ನುಡಿನಮನ| ದಟ್ಟ ಎಡಪಂಥೀಯ ಕಾಡಿನಲ್ಲಿ ತಮ್ಮದೇ ‘ಆವರಣ’ ಕಟ್ಟಿಕೊಂಡವರು!
x

ನುಡಿನಮನ| ದಟ್ಟ ಎಡಪಂಥೀಯ ಕಾಡಿನಲ್ಲಿ ತಮ್ಮದೇ ‘ಆವರಣ’ ಕಟ್ಟಿಕೊಂಡವರು!

"ನಾವು ತೇಜಸ್ವಿಯವರನ್ನು ಓದಿದಷ್ಟೇ ಪ್ರೀತಿಯಿಂದ ಭೈರಪ್ಪನವರನ್ನೂ ಓದುವುದು ಸಾಧ್ಯವಾದಾಗ ಮಾತ್ರ ಸಾಹಿತಿ ಮತ್ತು ಸಾಹಿತ್ಯದ ಅಪ್ರಾಪ್ರಿಯೇಷನ್‌ಗಳು ತಪ್ಪುತ್ತವೆ." ಎಸ್‌.ಎಲ್‌. ಭೈರಪ್ಪ ಅವರಿಗೆ ನುಡಿನಮನ- ಹಿರಿಯ ಪತ್ರಕರ್ತ ಅನಂತ ಚಿನಿವಾರ್‌ ಲೇಖನ


ಅದೊಂದು ದಟ್ಟ ಎಡಪಂಥೀಯ ಕನವರಿಕೆಗಳ ಕಾಡು!

ಅಲ್ಲಿ, ಬರೆದದ್ದೆಲ್ಲವೂ ಮಾರ್ಕ್ಸ್-ಲೆನಿನ್-ದೋಸ್ತೋಯೆವ್ಸ್‌ಕಿ-ಚೆಕಾಫ್-ಬೋದಿಲೇರ್ ಅವರ ಯೋಚನೆಗಳ ರಕ್ತ ಮಾಂಸಗಳನ್ನೇ ತುಂಬಿಕೊಂಡಿರಬೇಕಿತ್ತು. ಅಕ್ಷರಗಳು ಕೆಂಪುಕೆಂಪಾಗಿರಬೇಕಿತ್ತು. ನಮ್ಮ ನೆಲದ ಮಣ್ಣು ಮಾನವ ಇತಿಹಾಸದ ಯಾವ ಹೆಗ್ಗಳಿಕೆಗಳಿಗೂ ಪಾತ್ರವೇ ಅಲ್ಲ ಅನ್ನುವ ಕಥನಗಳಿರಬೇಕಿತ್ತು. ಜಾತ್ಯತೀತತೆಯ ಘೋಷಗಳಿರಬೇಕಿತ್ತು. ಸಮಾಜವಾದದ ಪರಾಕುಗಳಿರಬೇಕಿತ್ತು.

ಬರೆದವರು ತಮ್ಮ ಚಿಂತನೆಗಳಿಗೆ ಹತ್ತಿರವಾಗಿ ಬದುಕುತ್ತಿದ್ದರೋ ಇಲ್ಲವೋ ಅನ್ನುವುದು ಅಲ್ಲಿ ಮುಖ್ಯವೇ ಆಗಿರಲಿಲ್ಲ. “ಚಿಂತನೆ” ಮುಖ್ಯ, ಅಷ್ಟೇ! ಬದುಕು-ಬರಹ ಬೇರೆಬೇರೆ ಅನ್ನುವ ಒಂದು ಪರಮ ಅನುಕೂಲಸಿಂಧು ಸಿದ್ಧಾಂತವನ್ನೇ ಕಟ್ಟಿಕೊಂಡು ಪಟ್ಟಾಗಿ ಕೂತುಬಿಟ್ಟಿತ್ತು ಒಂದು ರಷ್ಯಾ ಪ್ರಣೀತ-ಬ್ರಿಟಿಷ್ ಪೋಷಿತ ಪಡೆ. ತಾವು ಗಾಂಧಿ ಅನುಯಾಯಿಗಳು ಅಂತ ಹೇಳಿ ಪುಳಕಗೊಳ್ಳುತ್ತಿದ್ದ, ಆದರೆ ಗಾಂಧಿಯವರು ತಮ್ಮ ಬರಹ-ನಡೆ-ನುಡಿ-ಕೃತಿಗಳಲ್ಲಿ ವ್ಯತ್ಯಾಸವೇ ಇಲ್ಲದ ಹಾಗೆ ಬದುಕಿದ್ದರು ಅನ್ನುವುದನ್ನು ಎದೆಗಿಳಿಸಿಕೊಳ್ಳದ ಒಂದು ಬಹುದೊಡ್ಡ, ಬಹು ಪ್ರಭಾವಶಾಲೀ ಪಡೆ ಅದು.

ಅಂಥದ್ದೊಂದು ಪಡೆಗೆ ತಮ್ಮ ‘ಧರ್ಮಶ್ರೀ’ ಮೂಲಕ ಮೊದಲ ಕಂಪನ ಕೊಟ್ಟವರು, ಎಸ್ಸೆಲ್ ಭೈರಪ್ಪ! ಎಲ್ಲ ರೀತಿಯಲ್ಲೂ ಆ ದಟ್ಟಕಾಡಿನ ಬುಡ ಅಲ್ಲಾಡಿಸಿದ, ಅದೇ ಕಾಡಿನಲ್ಲಿ ತಮ್ಮದೇ ಒಂದು ಆವರಣ ಕಟ್ಟಿಕೊಂಡು ಬದುಕಿದ, ತಮ್ಮ ಮಂದ್ರಸ್ಥಾಯೀ ಆಲಾಪಗಳಿಂದಲೇ ʻಎಡʼದ ಎದುರಾಳಿಗಳನ್ನು ನಿರಂತರವಾಗಿ ಕೆಣಕಿದ, ಅವರ ಯಾವ ಹೂಂಕಾರಗಳಿಗೂ-ಅವಜ್ಞೆಗಳಿಗೂ ಉತ್ತರಿಸದೆಯೇ ಅವರನ್ನು ನಿರುತ್ತರರನ್ನಾಗಿ ಮಾಡಿ ಕೂರಿಸಿ, ಆ ಸಂಘರ್ಷದಲ್ಲೇ ಇತಿಹಾಸ ಸೃಷ್ಟಿಸಿದ ಶಕ್ತಿ, ಭೈರಪ್ಪ.

ಆ ಇತಿಹಾಸದ ಒಂದು ಪರ್ವ ಇದೀಗ ಮುಗಿದೇ ಹೋಗಿದೆ.

ಅವರು ತಮ್ಮ ಕೃತಿಗಳ ಮೂಲಕ ಅಜರಾಮರರಾಗಿರಬಹುದು, ಬಿಡಿ, ಅದರಲ್ಲಿ ಅನುಮಾನವಿಲ್ಲ; ಆದರೆ, ಅವರು ಕೇವಲ ತಮ್ಮ ಅಕ್ಷರಗಳ ಮೂಲಕವೇ ಕಟ್ಟಿ ಬೆಳೆಸಿ ಬಿಟ್ಟುಹೋಗಿದ್ದಾರಲ್ಲಾ ಒಂದು ಮಹಾ ಓದುಗಪಡೆಯನ್ನ, ಆ ಪಡೆ ಅವರ ಹೆಸರನ್ನು ಬೇಕಾಬಿಟ್ಟಿ ಬಳಸಿಕೊಂಡು ಸತ್ತ ನಂತರವೂ ಅವರಿಗೆ ಭರ್ಜಿ ಚುಚ್ಚಬಾರದು, ಅಷ್ಟೆ! ನೋಡನೋಡುತ್ತಿದ್ದಂತೆಯೇ ಕಂಡಕಂಡವರೆಲ್ಲರೂ ‘ಭೈರಪ್ಪನವರಿಗೆ ʻಆಪ್ತʼರಾಗಿದ್ದವರಾಗಿಬಿಡಬಾರದು, “ಅದೊಂದು ಸಲ ಖಾಸಗಿ ಭೇಟಿಯಲ್ಲಿ ಹೀಗಂದಿದ್ದರು, ಹಾಗಂದಿದ್ದರು, ಹೀಗೆ ಮಾಡಿದ್ದರು, ಹಾಗೆ ಮಾಡಿದ್ದರು, ನಾನು ಅವರಿಗೆ ಹೀಗೆ ಹೇಳಿದ್ದೆ-ಹಾಗೆ ಹೇಳಿದ್ದೆ..” ಅನ್ನುವಂಥಾ ಪುಂಖಾನುಪುಂಖ ಕಥೆಗಳು ಹುಟ್ಟಿಕೊಳ್ಳಬಾರದು, ಭೈರಪ್ಪನವರು ಹೇಳಿದ್ದು-ಹೇಳದ್ದು ಮಾಡಿದ್ದು-ಮಾಡದ್ದು ಎಲ್ಲವೂ ಅವರಿಗೆ ಆರೋಪಿತವಾಗುತ್ತಾ ಹೋಗಬಾರದು, ಅಷ್ಟೆ.

ಭೈರಪ್ಪನವರ ವೈಯಕ್ತಿಕ ಪರಿಚಯ-ಅವರ ಒಡನಾಟ ನನಗೆ ಇಲ್ಲವೇ ಇಲ್ಲ. ಆದರೆ, ಅವರ ಬಹುತೇಕ ಕೃತಿಗಳಲ್ಲೇ ಅವರನ್ನು ಕಂಡುಕೊಂಡಿದ್ದೇನೆ. ಮಾಧ್ಯಮ ಜಗತ್ತಿನಲ್ಲೇ ಒಂದಷ್ಟು ವರ್ಷ ಮಣ್ಣು ಹೊತ್ತಿರುವುದರಿಂದಾಗಿ, ಅವರ ಆಪ್ತರಿಂದಲೇ ಅವರ ವ್ಯಕ್ತಿತ್ವದ ಬಗ್ಗೆ ತಿಳಿದುಕೊಂಡು ನನ್ನ ಗ್ರಹಿಕೆಗೆ ತಾಳೆ ಹಾಕಿಕೊಂಡಿದ್ದೇನೆ. ಅವರ ಜಿಗುಟುತನ, ಸಿಡುಕುತನ, ಕೆಲ ವಿಷಯಗಳಲ್ಲಿನ ಕರ್ಮಠತನ - ಹೀಗೆ ಅವರ ವ್ಯಕ್ತಿತ್ವದ ಅನೇಕ ಕೋರೆಗಳ ಬಗ್ಗೆಯೂ ಕೇಳಿಕೊಂಡಿದ್ದೇನೆ. ಆದರೆ ಹತ್ತಿರ ಹೋಗದೆ ದೂರವೇ ಉಳಿದಿದ್ದೇನೆ.

ಭೈರಪ್ಪನವರ ಹೆಗಲಿಗೆ ಬಲಪಂಥೀಯ ಅನ್ನುವ ಭುಜಬಲ ಅಂಟಿಕೊಂಡಿದ್ದು ಅಸಹಜವೇನಲ್ಲ. ಆದರೆ, ಅವರ ಸೃಜನಾತ್ಮಕ ಕೃತಿಗಳಿಗೂ ನಾವು ಅದನ್ನು ಹಚ್ಚಬೇಕಿತ್ತಾ ಅನ್ನುವುದು ಪ್ರಶ್ನೆ. ಆ ಕೆಲಸ ಮಾಡಿದ್ದು ಅವತ್ತಿನ ನಮ್ಮ ಇಡೀ ಬೌದ್ಧಿಕ ಜಗತ್ತನ್ನು ಆಳುತ್ತಿದ್ದ ಎಡಪಂಥೀಯ ಪತ್ರಿಕೆಗಳು-ಬುದ್ಧಿಜೀವಿಗಳು ಮತ್ತು ಈರ್ಷಾ ಬುದ್ಧಿಯ ಸಾಹಿತಿಗಳು!

ಅವರ ಬಹುತೇಕ ಕೃತಿಗಳಲ್ಲಿ ಆ ಪಂಥದ ವಾಸನೆಯೇ ಇಲ್ಲ. ವಂಶವೃಕ್ಷದಲ್ಲಿ ಏನಿದೆ? ಕೊಟ್ಟಕೊನೆಯಲ್ಲಿ ಅವರು ಕೊಡುವ ಆಘಾತವೇ ಸಾಕು, ಅವರನ್ನು ಬಲಪಂಥೀಯರೇ ದೂರುವುದಕ್ಕೆ! ಗೃಹಭಂಗದಲ್ಲಾಗಲೀ ಮತದಾನದಲ್ಲಾಗಲೀ ಗ್ರಹಣದಲ್ಲಾಗಲೀ ಎಲ್ಲಿದೆ ಪಂಥ? ಧರ್ಮಶ್ರೀ ಹಾಗೂ ಆವರಣದಲ್ಲಿ ಕಾಣಬಹುದು, ನಿಜ; ಆದರೆ ಬೇರೆಲ್ಲಿ?

ಪರ್ವವಂತೂ ಇಡೀ ಮಹಾಭಾರತವನ್ನೇ demystify ಮಾಡಿ, ತಾರ್ಕಿಕ ದಾರದಲ್ಲಿ ಪೋಣಿಸಿ, ಸುಲಭಕ್ಕೆ ಅರಗಿಸಿಕೊಳ್ಳಲಾಗದ ವಾಸ್ತವಗಳನ್ನು ಎದುರಿಗಿಟ್ಟು, ಕರ್ಮಠರೆಲ್ಲರನ್ನೂ ಏಕಪ್ರಕಾರವಾಗಿ ಅದುರಿಸಿ ಹಾಕಿದ ಕೃತಿ. ಎಲ್ಲ ಪಾತ್ರಗಳನ್ನೂ ದೈವತ್ವದ ಪಟ್ಟದಿಂದ ಹುಲು ಮಾನವರ ಮಟ್ಟಕ್ಕೆ ಇಳಿಸಿ ಮನುಷ್ಯರ ಲೋಕದ ಕಥೆಯನ್ನಾಗಿ ಕಟ್ಟಿಕೊಟ್ಟ ಮಹಾಕಥನ. ನಿಜವಾಗಿಯೂ ಬೆಚ್ಚಿಬೀಳಬೇಕಿದ್ದದ್ದು ಇವತ್ತಿನ ವಾಟ್ಸ್ಯಾಪ್ ಯೂನಿವರ್ಸಿಟಿಯ ಗ್ರಾಜುಯೇಟ್ ಭಕ್ತಗಣ. ಆದರೂ ಅವರು ‘ಬಲ’ಕ್ಕೆ ಬಿದ್ದರು ಅನ್ನುವುದು, ಮತ್ತು ಒಂದು ಕಾಲದಲ್ಲಿ ಕುವೆಂಪು ಅವರ ಶ್ರೀ ರಾಮಾಯಣ ದರ್ಶನಂ ಗೆ ಸಿಕ್ಕಿದ ಮನ್ನಣೆ-ಮೆರವಣಿಗೆ ಪರ್ವಕ್ಕೆ ಸಿಗಲಿಲ್ಲ ಅನ್ನುವುದು ಸೋಜಿಗದ ಸಂಗತಿ.

ಬಹುಶಃ ಅಷ್ಟೇ ಎತ್ತರದ — maybe, ಅದಕ್ಕಿಂತಲೂ ಹೆಚ್ಚು ಗಟ್ಟಿಯಾದ — ಕೃತಿ, ಸಾರ್ಥ. ಸಿನಿಮಾರಂಗದ ಯಾರಾದರೂ ‘ದೊಡ್ಡವರು’ ಮನಸ್ಸು ಮಾಡಿದರೆ ಬೆನ್ಹರ್-ಟ್ರಾಯ್-ಟೆನ್ ಕಮಾಂಡ್ಮೆಂಟ್ಸ್ ಗಳನ್ನೂ ಮೀರಿಸುವಂಥ ಜಾಗತಿಕ ಸಿನಿಮಾ ಆಗಬಹುದಾದ ಅಗಾಧ ವಿಸ್ತಾರದ-ಅಗಾಧ ಸಾಧ್ಯತೆಗಳ ಹರಹು ಅದರದ್ದು. ಒಬ್ಬ ಸಾಧಾರಣ ಮನುಷ್ಯನ ಯಾತ್ರೆಯಲ್ಲಿ ಇಡೀ ಭಾರತದ ಚಿತ್ರಣವನ್ನೇ ಕಟ್ಟಿಕೊಡುವುದು, ಕೊನೆಯಲ್ಲೊಂದು ಪ್ರಾಂಜಲವಾದ-ಅನಿರೀಕ್ಷಿತವಾದ ತಿರುವು ನೀಡುವುದು, ಭೈರಪ್ಪನವರಿಂದ ಮಾತ್ರವೇ ಸಾಧ್ಯ.

Strangely, ಅವರನ್ನು ಬಿಜೆಪಿ ಅದು ಹೇಗೋ appropriate ಮಾಡಿಕೊಂಡುಬಿಟ್ಟಿತು! ಭೈರಪ್ಪನವರಿಗೆ ‘ಸಂಘ’ದ ಒಡನಾಟ ಮೊದಲಿನಿಂದಲೂ ಇದ್ದಿದ್ದು, ಮತ್ತು ಅವರು ಅದನ್ನು ಎದೆಯ ಮೇಲೆ ಧರಿಸಿಕೊಂಡಿದ್ದೂ ನಿಜವೇ ಆದರೂ, ಅವರ ಸಾಹಿತ್ಯವನ್ನು ನಾವು ಅವರ ಸೈದ್ಧಾಂತಿಕ ಚೌಕಟ್ಟುಗಳಿಂದ ಆಚೆಯಿಟ್ಟು ವಸ್ತುನಿಷ್ಠವಾಗಿ ನೋಡಿದ್ದಿದ್ದರೆ, ಅವರ ಕೃತಿಗಳಿಗೆ ನಿಜವಾಗಿಯೂ ಕೊಡಲೇ ಬೇಕಾಗಿದ್ದ ಮನ್ನಣೆಯನ್ನು ಪಂಥಾತೀತವಾಗಿ ಕೊಡಲು ನಮಗೆ ಸಾಧ್ಯವಾಗಿದ್ದಿದ್ದರೆ, ಅವರನ್ನು ಒಂದು ಯಡವಟ್ಟು ಬಲಪಂಥೀಯ ರಾಜಕೀಯ ಪ್ರವಾಹಕ್ಕೆ ನಾವು ಕಳೆದುಕೊಳ್ಳುತ್ತಿರಲಿಲ್ಲವೋ ಏನೋ.

ಯೋಚಿಸಿ ನೋಡಿ: ನಮ್ಮ ಜ್ಞಾನಪೀಠಿಗಳಲ್ಲಿ ಎಲ್ಲರೂ ಅವರಿಗಿಂತ ಎತ್ತರದವರೇ? ಸಾಮಾನ್ಯವಾಗಿ ‘ಬುದ್ಧಿಜೀವಿ’ಗಳು ಭೈರಪ್ಪನವರನ್ನು ಸ್ತ್ರೀವಿರೋಧಿ ಅಂತಲೂ-ಅವರ ಸ್ತ್ರೀಪಾತ್ರಗಳೆಲ್ಲವೂ ಪುರುಷ ಪ್ರಧಾನ ವ್ಯವಸ್ಥೆಯ ಅನುಮೋದಕರಂತಿರುವ ದನಿಗಳು ಅಂತಲೂ ಆರೋಪಿಸುತ್ತಾರಲ್ಲಾ, ಬೇರೆ ಯಾವ ಜ್ಞಾನಪೀಠಿಯ ಪಾತ್ರಗಳೂ ಹಾಗಿಲ್ಲವಾ? ತಮ್ಮ ಆತ್ಮಕಥನದಲ್ಲೇ ಅನೇಕ ಹೆಣ್ಣುಮಕ್ಕಳ ಮರ್ಯಾದೆ ಹರಾಜು ಹಾಕಿದವರಿಗಿಂತಲೂ-ತಮ್ಮ ಕೃತಿಗಳಲ್ಲಿ ಅತ್ಯಂತ ಅಸಹಜ perversionಗಳನ್ನು ಸೃಷ್ಟಿಸಿದವರಿಗಿಂತಲೂ ಎತ್ತರದವರಲ್ಲವೇ ಭೈರಪ್ಪ?

ಆದರೂ ಅವರಿಗೆ ಜ್ಞಾನಪೀಠ ದೊರೆಯಲಿಲ್ಲ. ಪದ್ಮಶ್ರೀ-ಸರಸ್ವತಿ ಸಮ್ಮಾನ್ ಗಳು ದೊರೆತವಾದರೂ, ಅವು ಅವರ ಮುಡಿಗೇರಿದ್ದು ಬಿಜೆಪಿ ರಾಜ್ಯಭಾರದಲ್ಲಿ.

ಅಪಾರ ಓದು, ದೈತ್ಯ ಸಂಶೋಧನಾ ಶಕ್ತಿ, ಹಾಗೂ ಅಗಾಧ ಬರಹಗಳ ಒಬ್ಬ ಸಾಹಿತಿಯನ್ನು ನಾವು ಹೀಗೆ ಯಾರದ್ದೋ ಮನೆಯಂಗಳಕ್ಕೆ ದಬ್ಬಿ ಅಲ್ಲಿಯೇ ಅವರನ್ನು ಕೂಡಿಹಾಕಬೇಕಿತ್ತಾ ಅನ್ನುವ ಪ್ರಶ್ನೆಯನ್ನು ಯಾರಿಗೆ ಕೇಳೋಣ? ಬದುಕು-ಬರಹ ಬೇರೆಬೇರೆ ಅನ್ನುವ ಒಂದು ಬಹುದೊಡ್ಡ ಬರಹಗಾರರ-ವಿಮರ್ಶಕರ ದಂಡೇ ಭೈರಪ್ಪನವರ ಕೃತಿಗಳನ್ನು ಅವರ ಸೈದ್ಧಾಂತಿಕ ಓರೆಕೋರೆಗಳಿಂದಾಚೆ ಇರಿಸಿ ನೋಡಲಿಲ್ಲ ಅನ್ನುವುದು ವಿಪರ್ಯಾಸ.

ಭೈರಪ್ಪನವರು ನಿಸ್ಸಂಶಯವಾಗಿ ಕನ್ನಡದ most-translated author. ಇದು ಅವರ ಕೃತಿಗಳ ಶಕ್ತಿಗೆ ಸಾಕ್ಷಿ. But he is also ಕನ್ನಡದ most-maligned author. ಇದು, ನಮ್ಮ ವಿಮರ್ಶಾವಲಯದ-ಸಾಹಿತ್ಯ ಜಗತ್ತಿನ ಸೈದ್ಧಾಂತಿಕ ಪಕ್ಷಪಾತಕ್ಕೆ ಸಾಕ್ಷಿ, ಸದಾ ʻಸಹಿಷ್ಣುತೆʼಯ ಬಗ್ಗೆ ಭಾಷಣ ಬಿಗಿಯುವವರೂ ಕೂಡ ತಮ್ಮ ಮೂಗಿನ ನೇರಕ್ಕೆ ನಡೆದುಕೊಳ್ಳದ-ಬರೆಯದ ಸಾಧಕರ ಬಗ್ಗೆ ಅದೆಷ್ಟು ಅಸಹಿಷ್ಣುಗಳಾಗಿಬಿಡಬಲ್ಲರು ಅನ್ನುವುದಕ್ಕೆ ಸಾಕ್ಷಿ.

ಒಂದು ಸತ್ಯ ಏನೆಂದರೆ, ಓದುಗರು ಈ ವಲಯದ ಸಮಸ್ತ ಪಂಡಿತರುಗಳಿಗಿಂತಲೂ, ಆ ಪಂಡಿತರುಗಳ ಆಣತಿಯಂತೆಯೇ ನಡೆಯುವ ಎಲ್ಲಾ ರಾಜಕೀಯ ಶಕ್ತಿಗಳಿಗಿಂತಲೂ ಹೆಚ್ಚು ವಿವೇಕ ಇರುವವರು, ಪಕ್ಷಪಾತಗಳನ್ನೂ ಮೀರಿ ತಮ್ಮ ಹೃದಯಕ್ಕೆ ತಟ್ಟುವ ಸಾಹಿತ್ಯವನ್ನು ಗುರುತಿಸಬಲ್ಲವರು. ಹಾಗಾಗೇ ಭೈರಪ್ಪನವರ ಅನೇಕ ಕೃತಿಗಳು ಜಗತ್ತಿನಾದ್ಯಂತ ಅನೇಕ ಭಾಷೆಗಳಲ್ಲಿ ಹರಡಿಕೊಂಡಿವೆ; ತೀರಾ ಟೊಳ್ಳು ಅನ್ನಿಸಿದ ಕೃತಿಗಳು, ಅವು ಬಂದ ಕುರುಹೂ ಇಲ್ಲದಂತೆ ಮಾಯವಾಗಿವೆ.

ನಾವು ತೇಜಸ್ವಿಯವರನ್ನು ಓದಿದಷ್ಟೇ ಪ್ರೀತಿಯಿಂದ ಭೈರಪ್ಪನವರನ್ನೂ ಓದುವುದು ಸಾಧ್ಯವಾದಾಗ ಮಾತ್ರ ಸಾಹಿತಿ ಮತ್ತು ಸಾಹಿತ್ಯದ ಅಪ್ರಾಪ್ರಿಯೇಷನ್‌ಗಳು ತಪ್ಪುತ್ತವೆ. ರುಡ್ಯಾರ್ಡ್‌ ಕಿಪ್ಲಿಂಗ್‌ನನ್ನು ಜಾರ್ಜ್‌ ಆರ್ವೆಲ್‌ “ಒಬ್ಬ ಜೀನಿಯಸ್‌” ಅಂತ ಕರೆದಿದ್ದ ಅನ್ನುವುದು, ಮತ್ತು ಇಬ್ಬರೂ ಸೈದ್ಧಾಂತಿಕವಾಗಿ ಕಡುವಿರೋಧಿಗಳಾಗಿದ್ದರು ಅನ್ನುವುದು ನಮ್ಮ ಎಡಪಂಥೀಯ-ಸಾರಥ್ಯದ ಸಾಹಿತ್ಯ ಬಳಗಕ್ಕೆ ಗೊತ್ತಾಗಿದ್ದಿದ್ದರೆ ಸಾಕಿತ್ತು. ಕಿಪ್ಲಿಂಗ್‌ ಹಾಗೂ ಆರ್ವೆಲ್‌ ಇಬ್ಬರೂ ಇವತ್ತಿಗೂ ಇಂಗ್ಲಿಷ್‌ ಸಾಹಿತ್ಯ ಜಗತ್ತಿನಲ್ಲಿ ಸಮಾನ ಸ್ಥಾನ ಪಡೆದುಕೊಂಡಿರುವವರು ಅನ್ನುವುದನ್ನು ಬಿಡಿಸಿ ಹೇಳಬೇಕಿಲ್ಲ!

Read More
Next Story