60ಕ್ಕೂ ಹೆಚ್ಚು ರೋಗ ಹರಡುವ ಪಾರಿವಾಳಗಳು! ʼಕಾಳು ಹಾಕಿದರೆʼ ದಂಡ ಖಂಡಿತ!!
x

ರಾಜ್ಯದಲ್ಲಿ ಪಾರಿವಾಳಗಳಿಗೆ ಆಹಾರ ಹಾಕುವುದನ್ನು ನಿಷೇಧಿಸಲಾಗಿದೆ. 

60ಕ್ಕೂ ಹೆಚ್ಚು ರೋಗ ಹರಡುವ ಪಾರಿವಾಳಗಳು! ʼಕಾಳು ಹಾಕಿದರೆʼ ದಂಡ ಖಂಡಿತ!!

ಪಾರಿವಾಳಗಳ ಹಿಕ್ಕೆ ಮತ್ತು ಗರಿಗಳಿಂದ ಹರಡುವ ಗಂಭೀರ ಉಸಿರಾಟದ ಕಾಯಿಲೆಗಳ ಬಗ್ಗೆ ಎಚ್ಚರಿಕೆ ನೀಡಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಈ ಕುರಿತು ಅಧಿಕೃತ ಆದೇಶ ಹೊರಡಿಸಿದೆ.


Click the Play button to hear this message in audio format

ಸಾರ್ವಜನಿಕ ಸ್ಥಳಗಳಾದ ಕಬ್ಬನ್‌ ಪಾರ್ಕ್‌, ಲಾಲ್‌ಬಾಗ್‌, ನಗರದ ಹಲವು ಪಾರ್ಕ್‌, ರಸ್ತೆಗಳು, ಶಾಲಾ ಅವರಣ... ಹೀಗೆ ಅನೇಕರು ಪಾರಿವಾಳಗಳಿಗೆ ʼಕಾಳುʼ ಹಾಕಿ ಪಕ್ಷಿ ಪ್ರೇಮ ಮೆರೆಯುತ್ತಾರೆ. ಆದರೆ, ಅವರು ರೋಗಗಳನ್ನು ಹರಡಲು ಕಾರಣರಾಗುತ್ತಿದ್ದಾರೆ ಎಂದು ಗೊತ್ತಿದೆಯೆ?

ಹೌದು.. ಈ ಪಾರಿವಾಳಗಳು ಶ್ವಾಸಕೋಶಕ್ಕೆ ಸಂಬಂಧಿಸಿದ ಸುಮಾರು 60ಕ್ಕೂ ಹೆಚ್ಚು ಕಾಯಿಲೆಗಳನ್ನು ಹರಡುತ್ತವೆ! ಸಾರ್ವಜನಿಕ ಸ್ಥಳಗಳಲ್ಲಿ ಕಾಳುಗಳನ್ನು ಚೆಲ್ಲಿ, ಪಾರಿವಾಳಗಳನ್ನು ಪೋಷಿಸುವ ಹಲವರು ರೋಗ ಹರಡುವ ವಾಹಕಗಳಾಗಿ ಪರಿವರ್ತನೆಯಾಗುತ್ತಾರೆ!

ಹಾಗಾಗಿ ಜನರ ಈ ವರ್ತನೆ ಸಾರ್ವಜನಿಕ ಆರೋಗ್ಯಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ!

ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಅತ್ಯಂತ ಕಠಿಣ ಮಾರ್ಗಸೂಚಿಗಳನ್ನು ಜಾರಿಗೆ ತಂದಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಪಾರಿವಾಳಗಳಿಗೆ ಕಾಳು ಹಾಕುವುದನ್ನು ಸಂಪೂರ್ಣವಾಗಿ ನಿಷೇಧಿಸಿದೆ.

ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಆರೋಗ್ಯ ಇಲಾಖೆ ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಂಡಿದ್ದು, ನಗರದ ಸಾರ್ವಜನಿಕ ಸ್ಥಳಗಳಲ್ಲಿ ಪಾರಿವಾಳಗಳಿಗೆ ಆಹಾರ ನೀಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಿದೆ. ಪಾರಿವಾಳಗಳ ಹಿಕ್ಕೆ ಮತ್ತು ಗರಿಗಳಿಂದ ಹರಡುವ ಗಂಭೀರ ಉಸಿರಾಟದ ಕಾಯಿಲೆಗಳ ಬಗ್ಗೆ ಎಚ್ಚರಿಕೆ ನೀಡಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಈ ಕುರಿತು ಅಧಿಕೃತ ಆದೇಶ ಹೊರಡಿಸಿದೆ.

ಸಾರ್ವಜನಿಕರಿಗೆ ತೊಂದರೆಯಾಗುವ ಅಥವಾ ಆರೋಗ್ಯಕ್ಕೆ ಹಾನಿಯಾಗುವ ಯಾವುದೇ ಸ್ಥಳಗಳಲ್ಲಿ ಪಾರಿವಾಳಗಳಿಗೆ ಕಾಳುಗಳನ್ನು ಹಾಕುವಂತಿಲ್ಲ. ಕೇವಲ ಗ್ರೇಟರ್‌ ಬೆಂಗಳೂರು ಆಥಾರಿಟಿ (ಜಿಬಿಎ) ಗುರುತಿಸಿದ ನಿರ್ದಿಷ್ಟ ಸ್ಥಳಗಳಲ್ಲಿ ಮಾತ್ರ, ನಿಗದಿತ ಸಮಯದಲ್ಲಿ ಮತ್ತು ನಿಯಂತ್ರಿತ ರೀತಿಯಲ್ಲಿ ಆಹಾರ ನೀಡಲು ಅವಕಾಶ ನೀಡಲಾಗಿದೆ. ಈ ಸ್ಥಳಗಳ ನಿರ್ವಹಣೆಯ ಜವಾಬ್ದಾರಿಯನ್ನು ಸ್ವಯಂಸೇವಾ ಸಂಸ್ಥೆಗಳು ಅಥವಾ ಚಾರಿಟಬಲ್ ಟ್ರಸ್ಟ್‌ಗಳಿಗೆ ವಹಿಸಲಾಗಿದೆ.

ನಿಯಮ ಉಲ್ಲಂಘಿಸಿದ ಬೀಳುತ್ತೆ ದಂಡ

ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಜರುಗಿಸಲು ಸ್ಥಳೀಯ ಅಧಿಕಾರಿಗಳಿಗೆ ಪೂರ್ಣ ಅಧಿಕಾರ ನೀಡಲಾಗಿದೆ. ಈ ನಿಷೇಧವನ್ನು ಉಲ್ಲಂಘಿಸಿದರೆ ಭಾರತೀಯ ನ್ಯಾಯ ಸಂಹಿತೆ 2023ರ ಸೆಕ್ಷನ್ 270 ಮತ್ತು 271ರ ಅಡಿಯಲ್ಲಿ ಸಾರ್ವಜನಿಕ ಉಪಟಳ ಮತ್ತು ಸೋಂಕು ಹರಡುವ ನಿರ್ಲಕ್ಷ್ಯದ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗುವುದು. ದೋಷಿಗಳಿಗೆ ದಂಡದ ಜೊತೆಗೆ ಆರು ತಿಂಗಳವರೆಗೆ ಜೈಲು ಶಿಕ್ಷೆ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ. ಈ ಮಾರ್ಗಸೂಚಿಗಳನ್ನು ತಕ್ಷಣವೇ ಜಾರಿಗೆ ತರುವಂತೆ ನಗರಾಭಿವೃದ್ಧಿ ಇಲಾಖೆಗೆ ಸೂಚನೆ ನೀಡಲಾಗಿದೆ.

ವೈದ್ಯರು ಹೇಳುವುದೇನು?

ʻʻಸಾಮಾನ್ಯವಾಗಿ ಪಾರಿವಾಳಗಳು ಗುಂಪುಗೂಡುವ ಸ್ಥಳಗಳಲ್ಲಿ ಅವುಗಳ ಮಲ (ಹಿಕ್ಕೆ) ಮತ್ತು ಉದುರಿದ ಪುಕ್ಕಗಳು ಗಾಳಿಯಲ್ಲಿ ಮಿಶ್ರಣಗೊಳ್ಳುತ್ತವೆ. ಪಾರಿವಾಳದ ಮಲ ಒಣಗಿದಾಗ ಅದು ಕಣ್ಣಿಗೆ ಕಾಣದಷ್ಟು ಸಣ್ಣ ಕಣಗಳಾಗಿ ಮಾರ್ಪಟ್ಟು ಗಾಳಿಯಲ್ಲಿ ತೇಲುತ್ತವೆ. ಇಂತಹ ಗಾಳಿಯನ್ನು ಜನರು ಉಸಿರಾಡಿದಾಗ ಶ್ವಾಸಕೋಶಕ್ಕೆ ಸಂಬಂಧಿಸಿದ ಹೈಪರ್ ಸೆನ್ಸಿಟಿವಿಟಿ ನ್ಯೂಮೋನೈಟಿಸ್ ನಂತಹ ತೀವ್ರತರವಾದ ಸೋಂಕುಗಳು ಉಂಟಾಗುತ್ತವೆ. ಇದು ದೀರ್ಘಕಾಲದ ಕೆಮ್ಮು, ಉಸಿರಾಟದ ತೊಂದರೆ ಮತ್ತು ಶ್ವಾಸಕೋಶದ ಕಾರ್ಯಕ್ಷಮತೆ ಕುಸಿಯಲು ಕಾರಣವಾಗುತ್ತದೆ. ಈ ಕಾಯಿಲೆಯು ಒಮ್ಮೆ ಉಲ್ಬಣಗೊಂಡರೆ ಶ್ವಾಸಕೋಶಕ್ಕೆ ಶಾಶ್ವತ ಹಾನಿಯಾಗುವ ಸಾಧ್ಯತೆ ಇರುತ್ತದೆʼʼ ಎಂದು ಕೆಎಲ್ಇ ಡಾ ಪ್ರಭಾಕರ ಕೋರೆ ಮತ್ತು ಆಸ್ಪತ್ರೆ ಸಂಶೋಧನಾ ಕೇಂದ್ರ ಬೆಳಗಾವಿ ಆಸ್ಪತ್ರೆಯ ಶ್ವಾಸಕೋಶಶಾಸ್ತ್ರಜ್ಞ ಡಾ. ನಿಂಗಪ್ಪ ಕರಲಿಂಗಣ್ಣವರ್ ಅವರು ʻದ ಫೆಡರಲ್‌ ಕರ್ನಾಟಕʼಕ್ಕೆ ತಿಳಿಸಿದರು.

ಕೇವಲ ಶ್ವಾಸಕೋಶದ ಸಮಸ್ಯೆ ಮಾತ್ರವಲ್ಲದೆ, ಪಾರಿವಾಳಗಳ ದಟ್ಟಣೆಯಿಂದಾಗಿ ಹಿಸ್ಟೋಪ್ಲಾಸ್ಮಾ ಮತ್ತು ಕ್ರಿಪ್ಟೋಕೊಕಸ್‌ನಂತಹ ಅಪಾಯಕಾರಿ ಶಿಲೀಂಧ್ರ ರೋಗಗಳು ಕೂಡ ಹರಡುತ್ತವೆ. ಇದು ವಿಶೇಷವಾಗಿ ಮಕ್ಕಳು, ವೃದ್ಧರು ಮತ್ತು ರೋಗನಿರೋಧಕ ಶಕ್ತಿ ಕಡಿಮೆ ಇರುವವರ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ನಗರ ಪ್ರದೇಶದ ಜನದಟ್ಟಣೆಯ ರಸ್ತೆಗಳಲ್ಲಿ ಮತ್ತು ಪಾರ್ಕ್‌ಗಳಲ್ಲಿ ಜನರು ಪಾರಿವಾಳಗಳಿಗೆ ಧಾನ್ಯಗಳನ್ನು ಸುರಿಯುವುದರಿಂದ ಈ ಪಕ್ಷಿಗಳು ಒಂದೇ ಕಡೆ ಅತಿಯಾಗಿ ಜಮಾಯಿಸುತ್ತವೆ. ಇದರಿಂದ ಪರಿಸರದ ನೈರ್ಮಲ್ಯ ಹಾಳಾಗುವುದಲ್ಲದೆ ಸೋಂಕು ಹರಡುವ ವೇಗವೂ ಹೆಚ್ಚಾಗುತ್ತದೆ.

60ಕ್ಕೂ ಹೆಚ್ಚು ಕಾಯಿಲೆ

ಸಂಶೋಧನೆಗಳ ಪ್ರಕಾರ, ಪಾರಿವಾಳಗಳಿಂದ ಸುಮಾರು 60ಕ್ಕೂ ಹೆಚ್ಚು ಕಾಯಿಲೆಗಳು ಹರಡುವ ಸಾಧ್ಯತೆಯಿದೆ. ವಿಶೇಷವಾಗಿ ಅಸ್ತಮಾ ರೋಗಿಗಳಲ್ಲಿ ಪಾರಿವಾಳಗಳ ಧೂಳಿನಿಂದ ಉಸಿರಾಟದ ತೊಂದರೆ ಉಲ್ಬಣಗೊಳ್ಳುತ್ತಿದೆ. ನಗರದ ಯಾವ ಭಾಗಗಳಲ್ಲಿ ಪಾರಿವಾಳಗಳ ಸಮೂಹ ಹೆಚ್ಚಿದೆಯೋ, ಅಂತಹ ಪ್ರದೇಶದ ಜನರಲ್ಲಿ ಉಸಿರಾಟದ ಸಮಸ್ಯೆಗಳು ಶೇ. 20 ರಿಂದ 30 ರಷ್ಟು ಹೆಚ್ಚಾಗಿವೆ ಎಂದು ಅಧ್ಯಯನಗಳು ತಿಳಿಸಿವೆ.

ಭಾರತದಲ್ಲಿ ಪಾರಿವಾಳಗಳಿಗೆ ಆಹಾರ ನೀಡುವುದು ಒಂದು ಸಾಂಪ್ರದಾಯಿಕ ಮತ್ತು ಧಾರ್ಮಿಕ ಆಚರಣೆಯಾಗಿದೆ. ನಗರಗಳ ಪ್ರಮುಖ ಚೌಕಗಳಲ್ಲಿ ಮುಂಜಾನೆ ಧಾನ್ಯಗಳನ್ನು ಹರಡುವುದು ಮತ್ತು ಇದನ್ನು ಪುಣ್ಯದ ಕೆಲಸವೆಂದು ಭಾವಿಸುವುದು ಹಲವು ತಲೆಮಾರುಗಳಿಂದ ನಡೆದುಬಂದಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಪಾರಿವಾಳಗಳ ಸಂಖ್ಯೆ ಮಿತಿಮೀರಿ ಹೆಚ್ಚುತ್ತಿರುವುದು ಮತ್ತು ಅವುಗಳಿಂದ ಹರಡುವ ರೋಗಗಳ ಬಗ್ಗೆ ವೈದ್ಯಕೀಯ ಲೋಕ ಕಳವಳ ವ್ಯಕ್ತಪಡಿಸುತ್ತಿದೆ. ಇದರಿಂದಾಗಿ ದೇಶದ ಪ್ರಮುಖ ನಗರಗಳಲ್ಲಿ ಪಾರಿವಾಳಗಳಿಗೆ ಆಹಾರ ನೀಡುವುದನ್ನು ನಿಯಂತ್ರಿಸಲು ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

ಬೆಂಗಳೂರು ಮಾತ್ರವಲ್ಲದೆ, ಮುಂಬೈ ನಗರದಲ್ಲೂ ಇಂತಹದ್ದೇ ಪರಿಸ್ಥಿತಿ ನಿರ್ಮಾಣವಾಗಿದೆ. ಮುಂಬಯಿ ಹೈಕೋರ್ಟ್ ಪಾಲಿಕೆಯ ನಿಷೇಧದ ನಿರ್ಧಾರವನ್ನು ಎತ್ತಿಹಿಡಿದ ನಂತರ ಅಲ್ಲಿನ ಐತಿಹಾಸಿಕ 'ಕಬೂತರಖಾನಾ'ಗಳನ್ನು ಮುಚ್ಚಲಾಗಿದೆ. ಇದನ್ನು ವಿರೋಧಿಸಿ ಹಲವು ಸಮುದಾಯಗಳು ಪ್ರತಿಭಟನೆಯನ್ನೂ ನಡೆಸಿವೆ. ಹಾಗೆಯೇ ಪುಣೆ, ಠಾಣೆ ಮತ್ತು ದೆಹಲಿಯಂತಹ ನಗರಗಳೂ ಕೂಡ ಇಂತಹ ನಿಷೇಧಗಳನ್ನು ಜಾರಿಗೆ ತರಲು ಅಥವಾ ನಿಯಮಗಳನ್ನು ಬಿಗಿಗೊಳಿಸಲು ಮುಂದಾಗಿವೆ. ವಿಶೇಷವಾಗಿ ದೆಹಲಿಯ ಹಲವು ವಸತಿ ಸಂಕೀರ್ಣಗಳ ನಿವಾಸಿಗಳು ಪಾರಿವಾಳಗಳ ಕಾಟದಿಂದ ಉಸಿರಾಟದ ಸಮಸ್ಯೆ ಎದುರಿಸುತ್ತದ್ದಾರೆ ಎಂಬ ವರದಿಗಳು ಇವೆ.

ಆದರೆ ಈ ನಿರ್ಬಂಧಗಳಿಗೆ ಧಾರ್ಮಿಕ ಮತ್ತು ಸಾಮಾಜಿಕ ವಲಯಗಳಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಜೈನ್ ಮತ್ತು ಗುಜರಾತಿ ಸಮುದಾಯಗಳಲ್ಲಿ ಪಕ್ಷಿಗಳಿಗೆ ಆಹಾರ ನೀಡುವುದು ಒಂದು ಆಧ್ಯಾತ್ಮಿಕ ಕರ್ತವ್ಯವೆಂದು ಪರಿಗಣಿಸಲಾಗಿದೆ. ಪ್ರಾಣಿ ದಯಾ ಸಂಘಗಳು ಕೂಡ ಈ ಹಠಾತ್ ನಿಷೇಧದಿಂದ ಪಾರಿವಾಳಗಳು ಹಸಿವಿನಿಂದ ಬಳಲುತ್ತವೆ ಎಂಬ ಆತಂಕ ವ್ಯಕ್ತಪಡಿಸಿವೆ.

ಪಕ್ಷಿಪ್ರೇಮಿಗಳು ಹೇಳುವುದೇನು?

ಈ ಬಗ್ಗೆ ʻದ ಫೆಡರಲ್‌ ಕರ್ನಾಟಕʼದೊಂದಿಗೆ ಮಾತನಾಡಿರುವ ಪಕ್ಷಿ ವೀಕ್ಷಕ ಹಾಗೂ ಪಕ್ಷಿಪ್ರೇಮಿ ಜೆ.ಎನ್. ಪ್ರಸಾದ್ ಅವರು, ``ಪಾರಿವಾಳಗಳು ರೆಕ್ಕೆ ಇರುವ ಇಲಿಗಳು. ಇಲಿಗಳು ಹೇಗೆ ಬೇರೆ ಬೇರೆ ಕಾಯಿಲೆಗಳನ್ನು ತಂಡೊಡ್ಡುತ್ತವೋ ಪಾರಿವಾಳಗಳು ಕೂಡ ಅನೇಕ ಆರೋಗ್ಯ ಸಮಸ್ಯೆಗಳನ್ನು ತಂಡೊಡ್ಡುತ್ತವೆ. ಸರ್ಕಾರದ ನಡೆಯ ಬಗ್ಗೆ ಪಕ್ಷಿ ಪ್ರೇಮಿಗಳು ವಿರೋಧ ವ್ಯಕ್ತಪಡಿಸಿರುವ ಬಗ್ಗೆ ಮಾತನಾಡಿದ ಅವರು, ವ್ಯಕ್ತಿಗಳ ಅನುಭವಗಳು ಕೇವಲ ಅವರ ವೈಯಕ್ತಿಕ ಅಭಿಪ್ರಾಯಗಳಾಗಿರುತ್ತವೆಯೇ ಹೊರತು ಅವು ಸಾರ್ವತ್ರಿಕ ಸತ್ಯಗಳಲ್ಲ ಎಂದು ಎಚ್ಚರಿಸಿದರು.

"ಪಟಾಕಿ, ಧೂಳು ಅಥವಾ ಪರಿಸರ ಮಾಲಿನ್ಯದಿಂದ ಉಂಟಾಗುವ ಉಸಿರಾಟದ ತೊಂದರೆಗಳು ಒಬ್ಬರಿಗೆ ವೈಯಕ್ತಿಕ ಸಮಸ್ಯೆಯಾಗಿರಬಹುದು, ಆದರೆ ಅದನ್ನು ಇಡೀ ಸಮಾಜಕ್ಕೆ ಅನ್ವಯಿಸಿ ನೋಡುವುದು ಸರಿಯಲ್ಲ. ಆದರೆ ಸಮಸ್ಯೆಗಳ ಸತ್ಯಾಂಶತೆಗಳನ್ನು ತಿಳಿದುಕೊಳ್ಳಬೇಕು'' ಎಂದು ಅವರು ಅಭಿಪ್ರಾಯಪಟ್ಟರು.

ಜನರ ಆರೋಗ್ಯ ದೃಷ್ಟಿಯಿಂದ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದ್ದು, ನಗರದ ಹೆಚ್ಚು ಜನದಟ್ಟಣೆ ಇರುವ ಪ್ರದೇಶಗಳಲ್ಲಿ ಪಾರಿವಾಳಗಳಿಗೆ ಆಹಾರ ನೀಡುವುದನ್ನು ನಿಷೇಧಿಸಲು ಸ್ಥಳೀಯ ಸಂಸ್ಥೆಗಳಿಗೆ ಸೂಚನೆ ನೀಡಿದೆ. ಈ ನಿಯಮವನ್ನು ಉಲ್ಲಂಘಿಸುವವರಿಗೆ ದಂಡ ಅಥವಾ ಜೈಲು ಶಿಕ್ಷೆ ವಿಧಿಸುವ ಸಾಧ್ಯತೆಯೂ ಇದೆ. ಈ ಮೂಲಕ ನಗರದಲ್ಲಿ ಪಾರಿವಾಳಗಳ ಹಾವಳಿ ಮತ್ತು ರೋಗ ಹರಡುವಿಕೆಯನ್ನು ತಡೆಗಟ್ಟುವುದು ಸರ್ಕಾರದ ಉದ್ದೇಶವಾಗಿದೆ.


Read More
Next Story