ಕರ್ನಾಟಕದಲ್ಲಿ ಭಯೋತ್ಪಾದಕ Sleeper Cell ಕ್ರಿಯಾಶೀಲ
x

ಕರ್ನಾಟಕದಲ್ಲಿ ಭಯೋತ್ಪಾದಕ Sleeper Cell ಕ್ರಿಯಾಶೀಲ

NIA ತನಿಖೆಯಿಂದ ಸ್ಲೀಪರ್‌ ಸೆಲ್‌ ಬಂಡವಾಳ ಬಯಲಿಗೆ?


ಅತ್ಯಲ್ಪ ಕಾಲದಲ್ಲಿ ಬೆಂಗಳೂರಿನ ಜನಪ್ರಿಯ ಹೋಟೆಲ್ ಗಳಲ್ಲಿ ಒಂದಾಗಿರುವ ರಾಮೇಶ್ವರಂ ಕೆಫೆಯಲ್ಲಿ ಸ್ಪೋಟ ಸಂಭವಿಸಿ ನಾಲ್ಕು ದಿನಗಳಾಗಿವೆ. ಈ ಸ್ಫೋಟದಿಂದಾಗಿ ಕನಿಷ್ಠ 10 ಮಂದಿಗೆ ಗಾಯಗಳಾಗಿವೆ. ಅದೃಷ್ಟವಶಾತ್‌ ಈ ಸ್ಫೋಟವು ಕಡಿಮೆ ತೀವ್ರತೆಯಾದಾಗಿದ್ದು ಯಾವ ಪ್ರಾಣ ಹಾನಿ ಸಂಭವಿಸಿಲ್ಲ. ಒಟ್ಟಿನಲ್ಲಿ ಈ ಸ್ಫೋಟವು ರಾಜ್ಯ ಅದರಲ್ಲೂ ಬೆಂಗಳೂರಿನ ಶಾಂತಿಗೆ ಭಂಗ ತಂದಿರುವುದಂತೂ ಸತ್ಯ. ಈ ಸ್ಪೋಟಕ್ಕೆ ಸಂಬಂಧಿಸಿದಂತೆ ಅಪರಿಚಿತ ವ್ಯಕ್ತಿಗಳ ವಿರುದ್ಧ ʼಕಾನೂನುಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯ್ದೆಯಡಿ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್ ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ರಾಮೇಶ್ವರಂ ಕೆಫೆಯಲ್ಲಿ ನಡೆದ ಸ್ಪೋಟಕ್ಕೂ ಮಂಗಳೂರಿನಲ್ಲಿ 2022ರಲ್ಲಿ ನಡೆದ ಸ್ಪೋಟಕ್ಕೂ ಸಂಬಂಧ ಇರಬಹುದೆಂದು ಪೊಲೀಸರು ಶಂಕಿಸಿದ್ದಾರೆ. ಏಕೆಂದರೆ ಎರಡೂ ಪ್ರಕರಣಗಳಲ್ಲಿ ಬಳಸಿರುವ ವಸ್ತುಗಳಲ್ಲಿ ಸಾಮ್ಯತೆ ಇರುವುದು ಅವರ ಶಂಕೆಗೆ ಕಾರಣ. ಈ ಪ್ರಕರಣ ತನಿಖೆ ನಡೆಸಿದ್ದ ರಾಷ್ಟ್ರೀಯ ತನಿಖಾ ದಳ (NIA) ಈ ಹಿಂದೆ ತಮಿಳುನಾಡಿನ ಕೊಯಮತ್ತೂರ್‌ ನಲ್ಲಿ ನಡೆದ ಸ್ಫೋಟಕ್ಕೂ, ಮಂಗಳೂರಿನಲ್ಲಿ ನಡೆದ ಸ್ಫೋಟಕ್ಕೂ ಸಂಬಂಧವಿದೆಯೆಂದು ಹೇಳಿತ್ತು. ಆರೋಪಿಗಳಿಗೆ ಇಸ್ಲಾಮಿಕ್‌ ಸ್ಟೇಟ್‌ (IS) ಸಂಘಟನೆಯಿಂದ ಪ್ರೇರಣೆ ಪಡೆದಿರಬಹುದೆಂದೂ ದೋಷಾರಪ ಪಟ್ಟಿಯಲ್ಲಿ NIA ಅಭಿಪ್ರಾಯಪಟ್ಟಿತ್ತು. IS ಸಂಘಟನೆಗೂ ಬೆಂಗಳೂರಿನ ರಾಮೇಶ್ವರಂ ಕೆಫೆ ಸ್ಫೋಟಕ್ಕೂ ಸಂಬಂಧವಿದೆಯೇ ಎಂಬ ಅನುಮಾನ ಈಗ ಮೂಡಿದೆ.

NIA ಗೆ ಪ್ರಕರಣ? ಗೊಂದಲದ ಹೇಳಿಕೆಗಳು

“ನಮ್ಮ ಪೊಲೀಸರ ಜತೆಗೆ ಎನ್‌ಐಎ ಕೂಡ ಅದರ ಕ್ರಮದಲ್ಲಿ ತನಿಖೆ ನಡೆಸುತ್ತಿದೆ. ಪರಸ್ಪರ ಸಹಕಾರದಿಂದ ಆದಷ್ಟು ಶೀಘ್ರ ಪ್ರಕರಣವನ್ನು ಬೇಧಿಸುತ್ತೇವೆ” ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್‌ ಹೇಳಿದ್ದಾರೆ. ಆದರೆ ಈ ನಡುವೆ NIA ಪ್ರಕರಣವನ್ನು ತನ್ನ ಸುಪರ್ದಿಗೆ ತೆಗೆದುಕೊಂಡಿದೆ ಎಂದು ಸುದ್ದಿ ಹರಡಿದೆ. ಆದರೆ ಕರ್ನಾಟಕ ಸರ್ಕಾರ ತಾನು ಈ ಪ್ರಕರಣವನ್ನು NIA ಗೆ ಒಪ್ಪಿಸಿಲ್ಲ, ರಾಜ್ಯ ಸಿಸಿಬಿ ಈ ಪ್ರಕರಣವನ್ನು ತನಿಖೆ ನಡೆಸುತ್ತಿದ್ದು, ಈಗಾಗಲೇ ಶಂಕಿತರ ಬಂಧನಕ್ಕೆ ಹಲವು ತಂಡಗಳನ್ನು ರಚಿಸಲಾಗಿದೆ. ದುಷ್ಕರ್ಮಿ ಪಕ್ಕದ ರಾಜ್ಯದಲ್ಲಿ ಅಡಗಿರುವ ಸಾಧ್ಯತೆಯ ಹಿನ್ನೆಲೆಯಲ್ಲಿ ನೆರೆಯ ರಾಜ್ಯಗಳ ನೆರವು ಕೋರಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. “ಅಗತ್ಯ ಬಿದ್ದರೆ ಮಾತ್ರ ಪ್ರಕರಣದ ತನಿಖೆಯನ್ನು NIAಗೆ ವಹಿಸುವ ಬಗ್ಗೆ ಚಿಂತನೆ ನಡೆಸಲಾಗುವುದು” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಆದರೆ ಕೇಂದ್ರ ಗೃಹ ಇಲಾಖೆ ಇಚ್ಛಿಸಿದರೆ ಸ್ವತಹ ಕಾನೂನಿಡಿಯಲ್ಲಿ ಸ್ವಯಂಪ್ರೇರಿತವಾಗಿ ಪ್ರಕರಣವನ್ನು NIAಗೆ ವಹಿಸಬಹುದು ಎಂಬುದು ಕಾನೂನು ಪಂಡಿತರ ಆಭಿಪ್ರಾಯ.

ಈ ಸ್ಫೋಟ ಪ್ರಕರಣದಲ್ಲಿ ಭಯೋತ್ಪಾದಕ ಸಂಸ್ಥೆಯ ಕೈವಾಡವಿರಬಹುದು. ಇತ್ತೀಚಿನ ದಿನಗಳಲ್ಲಿ ಬೆಂಗಳೂರಿನಲ್ಲಿ ಸ್ಲೀಪರ್‌ ಸೆಲ್‌ ಗಳು ಕ್ರಿಯಾಶೀಲವಾಗಿವೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ತಮ್ಮ ಅಧಿಕಾರಾವಧಿಯಲ್ಲಿ ಈ ಸ್ಲೀಪರ್‌ ಸೆಲ್‌ ಗಳ ವಿರುದ್ಧ ಕ್ರಮ ಕೈಗೊಂಡಿದ್ದು, ಕೆಲವರನ್ನು ಬಂಧಿಸಲಾಗಿತ್ತು. ಹಾಗಾಗಿ ಈ ಪ್ರಕರಣವನ್ನು NIAಗೆ ವಹಿಸಬೇಕೆಂದು ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಗಳನ್ನು ಒತ್ತಾಯಿಸಿದ್ದಾರೆ.

ಸ್ಫೋಟದ ಸುತ್ತಲಿನ ರಾಜಕೀಕರಣ

ಈ ನಡುವೆ ರಾಮೇಶ್ವರಂ ಕೆಫೆ ಸ್ಫೋಟವನ್ನು ರಾಜಕೀಕರಣಗೊಳಿಸುವ ಪ್ರಯತ್ನ ನಡೆದಿದೆ. ಅಧಿಕಾರದಲ್ಲಿರುವ ಕಾಂಗ್ರೆಸ್‌ ಸರ್ಕಾರದ ಅಲ್ಪಸಂಖ್ಯಾತರ ತುಷ್ಟೀಕರಣದಿಂದಾಗಿ ಬಾಂಬ್‌ ಸ್ಫೋಟದಂಥ ಕೃತ್ಯ ನಡೆದಿದೆ ಎಂದು ಅಧಿಕೃತ ವಿರೋಧ ಪಕ್ಷ ಬಿಜೆಪಿ ಆರೋಪಿಸಿದೆ. ಇದಕ್ಕೆ ತಕ್ಕ ಉತ್ತರ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ “ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದಾಗ ಮಂಗಳೂರಿನಲ್ಲಿ ಕುಕ್ಕರ್‌ ಬಾಂಬ್‌ ಸ್ಫೋಟವಾಗಿತ್ತು. ಆಗ ಆ ಪಕ್ಷದವರು ರಾಜಕೀಯಕ್ಕಾಗಿ ಅಲ್ಪಸಂಖ್ಯಾತರ ತುಷ್ಟೀಕರಣ ಮಾಡಿದ್ದರೇ?” ಎಂದು ಪ್ರಶ್ನಿಸಿದ್ದಾರೆ.

ಶಾಂತಿಯ ತೋಟವಾದ ಕರ್ನಾಟಕದ ನಿದ್ದೆಗೆಡಿಸಿದ ಭಯೋತ್ಪಾದನಾ ಕೃತ್ಯ

ಕರ್ನಾಟಕದಲ್ಲಿ 2005ರಲ್ಲಿ Indian Institute of Science (IIsc) ಮೇಲೆ ನಡೆದ ಭಯೋತ್ಪಾದಕ ದಾಳಿಯ ನಂತರ ಹೆಚ್ಚಿದ ಉಗ್ರರ ಚಟುವಟಿಕೆ, ರಾಜ್ಯದ ಜನರ, ವಿಶೇಷವಾಗಿ ಬೆಂಗಳೂರಿಗರ ನಿದ್ರೆ ಕೆಡಿಸಿತು. ಜುಲೈ 2008ರಲ್ಲಿ ಬೆಂಗಳೂರಿನ ಮಡಿವಾಳ, ಮೈಸೂರು ರಸ್ತೆ, ಆಡುಗೋಡಿ, ಕೋರಮಂಗಲ, ವಿಠ್ಠಲ್‌ ಮಲ್ಯ ರಸ್ತೆ, ಲ್ಯಾಂಗ್ ಫೋರ್ಡ್‌ ರಸ್ತೆ, ರಿಚ್ಮಂಡ್‌ ರಸ್ತೆ ಸೇರಿದಂತೆ 9 ಕಡೆಗಳಲ್ಲಿ ಕಡಿಮೆ ಪರಿಣಾಮ್‌ ಬಾಂಬ್‌ ಸ್ಫೋಟಗೊಂಡು ನಾಗರಿಕರ ಆತಂಕವನ್ನು ಹೆಚ್ಚು ಮಾಡಿತು.2010ರಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಬಾಂಬ್‌ ಸ್ಫೋಟ. 2013ರಲ್ಲಿ ಬಿಜೆಪಿ ಕಛೇರಿ ಬಳಿ ನಡೆದ ಸ್ಫೋಟ, 2014ರಲ್ಲಿ ಚರ್ಚ್ ಸ್ಟ್ರೀಟ್‌ ನಲ್ಲಿ ನಡೆದ ಸ್ಫೋಟದ ಹಿನ್ನೆಲೆಯಲ್ಲಿ ರಾಜ್ಯ ಪೊಲೀಸರು, ಕರಾವಳಿ ರಕ್ಷಣಾ ಪಡೆ, ಕೇಂದ್ರ ಜಾಗ್ರತಾ ದಳ, ರಾ ಇತ್ಯಾದಿ ಸಂಸ್ಥೆಗಳು ತಮಗೆ ಸಿಗುವ ಸಣ್ಣಸಣ್ಣ ಸುಳಿವನ್ನೂ ಬೆನ್ನು ಹತ್ತಿ ನಖಶಿಖಾಂತ ಶೋಧಿಸುತ್ತಿದ್ದಾರೆ.

ಆದರೆ, ಕರ್ನಾಟಕ ಸರ್ಕಾರ ನಿಜವಾಗಿ ಭಯಗೊಂಡಿದ್ದು, 2019ರಲ್ಲಿ ಕರಾವಳಿ ಭದ್ರತಾ ಪಡೆ ಮಲ್ಪೆ ಜನರಿಗೆ ಸೂಚನೆ ನೀಡಿ ಯಾವುದೇ ಸಂಶಯಾಸ್ಪದ ವ್ಯಕ್ತಿಯ ಚಲನವಲನ ಕಂಡು ಬಂದರೆ ಪೊಲೀಸರಿಗೆ ತಿಳಿಸುವಂತೆ ಸೂಚನೆ ನೀಡಿದಾಗ. ಅದಕ್ಕೆ ಅವರು ನೀಡಿದ ಕಾರಣ ಲಷ್ಕರ್‌-ಏ-ತೋಯ್ಬಾದ ಆರು ದುಷ್ಕರ್ಮಿಗಳು ತಮಿಳು ನಾಡಿಗೆ ನುಸುಳಿದ್ದು, ಅವರು ಕಡಲ ಮಾರ್ಗವಾಗಿ ಕರ್ನಾಟಕ ಕರಾವಳಿಯನ್ನು ಪ್ರವೇಶಿಸುವ ಸಾಧ್ಯತೆ ಇದೆ ಎಂಬುದು. ಅಂದಿನ ಮಲ್ಪೆಯ ಪೊಲೀಸ್‌ ಅಧಿಕಾರಿ ಪ್ರಮೋದ್‌ ಕಾಮತ್ ಅವರು ಕೇಂದ್ರ ಜಾಗ್ರತ ದಳದ ಸೂಚನೆಯ ಮೇರೆಗೆ ಜನರಿಗೆ ಎಚ್ಚರಿಕೆಯಿಂದ ಇರುವಂತೆ ಕೋರಿದ್ದರು. ಆಗಸ್ಟ್‌ 16, 2021 ಮಂಗಳೂರು ಪೊಲೀಸರು ನಾಲ್ಕು ಮಂದಿಯನ್ನು ಬಂಧಿಸಿದ್ದರೂ, ಈ ಬಗ್ಗೆ ಹೆಚ್ಚಿನ ವಿವರ ನೀಡಲಿಲ್ಲ.

2019ರಲ್ಲಿ ಕರ್ನಾಟಕ ಕಡಲ ತೀರದಲ್ಲಿ ರೆಡ್‌ ಅಲರ್ಟ್

ಇದಾದ ಕೆಲವೇ ದಿನಗಳಲ್ಲಿ ,ಕರ್ನಾಟಕ ಕರಾವಳಿ, ಮಲೆನಾಡಿನ ದಟ್ಟ ಅರಣ್ಯದೊಳಗಿಂದ ಸ್ಯಾಟಲೈಟ್‌ ಕರೆಗಳು ವಿನಿಮಯವಾಗುತ್ತಿರುವುದು ರಾಷ್ಟ್ರದ ರಕ್ಷಣಾ ಸಂಸ್ಥೆಗಳ ನಿದ್ದೆ ಗೆಡಿಸಿತು. ಕೇಂದ್ರ ಜಾಗ್ರತ ದಳದ ಮೈಯೆಲ್ಲ ಕಣ್ಣಾಗಿ, ಕಿವಿಯಾಗಿ ಕಡಲ ತೀರವನ್ನು ಕಾಯತೋಡಗಿತು. ಸೆಪ್ಟೆಂಬರ್‌ 2 2021ರಂದು ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪತ್ರಕರ್ತರೊಂದಿಗೆ ಮಾತನಾಡಿ; “ಕರ್ನಾಟದ ಕರಾವಳಿ ಉದ್ದಗಲಕ್ಕೂ, ಪಶ್ಚಿಮ ಘಟ್ಟ ಪ್ರದೇಶದ ಅಂತರಾಳದ ಮೇಲೂ ಎನ್‌ ಐ ಎ ಕಣ್ಣಿಟ್ಟು ಕಾಯುತ್ತಿದೆ. ಎನ್‌ ಐ ಎ ಈಗಾಗಲೇ ಒಬ್ಬ ಸಂಶಯಾಸ್ಪದ ವ್ಯಕ್ತಿಯನ್ನು ಬಂಧಿಸಿದೆ. ಇದಕ್ಕಿಂತ ಹೆಚ್ಚಿನ ವಿವರ ನೀಡುವುದು ಸಾಧ್ಯವಿಲ್ಲ” ಎಂದಿದ್ದರು. ಈ ವಿಷಯವನ್ನು ಕೇಂದ್ರದ ಗೃಹ ಸಚಿವ ಅಮಿತ್‌ ಶಾ ಅವರ ಗಮನಕ್ಕೂ ತರುವುದಾಗಿ ಹೇಳಿದರು. ಈ ಪ್ರದೇಶಗಳಲ್ಲಿ ಸ್ಲೀಪರ್‌ ಸೆಲ್‌ ಗಳು ಸಕ್ರೀಯವಾಗಿರುವ ಬಗ್ಗೆ ತಮಗೆ ಇಂಟಲಿಜೆನ್ಸ್‌ ಮಾಹಿತಿ ಇದೆ ಎಂದು ತಿಳಿಸಿದ್ದರು.

ದಕ್ಷಿಣ ಕನ್ನಡ ಪೊಲೀಸ್‌ ಪ್ರಕಾರವೇ ಕನಿಷ್ಠ 13 ಮಂದಿ ಮೂರು ತಂಡಗಳಲ್ಲಿ ಪೊಲೀಸ್‌ ಮೂಲಗಳ ಪ್ರಕಾರವೇ ಶ್ರೀಲಂಕಾದಿಂದ ತಮಿಳು ನಾಡಿಗೆ ಅಲ್ಲಿಂದ ಕರ್ನಾಟಕಕ್ಕೆ ನುಸುಳಿದ್ದಾರೆ. ಅವರೆಲ್ಲರೂ ಮೀನು ಹಿಡಿಯುವ ದೋಣಿಗಳಲ್ಲಿ ಪ್ರಯಾಣಿಸಿ ತಮ್ಮ ಗಮ್ಯ ಸ್ಥಾನ ತಲುಪಿದ್ದಾರೆ. ಅವರೆಲ್ಲರೂ ಕರ್ನಾಟಕದ ಕರಾವಳಿ ಭಾಗದಲ್ಲಿ, ಮಲೆನಾಡಿನ ದಟ್ಟ ಅರಣ್ಯಗಳಲ್ಲಿ ಅಡಗಿ ರಾಜ್ಯಾದ್ಯಂತ ಸ್ಲೀಪರ್‌ ಸೆಲ್‌ ಗಳನ್ನು ರಚಿಸುವ ಕಾರ್ಯದಲ್ಲಿ ನಿರತಾಗಿದ್ದಾರೆ ಎಂಬುದು ಪೊಲೀಸರಿಗೆ ದಕ್ಕಿದ ಇಂಟಲಿಜೆನ್ಸ್‌ ಮಾಹಿತಿ. ಈ ನಡುವೆ ಕೇಂದ್ರ ಜಾಗ್ರತಾ ದಳ ಕಾರವಾರದಿಂದ ಚಿಕ್ಕಮಗಳೂರಿನ ವರೆಗೆ ಬೇರೆಬೇರೆ ಪ್ರದೇಶಗಳಿಂದ ಸ್ಯಾಟಲೈಟ್‌ ಕರೆಗಳು ವಿನಿಮಯವಾಗಿರುವುದನ್ನು ಖಚಿತಪಡಿಸಿಕೊಂಡಿತ್ತು. ಸೆಪ್ಟೆಂಬರ್‌ 17 2019 ಕರ್ನಾಟಕದ 225 ಕಿಮಿ, ಉದ್ದಕ್ಕೂ ರೆಡ್‌ ಅಲರ್ಟ್‌ ಘೋಷಿಸಲಾಯಿತು.

ಈ ನಡುವೆ ಜುಲೈ 2020ರಲ್ಲಿ ಕೇಂದ್ರ ಸರ್ಕಾರಕ್ಕೆ ತಲುಪಿದ ವರದಿಯೊಂದು ಕರ್ನಾಟಕ-ಕೇರಳ ರಾಜ್ಯಗಳ ಮೇಲೆ ಭಯೋತ್ಪಾದಕರ ಕರಿನೆರಳು ಹರಡಿದೆ. ಐಸ್‌ ಮತ್ತು ಅಲ್ಖೈದಾ ಸಂಘಟನೆಗಳು ಈ ಪ್ರದೇಶದಲ್ಲಿ ಸಕ್ರೀಯವಾಗಿವೆ. ಅವು ಈ ಎರಡು ರಾಜ್ಯಗಳಲ್ಲಿ ಭಯೋತ್ಪಾದಕ ಕೃತ್ಯ ಎಸಗುವ ಸಾಧ್ಯತೆ ಇದೆ ಎಂದು ಹೇಳಿದ್ದು, ಕರ್ನಾಟಕದ ಪೊಲೀಸರ ನಿದ್ರೆಗೆಡಿಸಿತು.

ಈ ಬೆಳವಣಿಗೆಯನ್ನು ಸಮರ್ಥಿಸುವಂತೆ ರಾಜ್ಯದ ಅಂದಿನ ಗೃಹ ಸಚಿವ ಆರಗ ಜ್ಞಾನೇಂದ್ರ ವಿಧಾನ ಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತ, “ಈ ವರ್ಷ (2021) ೨೨೦ ಸಾರಿ ಸ್ಯಾಟಲೈಟ್‌ ಕರೆಗಳ ವಿನಿಮಯವಾಗಿದೆ. ಕಳೆದ ವರ್ಷ (2020)ರಲ್ಲಿ 256 ಬಾರಿ ಸ್ಯಾಟಲೈಟ್‌ ಕರೆಗಳು ವಿನಿಮಯವಾಗಿದೆ . 2011ರ ಮುಂಬೈ ಭಯೋತ್ಪಾದಕರ ದಾಳಿಯ ನಂತರ ಸ್ಯಾಟಲೈಟ್‌ ಕರೆಗಳನ್ನು ದೇಶದಲ್ಲಿ ನಿಷೇಧಿಸಲಾಗಿದ್ದರೂ, ಇಷ್ಟು ಕರೆಗಳು ವಿನಿಮಯವಾಗಿರುವುದು ಪೊಲೀಸರಿಗೆ ಬಿಡಿಸಲಾರದ ಒಗಟಾಗಿದೆ ಈ ವಿವರವನ್ನು ನಾವು ರಿಸರ್ಚ್‌ ಅನಾಸಿಸ್‌ ವಿಂಗ್‌ (ರಾ)ದೊಂದಿಗೆ ಹಂಚಿಕೊಂಡಿದ್ದೇವೆ. ಕರ್ನಾಟಕ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ” ಎಂದು ಹೇಳಿದ್ದು, ರಾಜ್ಯದಲ್ಲಿ ಭಯೋತ್ಪಾದನೆ ಚಟುವಟಿಕೆ ನಿಧಾನವಾಗಿ ಕ್ರಿಯಾಶೀಲವಾಗುತ್ತಿರುವುದು ಖಚಿತಗೊಳಸಿತ್ತು. ಕರಾವಳಿ ತಟ, ಮಲೆನಾಡಿನ ದಟ್ಟಕಾಡುಗಳಿಂದ ಯಾದಗಿರಿ ವರೆಗೂ ಈ ಭಯೋತ್ಪಾದಕರ ಜಾಲ, ಸ್ಲೀಪರ್‌ ಸೆಲ್ ಗಳನ್ನು ರಚಿಸುತ್ತಿರುವ ಸಂಗತಿ, ಕರ್ನಾಟಕದ ಪೊಲೀಸರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿತ್ತು.

ಕೇಂದ್ರ ತನಿಖಾ ದಳದಿಂದ ಗ್ರೇಡ್‌-ಎ ಆಕ್ಟೀವಬಲ್‌ ಮಾಹಿತಿ, ಸೂಚನೆ ಬಂದ ಮೇಲಂತೂ, ಐ ಎನ್‌ ಎಸ್‌ ಕದಂಬ, ಕರಾವಳಿ ರಕ್ಷಣಾ ಪಡೆ, ಕರಾವಳಿ ಪೊಲೀಸರು ರಕ್ಷಣಾ ಬೇಲಿಯನ್ನೇ ರಚಿಸದಿದರೆಂದು ಬಿಜೆಪಿ ಸರ್ಕಾರ ಹೇಳಿಕೊಳ್ಳುತ್ತದೆ.

ಇದೆಲ್ಲದರ ಪರಿಣಾಮವಾಗಿ ಸ್ಲೀಪರ್‌ ಸೆಲ್‌ ಗಳೆಂದು ಗುರುತಿಸಲಾದ ಹಲವರನ್ನು ಎನ್‌ ಐ ಎ ಕೇರಳದಲ್ಲಿ ಬಂಧಿಸಿತು. ಕರ್ನಾಟಕದಲ್ಲೂ ಆಗ ಕೆಲವರನ್ನು ಸ್ಲೀಪರ್‌ ಸೆಲ್‌ ಗಳೆಂದು ಬಂಧಿಸಲಾಗಿದೆ ಎಂದು ಬಸವರಾಜ ಬೊಮ್ಮಾಯಿ ಇತ್ತೀಚೆಗೆ ಪತ್ರಿಕಾ ಹೇಳಿಕೆಯಲ್ಲಿ ಹೇಳಿರುವುದು- ಸ್ಲೀಪರ್‌ ಸೆಲ್‌ಗಳು ಇಂದಿಗೂ ಕರ್ನಾಟಕದಲ್ಲಿ ಜೀವಂತವಾಗಿವೆ. ಅವು ಕ್ರಿಯಾಶೀಲವಾಗಿರುವುದರ ಕುರುಹೇ ರಾಮೇಶ್ವರಂ ಕೆಫೆಯ ಮೇಲೆ ನಡೆದಿರುವ ʼಭಯೋತ್ಪಾದಕ ದಾಳಿ-ಎಂದು ಬಿಜೆಪಿ ನಾಯಕರು ಹೇಳಿಕೊಳ್ಳುತ್ತಿದ್ದಾರೆ.

ಆಗ ತನಿಖೆ ನಡೆಸಿರುವ ಎನ್‌ ಐ ಎ ಮತ್ತೆ ರಾಮೇಶ್ವರಂ ಕೆಫೆ ಸ್ಫೋಟದ ಹಿನ್ನೆಲೆಯಲ್ಲಿ ತನಿಖೆಯನ್ನು ಕೈಗೆತ್ತಿಕೊಂಡಿರುವುದರಿಂದ ಈ ಸ್ಲೀಪರ್‌ ಸೆಲ್‌ ಗಳು ಇನ್ನು ಜೀವಂತವಾಗಿವೆಯೇ ಇಲ್ಲವೇ? ಎಂಬುದರ ಸತ್ಯ ಬಯಲಾಗಲಿದೆ.

Read More
Next Story