ಬೆಂಗಳೂರಿನಿಂದ ಮದನಪಲ್ಲಿ: ʼಜನ ಗಣ ಮನʼ ಕವಿ ಟ್ಯಾಗೋರ್‌ಗೆ ದನಿಯಾದ ಆ ಕಾಲೇಜು! ಗದ್ಗದಿತ ಮಕ್ಕಳು!

ಅಂದು ರಾತ್ರಿ ಆ ಕಲಾಭವನದೊಳಕ್ಕೆ ನಡೆದು ಬಂದ ಅವರು ಆ ಗೀತೆಯನ್ನು ಪ್ರಸ್ತುತಪಡಿಸಿದರು. ಅಷ್ಟೂ ಮಂದಿ ವಿದ್ಯಾರ್ಥಿಗಳು ಆ ಗೀತೆಯನ್ನು ಕೇಳಿ ನಿಜಕ್ಕೂ ಗದ್ಗದಿತರಾದರು. ಕಣ್ಣಾಲಿಗಳು ಹನಿಗೂಡಿದವು.


ಬೆಂಗಳೂರಿನಿಂದ ಮದನಪಲ್ಲಿ: ʼಜನ ಗಣ ಮನʼ ಕವಿ ಟ್ಯಾಗೋರ್‌ಗೆ ದನಿಯಾದ ಆ ಕಾಲೇಜು! ಗದ್ಗದಿತ ಮಕ್ಕಳು!
x
ಬ್ರಿಟಿಷ್‌ ಇಂಡಿಯಾದಲ್ಲಿ ಮದ್ರಾಸ್‌ ಪ್ರೆಸಿಡೆನ್ಸಿಯ ಭಾಗವಾಗಿದ್ದ ಅನಿ ಬೆಸೆಂಟ್ ಅವರು ಸ್ಥಾಪಿಸಿದ ಮದನಪಲ್ಲಿಯಲ್ಲಿರುವ ಬೆಸೆಂಟ್‌ ಥಿಯೋಸಾಫಿಕಲ್‌ ಕಾಲೇಜು.

ಅದು 1919ರ ಫೆಬ್ರುವರಿ 26 ಬುಧವಾರ. ಸಮಯ ರಾತ್ರಿ 8.30. ಬ್ರಿಟಿಷ್‌ ಇಂಡಿಯಾದ ಮದ್ರಾಸ್‌ ಪ್ರೆಸಿಡೆನ್ಸಿಯಲ್ಲಿದ್ದ ಮದನಪಲ್ಲಿ ಬೆಸೆಂಟ್‌ ಥಿಯೋಸೊಫಿಕಲ್‌ ಕಾಲೇಜಿನ ಆವರಣವು ಸಂಪೂರ್ಣ ಚಟುವಟಿಕೆಗಳಿಂದ ವ್ಯಸ್ತವಾಗಿತ್ತು. ಸಾಮಾನ್ಯವಾಗಿ ಬುಧವಾರ ರಾತ್ರಿ ಊಟದ ಬಳಿಕ ವಿದ್ಯಾರ್ಥಿಗಳು ಕಾಲೇಜಿನ ಲಿವಿಂಗ್‌ ರೂಮಿನಲ್ಲಿ ಸೇರುವುದು ವಾಡಿಕೆ. ಅಲ್ಲಿ ಅವರು ಒಬ್ಬರನ್ನೊಬ್ಬರು ಕಾಲೆಳೆಯುತ್ತ, ಕುಣಿದು ಕುಪ್ಪಳಿಸುತ್ತ ಲಘುವಾದ ಮನರಂಜನೆಯಲ್ಲಿ ಕಾಲಕಳೆಯುತ್ತಿದ್ದರು. ಆದರೆ ಅಂದು ಸಂಜೆ ಕಾರ್ಯಕ್ರಮವು ಕಲಾ ಕೊಠಡಿಗೆ ಶಿಫ್ಟ್‌ ಆಗಿತ್ತು.

ಕಲಾ ಕೊಠಡಿಯೋ ವಿದ್ಯಾರ್ಥಿಗಳಿಂದ ಗಿಜಿಗುಡುತ್ತಿತ್ತು. ಎಲ್ಲರೂ ಹಾಡುತ್ತ ಉತ್ಸಾಹದಿಂದ ಕೇಕೆ ಹಾಕುತ್ತಿದ್ದರು. ಪ್ರಾಂಶುಪಾಲರಾದ ಜೇಮ್ಸ್‌ ಹೆನ್ರಿ ಕಸಿನ್ಸ್ ಅವರು ಹೇಳಿಕೇಳಿ ಐರಿಶ್‌ ಕವಿ. ಅವರ ಸರದಿ ಬಂದಾಗ ತಮ್ಮ ಮಾತೃಭಾಷೆಯಾದ ಐರಿಶ್-ನಲ್ಲಿ ಒಂದು ಹಾಡನ್ನು ಹಾಡಿದರು. ಆ ಹಾಡು ಮುಗಿಯುತ್ತಿದ್ದಂತೆ ಸಭಾಂಗಣದ ಬಾಗಿಲು ತೆರೆಯಿತು. ಸಹಜವಾಗಿ ಎಲ್ಲರೂ ಆ ಕಡೆಗೆ ಕತ್ತು ತಿರುಗಿಸಿದರು.

ಅಲ್ಲಿ ಬಾಗಿಲಲ್ಲಿ ನೀಳಕಾಯದ ವ್ಯಕ್ತಿಯೊಬ್ಬರು ನಿಂತಿದ್ದರು. ಅವರು ಒಬ್ಬ ಸಂತರಂತೆ ತೇಜಸ್ವಿಯಾಗಿದ್ದರು. ಅಲ್ಲಿದ್ದ ಪ್ರತಿಯೊಬ್ಬರಿಗೂ ಅವರು ಯಾರು ಎಂಬುವುದು ತಿಳಿದಿತ್ತು. ಯಾಕೆಂದರೆ ಅವರು ಹಿಂದಿನ ದಿನವಷ್ಟೇ ಕಾಲೇಜಿಗೆ ಬಂದಿದ್ದರು. ಆ ಸಂದರ್ಭದಲ್ಲಿಯೇ ಅಸ್ವಸ್ಥರಾಗಿದ್ದ ಅವರು ಅಲ್ಲಿನ ಬಂಗಲೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಆದರೆ ಯಾವತ್ತು ವಿದ್ಯಾರ್ಥಿಗಳ ಹಾಡು ಮತ್ತು ಸಂಗೀತ ಅವರ ಕಿವಿ ಮೇಲೆ ಬಿತ್ತೋ ಅವರು ತಮ್ಮ ತಾವು ತಂಗಿದ್ದ ಬಂಗಲೆಯಿಂದ ಎದ್ದು ಬಂದಿದ್ದರು. ಹೀಗೆ ಬಂದ ಅನಿರೀಕ್ಷಿತ ಅತಿಥಿಯ ಈ ದಿಢೀರ್‌ ಆಗಮನವು ಎಲರನ್ನೂ ದಂಗಾಗುವಂತೆ ಮಾಡಿತ್ತು.

ಇಡೀ ಭಾರತವನ್ನು ಕಣ್ಮುಂದೆ ತಂದರು…

ಹಾಗೆ ಒಳಗೆ ಬಂದ ಅವರು, ʼನಾನೂ ಒಂದು ಹಾಡು ಹಾಡುತ್ತೇನೆ” ಎಂದು ಹೇಳಿದರು. ಮಕ್ಕಳು ಚಪ್ಪಾಳೆ ತಟ್ಟುತ್ತಾ ಅವರಿಗೆ ಒಪ್ಪಿಗೆ ಸೂಚಿಸಿದರು. ಪ್ರಾಂಶುಪಾಲರಾದ ಜೇಮ್ಸ್ ಕಸಿನ್ಸ್‌ ಮೂಕಪ್ರೇಕ್ಷಕರಂತೆ ನಿಲ್ಲಬೇಕಾಯಿತು. "ಬೇಡ ನಿಮ್ಮ ಆರೋಗ್ಯ ಚೆನ್ನಾಗಿಲ್ಲ,” ಎಂದು ವಿರೋಧಿಸಲು ಸಾಧ್ಯವಾಗಿಲ್ಲ. ಬಂದಿದ್ದ ಆ ಮಹಾನ್‌ ವ್ಯಕ್ತಿ ಒಂದು ಹಾಡನ್ನು ಹಾಡಿದರು. ಆ ಹಾಡಿನ ಮೂಲಕ ಭಾರತದ ಉದ್ದಗಲಕ್ಕೂ ಇರುವ ವಿವಿಧ ಪ್ರೇದೇಶಗಳು, ಜನ, ಧರ್ಮಗಳು ಮತ್ತು ನದಿಗಳು ಕಣ್ಣ ಮುಂದೆ ಪ್ರತ್ಯಕ್ಷವಾದಂತೆ ಅನುಭವವಾಯಿತು.

ಅಂದು ಅವರು ಹಾಡಿದ ಹಾಡು ಯಾವುದು ಎಂಬುದು ಯಾರಿಗೂ ತಿಳಿದಿರಲಿಲ್ಲ. ಯಾಕೆಂದರೆ ಅದನ್ನು ಯಾರೂ, ಎಲ್ಲಿಯೂ ಕೇಳಿರಲಿಲ್ಲ. ಹಾಡು ಮುಗಿದ ಬಳಿಕ ವಿದ್ಯಾರ್ಥಿಗಳೆಲ್ಲ ಮೌನದ ಚಿಪ್ಪಿನಿಂದ ಹೊರಬಂದು ಸಹಜ ಸ್ಥಿತಿಗೆ ಮರಳಲು ಸಲ್ಪ ಸಮಯವೇ ಹಿಡಿಯಿತು. ಯಾಕೆಂದರೆ ಅಂದು ಎಲ್ಲರನ್ನೂ ಮಂತ್ರಮುಗ್ಧಗೊಳಿಸಿದ ಆ ಹಾಡೇ ʼಜನ ಗಣ ಮನʼ. ಅಂದು ಹಾಗೆ ಪ್ರತ್ಯಕ್ಷರಾದ ಆ ಮಹಾನ್‌ ಅತಿಥಿ ಬೇರೆ ಯಾರೂ ಅಲ್ಲ. ಅವರೇ ʼವಿಶ್ವ ಕವಿʼ ರವೀಂದ್ರನಾಥ ಟ್ಯಾಗೋರ್.

ಭಾರತದ ರಾಷ್ಟ್ರಗೀತೆ ಆಗುವ ಸಾಕಷ್ಟು ಮೊದಲೇ ʼಜನ ಗಣ ಮನʼ ಧ್ವನಿಯನ್ನು ಕವಿಯ ಬಾಯಿಯಿಂದಲೇ ಕೇಳುವ ಮೊದಲ ಭಾಗ್ಯ ಅಂದಿನ ಮದ್ರಾಸ್‌ ಪ್ರೆಸಿಡೆನ್ಸಿಯ (ಈಗಿನ ಆಂಧ್ರ ಪ್ರದೇಶ) ಮದನಪಲ್ಲಿ ಬಿ.ಟಿ.ಕಾಲೇಜಿನ ವಿದ್ಯಾರ್ಥಿಗಳಿಗೆ ಒದಗಿಬಂತು. ಟ್ಯಾಗೋರ್‌ ಅವರು ತಮ್ಮ ಈ ರಾಷ್ಟ್ರ ಗೀತೆಯನ್ನು ಮೊದಲ ಬಾರಿಗೆ ಜನರ ಮುಂದೆ ಪ್ರಸ್ತುತಪಡಿಸಿದ್ದೇ ಮದನಪಲ್ಲಿಯಲ್ಲಿ. ಅಷ್ಟು ಮಾತ್ರವಲ್ಲದೆ ʼಜನ ಗಣ ಮನʼ ಗೀತೆಯು ಸಮೂಹ ಗಾನವಾಗಿ ಮೂಡಿಬಂದಿದ್ದು ಕೂಡ ಇದೇ ಕಾಲೇಜಿನಲ್ಲಿ ಎಂಬುದು ವಿಶೇಷ.

ನಂತರದ ದಿನಗಳಲ್ಲಿ ಪ್ರತಿಯೊಂದು ರಾಜ್ಯ ಮತ್ತು ಪ್ರತಿಯೊಂದು ಭಾಷೆಯ ಜನರು ತಮ್ಮದೇ ಎಂದು ಹೆಮ್ಮೆಯಿಂದ ಭಾವಿಸಿದ ಈ ಬಂಗಾಳಿ ಗೀತೆಯು ಮೊದಲ ಬಾರಿಗೆ ಇಂಗ್ಲಿಷ್‌ ಭಾಷೆಗೆ ಭಾಷಾಂತರಗೊಂಡಿದ್ದು ಕೂಡ ಇದೇ ಬಿ.ಟಿ.ಕಾಲೇಜಿನಲ್ಲಿ. ಅಷ್ಟು ಮಾತ್ರವಲ್ಲದೆ ಈ ಗೀತೆಗೆ ರಾಗ ಸಂಯೋಜನೆ ಮಾಡಿದ್ದು ಕೂಡ ಇಲ್ಲಿಯೇ.

ರವೀಂದ್ರನಾಥ ಟ್ಯಾಗೋರ್ ಅವರು ಈ ಗೀತೆಗೆ ರಾಗವನ್ನು ನೀಡಿದರೆ ಆ ಕಾಲೇಜಿನ ಪ್ರಾಂಶುಪಾಲ ಜೇಮ್ಸ್ ಕಸಿನ್ಸ್‌ ಅವರ ಪತ್ನಿ ಮಾರ್ಗರೇಟ್‌ ಕಸಿನ್ಸ್‌ ಅವರು ಅದಲ್ಲಿ ಲಯವನ್ನು ಸಂಯೋಜಿಸಿದರು. ಕಸಿನ್ಸ್‌ ಅವರು ಐರ್ಲೆಂಡಿನ ಹೆಸರಾಂತ ಕವಿ, ಪತ್ರಕರ್ತ, ಲೇಖಕ ಹಾಗೂ ಸಮಾಜ ಸೇವಕರಾಗಿದ್ದರು. ಅವರ ಪತ್ನಿ ಮಾರ್ಗರೇಟ್‌ ಪಾಶ್ಚಾತ್ಯ ಸಂಗೀತದಲ್ಲಿ ಪರಿಣಿತಿಯನ್ನು ಪಡೆದಿದ್ದರು. ʼಜನ ಗಣ ಮನʼ ಗೀತೆಗೆ ಸಂಗೀತದ ರೂಪವನ್ನು ನೀಡಲು ಈ ತ್ರಿಮೂರ್ತಿಗಳು ಒಂದಾದ ಆ ಕ್ಷಣವು ಮದನಪಲ್ಲಿಯ ಇತಿಹಾಸಕ್ಕೆ ಹೊಸ ಮೆರಗನ್ನು ನೀಡಿದರು ಎಂದರೆ ತಪ್ಪಲ್ಲ.

ಬಹುಮುಖ ಪ್ರತಿಭೆ ಐರಿಶ್‌ ಕವಿ

ಈಗ ಜೇಮ್ಸ್‌ ಹೆನ್ತಿ ಕಸಿನ್ಸ್‌ ಅವರ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಪ್ರಯತ್ನ ಮಾಡೋಣ. ಅನಿ ಬೆಸೆಂಟ್‌ ಅವರಂತೆ ಹೆನ್ರಿ ಕಸಿನ್ಸ್‌ ಕೂಡ ಐರಿಶ್‌ ಮೂಲದವರು. ಅವರು ಕೇವಲ ಶಿಕ್ಷಕ ಮಾತ್ರ ಆಗಿರಲಿಲ್ಲ. ಕವಿತೆ, ನಾಟಕ, ಕಲಾವಿಮರ್ಶೆ, ಪತ್ರಿಕೋದ್ಯಮದಲ್ಲಿ ಅವರು ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಅವರು ಐರಿಶ್‌ ಕವಿತಾ ಚಳವಳಿಯಲ್ಲಿ ಸಕ್ರಿಯ ಪಾತ್ರ ವಹಿಸಿದ್ದರು. ಕವಿಯಾಗಿ ಅವರ ಸ್ಥಾನಮಾನ ಎಷ್ಟಿತ್ತೆಂದರೆ ಒಂದು ಹಂತದಲ್ಲಿ ಸ್ವತಃ ರವೀಂದ್ರನಾಥ ಟ್ಯಾಗೋರ್‌ ಅವರೇ ನೊಬೆಲ್‌ ಪ್ರಶಸ್ತಿಗಾಗಿ ಕಸಿನ್ಸ್‌ ಅವರ ಹೆಸರನ್ನು ಶಿಫಾರಸು ಮಾಡಿದ್ದರು.

ಅನಿ ಬೆಸೆಂಟ್‌ ಅವರಂತೆ ಜೇಮ್ಸ್‌ ಹೆನ್ತಿ ಕಸಿನ್ಸ್‌ ಅವರು ಕೂಡ ಥಿಯೋಸೊಫಿಕಲ್‌ ಸೊಸೈಟಿಯಿಂದ (ಬ್ರಹ್ಮ ವಿದ್ಯಾ ಸಂಘ) ಪ್ರೇರಿತರಾಗಿದ್ದರು. ಬೆಸೆಂಟ್‌ ನೀಡಿದ ಆಹ್ವಾನದ ಮೇರೆಗೇ ಅವರು ೧೯೧೫ರಲ್ಲಿ ಐರ್ಲೆಂಡ್‌ ತೊರೆದು ಭಾರತಕ್ಕೆ ವಲಸೆ ಬಂದರು. ಆರಂಭದಲ್ಲಿ ಅವರು ಅನಿ ಬೆಸೆಂಟ್‌ ಸ್ಥಾಪನೆ ಮಾಡಿದ ʼನ್ಯೂ ಇಂಡಿಯಾʼ ಪತ್ರಿಕೆಯ ಸಾಹಿತ್ಯ ವಿಭಾಗದ ಸಂಪಾದಕರಾಗಿಯೂ ಸೇವೆ ಸಲ್ಲಿಸಿದರು. ಅವರ ಪತ್ನಿ ಮಾರ್ಗರೇಟ್‌ ಅವರು ಕೇವಲ ಪಾಶ್ಚಾತ್ಯ ಸಂಗೀತದ ಬಗ್ಗೆ ಮಾತ್ರವಲ್ಲದೆ ಭಾರತೀಯ ಮತ್ತು ಏಷ್ಯಾದ ಇತರ ಸಂಗೀತ ಸಂಪ್ರದಾಯಗಳ ಬಗ್ಗೆಯೂ ಕೃತಿ ರಚನೆ ಮಾಡಿದ್ದರು.

ಜೇಮ್ಸ್‌ ಹೆನ್ರಿ ಕಸಿನ್ಸ್‌, ರವೀಂದ್ರನಾಥ ಟ್ಯಾಗೋರ್‌ ಮತ್ತು ಮಾರ್ಗರೇಟ್‌ ಕಸಿನ್ಸ್

ಹೀಗೆ ಧರ್ಮ ಮತ್ತು ಪ್ರದೇಶಗಳನ್ನು ಮೀರಿದ ಸಾರ್ವತ್ರಿಕ ಮಾನವ ಪ್ರೇಮವು ಕಸಿನ್ಸ್‌ ಮತ್ತು ಟ್ಯಾಗೋರ್‌ ಅವರನ್ನು ಬೆಸೆಯಿತು. ಕಸಿನ್ಸ್‌ ಅವರು ಭಾರತಕ್ಕೆ ಬಂದಿದ್ದು 1915ರಲ್ಲಿ. ಆದರೆ ಅದಕ್ಕಿಂತಲೂ ಮೊದಲೇ ಈ ಇಬ್ಬರು ಕವಿಗಳ ನಡುವೆ ಪತ್ರ ವ್ಯವಹಾರ ನಡೆದಿತ್ತು. ಭಾರತಕ್ಕೆ ಬಂದ ಬಳಿಕ ಮಾರ್ಗರೇಟ್‌ ಅವರು ಕಲ್ಕತ್ತಕ್ಕೆ ತೆರಳಿ ಟ್ಯಾಗೋರ್‌ ಅವರನ್ನು ಭೇಟಿ ಮಾಡಿದರು.

ಆ ಬಳಿಕ ಹೆನ್ರಿ ಕಸಿನ್ಸ್‌ ಮದನಪಲ್ಲಿಯ ಬಿ.ಟಿ.ಕಾಲೇಜನ್ನು ಸೇರಿಕೊಂಡರು. ತಮ್ಮ ಕಾಲೇಜಿಗೆ ಭೇಟಿ ನೀಡುವಂತೆ ಟ್ಯಾಗೋರ್‌ ಅವರಿಗೆ ಅನೇಕ ಬಾರಿ ಪತ್ರಗಳನ್ನು ಬರೆದು ಆಹ್ವಾನ ನೀಡಿದ್ದರು. ಹಲವು ಬಾರಿ ಮುಂದೂಡಿಕೆಯಾದ ಅವರ ಭೇಟಿ ಕಾರ್ಯಕ್ರಮ ಕಾರ್ಯರೂಪಕ್ಕೆ ಬಂದಿದ್ದು 1919ರ ಫೆಬ್ರುವರಿಯಲ್ಲಿ. ಆಗ ಟ್ಯಾಗೋರ್‌ ಅವರ ಆರೋಗ್ಯ ಚೆನ್ನಾಗಿರಲಿಲ್ಲ. ಅವರಿಗೆ ವಿಶ್ರಾಂತಿಯ ಅಗತ್ಯವಿತ್ತು. ಮದನಪಲ್ಲಿಯಲ್ಲಿ ತಮಗೆ ವಿಶ್ರಾಂತಿ ದೊರೆಯುತ್ತದೆ ಎಂಬುದೂ ಅವರ ಯೋಚನೆಯಾಗಿತ್ತು.

ʼಕವಿಗಳನ್ನು ನಂಬದಿರಿ!ʼ

“ನಿಶ್ಚಿತವಾಗಿ ಈ ಬಾರಿ ನಿಮ್ಮನ್ನು ಮದನಪಲ್ಲಿಯಲ್ಲಿ ಭೇಟಿಯಾಗುತ್ತೇನೆ. ನಿಮ್ಮ ಮದ್ರಾಸ್‌ ಪ್ರೆಸಿಡೆನ್ಸಿಯಲ್ಲಿ ಏನು ಕಾದಿದೆಯೋ ಎಂಬ ಆಲೋಚನೆಯಿಂದಲೇ ಹೃದಯ ನಡುಗುತ್ತಿದೆ. ದಕ್ಷಿಣ ಭಾರತದ ಈ ಪ್ರವಾಸವನ್ನು ಕೈಗೊಳ್ಳಲು ನಾನು ನನ್ನೆಲ್ಲ ಶಕ್ತಿಯನ್ನು ಕ್ರೋಢೀಕರಿಸುತ್ತಿದ್ದೇನೆ. ಬಂಗಾಳದಲ್ಲಿ ದಕ್ಷಿಣದ ಬಾಗಿಲನ್ನು ʼಯಮದ್ವಾರʼ (ಮೃತ್ಯುವಿನ ಬಾಗಿಲು) ಎಂದು ಕರೆಯುತ್ತಾರೆ. ಅದು ನನ್ನನ್ನು ಆಪೋಶನ ತೆಗೆದುಕೊಳ್ಳುವುದಿಲ್ಲ ಎಂದು ಭಾವಿಸುತ್ತೇನೆ. ಆದರೆ ಒಂದು ಸಂಗತಿ-ನಾನು ಮದನಪಲ್ಲಿಗೆ ಬರುತ್ತೇನೆ ಎನ್ನುವ ಆಶ್ವಾಸನೆಯನ್ನು ಗಂಭೀರವಾಗಿ ತೆಗೆದುಕೊಳ್ಳಬೇಡಿ. ಹೆಣ್ಣುಮಕ್ಕಳು ಅಥವಾ ರಾಜರನ್ನು ಎಂದಿಗೂ ನಂಬದಿರು ಎಂದು ಚಾಣಕ್ಯ ಸಲಹೆ ಮಾಡಿದ್ದ. ಆದರೆ ವಾಸ್ತವವಾಗಿ ಆ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಸೇರಿಸಬೇಕಾದ ಹೆಸರೆಂದರೆ ಅದು ಕವಿಗಳದ್ದು,” ಎಂದು ಟ್ಯಾಗೋರ್‌ ಅವರು ಕಸಿನ್ಸ್‌ ಅವರಿಗೆ ಬರೆದ ಲಘುದಾಟಿಯ ಪತ್ರದಲ್ಲಿ ತಿಳಿಸಿದ್ದರು.

ಟ್ಯಾಗೋರ್‌ ಅವರು ಕಸಿನ್ಸ್‌ ಅವರಿಗೆ ಪತ್ರ ಬರೆದಿದ್ದು 1918ರ ಡಿಸೆಂಬರ್‌ 24ರಂದು. ನಿಮ್ಮ ಕಲಾ ಪ್ರದರ್ಶನದಲ್ಲಿ ಭಾಗಿಯಾಗಲು ನನಗೆ ಸಾಧ್ಯವಾಗುವುದಿಲ್ಲ. ಜನವರಿ ಕೊನೆಯ ವಾರಕ್ಕೂ ಮುನ್ನ ಹೊರಡಲು ನನಗೆ ಬಿಡುವಿರುವುದಿಲ್ಲ ಎಂದೂ ಅವರು ತಮ್ಮ ಪತ್ರದಲ್ಲಿ ತಿಳಿಸಿದ್ದರು. ಟ್ಯಾಗೋರ್‌ ಮತ್ತು ಕಸಿನ್ಸ್‌ ಅವರ ನಡುವೆ ಎಂತಹ ಆತ್ಮೀಯತೆ ಇತ್ತು ಎಂಬುದು ಈ ಪತ್ರದಿಂದ ವ್ಯಕ್ತವಾಗುತ್ತದೆ.

ಬೆಂಗಳೂರಿನಿಂದ ಮದನಪಲ್ಲಿಗೆ

ಟ್ಯಾಗೋರ್‌ ಕಸಿನ್ಸ್‌ ಅವರಿಗೆ ಕೊಟ್ಟ ಮಾತನ್ನು ಉಳಿಸಿಕೊಂಡರು. ಅವರು 1919ರ ಫೆಬ್ರುವರಿ 25ರಂದು ತಮ್ಮ ಅನಾರೋಗ್ಯದ ನಡುವೆಯೂ ಬೆಂಗಳೂರಿನಿಂದ ಮದನಪಲ್ಲಿಗೆ ರೈಲಿನಲ್ಲಿ ಪ್ರಯಾಣ ಬೆಳೆಸಿದರು. ರೈಲ್ವೆ ನಿಲ್ದಾಣದಲ್ಲಿ ಕಸಿನ್ಸ್‌ ದಂಪತಿ, ಮದನಪಲ್ಲಿಯ ಸಬ್-ಕಲೆಕ್ಟರ್‌ ಮತ್ತು ಇತರ ಗಣ್ಯರು ಅವರನ್ನು ಬರಮಾಡಿಕೊಂಡರು.

ಪತ್ರಿಕೆಗಳಲ್ಲಿಯೂ ಅವರ ಆಗಮನದ ಸುದ್ದಿ ಪ್ರಕಟವಾಯಿತು: “ಶ್ರೀ ಟ್ಯಾಗೋರ್‌ ಅವರು ಕೆಲವು ದಿನಗಳ ಕಾಲ ಸಂಪೂರ್ಣ ವಿಶ್ರಾಂತಿ ಪಡೆಯಲು ಇಲ್ಲಿಗೆ ಆಗಮಿಸಿದ್ದಾರೆ. ಪ್ರಾಂಶುಪಾಲ ಜೇಮ್ಸ್‌ ಎಚ್.ಕಸಿನ್ಸ್‌ ಮತ್ತು ಐ.ಸಿ.ಎಸ್‌ ಅಧಿಕಾರಿ ಹಾಗೂ ಸಬ್-ಕಲೆಕ್ಟರ್‌ ಎ.ಟಾಂಪೋಸ್‌ ಅವರು ರೈಲ್ವೆ ನಿಲ್ದಾಣಕ್ಕೆ ತೆರಳಿ ಕವಿ ಟ್ಯಾಗೋರ್‌ ಅವರನ್ನು ಕಾರಿನಲ್ಲಿ ʼಓಲ್ಡಾನಾʼಗೆ ಕರೆತಂದರು. ಪ್ರಸಿದ್ಧ ಕವಿಯನ್ನು ಸ್ವಾಗತಿಸಲು ಇಂದು ಮುಂಜಾನೆ ಕಾಲೇಜಿನ ಎಲ್ಲ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಅತ್ಯಂತ ಉತ್ಸಾಹದಿಂದ ಸಿದ್ಧತೆ ಕೈಗೊಂಡಿದ್ದರು. ಕಾಲೇಜಿನ ಸ್ಕೌಟ್ಸ್‌ ತಂಡವು ಓಲ್ಕಾಟ್‌ ಬಂಗಲೆಯ ಬಳಿ ಸಾಲಾಗಿ ನಿಂತು ಟ್ಯಾಗೋರ್‌ ಅವರನ್ನು ಸ್ವಾಗತಿಸಿತು. ಗೇಟಿನ ಬಳಿ ಕಾರು ಬಂದು ನಿಂತಾಗ ಡಾ.ಟ್ಯಾಗೋರ್‌ ಅವರು ಕಾರಿನಿಂದ ಇಳಿದು ತೋಟದ ಮೂಲಕ ಸಾಗಿ ತಮ್ಮ ಕೊಠಡಿಯತ್ತ ನಡೆದು ಹೋದರು. ಅವರೊಂದಿಗೆ ಶ್ರೀ ಮತ್ತು ಶ್ರೀಮತಿ ಡೇ (ಪರಿಚಯ ಇಲ್ಲದವರು) ಕೂಡ ಬಂದಿದ್ದಾರೆ. ಅವರ ಮುಂದಿನ ಕಾರ್ಯಕ್ರಮಗಳ ಬಗ್ಗೆ ಯಾವುದೇ ನಿರ್ಧಾರವಾಗಿಲ್ಲ,”

“ಹೆಣ್ಣುಮಕ್ಕಳು ಅಥವಾ ರಾಜರನ್ನು ಎಂದಿಗೂ ನಂಬದಿರು ಎಂದು ಚಾಣಕ್ಯ ಸಲಹೆ ಮಾಡಿದ್ದ. ಆದರೆ ವಾಸ್ತವವಾಗಿ ಆ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಸೇರಿಸಬೇಕಾದ ಹೆಸರೆಂದರೆ ಅದು ಕವಿಗಳದ್ದು,” ಎಂದು ಟ್ಯಾಗೋರ್‌ ಅವರು ಕಸಿನ್ಸ್‌ ಅವರಿಗೆ ಬರೆದ ಲಘುದಾಟಿಯ ಪತ್ರದಲ್ಲಿ ತಿಳಿಸಿದ್ದರು.

ಸಬ್-ಕಲೆಕ್ಟರ್ ಅವರ ಕಾರಿನಲ್ಲಿ ಟ್ಯಾಗೋರ್‌ ಅವರು ನೇರವಾಗಿ ಬಿ.ಟಿ. ಕಾಲೇಜಿಗೆ ಬಂದರು, ಅವರು ಕಾರಿನಿಂದ ಇಳಿದ ಕೂಡಲೇ ವಿದ್ಯಾರ್ಥಿಗಳು ಅವರನ್ನು ಸ್ವಾಗತಿಸಿದರು. ಟ್ಯಾಗೋರ್‌ ಅವರು ಉಳಿದಕೊಂಡ ಬಂಗಲೆಯನ್ನು ಕರ್ನಲ್‌ ಹೆನ್ರಿ ಸ್ಟೀಲ್‌ ಓಲ್ಕಾಟ್‌ ಅವರ ಹೆಸರಿನಲ್ಲಿ ನಿರ್ಮಿಸಲಾಗಿದೆ. ಥಿಯೋಸಾಫಿಕಲ್‌ ಸೊಸೈಟಿಯನ್ನು ಸ್ಥಾಪನೆ ಮಾಡುವಲ್ಲಿ ಸ್ಟೀಲ್‌ ಓಲ್ಕಾಟ್‌ ಅವರು ಅನಿ ಬೆಸೆಂಟ್‌ ಅವರಿಗೆ ಸಾಥ್‌ ನೀಡಿದ್ದರು. ಬಿ.ಟಿ.ಕಾಲೇಜನ್ನು ಸ್ಥಾಪನೆ ಮಾಡಿದ್ದು ೧೯೧೫ರಲ್ಲಿ. ಅಂದಿನ ಮದ್ರಾಸ್‌ ಗವರ್ನರ್‌ ಲಾರ್ಡ್‌ ಪೆಂಟ್-ಲ್ಯಾಂಡ್‌ ಅವರು ಕಾಲೇಜನ್ನು ಉದ್ಘಾಟಿಸಿದ್ದರು.

ಕೊರಳುಬ್ಬಿ ಬಂದ ಆ ಕ್ಷಣ…

ಈಗ ಮತ್ತೆ ʼಜನ ಗಣ ಮನʼ ವಿಚಾರಕ್ಕೆ ಬರೋಣ. ಆ ಬುಧವಾರ ರಾತ್ರಿ ಕಲಾ ಭವನದಲ್ಲಿ ಆವರಿಸಿದ್ದ ಮೌನದ ನಡುವೆ ಟ್ಯಾಗೋರ್‌ ಅವರು ಮಂದ್ರ ಸ್ವರದಲ್ಲಿ ಅತ್ಯಂತ ಮೃದುವಾಗಿ ಹಾಡಲು ಶುರುಮಾಡಿಕೊಂಡರು. ಮೊದಲ ಸಾಲನ್ನು ಆಲಿಸುತ್ತಿದ್ದಂತೆ ಅಷ್ಟೂ ವಿದ್ಯಾರ್ಥಿಗಳು ಅತ್ಯಂತ ಆಸಕ್ತಿಯಿಂದ ಕೇಳಲು ಆರಂಭಿಸಿದರು. ಎರಡನೇ ಸಾಲು ಕೇಳುತ್ತಿದ್ದ ಎಲ್ಲರೂ ಭಾವುಕರಾದರು. ಅವರ ಕೊರಳುಬ್ಬಿ ಬಂದಿತು. ಮತ್ತೊಮ್ಮೆ ಹಾಡುವಂತೆ ಅವರನ್ನು ಕಳಕಳಿಯಿಂದ ಕೇಳಿಕೊಂಡರು. ಟ್ಯಾಗೋರ್‌ ಅವರು ಅದಕ್ಕೆ ಒಪ್ಪಿ ಮತ್ತೊಮ್ಮೆ ಹಾಡಿದರು. ಅದು ಅಲ್ಲಿಗೆ ನಿಲ್ಲಲಿಲ್ಲ. ಇನ್ನೂ ಒಮ್ಮೆ ಹಾಡುವಂತೆ ವಿನಂತಿಸಿಕೊಂಡರು. ಶ್ರೇಷ್ಠ ಕವಿ ಟ್ಯಾಗೋರರು ಮಗದೊಮ್ಮೆ ಹಾಡಿದರು. ಈಗ ಎಲ್ಲರೂ ದನಿಗೂಡಿಸಿದರು. ಅದು ಸಮೂಹ ಗೀತೆಯಾಗಿ ಬದಲಾಗಿ ಇಡೀ ಸಭಾಂಗಣದಲ್ಲಿ ಪ್ರತಿಧ್ವನಿಸಿತು.

ಅದಾದ ಮರುದಿನವೇ ಟ್ಯಾಗೋರ್‌ ಅವರು ಆ ಹಾಡಿಗೆ ಹಿಂದೂಸ್ತಾನಿ ಶೈಲಿಯ ʼಅಹಿಲ್ಯ ಬಿಲಾವಲ್ʼ ರಾಗವನ್ನು ಅಳವಡಿಸಿದರು. ಆ ರಾಗವನ್ನೇ ಆಧಾರವಾಗಿಟ್ಟುಕೊಂಡು ಮಾರ್ಗರೇಟ್‌ ಕಸಿನ್ಸ್‌ ಅವರು ಶ್ರುತಿಯನ್ನು ಅಂತಿಮಗೊಳಿಸಿ ಹಾಡಿಗೆ ಅದರದೇ ಆದ ಶಾಶ್ವತ ರೂಪವನ್ನು ನೀಡಿದರು. ಕಾಲೇಜಿನ ಕ್ಯಾಂಪಸ್‌ ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಹೊತ್ತಿನಲ್ಲಿಯೇ ಟ್ಯಾಗೋರ್‌ ಅವರು ಈ ಗೀತೆಯನ್ನು ಇಂಗ್ಲಿಷ್‌ ಭಾಷೆಗೆ ಅನುವಾದಿಸಿದರು. ಆ ಇಂಗ್ಲಿಷ್‌ ಅನುವಾದದ ಪ್ರತಿಯನ್ನು ಕಾಲೇಜಿನಲ್ಲಿ ಸಂರಕ್ಷಿಸಿ ಇಡಲಾಗಿದೆ. ಅವರ ಈ ಗೀತೆಗೆ ʼದ ಮಾರ್ನಿಂಗ್‌ ಸಾಂಗ್‌ ಆಫ್‌ ಇಂಡಿಯಾʼ ಎಂಬ ಶೀರ್ಷಿಕೆಯನ್ನು ಕೊಟ್ಟು ಅದನ್ನು ಭಾರತೀಯ ʼಸುಪ್ರಭಾತʼ ಎಂದು ಬಣ್ಣಿಸಿದರು.

“ಅಂದು ರಾತ್ರಿ ನಮ್ಮ ಮನೆಯ ಹಿತ್ತಲಿನಲ್ಲಿರುವ ಅಶ್ವತ್ಥ ಮರದ ಕೆಳಗೆ ಕುಳಿತ ಅವರು ನಮಗಾಗಿ ಬಂಗಾಳಿ ಹಾಡು ಮತ್ತು ಅದರ ಅನುವಾದವನ್ನು ಮತ್ತೆ ಮತ್ತೆ ಹಾಡಿದರು. ನಾವು ಯಾವುದೇ ಅಂಜಿಕೆ-ಅಳುಕಿಲ್ಲದೆ ಹಾಡುವ ತನಕವೂ ಅವರು ನಮಗೆ ಆ ಹಾಡನ್ನು ಅಭ್ಯಾಸ ಮಾಡಿಸಿದರು,” ಎಂದು ಜೇಮ್ಸ್‌ ಹೆನ್ರಿ ಕಸಿನ್ಸ್‌ ಅವರು ತಮ್ಮ ʼವೀ ಟುಗೆದರ್‌ʼ ಕೃತಿಯಲ್ಲಿ ಬರೆದುಕೊಂಡಿದ್ದಾರೆ.

ʼದಕ್ಷಿಣ ಭಾರತದ ಶಾಂತಿನಿಕೇತನʼ

ಅದಾದ ಬಳಿಕ ಬೆಸೆಂಟ್‌ ಹಾಲ್‌ ನಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳು ಮತ್ತು ಕವಿಯನ್ನು ನೋಡಲು ಬಂದಿದ್ದ ಸಂದರ್ಶಕರು ಸೇರಿ ಮೊದಲ ಬಾರಿಗೆ ಆ ಗೀತೆಯನ್ನು ಸಾರ್ವಜನಿಕವಾಗಿ ಹಾಡಿದರು. ಆ ಮೂಲಕ ʼಜನ ಗಣ ಮನʼ ಗೀತೆಯನ್ನು ಒಂದು ವ್ಯವಸ್ಥಿತ ಸಮೂಹ ಗೀತೆಯಾಗಿ ಪ್ರಸ್ತುತಪಡಿಸಿದ ಮೊದಲ ಸಂಸ್ಥೆ ಎಂಬ ಹೆಗ್ಗಳಿಕೆಗೆ ಬಿ.ಟಿ.ಕಾಲೇಜು ಪಾತ್ರವಾಯಿತು.

ರವೀಂದ್ರನಾಥ ಟ್ಯಾಗೋರ್‌ ಅವರು ಮದನಪಲ್ಲಿ ಭೇಟಿ ವೇಳೆ ಉಳಿದುಕೊಂಡಿದ್ದ ಓಲ್ಕಾಟ್‌ ಬಂಗಲೆ.

ರವೀಂದ್ರನಾಥ್‌ ಟ್ಯಾಗೋರ್‌ ಅವರು ಕಾಲೇಜಿನಲ್ಲಿ ತಂಗಿದ್ದಾಗ ಒಂದು ದುರದೃಷ್ಟಕರ ಘಟನೆ ಸಂಭವಿಸಿತು. ಒಂದು ದಿನ ರಾತ್ರಿ ವಿದ್ಯಾರ್ಥಿಗಳೆಲ್ಲ ಟ್ಯಾಗೋರ್‌ ಅವರ ʼಸ್ಯಾಕ್ರಿಪೈಸ್‌ʼ (sacrifice) ನಾಟಕವನ್ನು ಪ್ರದರ್ಶಿಸಲು ಎಲ್ಲ ಸಿದ್ಧತೆ ಮಾಡಿಕೊಂಡಿದ್ದರು. ಇನ್ನೇನು ಪ್ರದರ್ಶನ ಆರಂಭಿಸಬೇಕು ಅನ್ನುವ ಹೊತ್ತಿಗೆ ಹತ್ತಿರದ ಹಳ್ಳಿಯಲ್ಲಿ ಭೀಕರ ಬೆಂಕಿ ದುರಂತ ಸಂಭವಿಸಿತು. ಅಗ್ನಿಶಾಮಕ ದಳದ ತರಬೇತಿಯನ್ನು ಪಡೆದಿದ್ದ ಕಾಲೇಜಿನ ಸ್ಕೌಟ್ಸ್‌ ತಂಡವನ್ನು ತಕ್ಷಣ ಅಲ್ಲಿಗೆ ಕಳುಹಿಸಬೇಕಾಯಿತು. ಅದರ ಪರಿಣಾಮವಾಗಿ ನಾಟಕವನ್ನು ಅನಿವಾರ್ಯವಾಗಿ ಮುಂದೂಡಲಾಯಿತು.

ಮಾರ್ಚ್‌ ಎರಡನೇ ತಾರೀಕು ಟ್ಯಾಗೋರ್‌ ಅವರು ಮದ್ರಾಸ್‌ ಪ್ರವಾಸ ಕೈಗೊಂಡರು. ಅವರು ಹೊರಡುವ ಸಂದರ್ಭದಲ್ಲಿ ಮದನಪಲ್ಲಿಯ ಬೆಸೆಂಟ್‌ ಥಿಯೋಸೊಫಿಕಲ್‌ ಕಾಲೇಜನ್ನು ʼದಕ್ಷಿಣ ಭಾರತದ ಶಾಂತಿನಿಕೇತನʼ ಎಂದು ಬಣ್ಣಿಸಿದರು.

ಆಗಿನ ಕಾಲಘಟ್ಟದಲ್ಲಿ ಈ ಪ್ರದೇಶವು ತೀರಾ ಹಿಂದುಳಿದಿತ್ತು. ಆ ಕಾರಣದಿಂದಲೇ ಅನಿ ಬೆಸೆಂಟ್‌ ಅವರು ಮದನಪಲ್ಲಿಯಲ್ಲಿ ಬಿ.ಟಿ.ಕಾಲೇಜನ್ನು ಸ್ಥಾಪಿಸಲು ಮುಂದಾದರು. 1915ಕ್ಕಿಂತ ಮೊದಲು ಸುಮಾರು ಐವತ್ತು ವರ್ಷಗಳ ಕಾಲ ಮದನಪಲ್ಲಿ ಸುತ್ತಮುತ್ತಲ ಪ್ರದೇಶ ಭೀಕರ ಬರಗಾಲಕ್ಕೆ ತುತ್ತಾಗಿತ್ತು. ಆಗ ಹರಡಿದ ರೋಗ-ರುಜಿನ, ಹಸಿವಿನಿಂದ ಪ್ರಾಣ ಕಳೆದುಕೊಂಡವರು ಸಾವಿರಾರು ಜನ. ಕೆಲವೊಮ್ಮೆ ಬರಗಾಲ ಸತತ ಎರಡು ವರ್ಷಗಳ ಕಾಲ ಮುಂದುವರಿದ ಉದಾಹರಣೆಗಳೂ ಇವೆ. ಕೊನೆಗೆ ಬರಗಾಲ ಮುಗಿದು ಅತಿವೃಷ್ಟಿ ಸಂಭವಿಸುತ್ತಿತ್ತು. ಆಗ ಕೆರೆ-ಕಟ್ಟೆಗಳು ಒಡೆದು ಹೋಗುತ್ತಿದ್ದವು. ಇಂತಹ ಸಂದರ್ಭದಲ್ಲಿ ಬದುಕಿನ ನಿರ್ವಹಣೆಯೇ ಕಷ್ಟವಾದಾಗ ಬ್ರಿಟಿಷ್‌ ಸರ್ಕಾರ ಜನರಿಗೆ ಉದ್ಯೋಗವನ್ನು ನೀಡುವ ಸಲುವಾಗಿ ಮದನಪಲ್ಲಿ ಮತ್ತು ಸುತ್ತಮುತ್ತಲಿನ ಪಟ್ಟಣ ಮತ್ತು ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ನಿರ್ಮಾಣ ಯೋಜನೆಗಳನ್ನು ಕೈಗೆತ್ತಿಕೊಂಡು ನೆರವಿಗೆ ಬಂದಿತ್ತು.

ಇಂತಹ ನಿರ್ಣಾಯಕ ಕಾಲಘಟ್ಟದಲ್ಲಿಯೇ ಜಾತಿ ಮತ್ತು ಧರ್ಮದ ಭೇದವಿಲ್ಲದೆ ಈ ಭಾಗದ ಜನರಿಗೆ ಉತ್ತಮ ಶಿಕ್ಷಣ ನೀಡುವ ಉದ್ದೇಶದಿಂದ ಬಿ.ಟಿ.ಕಾಲೇಜನ್ನು ಸ್ಥಾಪನೆ ಮಾಡಲಾಯಿತು. ಮೊದಲು ಈ ಕಾಲೇಜು ಮದ್ರಾಸ್‌ ವಿವಿ ಜೊತೆ ಸಂಯೋಜಿತವಾಗಿತ್ತು. ಆದರೆ ಅನಿ ಬೆಸೆಂಟ್‌ ಅವರು ಬ್ರಿಟಿಷ್‌ ವಿರೋಧಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಶಂಕಿಸಿದ ವಿಶ್ವವಿದ್ಯಾಲಯವು ನಂತರ ಕಾಲೇಜಿನ ಸಂಯೋಜನೆಯನ್ನು ರದ್ದುಗೊಳಿಸಿತು. ಆ ನಂತರ ಇದನ್ನು ರವೀಂದ್ರನಾಥ ಟ್ಯಾಗೋರ್‌ ಅವರು ಕುಲಪತಿಗಳಾಗಿದ್ದ ನ್ಯಾಷನಲ್‌ ಯೂನಿವರ್ಸಿಟಿ ಜೊತೆಗೆ ಸೇರಿಸಲಾಯಿತು.

Next Story