ತೆಲಂಗಾಣದಂತೆ ಕರ್ನಾಟಕದಲ್ಲಿ ಚಿತ್ರಮಂದಿರಗಳಿಗೆ ʼಬೀಗಮುದ್ರೆʼ ಇಲ್ಲ
x

ತೆಲಂಗಾಣದಂತೆ ಕರ್ನಾಟಕದಲ್ಲಿ ಚಿತ್ರಮಂದಿರಗಳಿಗೆ ʼಬೀಗಮುದ್ರೆʼ ಇಲ್ಲ


ಚಿತ್ರಮಂದಿರಗಳಿಗೆ ಪ್ರೇಕ್ಷಕರು ಕಾಲಿಡುತ್ತಿಲ್ಲ. ಕಾಲಿಡುತ್ತಿರುವ ಪ್ರೇಕ್ಷಕರಿಂದ ಸಂಗ್ರಹವಾಗುತ್ತಿರುವ ಆದಾಯ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಚಿತ್ರಮಂದಿರಗಳಿಗೆ ಪ್ರೇಕ್ಷಕರನ್ನು ಕರೆತಂದು ಆದಾಯ ಹೆಚ್ಚಿಸುವಂಥ ಸ್ಟಾರ್‌ ಚಿತ್ರಗಳು ತೆರೆಕಾಣುತ್ತಿಲ್ಲ ಎಂಬ ʼಸಕಾರಣʼಗಳನ್ನು ಮುಂದಿಟ್ಟು, ತೆಲಂಗಾಣ ರಾಜ್ಯದ ಚಿತ್ರಮಂದಿರಗಳು ನಾಳೆ (ಮೇ 17) ರಿಂದ ಹತ್ತು ದಿನಗಳ ಕಾಲ ಚಿತ್ರ ಪ್ರದರ್ಶನವನ್ನು ರದ್ದುಗೊಳಿಸಿದೆ. ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ, ನಾಲ್ಕು ನೂರಕ್ಕೂ ಹೆಚ್ಚು ಚಿತ್ರಮಂದಿರಗಳಿಗೆ ಬೀಗ ಬೀಳಲಿದೆ.

ಹಾಗೆ ನೋಡಿದರೆ, ಕನ್ನಡ ಚಿತ್ರರಂಗದ ಸ್ಥಿತಿ ತೆಲಂಗಾಣ ರಾಜ್ಯದ ತೆಲುಗು ಚಿತ್ರರಂಗದ ಸ್ಥಿತಿಗಿಂತ ಭಿನ್ನವಾಗಿಲ್ಲ. ಇವೇ ಕಾರಣಗಳು ಕನ್ನಡ ಚಿತ್ರರಂಗದ ಪ್ರದರ್ಶಕ ವಲಯವನ್ನು ಕಾಡುತ್ತಿದೆ. ಆದರೆ, ಕರ್ನಾಟಕ ಚಿತ್ರಮಂದಿರಗಳು ಪ್ರದರ್ಶನವನ್ನು ರದ್ದುಗೊಳಿಸುವುದಿಲ್ಲ. “ನಾವು ತೆಲಂಗಾಣ ಚಿತ್ರರಂಗದ ಬೆಳವಣಿಗೆ ಕುರಿತು ಚರ್ಚಿಸುತ್ತಿದ್ದೇವೆ. ಸದ್ಯಕ್ಕೆ ಚಿತ್ರಮಂದಿರಗಳಿಗೆ ಬಾಗಿಲು ಹಾಕುವ ಸಾಧ್ಯತೆ ಇಲ್ಲ” ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಎಂ. ಎನ್.‌ ಸುರೇಶ್‌, ಅವರು ʻದ ಫೆಡರಲ್-ಕರ್ನಾಟಕʼ ಕ್ಕೆ ತಿಳಿಸಿದ್ದಾರೆ.

ಪ್ರೇಕ್ಷಕರು ಚಿತ್ರಮಂದಿರಗಳಿಂದ ದೂರವಾಘುತ್ತಿರುವುದರಿಂದ, ಚಿತ್ರಮಂದಿರಗಳು ಸಂಕಷ್ಟಕ್ಕೆ ಸಿಲುಕಿವೆ. ಹಾಗಾಗಿ ತಾತ್ಕಾಲಿಕವಾಗಿ ನಾಳೆಯಿಂದ ಹತ್ತು ದಿನಗಳ ಕಾಲ ಚಿತ್ರಮಂದಿರವನ್ನು ಮುಚ್ಚಲು ನಿರ್ಧರಿಸಲಾಗಿದೆ ಎನ್ನುತ್ತಾರೆ ತೆಲಂಗಾಣ ರಾಜ್ಯ ಚಿತ್ರ ಪ್ರದರ್ಶಕರ ಸಂಘದ ಅಧ್ಯಕ್ಷರಾದ ವಿಜಯೇಂದ್ರ ರೆಡ್ಡಿ. ಈ ಮೂಲಕ ತೆಲಂಗಾಣದ ಸುಮಾರು 400 ಚಿತ್ರಮಂದಿರಗಳಿಗೆ ನಾಳೆಯಿಂದ ಬೀಗಮುದ್ರೆ. “ಏಕಪರದೆ ಚಿತ್ರಮಂದಿರಗಳ ಮಾಲೀಕರು ತೆಗೆದುಕೊಂಡಿರುವ ನಿರ್ಧಾರವಿದು”, ಎನ್ನುತ್ತಾರೆ ರೆಡ್ಡಿ.

ಪ್ರೇಕ್ಷಕರ ಟಿಕೆಟ್ ನಿಂದ ಸಂಗ್ರಹವಾಗುತ್ತಿರುವ ಹಣ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಚಿತ್ರ ಮಂದಿರಗಳನ್ನು ನಡೆಸುವುದೆಂದರೆ, ನಷ್ಟವನ್ನು ಸೊಂಟಕ್ಕೆ ಕಟ್ಟಿಕೊಂಡಂತೆ ಆಗಿದೆ ಎನ್ನುತ್ತಾರೆ ರೆಡ್ಡಿ.

ಚಿತ್ರ ನಿರ್ಮಾಪಕರು ಚಿತ್ರದ ಪ್ರಚಾರಕ್ಕೆಂದೇ ಹಣವನ್ನು ಮೀಸಲಿಟ್ಟು ಖರ್ಚು ಮಾಡುತ್ತಿದ್ದರೂ, ಪ್ರೇಕ್ಷಕರು ಚಿತ್ರಮಂದಿರಗಳತ್ತ ತಲೆಹಾಕುತ್ತಿಲ್ಲ. ಇದುವರೆಗೆ ಬಿಡುಗಡೆಯಾಗಿರುವ ನಲವತ್ತಕ್ಕೂ ಹೆಚ್ಚು ಚಿತ್ರಗಳು ಪ್ರೇಕ್ಷಕರನ್ನು ಚಿತ್ರಮಂದಿರಗಳತ್ತ ಸೆಳೆಯುವಲ್ಲಿ ವಿಫಲವಾಗಿವೆ. ನಷ್ಟ ಭರಿಸುವ ಶಕ್ತಿ ಚಿತ್ರಮಂದಿರಗಳಿಗೆ ಇಲ್ಲವಾಗಿದೆ. ಹಾಗಾಗಿ ಮುಂದಿನ ಹತ್ತು ದಿನಗಳ ಕಾಲ ಚಿತ್ರಮಂದಿರಗಳಿಗೆ ಬೀಗ ಹಾಕುವ ನಿರ್ಧಾರ ತೆಗೆದುಕೊಂಡಿವೆ ಎನ್ನುತ್ತಾರೆ ರೆಡ್ಡಿ. “ನಿರ್ಮಾಪಕರು, ವಿತರಕರು ಮುಂಗಡ ಹಣ ಸಂದಾಯ ಮಾಡಿ ಚಿತ್ರ ಬಿಡುಗಡೆ ಮಾಡಲು ನಿರ್ಧರಿಸಿದರೆ, ನಾವು ಚಿತ್ರ ಪ್ರದರ್ಶನ ಮಾಡಲು ಸಿದ್ಧರಿದ್ದೇವೆ” ಎಂದೂ ರೆಡ್ಡಿ ಹೇಳುತ್ತಾರೆ.

ಮೊದಲೇ ಹೇಳಿದಂತೆ ಕನ್ನಡ ಚಿತ್ರರಂಗದ ಸ್ಥಿತಿ ತೆಲುಗು ಚಿತ್ರರಂಗಕ್ಕಿಂತ ಭಿನ್ನವಾಗಿಲ್ಲ. ಕನ್ನಡಿಗರು ಕನ್ನಡ ಸಿನಿಮಾ ಕೈಬಿಟ್ಟರೇ? ಎಂದು ಪ್ರಶ್ನಿಸುವಷ್ಟು ಕನ್ನಡ ಚಿತ್ರರಂಗದ ಸ್ಥಿತಿ ದುಸ್ತರವಾಗಿದೆ. ಕನ್ನಡ ಸಿನಿಮಾಗಳಿಂದ ಕನ್ನಡಿಗರು ವಿಮುಖರಾಗುತ್ತಿದ್ದಾರೆ ಎಂಬ ಅಭಿಪ್ರಾಯ ಕನ್ನಡ ಚಿತ್ರರಂಗದಲ್ಲಿ ಸಾರ್ವತ್ರಿಕವಾಗಿದೆ. ಏಕೆಂದರೆ ಒಂದೇ ಒಂದು ಕನ್ನಡ ಚಿತ್ರ ಕೂಡ ಗಲ್ಲಾ ಪೆಟ್ಟಿಗೆಯಲ್ಲಿ ಗೆಲ್ಲುತ್ತಿಲ್ಲ. ಇಲ್ಲಿಯವರೆಗೂ 75 ಚಿತ್ರಗಳು ಬಿಡುಗಡೆಯಾಗಿದ್ದರೂ, ಯಾವುದೂ ನಿರೀಕ್ಷಿಸಿದಂತೆ ಹಣವನ್ನು ಹಿಂದೆ ತಂದುಕೊಟ್ಟಿಲ್ಲ. “ಇಂಥ ಸಂದರ್ಭದಲ್ಲಿ ಚಿತ್ರಮಂದಿರಗಳನ್ನು ತೆರೆದಿಟ್ಟು ಇರುವ ಚಿತ್ರಗಳನ್ನೇ ಪ್ರದರ್ಶಿಸುವುದು ಕಷ್ಟವಾಗಿದೆ. ಕನ್ನಡದ, ಕನ್ನಡಿಗರ ಹಿತದೃಷ್ಟಿಯಿಂದ ನೋಡಿದರೆ, ನಾವು ಹೊಟ್ಟೆಯ ಮೇಲೆ ತಣ್ಣೀರ ಬಟ್ಟೆ ಹಾಕಿಕೊಳ್ಳಬೇಕಾಗುತ್ತದೆ”, ಎಂದು ಹೆಸರು ಬಹಿರಂಗಪಡಿಸಲು ಬಯಸದ ಪ್ರದರ್ಶಕರೊಬ್ಬರು ʼದ ಫೆಡರಲ್‌-ಕರ್ನಾಟಕಕ್ಕೆ ʼ ತಮ್ಮ ಅಳಲು ತೋಡಿಕೊಂಡಿದ್ದಾರೆ.

ಹಾಗೆಂದು ಚಿತ್ರಮಂದಿರಗಳನ್ನು ಮುಚ್ಚುವ ಬದಲು, ದಶಕಗಳ ಹಿಂದಿನ ಯಶಸ್ವಿ ಚಿತ್ರಗಳನ್ನು ಪ್ರದರ್ಶಿಸಿ ಹಣ ಸಂಗ್ರಹ ಮಾಡಲು ಸಾಧ್ಯವೇ? ಎಂಬ ಪ್ರಯತ್ನವನ್ನು ಪ್ರದರ್ಶಕ ವಲಯ ಮಾಡುತ್ತಿದೆ. ಹಾಗಾಗೇ ನಾಳೆ ಉಪೇಂದ್ರ ನಿರ್ದೇಶನದ ಮೂರು ದಶಕಗಳ ಹಿಂದಿನ ಚಿತ್ರ ʻA ́ ನಾಳೆ ಬೆಂಗಳೂರಿನ ಪ್ರಸನ್ನ ಚಿತ್ರಮಂದಿರ ಸೇರಿದಂತೆ ಕರ್ನಾಟಕದ ಹಲವು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ಅಷ್ಟೇ ಅಲ್ಲ, ಡಾ ವಿಷ್ಣುವರ್ಧನ್‌ ಅಭಿನಯದ ನಾಲ್ಕು ದಶಕಗಳ ಹಿಂದಿನ ಚಿತ್ರವಾದ “ಕೃಷ್ಣಾ ನೀ ಬೇಗನೆ ಬಾರೋʼ ಚಿತ್ರ ಕೂಡ ಬಿಡುಗಡೆಯಾಗುತ್ತಿದೆ. ಈ ಎರಡೂ ಚಿತ್ರಗಳು ಸಂಕಷ್ಟ ಸ್ಥಿತಿಯಲ್ಲಿರುವ ಕನ್ನಡ ಚಿತ್ರರಂಗಕ್ಕೆ ಅಗತ್ಯವಾದ ʼಆಮ್ಲಜನಕʼ ಒದಗಿಸುವುದೇ ಕಾದು ನೋಡಬೇಕಿದೆ. ಆದರೆ ಸದ್ಯಕ್ಕೆ ತೆಲಂಗಾಣ ಚಿತ್ರರಂಗದಂತೆ ಕನ್ನಡ ಚಿತ್ರರಂಗದಲ್ಲಿ ಚಿತ್ರಮಂದಿರಗಳಿಗೆ ಬೀಗಮುದ್ರೆ ಇಲ್ಲ.

Read More
Next Story