ತನುಜಾ ಚಂದ್ರ ಸಂದರ್ಶನ: ವಿವಾಹ ವೆಬ್ ತಾಣಗಳ ಬಣ್ಣ ಬಯಲು ಮಾಡುವ ಸಾಕ್ಷ್ಯಚಿತ್ರ
x
ದುಷ್ಮನ್, ಸಂಘರ್ಷ್ ಮತ್ತು ಖರೀಬ್ ಖರೀಬ್ ಸಿಂಗಿಲೆಯಂತಹ ಚಿತ್ರಗಳ ನಿರ್ದೇಶಕಿ ತನುಜಾ ಚಂದ್ರ

ತನುಜಾ ಚಂದ್ರ ಸಂದರ್ಶನ: ವಿವಾಹ ವೆಬ್ ತಾಣಗಳ ಬಣ್ಣ ಬಯಲು ಮಾಡುವ ಸಾಕ್ಷ್ಯಚಿತ್ರ

ಇಷ್ಟೆಲ್ಲ ಪ್ರಗತಿಯ ಬಳಿಕವೂ ಮಹಿಳೆಯರು ವಂಚನೆಯ ಬಲೆಗೆ ಬೀಳುತ್ತಾರೆ ಎಂಬುದನ್ನು ತೆರೆದಿಟ್ಟಿರುವ ಚಿತ್ರ ನಿರ್ದೇಶಕಿ ತನುಜಾ ಚಂದ್ರ ಅವರ ಸಾಕ್ಷ್ಯಚಿತ್ರಗಳ ಸರಣಿ wedding.con ಅಮೇಜಾನ್ ಪ್ರೈಮ್ ನಲ್ಲಿ ಪ್ರಸಾರವಾಗುತ್ತಿದೆ. OTT ಓಟದ ನಡುವೆಯೂ ಭಾರತೀಯ ಸಿನೆಮಾ ಯಾಕೆ ಮಹಿಳಾ ಪ್ರಧಾನ ಕಥೆಗಳಿಗೆ ಹೆಚ್ಚಿನ ಮಹತ್ವ ಕೊಡುತ್ತಿಲ್ಲ ಎಂಬುದರ ಬಗ್ಗೆಯೂ ಅವರು ಮಾತನಾಡಿದ್ದಾರೆ.


ದುಷ್ಮನ್, ಸಂಘರ್ಷ್ ಮತ್ತು ಖರೀಬ್ ಖರೀಬ್ ಸಿಂಗ್ಲೇ ಚಿತ್ರಗಳ ಬಗ್ಗೆ ನೀವು ಕೇಳಿದ್ದೀರಾದರೆ ನಿಮಗೆ ಚಿತ್ರ ನಿರ್ಮಾಪಕಿ ತನುಜಾ ಚಂದ್ರ ಅವರ ಪರಿಚಯವಿರುತ್ತದೆ. ಈ ಇಷ್ಟೂ ಚಿತ್ರಗಳ ನಿರ್ಮಾಪಕಿಯಾಗಿರುವ ತನುಜಾ ಈ ಕ್ಷೇತ್ರದಲ್ಲಿ ಸರಿಸುಮಾರು 35 ವರ್ಷಗಳ ಗಟ್ಟಿ ಅನುಭವ ಹೊಂದಿರುವವರು.

ಪಕ್ಕಾ ಆ್ಯಕ್ಷನ್ ನಿಂದ ಸಾಮಾಜಿಕ ಕಳಕಳಿಯ ತನಕ ಅವರ ಚಿತ್ರಗಳು ವಿಸ್ತರಿಸಿವೆ. ಇವೆಲ್ಲ ಚಿತ್ರಗಳಲ್ಲಿ ಅವರು ಮಹಿಳಾ ಪ್ರಧಾನ ಅಂಶವನ್ನು ಮುಖ್ಯ ಭೂಮಿಕೆಯನ್ನಾಗಿ ಮಾಡಿಕೊಳ್ಳುವಲ್ಲಿ ಯಾವತ್ತೂ ಮರೆತಿಲ್ಲ. ಮಹಿಳಾ ಕೇಂದ್ರಿತ ಪ್ರಕಾರದಲ್ಲಿ ಅವರು ತಮ್ಮದೇ ಆದ ಛಾಪು ಮೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ವಿಚಾರಗಳಲ್ಲಿ ಅವರ ಕಥಾ ನಿರೂಪಣೆಯ ಶೈಲಿ ಕೂಡ ಕಾಲದಿಂದ ಕಾಲಕ್ಕೆ ವಿಕಸನ ಹೊಂದುತ್ತ ಸಾಗಿರುವುದು ವಿಶೇಷ.

ಸದ್ಯ ಅಮೇಜಾನ್ ಪ್ರೈಮ್ ನಲ್ಲಿ ಪ್ರಸಾರ ಕಾಣುತ್ತಿರುವ ತನುಜಾ ಅವರ wedding.con (2023) ಮೇಲೆ ಪ್ರಸ್ತಾಪ ಮಾಡಿದ ಸಂಗತಿಗಳನ್ನು ಮತ್ತೆ ಮತ್ತೆ ಛಾಪು ಒತ್ತುತ್ತವೆ. ಇದೊಂದು ಹೃದಯ ಕಲಕುವ ನೈಜ ಅಪರಾಧ ಸಾಕ್ಷ್ಯಚಿತ್ರ ಸರಣಿ. ಮ್ಯಾಟ್ರಿಮೋನಿಯಲ್ ವೆಬ್-ತಾಣದಲ್ಲಿ ಸೂಕ್ತ ಸಂಗಾತಿಯನ್ನು ಅರಸುತ್ತ ವಂಚನೆಯ ಬಲೆಗೆ ಬಿದ್ದ ಐವರು ದುರ್ಬಲ ಮಹಿಳೆಯರ ಕಥೆಯನ್ನು ಇದು ಒಳಗೊಂಡಿದೆ.

ಮುಖ್ಯವಾಹಿನಿಯ ಮಾಧ್ಯಮಗಳಲ್ಲಿ ಕಣ್ಣಿಗೆ ಕಾಣದ ಇಂತಹ ಗಂಭೀರ ಸಂಗತಿಯನ್ನು ಕೈಗೆತ್ತಿಕೊಂಡು ಚಿತ್ರೀಕರಿಸಿರುವ ಈ ಸರಣಿ ಸಮಾಜದಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ ಎಂಬುದರಲ್ಲಿ ಅನುಮಾನವಿಲ್ಲ. ಹಾಗಾಗಿ ಇದೊಂದು ವೀಕ್ಷಣೆಗೆ ಅರ್ಹವಾದ ಸರಣಿ.

ಆಂಟಿ ಸುಧಾ ಆಂಟಿ ರಾಧಾ (2019) ಎಂಬ ಇಬ್ಬರು ವಿಧವೆಯರ ಕಥೆ ಮನಕಲಕುವಂತಿದೆ. ಇಬ್ಬರು ವಿಧವಾ ಸಹೋದರಿಯರ ವಯಸ್ಸು 86 ಮತ್ತು 93 ವರ್ಷ. ಉತ್ತರ ಭಾರತದ ಸಣ್ಣ ಹಳ್ಳಿಯಲ್ಲಿ ಅವರು ಮನೆಗೆಲಸ ಮಾಡುವ ವೃತ್ತಿಯೊಂದಿಗೆ ತಮ್ಮದೇ ಆದ ರೀತಿಯಲ್ಲಿ ಜೀವನ ಸಾಗಿಸುತ್ತಿರುವ ಜೀವಗಳು. ಮದುವೆ ಮತ್ತು ಒಂಟಿ ಮಹಿಳೆಯರ ಸ್ಥಾನಮಾನಕ್ಕೆ ಮರುವ್ಯಾಖ್ಯಾನ ನೀಡಲಾಗುತ್ತಿರುವ ಇಂದಿನ ಕಾಲಮಾನಕ್ಕೆ ಈ ಎರಡೂ ಸಾಕ್ಷ್ಯಚಿತ್ರಗಳು ಸಕಾಲಿಕವಾಗಿವೆ.

ದ ಫೆಡರಲ್ ಗೆ ನೀಡುವ ಸಂದರ್ಶನದಲ್ಲಿ ತನುಜಾ ಅವರು ಈ ಸಾಕ್ಷ್ಯಚಿತ್ರಗಳ ಹಿಂದಿರುವ ಸ್ಪೂರ್ತಿ ಮತ್ತು ಪ್ರಕ್ರಿಯೆಗಳ ಬಗ್ಗೆ ಮಾತನಾಡಿದ್ದಾರೆ. ಇತ್ತೀಚಿನ ಕೆಲವು ವರ್ಷಗಳ ಅವಧಿಯಲ್ಲಿ ಚಿತ್ರ ನಿರ್ಮಾಣ ಕ್ಷೇತ್ರವು ಮಹಿಳೆಯರ ಪಾಲಿಗೆ ಹೇಗೆ ಬದಲಾಗುತ್ತ ಸಾಗಿದೆ ಎಂಬುದನ್ನೂ ಅವರು ವಿವರಿಸಿದ್ದಾರೆ. ಸಂದರ್ಶನದ ಆಯ್ದ ಭಾಗ ಇಲ್ಲಿದೆ:

wedding.con ರೂಪುಪಡೆದಿದ್ದಾದರೂ ಹೇಗೆ? ಚಿತ್ರದ ಮುಖ್ಯ ಪಾತ್ರಧಾರಿಗಳಾದ ಐವರು ಮಹಿಳೆಯರನ್ನು ನೀವು ಹೇಗೆ ಭೇಟಿಯಾದಿರಿ?

ನಾನು ಇದನ್ನು ನಿರ್ದೇಶನ ಮಾಡುವುದಕ್ಕೂ ಮೊದಲು ಬಿಬಿಸಿ ಸ್ಟುಡಿಯೋದಲ್ಲಿ ಕೆಲಸ ಮಾಡುತ್ತಿದ್ದ ನನ್ನ ನಿರ್ಮಾಪಕರು ಈ ಪ್ರಾಜೆಕ್ಟ್ ಗಾಗಿ ಕೆಲ ಸಮಯದಿಂದ ಹುಡುಕಾಟ ನಡೆಸಿದ್ದರು. ನಾನು ಈ ಯೋಜನೆಗೆ ಕೈಜೋಡಿಸಿದ ಬಳಿಕ ಅವರು ಶ್ರಮವಹಿಸಿ ಮಾಡಿದ ಎಲ್ಲ ಕೆಲಸಗಳನ್ನೂ ಪರಿಶೀಲಿಸಿ ಇವರೇ ನಮ್ಮ ಐವರು ಮಹಿಳಾ ನಾಯಕಿಯರು ಎಂಬುದಾಗಿ ಅಂತಿಮಗೊಳಿಸಿದೆವು. ಅದಾದ ನಂತರ ನಾನು ಟೀಮ್ ಜೊತೆ ಕೆಲಕಾಲ ಕಳೆದೆ ಮತ್ತು ಇದಕ್ಕೆ ಕೊಡಬೇಕಾದ ಸ್ವರೂಪದ ಬಗ್ಗೆ ನಿರ್ಧಾರ ಕೈಗೊಂಡೆವು. ಬಳಿಕ ನಾನು ಆ ಮಹಿಳೆಯರನ್ನು ಭೇಟಿ ಮಾಡಿದೆ ಮತ್ತು ಅಣಕು ಸಂದರ್ಶನ ನಡೆಸಿದೆವು. ಅಲ್ಲಿಂದಾಚೆಗೆ ನಾವು ಮಾನಸಿಕ ಆರೋಗ್ಯ, ಮಹಿಳೆಯರ ಸಮಸ್ಯೆಗಳು, ಮನಃಶಾಸ್ತ್ರ, ಪೊಲೀಸ್, ಕಾನೂನು, ಸಾಮಾಜಿಕ ಅಧ್ಯಯನಗಳ ವಿಚಾರದಲ್ಲಿ ತಜ್ಞರನ್ನು ಸಂಪರ್ಕಿಸಿ ಸಮಾಲೋಚನೆ ನಡೆಸಿದೆವು. ಮ್ಯಾಟ್ರಿಮೋನಿಯಲ್ ವಂಚನೆಗೆ ಒಳಗಾದವರ ಸಂಕಟವೇನು, ನಮ್ಮ ಸಂಸ್ಕೃತಿ ಇದನ್ನು ನಡೆಯಲು ಅವಕಾಶ ನೀಡುವುದು ಮಾತ್ರವಲ್ಲದೆ ಹೇಗೆ ಸಕ್ರಿಯಗೊಳಿಸಲು ಪ್ರಯತ್ನಿಸುತ್ತದೆ ಎಂಬುದನ್ನು ಅರ್ಥಮಾಡಿಕೊಂಡೆವು.

ಈ ಬಗ್ಗೆ ದೂರದೃಷ್ಟಿಯನ್ನು ಹೊಂದಿದ್ದ ನನ್ನ ಕಾರ್ಯಕ್ರಮ ನಿರ್ವಾಹಕಿ ನೇಹಾ ಖುರಾನಾ ಅವರು ಸೆಟ್ ನಲ್ಲಿ ಆಪ್ತ ಸಮಾಲೋಚಕರೊಬ್ಬರು ಇರುವಂತೆ ನೋಡಿಕೊಂಡಿದ್ದರು. ಅತ್ಯಂತ ಧೈರ್ಯಶಾಲಿ ಮಹಿಳೆಯರನ್ನು ಚಿತ್ರೀಕರಿಸುವ ಸಂದರ್ಭದಲ್ಲಿ ಅವರು ವೇದನೆ ಮತ್ತು ವಂಚನೆಯ ಕಾರಣದಿಂದ ಉಂಟಾಗುವ ಮುಜುಗರದ ಕಾರಣಕ್ಕೆ ಕೆಲವು ಸಂಗತಿಗಳನ್ನು ಹೇಳಲು ಮರೆತುಬಿಡಬಹುದು ಎಂಬ ದೃಷ್ಟಿಯಿಂದ ಈ ಎಚ್ಚರಿಕೆ ವಹಿಸಿದ್ದೆವು. ನನ್ನ ಪಾಲಿಗೆ ಅವರೇ ನಿಜವಾದ ಹೀರೋಗಳು. ಇಂತಹ ಸಂಕಷ್ಟದ ಸಮಯದಲ್ಲಿ ಅವರ ಕೈಹಿಡಿದು ಸಾಗಿದ್ದೇನೆ.

ಒಂಟಿ ಮಹಿಳೆಯರನ್ನು ಸಮಾಜ ಯಾವ ದೃಷ್ಟಿಯಲ್ಲಿ ನೋಡುತ್ತದೆ ಎಂದು ನಿಮಗನಿಸುತ್ತದೆ? ಅವರನ್ನು ಬೆಂಬಲಿಸುವ ವ್ಯವಸ್ಥೆಯಲ್ಲಿ ಸುಧಾರಣೆ ಆಗಿದೆಯೇ ಅಥವಾ ಇನ್ನೂ ಸವಾಲುಗಳಿವೆಯೇ?

ಮದುವೆ ಎನ್ನುವುದು ಬಹುತೇಕ ಭಾರತೀಯ ಕುಟುಂಬಗಳ ಗುರಿಯಾಗಿದೆ. ಯುವತಿಯೊಬ್ಬಳು ಬೆಳೆಯುತ್ತ ಹೋದ ಹಾಗೆ ಆಕೆಯೊಳಗಿನ ಆತಂಕ ಹೆಚ್ಚುತ್ತ ಹೋಗುತ್ತದೆ. ಆಕೆ 25ರ ವಯಸ್ಸಿನಲ್ಲಿದ್ದಾಗಲೂ ಆಕೆ ಮದುವೆಯ ಸಮಯವನ್ನು ಮೀರಿದ್ದಾಳೆ ಎಂದೇ ಪರಿಗಣಿಸಲಾಗುತ್ತದೆ. ಇದು ಒಂಟಿ ಮಹಿಳೆಯ ಮೇಲೆ ಅಪಾರ ಪ್ರಮಾಣದ ಒತ್ತಡವನ್ನು ವಿಧಿಸುತ್ತದೆ. ಒತೆಗೆ ಕುಟುಂಬದ ಮೇಲೂ. ಇಂತಹ ಒತ್ತಡದ ಸಂದರ್ಭದಲ್ಲಿ ವರದಕ್ಷಿಣಿಯ ಕಲ್ಪನೆಯನ್ನೇ ನಿರಾಕರಿಸುವ, ದುಡಿಯುವ ಮಹಿಳೆಯನ್ನು ಗೌರವಿಸುವ, ಸೂಕ್ತ ಮತ್ತು ಸಭ್ಯ ವಿಷಯಗಳನ್ನು ಮಾತ್ರ ಹೇಳುವ, ‘ಅರ್ಹ’ ಮತ್ತು ‘ಅತ್ಯುತ್ತಮವಾಗಿ ಮಾತನಾಡುವ’ ವ್ಯಕ್ತಿ ಆಕರ್ಷಕ ವರನಾಗಿ ಕಾಣುವುದು ಸಹಜ. ಹಾಗಿದ್ದೂ ಮಹಿಳೆಯೊಬ್ಬಳು ವಂಚನೆಗೆ ಬಲಿಯಾದಾಗ, ಅವಮಾನ ಮತ್ತು ಅಪರಾಧದಿಂದ ಬೆಲೆ ತೆರುವುದು ಮಾತ್ರ ಅವಳೇ ಆಗಿರುತ್ತಾಳೆ. ಇದರ ಹಿಂದಿನ ಅನ್ಯಾಯವೂ ಕೂಡ ಕಣ್ಣಿಗೆ ಕಟ್ಟುವಂತಿವೆ ಮತ್ತು ಭಯಾನಕವೂ ಆಗಿರುತ್ತದೆ.

ಮಹಿಳೆಯರು ತಾವಾಗಿಯೇ ಇಂತಹ ವಂಚನೆಯ ಬಲೆಯೊಳಗೆ ಸಿಕ್ಕಿಹಾಕಿಕೊಳ್ಳುತ್ತಾರೆ ಎಂದ ಮಾತ್ರಕ್ಕೆ ಅವರೇನೂ ಮೂರ್ಖರಲ್ಲ, ಬದಲಾಗಿ ಅವರ ಬಳಿ ಹಣವಿದೆ ಎಂಬ ಕಾರಣಕ್ಕೆ ಎಂದು ನಮ್ಮ ಶೋನಲ್ಲಿ ಭಾಗವಹಿಸಿದ ತಜ್ಞರೊಬ್ಬರು ಹೇಳುತ್ತಾರೆ. ಇಷ್ಟೆಲ್ಲ ಆಗಿ ಸುಳ್ಳೇ ಸುಳ್ಳು ಭರವಸೆಗಳನ್ನು ನಂಬಿ ಶತದಡ್ಡರಂತೆ ವರ್ತಿಸಿದ್ದರಿಂದ ಬಲಿಯಾದವರೇ ತಮ್ಮನ್ನು ತಾವು ನಿಂದಿಸಿಕೊಳ್ಳುತ್ತಾರೆ. ತಾನೇ ತೊಂದರೆಯಲ್ಲಿದ್ದೇನೆ, ತನೆಗೆ ಆರ್ಥಿಕ ಸಹಾಯವನ್ನು ನೀಡಿದರೆ ಮದುವೆಯಾಗುತ್ತೇನೆ ಎಂದು ಯೋಚಿಸುತ್ತಿರುವ ಪುರುಷನ ಸಹಾಯಕ್ಕೆ ಮುಂದಾಗುವುದು ದೋಷವೆಂದು ಪರಿಗಣಿಸದೇ ಇರುವುದು ನಿಜಕ್ಕೂ ಶಾಕಿಂಗ್ ಮತ್ತು ದುರಂತ. ಮಹಿಳೆಯರು ಯಾಕೆ ನಾಚಿಕೆಗೆ ಒಳಗಾಗಬೇಕು?!

ಆಕೆಗೆ ಬೆಂಬಲ ಎನ್ನುವುದು ಎಲ್ಲೆಲ್ಲಿಯೂ ಇಲ್ಲ. ಅದು ಸೈಬರ್ ಪೊಲೀಸ್ ನಲ್ಲಿರಲಿ, ನ್ಯಾಯಾಲಯದಲ್ಲಿರಲಿ. ಎಲ್ಲ ಬಿಟ್ಟು, ನಮ್ಮ ಸಮಾಜದಲ್ಲಿಯೇ ಅಂತಹ ಬೆಂಬಲ, ಸಹಾಯವನ್ನು ಕೇಳಲೇಬೇಡಿ.

́ಆಂಟಿ ಸುಧಾ ಆಂಟಿ ರಾಧಾ́ ನಿಮ್ಮ ಆಂಟಿಯರ ಬಗೆಗೆ ಇರುವ ಇನ್ನೊಂದು ಗಮನಾರ್ಹ ಸಾಕ್ಷ್ಯಚಿತ್ರ. ಇದಕ್ಕೆ ನಿಮಗೆ ಸ್ಪೂರ್ತಿಯಾದರೂ ಯಾವುದು? ಈ ಚಿತ್ರದಲ್ಲಿ ಯಾವ ವಿಷಯ/ಸಂಬಂಧಗಳನ್ನು ಪರಿಶೋಧಿಸುವುದು ನಿಮ್ಮ ಉದ್ದೇಶ?

ಇದು ನನ್ನ ಹೃದಯಕ್ಕೆ ತೀರಾ ಹತ್ತಿರವಾದ ಒಂದು ಖಾಸಗಿ ಚಿತ್ರ. ನನ್ನ ಚಿಕ್ಕಮ್ಮಂದಿರು (ತಂದೆಯ ತಂಗಿಯರು) ಕಥೆಗೆ ಉತ್ತಮ ವಿಷಯವಾಗುತ್ತಾರೆ ಎಂದು ನನಗೆ ಮೊದಲು ಸಲಹೆ ಮಾಡಿದವರು ನನ್ನ ತಾಯಿ, ಲೇಖಕಿ ಕಾಮ್ನಾ ಚಂದ್ರ. ನನ್ನ ಬಾಲ್ಯದ ದಿನಗಳಿಂದಲೂ ಅವರು ನನಗೆ ಆಸಕ್ತಿಯ ವಿಷಯವಾಗಿದ್ದರು. ಕಥೆಗಳು ಮತ್ತು ಮನರಂಜನೆಯಿಂದ ತುಂಬಿ ತುಳುಕುತ್ತಿದ್ದರು. ಎಲ್ಲಕ್ಕಿಂತ ಹೆಚ್ಚಾಗಿ ಪ್ರೀತಿಪಾತ್ರರಾಗಿದ್ದರು. ಯಾರಿಗೂ ಹೊರೆಯಾಗದೆ ನಿವೃತ್ತಿಯ ಬಳಿಕ ಹಳ್ಳಿಯಲ್ಲಿ ವಾಸಮಾಡುತ್ತಿದ್ದ ಅವರನ್ನು ಭೇಟಿಯಾಗಲು ಪಾಲಕರ ಜೊತೆ ಹೋಗುತ್ತಿದ್ದೆ. ಅಲ್ಲಿ ಅವರನ್ನು ನೋಡಿಕೊಳ್ಳುತ್ತಿರುವ ದತ್ತು ಕುಟುಂಬದ ಸಹಾಯದ ಬಗ್ಗೆ ಮತ್ತು ಅವರ ಜೀವನದ ಕಥೆಗಳನ್ನು ಕೇಳುತ್ತ ಹೋದಹಾಗೆ ಇದೊಂದು ಕುತೂಹಲಕಾರಿ ಕಥೆ ಎನಿಸಿತು.

ನಮ್ಮ ನಿರ್ಮಾಪಕಿ ಅನುಪಮಾ ಮಂಡಲೊಯಿ ಅವರೂ ಸೇರಿದಂತೆ ಒಂದು ಅದ್ಭುತ ಟೀಮ್ ಕೂಡಿಕೊಂಡು ಉತ್ತರ ಪ್ರದೇಶದಲ್ಲಿರುವ ಅವರ ಹಳ್ಳಿಗೆ ತೆರಳಿದೆವು. ನಮ್ಮ ಮುಂದೆ ತೆರೆದುಕೊಂಡು ವಿಷಯಗಳು ಅದ್ಭುತವಾಗಿದ್ದವು ಮತ್ತು ವೈವಿಧ್ಯಮಯವಾಗಿದ್ದವು. ವೃದ್ಯಾಪ್ಯದಲ್ಲಿ ಸುರಕ್ಷಿತ ಆಶ್ರಯದ ಕಲ್ಪನೆ, ಜೀವನದ ಸಂಧ್ಯಾಕಾಲದಲ್ಲಿ ನಿವೃತ್ತಿಯ ಯೋಜನೆ, ಆದರೆ ನಮ್ಮ ನಮ್ಮ ಇಚ್ಛೆಗೆ ತಕ್ಕಂತೆ ಪ್ರಕೃತಿಗೆ ಹತ್ತಿರವಾಗಿ, ಹೊಟ್ಟೆತುಂಬಾ ನಗುತ್ತ, ಜಗಳವಾಡುತ್ತ, ಹರಟೆ ಹೊಡೆಯುತ್ತ, ಸಮುದಾಯದ ಪ್ರೀತಿಯ ರಕ್ಷಾಕವಚದಲ್ಲಿ ಬದುಕುವುದಕ್ಕಿಂತ ಹೆಚ್ಚು ಸುಂದರವಾದುದು ಏನಿದೆ? ಇಂತಹುದೊಂದು ಚಿತ್ರವನ್ನು ನಾನು ಮಾಡಲು ಸಾಧ್ಯವಾಗಿರುವುದಕ್ಕೆ ಅದೃಷ್ಟವಂತೆ ಎಂದು ಭಾವಿಸುತ್ತೇನೆ. ನಮ್ಮ ಸಮಾಜದಿಂದ ವೇಗವಾಗಿ ಕಣ್ಮರೆಯಾಗುತ್ತಿರುವ ಜೀವನ ಶೈಲಿ ಮತ್ತು ಅಂತಹ ಜನರ ಬಗ್ಗೆ ದಾಖಲುಮಾಡುವ ಪ್ರಯತ್ನ.

ಒಂಟಿ ಮಹಿಳೆಯರ (ಅವಿವಾಹಿತರು, ವಿಚ್ಛೇದಿತರು ಮತ್ತು ವಿಧವೆಯರು)ಸಂಖ್ಯೆ ಹೆಚ್ಚುತ್ತಿರುವ ಕಾರಣದಿಂದ ಈ ಚಿತ್ರ ಯಶಸ್ವಿಯಾಗಿದೆಯೇ? ಅದರ ಉದ್ದೇಶವೂ ಅದೇ ಆಗಿದೆಯೇ?

ಪ್ರಾಮಾಣಿಕವಾಗಿ ಹೇಳಬೇಕೆಂದರೆ ನಾವು ಕಂಡುಕೊಂಡಿರುವ ಸಂಗತಿಗಳು ಪ್ರತಿಯೊಬ್ಬರಿಗೂ ಅನ್ವಯವಾಗುತ್ತದೆ. ಹಿರಿಯರು, ಯುವಕರು, ಮಹಿಳೆಯರು ಮಾತ್ರವಲ್ಲದೆ ಪುರುಷರು ಕೂಡ. ಈ ಚಿತ್ರವನ್ನು ವೀಕ್ಷಿಸುವವರಿಗೆ ತಮ್ಮ ಕುಟುಂಬದಲ್ಲೇ ಇರುವ ಹಿರಿಯರು, ಪಾಲಕರು, ಅಜ್ಜ-ಅಜ್ಜಿ, ಚಿಕ್ಕಮ್ಮ ಮತ್ತು ಚಿಕ್ಕಪ್ಪ ನೆನಪಿಗೆ ಬಂದಿದ್ದರಿಂದ ಹೀಗಾಗಿದೆ ಎಂದು ನನಗನಿಸುತ್ತದೆ. ಅವರೆಲ್ಲರ ನೆನಪೂ ಗತಕಾಲಕ್ಕೆ ಸರಿಯುತ್ತದೆ. ಹಾಗಾಗಿ ಭಾವುಕರಾಗುತ್ತಾರೆ. ನಿಮ್ಮ ಚಿತ್ರವನ್ನು ನೋಡಿದ ತಕ್ಷಣ ತಾವು ಬಹಳ ದಿನಗಳಿಂದ ಮಾತನಾಡದಿದ್ದ ತಮ್ಮ ಕುಟುಂಬದ ಹಿರಿಯ ಸದಸ್ಯರನ್ನು ಸಂಪರ್ಕಿಸಿದ್ದೇವೆ ಎಂದು ಬಹಳಷ್ಟು ಜನರು ನಮಗೆ ತಿಳಿಸಿದ್ದಾರೆ. ನನ್ನ ಚಿಕ್ಕಮ್ಮಂದಿರು ಮತ್ತು ಅವರ ಸಣ್ಣ ಕೂಟದ ಸುತ್ತ ಜನ ಪ್ರೀತಿಯಿಂದ ಸುತ್ತುವರಿದಿದ್ದಾರೆ. ನಾನು ಇದಕ್ಕಿಂತ ಸಂತೋಷವಾಗಿರಲು ಸಾಧ್ಯವಿಲ್ಲ! ಚಿತ್ರವು ಬಹಳ ದೂರ ಸಾಗಿ ಬಂದಿದೆ. ಚಿತ್ರ ನಿರ್ಮಾಪಕಳಾಗಿ ನಾನು ಹೊಂದಿದ್ದ ಯಾವುದೇ ಉದ್ದೇಶಗಳಿಗಿಂತ ಈ ಚಿತ್ರ ಯಶಸ್ಸು ಗಳಿಸಿರುವುದು ನಿಜಕ್ಕೂ ಇದೊಂದು ಬೆಚ್ಚಗಿನ ಅನುಭವ. ಈ ಚಿತ್ರ ಅದೆಷ್ಟು ಪ್ರೀತಿಯನ್ನು ಮೊಗೆದು ಕೊಟ್ಟಿದೆ ಎಂದರೆ ನನಗೂ ಅಚ್ಚರಿಯಾಗುತ್ತದೆ. ಈ ವರ್ಷ ಅನೇಕ ನಗರಗಳಲ್ಲಿ ಚಿತ್ರದ ಹಲವಾರು ಪ್ರದರ್ಶನಗಳನ್ನು ಏರ್ಪಡಿಸಿದ್ದೆವು. ಅಲ್ಲೆಲ್ಲ ಸಿಕ್ಕಿರುವ ಪ್ರತಿಕ್ರಿಯ ಮಾತ್ರ ವಾತ್ಸಲ್ಯಪೂರ್ಣ.

ನಿಮ್ಮ ದುಷ್ಮನ್ ಮತ್ತು ಸಂಘರ್ಷ್ ನಂತಹ ಚಿತ್ರಗಳು ರೂಢಿಗತ ಶೈಲಿಗಳನ್ನು ಮುರಿದವು. ನೀವು ನಿಮ್ಮನ್ನು ‘ನಿಮ್ಮ ಕಾಲಕ್ಕಿಂತ ಮುಂದಿರುವ’ ಚಿತ್ರ ನಿರ್ಮಾಪಕರು ಎಂದು ಹೇಳಿಕೊಳ್ಳಲು ಬಯಸುವಿರಾ? ಆಗೆಲ್ಲ ನೀವು ಯಾವುದಾದರೂ ಪ್ರತಿರೋಧವನ್ನು ಎದುರಿಸಿದಿರಾ?

ನಾನು ನನ್ನ ವೃತ್ತಿಜೀವನಕ್ಕೆ ಅಡಿಯಿಟ್ಟಾಗ ಮಹಿಳಾ ಪ್ರಧಾನ ಚಿತ್ರಗಳು ಬಹುತೇಕ ಅಪರೂಪವೇ ಆಗಿದ್ದವು. ಅಂತಹ ಚಿತ್ರಗಳಿಗೆ ಹಣ ಹೂಡಲು ನಿರ್ಮಾಪಕರು ಕೂಡ ಆಸಕ್ತಿ ತೋರಿಸುತ್ತಿರಲಿಲ್ಲ. ನನ್ನ ಅದೃಷ್ಟ, ನನಗೆ ಮಹೇಶ್ ಮತ್ತು ಪೂಜಾ ಭಟ್ ಅವರಂತಹ ನಿರ್ಮಾಪಕರು ಸಿಕ್ಕರು. ಅವರು ಅಪಾಯಗಳನ್ನು ಎದುರಿಸಲು ಹೆದರುತ್ತಿರಲಿಲ್ಲ. ಇಲ್ಲ, ಅವರಿಂದ ನನಗೆ ಯಾವುದೇ ಪ್ರತಿರೋಧ ಎದುರಾಗಲಿಲ್ಲ. ಆದರೆ, ಹೌದು. ಚಿತ್ರದಲ್ಲಿ ಪುರುಷ ನಾಯಕರ ಪಾತ್ರವೂ ಇರಬೇಕಿತ್ತು ಮತ್ತು ಅದಕ್ಕೆ ಬಜೆಟ್ ಕೂಡ ಸಾಧಾರಣವಾಗಿರಬೇಕಿತ್ತು.

ಎರಡು ದಶಕಗಳಿಗೂ ಹೆಚ್ಚು ಸಮಯ ಕಳೆದುಹೋದರೂ ಮಹಿಳಾ ಪ್ರಧಾನ ಚಿತ್ರಗಳ ಸಂಖ್ಯೆ ನಿರೀಕ್ಷೆಗೆ ತಕ್ಕಂತೆ ಹೆಚ್ಚಾಗಲಿಲ್ಲ. ಆದರೂ ಈಗ ಚಿತ್ರಗಳಿಗೆ ಹಣ ಹೂಡುವವರು ವಿಷಯಕ್ಕೆ ಸಕಾರಾತ್ಮಕವಾಗಿ ಸ್ಪಂದಿಸುತ್ತಿದ್ದಾರೆ. ನಾನೇನು ಆರಂಭದ ಚಿತ್ರಗಳನ್ನು ಮಾಡಿದ್ದೆನೋ ಅದನ್ನು ಈಗ ನಿರ್ಮಿಸುತ್ತಿದ್ದರೆ ಪ್ರೇಕ್ಷಕರು ಇನ್ನಷ್ಟು ಮುಕ್ತ ಮನಸ್ಸಿನಿಂದ ಸ್ವೀಕರಿಸುತ್ತಿದ್ದರು ಅನಿಸುತ್ತದೆ.

ನೀವು ಆರಂಭಿಸಿದ ದಿನಕ್ಕೆ ಹೋಲಿಸಿದರೆ ಈಗ ಹೆಚ್ಚು ಮಹಿಳಾ ನಿರ್ದೇಶಕರು ಮತ್ತು ಲೇಖಕರು ಇದ್ದಾರೆ ಎಂದು ಅನಿಸುತ್ತದೆಯೇ? ಯಾವ ಬದಲಾವಣೆಗಳು ಹೆಚ್ಚು ಕಣ್ಣಿಗೆ ಕಟ್ಟುವಂತಿವೆ ಎಂಬುದು ನಿಮ್ಮ ಭಾವನೆ?

ಹೌದು, ಈಗ ಹೆಚ್ಚು ಮಹಿಳಾ ನಿರ್ದೇಶಕರಿದ್ದಾರೆ. ಆಗ ನಮ್ಮ ಸಂಖ್ಯೆ ಬೆರಳಣಿಕೆಯಷ್ಟಿತ್ತು. ಹಾಗಂತ ಈ ಇಷ್ಟೂ ವರ್ಷಗಳಲ್ಲಿ ಅವರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಬೆಳೆಯಬೇಕಿತ್ತು. ಆದರೆ ಹಾಗೆ ಆಗಿಲ್ಲ ಎನ್ನುವುದು ಗಮನಿಸಬೇಕಾದ ಅಂಶ. ಚಲನಚಿತ್ರದ ಸೆಟ್ ಗಳಲ್ಲಿ ಮಹಿಳೆಯರ ಸಂಖ್ಯೆ ಈಗಲೂ ಕಡಿಮೆಯೇ. ಇದು ಯಾಕೆ ಹೀಗೆ ಎಂದು ನಾವು ನಿಜಕ್ಕೂ ಅಚ್ಚರಿಯಿಂದ ನೋಡಬೇಕು ಮತ್ತು ಇದನ್ನು ಬದಲಿಸಲು ನಾವೆಲ್ಲರೂ ಎಚ್ಚರಿಕೆಯಿಂದ ಕೆಲಸ ಮಾಡಬೇಕಿದೆ.

ಚಿತ್ರೋದ್ಯಮದಲ್ಲಿ ಮಹಿಳೆಯರಿಗೆ ಈಗಲೂ ಎದುರಾಗುತ್ತಿರುವ ಕೆಲವು ಸವಾಲುಗಳು ಯಾವುವು? ಮಹಿಳಾ ಪ್ರಧಾನ ಚಿತ್ರಗಳು ಈಗ ಮುಖ್ಯವಾಹಿನಿಗೆ ಬಂದಿವೆ ಎಂದು ನಿಮಗೆ ಅನಿಸುತ್ತದೆಯೇ?

ಪ್ರಸಾರ ಮತ್ತು ಸೆಟಲೈಟ್ ಟಿವಿಗಳಲ್ಲಿ ನಿಶ್ಚಿತವಾಗಿ ಇದು ಮುಖ್ಯವಾಹಿನಿಗೆ ಬಂದಿದೆ. ಆದರೆ ನಮ್ಮ ಕಥೆಗಳು ಮತ್ತು ಪಾತ್ರಗಳು ಎಲ್ಲಿಯ ವರೆಗೆ ಹೆಚ್ಚು ಹೆಚ್ಚು ಪ್ರಗತಿಪರವಾಗುವುದಿಲ್ಲವೋ ಮತ್ತು ವಾಸ್ತವಕ್ಕೆ ಹೆಚ್ಚು ಹತ್ತಿರವಾಗುವುದಿಲ್ಲವೋ ಅಲ್ಲಿಯ ತನಕ ಈ ಪ್ರಕಾರ ಮುಂದಕ್ಕೆ ಕ್ರಮಿಸುವುದಿಲ್ಲ ಮತ್ತು ಹೊಸ ನೆಲೆಯನ್ನು ರೂಪಿಸುವುದಿಲ್ಲ. ಅಭಿನಯವು ಮುಖ್ಯ ಭೂಮಿಕೆಯಲ್ಲಿರುವ ಸಿನೆಮಾಗಳಲ್ಲಿ ಮಹಿಳಾ ಪ್ರಧಾನವಾಗಿರುವವು ತೀರಾ ವಿರಳ. ಓಟಿಟಿಯಲ್ಲಿ ಮಾತ್ರ ಬದಲಾವಣೆ ಮಾಡಲು ಒಂದು ಅವಕಾಶವಿತ್ತು ಎಂದು ಅನಿಸುತ್ತದೆ. ಆದರೆ ಆ ಅವಕಾಶ ಈಗಾಗಲೇ ಮಿಂಚಿಹೋಗಿದೆ. ಮಹಿಳೆಯರಿಗೆ ಸಂಬಂಧಿಸಿದ ಸಂಕೀರ್ಣ, ವಾಸ್ತವಕ್ಕೆ ಹತ್ತಿರವಾದ ಹಾಗೂ ಸೂಕ್ಷ್ಮ ವಸ್ತು ವಿಷಯಗಳನ್ನು ಒಳಗೊಂಡ ಕಥೆಗಳಿಗೆ ಬೇಡಿಕೆ ಸಿಗುತ್ತಿಲ್ಲ ಎನ್ನುವುದು ನಿಜಕ್ಕೂ ದುಃಖದ ಸಂಗತಿ.

ಮಹಿಳಾ ಪ್ರಧಾನ ಮತ್ತು ಅಸಾಂಪ್ರದಾಯಿಕ ಚಿತ್ರಗಳನ್ನು ಸ್ವೀಕರಿಸುವ ವಿಚಾರದಲ್ಲಿ ಪ್ರೇಕ್ಷಕರ ಧೋರಣೆಗಳು ಬದಲಾಗಿವೆ ಎಂದು ಭಾವಿಸುವಿರಾ? OTT ಥಿಯೇಟರ್ ಅನುಭವವನ್ನು ಹಿಂದಿಕ್ಕಿದೆಯೇ ಅಥವಾ ಇದು ಕೇವಲ ಮತ್ತೊಂದು ಮಾಧ್ಯಮವೇ?

ಥಿಯೇಟರ್-ಗಳೆಲ್ಲವೂ ಮುಚ್ಚಿಹೋಗುತ್ತವೆ ಎಂಬ ಭವಿಷ್ಯವಾಣಿಗಳು ದಶಕಗಳಿಂದಲೂ ಮತ್ತೆ ಮತ್ತೆ ಕೇಳಿ ಬಂದರೂ, ಈ ಎಲ್ಲ ಬದಲಾವಣೆಗಳ ನಡುವೆಯೇ ಥಿಯೇಟರ್ ಅನುಭವ ಇನ್ನೂ ಉಳಿದುಕೊಂಡಿದೆ. ಜನ ಎಲ್ಲ ಸ್ವರೂಪಗಳನ್ನೂ ಸ್ವಾಗತಿಸುತ್ತಿದ್ದಾರೆ. ನಿರ್ಣಾಯಕ ಸಂಗತಿ ಏನೆಂದರೆ ಕಥೆಯನ್ನು ಪ್ರಸ್ತುತಪಡಿಸುವ ವಿಧಾನವು ನಿರಂತರವಾಗಿ ಬೆಳೆಯಬೇಕು, ಸುಧಾರಣೆ ಕಾಣಬೇಕು, ಹೆಚ್ಚು ಹೆಚ್ಚು ಹೊಸತನಕ್ಕೆ ಮುಖಾಮುಖಿಯಾಗಬೇಕು, ನಮ್ಮ ಸಂಸ್ಕೃತಿಯಲ್ಲಿರುವ ಸಂಕೀರ್ಣತೆಗಳನ್ನು ಪ್ರತಿನಿಧಿಸಬೇಕು ಮತ್ತು ಸಾಧ್ಯವಾದಷ್ಟು ಸತ್ಯಕ್ಕೆ ಹತ್ತಿರವಾಗಿರಬೇಕು. ನಾನಾ ವೀಕ್ಷಣಾ ಅನುಭವಗಳಿಗೆ ಅವಕಾಶಗಳಿವೆ. ಆದರೆ ನಾವು ಕೇಳಬೇಕಾದ ಮುಖ್ಯ ಪ್ರಶ್ನೆ ಏನೆಂದರೆ ನಾವು ಉತ್ತಮ ಮತ್ತು ಯೋಗ್ಯವಾದ ಕಥೆಗಳನ್ನು ಹೇಳುತ್ತಿದ್ದೇವೆಯೇ?

(ದುಷ್ಮನ್, ಸಂಘರ್ಷ್ ಮತ್ತು ಖರೀಬ್ ಖರೀಬ್ ಸಿಂಗಿಲೆಯಂತಹ ಚಿತ್ರಗಳ ನಿರ್ದೇಶಕಿ ತನುಜಾ ಚಂದ್ರ)

Read More
Next Story