THE FEDERAL INTERVIEW | ಬಿಜೆಪಿ ಯಾವತ್ತೂ ಮುಸ್ಲಿಮರನ್ನು ವಿರೋಧಿಸಿಲ್ಲ: ಎಚ್ ವಿಶ್ವನಾಥ್
ಬಿಜೆಪಿಯವರು ಯಾವತ್ತೂ ಮುಸ್ಲಿಮರನ್ನು ವಿರೋಧ ಮಾಡಿಲ್ಲ. ಟಿಕೆಟ್ ಕೊಡದೆ ಇರೋದಕ್ಕೆ ಬೇರೆ ಕಾರಣಗಳು ಇರ್ತವೆ. ಹಾಗಂತ ಮುಸ್ಲಿಂ ವಿರೋಧಿ ಎಂದು ಹೇಳೋಕಾಗಲ್ಲ. ಇವತ್ತಿನ ರಾಜಕಾರಣದಲ್ಲಿ ಸಿದ್ಧಾಂತಗಳು ಉಳಿದಿಲ್ಲ ಹಾಗಾಗಿ ನಾನು ವಯಸ್ಸಿಗೆ ತಕ್ಕಂತೆ ರಾಜಕಾರಣ ಮಾಡುತ್ತಿದ್ದೇನೆ ಎಂದು ಹಳ್ಳಿಹಕ್ಕಿ ಖ್ಯಾತಿಯ ಅಡಗೂರು ಎಚ್ ವಿಶ್ವನಾಥ್ ಹೇಳಿದ್ದಾರೆ.
ಈ ಹಿಂದೆ ಜೆಡಿಎಸ್ ಪಕ್ಷ ತೊರೆದಾಗ ಎಚ್ ಡಿ ಕುಮಾರಸ್ವಾಮಿ ಅವರ ವಿರುದ್ಧ ಭಾರೀ ವಾಗ್ದಾಳಿ ನಡೆಸಿದ್ದ ಎಚ್ ವಿಶ್ವನಾಥ್, ಇದೀಗ ಅವರ ಪರವಾಗಿ ಚುನಾವಣಾ ಪ್ರಚಾರ ಆರಂಭಿಸಿದ್ದಾರೆ. ಆ ಹಿನ್ನೆಲೆಯಲ್ಲಿ ʻದ ಫೆಡರಲ್ ಕರ್ನಾಟಕʼ ಅವರೊಂದಿಗೆ ನಡೆಸಿದ ವಿಶೇಷ ಸಂದರ್ಶನದಲ್ಲಿ ಅವರು ಹೀಗೆ ಹೇಳಿದ್ದಾರೆ.
ಮಾಜಿ ಮುಖ್ಯಮಂತ್ರಿ ದಿ. ದೇವರಾಜ್ ಅರಸು ಗರಡಿಯಲ್ಲಿ ಸಮಾಜವಾದಿ ಸಿದ್ಧಾಂತವನ್ನು ಮೈಗೂಡಿಸಿಕೊಂಡು ಬೆಳೆದಿರುವ ಹೆಚ್ ವಿಶ್ವನಾಥ್ ಅವರು 40 ವರ್ಷಗಳ ಕಾಲ ಕಾಂಗ್ರೆಸ್ ಪಕ್ಷದಲ್ಲಿದ್ದರು. ಆ ನಂತರ ಸಿದ್ದರಾಮಯ್ಯ ಅವರೊಂದಿಗಿನ ವೈಮನಸ್ಸಿನಿಂದಾಗಿ ಪಕ್ಷ ತೊರೆದು ಜೆಡಿಎಸ್ ಪಕ್ಷ ಸೇರಿ ಅಲ್ಲಿ ರಾಜ್ಯಾಧ್ಯಕ್ಷರಾದರು. ಕಾಲಾಂತರದಲ್ಲಿ ಆಪರೇಷನ್ ಕಮಲಕ್ಕೆ ಸಿಲುಕಿ ಬಿಜೆಪಿ ಸೇರಿ ಅಲ್ಲಿ ಎಂಎಲ್‌ಸಿ ಆಗಿದ್ದಾರೆ.
ಈ ಹಿಂದೆ ಜೆಡಿಎಸ್‌ನ ನಾಯಕ ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ಅವರನ್ನು ವಿಶ್ವನಾಥ್ ಅವರು ಏಕವಚನದಲ್ಲಿ ಬೈದಾಡಿದ್ದರು. ಆದರೆ ಇಂದು ಬದಲಾದ ರಾಜಕೀಯ ಸನ್ನಿವೇಶದಲ್ಲಿ ಮಂಡ್ಯದಲ್ಲಿ ಕುಮಾರಸ್ವಾಮಿ ಅವರಿಗೆ ಬೆಂಬಲಿಸುವುದಾಗಿ ಘಂಟಾಘೋಷವಾಗಿ ಹೇಳಿದ್ದಾರೆ.
ಈ ಹಿನ್ನೆಲೆಯಲ್ಲಿ ʻದ ಫೆಡರಲ್-ಕರ್ನಾಟಕʼ ಹೆಚ್ ವಿಶ್ವನಾಥ್ ಅವರೊಂದಿಗೆ ವಿಶೇಷ ಸಂದರ್ಶನ ನಡೆಸಿದೆ. ಅದರ ಆಯ್ದ ಭಾಗ ಇಲ್ಲಿದೆ..
ಕಾಂಗ್ರೆಸ್‌ನತ್ತ ಹೆಜ್ಜೆ ಇಡುತ್ತಿದ್ದೀರಿ ಎನ್ನುವ ಹಂತದಲ್ಲಿ ಮತ್ತೆ ಬಿಜೆಪಿ-ಜೆಡಿಎಸ್ ಮೈತ್ರಿಯಲ್ಲೇ ಉಳಿದಿದ್ದೇಕೆ?
ನಾನು ಕಾಂಗ್ರೆಸ್ ಸೇರುತ್ತಿದ್ದೇನೆ ಎಂದು ಎಲ್ಲೂ ಹೇಳಿಲ್ಲ. ಅದು ಮಾಧ್ಯಮದವರ ತಪ್ಪು ಗ್ರಹಿಕೆಯಾಗಿದೆ. ನಾನು ವಿಷಯಾಧಾರಿತವಾಗಿ ಸಪೋರ್ಟ್ ಮಾಡ್ತೀನಿ. ಬಿಜೆಪಿ-ಜೆಡಿಎಸ್ ಅಥವಾ ಕಾಂಗ್ರೆಸ್ ಯಾವುದೇ ಪಕ್ಷ ಒಳ್ಳೆಯದನ್ನು ಮಾಡಿದ್ರೆ ನಾನು ಅದನ್ನು ಸಪೋರ್ಟ್ ಮಾಡ್ತೀನಿ. ಹಾಗೆಯೇ ಕಾಂಗ್ರೆಸ್ ಪಕ್ಷದ ಕೆಲಸಗಳನ್ನು ಹೊಗಳಿದ ಮಾತ್ರಕ್ಕೆ ನಾನು ಕಾಂಗ್ರೆಸ್ ಸೇರುತ್ತಿದ್ದೇನೆ ಎಂದು ತಪ್ಪು ತಿಳಿದುಕೊಳ್ಳಬಾರದು.
ಬರೀ ತೆಗಳಿಕೊಂಡು ಹೋಗುವುದು ಅಂದ್ರೆ ಅದು ಯಾವ ರಾಜಕಾರಣ? ನಾನು ವಯಸ್ಸಿಗೆ ತಕ್ಕಂತೆ ರಾಜಕಾರಣ ಮಾಡ್ತಿದೀನಿ. ಈಗ ನನಗೆ 75 ವರ್ಷ ದಾಟುತ್ತಿದೆ. ಈ ವಯಸ್ಸಿನಲ್ಲೂ ಯಾರ್ಯಾರನ್ನೋ ಬೀದಿಯಲ್ಲಿ ಬೈಕೊಂಡು ನಿಲ್ಲೋಕಾಗತ್ತಾ?.
ನೀವು ಯಾವ ಪಕ್ಷದಲ್ಲಿ ಇರ್ತೀರೋ ಅದೇ ಪಕ್ಷವನ್ನ ಟೀಕೆ ಮಾಡ್ತೀರಿ ಯಾಕೆ?
ಹೌದು, ನಾನು ಸಧ್ಯಕ್ಕೆ ಅಧಿಕೃತವಾಗಿ ಬಿಜೆಪಿಯ ಸದಸ್ಯನಾಗಿದ್ದೇನೆ. ಆದರೂ ಅವರು ತಪ್ಪು ಮಾಡಿದಾಗಲೆಲ್ಲ ನಾನು ಬಹಿರಂಗವಾಗಿಯೇ ಟೀಕೆ ಮಾಡಿದ್ದೇನೆ. ಪ್ರಜಾಪ್ರಭತ್ವದಲ್ಲಿದ್ದೇವೆ, ಮಾತನಾಡಬೇಕು ಮಾತನಾಡುತ್ತೇವೆ.
ದಕ್ಷಿಣ ಭಾರತದಲ್ಲಿ ಯಾರೂ ಪಾರ್ಲಿಮೆಂಟ್ ಕುರಿತು ಪುಸ್ತಕ ಬರೆದಿಲ್ಲ. ಆದರೆ ನಾನು ಬರೆದಿದ್ದೇನೆ. ಈಗ ಎಲ್ಲಾ ಪಕ್ಷಗಳು ಜಾತಿ ಮತ್ತ ಹಣದ ಮೇಲೆ ಟಿಕೆಟ್ ನೀಡುತ್ತಾರೆ. ಅವರು (ಕಾಂಗ್ರೆಸ್) ಮಂತ್ರಿಗಳ ಮಕ್ಕಳಿಗೆ ಟಿಕೆಟ್ ಕೊಟ್ಟಿದ್ದಾರೆ. ಆ ಮಕ್ಕಳು ಪಾರ್ಲಿಮೆಂಟ್ ಗೆ ಹೋಗಿ ಏನ್ ಮಾಡ್ತವೆ? ಸ್ಕೂಲ್ ಹುಡುಗರ ತರಾ ಕಾಣುತ್ತಿದ್ದಾರೆ ಅವರು.. ಇದು ರಾಜಕಾರಣದ ಅಸಹ್ಯತನದ ಒಂದು ಭಾಗ. ಪಾರ್ಲಿಮೆಂಟ್ ಹೇಗಿರಬೇಕು? ಅಲ್ಲಿ ಎಂಥವರನ್ನ ಕಳಸಬೇಕು ಅನ್ನೋದು ಗೊತ್ತಾಗಲ್ವಾ?
ಮೈಸೂರಿನಲ್ಲಿ ಮಹಾರಾಜರು ಸ್ಪರ್ಧೆ ಮಾಡಿದ್ದಾರೆ. ಮೈಸೂರಿಗೆ ಹಿಂದಿನ ಮಹಾರಾಜರುಗಳ ಕೊಡುಗೆ ದೊಡ್ಡದಿದೆ, ಅಂತವರನ್ನ ಅವಿರೋಧವಾಗಿ ಪಾರ್ಲಿಮೆಂಟ್‌ಗೆ ಕಳಿಸಬೇಕು. ಯೂರೋಪ್‌ನಲ್ಲಿ ಗ್ರೇಟ್ ಸೈಂಟಿಸ್ಟ್ ಒಬ್ಬರನ್ನ ಹಾಗೇ ಪಾರ್ಲಿಮೆಂಟ್ ಗೆ ಕಳಿಸಿದರು. ಆದರೆ ಇಲ್ಲಿ ಸಂವಿಧಾನ ಅದು ಇದು ಅಂತ ಬೊಗಳೆ ಬಿಡ್ತಾರೆ.
ಸಮಾಜವಾದಿ ಸಿದ್ದಾಂತಕ್ಕೆ ಬದ್ಧರಾಗಿದ್ದವರು ಬಿಜೆಪಿ ಸೇರಿದ್ದೇಕೆ?
ಯಾವ ಬಿಜೆಪಿ-ಜೆಡಿಎಸ್, ಕಾಂಗ್ರೆಸ್‌ನಲ್ಲಿ ಮುಸ್ಲಿಮರನ್ನ ವಿರೋಧ ಮಾಡಬೇಕು ಅಂತ ಬರೆದಿದ್ದಾರೆ? ಬಿಜೆಪಿಯಲ್ಲಿ ಮುಸ್ಲಿಂರನ್ನ ವಿರೋಧ ಮಾಡಲ್ಲ.
ಬಿಜೆಪಿ ಮುಸ್ಲಿಂ ಸಮುದಾಯಕ್ಕೆ ಒಂದೇ ಒಂದು ಟಿಕೆಟ್ ನೀಡಿಲ್ಲವಲ್ಲ. ಇದು ಮುಸ್ಲಿಂ ವಿರೋಧದ ಭಾಗವಾಗಿ ಕಾಣುವುದಿಲ್ಲವೇ?
ಅದು ಬೇರೆ ವಿಚಾರ, ಟಿಕೆಟ್ ನೀಡುವುದು ಮೇಲಿನವರು ಬೇರೆಯದ್ದೇ ಲೆಕ್ಕಾಚಾರದಲ್ಲಿ ನಿರ್ಧಾರ ಮಾಡ್ತಾರೆ.
ಹಾಗಾದ್ರೆ ನೀವು ನಂಬಿದ ʻಸಾಮಾಜಿಕ ನ್ಯಾಯʼ ಎಲ್ಲಿ ಹೋಯಿತು?
ಕಾಂಗ್ರೆಸ್‌ನಲ್ಲಿ ಸಾಮಾಜಿಕ ನ್ಯಾಯ ಎಲ್ಲಿದೆ? ಮಂತ್ರಿಗಳ ಮಕ್ಕಳಿಗೆ ಮಾತ್ರ ಟಿಕೆಟ್ ಕೊಡೋದು ಸಾಮಾಜಿಕ ನ್ಯಾಯವಾ?.
ಪಕ್ಷಗಳ ಹೊರತಾಗಿ ವಿಶ್ವನಾಥ್ ಒಬ್ಬರು ಪ್ರಬುದ್ಧ ಹಾಗೂ ಸ್ಪಷ್ಟತೆಯುಳ್ಳ ರಾಜಕಾರಣಿ ಎಂದು ಬಿಂಬಿತವಾಗಿದ್ದೀರಿ. ಇವತ್ತಿನ ನಿಮ್ಮ ನಡೆ ಬಗ್ಗೆ ನಿಮ್ಮ ಅಭಿಮಾನಿಗಳಿಗೆ ಬೇಸರವಾಗುವುದಿಲ್ಲವೇ?
ನಾನು ಜೆಡಿಎಸ್ ಅಧ್ಯಕ್ಷನಾಗಿ ನೇಮಕವಾದಾಗ ಜೆಪಿ ನಗರದಲ್ಲಿ ನನ್ನ ಕೈಗೆ ಝಂಡಾ (ಬಾವುಟ) ಕೊಟ್ಟರು. ಆಗ ಅಲ್ಲಿದ್ದ ಮಾಧ್ಯಮ ಸ್ನೇಹಿತರು ನನಗೆ ಪ್ರಶ್ನೆ ಮಾಡಿದ್ದರು. 40 ವರ್ಷಗಳ ಕಾಲ ಕಾಂಗ್ರೆಸ್‌ನಲ್ಲಿ ಇದ್ದವರು ಈಗ ಈ ಝಂಡಾ ಹಿಡ್ಕೊಂಡಿದೀರಲಾ ಏನ ಅನಸ್ತೀದೆ ಎಂದು ಕೇಳಿದ್ರು. ನಾನು ಹೇಳಿದೆ- ʻʻನನ್ನ ಝಂಡಾ ಬದಲಾಗಬಹುದು ಆದರೆ ಅಜೆಂಡಾ ಬದಲಾಗಲ್ಲ.. ದಿನಗಳು ಉರುಳಿದಂತೆ ಝಂಡಾಗಳು ಬದಲಾಗ್ತಾನೇ ಇವೆ ಆದರೆ ನನ್ನ ಮನಸ್ಸು ಬದಲಾಗಲಿಲ್ಲ. ಹಾಗಾಗಿ ನನಗೆ ನನ್ನ ಅಜೆಂಡಾ ಮುಖ್ಯʼʼ.
ಕುಮಾರಸ್ವಾಮಿ ವಿರುದ್ಧ ಅಂದು ಏಕವಚನದಲ್ಲಿ ವಾಚಾಮಗೋಚರವಾಗಿ ಬೈದಾಡಿದವರು ಇಂದು ಅವರ ಕೈಕುಲಕ್ತಿದೀರಿ. ಇದು ವಿಶ್ವನಾಥ್‌ರಂತಹ ರಾಜಕಾರಣಿಯಿಂದ ಹೇಗೆ ಸಾಧ್ಯ?
ಹೌದು, ನಾನು ಏಕವಚನದಲ್ಲಿಯೇ ಮಾತನಾಡಿದ್ದೇನೆ, ಇಲ್ಲ ಅಂತ ಹೇಳುತ್ತಿಲ್ಲ. ಅವತ್ತಿನ ಸಮಯ-ಸಂದರ್ಭಗಳು ಸರ್.. ಈ ರಾಜಕೀಯ ಧ್ರುವೀಕರಣದಲ್ಲಿ ಎಲ್ಲವೂ ಸಾಧ್ಯವಾಗುತ್ತದೆ. ನಾನು ಈ ಹಿಂದೆ ಪಕ್ಷಾಂತರ ಅಂತ ಪದ ಬಳಸುತ್ತಿದ್ದೆ, ಆ ಪದ ಹೋಗಿ ಬಹಳ ದಿನವಾಯ್ತು. ಈಗ ರಾಜಕೀಯ ಧ್ರುವೀಕರಣ ಅಂತ ಹೇಳಬಹುದು. ಅದು ಸಾಮಾನ್ಯವಾಗಿ ನಡೆಯುತ್ತಲೇ ಇರುತ್ತದೆ.
ಜೆಡಿಎಸ್‌ನಲ್ಲಿದ್ದವರು ಆಪರೇಷನ್‌ಗೆ ಬಲಿಯಾಗಿ ಬಿಜೆಪಿ ಸೇರಿದ್ದೇಕೆ?
ಜೆಡಿಎಸ್‌ನವರು ಕಾಂಗ್ರೆಸ್‌ನವರ ಜೊತೆ ಸೇರಿ ಸಮ್ಮಿಶ್ರ ಸರ್ಕಾರ ಮಾಡಿದ್ರಲಾ ಯಾರನ್ನ ಕೇಳಿ ಮಾಡಿದ್ರು? ನಾನು ಆಗ ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷನಾಗಿದ್ದೆ, ಪಕ್ಷದ ಅಧ್ಯಕ್ಷನಿಗೆ ಗೊತ್ತಿಲ್ಲದೇ ನೀವು ಇನ್ನೊಂದು ಪಕ್ಷದ ಜೊತೆ ಸೇರಿ ಸರ್ಕಾರ ನಡಸ್ತೀರಿ ಅಂದ್ರೆ ಹೇಗೆ ಒಪ್ಕೊಬೇಕು?.
ಒಬ್ಬರಿಗೊಬ್ಬರು ತೊಡೆ ತಟ್ಕೊಂಡು ಚಾಕು ಚೂರಿ ಹಿಡ್ಕೊಂಡು ಇದ್ದೋರು, ದಪ್ಪಂತ ಒಂದಾಗಿಬಿಟ್ಟು ಸರ್ಕಾರ ಮಾಡ್ತೀರಿ ಅಂದ್ರೆ ಒಪ್ಕೊಂಡುಬಿಡಬೇಕಾ? ಇದು ಯಾವ ರಾಜಕಾರಣ? ಹಾಗಾಗಿಯೇ ನಾನು ಅದರ ವಿರುದ್ಧ ಹೋದೆ.
ಸಮ್ಮಿಶ್ರ ಸರ್ಕಾರದಲ್ಲಿ ನಿಮಗೆ ಮಂತ್ರಿ ಮಾಡಿಲ್ಲ ಅನ್ನೋ ಕಾರಣಕ್ಕೆ ಸರ್ಕಾರ ಬೀಳಿಸಿದ್ರಿ ಅನ್ನೋ ಆರೋಪ ಇದೆ ಏನಂತೀರಿ?
ನಾನು ಎಸ್ಎಂ ಕೃಷ್ಣ ಹಾಗೂ ವೀರಪ್ಪ ಮೋಯ್ಲಿ ಅವರ ಕಾಲಾವಧಿಯಲ್ಲಿಯೇ ಮಂತ್ರಿಯಾಗಿಬಿಟ್ಟಿದೀನಿ. ಯಾವ ಯಾವ ಇಲಾಖೆಯ ಸಚಿವನಾಗಿದ್ನೋ ಅಲ್ಲಿ ನ್ಯಾಯ ಒದಗಿಸಿದ್ದೇನೆ. ಜನೋಪಯೋಗಿ ಕಾರ್ಯಕ್ರಮಗಳನ್ನು ಮಾಡಿದ್ದೇನೆ. ಅದೇನೋ ಮಂತ್ರಿಗಿರಿಗೋಸ್ಕರ ನಾನು ಪಕ್ಷ ಬಿಡಲಿಲ್ಲ.