ಬೆಂಗಳೂರು ಸಾಂಸ್ಕೃತಿಕ ರಂಗಸ್ಥಳ ರವೀಂದ್ರ ಕಲಾಕ್ಷೇತ್ರಕ್ಕೆ ಈಗ ವಜ್ರದ ಹೊಳಪು!
x

ಬೆಂಗಳೂರು ಸಾಂಸ್ಕೃತಿಕ ರಂಗಸ್ಥಳ ರವೀಂದ್ರ ಕಲಾಕ್ಷೇತ್ರಕ್ಕೆ ಈಗ ವಜ್ರದ ಹೊಳಪು!

ಕರ್ನಾಟಕ ಸಾಂಸ್ಕೃತಿಕ-ಸಾಮಾಜಿಕ ಲೋಕದ ಸಾಕ್ಷಿ ಪ್ರಜ್ಞೆಯಂತಿರುವ ಹಾಗೂ ಬೆಂಗಳೂರಿನ ಕೇಂದ್ರ ಭಾಗದಲ್ಲಿ ಜಾತಿ, ಮತಗಳ ಬೇಧವಿಲ್ಲದೆ, ಎಲ್ಲರೊಳಗೊಂದಾಗಿರುವ ರವೀಂದ್ರ ಕಲಾಕ್ಷೇತ್ರಕ್ಕೆ ಈಗ ಅರವತ್ತರ ಹರೆಯ. ಆರು ದಶಕಗಳ ಕನ್ನಡ ನಾಡಿನ ಕಥೆಯನ್ನು ಹೇಳಲು ನಿಂತಿರುವ ಕಲಾಕ್ಷೇತ್ರ ಲಕ್ಷಾಂತರ ಕಲಾವಿದರ ತವರು ಮನೆ. ಹಲವು ಸಾಮಾಜಿಕ ಆಂದೋಲನಗಳಿಗೆ ಸಾಕ್ಷಿ ಕಲ್ಲು.


ಕರ್ನಾಟಕ ರಂಗಮಂದಿರಗಳಲ್ಲಿ ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ರಂಗಭೂಮಿಯ ಮನಸ್ಸುಗಳಲ್ಲಿ ನೆಲೆನಿಂತಿರುವುದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರ. ನಾಡಿನ ಈ ಸಾಂಸ್ಕೃತಿಕ ಕೇಂದ್ರವನ್ನು ಆ ರಂಗದವರು ಪ್ರೀತಿಯಿಂದ ಕರೆಯುವುದು ಕಲಾಕ್ಷೇತ್ರವೆಂದೇ.

ರವೀಂದ್ರ ಕಲಾಕ್ಷೇತ್ರ ದೇಶದ ಅತ್ಯುತ್ತಮ ರಂಗಮಂದಿರಗಳಲ್ಲಿ ಒಂದು. ಕನ್ನಡ ನಾಡಿನ ರಂಗಭೂಮಿ, ಸಾಹಿತ್ಯ, ಸಂಗೀತ, ನೃತ್ಯ ಕ್ಷೇತ್ರಗಳಿಗಷ್ಟೇ ಅಲ್ಲದೆ ಕರ್ನಾಟಕ ಕಂಡ ಅನೇಕ ಹೋರಾಟ, ಆಂದೋಲನಗಳಿಗೂ ಸಾಕ್ಷಿ ಪ್ರಜ್ಞೆ ಈ ರವೀಂದ್ರ ಕಲಾಕ್ಷೇತ್ರ. ಅಷ್ಟೇ ಅಲ್ಲ, ಸಾರ್ಕ್ ಸಮ್ಮೇಳನ, ರಷ್ಯಾ ಉತ್ಸವ, ಐಸಿಸಿಆರ್ ಮುಂತಾದ ರಾಷ್ಟ್ರಮಟ್ಟದ ಉತ್ಸವಗಳಿಗೆ ವೇದಿಕೆಯಾಗಿದ್ದು, ಕಲಾಕ್ಷೇತ್ರ.

ಅರವತ್ತರ ದಶಕದಲ್ಲಿ ಕೊಳೆಗೇರಿಯಾಗಿದ್ದ, ಸ್ಥಳದಲ್ಲಿ ಇಂದು ಈ ಭವ್ಯ ರವೀಂದ್ರ ಕಲಾಕ್ಷೇತ್ರ ತಲೆಎತ್ತಿ ಕರ್ನಾಟಕದ ಸಾಂಸ್ಕೃತಿಕ ಪರಂಪರೆಯ ದ್ಯೋತಕವಾಗಿ ನೆಲೆಚಿiiಗಿದೆ. ಇದು ಪ್ರೊಸೀನಿಯಂ ಮಾದರಿಯದು. ೧೯೬೩ರಲ್ಲಿ ಆರಂಭವಾದ ರವೀಂದ್ರ ಕಲಾಕ್ಷೇತ್ರಕ್ಕೆ ಮೂಲ ಪ್ರೇರಣೆ ಭಾರತ ಸರ್ಕಾರದ್ದು. ದೇಶಕ್ಕೆ ಮೊದಲ ನೊಬೆಲ್ ಪ್ರಶಸ್ತಿ ತಂದುಕೊಟ್ಟ ರವೀಂದ್ರನಾಥ ಟ್ಯಾಗೋರ್ ಅವರ ಜನ್ಮ ಶತಮಾನೋತ್ಸವದ ಅಂಗವಾಗಿ ನಿರ್ಮಾಣಗೊಂಡ ಈ ರಂಗಮಂದಿರಕ್ಕೆ ಅವರ ಹೆಸರನ್ನೇ ಇರಿಸಲಾಯಿತು.

ಆಗ ಬೆಂಗಳೂರು, ಭೋಪಾಲ್, ಹೈದರಾಬಾದ್, ಮುಂಬೈ, ಕೋಲ್ಕತ್ತಾಗಳಲ್ಲಿ ರಂಗಮಂದಿರಗಳನ್ನು ನಿರ್ಮಿಸಲು ಯೋಚಿಸಲಾಯಿತು. ಇದಕ್ಕಾಗಿ ಕೇಂದ್ರ ಸರ್ಕಾರ ಎರಡು ಲಕ್ಷ ಧನ ಸಹಾಯ ನೀಡಿತು. ಅಂದಿನ ಕರ್ನಾಟಕದ ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪ ೧.೫೦ ಲಕ್ಷ ರೂಪಾಯಿಗಳನ್ನು ಅನುದಾನವಾಗಿ ನೀಡಿದರು. ರಂಗಭೂಮಿ ಶಿಕ್ಷಣ ಕ್ಷೇತ್ರದಲ್ಲಿ ಅಪಾರ ಆಸಕ್ತಿ ಹೊಂದಿದ್ದ ಅಂದಿನ ಶಿಕ್ಷಣ ಸಚಿವ ಹುಮಾಯೂನ್ ಕಬೀರ್ ಅವರ ವೈಯಕ್ತಿಕ ಆಸಕ್ತಿಯ ಫಲವಾಗಿ ಈ ರಂಗಮಂದಿರ ನಿರ್ಮಾಣವಾಯಿತು.

ಕಲ್ಲಿನಿಂದಲೇ ಕಟ್ಟಲಾಗಿರುವ ಈ ವಾಸ್ತುವಿನ ಶಿಲ್ಪಿ ಅಮೇರಿಕಾದ ಚಾರ್ಲ್ಸ ವಿಲ್ಸನ್. ಇವರಿಗೆ ನೆರವು ನೀಡಿದವರು ಅಂದಿನ ಲೋಕೋಪಯೋಗಿ ಇಲಾಖೆಯ ಮುಖ್ಯ ಎಂಜಿನೀಯರ್ ಬಿ ಆರ್. ಮಾಣಿಕ್ಯಂ.

ಈ ರಂಗಮಂದಿರದ ಯೋಜನೆ ಕೇಂದ್ರ ಸರ್ಕಾರದ್ದಾದರೂ, ರಾಜ್ಯ ಸರ್ಕಾರ ಹಾಗೂ ಸಾರ್ವಜನಿಕರ ಸಹಭಾಗಿತ್ವದಲ್ಲಿ ಈ ರಂಗಮಂದಿರ ನಿರ್ಮಾಣಗೊಂಡಿತು. ಈ ರಂಗಮಂದಿರ ನಿರ್ಮಾಣಗೊಳ್ಳಲು ರಂಗಕರ್ಮಿಗಳು ಹಾಗೂ ಸಿನಿಮಾರಂಗದವರ ಕಾಣಿಕೆಯೂ ಇರುವುದನ್ನು ಇಲ್ಲಿ ನೆನಪಿಸಿಕೊಳ್ಳಲೇಬೇಕು. ಖ್ಯಾತ ತಮಿಳು ನಟ ನಡಿಗರ್ ತಿಲಕಂ ಎಂದೇ ಖ್ಯಾತರಾದ ಶಿವಾಜಿ ಗಣೇಶನ್ ಅವರು ಬೆಂಗಳೂರಿನಲ್ಲಿ ನಾಟಕ ಪ್ರದರ್ಶನ ನೀಡಿ, ಅದರಿಂದ ಸಂಗ್ರಹವಾದ ಒಂದು ಲಕ್ಷ ರೂಪಾಯಿ ದೇಣಿಗೆಯನ್ನು ಅಂದಿನ ಕಾಲಕ್ಕೆ ನೀಡಿರುವುದು ಸ್ಮರಣೀಯ ಸಂಗತಿ. ಹಾಗೆಯೇ ವೃತ್ತಿ ರಂಗಭೂಮಿಯ ಖ್ಯಾತ ನಟ ಮಹದೇವಸ್ವಾಮಿ ನೇತೃತ್ವದಲ್ಲಿ ಹಲವಾರು ಮಂದಿ ಹಣ ಸಂಗ್ರಹ ಮಾಡಿ ದೇಣಿಗೆ ನೀಡಿದ್ದಾರೆ ಎನ್ನುತ್ತಾರೆ, ರಂಗಕರ್ಮಿ ಶಶಿಧರ ಭಾರಿಘಾಟ್.

ವಿಶಾಲವಾದ ವೇದಿಕೆಗೆ ಅಂಟಿಕೊಂಡಂತೆ ಇರುವ ಅಚ್ಚುಕಟ್ಟಾದ ನಾಲ್ಕು ಗ್ರೀನ್ ರೂಮುಗಳು, ವೇಶಭೂಷಣ ಬದಲಾವಣೆಗಾಗಿಯೇ ವಿಶೇಷ ಕೊಠಡಿ. ಅಚ್ಚುಕಟ್ಟಾದ ಮತ್ತು ಪ್ರೇಕ್ಷಕರೊಂದಿಗೆ ಸಂವಾದ ಮಾಡಬಹುದಾದ ಆಪ್ತತೆ ಚಾಚುರಂಗ (ಏಪ್ರನ್). ನಾಲ್ಕು ಜೊತೆ ಸೈಡ್‌ವಿಂಗ್‌ಗಳು, ಸೈಕ್ಲೋರಾಮ ಪರದೆಗಳು, ಐವತ್ತಕ್ಕೂ ಹೆಚ್ಚು ವಿವಿಧ ರೀತಿಯ ಲೈಟ್ಗಳ ಬೆಳಕಿನ ವ್ಯವಸ್ಥೆ. ಈ ಬೆಳಕಿನ ವ್ಯವಸ್ಥೆಯನ್ನು ಕಲ್ಪಿಸಿದವರು ಕರ್ನಾಟಕದವರೇ ಆದ, ವಿಶ್ವದ ಹಲವಾರು ರಂಗಮಂದಿರಗಳಿಗೆ ಬೆಳಕು ವಿನ್ಯಾಸ ಮಾಡಿದ ರಾಮಮೂರ್ತಿ. ಎಲ್ಲರೂ ವೀಕ್ಷಿಸಬಹುದಾದ ಅಗಲವಾದ ಪ್ರೇಕ್ಷಕರ ದೃಷ್ಟಿರೇಖೆಗೆ ಸೂಕ್ತವಾಗುವಂತೆ ಕುರ್ಚಿಗಳ ಅಳವಡಿಕೆ. ಆರ್ಕೇಸ್ಟ್ರಾಪಿಟ್, ರಂಗಮಂದಿರದ ವಿಶಾಲವಾದ ಹಜಾರದಲ್ಲಿ ಪ್ರತಿದಿನ ನಡೆಯುವ ನಾಟಕಗಳ ಮತ್ತು ಕಾರ್ಯಕ್ರಮಗಳ ಭಿತ್ತಿಫಲಕ, ಒಂದು ಭಾಗದಲ್ಲಿ ಬಾಕ್ಸ್ ಆಫೀಸ್, ಮತ್ತೊಂದು ಭಾಗದಲ್ಲಿ ಅತಿಥಿಗಳ ವಿಶ್ರಾಂತಿ ಕೋಣೆ..ಹೀಗೆ ಹತ್ತು, ಹಲವು ಅನಕೂಲಗಳೊಂದಿಗೆ ರವೀಂದ್ರ ಕಲಾಕ್ಷೇತ್ರ ಒಂದು ಪರಿಪೂರ್ಣ ರಂಗಮಂದಿರವಾಗಿ ಎಲ್ಲ ರಂಗ ಹಾಗೂ ಸಾಂಸ್ಕೃತಿಕಾಸಕ್ತರನ್ನು ತನ್ನತ್ತ ಕೈಬೀಸಿ ಕರೆಯುತ್ತಿದೆ. ಕಲಾಕ್ಷೇತ್ರದ ಹೊರಾವರಣದಲ್ಲಿ ಕಾರ್ಯಕ್ರಮಗಳ, ರಂಗ ಚಟುವಟಿಕೆಯ ಬೃಹದ್ ಪೋಸ್ಟರ್ ಗಳನ್ನು ಕಟ್ಟಲು ಸೂಕ್ತ ವ್ಯವಸ್ಥೆ ಇದೆ. ಹೊರ ಆವರಣದಲ್ಲಿ ಸುಂದರವಾದ ಉದ್ಯಾನವನವಿದೆ. ಪ್ರದರ್ಶನ ನೋಡಲು ಬರುವ ನೂರಾರು ಪ್ರೇಕ್ಷಕರ ವಾಹನಗಳನ್ನು ನಿಲ್ಲಿಸಲು ಸರಿಯಾದ ಅನುಕೂಲಕರ ವ್ಯವಸ್ಥೆ ಇದೆ.

ಎಲ್ಲಕ್ಕಿಂತ ಮುಖ್ಯವಾಗಿ ಎಲ್ಲರನ್ನೂ ಆಕರ್ಷಿಸುವುದು ಕಲಾಕ್ಷೇತ್ರದ ಮೆಟ್ಟಿಲುಗಳು. ಹಿಂದಿನವರು ಹೇಳುವ ಪ್ರಕಾರ ಕಟ್ಟಿದಾಗ ಈ ಮೆಟ್ಟಿಲುಗಳು ಇರಲಿಲ್ಲವಂತೆ. ಇದೇನು ಸರ್ಕಾರಿ ಗೋಡೋನ್ ಹಾಗೆ ಕಟ್ಟಿದ್ದಾರೆ ಎಂದು ಟೀಕೆಗಳು ಬಂದಾಗ ಅರ್ಧ ಚಂದ್ರಾಕಾರ ರೂಪದಲ್ಲಿ ನಿರ್ಮಿಸಲಾದ ಈ ಮೆಟ್ಟಿಲುಗಳು (ರಂಗಭೂಮಿ ಭಾಷೆಯಲ್ಲಿಯೇ ಹೇಳಬಹುದಾದರೆ-ಪಾವಟಿಗೆಗಳು) ಅಕರ್ಷಣೀಯ ವಷ್ಟೇ ಅಲ್ಲ. ರಂಗಪ್ರಿಯರ ಒಡ್ಡೋಲಗ ತಾಣ. ಇಲ್ಲಿ ನಡೆಯುವ ರಂಗಭೂಮಿ ಪ್ರಯೋಗಗಳ ಕುರಿತ ಚರ್ಚೆಯಲ್ಲಿ ಭಾಗವಹಿಸಲೆಂದೇ ಒಂದು ಕಾಲದಲ್ಲಿ ರಂಗಕರ್ಮಿಗಳು ಮೆಟ್ಟಿಲುಗಳ ಮೇಲೆ ಕಾದು ಕುಳಿತುಕೊಳ್ಮ್ಳತ್ತಿದ್ದರಂತೆ. ಎಪ್ಪತ್ತು-ಎಂಭತ್ತರ ದಶಕ ರವೀಂದ್ರ ಕಲಾಕ್ಷೇತ್ರದ ಪಾಲಿಗೆ ಸುವರ್ಣ ಯುಗವೆಂದೇ ಆ ಕಾಲವನ್ನು ಕಂಡವರ ನಂಬಿಕೆ.

ಆಧುನಿಕ ಕನ್ನಡ ರಂಗಭೂಮಿಯ ದಿಗ್ಗಜರಾದ ಶ್ರೀರಂಗ, ಬಿ.ವಿ. ಕಾರಂತ, ಎಂ.ಎಸ್. ಸತ್ಯು, ಸಿ.ಆರ್. ಸಿಂಹ. ಬಿ. ಚಂದ್ರಶೇಖರ್, ಆರ್. ನಾಗೇಶ್, ಗಿರೀಶ್ ಕಾರ್ನಾಡ್, ಪಿ. ಲಂಕೇಶ್, ಸಿ.ಜಿ. ಕೃಷ್ಣಸ್ವಾಮಿ, ಶ್ರೀನಿವಾಸ ಜಿ. ಕಪ್ಪಣ್ಣ, ಜೆ. ಲೋಕೇಶ್, ಬಿ. ಜಯಶ್ರೀ, ಉಮಾಶ್ರೀ, ಒಂದು ಕಾಲಕ್ಕೆ ಕನ್ನಡದ ಖ್ಯಾತ ನಟರಾಗಿ ನಂತರ ತಮಿಳು ಚಿತ್ರರಂಗಕ್ಕೆ ವಲಸೆಹೋದ ಕೋಕಿಲ ಮೋಹನ್, ಇಂದಿನ ಬಹುಭಾಷಾ ನಟ ಪ್ರಕಾಶ್ ರೈ, ಖ್ಯಾತ ನಿರ್ದೇಶಕರಾದ ಟಿ.ಎಸ್. ನಾಗಾಭರಣ, ಇಂದು ನಮ್ಮ ಜೊತೆಗಿಲ್ಲದ ಖ್ಯಾತ ನಿರ್ದೇಶಕ ಟಿ.ಎಸ್. ರಂಗ, ನಟ ಸುಂದರರಾಜ್, ಮುಂತಾದವರು ಈ ಕಟ್ಟೆ-ಮೆಟ್ಟಿಲುಗಳ ಮೇಲೆ ಬೆಳೆದದ್ದು ಇಂದು ಇತಿಹಾಸ. ಗಿರಜಾ ಮತ್ತು ಲೋಕೇಶ್, ದೇವಸ್ಥಾನದಲ್ಲಿ ಮದುವೆಯಾಗಿ ಅಂದಿನ ರಾತ್ರಿಯೇ ಕಾಕನಕೋಟೆ ನಾಟಕದಲ್ಲಿ ತಂದೆ-ಮಗಳಾಗಿ ಅಭಿನಯಿಸಿದ್ದಕ್ಕೆ, ಕಲಾಕ್ಷೇತ್ರವೇ ಸಾಕ್ಷಿ.

೧೯೭೨ರಲ್ಲಿ ಬಿ.ವಿ. ಕಾರಂತರ ಬಯಲು ರಂಗೋತ್ಸವ , ೧೯೭೩ರಲ್ಲಿ ನಡೆದ ಅಖಿಲ ಭಾರತ ರಂಗಭೂಮಿ ಉತ್ಸವ ೧೯೮೩-೮೪ರ ಅವಧಿಯಲ್ಲಿ ನಡೆದ ಹವ್ಯಾಸಿ ರಂಗ ತಂಡಗಳು, ಕೈಲಾಸಂ ಕಲಾಕ್ಷೇತ್ರದ ತಾಲೀಮು ಕೋಠಡಿಯನ್ನೇ ವೇದಿಕೆಯನ್ನಾಗಿಸಿ, ಸಿಜಿಕೆ ಅವರು ನಡೆಸಿದ ನಾಟಕೋತ್ಸವ ಇವೆಲ್ಲ, ಕರ್ನಾಟಕ ರಂಗಭೂಮಿ ಇತಿಹಾಸದ ಪ್ಮಟಗಳಲ್ಲಿನ ಸುವರ್ಣ ಅಧ್ಯಾಯಗಳು.

ಕರ್ನಾಟಕದಲ್ಲಿರುನ ನೂರಾರು ರಂಗಮಂದಿರಗಳ ಪೈಕಿ, ಕಲಾಕ್ಷೇತ್ರದಲ್ಲಿ ಪ್ರದರ್ಶನ ನೀಡುವುದೇ ರಂಗ ತಂಡಗಳಿಗೆ ಒಂದು ಅಭಿಮಾನದ ಸಂಗತಿ. ಹಾಗಾಗಿ ರವೀಂದ್ರ ಕಲಾಕ್ಷೇತ್ರಕ್ಕೆ ಬೇಡಿಕೆಯೂ ಹೆಚ್ಚು. ರಂಗ ತಂಡಗಳಿಗೆ ಕೈಗೆಟುಕಬಹುದಾದ (ಎನ್ನಬಹುದಾದ) ಬಾಡಿಗೆ, ಇರುವ ಸುವ್ಯವಸ್ಥೆಯಿಂದಾಗಿ ಬೇಡಿಕೆಯೂ ಹೆಚ್ಚು. ಈ ರಂಗಮಂದಿರದ ಆಸನ ವ್ಯವಸ್ಥೆ ಸುಮಾರು ೯೦೦ ಸೀಟುಗಳು.

ಕರ್ನಾಟಕ ನಾಟಕ ಅಕಾಡೆಮಿ ಮೂರ್‍ನಾಲ್ಕು ದಶಕಗಳ ಹಿಂದೆ ಬಿ.ವಿ, ಕಾರಂತ, ಗಿರೀಶ್ ಕಾರ್ನಾಡ್, ಲಂಕೇಶ್, ಚಂದ್ರಶೇಖರ ಕಂಬಾರ, ಮುಂತಾದವರ ಪ್ರಯತ್ನದಿಂದ ಆಚರಿಸಿದ ಬಯಲು ರಂಗೋತ್ಸವದ ಫಲಶೃತಿ ರವೀಂದ್ರ ಕಲಾಕ್ಷೇತ್ರದ ಹಿಂಭಾಗದಲ್ಲಿರುವ ಇಂದಿನ ಸಂಸ ಬಯಲು ರಂಗಮಂದಿರ ಇಲ್ಲಿಯೂ ಪ್ರೇಕ್ಷಕರು ಆರಾಮವಾಗಿ ಕೂರಲು ಅವಕಾಶವಿರುವ ಕಲ್ಲು ಹಾಸು. ಗ್ರೀಕ್ ಮಾದರಿಯ ಕಂಭಗಳನ್ನೇ ರಂಗಮಂದಿರದ ವಿನ್ಯಾಸವಾಗಿ ಬಳಸಿ ನಿರ್ಮಿಸಿರುವ ವಿಶಾಲವಾದ ವೇದಿಕೆ, ಹಾಗೂ ಪರದೆ ಹಾಕಲು ಮಾಡಿರುವ ಗ್ರಿಡ್ ವ್ಯವಸ್ಥೆ..ಇವುಗಳೆಲ್ಲ ಸಂಸ ಬಯಲು ರಂಗಮಂದಿರವನ್ನು ನಾಡಿನ ಒಂದು ಅತ್ಯುತ್ತಮ ರಂಗಮಂದಿರವಾಗಿಸಿದೆ. ಸಾವಿರಕ್ಕೂ ಹೆಚ್ಚು ಪ್ರೇಕ್ಷಕರು ಕೂರಬಹುದಾದ, ಈ ರಂಗಮಂದಿರ ಬೇಸಿಗೆ ಕಾಲಕ್ಕಂತೂ ಹೇಳಿ ಮಾಡಿಸಿದ ಸುಂದರ ರಂಗತಾಣ. ಈ ರಂಗತಾಣಕ್ಕೀಗ ಸುವರ್ಣ ಮಹೋತ್ಸವ. ಸಾಂಸ್ಕೃತಿಕ ಲೋಕದ ಗಣ್ಯರು ಅಗಲಿದಾಗ ಸಾವಿರಾರು ಮಂದಿ ಅವರಿಗೆ ಅಂತಿಮ ನಮನ ಸಲ್ಲಿಸಿ ವಿದಾಯ ಹೇಳುವ ತಾಣವೂ ಕೂಡ ರವೀಂದ್ರ ಕಲಾಕ್ಷೇತ್ರ.

ಕೇವಲ ಸಾಂಸ್ಕೃತಿಕ ಚಟುವಟಿಕೆಗಳಷ್ಟೇ ಅಲ್ಲದೆ, ಗೋಕಾಕ್ ಕನ್ನಡ ಹೋರಾಟ, ರೈತ ಹೋರಾಟ, ಕಾವೇರಿ ಹೋರಾಟ, ಬಾಬ್ರಿ ಮಸೀದಿ ಧ್ವಂಸ ಪ್ರರಣಗಳ ವಿರೋಧಿ ಹೋರಾಟಕ್ಕೆ ವೇದಿಕೆಯಾಗಿ ಸಾಕ್ಷಿಯಾಗಿದ್ದು, ರವೀಂದ್ರ ಕಲಾಕ್ಷೇತ್ರ. ಹಾಗಾಗಿ ರವೀಂದ್ರ ಕಲಾಕ್ಷೇತ್ರ ಕೇವಲ ಕೇವಲ ಕಲ್ಲಿನ ಕಟ್ಟಡವಲ್ಲ. ಅದು ನಮ್ಮ ನಾಡಿನ ಸಾಂಸ್ಕೃತಿಕ ಸಾಕ್ಷಿ ಪ್ರಜ್ಞೆ ಎನ್ನುತ್ತಾರೆ ಲೇಖಕ-ರಂಗಕರ್ಮಿ ಎನ್. ಕೆ. ಮೋಹನ್‌ರಾಮ್.

ಕಲಾಕ್ಷೇತ್ರ ಕುರಿತ ರಂಗಾಸಕ್ತ ಗಣೇಶ ಅಮೀನಗಡ ಅವರ ಮಾತುಗಳು ರಂಗಕರ್ಮಿಗಳನ್ನು ದಶಕಗಳ ಹಿಂದಕ್ಕೆ ಕರೆದೊಯ್ಯುತ್ತದೆ. ನಾಟಕ ಆರಂಭವಾಗುವಾಗ ಮೂರು ಬಾರಿ ಘಂಟೆ ಬಾರಿಸುವುದು ರೂಢಿಗತ ಪದ್ಧತಿ. ಆದರೆ ಆ ಕಾಲಕ್ಕೆ ರವೀಂದ್ರ ಕಲಾಕ್ಷೇತ್ರದಲ್ಲಿ ಘಂಟೆಯೇ ಇರಲಿಲ್ಲ. ಹಾಗಾಗಿ ಕಲಾಕ್ಷೇತ್ರದ ಆವರಣದಲ್ಲಿ ಕುಳಿತವರಿಗೆ ನಾಟಕ ಯಾವಾಗ ಆರಂಭವಾಗುತ್ತದೆ ಎಂದು ತಿಳಿಯುತ್ತಲೇ ಇರಲಿಲ್ಲ. ಇದನ್ನು ಗಮನಿಸಿದ ನಾಟಕ ಬೆಂಗ್ಳೂರು ರಂಗ ಸಂಭ್ರಮದವರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಘಂಟೆಯೊಂದನ್ನು ಉಡುಗೋರೆಯಾಗಿ ನೀಡಿದ್ದಾರೆ. ಈ ಘಂಟೆ ನಾಟಕ ಶುರುವಾಗುವ ಮುನ್ನ ಮೂರು ಸಾರಿ ಸದ್ದು ಮಾಡಲಿದೆ. ಈ ಘಂಟೆಯನ್ನು ರೂಪಕವಾಗಿ ಕೂಡ ಯೋಚಿಸಬಹುದು. ಜೊತೆಗೆ ಎಚ್ಚರಿಕೆಯ ಘಂಟೆ ಕೂಡ. ಇನ್ನು ಮುಂದೆ ರವೀಂದ್ರ ಕಲಾಕ್ಷೇತ್ರ ರಂಗಭೂಮಿಗೆ ಮಾತ್ರ ಮೀಸಲಾಗಲಿ ಎಂಬುದು ಎನ್ನುತ್ತಾರೆ ಗಣೇಶ್. ಹೌದು ನಾಟಕಗಳು ಹೆಚ್ಚಾದಲ್ಲಿ, ಕಲಾಕ್ಷೇತ್ರಕ್ಕೆ ಹೆಚ್ಚೆಚ್ಚು ಪ್ರೇಕ್ಷಕರು ಬರುತ್ತಾರೆ ಎಂಬುದು ಆಶಯ.

ಎಪ್ಪರತ್ತರ ದಶಕದಿಂದ ಸುಮಾರು ೨೦೦೦ ಇಸುವಿಯವರೆಗೂ ಪ್ರೇಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದರು. ಆದರೆ ಬೇರೆಬೇರೆ ಕಾರ್ಯಕ್ರಮಗಳಿಗೆ ರಂಗಮಂದಿರವನ್ನು ಸರ್ಕಾರ ನೀಡಲಾರಂಭಿಸಿದ ಮೇಲೆ ಪ್ರೇಕ್ಷಕರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿದೆ. ಇದು ಪ್ರೇಕ್ಷರನ್ನು ಮತ್ತೆ ರಂಗಭೂಮಿ ಕಡೆಗೆ ಸೆಳೆಯುವ ಯತ್ನ. ರವೀಂದ್ರ ಕಲಾಕ್ಷೇತ್ರ ರಂಗಜೀವಿಗಳಿಗೆ ರಂಗ ಕಾಶಿ. ಕರ್ನಾಟಕದ ರಂಗಕರ್ಮಿಗಳಿಗೆ ಕಲಾಕ್ಷೇತ್ರ ಮನೆ ಯಂತೆ. ಹಗಲು-ರಾತ್ರಿಗಳನ್ನು ನಾವಿಲ್ಲಿ ಕಳೆದಿದ್ದೇವೆ. ನಮಗೂ ಕಲಾಕ್ಷೇತ್ರಕ್ಕೂ ಅವಿನಾಭಾವ ಭಾವನಾತ್ಮಕ ಸಂಬಂಧ. ರವೀಂದ್ರ ಕಲಾಕ್ಷೇತ್ರ ರಂಗಭೂಮಿಗೆ ಸೀಮಿತವಾಗಬೇಕು. ಖಾಯಂ ಸಿಬ್ಬಂದಿ ಇರಬೇಕು. ಧ್ವನಿ ಹಾಗೂ ಬೆಳಕಿನ ವ್ಯವಸ್ಥೆಗಳು ಸ್ಭೆರಿದಂತೆ ಸಣ್ಣಪುಟ್ಟ ಸಮಸ್ಯೆಗಳು ಪರಿಹಾರವಾಗಿ, ಪ್ರೇಕ್ಷಕರನ್ನು ತನ್ನತ್ತ ಸೆಳೆಯಬೇಕು ಎನ್ನುತ್ತಾರೆ, ಹಿರಿಯ ರಂಗ ನಿರ್ದೇಶಕ ಹಾಗೂ ಕರ್ನಾಟಕ ನಾಟಕ ಅಕಾಡೆಮಿ ಮಾಜಿ ಅಧ್ಯಕ್ಷ ಬಿ.ವಿ. ರಾಜಾರಾಮ್.

ಕಲಾಕ್ಷೇತ್ರದ ಮಹಿಳಾ ವಿಶ್ರಾಂತಿ ಕೊಠಡಿಯನ್ನು ಕಾರ್ಯಕ್ರಮಗಳಿಗೆ ನೀಡುವುದೂ ಸೇರಿದಂತೆ, ಕಲಾಕ್ಷೇತ್ರವನ್ನು ಕಾಯ್ದಿರುಸುವಿಕೆಯಲ್ಲಿನ ದೋಷವೂ ಸೇರಿದಂತೆ ಕಲಾವಿದರು ಎದುರಿಸುತ್ತಿರುವ ಅನೇಕ ಸಮಸ್ಯೆಗಳನ್ನು ಪರಿಹರಿಸುವುದಾಗಿ ಕನ್ನಡ-ಸಂಸ್ಕೃತಿ ಇಲಾಖೆಯ ನಿರ್ದೇಶಕಿ ಧರಣಿದೇವಿ ಮಾಲಗತ್ತಿ ಹೇಳುತ್ತಾರೆ. ಅರವತ್ತರ ಕಾಲಘಟ್ಟದಲ್ಲಿರುವ ಕಲಾಕ್ಷೇತ್ರದ ಸಮಸ್ಯೆಗಳನ್ನು ಕಲಾವಿದರ ತಂಡವೊಂದು ಇತ್ತೀಚೆಗೆ ಧರಣಿದೇವಿ ಮಾಲಗತ್ತಿ ಅವರನ್ನು ಭೇಟಿಯಾಗಿತ್ತು. ರಂಗಮಂದಿರ ಕಾಯ್ದಿರುಸುವಿಕೆಯಲ್ಲಿ ಪಾರದರ್ಶಕತೆ ತರುವುದಾಗಿ ಆಕೆ ಹೇಳಿದ್ದಾರೆ. ಅವರು ನೀಡಿರುವ ಭರವಸೆಯನ್ನು ಈಡೇರಿಸುತ್ತಾರೆ ಎಂಬುದು ಕಲಾವಿದರ ನಂಬಿಕೆ.

ಸರ್ಕಾರ ಕೂಡ ರವೀಂದ್ರ ಕಲಾಕ್ಷೇತ್ರದ ವಜ್ರ ಮಹೋತ್ಸವವನ್ನು ಆಚರಿಸಲು ಮುಂದಾಗಿದೆ. ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕೂಡ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಮ್ಮಿಕೊಂಡಿದೆ. ವಜ್ರ ಮಹೋತ್ಸವದ ಈ ಸಂದರ್ಭವನ್ನು ಐತಿಹಾಸಿಕವಾಗಿಸುವ ಹೊಣೆ ಕೂಡ ಸರ್ಕಾರ ಹಾಗೂ ಸಾಂಸ್ಕೃತಿಕ ರಂಗದ್ದು.

Read More
Next Story