ಮಳೆಗಾಲ ಬಂದಾಗ ಎಚ್ಚೆತ್ತ ಬಿಬಿಎಂಪಿ| ರಾಜಕಾಲುವೆ ಒತ್ತುವರಿ ತೆರವು ತಡೆಯಾಜ್ಞೆ ತೆರವಿಗೆ ಮುಂದಾದ ಬಿಬಿಎಂಪಿ!
ಬೆಂಗಳೂರಿನಲ್ಲಿ ರಾಜಕಾಲುವೆಗಳ ಒತ್ತುವರಿ ತೆರವಿಗೆ ಮುಹೂರ್ತ ಕೂಡಿ ಬಂದಿದೆ. ಹಲವು ಪ್ರಭಾವಿಗಳು ಒತ್ತುವರಿ ತೆರವು ಮಾಡದಂತೆ ಹೈಕೋರ್ಟ್‌ನಿಂದ ತಡೆಯಾಜ್ಞೆ ತಂದಿದ್ದಾರೆ. ಈ ತಡೆಯಾಜ್ಞೆಗಳನ್ನು ತೆರವು ಮಾಡಲು ಬಿಬಿಎಂಪಿ ಮುಂದಾಗಿದೆ. ಈ ಸಂಬಂಧ ಹೈಕೋರ್ಟ್‌ನಲ್ಲಿ ಮನವಿ ಸಲ್ಲಿಸಲು ಬಿಬಿಎಂಪಿಯ ಕಾನೂನು ವಿಭಾಗ ಸಿದ್ಧತೆ ಮಾಡಿಕೊಳ್ಳುತ್ತಿದೆ. ನಗರದಲ್ಲಿ ಎಷ್ಟು ರಾಜಕಾಲುವೆಗಳನ್ನು ಒತ್ತುವರಿ ಮಾಡಿಕೊಳ್ಳಲಾಗಿದೆ ಹಾಗೂ ಬಿಬಿಎಂಪಿಯ ಸಿದ್ಧತೆ ಏನು ಎನ್ನುವ ವಿವರ ಇಲ್ಲಿದೆ...
ಬೆಂಗಳೂರಿನ ಎಂಟು ವಲಯಗಳಲ್ಲಿ ಇಲ್ಲಿಯ ವರೆಗೆ ಒಟ್ಟು 3,158 ಜಾಗದಲ್ಲಿ ರಾಜಕಾಲುವೆಗಳನ್ನು ಒತ್ತುವರಿ ಮಾಡಿಕೊಳ್ಳಲಾಗಿದ್ದು, ಅವುಗಳಲ್ಲಿ ಹಲವು ಪ್ರಕರಣಗಳಲ್ಲಿ ಹೈಕೋರ್ಟ್‌ನಿಂದ ತಡೆಯಾಜ್ಞೆ ತರಲಾಗಿದೆ. ಇದೀಗ ಆ ಪ್ರಕರಣಗಳ ತಡೆಯಾಜ್ಞೆಗಳನ್ನು ತೆರವು ಮಾಡಿ ಅಡೆತಡೆ ನಿವಾರಿಸಲು ಹೈಕೋರ್ಟ್‌ಗೆ ಮನವಿ ಸಲ್ಲಿಸಲು ಬಿಬಿಎಂಪಿ ಮುಂದಾಗಿದೆ.
ಬೆಂಗಳೂರಿನಲ್ಲಿ ರಾಜಕಾಲುವೆಗಳ ಒತ್ತುವರಿ ನಿರಂತರವಾಗಿ ಮುಂದುವರಿದಿದ್ದು, ಬಿಬಿಎಂಪಿ ಅಂಕಿ- ಅಂಶಗಳ ಪ್ರಕಾರ, ಬೆಂಗಳೂರಿನಲ್ಲಿ ಇಲ್ಲಿಯವರೆಗೆ ಎಂಟು ವಲಯಗಳಲ್ಲಿ ಒಟ್ಟು 3158 ಜಾಗದಲ್ಲಿ ರಾಜಕಾಲುವೆ ಒತ್ತುವರಿ ಮಾಡಿಕೊಳ್ಳಲಾಗಿದೆ ಎಂದು ಗುರುತಿಸಲಾಗಿದೆ. ಇದರಲ್ಲಿ 1639 ಪ್ರಕರಣಗಳು ವಿಚಾರಣೆ ಹಂತದಲ್ಲಿ, ಮರು ಸಮೀಕ್ಷೆ ಬಾಕಿ ಹಾಗೂ ಒತ್ತುವರಿ ತೆರವಿಗೆ ಆದೇಶ ಬಾಕಿ ಇದೆ. ರಾಜಕಾಲುವೆ ಒತ್ತುವರಿ ತೆರವು ಮಾಡದಂತೆ ಕೆಲವರು ಹೈಕೋರ್ಟ್‌ನಿಂದ ತಂದಿರುವ ತಡೆಯಾಜ್ಞೆಯನ್ನು ತೆರವು ಮಾಡಲು ಬಿಬಿಎಂಪಿ ಮುಂದಾಗಿದೆ. ಈ ಸಂಬಂಧ ತಡೆಯಾಜ್ಞೆ ತೆರವಿಗೆ ಬಿಬಿಎಂಪಿಯ ಕಾನೂನು ಕೋಶದಿಂದ ಸಿದ್ಧತೆ ನಡೆಸಿದೆ.
ಮಳೆಗಾಲ ಬಂದರೆ ಬೆಂಗಳೂರಿನ ತಗ್ಗು ಪ್ರದೇಶಗಳಿಗೆ ನೀರು ನುಗ್ಗುವುದು, ರಸ್ತೆಗಳಲ್ಲಿ ನೀರು ನಿಲ್ಲುವುದು ಹಾಗೂ ರಾಜಕಾಲುವೆಗಳಲ್ಲಿ ನೀರು ನಿಲ್ಲುವುದು ಇಂದಿಗೂ ಮುಂದುವರಿದಿದೆ. ಇದಕ್ಕೆ ಮುಖ್ಯ ಕಾರಣ ಬೆಂಗಳೂರಿನಲ್ಲಿ ರಾಜಕಾಲುವೆಗಳನ್ನು ಒತ್ತುವರಿ ಮಾಡಿಕೊಂಡಿರುವುದೇ ಆಗಿದೆ. ಹಾಗಾಗಿ ಮಳೆಗಾಲ ಆರಂಭವಾಗಿರುವ ಹಿನ್ನೆಲೆಯಲ್ಲಿ ಬಿಬಿಎಂಪಿ ತಡೆಯಾಜ್ಞೆ ತೆರವು ಸಂಬಂಧ ಕಾನೂನು ಕ್ರಮಗಳಿಗೆ ಮುಂದಾಗಿದೆ.
ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಲಿದ್ದೇವೆ: ತುಷಾರ್ ಗಿರಿನಾಥ್
ರಾಜಕಾಲುವೆ ಒತ್ತುವರಿ ಮಾಡಿಕೊಂಡಿರುವ ಪ್ರಕರಣಗಳನ್ನು ಪರಿಶೀಲನೆ ಮಾಡಿ, ಕಾನೂನಿನ ಅನ್ವಯ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದಾರೆ.ರಾಜಕಾಲುವೆ ಒತ್ತುವರಿ ತೆರವು ಮಾಡದಂತೆ ಕೆಲವರು ಹೈಕೋರ್ಟ್‌ನಿಂದ ತಡೆಯಾಜ್ಞೆ ತಂದಿದ್ದಾರೆ. ಅದನ್ನು ತೆರವು ಮಾಡುವಂತೆ ಹೈಕೋರ್ಟ್‌ನಲ್ಲಿ ಮನವಿ ಸಲ್ಲಿಸಿ ನಂತರ ಕ್ರಮ ವಹಿಸಲಾಗುವುದು ಎಂದು ಹೇಳಿದ್ದಾರೆ.
ವಲಯವಾರು ರಾಜಕಾಲುವೆ ಒತ್ತುವರಿ
ವಲಯ ಒತ್ತುವರಿ ಜಾಗ
ಪೂರ್ವ 237
ಪಶ್ಚಿಮ 48
ದಕ್ಷಿಣ 5
ಕೋರಮಂಗಲ ವ್ಯಾಲಿ 10
ಯಲಹಂಕ 588
ಮಹದೇವಪುರ 1,651
ಬೊಮ್ಮನಹಳ್ಳಿ 368
ಆರ್.ಆರ್ ನಗರ 75
ದಾಸರಹಳ್ಳಿ 176
ಒಟ್ಟು 3,158
ಶೀಘ್ರ ರಾಜಕಾಲುವೆ ಒತ್ತುವರಿ ತೆರವು ?
ಬೆಂಗಳೂರಿನ ಹಲವು ಪ್ರದೇಶದಲ್ಲಿ ರಾಜಕಾಲುವೆಗಳನ್ನು ಒತ್ತುವರಿ ಮಾಡಿಕೊಳ್ಳಲಾಗಿದ್ದು, ಇದರಿಂದ ಮಳೆ ಬಂದಾಗ ಮಳೆ ನೀರು ಸರಾಗವಾಗಿ ಹರಿದು ಹೋಗದೆ ಸಮಸ್ಯೆ ಆಗುತ್ತಿದೆ. ಮಳೆಗಾಲದಲ್ಲಿ ಎದುರಾಗುವ ಸಮಸ್ಯೆಗಳನ್ನು ತಪ್ಪಿಸಲು, ರಾಜಕಾಲುವೆಗಳ ಒತ್ತುವರಿ ತೆರವು ಮಾಡುವುದು ಅತ್ಯಂತ ಅವಶ್ಯಕವಾಗಿದೆ. 2016ರಲ್ಲಿ ಬೆಂಗಳೂರಿನಲ್ಲಿ ರಾಜಕಾಲುವೆಗಳ ಒತ್ತುವರಿ ತೆರವು ಕಾರ್ಯಾಚರಣೆ ಚುರುಕು ಪಡೆದುಕೊಂಡಿತ್ತು. ಆದರೆ, ಆ ಸಂದರ್ಭದಲ್ಲಿ ನಟ ದರ್ಶನ್ ಸೇರಿದಂತೆ ರಾಜಕಾಲುವೆ ಒತ್ತುವರಿ ಮಾಡಿಕೊಂಡು ಕಟ್ಟಡ ನಿರ್ಮಾಣ ಮಾಡಿರುವ ಆರೋಪ ಎದುರಿಸುತ್ತಿರುವ ಹಲವು ಪ್ರಭಾವಿಗಳು ತಮ್ಮ ಕಟ್ಟಡ ತೆರವು ಮಾಡದಂತೆ ಹೈಕೋರ್ಟ್‌ನಿಂದ ತಡೆಯಾಜ್ಞೆ ತಂದಿದ್ದರು. ರಾಜಕಾಲುವೆ ಒತ್ತುವರಿ ಮಾಡಿಕೊಂಡು, ಒತ್ತುವರಿ ತೆರವು ಮಾಡದಂತೆ ಕೋರ್ಟ್ ಮೂಲಕ ತಡೆಯಾಜ್ಞೆ ತರಲಾಗಿತ್ತು. ಅವುಗಳನ್ನು ತೆರವು ಮಾಡಿ, ರಾಜಕಾಲುವೆ ಭಾಗದಲ್ಲಿ ಒತ್ತುವರಿ ತೆರವು ಮಾಡಲು ಬಿಬಿಎಂಪಿಯ ಅಧಿಕಾರಿಗಳು ಮುಂದಾಗಿದ್ದಾರೆ.
ನಟ ದರ್ಶನ್ ಪ್ರಕರಣದ ನಂತರ ವಿಷಯ ಮುನ್ನೆಲೆಗೆ…
ಬೆಂಗಳೂರಿನ ರಾಜರಾಜೇಶ್ವರಿ ನಗರದ ಐಡಿಯಲ್ ಹೋಮ್ಸ್ ವ್ಯಾಪ್ತಿಯಲ್ಲಿ ನಟ ದರ್ಶನ್ ಅವರ ಮನೆಯನ್ನು ರಾಜಕಾಲುವೆ ವ್ಯಾಪ್ತಿಯಲ್ಲಿ ನಿರ್ಮಾಣ ಮಾಡಲಾಗಿದೆ ಎನ್ನುವ 2016ರಲ್ಲೇ ಕೇಳಿಬಂದಿತ್ತು. ಅಲ್ಲದೇ ರಾಜಕಾಲುವೆ ಒತ್ತುವರಿ ತೆರವು ಮಾಡುವುದಕ್ಕೆ 2016ರಲ್ಲೇ ಬಿಬಿಎಂಪಿ ಮುಂದಾಗಿತ್ತು. ಆದರೆ, ರಾಜಕಾಲುವೆ ಒತ್ತುವರಿ ತೆರವಿಗೆ ನಟ ದರ್ಶನ್ ಸೇರಿದಂತೆ ಹಲವರು ಹೈಕೋರ್ಟ್‌ನಿಂದ ತಡೆಯಾಜ್ಞೆ ತಂದಿದ್ದರು. ಇದೀಗ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಬಂಧನವಾಗುತ್ತಿದ್ದಂತೆಯೇ ರಾಜಕಾಲುವೆ ಒತ್ತುವರಿಯನ್ನು ತೆರವು ಮಾಡಬೇಕು ಎನ್ನುವ ವಿಷಯ ಮುನ್ನೆಲೆಗೆ ಬಂದಿದೆ.
ಈ ವಲಯದಲ್ಲಿ ಹೆಚ್ಚು ಒತ್ತುವರಿ
ಬೆಂಗಳೂರಿನ ಬಹುತೇಕ ಎಲ್ಲ ವಲಯಗಳಲ್ಲೂ ರಾಜಕಾಲುವೆ ಒತ್ತುವರಿ ಮಾಡಿಕೊಳ್ಳಲಾಗಿದೆ. ಆದರೆ, ಮಹದೇವಪುರ ವಲಯದಲ್ಲಿ ಉಳಿದೆಲ್ಲ ವಲಯಗಳಿಗಿಂತ ಹೆಚ್ಚು ರಾಜಕಾಲುವೆ ಒತ್ತುವರಿಯಾಗಿದೆ. ಈ ವಲಯದಲ್ಲಿ ಒಟ್ಟು 1,651 ಜಾಗದಲ್ಲಿ ರಾಜಕಾಲುವೆ ಒತ್ತುವರಿ ಮಾಡಿಕೊಳ್ಳಲಾಗಿದೆ. ಯಲಹಂಕದಲ್ಲಿ 588 ಜಾಗದಲ್ಲಿ ಒತ್ತುವರಿ ಮಾಡಿಕೊಳ್ಳಲಾಗಿದೆ ಎಂದು ಬಿಬಿಎಂಪಿ ವರದಿ ತಿಳಿಸಿದೆ.
ವಿವಿಧ ಹಂತದಲ್ಲಿ ವಿಚಾರಣೆ ಬಾಕಿ
ಬೆಂಗಳೂರಿನಲ್ಲಿ (ಬಿಬಿಎಂಪಿ ವ್ಯಾಪ್ತಿಯಲ್ಲಿ) 3,158 ಪ್ರದೇಶದಲ್ಲಿ ರಾಜಕಾಲುವೆ ಒತ್ತುವರಿ ಮಾಡಿಕೊಳ್ಳಲಾಗಿದೆ ಎಂದು ಬಿಬಿಎಂಪಿ ಗುರುತಿಸಿದ್ದು, ರಾಜಕಾಲುವೆ ಒತ್ತುವರಿ ತೆರವು ಮಾಡುವುದಾಗಿ ಹೇಳಿದೆ. ಆದರೆ, ಹೈಕೋರ್ಟ್‌ನಲ್ಲಿ ವಿಚಾರಣೆ ಹಂತದಲ್ಲಿ ಹಲವು ಪ್ರಕರಣಗಳು ಬಾಕಿ ಉಳಿದಿವೆ. ಒತ್ತುವರಿ ತೆರವಿಗೆ ಆದೇಶ ಹೊರಡಿಸಬೇಕಿರುವುದು ಹಾಗೂ ಸರ್ವೇ ಬಾಕಿ ಇರುವ ಪ್ರಕರಣಗಳು ಸಹ ಇವೆ. ಈ ರೀತಿ ವಿವಿಧ ಹಂತದಲ್ಲಿ ಬಾಕಿ ಉಳಿದಿರುವ ಪ್ರಕರಣಗಳ ಸಂಖ್ಯೆಯೇ 1,639 ಇದೆ. ಇನ್ನು ಈಗಾಗಲೇ ಹಲವು ಪ್ರಭಾವಿಗಳು ತಡೆಯಾಜ್ಞೆ ತಂದಿದ್ದು, ಅವುಗಳ ತಡೆಯಾಜ್ಞೆ ತೆರವು ಮಾಡುವಂತೆ ಹೈಕೋರ್ಟ್‌ನ ಲ್ಲಿ ಮನವಿ ಸಲ್ಲಿಸಲು ಬಿಬಿಎಂಪಿ ಮುಂದಾಗಿದೆ. ಆದರೆ, ಒಂದೊಂದೇ ಪ್ರಕರಣದಲ್ಲಿ ಕ್ರಮ ವಹಿಸಲು ಸಾಧ್ಯವಿಲ್ಲ. ಹೀಗಾಗಿ, ಏಕಕಾಲಕ್ಕೆ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಲಿದ್ದೇವೆ ಎಂದು ಬಿಬಿಎಂಪಿಯ ಅಧಿಕಾರಿಗಳು ತಿಳಿಸಿದ್ದಾರೆ.