ಪಬ್ಲಿಕ್ ಪರೀಕ್ಷೆ | ಸರ್ಕಾರದ ದುರುದ್ದೇಶ ಸ್ಪಷ್ಟ ಎಂದು ಸುಪ್ರೀಂಕೋರ್ಟ್ ಛೀಮಾರಿ
ಮಕ್ಕಳ ಭವಿಷ್ಯದೊಂದಿಗೆ ಆಟವಾಡುವ ಜಿದ್ದಿಗೆ ಬಿದ್ದಿರುವ ರಾಜ್ಯ ಸರ್ಕಾರ, ಆ ಮೂಲಕ ವಿದ್ಯಾರ್ಥಿಗಳು, ಅವರ ಪೋಷಕರು, ಶಿಕ್ಷಕರು ಮತ್ತು ಶಾಲಾ ಆಡಳಿತಗಳಿಗೆ ಮಾನಸಿಕ ಹಿಂಸೆ ಮತ್ತು ದೈಹಿಕ ಸಂಕಷ್ಟವನ್ನು ನೀಡಿದೆ. ತರಾತುರಿಯಲ್ಲಿ ಫಲಿತಾಂಶ ಪ್ರಕಟಿಸಲು ಆದೇಶ ಹೊರಡಿಸಿದ ರೀತಿಯಲ್ಲೇ ಸರ್ಕಾರದ ದುರುದ್ದೇಶ ಕಣ್ಣಿಗೆ ರಾಚುತ್ತದೆ ಎಂದು ಕೋರ್ಟ್ ಛೀಮಾರಿ ಹಾಕಿದೆ
5, 8 ಮತ್ತು 9ನೇ ತರಗತಿ ಪಬ್ಲಿಕ್ ಪರೀಕ್ಷೆ(ಬೋರ್ಡ್ ಪರೀಕ್ಷೆ) ಫಲಿತಾಂಶದ ವಿಷಯದಲ್ಲಿ ಸುಪ್ರೀಂಕೋರ್ಟ್ ಆದೇಶ ಹೊರಬಿದ್ದು ಒಂದು ವಾರ ಕಳೆದಿದೆ.
ಕಳೆದ ಸೋಮವಾರ(ಏ.8) ರಂದು ಸರ್ವೋಚ್ಛ ನ್ಯಾಯಾಲಯ ಯಾವುದೇ ರೀತಿಯಲ್ಲೂ ಫಲಿತಾಂಶ ಪ್ರಕಟಿಸುವಂತಿಲ್ಲ ಎಂದು ಕಟ್ಟಾಜ್ಞೆ ಹೊರಡಿಸಿತ್ತು. ಆದರೆ, ನ್ಯಾಯಾಲಯ ರಿಟ್ ಅರ್ಜಿಯ ವಿಚಾರಣೆ ಕೈಗೆತ್ತಿಕೊಳ್ಳುವ ಮುನ್ಸೂಚನೆ ಅರಿತ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಹಿಂದಿನ ತಡ ರಾತ್ರಿ ಶಾಲಾ ಮುಖ್ಯಸ್ಥರಿಗೆ ಸುತ್ತೋಲೆ ಕಳಿಸಿ, ಏ.8ರಂದು ಬೆಳಿಗ್ಗೆ 9 ಗಂಟೆಯೊಳಗೆ ಫಲಿತಾಂಶ ಪ್ರಕಟಿಸುವಂತೆ ಆದೇಶಿಸಿತ್ತು. ಆ ಮೂಲಕ ಇಲಾಖೆ ರಂಗೋಲಿ ಕೆಳಗೆ ನುಸುಳುವ ಯತ್ನ ಮಾಡಿದ್ದನ್ನು ಗಮನಿಸಿದ ನ್ಯಾಯಾಲಯ, ಒಂದು ವೇಳೆ ತನ್ನ ಆದೇಶ ಹೊರಬೀಳುವ ಮುನ್ನ ಫಲಿತಾಂಶ ಪ್ರಕಟಿಸಿದರೂ ಅದನ್ನು ತಡೆ ಹಿಡಿಯಬೇಕು ಮತ್ತು ಯಾವುದೇ ಪೋಷಕರು ಅಥವಾ ಮಕ್ಕಳಿಗೆ ಅದನ್ನು ನೀಡಬಾರದು. ಅಲ್ಲದೆ, ಇನ್ನಾವುದೇ ಉದ್ದೇಶಕ್ಕೂ ಆ ಫಲಿತಾಂಶವನ್ನು ಬಳಸಕೂಡದು ಎಂದು ಸ್ಪಷ್ಟವಾಗಿ ಹೇಳಿದೆ.
ಅಲ್ಲದೆ, ಏ.8ರಂದು ಕೋರ್ಟ್ ತೀರ್ಪು ಹೊರಬೀಳುವ ಮುನ್ನವೇ ಬಹುತೇಕ ಶಾಲೆಗಳಲ್ಲಿ ಫಲಿತಾಂಶ ಪ್ರಕಟವಾಗಿದೆ ಎಂದು ಇಲಾಖೆ ಮತ್ತು ಶಾಲಾ ಆಡಳಿತಗಳು ಹೇಳುತ್ತಿದ್ದರೂ, ಇನ್ನೂ ಸಾಕಷ್ಟು ಶಾಲೆಗಳಲ್ಲಿ ಫಲಿತಾಂಶ ನೀಡಿಲ್ಲ. ಹಾಗಾಗಿ ಕೆಲವು ಮಕ್ಕಳ ಫಲಿತಾಂಶ ಬಂದಿದೆ, ಮತ್ತೆ ಕೆಲವು ಮಕ್ಕಳ ಫಲಿತಾಂಶ ಬಂದೇ ಇಲ್ಲ. ಇನ್ನು ಮೌಲ್ಯಮಾಪನದ ದೋಷಗಳಿಂದಾಗಿ ಕೆಲವು ಶಾಲೆಗಳಲ್ಲಿ ಬಹುತೇಕ ಮಕ್ಕಳ ಫಲಿತಾಂಶವನ್ನು ತಡೆ ಹಿಡಿಯಲಾಗಿದೆ. ಹಾಗಾಗಿ ಮಕ್ಕಳು ಮತ್ತು ಪೋಷಕರಲ್ಲಿ ಆತಂಕ ಮತ್ತು ಗೊಂದಲ ಮುಂದುವರಿದಿದೆ.
ಇದೀಗ ನ್ಯಾಯಾಲಯದ ಆದೇಶ ಹೊರಬಿದ್ದು ವಾರ ಕಳೆದರೂ ಶಿಕ್ಷಣ ಇಲಾಖೆ ಮಕ್ಕಳು ಮತ್ತು ಪೋಷಕರಿಗೆ ಇಲಾಖೆಯ ಕಡೆಯಿಂದಲಾಗಲೀ, ಶಾಲೆಗಳ ಕಡೆಯಿಂದಲಾಗಲೀ ಯಾವುದೇ ಮಾಹಿತಿ ನೀಡಲಾಗಿಲ್ಲ. ಫಲಿತಾಂಶದ ಕಥೆ ಏನು ಎಂಬುದು ಸ್ಪಷವಾಗಿಲ್ಲ.
ಈ ನಡುವೆ, ಏ.8ರ ಆದೇಶದಲ್ಲಿ ಸುಪ್ರೀಂಕೋರ್ಟ್ ಹೇಳಿರುವ ಕಟು ಮಾತುಗಳು ರಾಜ್ಯ ಶಾಲಾ ಶಿಕ್ಷಣ ಇಲಾಖೆ ಮತ್ತು ರಾಜ್ಯ ಸರ್ಕಾರ ಮಕ್ಕಳ ಪರೀಕ್ಷೆಯ ವಿಷಯದಲ್ಲಿ ಎಂಥ ಕ್ಷುಲ್ಲಕತನ ತೋರಿದೆ ಎಂಬುದನ್ನು ಸಾರಿ ಹೇಳಿವೆ.
ಮುಖ್ಯವಾಗಿ ಮೇಲ್ಮನವಿ ಅರ್ಜಿ ವಿಚಾರಣೆಯನ್ನು ನ್ಯಾಯಾಲಯ ಕೈಗೆತ್ತಿಕೊಳ್ಳಲಿದೆ ಎಂಬ ಅರಿವಿದ್ದರೂ ಸರ್ಕಾರ ಮತ್ತು ಶಿಕ್ಷಣ ಇಲಾಖೆ, ತರಾತುರಿಯಲ್ಲಿ ಏ.8ರ ಬೆಳಿಗ್ಗೆ 9ಗಂಟೆಯೊಳಗೇ ಫಲಿತಾಂಶ ಪ್ರಕಟಿಸುವ ಅತಿ ಜಾಣತನ ತೋರಿದ ವಿಷಯವನ್ನು ಪ್ರಸ್ತಾಪಿಸಿರುವ ಸುಪ್ರೀಂಕೋರ್ಟ್, ಅತ್ಯಂತ ಕಟು ಮಾತುಗಳನ್ನು ಇಂತಹ ನಡೆಯನ್ನು ಖಂಡಿಸಿದೆ.
ಕೋರ್ಟ್ ಆದೇಶದಲ್ಲಿ ಹೇಳಿರುವುದು ಇಲ್ಲಿದೆ;
ಮಕ್ಕಳ ಭವಿಷ್ಯದೊಂದಿಗೆ ಆಟವಾಡುವ ಜಿದ್ದಿಗೆ ಬಿದ್ದಿರುವ ರಾಜ್ಯ ಸರ್ಕಾರ, ಆ ಮೂಲಕ ವಿದ್ಯಾರ್ಥಿಗಳು, ಅವರ ಪೋಷಕರು, ಶಿಕ್ಷಕರು ಮತ್ತು ಶಾಲಾ ಆಡಳಿತಗಳಿಗೆ ಮಾನಸಿಕ ಹಿಂಸೆ ಮತ್ತು ದೈಹಿಕ ಸಂಕಷ್ಟವನ್ನು ನೀಡಿದೆ. ತರಾತುರಿಯಲ್ಲಿ ಫಲಿತಾಂಶ ಪ್ರಕಟಿಸಲು 06.04.2024 ರಂದು ಆದೇಶ ಹೊರಡಿಸಿದ ರೀತಿಯಲ್ಲೇ ಸರ್ಕಾರದ ದುರುದ್ದೇಶ ಕಣ್ಣಿಗೆ ರಾಚುತ್ತದೆ. ಹೈಕೋರ್ಟಿನ ದೋಷಪೂರಿತ ಆದೇಶವನ್ನು ಅರ್ಜಿದಾರರು ಪ್ರಶ್ನಿಸಲು ಅವಕಾಶವಿಲ್ಲದಂತೆ ಮತ್ತು ಒಂದು ವೇಳೆ ಪ್ರಶ್ನಿಸಿದರೂ ಅದು ಪ್ರಯೋಜನಕ್ಕೆ ಬಾರದಂತೆ ನೋಡಿಕೊಳ್ಳುವುದೇ ಆ ಆದೇಶದ ಹಿಂದಿನ ದುರುದ್ದೇಶ.
ಹೈಕೋರ್ಟಿನ ವಿಭಾಗೀಯ ಪೀಠದ ದೋಷಪೂರಿತ ಆದೇಶ ಕೂಡ ಕಡ್ಡಾಯ ಶಿಕ್ಷಣ ಕಾಯ್ದೆ(ಆರ್ಟಿಇ)ಯ ನಿಯಮಗಳು ಮತ್ತು ಒಪ್ಪಿತ ಕಾನೂನು ನಿಯಮಗಳಿಗೆ ಸಂಪೂರ್ಣ ವಿರುದ್ಧವಾಗಿದೆ ಎಂಬುದು ಮೇಲ್ನೋಟಕ್ಕೇ ಕಾಣಿಸುತ್ತಿದೆ.
ಆ ಹಿನ್ನೆಲೆಯಲ್ಲಿ ಪ್ರತಿವಾದಿಯಾದ ಸರ್ಕಾರಕ್ಕೆ 23.04.2024ರ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿ.
ಮೇಲಿನ ಕಾರಣಗಳಿಂದಾಗಿ(ಆರ್ ಟಿಇ ಕಾನೂನಿಗೆ ವಿರುದ್ಧ ಮತ್ತು ಮಕ್ಕಳು, ಪೋಷಕರ ವಿರುದ್ಧ ದುರುದ್ದೇಶದ ನಡೆ) 22.03.2024ರ ಹೈಕೋರ್ಟ್ ವಿಭಾಗೀಯ ಪೀಠದ ಆದೇಶ(ಪರೀಕ್ಷೆ ನಡೆಸುವಂತೆ ಅನುಮತಿ ನೀಡಿದ ಆದೇಶ) ಹಾಗೂ ಕರ್ನಾಟಕ ಶಾಲಾ ಗುಣಮಟ್ಟ ಮಾಪನ ಮತ್ತು ಮೌಲ್ಯಾಂಕನ ಸಮಿತಿಯ 06.04.2024ರ ಆದೇಶಗಳನ್ನು(ಫಲಿತಾಂಶ ಪ್ರಕಟಿಸುವಂತೆ ತರಾತುರಿಯ ಆದೇಶ) ತತಕ್ಷಣದಿಂದಲೇ ಜಾರಿಗೆ ಬರುವಂತೆ, ಮುಂದಿನ ಆದೇಶದವರೆಗೆ ತಡೆ ಹಿಡಿಯಲಾಗಿದೆ.
06.04.2024ರ ಆದೇಶದ ಪ್ರಕಾರ ಒಂದು ವೇಳೆ ಶಾಲೆಗಳಲ್ಲಿ ಫಲಿತಾಂಶ ಪ್ರಕಟಿಸಿದ್ದರೂ, ಅದನ್ನು ಅಮಾನತುಗೊಳಿಸಬೇಕು ಮತ್ತು ಆ ಫಲಿತಾಂಶವನ್ನು ಯಾವುದೇ ಉದ್ದೇಶಕ್ಕೂ ಪರಿಗಣಿಸುವಂತಿಲ್ಲ. ಜೊತೆಗೆ ಆ ಫಲಿತಾಂಶವನ್ನು ಮಕ್ಕಳ ಪೋಷಕರಿಗೆ ಒದಗಿಸುವಂತಿಲ್ಲ.
- ಇದಿಷ್ಟು ಸುಪ್ರೀಂಕೋರ್ಟ್ ತನ್ನ 08.04.2024ರ ಆದೇಶದಲ್ಲಿ ಸ್ಪಷ್ಟವಾಗಿ ಮತ್ತು ಕಟುವಾಗಿ ಹೇಳಿರುವುದು. ಜೊತೆಗೆ ಪ್ರಕರಣದ ವಿಚಾರಣೆಯನ್ನು 23.04.2024ಕ್ಕೆ ಮುಂದೂಡಲಾಗಿದೆ.
ನ್ಯಾಯಾಲಯ ಇಷ್ಟು ಕಟುವಾಗಿ, ರಾಜ್ಯ ಸರ್ಕಾರ(ಶಿಕ್ಷಣ ಇಲಾಖೆ) ಮಕ್ಕಳು, ಪೋಷಕರು, ಶಿಕ್ಷಕರು ಮತ್ತು ಶಾಲಾ ಆಡಳಿತಗಳ ವಿರುದ್ಧ ದುರುದ್ದೇಶದಿಂದ ನಡೆದುಕೊಂಡಿದೆ. ಮಕ್ಕಳ ಭವಿಷ್ಯದ ಜೊತೆ ಆಟವಾಡುತ್ತಿದೆ ಎಂದು ಹೇಳಿದ್ದರೂ, ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಿತೇಶ್ ಕುಮಾರ್ ಸಿಂಗ್ ಅವರು, ಈಗಾಗಲೇ ಪಬ್ಲಿಕ್ ಪರೀಕ್ಷೆಯ ಫಲಿತಾಂಶ ಪ್ರಕಟಿಸಲಾಗಿದೆ. ಮಕ್ಕಳಿಗೆ ಬೇಸಿಗೆ ರಜೆಯನ್ನೂ ನೀಡಲಾಗಿದೆ. ಈ ಬಗ್ಗೆ ಅಡ್ವೋಕೇಟ್ ಜನರಲ್ ಜೊತೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದಿದ್ದಾರೆ.
ಬಗೆಹರಿಸಬೇಕಾದವರು ನಾಟ್ ರೀಚಬಲ್!
ಆದರೆ, ವಾಸ್ತವವಾಗಿ ಏ.8ರಂದು ಸುಪ್ರೀಂಕೋರ್ಟ್ ತೀರ್ಪು ಹೊರಬೀಳುವ ಮುನ್ನ ಫಲಿತಾಂಶ ಪ್ರಕಟಿಸಿದ ಶಾಲೆಗಳ ಮಕ್ಕಳಿಗೆ ಮಾತ್ರ ಫಲಿತಾಂಶ ಸಿಕ್ಕಿದೆ. ಇನ್ನುಳಿದ ಹಲವು ಶಾಲೆಗಳಲ್ಲಿ ಈವರೆಗೂ ಮಕ್ಕಳು ಪಾಸಾದರೋ, ಇಲ್ಲವೋ? ಮುಂದಿನ ತರಗತಿಗೆ ಅಡ್ಮಿಷನ್ ಮಾಡಿಸುವುದೋ? ಬೇಡವೋ ಎಂಬ ಗೊಂದಲ ಮುಂದುವರಿದಿದೆ. ಆದರೆ, ಈ ವಾಸ್ತವಾಂಶವನ್ನೇ ಮರೆಮಾಚುತ್ತಿರುವ ಶಿಕ್ಷಣ ಇಲಾಖೆಯ ಅಧಿಕಾರಿಗಳ ವರ್ತನೆ ಪೋಷಕರು ಮತ್ತು ಸಾರ್ವಜನಿಕರ ಆಕ್ರೋಶಕ್ಕೆ ತುತ್ತಾಗಿದೆ.
8ನೇ ತರಗತಿ ಪಬ್ಲಿಕ್ ಪರೀಕ್ಷೆ ಬರೆದಿರುವ ತಮ್ಮ ಮಗಳ ಫಲಿತಾಂಶವೇ ಸಿಕ್ಕಿಲ್ಲ ಎಂದು ಗೊಂದಲಕ್ಕೀಡಾಗಿರುವ ಮಂಡ್ಯದ ಪೋಷಕರೊಬ್ಬರು ʼದ ಫೆಡರಲ್ ಕರ್ನಾಟಕʼದೊಂದಿಗೆ ಮಾತನಾಡುತ್ತಾ, “ನಮ್ಮ ಮಗಳನ್ನು ಮುಂದಿನ ತರಗತಿಗೆ ಬೇರೆ ಶಾಲೆಗೆ ಸೇರಿಸುವ ಉದ್ದೇಶವಿತ್ತು. ಆದರೆ, ಈಗ ಎಂಟನೇ ತರಗತಿಯ ಫಲಿತಾಂಶವೇ ಇನ್ನೂ ಬಂದಿಲ್ಲ. ಈ ಫಲಿತಾಂಶದ ಬಗ್ಗೆಯೂ ಯಾವ ಕ್ಲಾರಿಟಿ ಇಲ್ಲದೆ ದುಬಾರಿ ಶುಲ್ಕ ಕೊಟ್ಟು ಹೊಸ ಶಾಲೆಗೆ ಸೇರಿಸುವುದು ಹೇಗೆ? ಎಂಬ ಯೋಚನೆ. ತಡವಾಗಿ ಆ ಶಾಲೆಯಲ್ಲಿ ಸೀಟು ಸಿಗದೇ ಹೋದರೆ ಅವಳ ಓದಿಗೆ ತೊಂದರೆ ಅನ್ನೋ ಆತಂಕ. ಕೇಳೋಣ ಎಂದರೆ ಶಾಲಾ ಪ್ರಿನ್ಸಿಪಾಲರು ಇಲಾಖೆ ಕಡೆ ಬೊಟ್ಟು ಮಾಡುತ್ತಾರೆ. ಇಲಾಖೆಯಲ್ಲಿ ಯಾವ ಅಧಿಕಾರಿಗಳೆಲ್ಲಾ ಚುನಾವಣೆ ಕೆಲಸಕ್ಕೆ ಹೋಗಿದ್ದಾರಂತೆ. ಇನ್ನು ಇಲಾಖೆಯ ಸಚಿವರು ಈ ಬಗ್ಗೆ ಏನಾದರೂ ಹೇಳಿಯಾರು ಎಂದರೆ, ಅವರಂತೂ ತಿಂಗಳಿಂದ ಮಕ್ಕಳ ಪರೀಕ್ಷೆ, ಭವಿಷ್ಯ ಎಲ್ಲ ಮರೆತು ಶಿವಮೊಗ್ಗದಲ್ಲಿ ಚುನಾವಣೆ ಪ್ರಚಾರದಲ್ಲಿ ಮುಳುಗಿದ್ದಾರೆ. ಇನ್ನು ಯಾರನ್ನು ಕೇಳುವುದು ಹೇಳಿ..” ಎಂದು ಅಸಹಾಯಕತೆ ವ್ಯಕ್ತಪಡಿಸಿದರು.
ಒಟ್ಟಾರೆ ಕಳೆದ ಒಂದೂವರೆ ತಿಂಗಳಿಂದ ಮುಂದುವರಿದಿರುವ ಪಬ್ಲಿಕ್ ಪರೀಕ್ಷೆಯ ಗೊಂದಲ ಬಗೆಹರಿದಿಲ್ಲ. ಗೊಂದಲ ಬಗೆಹರಿಸಬೇಕಾದ ಸಚಿವ ಮಧು ಬಂಗಾರಪ್ಪ ಅವರು ಸದ್ಯಕ್ಕೆ ʼನಾಟ್ ರೀಚಬಲ್ʼ!