ನುಡಿ ನಮನ:  ಇನ್ನೂ ಕೃತಿಗಳಲ್ಲೇ  ಇರುವ ಭೈರಪ್ಪ
x

ನುಡಿ ನಮನ: ಇನ್ನೂ ಕೃತಿಗಳಲ್ಲೇ ಇರುವ ಭೈರಪ್ಪ

"ಕನ್ನಡದ ಓದುಗರಷ್ಟೇ ಅಲ್ಲ; ಮರಾಠಿ, ಹಿಂದಿ ಮತ್ತಿತರ ಭಾಷೆಗಳ ಓದುಗರ ಮನಸ್ಸಿನಿಂದ ಮರೆಯಾಗುವವರಲ್ಲ. ಅವರ ಸಾಹಿತ್ಯಕ್ಕೆ ಅಳಿವಿಲ್ಲ." ಭೈರಪ್ಪ ಅವರಿಗೆ ನುಡಿನಮನ- ಭೈರಪ್ಪ ಅತ್ಮೀಯ ಅಜಕ್ಕಳ ಗಿರೀಶ ಭಟ್ ನುಡಿನಮನ.


ಭೈರಪ್ಪನವರ ದೇಹ ಇನ್ನಿಲ್ಲವೆಂಬುದು ನಿಜ. ಆದರೆ ಅವರು ಕನ್ನಡದ ಓದುಗರಷ್ಟೇ ಅಲ್ಲ; ಮರಾಠಿ, ಹಿಂದಿ ಮತ್ತಿತರ ಭಾರತೀಯ ಭಾಷೆಗಳ ಓದುಗರ ಮನಸ್ಸಿನಿಂದ ಮರೆಯಾಗುವವರಲ್ಲ. ಅವರ ಸಾಹಿತ್ಯಕ್ಕೆ ಅಳಿವಿಲ್ಲ.

ಭೈರಪ್ಪನವರು ಇದ್ದ ಕಾಲದಲ್ಲೇ ಬದುಕಿದ್ದೆ, ಅವರ ಜೊತೆಗೆ ಬಹಳ ಸಲ ಮಾತನಾಡುವ ಸಂದರ್ಶನ ಮಾಡುವ ಅವಕಾಶ ಸಿಕ್ಕಿದೆ ಎನ್ನುವುದೆಲ್ಲ ನನ್ನ ಬದುಕನ್ನು ಸಾರ್ಥಕಗೊಳಿಸುವ ಅಂಶಗಳೇ ಹೌದು. ಮೊದಲ ಬಾರಿ ಅವರ ಜೊತೆ ಮಾತನಾಡಿದುದು ದೂರವಾಣಿಯಲ್ಲಿ. 2007ರಲ್ಲಿ ಒಂದು ಮಧ್ಯಾಹ್ನ ಮೌಲ್ಯಮಾಪನ ಕೇಂದ್ರದಲ್ಲಿದ್ದಾಗ ಆಗ ನನ್ನಲ್ಲಿದ್ದ ಸಣ್ಣ ಕೀಬೋರ್ಡಿನ ಮೊಬೈಲಿಗೆ ಒಂದು ಕರೆ ಬಂತು. ಕರೆ ಸ್ವೀಕರಿಸಿದಾಗ ಆ ಕಡೆಯಿಂದ “ನಾನು ಎಸ್.ಎಲ್. ಭೈರಪ್ಪ” ಎನ್ನುವ ಧ್ವನಿ ಕೇಳಿತು. ಅವರ ಆವರಣ ಕಾದಂಬರಿಯ ಹಿನ್ನೆಲೆಯಲ್ಲಿ ನಾನು ಬರೆದ ‘ಬುದ್ಧಿಜೀವಿ ವರ್ಸಸ್ ಬೌದ್ಧಿಕ ಸ್ವಾತಂತ್ರ್ಯʼ ಎನ್ನುವ ಕೃತಿಯನ್ನು ಮೆಚ್ಚಿಕೊಂಡು ಸುಮಾರು ಹದಿನೈದು ನಿಮಿಷ ಮಾತನಾಡಿದರು. ಅಲ್ಲಿಂದ ನಂತರ ಅವರ ಸಾಹಿತ್ಯದ ಕುರಿತಾಗಿ ನಡೆದ ಹಲವಾರು ಗೋಷ್ಠಿಗಳಲ್ಲಿ ನಾನು ಭಾಗವಹಿಸಿದ್ದೇನೆ. ವೇದಿಕೆಯಲ್ಲಿ ಅವರ ಜೊತೆ ಸಂವಾದ ನಡೆಸಿದ್ದೇನೆ. ಅಷ್ಟೇ ಅಲ್ಲ; ವೈಯಕ್ತಿಕವಾಗಿಯೂ ಅವರ ವಾತ್ಸಲ್ಯವನ್ನು ಅನುಭವಿಸಿದ್ದೇನೆ.

ಭೈರಪ್ಪನವರು ಕಾದಂಬರಿಕಾರರಾಗಿ ಪ್ರಸಿದ್ಧರೆಂಬುದು ನಿಜ. ಆದರೆ, ಸಾಹಿತ್ಯಸೃಷ್ಟಿಯ ಬಗೆಗೆ ಹೊಸಗನ್ನಡದ ಸಂದರ್ಭದಲ್ಲಿ ತಾತ್ವಿಕವಾಗಿ ಚಿಂತನೆ ನಡೆಸಿದ ಕೆಲವೇ ಕೆಲವು ಸಾಹಿತಿಗಳಲ್ಲಿ ಭೈರಪ್ಪನವರು ಒಬ್ಬರು. ಅದರಲ್ಲೂ ಸಾಹಿತ್ಯವೂ ಹೇಗೆ ಒಂದು ಕಲಾಪ್ರಕಾರ ಎಂದು ತತ್ವಶಾಸ್ತ್ರದ ಹಿನ್ನೆಲೆಯಲ್ಲಿ ನಿರೂಪಿಸಿದುದು ವಿಶೇಷ ಸಂಗತಿ. ಹೀಗಿದ್ದರೂ ಸಾಹಿತ್ಯರಚನೆಯೆಂಬುದು ಅವರ ವ್ಯಕ್ತಿತ್ವದ ಒಂದು ಮುಖ ಮಾತ್ರ. ಅವರು ಒಬ್ಬ ಸಂಸ್ಕೃತಿ ಚಿಂತಕರಾಗಿಯೂ ಈಚಿನ ವರ್ಷಗಳಲ್ಲಿ ನಾಡಿನ ಮಹತ್ವದ ಸಾಕ್ಷಿಪ್ರಜ್ಞೆ ಎನಿಸಿಕೊಂಡಿದ್ದರು.

ಶೈಕ್ಷಣಿಕ ಕ್ಷೇತ್ರದಲ್ಲಿರುವ ನಮ್ಮಂತಹ ಅನೇಕ ಓದುಗರಿಗೆ ಭೈರಪ್ಪನವರು ಅಕಡೆಮಿಕ್ ವಲಯದಿಂದ ತುಸು ಹೊರಗಿಡಲ್ಪಟ್ಟವರು ಎನ್ನುವ ಭಾವನೆ ಸಕಾರಣವಾಗಿಯೇ ಇತ್ತು ಮತ್ತು ಈಗಲೂ ಇದೆ. ಹಾಗೆ ಹೊರಗಿಡಲು ಏನು ಕಾರಣ ಎನ್ನುವುದು ಅಂದಾಜಿದ್ದರೂ ಆ ಕುರಿತು ಅವರನ್ನೇ ಕೇಳಬೇಕು ಅಂದುಕೊಂಡಿದ್ದೆ.

ಕೆಲವು ವರ್ಷಗಳ ಹಿಂದೆ ಡಾ. ಭೈರಪ್ಪನವರನ್ನು ಒಮ್ಮೆ ಭೇಟಿಯಾದಾಗ ಖಾಸಗಿ ಮಾತುಕತೆಯಲ್ಲಿ ಕೇಳಿದ್ದೆ- “ನಿಮ್ಮ ಸಮಕಾಲೀನರಾದ ಬೇರೆ ಹಲವಾರು ಕನ್ನಡ ಲೇಖಕರು, ನಿಮ್ಮಷ್ಟು ದೊಡ್ಡ ಸಾಹಿತಿಗಳು ಅಲ್ಲದಿದ್ದರೂ ನಮ್ಮ ಶಾಲಾಕಾಲೇಜುಗಳ ವಿದ್ಯಾರ್ಥಿಗಳಲ್ಲಿ ಒಂದಲ್ಲ ಒಂದು ಬಗೆಯಲ್ಲಿ ಕಾಣಿಸಿಕೊಳ್ಳುತ್ತಾರೆ. ಆದರೆ ನಿಮ್ಮ ಸಾಹಿತ್ಯವಾಗಲೀ, ಸಾಹಿತ್ಯದ ಬಗೆಗಿನ ಮಾಹಿತಿಯಾಗಲೀ ಪಠ್ಯಪುಸ್ತಕಗಳಲ್ಲಿ ಅಥವಾ ಪಠ್ಯವಸ್ತುವಿನಲ್ಲಿ ಅಷ್ಟಾಗಿ ಇರುವುದೇ ಇಲ್ಲ, ಇದು ಯಾಕೆ ಅಂತ ನಿಮಗನಿಸುತ್ತದೆ?”

ಭೈರಪ್ಪನವರ ಉತ್ತರ ಏನಿತ್ತು ಗೊತ್ತೇ? “ನೋಡಿ, ಹೆಚ್ಚು ಮಂದಿ ಓದಲಿ ಎಂದು ಲೇಖಕ ಬಯಸುವುದು ಸಹಜವೇ. ಆದರೆ, ಪಠ್ಯಪುಸ್ತಕದಲ್ಲಿ ಬರುವುದು ಅಥವಾ ನಮ್ಮ ಪುಸ್ತಕ ಪಠ್ಯಪುಸ್ತಕವಾಗುವುದು ಮುಖ್ಯವಲ್ಲ; ಓದಿದವರು ನೆನಪಿಟ್ಟುಕೊಳ್ಳುವಂತೆ, ಮತ್ತೊಮೆ ಓದುವಂತೆ ಅಥವಾ ಇನ್ನೊಬ್ಬರಿಗೆ ಓದಲು ಶಿಫಾರಸು ಮಾಡುವಂತೆ ಬರೆಯುತ್ತೇವೋ ಎನ್ನುವುದು ಮುಖ್ಯ. ಈಗ ನೀವು ಶಾಲೆ-ಕಾಲೇಜುಗಳಲ್ಲಿ ಕಲಿಯುವಾಗ ಯಾವೆಲ್ಲ ಲೇಖಕ-ಲೇಖಕಿಯರ ಪುಸ್ತಕಗಳನ್ನು ಸಿಲೆಬಸ್‌ನಲ್ಲಿ ಓದಿದ್ದೀರೋ ಅವುಗಳಲ್ಲಿ ಈಗ ಎಷ್ಟು ನೆನಪಿದೆ ನಿಮಗೆ? ಅವುಗಳಲ್ಲಿ ಎಷ್ಟು ಬರಹಗಾರರ ಕೃತಿಗಳನ್ನು ಓದಲು ನಿಮ್ಮ ಆತ್ಮೀಯರಿಗೆ ಹೇಳಿದ್ದೀರಿ?”

ನನ್ನಲ್ಲಿ ನಿಜವಾಗಿ ಉತ್ತರವಿರಲಿಲ್ಲ.

ಭೈರಪ್ಪನವರು ಮುಂದುವರಿಸಿದರು, “ನನ್ನದು ಕಾದಂಬರಿಗಳು. ಅದು ಬಿಟ್ಟರೆ ಸಾಹಿತ್ಯ ಸೃಷ್ಟಿ, ಅದರ ಹಿಂದಿನ ತತ್ವ ಮುಂತಾದ ಗಂಭೀರ ವಿಷಯಗಳ ಬಗೆಗೆ ಇರುವ ಪುಸ್ತಕಗಳು. ಇಂಥವು ಪಠ್ಯಪುಸ್ತಕಗಳಿಗೆ ಸೇರುವುದು ಕಷ್ಟವಲ್ಲವೇ? ಇನ್ನು ನನಗೆ ನವ್ಯದವರ ಸಾಹಿತ್ಯ ಸ್ನೇಹಕೂಟದಲ್ಲಿ ನಾನು ಸೇರಿದವನಾಗಿರಲಿಲ್ಲ. ಶಾಲಾಕಾಲೇಜುಗಳ ಪಠ್ಯಗಳಿಗೆ ಸುಲಭವಾಗಿ ಸೇರುವುದು ಕವಿತೆಗಳನ್ನು ಬರೆಯುವವರು. ಅದು ಬಿಟ್ಟರೆ ಮತ್ತೆ ಸಣ್ಣ ಕಥೆಗಳನ್ನು ಬರೆಯುವವರು. ನಾನು ಕವಿತೆ, ಕತೆಗಳನ್ನು ಬರೆದಿಲ್ಲ. ಕನ್ನಡ ಮೇಜರ್ ಅಥವಾ ಕನ್ನಡ ಎಂ.ಎ.ಗಳಲ್ಲಿ ಕಾದಂಬರಿ, ನಾಟಕ ಮುಂತಾದವುಗಳಿಗೆ ಸ್ವಲ್ಪ ಅವಕಾಶ ಇರಬಹುದು. ನಾನು ಅಂಥದ್ದರ ಬಗೆಗೆ ಎಲ್ಲ ತಲೆಕೆಡಿಸಿಕೊಳ್ಳುವುದಿಲ್ಲ. ನನಗೆ ತೃಪ್ತಿಯಿದೆ, ಓದುಗರಿದ್ದಾರೆ, ಬೇರೆಯವರಿಗೆ ಹೇಳಿ ಓದಿಸುವವರಿದ್ದಾರೆ, ಬೇರೆ ಬಾಷೆಗಳಲ್ಲೂ ಓದಿ ಮೆಚ್ಚುವವರಿದ್ದಾರೆ. ಲೇಖಕನಿಗೆ ಅದಕ್ಕಿಂತ ಹೆಚ್ಚು ಏನು ಬೇಕಾಗಿದೆ?”

ಈ ಬಗೆಯ ಅವರ ಸಂತೃಪ್ತ ಭಾವ ಕೇವಲ ಅವರ ಸಾಹಿತ್ಯದ ಬಗೆಗೆ ಮಾತ್ರ ಅವರಿಗಿದ್ದುದಲ್ಲ. ಬದಲಾಗಿ ಒಟ್ಟು ಬದುಕನ್ನೇ ಅವರು ನೋಡುವ ಕ್ರಮ ಅದೇ ಸಂತೃಪ್ತ ಸ್ಥಿತಪ್ರಜ್ಞತೆಯದಾಗಿತ್ತು. ತಮಗೆ ಬಂದ ರಾಯಧನವನ್ನೆಲ್ಲ ಗಣ್ಯ ವ್ಯಕ್ತಿಗಳನ್ನು ಸೇರಿಸಿ ಮಾಡಿದ ಒಂದು ಟ್ರಸ್ಟಿನ ಮೂಲಕ ಬಡಮಕ್ಕಳ ಶಿಕ್ಷಣ ಇತ್ಯಾದಿ ಸಮಾಜಕಾರ್ಯಗಳಿಗಾಗಿ ವ್ಯಯಿಸಲು ತೀರ್ಮಾನಿಸಿದ್ದರಲ್ಲೂ ಅದೇ ‘ಸಾಕು’ ಎಂಬ ಮನೋಭಾವವೇ ಇರುವುದು.

ಕೃತಿ ರಚನೆ ಮಾಡಬೇಕಾದರೆ ಅಧ್ಯಯನ ಮತ್ತು ಅನುಭವ ಎರಡೂ ಬೇಕು ಎಂದು ಭೈರಪ್ಪನವರು ಯಾವಾಗಲೂ ಹೇಳುತ್ತಾರಷ್ಟೆ? ದೇಶ ವಿದೇಶಗಳನ್ನು ಸುತ್ತುವ ಮೂಲಕ ಅನುಭವ ಪಡೆಯುವುದೊಂದು ಬಗೆ. ಆದರೆ, ಭೈರಪ್ಪನವರು ಸುತ್ತುವುದು ಮಾತ್ರವಲ್ಲ, ಪರಿಚಿತರ ಅಥವಾ ಓದುಗರ ಮನೆಗಳಲ್ಲಿ ತಂಗಿ ಅಲ್ಲಿ ಕಂಡದ್ದನ್ನು ಕೇಳಿದ್ದನ್ನು ಮನಸ್ಸಿನಲ್ಲಿಯೇ ದಾಖಲಿಸಿಕೊಳ್ಳುವವರು. ಅವರ ಕಾದಂಬರಿಗಳಲ್ಲಿ ಮನುಷ್ಯಸ್ವಭಾವದ ಶೋಧವು ಅಷ್ಟು ಚೆನ್ನಾಗಿ ಬರಲು ಇದೇ ಕಾರಣ.

ಮೊನ್ನೆ, ಅಂದರೆ ಒಂದು ತಿಂಗಳ ಹಿಂದೆ ಆಗಸ್ಟ್ 25ರಂದು ಅವರನ್ನು ಆಸ್ಪತ್ರೆಯಲ್ಲಿ ಭೇಟಿಯಾದಾಗಲೂ ಅವರು ಮುಖ್ಯವಾಗಿ ಮಾತನಾಡಿದುದು ಸಮಾಜದ ಋಣ ತಮ್ಮ ಮೇಲೆ ಇದೆ ಎನ್ನುವುದನ್ನೇ ಹೊರತು ತಮ್ಮ ಅನಾರೋಗ್ಯದ ಬಗೆಗೆ ಅಲ್ಲ.

ಅವರ ಸಮಕಾಲೀನ ಸಾಹಿತಿಗಳೆಷ್ಟೋ ಮಂದಿ ರಾಜಕಾರಣಿಗಳಿಗೆ ಹತ್ತಿರವಾಗಿ ತಮಗೂ ತಮ್ಮವರಿಗೂ ಅನುಕೂಲಗಳನ್ನು ಮಾಡಿಕೊಂಡದ್ದಿದೆ. ಆದರೆ ಭೈರಪ್ಪನವರು ಸಾಹಿತಿಯಾಗಿ ಅಷ್ಟು ದೊಡ್ಡ ಹೆಸರು ಮಾಡಿದವರಾಗಿದ್ದರೂ ಹಾಗೆ ಬಂದ ಜನಪ್ರಿಯತೆಯನ್ನು ತಮ್ಮ ಸ್ವಂತಕ್ಕಾಗಿ ಅಥವಾ ತಮಗೆ ಬೇಕಾದವರಿಗಾಗಿ ಲಾಬಿ ಮಾಡಲು ಎಂದೂ ಉಪಯೋಗಿಸಲಿಲ್ಲ. ಬಹುಶಃ ನೈತಿಕವಾಗಿ ಅವರಷ್ಟು ದೃಢವಾಗಿ ನಿಂತ ಸಾಹಿತಿಗಳು ಈ ಕಾಲದಲ್ಲಂತೂ ಬಲು ವಿರಳ.

ಭೈರಪ್ಪನವರ ಸಾಹಿತ್ಯವನ್ನು ಒಂದಷ್ಟು ಜನರಿಗೆ ಪರಿಚಯಿಸಿ ಓದಿಸುವ ಕೆಲಸ ನಾವು ಮಾಡಿದರೆ ಅದುವೇ ಅವರಿಗೆ ನಾವು ಸಲ್ಲಿಸಬಹುದಾದ ದೊಡ್ಡ ಗೌರವ.

Read More
Next Story