ಮಂಡ್ಯ ರಾಜಕಾರಣ | ಡೆಡ್ ಎಂಡ್ ತಲುಪಿತೇ ಸುಮಲತಾ ಅಂಬರೀಶ್ ರಾಜಕೀಯ ಪಯಣ?
ಸದ್ಯಕ್ಕಂತೂ ಸುಮಲತಾ ಅವರ ರಾಜಕೀಯ ಪಯಣ ಕವಲು ದಾರಿಯಲ್ಲಿದೆ. ಅದು ಇಲ್ಲಿಗೇ ಮುಗಿದುಹೋಗುತ್ತದೆಯೋ? ಅಥವಾ ವಿಧಾನಪರಿಷತ್ ಸದಸ್ಯೆಯಾಗಿ ನೇಮಕವಾಗುವ ಆಸೆಯಾದರೂ ನೆರವೇರುತ್ತದೋ ಎಂಬುದು ಸದ್ಯಕ್ಕೆ ಅವರ ಅಭಿಮಾನಿಗಳಿಗೆ ಉಳಿದಿರುವ ಕುತೂಹಲ.
ಬೆಂಗಳೂರು: 60 ವರ್ಷ ವಯಸ್ಸಿನ ಸುಮಲತಾ ಅಂಬರೀಶ್ ಅವರು ದಕ್ಷಿಣ ಭಾರತದ ಖ್ಯಾತ ಪಂಚಭಾಷಾ ನಟಿ. ರಂಗಿನಲೋಕದಿಂದ ರಾಜಕೀಯದತ್ತ ಮುಖಮಾಡಿದ ಅವರಿಗೆ ಕರ್ನಾಟಕದ, ಅದರಲ್ಲೂ ತಮ್ಮ ಪತಿ 'ಮಂಡ್ಯದ ಗಂಡುʼ ಅಂಬರೀಶ್ ಅವರ ಉತ್ತರಾಧಿಕಾರಿಯಾಗಿ ಕಾವೇರಿ ಕೊಳ್ಳದ ಸಕ್ಕರೆ ನಾಡು 'ಮಂಡ್ಯ'ದ ಪ್ರತಿನಿಧಿಯಾಗಿ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡುವ ಅವಕಾಶವಿತ್ತು. ಸದ್ಯ ಸುಮಲತಾ ಅವರ ರಾಜಕೀಯ ಜೀವನಕ್ಕೆ ಪೂರ್ಣವಿರಾಮ ಬಿದ್ದಿದೆಯೇ ಅಥವಾ ಅಲ್ಪವಿರಾಮವೇ? ಎಂಬ ಚರ್ಚೆ ಈಗ ಮುನ್ನೆಲೆಗೆ ಬಂದಿದೆ.
ಒಂದಂತೂ ಸತ್ಯ. ಸುಮಲತಾ ಅವರು ಕರ್ನಾಟಕದ ಈಗಿನ ರಾಜಕೀಯ ಸನ್ನಿವೇಶದಲ್ಲಿ ಒಂದು ರೀತಿಯ ವಿಷಮ ದಾರಿಯಲ್ಲಿದ್ದಾರೆ. ಪ್ರಸ್ತುತ ಮಂಡ್ಯ ಲೋಕಸಭೆಯ ಸಂಸದೆಯಾಗಿದ್ದರೂ ರಾಜ್ಯದ ರಾಜಕೀಯ ವಾತಾವರಣದಲ್ಲಿ ಹಾಗೂ ಕಾಂಗ್ರೆಸ್-ಬಿಜೆಪಿ-ಜೆಡಿಎಸ್ ಲೆಕ್ಕಾಚಾರವನ್ನು ಅರ್ಥ ಮಾಡಿಕೊಳ್ಳುವಲ್ಲಿಅವರು ಹೆಣಗಾಡುತ್ತಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ.
ಸುಮಲತಾ ಅವರು ಕನ್ನಡ, ತೆಲುಗು, ಮಲಯಾಳಂ, ತಮಿಳು ಮತ್ತು ಹಿಂದಿ ಚಿತ್ರರಂಗದಲ್ಲಿ 220 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ತಮ್ಮ ಪಾತ್ರಗಳಿಗೆ ಹೆಸರುವಾಸಿಯಾದ ಭಾರತೀಯ ನಟಿ. ಕನ್ನಡ ನಟ-ರಾಜಕಾರಣಿ ಅಂಬರೀಶ್ ಅವರನ್ನು ಮದುವೆಯಾಗುವ ಮೊದಲು ಅವರು ತೆಲುಗು ಮತ್ತು ಮಲಯಾಳಂ ಚಿತ್ರರಂಗದಲ್ಲಿ ಸ್ಟಾರ್‌ಗಿರಿ ಹೊಂದಿದ್ದರು.
ಅನಿರೀಕ್ಷಿತ ಸಂದರ್ಭದಲ್ಲಿ 2019 ರಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಗೆದ್ದ ಸಂಸದೆ ಸುಮಲತಾ ಅಂಬರೀಶ್ ಅವರ ರಾಜಕೀಯ ಪಯಣಕ್ಕೆ ಮಂಡ್ಯದಲ್ಲೇ ಅಡ್ಡದಾರಿ ಎದುರಾಗಿದೆ. ಭಾರತೀಯ ಜನತಾ ಪಕ್ಷದಿಂದ (ಬಿಜೆಪಿ) ಟಿಕೆಟ್ ಪಡೆಯಲು ಅವರು ಸರ್ವ ಪ್ರಯತ್ನ ನಡೆಸಿದ್ದರೂ, ಬಿಜೆಪಿಯು ಜೆಡಿಎಸ್ ಜತೆ ಮೈತ್ರಿ ಮಾಡಿಕೊಂಡಿದ್ದರಿಂದ ಸುಮಲತಾ ನಿರಾಶೆ ಅನುಭವಿಸಬೇಕಾಯಿತು.
ಐದೇ ವರ್ಷದಲ್ಲಿ ಎಲ್ಲವೂ ಬದಲಾಯಿತು!
ಕಾಂಗ್ರೆಸ್ ಮೂಲದ ಪತಿ, ಕನ್ನಡ ಸಿನಿಮಾ ರಂಗದ ರೆಬೆಲ್ ಸ್ಟಾರ್ ಅಂಬರೀಶ್ ಅವರ ನಿಧನದ ಬಳಿಕ ಮಂಡ್ಯ ರಾಜಕೀಯದಲ್ಲಿ ರೆಬೆಲ್ ಸ್ಟಾರ್ ಆಗಿ ಜೆಡಿಎಸ್ ಭದ್ರಕೋಟೆಯ ಕ್ಷೇತ್ರವನ್ನೇ ಕೈವಶಮಾಡಿಕೊಂಡ ಸುಮಲತಾ, ಕೇವಲ ಐದೇ ವರ್ಷದಲ್ಲಿ ಅನಿವಾರ್ಯವಾಗಿ ಜೆಡಿಎಸ್‌ಗೆ ಜೈ ಎನ್ನಬೇಕಾಗಿದೆ.
ಬುಧವಾರದ ಬೆಳವಣಿಗೆಯಲ್ಲಿ ಮಂಡ್ಯದಲ್ಲಿ ಬೆಂಬಲಿಗರ ಸಭೆ ನಡೆಸಿದ ಸುಮಲತಾ ಅನಿವಾರ್ಯವಾಗಿ 2019 ರ ರಾಜಕೀಯ ಸನ್ನಿವೇಶವನ್ನು ಮರೆತು ಜೆಡಿಎಸ್ ಮುಖಂಡ, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಬೆಂಬಲ ಘೋಷಿಸಿದ್ದಾರೆ. ಆಗಿನ ರಾಜ್ಯದಲ್ಲಿ ಜೆಡಿಎಸ್- ಕಾಂಗ್ರೆಸ್ ಸಮ್ಮಿಶ್ರ ಸರ್ಕಾರವಿದ್ದ ಸಂದರ್ಭದಲ್ಲಿ ಜೆಡಿಎಸ್ ಪಕ್ಷ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಅವರನ್ನು ಕಣಕ್ಕಿಳಿಸಿತ್ತು. ಕಾಂಗ್ರೆಸ್ ಬೆಂಬಲ ಇದೆ ಎಂದು ಹೇಳಿಕೊಂಡಿತಾದರೂ, ಮೈಸೂರು-ಮಂಡ್ಯ ರಾಜಕಾರಣದಲ್ಲಿ ಕುಮಾರಸ್ವಾಮಿ ಪ್ರವೇಶವನ್ನು ತಡೆಗಟ್ಟುವ ಯತ್ನವಾಗಿ ಸಿದ್ದರಾಮಯ್ಯ ಸೇರಿದಂತೆ ಮಂಡ್ಯದ ಕಾಂಗ್ರೆಸ್ ಮುಖಂಡರಾದ ಎನ್. ಚೆಲುವರಾಯಸ್ವಾಮಿ ಆದಿಯಾಗಿ ಎಲ್ಲರೂ ತೆರೆಮರೆ ಕಸರತ್ತಿನಲ್ಲಿ ನಿಖಿಲ್ ಸೋಲಿಗೆ ಪಣತೊಟ್ಟಿದ್ದು ಎಲ್ಲರಿಗೂ ಗೊತ್ತಿರುವ ವಿಚಾರ.
ಸ್ವತಂತ್ರ ಅಭ್ಯರ್ಥಿಯಾಗಿ ಗೆದ್ದರೆ ಸಂದರ್ಭ ನೋಡಿಕೊಂಡು ಬಿಜೆಪಿ ಅಥವಾ ಕಾಂಗ್ರೆಸ್‌ಗೆ ಬೆಂಬಲಿಸಬಹುದು ಅಥವಾ ಸೇರ್ಪಡೆಯಾಗಬಹುದು ಎಂಬ ದೂರದೃಷ್ಟಿ ಸುಮಲತಾ ಅವರಿಗಿತ್ತೇನೋ. ಬಿಜೆಪಿ ಕಾಂಗ್ರೆಸ್‌ಗೂ ಸುಮಲತಾ ಗೆಲುವು ಬೇಕಾಗಿತ್ತು. ಕಾಂಗ್ರೆಸ್ ತೆರೆಮರೆಯಲ್ಲಿ ಸಹಕರಿಸಿದರೆ ಬಿಜೆಪಿ ಬೇಷರತ್ ಬೆಂಬಲ ನೀಡಿತು. ಆದರೆ ಪತಿ ಅಂಬರೀಶ್ ನಿಧನವಾದ ಕೆಲವೇ ತಿಂಗಳಾಗಿದ್ದರಿಂದ ಸಿಕ್ಕ ಅಪಾರ ಅಂಬಿ ಅಭಿಮಾನಿಗಳ ಅನುಕಂಪ ಹಾಗೂ ಬಿಜೆಪಿ- ಕಾಂಗ್ರೆಸ್‌ನ ಬೆಂಬಲ ಸುಮಲತಾ ಅವರನ್ನು ಗೆಲುವಿನ ದಡ ತಲುಪಿಸಿತು. ಎಲ್ಲಕ್ಕಿಂತ ಮಿಗಿಲಾಗಿ ಜೆಡಿಎಸ್ ನಾಯಕರು ಸುಮಲತಾ ಮತ್ತು ಅಂಬರೀಶ್ ಮೇಲೆ ʼಎಲ್ಲೆ ಮೀರಿʼ ಮಾತನಾಡಿದ ಶಬ್ದಗಳು, ಮಹಿಳೆ ಎಂಬ ಕಾರಣಕ್ಕೆ ಮಾಡಿದ ಅಣಕ ಜೆಡಿಎಸ್ ಅಭ್ಯರ್ಥಿ ಸೋಲಿನಲ್ಲಿ ಮಹತ್ವದ ಪಾಲು ಪಡೆಯಿತು. ಅದನ್ನು ಅಷ್ಟೇ ಸಮರ್ಥವಾಗಿ ಎದುರಿಸಿದ ಸುಮಲತಾ ಅವರೊಳಗೊಬ್ಬಳು ́ʼರೆಬೆಲ್ ಸ್ಟಾರ್ ಅಂಬರೀಶ್ʼ ಇರುವುದು ಆಗಲೇ ಗೊತ್ತಾಯಿತು. ಜತೆಗೆ ಸಿಕ್ಕ ಸಿನಿಮಾ ಮಂದಿ ಬೆಂಬಲ ಸುಮಲತಾ ಅವರ ಗೆಲುವನ್ನು ಸಾಬೀತು ಪಡಿಸಿತು. ನಿಖಿಲ್ ಕುಮಾರಸ್ವಾಮಿ ಅವರನ್ನು 1.25 ಲಕ್ಷ ಮತಗಳ ಅಂತರದಿಂದ ಸೋಲಿಸಿದ್ದರು ಸುಮಲತಾ.
ಜಿದ್ದು ತೀರಿಸಿಕೊಂಡ ಕುಮಾರಸ್ವಾಮಿ
ಸುಮಲತಾ ಸಂಸದೆಯಾದ ಬಳಿಕವೂ ಜೆಡಿಎಸ್ ಟೀಕೆಗಳು ಸುಮಲತಾ ಅವರನ್ನು ಕಾಡುತ್ತಲೇ ಇದ್ದವು. ಈಗ ಕುಮಾರಸ್ವಾಮಿ ಹಳೆಯ ಜಿದ್ದನ್ನು ತೀರಿಸಲು ಹೊರಟಿದ್ದಾರೆ. ಕಾಂಗ್ರೆಸ್ ಸೋಲಿಸಿ ಜೆಡಿಎಸ್ ಭದ್ರಕೋಟೆ ಮಂಡ್ಯವನ್ನು ಹಿಡಿತಕ್ಕೆ ತೆಗೆದುಕೊಳ್ಳುವುದು ಮತ್ತು ಅಂದು ತಮ್ಮ ಮಗನ ಸೋಲಿಗೆ ಕಾರಣರಾದ ಸುಮಲತಾರನ್ನು ರಾಜಕೀಯವಾಗಿ ಅಪ್ರಸ್ತುತಗೊಳಿಸುವ ಜೆಡಿಎಸ್‌ನ ಯತ್ನ ಈಗ ಕೈಗೂಡಿದೆ. ಬಿಜೆಪಿ ಜತೆ ಹೊಂದಾಣಿಕೆಯಾದ ಬಳಿಕ ಟಿಕೆಟ್ ಹಂಚಿಕೆ ಆದಾಗ ಮಂಡ್ಯದ ಮೇಲೆ ಕುಮಾರಸ್ವಾಮಿ ಕಣ್ಣಿತ್ತು. ಸುಮಲತಾ ಒಂದು ಸಲ ಬಿಜೆಪಿಯಿಂದ ಮಂಡ್ಯ ಸೀಟು ಸಿಕ್ಕೀತು ಎಂದೂ, ಮಂಡ್ಯ ತಪ್ಪಿದರೆ ಬೆಂಗಳೂರು ಉತ್ತರವಾದರೂ ಸಿಗಬಹುದೆಂದೂ ಅಂದುಕೊಂಡಿದ್ದರು. ಕಾಂಗ್ರೆಸ್ ಪಕ್ಷವೂ ಬೆಂಗಳೂರು ಉತ್ತರಕ್ಕೆ ಸುಮಲತಾ ಅವರನ್ನು ಕರೆತಂದರೆ ಹೇಗೆ ಎಂದು ಆಲೋಚಿಸಿತ್ತು.
ಕಾಂಗ್ರೆಸ್ ನಾಯಕರೊಬ್ಬರ ಪ್ರಕಾರ, ಸುಮಲತಾ ಸರಿಯಾದ ಸಮಯಕ್ಕೆ ಸರಿಯಾದ ನಿರ್ಧಾರ ಕೈಗೊಳ್ಳಲು ವಿಫಲರಾದರು. ಕಾಂಗ್ರೆಸ್ ಕೂಡಾ ಕೊನೆ ಕ್ಷಣದವರೆಗೆ ಕಾದು ಪ್ರೊ. ರಾಜೀವ ಗೌಡರನ್ನು ಬೆಂಗಳೂರು ಉತ್ತರಕ್ಕೆ ಕಣಕ್ಕಿಳಿಸಿದಾಗ ಸುಮಲತಾ ಮಂಡ್ಯದಲ್ಲೇ ಬಿಜೆಪಿಯಿಂದ ಸೀಟು ಗಿಟ್ಟಿಸಿಕೊಳ್ಳಲು ಯತ್ನ ಮುಂದುವರೆಸಿದರು. ಏಕೆಂದರೆ ಕಾಂಗ್ರೆಸ್ ಮಂಡ್ಯದಿಂದ ಸ್ಟಾರ್ ಚಂದ್ರು ಅವರನ್ನು ತಮ್ಮ ಅಭ್ಯರ್ಥಿಯೆಂದು ಅದಾಗಲೇ ನಿರ್ಧರಿಸಿತ್ತು.
ಬಿಜೆಪಿಯೂ ಅವರ ಆಸೆಗೆ ತಣ್ಣೀರು ಎರಚಿ ಜೆಡಿಎಸ್‌ಗೆ ಮಂಡ್ಯ ಕ್ಷೇತ್ರ ಬಿಟ್ಟುಕೊಟ್ಟಾಗ ಸುಮಲತಾ ಅವರದು ರಾಜಕೀಯವಾಗಿ ಕವಲುದಾರಿಯಾಯಿತು. ಕಾಂಗ್ರೆಸ್ ಸೇರುವ ಅವರ ಬೆಂಬಲಿಗರ ಆಸೆಗೆ ಆ ಪಕ್ಷ ತಣ್ಣೀರೆರಚಿತು. ಈ ಹಿಂದೆಯೇ ದೆಹಲಿಯಲ್ಲಿ ಬಿಜೆಪಿಗೆ ಬೆಂಬಲ ಘೋಷಿಸಿದ್ದ ಸುಮಲತಾ ಈಗಲೂ ಅದೇ ಹೇಳಿಕೆ ನೀಡುವಂತಾಯಿತು. ಅನಿವಾರ್ಯವಾಗಿ ತನ್ನ ರಾಜಕೀಯ ವೈರಿ ಎನಿಸಿಕೊಂಡಿದ್ದ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಬೆಂಬಲ ಘೋಷಿಸಬೇಕಾಯಿತು ಎಂದು ಅವರ ಬೆಂಗಲಿಗರೊಬ್ಬರಾದ ಹಾಗೂ ಅಂಬರೀಶ್ ಅಭಿಮಾನಿ ಸಂಘದ ರಾಜೇಗೌಡರು ಹೇಳುತ್ತಾರೆ.
ಬಿಜೆಪಿಗೇಕೆ ಬೇಡವಾದರು?
2023 ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸಕ್ರಿಯವಾಗಿ ಬೆಂಬಲಿಸಿದ್ದ ಸುಮಲತಾ ಅವರು ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ಪ್ರಯತ್ನ ನಡೆಸಿದ್ದರು. ಆ ಮೂಲಕ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಗಿಟ್ಟಿಸಿ ಕ್ಷೇತ್ರವನ್ನು ಉಳಿಸಿಕೊಳ್ಳಬೇಕೆಂದು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಬಿಜೆಪಿಯ ಹಿರಿಯ ನಾಯಕರೊಂದಿಗೆ ಚರ್ಚೆ ನಡೆಸಿದ್ದರು.
ಆದರೆ, ಮಂಡ್ಯದ ಒಂದು ಕಾಲದಲ್ಲಿ ತಮ್ಮನ್ನು ಸಮರ್ಥಿಸಿದ ಕಾಂಗ್ರೆಸ್ ಮತ್ತು ಬಿಜೆಪಿಯ ಸ್ಥಳೀಯ ನಾಯಕರ ವಿಶ್ವಾಸ ಗೆಲ್ಲಲು ವಿಫಲರಾದರು. ಜನರ ಜತೆ ಬೆರೆತು ಮಂಡ್ಯದ ದನಿಯಾಗಲು ಅವರ ಶ್ರಮ ಸಾಕಾಗಲಿಲ್ಲ. ತಮ್ಮ ಸಿನಿಮಾ ಜನಪ್ರಿಯತೆ ಮತ್ತು ಅಂಬರೀಶ್ ಅವರ ಅಭಿಮಾನಿಗಳ ಶ್ರೀರಕ್ಷೆಯೇ ಚುನಾವಣಾ ರಾಜಕೀಯದಲ್ಲಿ ಸಾಕಾಗುವುದಿಲ್ಲ ಎಂಬ ಅಂಶವನ್ನು ಅವರು ಪರಿಗಣಿಸದೇ ಇರುವುದೇ ಅವರನ್ನು ರಾಜಕೀಯ ಪಕ್ಷಗಳು ಕಡೆಗಣಿಸಲು ಕಾರಣವಾದವು ಎಂಬುದನ್ನು ಅವರ ಅಭಿಮಾನಿಗಳಲ್ಲಿ ಒಬ್ಬರಾದ ಮಳವಳ್ಳಿಯ ಸಂದೇಶ ನಟರಾಜ್ ಎನ್ನುವವರು ವಿಶ್ಲೇಷಿಸಿದ್ದಾರೆ.
ಸುಮಲತಾ ಅವರು ಪಕ್ಷಕ್ಕೆ ಸೇರಲು ಇಚ್ಛೆ ವ್ಯಕ್ತಪಡಿಸಿದ ನಂತರ, ಬಿಜೆಪಿ ಅಭ್ಯರ್ಥಿಗಳ ಗೆಲುವನ್ನು ಖಚಿತಪಡಿಸಿಕೊಳ್ಳಲು ಅವರ ಮಂಡ್ಯ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಎಂಟು ವಿಧಾನಸಭಾ ಕ್ಷೇತ್ರಗಳ ಜವಾಬ್ದಾರಿಯನ್ನು ಅವರಿಗೆ ವಹಿಸಲಾಯಿತು. ಆದರೆ, ಆ ಎಂಟು ಕ್ಷೇತ್ರಗಳ ಒಂದೇ ಒಂದು ಕ್ಷೇತ್ರದಲ್ಲಿ ಕೂಡ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಲು ಅವರಿಗೆ ಸಾಧ್ಯವಾಗಲಿಲ್ಲ. ಅಲ್ಲಿ ಆರು ಕಾಂಗ್ರೆಸ್, ಒಂದು ಕಾಂಗ್ರೆಸ್ ಬೆಂಬಲಿತ ಸ್ವತಂತ್ರ ಅಭ್ಯರ್ಥಿ (ಸರ್ವೋದಯ ಕರ್ನಾಟಕ ಪಕ್ಷ), ಮತ್ತು ಒಂದು ಜೆಡಿಎಸ್ ಅಭ್ಯರ್ಥಿ ಗೆದ್ದಿದ್ದಾರೆ. ಈ ಅಂಶವೂ ಬಿಜೆಪಿ ನಿರ್ಧಾರಕ್ಕೆ ಕಾರಣವಾಯಿತು ಎನ್ನಲಾಗಿದೆ.
ಬಲಿಜ ನಾಯ್ಡು ಜಾತಿಗೆ ಸೇರಿದ ಸುಮಲತಾ ಅವರು ತಮ್ಮ ಪತಿ ಜಾತಿಯ ಒಕ್ಕಲಿಗ ಭದ್ರಕೋಟೆಯಲ್ಲಿ ಸ್ಪರ್ಧಿಸಿದ್ದಕ್ಕಾಗಿ ಜೆಡಿಎಸ್ ಮುಖಂಡರಿಂದ ಟೀಕೆ ಎದುರಿಸಿದ್ದರು. ಆಗಿನ ಜೆಡಿಎಸ್ ನಾಯಕ ಎಲ್.ಆರ್.ಶಿವರಾಮೇಗೌಡ ಅವರು ಚುನಾವಣೆಯ ಸಮಯದಲ್ಲಿ ಒಕ್ಕಲಿಗ ಬೆಂಬಲವನ್ನು ದೂರ ಮಾಡಲು ಆಕೆಯ ಜಾತಿ ಗುರುತನ್ನು ಬಳಸಿಕೊಳ್ಳಲು ಪ್ರಯತ್ನಿಸಿದರು. ಆದರೆ, ಈ ತಂತ್ರವು ಜೆಡಿಎಸ್‌ಗೆ ಹಿನ್ನಡೆಯಾಯಿತು ಮತ್ತು ದುಬಾರಿಯಾಯಿತು. ಈ ಬಾರಿ ಹೆಚ್.ಡಿ.ಕುಮಾರಸ್ವಾಮಿ ಮೃದು ಧೋರಣೆ ತಳೆದಿದ್ದು, "ಅಂಬರೀಶ್ ಮತ್ತು ನಾನು ಸ್ನೇಹಿತರಾಗಿದ್ದೆವು ಎಂಬುದು ಎಲ್ಲರಿಗೂ ಗೊತ್ತು. ಸುಮಲತಾ ಅವರು ನಮಗೆ ಊಟ ಬಡಿಸಿದ್ದಾರೆ. ನಾವು ಶತ್ರುಗಳಲ್ಲ. ಅವರು ನನ್ನನ್ನು ಬೆಂಬಲಿಸುತ್ತಾರೆ ಎಂದು ನಾನು ನಂಬುತ್ತೇನೆ" ಎಂದು ಹೇಳಿದ್ದಾರೆ.
ಚಲನಚಿತ್ರ ವಿಮರ್ಶಕ ಬಿ.ಎನ್.ಸುಬ್ರಹ್ಮಣ್ಯ ಅವರ ಪ್ರಕಾರ, "ಭಾವನೆಗಳು ರಾಜಕೀಯವನ್ನು ನಿರ್ದೇಶಿಸುವುದಿಲ್ಲ. ಇದು ಸಂಪೂರ್ಣವಾಗಿ ವಿಭಿನ್ನ ಆಟವಾಗಿದೆ. ಪತಿ ಅಂಬರೀಶ್ ನಿಧನದ ನಂತರ ಸುಮಲತಾ ಅವರು ಚುನಾವಣೆಯಲ್ಲಿ ಸ್ಪರ್ಧಿಸಿದ್ದು, ಅವರ ಗೆಲುವಿನಲ್ಲಿ ಸಹಾನುಭೂತಿ ಪ್ರಮುಖ ಪಾತ್ರ ವಹಿಸಿದೆ. ಅಲ್ಲದೆ ಮಂಡ್ಯ ಆ ಹಿರಿಯ ನಟನ ಜನ್ಮಸ್ಥಳವಾಗಿದ್ದು, ಅವರನ್ನು ಮಂಡ್ಯದ ಗಂಡು ಎಂದು ಕರೆಯಲಾಗುತ್ತದೆ. ಈಗ, ಸನ್ನಿವೇಶಗಳು ಬದಲಾಗಿವೆ ಹಾಗೂ ಮತದಾರರ ಮನಸ್ಥಿತಿಯನ್ನು ನಾವು ಊಹಿಸಲು ಸಾಧ್ಯವಿಲ್ಲ".
ಸದ್ಯಕ್ಕಂತೂ ಸುಮಲತಾ ಅವರ ರಾಜಕೀಯ ಪಯಣ ಕವಲು ದಾರಿಯಲ್ಲಿದೆ. ಅದು ಇಲ್ಲಿಗೇ ಮುಗಿದುಹೋಗುತ್ತದೆಯೋ? ಅಥವಾ ವಿಧಾನಪರಿಷತ್ ಸದಸ್ಯೆಯಾಗಿ ನೇಮಕವಾಗುವ ಆಸೆಯಾದರೂ ನೆರವೇರುತ್ತದೋ ಎಂಬುದು ಸದ್ಯಕ್ಕೆ ಅವರ ಅಭಿಮಾನಿಗಳಿಗೆ ಉಳಿದಿರುವ ಕುತೂಹಲ.