ಬೆಳಕು ಬಂತು ಬೀದಿಗೆ: ಕೊನೆಯಾಯ್ತು ಶೆಟ್ಟಿಹಳ್ಳಿಯ ಕತ್ತಲು!
x

ಬೆಳಕು ಬಂತು ಬೀದಿಗೆ: ಕೊನೆಯಾಯ್ತು ಶೆಟ್ಟಿಹಳ್ಳಿಯ ಕತ್ತಲು!

ನಾಡಿಗೆ ಬೆಳಕು ನೀಡಲು ಬದುಕು ತ್ಯಾಗ ಮಾಡಿದ ಶರಾವತಿ ಸಂತ್ರಸ್ತರ ಪಾಲಿನ ಶಾಪ ಕೊನೆಗೂ ವಿಮೋಚನೆ


ಅಭಯಾರಣ್ಯದ ನಡುವಿನ ಈ ಪುಟ್ಟ ಹಳ್ಳಿಯ ೬೦ ವರ್ಷಗಳ ಬೆಳಕಿನ ಕನಸು ಕೊನೆಗೂ ನಿಜವಾಗಿದೆ. ಕಗ್ಗಾಡಿನ ನಡುವಿನ ಕಗ್ಗತ್ತಲಿನಲ್ಲಿ ಆರು ದಶಕ ಕಳೆದ ಹಳ್ಳಿಗರ ಮನೆಗಳಲ್ಲಿ ಕೊನೆಗೂ ಬೆಳಕು ಮೂಡಿದೆ.

ಹೌದು, ಊರು- ಮನೆಯ ಬೆಳಕಿಗಾಗಿ ವಿದ್ಯುತ್‌ ಸಂಪರ್ಕಕ್ಕಾಗಿ ದಶಕಗಳಿಂದ ನಡೆಸಿದ ಹೋರಾಟ ಕೊನೆಗೂ ಕೈಗೂಡಿದ ಸಂಭ್ರಮದ ಸಂಗತಿ. ಅದರಲ್ಲೂ, ನಾಡಿಗೇ ಬೆಳಕು ನೀಡಲು ಕಟ್ಟಿದ ಜಲಾಶಯದ ನೀರಲ್ಲಿ ತಮ್ಮ ಮನೆಮಠ ಸೇರಿ ಬದುಕನ್ನೇ ಜಲಸಮಾಧಿ ಮಾಡಿದ ಜನರೇ ಅರವತ್ತು ವರ್ಷ ಕತ್ತಲಿನಲ್ಲಿ ಜೀವ ಸವೆಸಿದ ಶಾಪಗ್ರಸ್ಥ ಸ್ಥಿತಿಗೆ ಕೊನೆಗೂ ಮುಕ್ತಿ ಸಿಕ್ಕ ಕ್ಷಣ. ಹಾಗಾಗಿ, ಶಿವಮೊಗ್ಗ ಸಮೀಪದ ಶೆಟ್ಟಿಹಳ್ಳಿ ಮತ್ತು ಚಿತ್ರಶೆಟ್ಟಿಹಳ್ಳಿ ಎಂಬ ಅವಳಿ ಹಳ್ಳಿಗಳಿಗೆ ಕೊನೆಗೂ ವಿದ್ಯುತ್‌ ಸಂಪರ್ಕ ಸಿಕ್ಕಿದೆ. ಶರಾವತಿ ಜಲವಿದ್ಯುತ್‌ ಯೋಜನೆಯ ಸಂತ್ರಸ್ತರೇ ಇರುವ ಆ ಕುಗ್ರಾಮಗಳ ಮನೆಗಳಲ್ಲಿ ಕೊನೆಗೂ ವಿದ್ಯುತ್‌ ಬೆಳಗಿದೆ.

ಶೆಟ್ಟಿಹಳ್ಳಿಯ ಮುಳುಗಡೆ ಬದುಕು

ನಟಿ ಸೌಂದರ್ಯ ಅವರ ನಟನೆಯ ಕೊನೆಯ ಸಿನಿಮಾ, ಗಿರೀಶ್ ಕಾಸರವಳ್ಳಿ ನಿರ್ದೇಶನದ ’ದ್ವೀಪ’ದ ಒಂದು ದೃಶ್ಯದಲ್ಲಿ ನೋಡನೋಡುತ್ತಿದ್ದಂತೆಯೇ ಮನೆಯ ಸುತ್ತ ಹಿನ್ನೀರು ಏರಿಬಂದುಬಿಡುತ್ತದೆ. ಇದ್ದಕ್ಕಿದ್ದಂತೆ ಮನೆಯೇ ದ್ವೀಪವಾಗಿ, ಮನೆಮಂದಿ ಮುಳುಗುವ ಭೀತಿ ಎದುರಾಗುತ್ತದೆ. ಲಿಂಗನಮಕ್ಕಿ ಜಲಾಶಯದಲ್ಲಿ ಮುಳುಗಡೆಯಾದವರ ಅಸಹಾಯಕತೆಯನ್ನು ನೋಡುಗರ ಎದೆ ಬಿರಿಯುವಂತೆ ಕಟ್ಟಿಕೊಟ್ಟ ಆ ಸಿನಿಮಾದ ದೃಶ್ಯಾವಳಿಗಿಂತ ಭೀಕರ ಎತ್ತಂಗಡಿಯ ಯಾತನೆ ಅನುಭವಿಸಿದವರು ಶಿವಮೊಗ್ಗ ಜಿಲ್ಲಾ ಕೇಂದ್ರದಿಂದ ಕೇವಲ ೧೮ ಕಿ.ಮೀ ದೂರದ ಶೆಟ್ಟಿಹಳ್ಳಿಯ ಜನ.


ಶೆಟ್ಟಿಹಳ್ಳಿ ಅಭಯಾರಣ್ಯದ ನಟ್ಟನಡುವಿನ ದಟ್ಟ ಕಾಡಿನ ಅವಳಿ ಕುಗ್ರಾಮ ಶೆಟ್ಟಿಹಳ್ಳಿ ಮತ್ತು ಚಿತ್ರಶೆಟ್ಟಿಹಳ್ಳಿ. ಬಹುಶಃ ಬೃಹತ್ ಯೋಜನೆಗಳ ಎತ್ತಂಗಡಿಯ ನೋವಿನ ಕಥನಗಳಲ್ಲೇ ಅತ್ಯಂತ ಕರಾಳ ಸಾಕ್ಷಿಯಾಗಿ ಸುಮಾರು ೮೦ ಮನೆಗಳ ಈ ಗ್ರಾಮ ಇದೆ. ಏಕೆಂದರೆ, ಇಲ್ಲಿನ ಬಹುತೇಕ ಕುಟುಂಬಗಳು ಶರಾವತಿ ಕಣಿವೆಯ ಜಲವಿದ್ಯುತ್‌ ಯೋಜನೆಗಳಿಂದಾಗಿ ಕೇವಲ ೭೫ ವರ್ಷಗಳ ಅವಧಿಯಲ್ಲೇ ಎರಡೆರಡು ಬಾರಿ ಎತ್ತಂಗಡಿಯಾಗಿವೆ.

೧೯೪೦ರಲ್ಲಿ ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಹಿರೇಭಾಸ್ಕರ ಅಥವಾ ಮಡೇನೂರು ಎಂಬಲ್ಲಿ ನಿರ್ಮಾಣವಾದ ಮಲೆನಾಡಿನ ಮೊದಲ ಜಲವಿದ್ಯುತ್ ಯೋಜನೆಯ ಜಲಾಶಯದಲ್ಲಿ ಮುಳುಗಡೆಯಾಗಿ ಜಮೀನು- ಮನೆ ಕಳೆದುಕೊಂಡು ಮೊದಲ ಬಾರಿಗೆ ಮುಳಗಡೆ ಸಂತ್ರಸ್ತರಾದ ಈ ಜನ, ಬಳಿಕ ಶರಾವತಿ ನದಿಯಗುಂಟ ತಮ್ಮಷ್ಟಕ್ಕೆ ತಾವು ನೆಲೆ ಕಂಡುಕೊಂಡರು. ಆದರೆ, ೧೯೫೯-೬೦ರಲ್ಲಿ ಅದೇ ನದಿಗೆ ಲಿಂಗನಮಕ್ಕಿ ಜಲವಿದ್ಯುತ್ ಯೋಜನೆಯ ಬೃಹತ್ ಅಣೆಕಟ್ಟು ನಿರ್ಮಾಣವಾದಾಗ, ಮತ್ತೆ ಎರಡನೇ ಬಾರಿಗೆ ಸಂತ್ರಸ್ತರಾದರು. ಕಷ್ಟಪಟ್ಟು ಕಟ್ಟಿದ ಆಸ್ತಿ, ಮನೆ ಕೇವಲ ಇಪ್ಪತ್ತೇ ವರ್ಷದಲ್ಲಿ ಮತ್ತೆ ನೀರು ಪಾಲಾಯಿತು. ಸಾವಿರಾರು ಕುಟುಂಬಗಳು ಇವರಂತೆಯೇ ಎತ್ತಂಗಡಿಯಾದರು.

ಬೆಳಕಿಗಾಗಿ ಬದುಕು ಕೊಟ್ಟವರ ಬದುಕೇ ಕತ್ತಲು!

ಹೊಲಗದ್ದೆ, ಮನೆಮಠ ತೊರೆದು ೧೯೬೨ರಲ್ಲಿ ಶೆಟ್ಟಿಹಳ್ಳಿ ಎಂಬ ದುರ್ಗಮ ಕಾಡಿನ ನಡುವಿನ ಈ ಜಾಗಕ್ಕೆ ಬಂದ, ಆ ಮುಳುಗಡೆ ಸಂತ್ರಸ್ತರ ಪೈಕಿ ಸುಮಾರು ೨೫ ಕುಟುಂಬಗಳಿಗೆ ಸರ್ಕಾರ ಭೂಮಿ ಮಂಜೂರು ಮಾಡಿತು. ಆದರೆ, ಹಕ್ಕುಪತ್ರದ ಹೊರತಾಗಿ ಅವರಿಗೆ ಭೂಮಿಯ ಪಕ್ಕಾಪೋಡಿ ಮಾಡಿ ಖಾತೆ ಮಾಡಿಕೊಡಲಿಲ್ಲ. ಭೂಮಿಯ ಸಂಪೂರ್ಣ ಕಾನೂನುಬದ್ಧ ಹಕ್ಕುದಾರಿಕೆ ಈ ೬೦ ವರ್ಷ ಕಳೆದರೂ ಕನಸಾಗಿಯೇ ಉಳಿದಿದೆ. ಅಲ್ಲದೆ, ಇಲ್ಲಿನ ಜನರಿಗೆ, ಇಲ್ಲಿ ಬಂದು ನೆಲೆಸಿ ೬೦ ವರ್ಷಗಳ ಬಳಿಕವೂ ವಿದ್ಯುತ್, ಶುದ್ಧ ಕುಡಿಯುವ ನೀರು, ಪಕ್ಕಾ ರಸ್ತೆ ಮುಂತಾದ ಸೌಲಭ್ಯಗಳು ಈವರೆಗೂ ಕನಸಾಗಿಯೇ ಉಳಿದಿದ್ದವು.

ಈ ಹಳ್ಳಿಗರು ಹೀಗೆ ದಶಕಗಳ ಕಾಲ ಸಕಲ ಸೌಲಭ್ಯವಂಚಿತರಾಗಿ ಶಾಪಗ್ರಸ್ಥ ಸ್ಥಿತಿಯಲ್ಲಿರಲು ಕಾರಣ ಆ ಊರಿನದೇ ಹೆಸರು ಹೊತ್ತಿರುವ ಶೆಟ್ಟಿಹಳ್ಳಿ ಅಭಯಾರಣ್ಯ. ಶರಾವತಿ ಕಣಿವೆಯಿಂದ ಎತ್ತಂಗಡಿಯಾಗಿ ಈ ಕುಟುಂಬಗಳು ಇಲ್ಲಿ ಬಂದು ನೆಲೆಸಿದ ೧೨ ವರ್ಷಗಳ ಬಳಿಕ ಜಾರಿಗೆ ಬಂದ ಶೆಟ್ಟಿಹಳ್ಳಿ ಅಭಯಾರಣ್ಯ ಯೋಜನೆ ಈ ನತದೃಷ್ಟರ ಬದುಕನ್ನು ಮತ್ತೊಮ್ಮೆ ಮುಳುಗಿಸಿತು. ಅಲ್ಲಿನ ಕಾಡನ್ನು ಅಭಯಾರಣ್ಯ ಎಂದು ಘೋಷಿಸುವ ಮುನ್ನವೇ, ಸರ್ಕಾರದ ಬೃಹತ್ ಯೋಜನೆಗಳಿಂದಾಗಿ ಎರಡೆರಡು ಬಾರಿ ಎತ್ತಂಗಡಿಯಾಗಿ ಬಂದು ನೆಲೆಸಿದ ಕುಟುಂಬಗಳಿದ್ದರೂ, ಅವರ ದಯನೀಯ ಸ್ಥಿತಿಯನ್ನು ಪರಿಗಣಿಸದೇ ಅಭಯಾರಣ್ಯ ಅತ್ಯಂತ ಕಠಿಣ ಕಾನೂನುಗಳನ್ನು ನಿರ್ದಯವಾಗಿ ಹೇರಲಾಯಿತು.

೧೯೮೦ರ ದಶಕದಲ್ಲಿ ವಿದ್ಯುತ್ ಮಾರ್ಗ ಕಾಮಗಾರಿ ಆರಂಭವಾದರೂ, ಅರಣ್ಯ ಕಾಯ್ದೆಯನ್ನು ಬಳಸಿ ಪ್ರಹಾರ ಮಾಡಲಾಯಿತು. ಹಾಗಾಗಿ ಕಾಡಿನ ದಾರಿಯಲ್ಲಿ ಅಂದು ನೆಟ್ಟ ವಿದ್ಯುತ್ ಕಂಬಗಳು ಈಗಲೂ ತಂತಿ ಕಾಣದೇ ಹಾಗೇ ನಿಂತಿವೆ. ಇನ್ನು ರಸ್ತೆ ನಿರ್ಮಾಣ, ಕುಡಿಯುವ ನೀರಿನ ಪೈಪ್‌ಲೈನ್‌ಗೂ ಅರಣ್ಯ ಇಲಾಖೆ ಈವರೆಗೆ ಅವಕಾಶ ನೀಡಿರಲಿಲ್ಲ.



ಹೊಸ ಭರವಸೆಯ ಬೆಳಕು

ಆದರೆ, ಗ್ರಾಮಸ್ಥರ ನಿರಂತರ ಹೋರಾಟದ ಫಲವಾಗಿ ನಾಲ್ಕು ವರ್ಷಗಳ ಹಿಂದೆ ಕುಡಿಯುವ ನೀರಿನ ಪೈಪ್‌ಲೈನ್ ಹಾಕಲಾಗಿದೆ. ಮಣ್ಣಿರ ಕಚ್ಛಾ ರಸ್ತೆಯನ್ನೇ ದುರಸ್ತಿ ಮಾಡಿಸಲಾಗಿತ್ತು.

ಅದೇ ವೇಳೆ, ವಿದ್ಯುತ್ ವಂಚಿತ ಗ್ರಾಮಸ್ಥರ ನೆರವಿಗೆ ಬಂದಿದ್ದ ಮೆಸ್ಕಾಂ, ಮನೆಗಳಿಗೆ ಸೋಲಾರ್ ದೀಪ ಅಳವಡಿಸಿತ್ತು. ಆದರೆ, ಭಾರೀ ಮಳೆ-ಗಾಳಿ ಹಾಗೂ ಬ್ಯಾಟರಿ ಸಮಸ್ಯೆಯಿಂದಾಗಿ ಆ ತಾತ್ಕಾಲಿಕ ಪರ್ಯಾಯ ವ್ಯವಸ್ಥೆ ಹೆಚ್ಚು ದಿನ ಕತ್ತಲ ಊರಿನ ಬೆಳಕಾಗಲಿಲ್ಲ. ಈ ನಡುವೆ, ನೆಲದಡಿ ಕೇಬಲ್ ಅಳವಡಿಕೆ ಮೂಲಕ ಗ್ರಾಮಕ್ಕೆ ವಿದ್ಯುತ್ ಸರಬರಾಜು ಮಾಡುವ ಶಾಶ್ವತ ಬೆಳಕಿನ ವ್ಯವಸ್ಥೆಯ ಪ್ರಯತ್ನಗಳು ಆಡಳಿತದ ಮಟ್ಟದಲ್ಲಿ ಆಮೆಗತಿಯಲ್ಲಿ ನಡೆಯುತ್ತಿದ್ದವು.

ಮೆಸ್ಕಾಂ ಕಾಮಗಾರಿ ಯೋಜನೆ ತಯಾರಿಯಿಂದ ಕೇಂದ್ರ ಪರಿಸರ ಸಚಿವಾಲಯದ ಉನ್ನತ ಮಟ್ಟದ ಸಮಿತಿ ತಾತ್ವಿಕ ಒಪ್ಪಿಗೆ ದೊರೆತು ಅಂತಿಮವಾಗಿ ಕಾಮಗಾರಿ ಆರಂಭವಾಗುವವರೆಗೆ ವರ್ಷಗಳ ಕಾಲ ಗ್ರಾಮದ ಮುಖಂಡರು ಮತ್ತು ಸ್ಥಳೀಯ ಜನಪ್ರತಿನಿಧಿಗಳು ನಡೆಸಿದ ಪ್ರಯತ್ನಗಳು ಅಂತಿಮವಾಗಿ ಕೊನೆಗೂ ಫಲ ಕೊಟ್ಟಿವೆ. ಕಾಡಿನ ಊರು ಕೊನೆಗೂ ಮುಕ್ಕಾಲು ಶತಮಾನದ ಕತ್ತಲಕೂಪದಿಂದ ಬೆಳಕಿಗೆ ಮೈತೆರೆದಿದೆ.

ಬೆಳಕಾಯಿತು ಕಾಡು, ಬೆಳಗಾಯಿತು ಬಾಳು!

ನೂರಾರು ಅಡೆತಡೆಗಳನ್ನು ಮೀರಿ ಕೊನೆಗೂ ಊರಿನ ಬೀದಿಗೆ, ಬೀದಿಯ ಮನೆ-ಮನೆಗೆ ತಲುಪಿದ ಬೆಳಕು, ಕೇವಲ ಊರು-ಮನೆಯನ್ನು ಮಾತ್ರ ಬೆಳಗಲಿಲ್ಲ; ಬೆಳಕಿನ ಬೆನ್ನು ಹತ್ತಿದ ಊರಿನ ಹಿರಿಯ ಜೀವಗಳ ಮಂಜುಗಣ್ಣಿನ ತುಂಬಾ ಈಗ ಹೊಸ ಬೆಳಕಿನ ಕಾಂತಿ ಮಿರುಗುತ್ತಿದೆ. ಮಬ್ಬು ಬೆಳಕಿನ ಅಡುಗೆ ಮನೆಯಲ್ಲಿ ಅಡುಗೆ ಅಟ್ಟುತ್ತಿದ್ದ ಹೆಂಗಳೆಯರ ಮುಖದಲ್ಲಿ ಹೊಸ ಬೆಳಕು ಮಿನುಗುತ್ತಿದೆ. ಶಾಶ್ವತ ಬೆಳಕಿಲ್ಲದೆ ಮಂದ ಬೆಳಕಿನಲ್ಲೇ ಪುಸ್ತಕಗಳಿಗೆ ಕಣ್ಣು ಕೀಲಿಸುತ್ತಿದ್ದ ಮಕ್ಕಳ ಪಾಲಿಗಂತೂ ಈ ಬೆಳಕಿನ ಸಂಭ್ರಮ ಮುಗಿಲುಮುಟ್ಟಿದೆ. ಹೊಸ ಬೆಳಕಿನ, ಹೊಸ ಓದಿನ, ಹೊಸ ಅರಿವಿನ ಉಲ್ಲಾಸ, ಭರವಸೆ ಅವರ ಕಣ್ಣನ್ನೂ ಬೆಳಗುತ್ತಿದೆ! ಹೀಗೆ ಬೆಳಕು ಊರನ್ನೂ, ಊರ ಬದುಕನ್ನೂ ಬೆಳಗಿದೆ, ಬದಲಿಸಿದೆ!

Read More
Next Story