾಟಕದಲ್ಲಿ ಪ್ರೇತ ವಿವಾಹಗಳು ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯ. ಈ ಮದುವೆಗಳನ್ನು ಸಾಮಾನ್ಯವಾಗಿ ಕುಟುಂಬದ ಮನೆಗಳಲ್ಲಿ ನಡೆಸಲಾಗುತ್ತದೆ. ಆದರೆ ಕೂಡ್ಲಿ ಜನಾರ್ದನ ದೇವಸ್ಥಾನದಂತಹ ನಿರ್ದಿಷ್ಟ ದೇವಾಲಯಗಳಲ್ಲಿ ನಡೆಸಲಾಗುತ್ತದೆ. ಈ ದೇವಾಲಯವು ಹಲವು ವರ್ಷಗಳಿಂದ ಪ್ರೇತ ವಿವಾಹಗಳನ್ನು ವಿಶೇಷವಾಗಿ ಪ್ರತಿ ತಿಂಗಳ ಅಮಾವಾಸ್ಯೆಯಂದು ನಡೆಸುತ್ತಿದೆ.

ಉಡುಪಿ ಜಿಲ್ಲೆಯ ಹೆರಾಡಿಯ ಕೂಡ್ಲಿ ಜನಾರ್ದನ ದೇವಸ್ಥಾನವು ತನ್ನ ವಿಶಿಷ್ಟ ಆಚರಣೆಗಳಿಗೆ ಹೆಸರುವಾಸಿಯಾಗಿದೆ. ಪೂಜಾರಿ ದಿನಾಂಕವನ್ನು ನಿಗದಿಪಡಿಸುವುದರೊಂದಿಗೆ ಮತ್ತು ಎರಡೂ ಕುಟುಂಬಗಳನ್ನು ತೊಡಗಿಸಿಕೊಳ್ಳುವುದರೊಂದಿಗೆ ಆಚರಣೆಯು ಪ್ರಾರಂಭವಾಗುತ್ತದೆ. ಸಾಂಪ್ರದಾಯಿಕ ಮದುವೆಯ ಉಡುಪನ್ನು ತಯಾರಿಸಲಾಗುತ್ತದೆ. ವಧುವಿಗೆ ಸೀರೆ ಮತ್ತು ವರನಿಗೆ ಸೂಕ್ತವಾದ ಬಟ್ಟೆ, ಎರಡು ಸಿಪ್ಪೆಯಿಲ್ಲದ ತೆಂಗಿನಕಾಯಿಗಳನ್ನು ಪುರುಷ ಮತ್ತು ಸ್ತ್ರೀ ಶಕ್ತಿಗಳನ್ನು ಪ್ರತಿನಿಧಿಸಲು ಬಳಸಲಾಗುತ್ತದೆ.

Read More
Next Story