ಕರ್ನಾಟಕದಲ್ಲಿ ಹೆಚ್ಚುತ್ತಿರುವ ಸುದ್ದಿ ಮಾಧ್ಯಮಗಳ ವಿರುದ್ದದ ʼನಿರ್ಬಂಧ ಆದೇಶʼದ ಸಂಪ್ರದಾಯ
x

ಕರ್ನಾಟಕದಲ್ಲಿ ಹೆಚ್ಚುತ್ತಿರುವ ಸುದ್ದಿ ಮಾಧ್ಯಮಗಳ ವಿರುದ್ದದ ʼನಿರ್ಬಂಧ ಆದೇಶʼದ ಸಂಪ್ರದಾಯ

ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕ ಜೀವನದಲ್ಲಿರುವ ಖ್ಯಾತ ಮತ್ತು ಪ್ರಸಿದ್ಧ ವ್ಯಕ್ತಿಗಳು ಕೆಲ ಮಾಧ್ಯಮಗಳು ಅತಿರಂಜಕ ಸುದ್ದಿಗಳನ್ನು ಪ್ರಸಾರ ಮಾಡುತ್ತಿದ್ದಾರೆಂದು ಭಾವಿಸಿ ಈ ರೀತಿಯ ನಿರ್ಬಂಧಕ ಆದೇಶಗಳನ್ನು ತರುವ ಸಂಪ್ರದಾಯ ಆರಂಭವಾಗಿದೆ.


ಲೈಂಗಿಕ ದೌರ್ಜನ್ಯದ ಆರೋಪಕ್ಕೆ ಸಿಲುಕಿರುವ ಜೆಡಿಎಸ್‌ ಸಂಸದ ಪ್ರಜ್ವಲ್‌ ರೇವಣ್ಣ ಅವರ ಕತ್ತಿನ ಸುತ್ತ ಕಾನೂನಿನ ಕುಣಿಕೆ ದಿನದಿಂದ ದಿನಕ್ಕೆ ಬಿಗಿಯಾಗುತ್ತಿದ್ದು, ಇದರಿಂದ ಬಿಜೆಪಿ ಮತ್ತು ಅದರ ಮಿತ್ರ ಪಕ್ಷ ಜೆಡಿಎಸ್‌ ಎರಡೂ ತೀವ್ರ ಮುಜುಗರಕ್ಕೆ ಒಳಗಾಗಿರುವ ಹೊತ್ತಿನಲ್ಲಿಯೇ, ಮಾಜಿ ಉಪ ಮುಖ್ಯಮಂತ್ರಿ ಹಾಗೂ ಇತ್ತೀಚಿನ ವರೆಗೂ ಬಿಜೆಪಿಯ ಹಿರಿಯ ನಾಯಕರಾಗಿದ್ದು, ಪಕ್ಷದಿಂದ ಉಚ್ಛಾಟನೆಗೊಂಡಿರುವ ಕೆ.ಎಸ್.‌ ಈಶ್ವರಪ್ಪ ಅವರ ಪುತ್ರ ಕೆ ಇ ಕಾಂತೇಶ್‌ ಅವರಿಗೆ ಸಂಬಂಧಿಸಿದ್ದು ಎನ್ನಲಾದ ʼಅಶ್ಲೀಲ, ಫೋಟೋ, ವಿಡಿಯೋ ಸ್ಕ್ರೀನ್‌ ಷಾಟ್‌ ಮತ್ತು ಆಡಿಯೋ ಪ್ರಸಾರ ಮತ್ತು ಪ್ರಕಟಣೆ ಮಾಡುವುದರ ವಿರುದ್ಧ ಬೆಂಗಳೂರಿನ ಐದನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸೆಷನ್ಸ್‌ ನ್ಯಾಯಾಲಯ ಮಧ್ಯಂತರ ನಿರ್ಬಂಧ ಆದೇಶ ನೀಡಿದೆ. ಈ ಆದೇಶ ಒಟ್ಟು ಐವತ್ತು ಸುದ್ದಿ ಮಾಧ್ಯಮಗಳು ಹಾಗೂ ಸಾಮಾಜಿಕ ಮಾಧ್ಯಮಗಳಿಗೆ ಅನ್ವಯಿಸುತ್ತದೆ.

ತಮ್ಮ ಮಾನಹಾನಿ ಮಾಡುವಂಥ ಯಾವುದೇ ಅಶ್ಲೀಲ, ಫೋಟೋ, ವಿಡಿಯೋ-ಆಡಿಯೋಗಳನ್ನು ಪ್ರಸಾರ, ಪ್ರಸರಣ, ಮತ್ತು ಪ್ರಕಟಣೆ ಮಾಡದಿರುವ ಬಗ್ಗೆ ಮಾಧ್ಯಮಗಳಿಗೆ ನಿರ್ಬಂಧ ಹೇರಬೇಕೆಂದು ಕೋರಿ ಕೆ. ಇ. ಕಾಂತೇಶ್‌ ಪರವಾಗಿ ವಕೀಲ ವಿನೋದ್‌ ಕುಮಾರ್‌ ಸಲ್ಲಿಸಿದ ದಾವೆಯನ್ನು ವಿಚಾರಣೆ ನಡೆಸಿದ ನ್ಯಾಯಾಲಯ ಈ ರೀತಿ ಇಂಜಕ್ಷನ್‌ ಆರ್ಡರ್‌ (ನಿರ್ಬಂಧ ಆದೇಶ) ನೀಡಿದೆ. ಹಾಗೂ ಈ ಕುರಿತ ವಿಚಾರಣೆಯನ್ನು ಆಗಸ್ಟ್‌ 3 ಕ್ಕೆ ಮುಂದೂಡಿದೆ.

ಈಶ್ವರಪ್ಪ ಅವರು, ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ನಾಯಕ ಯಡಿಯೂರಪ್ಪ ಅವರ ಪುತ್ರ ಹಾಗೂ ಬಿಜೆಪಿಯ ಅಧಿಕೃತ ಅಭ್ಯರ್ಥಿ ಬಿ ವೈ ರಾಘವೇಂದ್ರ ಅವರ ವಿರುದ್ಧ, ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಶಿವಮೊಗ್ಗ ಕ್ಷೇತ್ರಕ್ಕೆ ಮೇ 7 ರಂದು ಚುನಾವಣೆ ನಡೆಯಲಿದೆ. ಕಾಂತೇಶ್‌ ಅವರ ಮಾನಹಾನಿ ಮಾಡುವಂಥ ಯಾವುದೇ ಅಶ್ಲೀಲ, ಫೋಟೋ, ವಿಡಿಯೋ-ಆಡಿಯೋಗಳನ್ನು ಪ್ರಸಾರ, ಪ್ರಸರಣ, ಮತ್ತು ಪ್ರಕಟಣೆ ಮಾಡಿದರೆ, ಅದರಿಂದ ಈಶ್ವರಪ್ಪನವರ ಚುನಾವಣಾ ಭವಿಷ್ಯಕ್ಕೆ ಅಡ್ಡಿಯಾಗಬಹುದೆಂದು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಈಶ್ವರಪ್ಪನವರ ಸಮೀಪವರ್ತಿಗಳು ʼದ ಫೆಡರಲ್-ಕರ್ನಾಟಕʼಕ್ಕೆ ತಿಳಿಸಿದ್ದಾರೆ.

ಆದರೆ ನಿರ್ಬಂಧಿಸಿರುವ ಆಡಿಯೋ ವಿಡಿಯೋಗಳಲ್ಲಿ ಅಂಥ ಪರಿಣಾಮ ಬೀರುವಂಥದ್ದು ಏನಾದರೂ ಇದೆಯೇ? ಎಂದು ಪ್ರಶ್ನಿಸಿದರೆ, ಅವೆಲ್ಲವೂ ತಾಂತ್ರಿಕವಾಗಿ ರೂಪಿಸಿರಬಹುದಾದ, ಆದರೆ, ಕಾಂತೇಶ್‌ ಅವರ ಮಾನಹಾನಿಯಾಗುವಂಥ ಆಡಿಯೋ ವಿಡಿಯೋ ಇರಬಹುದು. ಆದರೆ ಅವು ಇರುವುದೇ ನಮಗೆ ಅನುಮಾನ. ಆದರೂ, ಮುನ್ನೆಚ್ಚರಿಕೆ ಕ್ರಮವಾಗಿ ನ್ಯಾಯಾಲಯದ ಮೊರೆ ಹೋಗಲಾಗಿದೆ ಎನ್ನುವುದು ಈಶ್ವರಪ್ಪನವರ ಸಮೀಪವರ್ತಿಗಳ ಹೇಳಿಕೆ.

ಇದೇ ರೀತಿ ಪ್ರಜ್ವಲ್‌ ರೇವಣ್ಣ ಅವರು ಕೂಡ ಜೂನ್‌ 2, 2023 ರಲ್ಲಿ ಬೆಂಗಳೂರಿನ ಬೆಂಗಳೂರಿನ ಐದನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸೆಷನ್ಸ್‌ ನ್ಯಾಯಾಲದಿಂದ ೮೬ ಮಾಧ್ಯಮ ಸಂಸ್ಥೆಗಳ, ಮೂರು ನಾಗರಿಕರ ವಿರುದ್ಧ ತಮ್ಮ ವಿರುದ್ಧ ಇದೆ ಎನ್ನಲಾದ ಲೈಂಗಿಕ ದೌರ್ಜನ್ಯದ ಆಡಿಯೋ, ವಿಡಿಯೋಗಳನ್ನು ಪ್ರಕಟಿಸದಂತೆ ಆದೇಶ ತಂದಿದ್ದು, ಈಗ ಅದು ವಿವಾದಕ್ಕೊಳಗಾಗಿದೆ. ತಮ್ಮ ವಿರುದ್ಧ ಇರುವ ನಕಲಿ ಸುದ್ದಿ ಮತ್ತು ರೂಪಾಂತರಗೊಳಿಸಿದ (morphed) ವಿಡಿಯೋಗಳ ಪ್ರಸರಣವನ್ನು ತಡೆಹಿಡಿಯಲು ೮೦ ಕ್ಕೂ ಹೆಚ್ಚು ಸುದ್ದಿ ಸಂಸ್ಥೆಗಳ ವಿರುದ್ಧ ಈ ತಡೆಯಾಜ್ಞೆಯನ್ನು ಪ್ರಜ್ವಲ್‌ ರೇವಣ್ಣ ತಂದಿದ್ದರು.

ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕ ಜೀವನದಲ್ಲಿರುವ ಖ್ಯಾತ ಮತ್ತು ಪ್ರಸಿದ್ಧ ವ್ಯಕ್ತಿಗಳು ಕೆಲ ಮಾಧ್ಯಮಗಳು ಅತಿರಂಜಕ ಸುದ್ದಿಗಳನ್ನು ಪ್ರಸಾರ ಮಾಡುತ್ತಿದ್ದಾರೆಂದು ಭಾವಿಸಿ ಈ ರೀತಿಯ ನಿರ್ಬಂಧಕ ಆದೇಶಗಳನ್ನು ತರುವ ಸಂಪ್ರದಾಯ ಆರಂಭವಾಗಿದೆ.

ಕಳೆದ ವರ್ಷದ ಮಾರ್ಚಿ ತಿಂಗಳಲ್ಲಿ ಬಿಜೆಪಿಯ ವಿಧಾನ ಸಭಾ ಸದಸ್ಯ ಮಾಡಾಳು ವಿರೂಪಾಕ್ಷಪ್ಪ ಮತ್ತು ಅವರ ಪುತ್ರ ಪ್ರಶಾಂತ್‌ ಕುಮಾರ್‌ ಅವರು ಭ್ರಷ್ಟಾಚಾರ ಆರೋಪ ಎದುರಿಸಿದ ಸಂದರ್ಭದಲ್ಲಿ ೪೬ ಮಾಧ್ಯಮ ಸಂಸ್ಥೆಗಳ ವಿರುದ್ಧ, ಈ ವಿಷಯಕ್ಕೆ ಸಂಬಂಧಿಸಿದ ಯಾವುದೇ ಸುದ್ದಿ ಪ್ರಕಟಿಸದಂತೆ, ಪ್ರಸಾರ ಮಾಡದಂತೆ ನಿರ್ಬಂಧಕ ಆದೇಶವನ್ನು ನ್ಯಾಯಾಲಯದಿಂದ ತಂದಿದ್ದರು. ಪ್ರಶಾಂತ್‌ ಕುಮಾರ್‌ ಅವರು ಸರ್ಕಾರಿ ಅಧಿಕಾರಿಯಾಗಿದ್ದು, ಅವರ ಮನೆಯಲ್ಲಿ ಲೋಕಾಯುಕ್ತ ಪೊಲೀಸರ ದಾಳಿ ಸಂದರ್ಭದಲ್ಲಿ ೬ ಕೋಟಿ ಹಣ ಸಿಕ್ಕಿದ ಸಂದರ್ಭದಲ್ಲಿ ಕೆಲವು ಸುದ್ದಿ ಚಾನೆಲ್ ಗಳು ಸುದ್ದಿ ಬಿತ್ತರಿಸಿದಾಗ ತಂದ ಆದೇಶವಿದು. ಈ ಪ್ರಕರಣ ವಿಚಾರಣೆಯ ಹಂತದಲ್ಲಿರುವುದರಿಂದ, ಇದರ ಕುರಿತ ಸುದ್ದಿಗಳು ವಿಚಾರಣೆಗೆ ಧಕ್ಕೆಯಾಗುವುದೆಂದು ನ್ಯಾಯಾಲಯ ಈ ಆದೇಶ ನೀಡಿತ್ತು.

ಕಾನೂನು ತಜ್ಞರ ಪ್ರಕಾರ, ಈ ಸಂಪ್ರದಾಯ 38 ವರ್ಷದ ಹಿಂದೆಯೇ ಆರಂಭವಾಗಿತ್ತು. 1986ರಲ್ಲಿ ಕರ್ನಾಟಕದ ಪೊಲೀಸ್‌ ಮಹಾ ನಿರ್ದೇಶಕ ಬಿ. ಎನ್‌. ಗರುಡಾಚಾರ್‌ ಅವರು ತಮ್ಮ ವಿರುದ್ಧ ಹಿರಿಯ ರಾಜಕಾರಣಿ ಹಾಗೂ ವಕೀಲರಾದ ಎ ಕೆ ಸುಬ್ಬಯ್ಯ ಅವರು ಮಾನ ನಷ್ಟವಾಗುವಂಥ ಹೇಳಿಕೆ ನೀಡುತ್ತಿದ್ದಾರೆಂದು ಆರೋಪಿಸಿ, ಆ ರೀತಿ ಹೇಳಿಕೆ ನೀಡದಂತೆ ಮಧ್ಯಂತರ ಆದೇಶ ತಂದಿದ್ದರು. ಅಂದು ಆರಂಭವಾದ ಈ ನಿರ್ಬಂಧದ ಸಂಪ್ರದಾಯ ಇಂದಿಗೂ ಮುಂದುವರೆದುಕೊಂಡು ಬಂದಿದೆ. ರಾಜಕಾರಣಿಗಳು, ಭೂಗತ ಜಗತ್ತಿನ ಕುಖ್ಯಾತನಾಮರು, ಈ ಸಂಪ್ರದಾಯವನ್ನು ಮುಂದುವರಿಸಿಕೊಂಡೇ ಬಂದಿದ್ದಾರೆ.

ಮಾಧ್ಯಮ ಸಂಸ್ಥೆಗಳ ಪ್ರಕಾರ 2014ರಿಂದೀಚೆಗೆ, ಬಿಜೆಪಿಯ ಒಟ್ಟು ೧೩ ಮಂದಿ ರಾಜಕಾರಣಿಗಳು ಈ ರೀತಿಯ ನಿರ್ಬಂಧಕ ಆದೇಶಗಳನ್ನು ಪಡೆದು, ಮಾಧ್ಯಮಗಳ ಕೈ-ಬಾಯಿ ಕಟ್ಟಿಹಾಕಿದ್ದಾರೆ.

ಮಾರ್ಚಿ 2021ರಲ್ಲಿ ರಾಜ್ಯದ ಸಚಿವರಾಗಿದ್ದ ರಮೇಶ್‌ ಜಾರಕಿಹೊಳಿ, ಈ ರೀತಿಯ ಅಶ್ಲೀಲ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿ, ಸುದ್ದಿ ಚಾನೆಲ್ ಗಳಿಗೆ ತಲುಪಿ ಅವು, ಪ್ರಸಾರ ಆರಂಭಿಸಿದಾಗ, ರಮೇಶ್‌ ಜಾರಕಿಹೊಳಿ ಮಾಧ್ಯಮಗಳ ವಿರುದ್ಧ ಈ ರೀತಿಯ ನಿರ್ಬಂಧಕ ಆದೇಶವನ್ನು ತಂದಿದ್ದರು. ಇದೇ ರೀತಿ ಸುಮಾರು ಆರು ಮಂದಿ ಬಿಜೆಪಿ ಸಚಿವರ ವಿರುದ್ಧವೂ ಅಶ್ಲೀಲ ವಿಡಿಯೋಗಳಿವೆ ಎಂಬ ಸುದ್ದಿ ಹರಡಿದಾಗ ಆ ಸಚಿವರುಗಳು ನಿರ್ಬಂಧಕ ಆದೇಶಕ್ಕಾಗಿ ನ್ಯಾಯಾಲಯವನ್ನು ಸಂಪರ್ಕಿಸಿ, ಯಶಸ್ವಿಯಾದರು. ಆಗಲೇ ಇನ್ನು 19 ಸಚಿವರು ನ್ಯಾಯಾಲಯದ ಮೊರೆಹೋಗಿ ನಿರ್ಬಂಧಕ ಆದೇಶ ತರುತ್ತಾರೆ ಎಂಬ ಸುದ್ದಿ ರಾಜಕೀಯ ವಲಯದಲ್ಲಿ ಬಹುದೊಡ್ಡ ಸುದ್ದಿ ಮಾಡಿತ್ತು.

ಐಎಎಸ್‌ ಮತ್ತು ಐಪಿಎಸ್‌ ಅಧಿಕಾರಿಗಳಾದ ರೋಹಿಣಿ ಸಿಂಧೂರಿ ಹಾಗೂ ರೂಪಾ ಮೌದ್ಗಿಲ್‌ ನಡುವಿನ ವೈಯಕ್ತಿಕ ಮತ್ತು ವೃತ್ತಿ ಸಂಬಂಧಿತ ಜಗಳ ಹಾದಿರಂಪ, ಬೀದಿರಂಪವಾದಾಗ, ರೋಹಿಣಿ ಸಿಂಧೂರಿ ಅವರು ಫೆಬ್ರುವರಿ 2013ರಲ್ಲಿ ಮಾಧ್ಯಮ ಸಂಸ್ಥೆಗಳ ವಿರುದ್ಧ ಮತ್ತು ತಮ್ಮ ಸಹೋದ್ಯೋಗಿ ರೂಪಾ ಅವರ ವಿರುದ್ಧ ತಮ್ಮ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡದಂತೆ, ಅದನ್ನು ಮಾಧ್ಯಮದವರು ಪ್ರಕಟಿಸದಂತೆ, ಪ್ರಸಾರ ಮಾಡದಂತೆ ನಿರ್ಬಂಧಕ ಆದೇಶ ತಂದಿದ್ದರು.

ಕಳೆದ ವಿಧಾನ ಸಭಾ ಚುನಾವಣೆಯ ಸಂದರ್ಭದಲ್ಲಿ ತಮ್ಮ ವಿರುದ್ಧ ದ ಕ್ಷುಲ್ಲಕ ಆರೋಪಗಳನ್ನು ಮಾಡಿದ್ದಾರೆಂದು ಆರೋಪಿಸಿ, ಆ ಪುಸ್ತಕದ ಪ್ರಕಟಣೆ ಮತ್ತು ಅದರ ವಿವರಗಳ ಪ್ರಕಟಣೆಯನ್ನು ತಡೆಯಲು ನ್ಯಾಯಾಲಯದಿಂದ ನಿರ್ಬಂಧಕ ಆದೇಶ ತಂದಿದ್ದರು.

ಇತ್ತೀಚಿನ ದಿನಗಳಲ್ಲಿ, ಟೆಲಿವಿಷನ್‌ ಚಾನೆಲ್ ಗಳು ಅತಿ ರಂಜಿತ ಸುದ್ದಿಗಳನ್ನು ಅದರ ಸತ್ಯಾಸತ್ಯತೆಯನ್ನು ಗಣನೆಗೆ ತೆಗೆದುಕೊಳ್ಳದೆ, ತಾವೇ ನ್ಯಾಯಾಧೀಶರಂತೆ ವರ್ತಿಸಿ ಪ್ರಸಾರ ಮಾಡುತ್ತಿರುವ ಬಗ್ಗೆ ಹಲವು ಬಾರಿ ನ್ಯಾಯಮೂರ್ತಿಗಳು ಅಸಮಾಧಾನ ವ್ಯಕ್ತಪಡಿಸಿದ್ದು ಇದೆ. ಹಾಗಾಗೇ ಇಂಥ ಪ್ರಕರಣಗಳಲ್ಲಿ ನಿರ್ಬಂಧಕ ಆದೇಶ ನೀಡುವುದು ನ್ಯಾಯಲಯಗಳಿಗೆ ಅನಿವಾರ್ಯವಾಗಿದೆ ಎನ್ನುವುದು ಬಹಳಷ್ಟು ವಕೀಲರ ಅನಿಸಿಕೆ.

Read More
Next Story