ಕಲಾಕ್ಷೇತ್ರದ ಕಾರಂತರ ʻಕ್ಯಾಂಟೀನ್ʼಗೆ ವಿದಾಯದ ಸಮಯ!
x
ಕಾರಂತರ ಕ್ಯಾಂಟೀನ್‌

ಕಲಾಕ್ಷೇತ್ರದ ಕಾರಂತರ ʻಕ್ಯಾಂಟೀನ್ʼಗೆ ವಿದಾಯದ ಸಮಯ!

ಕಾರಂತರ ಕ್ಯಾಂಟೀನ್‌ಗೂ ರವೀಂದ್ರ ಕಲಾಕ್ಷೇತ್ರಕ್ಕೂ ಕರುಳ ಬಳ್ಳಿಯ ಸಂಬಂಧ. ರವೀಂದ್ರ ಕಲಾಕ್ಷೇತ್ರಕ್ಕೆ ಬಂದವರೆಲ್ಲರೂ ಕ್ಯಾಂಟೀನ್‌ಗೆ ಭೇಟಿ ಕೊಡುತ್ತಾರೆ. ಆದರೆ ಇನ್ಮುಂದೆ ಕ್ಯಾಂಟೀನ್‌ ನೆನಪಷ್ಟೇ...


ಅನಂತ ಪದ್ಮನಾಭ (ಎ.ಪಿ) ಕಾರಂತರ ಕ್ಯಾಂಟೀನ್‌ಗೂ ರವೀಂದ್ರ ಕಲಾಕ್ಷೇತ್ರಕ್ಕೂ ಕರುಳ ಬಳ್ಳಿಯ ಸಂಬಂಧ. ರವೀಂದ್ರ ಕಲಾಕ್ಷೇತ್ರಕ್ಕೆ ಬಂದವರೆಲ್ಲರೂ ಒಮ್ಮೆಯಾದರೂ, ಕಾರಂತರ ಕ್ಯಾಂಟೀನ್‌ಗೆ ಭೇಟಿ ನೀಡಿ ಅಲ್ಲಿನ ಕಾಫಿ , ತಿಂಡಿಯ ರುಚಿ ಸವಿಯುವುದು ವಾಡಿಕೆ. ತಿಳಿ ಹರಟೆ, ಆತ್ಮೀಯ ಮಾತುಗಳಿಗೆ ಕಾರಂತರ ಕ್ಯಾಂಟೀನ್ ಕಟ್ಟೆ ಸಾಕ್ಷಿಯಾಗಿದೆ. ಆದರೆ, ಇನ್ಮುಂದೆ ಕಾರಂತರ ಕ್ಯಾಂಟೀನ್ ಇರುವುದಿಲ್ಲ ಎನ್ನುವುದು ಕಲಾವಿದರು ಹಾಗೂ ಕಾಲಾಸಕ್ತರಿಗೆ ಅದ್ಭುತವಾದ ನಾಟಕವನ್ನು ಮಿಸ್ ಮಾಡಿಕೊಂಡ ಅನುಭವ ನೀಡುತ್ತಿದೆ.

ಕಾರಂತರ ಕ್ಯಾಂಟೀನ್ ಯಾವ ಕಾರಣಕ್ಕೆ ಮುಚ್ಚುತ್ತಿದೆ. ಅವರ ಕ್ಯಾಂಟೀನ್‌ಗೂ ರವೀಂದ್ರ ಕಲಾಕ್ಷೇತ್ರಕ್ಕೂ ಇದ್ದ ಒಡನಾಟವೇನು ಎನ್ನುವ ವಿವರ ಇಲ್ಲಿದೆ.

ಸರಿ ಸುಮಾರು ನಾಲ್ಕು ದಶಕಗಳ ಹಿಂದೆ ಅಂದರೆ; 1985ರಲ್ಲಿ ರವೀಂದ್ರ ಕಲಾಕ್ಷೇತ್ರದ ಪಕ್ಕದ ಚಿಕ್ಕ ಜಾಗದಲ್ಲಿ ಎ.ಪಿ ಕಾರಂತ್ ಅವರು ಕ್ಯಾಂಟೀನ್ ಪ್ರಾರಂಭಿಸಿದ್ದರು. ಕಾಲ ಬದಲಾಗಿ ರವೀಂದ್ರ ಕಲಾಕ್ಷೇತ್ರದ ವ್ಯಾಪ್ತಿ ವಿಸ್ತಾರವಾಗುವುದರ ಜೊತೆ ಜೊತೆಗೆ ಕ್ಯಾಂಟೀನ್ ಹಾಗೂ ಸ್ವತಃ ಕಾರಂತರೂ ಪ್ರಸಿದ್ಧಿ ಗಳಿಸಿದರು. ಅದರೊಂದಿಗೆ ಇಲ್ಲಿಗೆ ಬರುವ ಕಲಾವಿದರು ಹಾಗೂ ಕಲಾಸಕ್ತರಿಗೂ ಆತ್ಮೀಯರಾದರು.

ಕಾರಾಂತರ ಕ್ಯಾಂಟೀನ್ ರವೀಂದ್ರ ಕಲಾಕ್ಷೇತ್ರಕ್ಕೆ ಬರುವ ಎಲ್ಲರಿಗೂ ಚಿರಪರಿಚಿತ. ಕಲಾವಿದರಿಗೆ, ಕಲಾ ಪೋಷಕರಿಗೆ, ಪ್ರೇಕ್ಷಕರಿಗೆಲ್ಲಾ ಸಣ್ಣ ನಿರಾಳತೆ ಇಲ್ಲಿ ಸಿಗುತ್ತಿತ್ತು. ದುಬಾರಿ ದುನಿಯಾದಲ್ಲೂ ಐದು ರೂಪಾಯಿಗೆ ಅರ್ಧ ಕಾಫಿ, 20 ರೂಪಾಯಿಗೆ ಉಪ್ಪಿಟ್ಟು ಬಜ್ಜಿ, 40 ರೂಪಾಯಿಗೆ ಊಟ ಸಿಗುತ್ತಿತ್ತು. ಕ್ಯಾಂಟೀನ್‌ನ ಮುಂಭಾಗದಲ್ಲಿರುವ ಮರದ ಅಡಿ, ಕಟ್ಟೆಯ ಮೇಲೆ ಕುಳಿತು ನಾಟಕ, ಪುಸ್ತಕ ಬಿಡುಗಡೆ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಇಲ್ಲಿ ಚರ್ಚೆ ನಡೆಯುತ್ತಿತ್ತು. ಆತ್ಮೀಯರೊಂದಿಗೆ ಉಭಯ ಕುಶಲೋಪರಿ ವಿನಿಮಯವಾಗುತ್ತಿತ್ತು.


ಕ್ಯಾಂಟೀನ್‌ ಪ್ರಾರಂಭ, ನಾಲ್ಕು ದಶಕಗಳ ಸುದೀರ್ಘ ಪಯಣವನ್ನು ಕ್ಯಾಂಟೀನ್‌ ಮಾಲೀಕರಾದ ಎ.ಪಿ ಕಾರಂತ ಅವರು ದ ಫೆಡರಲ್ ಕರ್ನಾಟಕದೊಂದಿಗೆ ಹಂಚಿಕೊಂಡರು. ʻನಾಲ್ಕು ದಶಕಗಳ ಹಿಂದೆ ರವೀಂದ್ರ ಕಲಾಕ್ಷೇತ್ರದಲ್ಲಿ ಸಣ್ಣ ಜಾಗದಲ್ಲಿ ನಾನು ಕ್ಯಾಂಟೀನ್ ಪ್ರಾರಂಭಿಸಿದ್ದೆ. ಈಗ ಸುಂದರ ನೆನಪುಗಳನ್ನು ಹೊತ್ತು ಹೊರಟ್ಟಿದ್ದೇನೆ. ಕಲಾವಿದರು ಹಾಗೂ ಕಲಾಸಕ್ತರು ಅಪಾರ ಸಹಕಾರ ಮತ್ತು ಪ್ರೀತಿ ನೀಡಿದ್ದಾರೆ. ಅವರೊಂದಿಗೆ ಒಡನಾಟ ಹಾಗೂ ಈ ರವೀಂದ್ರ ಕಲಾಕ್ಷೇತ್ರದ ಅನುಭವ ಅವಿಸ್ಮರಣೀಯ. ಇನ್ನು ಟೆಂಡರ್ ವಿಚಾರದ ಬಗ್ಗೆ ನಾನು ಮಾತನಾಡುವುದಿಲ್ಲ. ನಿಯಮದ ಪ್ರಕಾರ ಟೆಂಡರ್ ಆಗಿದೆ. ಮತ್ತೊಬ್ಬರು ಇಲ್ಲಿ ಬರುತ್ತಾರೆ. ನನಗೆ 50 ಸಾವಿರ ಬಾಡಿಗೆ ಕಟ್ಟಿ, ಈ ಕ್ಯಾಂಟೀನ್ ನಡೆಸಲು ಸಾಧ್ಯವಿಲ್ಲʼ ಎಂದರು.

ಕ್ಯಾಂಟೀನ್ ಪ್ರಾರಂಭವಾದ ರೀತಿ

ಮೊದಲು ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿಸಣ್ಣ ಕ್ಯಾಂಟೀನ್ ಪ್ರಾರಂಭವಾಗಿತ್ತು. 2013ರ ನಂತರ ರವೀಂದ್ರ ಕಲಾಕ್ಷೇತ್ರದ ತಾಲಿಂ ಕೊಠಡಿಯ ಪಕ್ಕದಲ್ಲಿರುವ ಜಾಗಕ್ಕೆ ಕ್ಯಾಂಟೀನ್ ಸ್ಥಳಾಂತರಿಸಲಾಗಿತ್ತು. ಪ್ರಾರಂಭದಲ್ಲಿ ಕ್ಯಾಂಟೀನ್ ಬಾಡಿಗೆ ತಿಂಗಳಿಗೆ 5,500 ರೂ. ನಿಗದಿ ಮಾಡಲಾಗಿತ್ತು. ನಂತರದ ದಿನಗಳಲ್ಲಿ ಕ್ಯಾಂಟೀನ್‌ನ ಬಾಡಿಗೆ 7500 ರೂ.ಗೆ ನಿಗದಿ ಮಾಡಲಾಗಿತ್ತು.

ಕ್ಯಾಂಟೀನ್ ಮುಚ್ಚುವುದಕ್ಕೆ ಕಾರಣವೇನು ?

ಈಚೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಆನ್‌ಲೈನ್‌ ಟೆಂಡರ್ ಕರೆದಿದ್ದು, ಟೆಂಡರ್‌ನ ದರ ದುಬಾರಿ ಆಗಿರುವ ಹಿನ್ನೆಲೆಯಲ್ಲಿ ಎ.ಪಿ ಕಾರಂತ್ ಅವರು ಟೆಂಡರ್‌ನಿಂದ ಹಿಂದೆ ಸರಿದಿದ್ದಾರೆ. ಇದೀಗ ಟೆಂಡರ್ ಮತ್ತೊಬ್ಬರ ಪಾಲಾಗಿದ್ದು, ಕಾರಂತ್ ಅವರು ಅನಿವಾರ್ಯವಾಗಿ ಕ್ಯಾಂಟೀನ್ ಖಾಲಿ ಮಾಡಬೇಕಿದೆ. ಕ್ಯಾಂಟೀನ್ ಖಾಲಿ ಮಾಡುವುದಕ್ಕೆ ಕಾರಂತ್ ಅವರು ಸಿದ್ಧತೆ ನಡೆಸಿದ್ದು, ಏ. 26ರ ಶುಕ್ರವಾರದಿಂದ ಕಾರಂತರ ಕ್ಯಾಂಟೀನ್ ತನ್ನ ಅಸ್ತಿತ್ವ ಹಾಗೂ ರವೀಂದ್ರ ಕಲಾಕ್ಷೇತ್ರದೊಂದಿಗಿನ ತನ್ನ ಬಂಧವನ್ನು ಕಳೆದುಕೊಳ್ಳಲಿದೆ.

ನಾಟಕಗಳ ಪ್ರಚಾರ ಕೇಂದ್ರವೂ ಆಗಿತ್ತು

ಕಾರಂತರ ಕ್ಯಾಂಟೀನ್ ಕೇವಲ ಕಾಫಿ, ತಿಂಡಿ ಹಾಗೂ ಆಹಾರ ವಿತರಣೆಗೆ ಮಾತ್ರ ಸೀಮಿತವಾಗಿರಲಿಲ್ಲ. ಕಾರಂತರು ನಾಟಕ ಪ್ರಿಯರಾಗಿದ್ದರು. ನಾಟಕ ಅಕಾಡೆಮಿಯ ರೇವಣ್ಣನವರ ಜೊತೆ ಸೇರಿ ʼಭಾಗವತರುʼ ಎಂಬ ಸಾಂಸ್ಕೃತಿಕ ಸಂಘಟನೆಯನ್ನೂ ಹುಟ್ಟು ಹಾಕಿದ್ದರು. ಅನೇಕ ಯಕ್ಷಗಾನ ತಂಡಗಳನ್ನು ಆಹ್ವಾನಿಸಿ ಕಲಾಕ್ಷೇತ್ರದಲ್ಲಿ ಪ್ರದರ್ಶನಗಳನ್ನು ನೀಡುತ್ತಿದ್ದರು ಎಂದು ಸ್ಮರಿಸುತ್ತಾರೆ ಕಲಾವಿದರು. ಕಾರಂತರ ಟೇಬಲ್ ಪಕ್ಕ ಯಾವಾಗಲೂ ನಾಟಕ ಪ್ರದರ್ಶನದ ಪಾಂಪ್ಲೆಟ್‌ಗಳು ತುಂಬಿರುತ್ತಿದ್ದವು. ಕ್ಯಾಂಟೀನ್ ಗೋಡೆಗಳ ಮೇಲೆ ನಾಟಕದ ಪೋಸ್ಟರ್ ಗಳು ರಾರಾಜಿಸುತ್ತಿದ್ದವು. ಕಾರಂತರ ಕ್ಯಾಂಟೀನ್ ಸಾಂಸ್ಕೃತಿಕ ಕಾರ್ಯಕ್ರಮಗಳ ಪ್ರಚಾರ ಕೇಂದ್ರವೂ ಆಗಿತ್ತು ಎನ್ನುವುದು ವಿಶೇಷ. ಲೆಟರ್, ಪಾರ್ಸಲ್‌ಗಳನ್ನು ಮತ್ತೊಬ್ಬರಿಗೆ ತಲುಪಿಸಬೇಕಾದರೆ, ಹೆಸರು, ಪೋನ್ ನಂಬರ್ ಬರೆದು ಕಾರಂತರ ಬಳಿ ಕೊಟ್ಟರೆ ಸಾಕು ತಲುಪಬೇಕಾದವರಿಗೆ ಅದು ತಲುಪುತ್ತಿತ್ತು. ಈ ರೀತಿಯ ಸಣ್ಣಪುಟ್ಟ ಕೆಲಸಗಳಿಗೆ ಅವರು ಹಣ ನಿರೀಕ್ಷಿಸುತ್ತಿರಲಿಲ್ಲ. ಕಾರಂತರ ಕ್ಯಾಂಟೀನ್‌ನ ಕಿಟಕಿಯ ಮೇಲೆ ಅಂಟಿಸಲಾಗಿರುವ ನಾಟಕದ ಚಿತ್ರಗಳೇ ಇದಕ್ಕೆ ಸಾಕ್ಷಿ ಎನ್ನುವಂತಿದೆ.

ಸುಂದರ ನೆನಪುಗಳನ್ನು ಹೊತ್ತು ಹೊರಟಿದ್ದೇವೆ..

ಕಾರಂತ್ ಅವರ ಕ್ಯಾಂಟೀನ್‌ನ ಮುಂದೆ ವಿದಾಯದ ಬರಹವಿರುವ ಪ್ಲೆಕ್ಸ್ ಹಾಕಲಾಗಿದೆ. ಅದರಲ್ಲಿ, ʼ ಕಲಾಕ್ಷೇತ್ರದ ಅಂಗಳದಲ್ಲಿ ಕಳೆದ ನಾಲ್ಕು ದಶಕಗಳಿಂದ ನಮ್ಮೊಡನಾಡಿದ ಸಾಹಿತಿ, ಕಲಾವಿದರು, ಸಂಘಟಕರು ಹಾಗೂ ರಂಗಕರ್ಮಿಗಳಿಗೆ ಪ್ರೀತಿ ಪೂರ್ವಕ ಧನ್ಯವಾದಗಳು. ಇದೇ ತಿಂಗಳ 26ರಿಂದ ಕಲಾಕ್ಷೇತ್ರ ಕ್ಯಾಂಟೀನ್‌ನಲ್ಲಿ ನಮ್ಮ ಸೇವೆ ಅಂತ್ಯವಾಗಲಿದೆ. ಸುಂದರ ನೆನಪುಗಳನ್ನು ಹೊತ್ತು ಹೊರಟಿದ್ದೇವೆ. ಧನ್ಯವಾದಗಳು - ಎ.ಪಿ ಕಾರಂತ್ʼ ಎಂದು ಬರೆಯಲಾಗಿದೆ.


ರಂಗಕರ್ಮಿಗಳಿಂದ ಕ್ಯಾಂಟೀನ್ ಮುಂದುವರಿಸಲು ಮನವಿ

ಕಾರಂತರ ಕ್ಯಾಂಟೀನ್ ಮುಂದುವರಿಸಲು ಹಲವು ರಂಗಕರ್ಮಿಗಳು ಹಾಗೂ ಕಲಾಸಕ್ತರು ಮನವಿ ಮಾಡಿದ್ದಾರೆ. ʻಕಾರಂತರ ಕ್ಯಾಂಟೀನ್ ಹಾಗೂ ರಂಗಕಲಾವಿದರು ತಾಯಿ ಮಕ್ಕಳಂತೆ ಬೆಳೆದಿದ್ದೇವೆ. ವಾಣಿಜ್ಯ ಉದ್ದೇಶದಿಂದ ಕ್ಯಾಂಟೀನ್ ಟೆಂಡರ್ ಬೇರೆಯವರಿಗೆ ನೀಡಿದ್ದು ಒಪ್ಪಲು ಸಾಧ್ಯವಿಲ್ಲ. ಕಾರಂತರೇ ಕ್ಯಾಂಟೀನ್ ಮುಂದುವರಿಸಿಕೊಂಡು ಹೋಗಲು ಅವಕಾಶ ನೀಡಬೇಕುʼ ಕಲಾವಿದರಾದ ಪ್ರವೀಣ್, ಮುರಳಿ ಕುಮಾರ್ ಜಿ ಸೇರಿದಂತೆ ಹಲವರು ಒತ್ತಾಯಿಸಿದರು.

ಈಚೆಗೆ ನಾಟಕ ಬೆಂಗಳೂರು ಹಾಗೂ ಬೆಂಗಳೂರು ರಂಗಕಲಾವಿದರ ವಿವಿಧೋದ್ದೇಶ ಸಹಕಾರಿ ಸಂಘದ ನೇತೃತ್ವದಲ್ಲಿ ಬೆಂಗಳೂರಿನ ರಂಗಕರ್ಮಿಗಳು ಎ.ಪಿ ಕಾರಂತ್ ಅವರಿಗೆ ಬೀಳ್ಕೊಡುಗೆ ನೀಡಿದ್ದಾರೆ. ಹಲವು ರಂಗಕಲಾವಿದರು, ಕಲಾಸಕ್ತರು ಹಾಗೂ ಕ್ಯಾಂಟೀನ್‌ಗೆ ಬರುವ ಗ್ರಾಹಕರು ಕಾರಂತರ ಅವರಿಗೆ ಆತ್ಮೀಯ ವಿದಾಯ ಹೇಳುತ್ತಿದ್ದಾರೆ.

Read More
Next Story