Breast Cancer| ಗ್ರಾಮೀಣ ಮಹಿಳೆಯರ ಸಂಕೋಚ, ಹಿಂಜರಿಕೆಯಿಂದ ಪ್ರಾಣಕ್ಕೆ ಕುತ್ತು ತರಲಿದೆ ಸ್ತನ ಕ್ಯಾನ್ಸರ್
x

Breast Cancer| ಗ್ರಾಮೀಣ ಮಹಿಳೆಯರ ಸಂಕೋಚ, ಹಿಂಜರಿಕೆಯಿಂದ ಪ್ರಾಣಕ್ಕೆ ಕುತ್ತು ತರಲಿದೆ ಸ್ತನ ಕ್ಯಾನ್ಸರ್

ಕರ್ನಾಟಕದ ಗ್ರಾಮೀಣ ಪ್ರದೇಶಗಳಲ್ಲಿ ಸ್ತನ ಕ್ಯಾನ್ಸರ್ ಲಕ್ಷಣ, ಸ್ತನ ಸ್ವಯಂ ಪರೀಕ್ಷೆ(ಬಿಎಸ್ಇ) ವಿಧಾನಗಳ ನಿರ್ಲಕ್ಷ್ಯ, ಕಾಯಿಲೆ ಕುರಿತ ಸಂಕೋಚ ಮನೋಭಾವ ಹಾಗೂ ಅರಿವಿನ ಕೊರತೆಯಿಂದಾಗಿ ಪ್ರಕರಣಗಳು ಏರಿಕೆಯಾಗುತ್ತಿವೆ ಎಂಬುದು ಹಲವು ಅಧ್ಯಯನಗಳಿಂದ ಬಹಿರಂಗವಾಗಿದೆ.


ಸ್ತನ ಕ್ಯಾನ್ಸರ್ ಕುರಿತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸರ್ಕಾರೇತರ ಸಂಸ್ಥೆಗಳು ಸಮಾರೋಪಾದಿಯಲ್ಲಿ ಜಾಗೃತಿ ಮೂಡಿಸುತ್ತಿದ್ದರೂ ಮಹಿಳೆಯರಲ್ಲಿ ಪ್ರಕರಣಗಳ ಏರಿಕೆಯು ವೈದ್ಯಕೀಯ ಕ್ಷೇತ್ರಕ್ಕೆ ಸವಾಲಾಗಿ ಪರಿಣಮಿಸಿದೆ.

ಗ್ರಾಮೀಣ ಕರ್ನಾಟಕದಲ್ಲಿ ಸ್ತನ ಕ್ಯಾನ್ಸರ್ ಪ್ರಕರಣಗಳ ನಿರ್ದಿಷ್ಟ ಅಂಕಿಅಂಶಗಳು ಲಭ್ಯವಿಲ್ಲದಿದ್ದರೂ ರಾಷ್ಟ್ರೀಯ ದತ್ತಾಂಶಗಳ ಪ್ರಕಾರ, ನಗರ ಪ್ರದೇಶಕ್ಕಿಂತ ಕಡಿಮೆ ಇದೆ. ಅಂದರೆ ನಗರ ಪ್ರದೇಶದಲ್ಲಿ ಪ್ರತಿ 22 ಮಹಿಳೆಯರಲ್ಲಿ ಒಬ್ಬರಿಗೆ ಸ್ತನ ಕ್ಯಾನ್ಸರ್ ಕಾಣಿಸಿಕೊಂಡರೆ, ಗ್ರಾಮೀಣ ಪ್ರದೇಶದಲ್ಲಿ ಪ್ರತಿ 60 ಜನರಲ್ಲಿ ಒಬ್ಬರಿಗೆ ಸ್ತನ ಕ್ಯಾನ್ಸರ್ ಕಾಣಿಸಿಕೊಳ್ಳುವ ಅಪಾಯವಿದೆ.

ಗ್ರಾಮೀಣ ಪ್ರದೇಶಗಳಲ್ಲಿ ಸ್ತನ ಕ್ಯಾನ್ಸರ್ ಲಕ್ಷಣ, ಸ್ತನ ಸ್ವಯಂ ಪರೀಕ್ಷೆ(ಬಿಎಸ್ಇ) ವಿಧಾನಗಳ ನಿರ್ಲಕ್ಷ್ಯ, ಕಾಯಿಲೆ ಕುರಿತ ಸಂಕೋಚ ಮನೋಭಾವ ಹಾಗೂ ಅರಿವಿನ ಕೊರತೆಯಿಂದಾಗಿ ಪ್ರಕರಣಗಳು ಏರಿಕೆಯಾಗುತ್ತಿವೆ ಎಂಬುದು ಹಲವು ಅಧ್ಯಯನಗಳಿಂದ ಬಹಿರಂಗವಾಗಿದೆ.

2023 ರಲ್ಲಿ ಮಂಗಳೂರಿನ ಯೆನಪೋವಾ ವಿಶ್ವವಿದ್ಯಾಲಯ ನಡೆಸಿದ ಅಧ್ಯಯನದಲ್ಲಿ ಹಲವು ಆತಂಕಕಾರಿ ಸಂಗತಿಗಳು ಬಯಲಾಗಿವೆ. 360 ಮಹಿಳೆಯರನ್ನು ಯಾದೃಚ್ಛಿಕವಾಗಿ ಅಧ್ಯಯನಕ್ಕೆ ಒಳಪಡಿಸಿದಾಗ ಶೇ 60.6 ರಷ್ಟು ಜನರಿಗೆ ರೋಗಲಕ್ಷಣವೇ ತಿಳಿದಿರಲಿಲ್ಲ. ಶೇ 68.3 ಜನರಿಗೆ ಸ್ತನ ಕ್ಯಾನ್ಸರ್ ಪತ್ತೆ ವಿಧಾನಗಳ ಬಗ್ಗೆ ಅರಿವು ಇರಲಿಲ್ಲ. ಶೇ 85.3 ರಷ್ಟು ಮಹಿಳೆಯರಿಗೆ ಸ್ತನ ಸ್ವಯಂ ಪರೀಕ್ಷೆ ವಿಧಾನಗಳು ಗೊತ್ತಿರಲಿಲ್ಲ ಎಂಬುದು ಬಯಲಾಗಿದೆ. ಈ ಸಂಶೋಧನಾ ವರದಿಯನ್ನು ಅಂತಾರಾಷ್ಟ್ರೀಯ ಬಯೋ ಮೆಡಿಕಲ್ ಸೈನ್ಸ್‌ನ ಬಯೋ ಮೆಡಿಸಿನ್ ಜರ್ನಲ್‌ನಲ್ಲಿ ಪ್ರಕಟವಾಗಿದೆ.

ಬದಲಾದ ಜೀವನಶೈಲಿ, ತಡವಾಗಿ ಮದುವೆ, ಮಕ್ಕಳಿಗೆ ಹಾಲುಣಿಸುವ ಅವಧಿ ಕಡಿಮೆ ಆಗುತ್ತಿರುವುದು ಸೇರಿದಂತೆ ಹಲವು ಅಂಶಗಳು ಗ್ರಾಮೀಣ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತಿವೆ.

ಚಿಕಿತ್ಸೆ ಸೌಲಭ್ಯಗಳ ಕೊರತೆ

ಗ್ರಾಮೀಣ ಪ್ರದೇಶಗಳಲ್ಲಿ ಕ್ಯಾನ್ಸರ್ ತಪಾಸಣೆ ಮತ್ತು ಚಿಕಿತ್ಸೆಗೆ ಅಗತ್ಯವಿರುವ ಮೂಲಸೌಕರ್ಯ ಕೊರತೆ ಕೂಡ ಪ್ರಕರಣಗಳ ಹೆಚ್ಚಳಕ್ಕೆ ಕಾರಣವಾಗಿದೆ. ಸ್ತನ ಕ್ಯಾನ್ಸರ್ ರೋಗಿಗಳು ಕಿಮೊಥೆರಪಿ ಚಿಕಿತ್ಸೆ ಅಥವಾ ತಜ್ಞ ವೈದ್ಯರನ್ನು ಭೇಟಿಯಾಗಲು 100 ಕಿ.ಮೀ ಹೆಚ್ಚು ದೂರ ಪ್ರಯಾಣಿಸಬೇಕಾದ ಪರಿಸ್ಥಿತಿ ಇದೆ. ಇದರಿಂದ ಬಹುತೇಕರು ಚಿಕಿತ್ಸೆಯಿಂದ ದೂರ ಉಳಿಯುತ್ತಿದ್ದಾರೆ.

ರಾಜ್ಯ ಸರ್ಕಾರ ಇತ್ತೀಚೆಗೆ ಗೃಹ ಆರೋಗ್ಯ ಯೋಜನೆ ಜಾರಿಗೊಳಿಸಿದ್ದರೂ ನಿರೀಕ್ಷಿತ ಪ್ರಮಾಣದಲ್ಲಿ ಸ್ಪಂದನೆ ಸಿಗುತ್ತಿಲ್ಲ. ಈ ಅವಧಿಯಲ್ಲಿ ಪ್ರಕರಣಗಳು ಪತ್ತೆಯಾದರೂ ನಿಯಮಿತ ತಪಾಸಣೆ ನಿರ್ಲಕ್ಷಿಸುತ್ತಿರುವುದರಿಂದ ಸಮಸ್ಯೆ ಬಿಗಡಾಯಿಸಿದೆ. ಒಂದು ಪ್ರದೇಶದಲ್ಲಿ ಒಬ್ಬರಿಗೆ ಸ್ತನ ಕ್ಯಾನ್ಸರ್ ಕಾಣಿಸಿಕೊಂಡಾಗ ಹಲವರಲ್ಲಿ ಕೊಂಚ ಆತಂಕ ಸೃಷ್ಟಿಯಾಗುತ್ತದೆ. ಆದರೆ, ಆರು ತಿಂಗಳು ಕಳೆಯುವಷ್ಟರಲ್ಲಿ ಆ ಭೀತಿ ದೂರವಾಗುತ್ತದೆ. ನಿರ್ಲಕ್ಷ್ಯ ಮುಂದುವರಿಯುತ್ತದೆ. ಕನಿಷ್ಠ ಮೂರರಿಂದ ಆರು ತಿಂಗಳಿಗೊಮ್ಮೆ ತಪಾಸಣೆಗೆ ಒಳಗಾದರೆ ಸ್ತನ ಕ್ಯಾನ್ಸರ್ ಪತ್ತೆ ಸುಲಭವಾಗಲಿದೆ. ಜತೆಗೆ ಆರಂಭಿಕ ಚಿಕಿತ್ಸೆಯಿಂದ ಕಾಯಿಲೆ ಗುಣಪಡಿಸಬಹುದು ಎಂಬುದು ವೈದ್ಯರ ಮಾತು.

ಸ್ತನ ಕ್ಯಾನ್ಸರ್ ಪತ್ತೆಗೆ ರಾಜ್ಯ ಸರ್ಕಾರ ಗೃಹ ಆರೋಗ್ಯ ಯೋಜನೆ ಜಾರಿಗೊಳಿಸಿದೆ. ಎನ್ ಸಿಡಿ ಕಾರ್ಯಕ್ರಮದಲ್ಲೂ (ಸಾಂಕ್ರಾಮಿಕವಲ್ಲದ ಕಾಯಿಲೆಗಳು) ಸ್ತನ ಕ್ಯಾನ್ಸರ್ ಪತ್ತೆ ಮಾಡಲಾಗುತ್ತಿದೆ. ಈ ಹಿಂದೆ ತಪಾಸಣೆ ಪ್ರಮಾಣ ತುಂಬಾ ಕಡಿಮೆ ಇತ್ತು. ಈಗ ತಪಾಸಣೆ ವೇಗವಾಗಿರುವುದರಿಂದ ಸ್ತನ ಕ್ಯಾನ್ಸರ್ ಪ್ರಕರಣಗಳು ಹೆಚ್ಚು ದೃಢಪಡುತ್ತಿವೆ ಎಂದು ರಾಮನಗರ ಜಿಲ್ಲಾಸ್ಪತ್ರೆಯ ವೈದ್ಯರೊಬ್ಬರು ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.

ರಾಜ್ಯದಲ್ಲಿ ಸ್ತನ ಕ್ಯಾನ್ಸರ್ ತಪಾಸಣೆ ಹೆಚ್ಚಾಗಿರುವುದರಿಂದ ಪ್ರಕರಣಗಳು ಏರಿಕೆಯಾಗಿವೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಹೆಚ್ಚು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿವೆ. ಜಿಲ್ಲೆಗೊಂದು ಕ್ಯಾನ್ಸರ್ ಆಸ್ಪತ್ರೆ ಸ್ಥಾಪಿಸಲು ನಿರ್ಧರಿಸಲಾಗಿದೆ. ಸೂಕ್ತ ಚಿಕಿತ್ಸೆ ಮೂಲಕ ಮಹಿಳೆಯರ ಮರಣ ಪ್ರಮಾಣ ತಗ್ಗಿಸಲು ಕ್ರಮ ವಹಿಸಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ ಪ್ರಕಾಶ ಪಾಟೀಲ್ ಅವರು 'ದ ಫೆಡರಲ್ ಕರ್ನಾಟಕ'ಕ್ಕೆ ತಿಳಿಸಿದರು.

ಜೀವನ ಶೈಲಿಯಿಂದಲೇ ರೋಗ ಉಲ್ಬಣ

ರಾಜ್ಯದ ಹಲವು ಭಾಗಗಳಲ್ಲಿ ಸ್ತನ ಕ್ಯಾನ್ಸರ್ ನಿಯಂತ್ರಣಕ್ಕೆ ಸರ್ಕಾರ ಹಾಗೂ ಸರ್ಕಾರೇತರ ಸಂಸ್ಥೆಗಳು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿವೆ. ಆದಾಗ್ಯೂ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿರುವುದು ಪರಿಣಾಮಕಾರಿ ಕ್ರಮಗಳ ಅನಿವಾರ್ಯತೆಯನ್ನು ಸೃಷ್ಟಿಸಿದೆ.

ಜೀವನಶೈಲಿ ಬದಲಾವಣೆಯಿಂದಲೇ ಹೆಚ್ಚು ಸ್ತನ ಕ್ಯಾನ್ಸರ್ ಪ್ರಕರಣಗಳು ಕಾಣಿಸಿಕೊಳ್ಳುತ್ತಿವೆ. ಗ್ರಾಮೀಣ ಭಾಗದ ಬಹುತೇಕರು ನಗರಕ್ಕೆ ವಲಸೆ ಹೋಗುತ್ತಿದ್ದು, ನಗರದ ಜೀವನ ಶೈಲಿ ಅಪ್ಪಿಕೊಳ್ಳುತ್ತಿದ್ದಾರೆ. ಹಾಗಾಗಿ ನಗರದಲ್ಲಿ ಹೆಚ್ಚು ಪ್ರಕರಣಗಳು ಪತ್ತೆಯಾಗುತ್ತಿವೆ. ಗ್ರಾಮೀಣ ಭಾಗದಲ್ಲಿ ಮೂರು ಹಾಗೂ ನಾಲ್ಕನೇ ಹಂತದಲ್ಲಿ ಪ್ರಕರಣಗಳು ಪತ್ತೆಯಾಗುತ್ತಿವೆ. ಕೆಲವರು ಸ್ತನ ಕ್ಯಾನ್ಸರ್ ಇದ್ದರೂ ನಿಗೂಢವಾಗಿ ಚಿಕಿತ್ಸೆ ಪಡೆಯುತ್ತಾರೆ. ಇನ್ನೂ ಕೆಲವರು ಹಂತಗಳು ದಾಟಿ ಸಾವಿಗೆ ತುತ್ತಾಗುತ್ತಾರೆ, ಕಾಯಿಲೆ ಆರಂಭಿಕ ಹಂತದಲ್ಲೇ ಪತ್ತೆಯಾದರೆ ಜೀವ ಉಳಿಸಬಹುದು. ಹಾಗಾಗಿ ಎಲ್ಲರೂ ಸ್ತನ ಕ್ಯಾನ್ಸರ್ ಲಕ್ಷಣಗಳು ಕಂಡು ಬರುತ್ತಿದ್ದಂತೆ ತಪಾಸಣೆಗೆ ಒಳಗಾಗಬೇಕು ಎಂದು ರಾಮನಗರ ಜಿಲ್ಲೆಯಲ್ಲಿ ಸ್ತನ ಕ್ಯಾನ್ಸರ್ ತಪಾಸಣೆ ಹಾಗೂ ಜಾಗೃತಿ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡಿರುವ ಹೆಸರು ಹೇಳಲು ಇಚ್ಛಿಸದ ವೈದ್ಯರೊಬ್ಬರು ತಿಳಿಸಿದರು.

ಕೇಂದ್ರ ಸರ್ಕಾರ ಕೂಡ ಪ್ರಾಜೆಕ್ಟ್ ಸ್ವಾಸ್ಥ್ಯ ಸೇತು ಹೆಸರಲ್ಲಿ ತಪಾಸಣೆ ಕೈಗೊಂಡಿದೆ. ಮೊಬೈಲ್ ಮ್ಯಾಮೋಗ್ರಫಿ ಘಟಕಗಳು ಗ್ರಾಮೀಣ ಪ್ರದೇಶಗಳಿಗೆ ತೆರಳಿ ಉಚಿತ ತಪಾಸಣೆ ಶಿಬಿರ ನಡೆಸುತ್ತಿದ್ದು, ಕಾಯಿಲೆ ಪತ್ತೆ ಹಚ್ಚುವಲ್ಲಿ ಕಾರ್ಯನಿರತವಾಗಿವೆ ಎಂದು ವಿವರಿಸಿದರು.

ಕಾಡುವ ಹಿಂಜರಿಕೆ, ಸಂಕೋಚ

ಗ್ರಾಮೀಣ ಪ್ರದೇಶದ ಮಹಿಳೆಯರು ಆರೋಗ್ಯ ಸಮಸ್ಯೆಗಳನ್ನು ಹೇಳಿಕೊಳ್ಳಲು ಹಿಂಜರಿಯುತ್ತಾರೆ. ಸ್ತನ ಕ್ಯಾನ್ಸರ್ ಲಕ್ಷಣ ಹಾಗೂ ವಿಧಾನಗಳ ಅರಿವಿಲ್ಲದ ಕಾರಣ ಬಹುತೇಕರು ತಪಾಸಣೆಯಿಂದ ಹೊರಗುಳಿಯುತ್ತಿದ್ದಾರೆ. ಕಾಯಿಲೆ ದೃಢಪಟ್ಟರೆ ಸಮಾಜದ ದೃಷ್ಟಿಕೋನ ಬದಲಾಗಲಿದೆ ಎಂಬ ಆತಂಕವೂ ಹಲವರಲ್ಲಿದೆ. ಆದ್ದರಿಂದ ಸ್ತನ ಸ್ವಯಂ ಪರೀಕ್ಷೆಗೂ ಹಿಂದೇಟು ಹಾಕುತ್ತಿದ್ದು, ಪ್ರಕರಣಗಳ ಹೆಚ್ಚಳಕ್ಕೆ ಕಾರಣವಾಗಿದೆ.

ಕಾಯಿಲೆ ಏರಿಕೆಗೆ ಕಾರಣಗಳೇನು?

ಗ್ರಾಮೀಣ ಭಾಗದಲ್ಲೂ ಆಧುನಿಕ ಜೀವನಶೈಲಿ ಪಸರಿಸುತ್ತಿರುವುದು, ಸಂತಾನ ಅಭ್ಯಾಸಗಳಲ್ಲಿನ ಬದಲಾವಣೆ, ಕೆಲಸದ ಒತ್ತಡದಿಂದಲೂ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಆತಂಕ ಹೆಚ್ಚುತ್ತಿದೆ.

ಚಿಕಿತ್ಸೆಗೆ ಹಣಕಾಸು ಸೌಲಭ್ಯ ಕೊರತೆ ಹಾಗೂ ಸಮೀಪದಲ್ಲಿ ಪರಿಣಾಮಕಾರಿ ಚಿಕಿತ್ಸಾ ಸೌಲಭ್ಯಗಳ ಅಲಭ್ಯತೆಯೂ ಕಾಯಿಲೆ ವ್ಯಾಪಿಸಲು ಕಾರಣವಾಗಲಿದೆ.

ಕೆಲ ಮಹಿಳೆಯರು ನೋವುರಹಿತವಾದ ಸ್ತನದ ಗಡ್ಡೆಗಳನ್ನು ನಿರ್ಲಕ್ಷಿಸಿದರೆ, ಮತ್ತೆ ಕೆಲವರು ವೈದ್ಯಕೀಯ ತಪಾಸಣೆಗೆ ಒಳಪಡದೇ ವಿಳಂಬ ಮಾಡುವುದರಿಂದ ಕಾಯಿಲೆ ಗುಣವಾಗುವುದು ಕ್ಲಿಷ್ಟಕರವಾಗುತ್ತಿದೆ.


Read More
Next Story